ಸತ್ತಾಗ ನಿಜವಾಗಿ ಏನು ಸಂಭವಿಸುತ್ತದೆ?
ಸತ್ತಾಗ ನಿಜವಾಗಿ ಏನು ಸಂಭವಿಸುತ್ತದೆ?
“ಸಕಲ ಆತ್ಮಗಳು ಅಮರ, ದುಷ್ಟರ ಆತ್ಮಗಳು ಸಹ . . . ಅವು ಆರಿಸಲಾಗದ ಬೆಂಕಿಯಲ್ಲಿ ನಿರಂತರ ಯಾತನೆ ಪಡುತ್ತಾ ನಿತ್ಯ ಶಿಕ್ಷೆಯನ್ನು ಅನುಭವಿಸುತ್ತವೆ. ಆ ಕಡು ದುರವಸ್ಥೆಯಿಂದ ತಮ್ಮನ್ನು ಬಿಡಿಸಿಕೊಳ್ಳಲು ಅವುಗಳಿಗೆ ಅಶಕ್ಯ.”—ಕ್ಲೆಮೆಂಟ್ ಆಫ್ ಅಲೆಕ್ಸಾಂಡ್ರಿಯ, ಎ ರೈಟರ್ ಆಫ್ ದಿ ಸೆಕೆಂಡ್ ಎಂಡ್ ಥರ್ಡ್ ಸೆಂಚುರಿಸ್. ಸಿ.ಇ.
ಕ್ಲೆಮೆಂಟ್‌ನಂತೆ, ನರಕವು ಯಾತನೆಯ ಸ್ಥಳವೆಂದು ನಂಬುವವರು ಮಾನವ ಆತ್ಮ ಅಮರ ಎಂದೂ ಬೋಧಿಸುತ್ತಾರೆ. ಆದರೆ ಬೈಬಲ್ ಹಾಗೆಂದು ಬೋಧಿಸುತ್ತದೋ? ಈ ಕೆಳಗಿನ ಪ್ರಶ್ನೆಗಳಿಗೆ ಬೈಬಲ್ ನೀಡುವ ಉತ್ತರಗಳನ್ನು ಪರಿಗಣಿಸಿ.
ಮೊದಲ ಮನುಷ್ಯನಾದ ಆದಾಮನಿಗೆ ಅಮರ ಆತ್ಮ ಇತ್ತೋ? ಪ್ರಾಟೆಸ್ಟಂಟ್ ಬೈಬಲಾದ ಕಿಂಗ್ ಜೇಮ್ಸ್ ವರ್ಷನ್ ಅಥವಾ ಆಥೋರೈಸ್ಡ್ ವರ್ಷನ್ ಆದಾಮನ ನಿರ್ಮಾಣದ ಕುರಿತು ಹೇಳುವುದು: “ದೇವರಾದ ಕರ್ತನು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಜೀವಾತ್ಮನಾದನು.” (ಆದಿಕಾಂಡ 2:7) ಈ ವಚನ, ಆದಾಮನಿಗೆ ಒಂದು ಆತ್ಮವನ್ನು ಕೊಡಲಾಯಿತೆಂದು ಹೇಳುವುದಿಲ್ಲ ಎಂಬುದನ್ನು ಗಮನಿಸಿ.
ಆದಾಮನು ಪಾಪ ಮಾಡಿದ ನಂತರ ಕೊನೆಗೆ ಅವನಿಗೆ ಏನು ಸಂಭವಿಸಿತು? ಪಾಪ ಮಾಡಿದಕ್ಕಾಗಿ ದೇವರು ಅವನಿಗೆ ನರಕದ ನಿತ್ಯ ಶಿಕ್ಷೆಯನ್ನು ವಿಧಿಸಿದನೋ? ಇಲ್ಲ. ಬದಲಾಗಿ, ದೇವರು ಕೊಟ್ಟ ಶಿಕ್ಷೆಯು ಕ್ಯಾಥ್‌ಲಿಕ್ ಬೈಬಲ್‌ಗೆ ಅನುಸಾರವಾಗಿ ಹೀಗಿದೆ: “ನೀನುತ್ಪತ್ತಿಯಾದ ಮಣ್ಣಿಗೆ ಮರಳಿ ಸೇರುವ ತನಕ ಗಳಿಸಬೇಕು ಕವಳವನ್ನು ನೆತ್ತಿಬೆವರಿಡುತ್ತ. ಮಣ್ಣಿನಿಂದಲೇ ಬಂದವನು ನೀನು ಮರಳಿ ಮಣ್ಣಿಗೆ ಸೇರತಕ್ಕವನು.” (ಓರೆ ಅಕ್ಷರ ನಮ್ಮದು; ಆದಿಕಾಂಡ 3:19) ಆದಾಮನು ಸತ್ತಾಗ ಅವನ ದೇಹದ ಯಾವುದೇ ಭಾಗವು ಪಾರಾಗಿ ಉಳಿಯಿತೆಂಬುದಕ್ಕೆ ದೇವರು ವಿಧಿಸಿದ ಶಿಕ್ಷೆಯಲ್ಲಿ ಯಾವ ಸುಳಿವೂ ಇಲ್ಲ. ಆದಾಮನು ಸತ್ತಾಗ ಜೀವಾತ್ಮನಾದ ಆದಾಮನು ಸತ್ತನು.
ಮನುಷ್ಯನಲ್ಲಿ ಅಮರ ಆತ್ಮವಿದೆಯೋ? ದೇವರು ಪ್ರವಾದಿ ಯೆಹೆಜ್ಕೇಲನಿಗೆ ಹೇಳಿದ್ದು: “ಪಾಪ ಮಾಡುವ ಆತ್ಮವೇ ಸಾಯುವದು.” (ಯೆಹೆಜ್ಕೇಲ 18:4, ದ ಹೋಲಿ ಬೈಬಲ್—ನ್ಯೂ ಇಂಟರ್‌ನೇಷನಲ್ ವರ್ಷನ್) ಅಪೊಸ್ತಲ ಪೌಲನು ಬರೆದದ್ದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಮನುಷ್ಯರೆಲ್ಲರೂ ಪಾಪ ಮಾಡಿದ್ದರಿಂದ ಪಾಪ ಮಾಡಿದ ಆತ್ಮಗಳೆಲ್ಲವೂ ಸಾಯುವುದು ತರ್ಕಬದ್ಧ.
ಸತ್ತ ಆತ್ಮಕ್ಕೆ ಏನಾದರೂ ಅರಿವು ಅಥವಾ ಗೊತ್ತು ಇದೆಯೋ? ದೇವರ ವಾಕ್ಯವು ಹೇಳುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆ ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” (ಪ್ರಸಂಗಿ 9:5) ಮನುಷ್ಯನು ಸತ್ತಾಗ ಏನು ಸಂಭವಿಸುತ್ತದೆ ಎಂಬುದನ್ನು ಬೈಬಲ್ ವಿವರಿಸುತ್ತಾ ಅನ್ನುವುದು: “ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.” (ಕೀರ್ತನೆ 146:4) ಸತ್ತವರಿಗೆ ‘ಯಾವ ತಿಳುವಳಿಕೆಯೂ ಇಲ್ಲದಿರುವಲ್ಲಿ’ ಮತ್ತು ಅವರ ‘ಸಂಕಲ್ಪಗಳೆಲ್ಲಾ’ ನಾಶವಾಗುವಲ್ಲಿ ನರಕದಲ್ಲಿ ಅವರು ಯಾತನೆಯನ್ನು ಅನುಭವಿಸುವುದಾದರೂ ಹೇಗೆ?
ಯೇಸು ಕ್ರಿಸ್ತನು ಮರಣವನ್ನು ತಿಳುವಳಿಕೆಯುಳ್ಳ ಸ್ಥಿತಿಗಲ್ಲ ನಿದ್ದೆಗೆ ಹೋಲಿಸಿದನು. * (ಯೋಹಾನ 11:11-14) ಆದರೆ ಕೆಲವರು ಆಕ್ಷೇಪಿಸುತ್ತಾ ನರಕದಲ್ಲಿ ಬೆಂಕಿಯಿದೆ ಎಂದೂ ಪಾಪಿಗಳು ನರಕಕ್ಕೆ ದೊಬ್ಬಲ್ಪಡುವರು ಎಂದೂ ಯೇಸು ತಾನೇ ಕಲಿಸಿದನಲ್ಲಾ ಎಂದು ಹೇಳುತ್ತಾರೆ. ನರಕದ ಕುರಿತು ಯೇಸು ನಿಜವಾಗಿಯೂ ಏನೆಂದನು ಎಂಬುದರ ಕುರಿತು ನಾವು ಪರಿಗಣಿಸೋಣ. (w08 11/1)
[ಪಾದಟಿಪ್ಪಣಿ]
^ ಪ್ಯಾರ. 8 ಹೆಚ್ಚಿನ ವಿವರಕ್ಕಾಗಿ ಪುಟ 16-17ರಲ್ಲಿರುವ “ಯೇಸುವಿನಿಂದ ಕಲಿಯುವುದು—ಸತ್ತವರಿಗಿರುವ ನಿರೀಕ್ಷೆಯ ಕುರಿತು” ಲೇಖನವನ್ನು ನೋಡಿರಿ.