ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಮಿಯನ್ನು ರಕ್ಷಿಸಶಕ್ತನು ದೇವರು ಮಾತ್ರ

ಭೂಮಿಯನ್ನು ರಕ್ಷಿಸಶಕ್ತನು ದೇವರು ಮಾತ್ರ

ಭೂಮಿಯನ್ನು ರಕ್ಷಿಸಶಕ್ತನು ದೇವರು ಮಾತ್ರ

“ಮಿರುಮಿರುಗುವ ನೀಲ-ಬಿಳಿ ರತ್ನ ಮಣಿ” ಎಂದು ಉದ್ಗರಿಸಿದರು ಗಗನ ಯಾತ್ರಿಕ ಎಡ್ಗರ್‌ ಮಿಚಲ್‌ ನಮ್ಮ ಭೂಮಿಯನ್ನು ಮೇಲಿನಿಂದ ವೀಕ್ಷಿಸಿದಾಗ. ಅವರದನ್ನು ಕರ್ರಗೆ ಕಪ್ಪಾದ ಬಾಹ್ಯಾಕಾಶಕ್ಕೆ ಎದುರಾಗಿ ಹೋಲಿಸುತ್ತಿದ್ದರು.

ಭೂಮಿಯನ್ನು ಮಾನವನ ಬೀಡಾಗಿ ಮಾಡಲು ದೇವರು ಸುದೀರ್ಘ ತಯಾರಿಯನ್ನು ಮಾಡಿದನು. ಅದರ ಸೃಷ್ಟಿಯು ದೇವದೂತರನ್ನು ಉತ್ಸಾಹದಿಂದ ‘ಆನಂದಘೋಷಮಾಡುವಂತೆ’ ಪ್ರೇರೇಪಿಸಿತು. (ಯೋಬ 38:⁠6) ಈ ಭೂಗ್ರಹದ ಕೌತಕಗಳನ್ನು ಅಧ್ಯಯನಮಾಡುವಾಗ ನಮಗೂ ಆನಂದಘೋಷದಿಂದ ಶ್ಲಾಘಿಸಲು ಸಕಾರಣವಿದೆ. ಭೂಜೀವಿಗಳು ಸಮೃದ್ಧವಾಗಿ ಬೆಳೆಯುವಂತೆ ಮಾಡುವ ಅನೇಕ ತರದ ಜಟಿಲ ಪರಿಸರೀಯ ವಾಯುಗುಣಗಳು ಭೂಮಿಯಲ್ಲಿವೆ. ಅಂಥ ವಾಯುಗುಣಗಳಲ್ಲಿ ಒಂದು ಯಾವುದೆಂದರೆ, ಹಸಿರು ಸಸ್ಯಗಳು ಸೂರ್ಯನಿಂದ ಬೆಳಕನ್ನೂ ಗಾಳಿಯಿಂದ ಕಾರ್ಬನ್‌ ಡೈ ಆಕ್ಸೈಡನ್ನೂ ನೆಲದಿಂದ ನೀರನ್ನೂ ಹೀರಿಕೊಂಡು ಆಹಾರವನ್ನು ಉತ್ಪಾದಿಸುವುದೇ. ಈ ಪ್ರಕ್ರಿಯೆಯು ನಮ್ಮ ಉಸಿರಾಟಕ್ಕೆ ಅತ್ಯಾವಶ್ಯಕವಾಗಿ ಬೇಕಾಗಿರುವ ಆಮ್ಲಜನಕವನ್ನು ಬಿಡುಗಡೆಮಾಡುತ್ತದೆ.

ಈ ಭೂಮಿಯ ಉಸ್ತುವಾರಿಯನ್ನು ದೇವರು ಮಾನವನಿಗೆ ವಹಿಸಿಕೊಟ್ಟನು ಎಂಬುದಾಗಿ ಬೈಬಲ್‌ ತೋರಿಸಿಕೊಡುತ್ತದೆ. (ಆದಿಕಾಂಡ 1:28; 2:15) ಆದರೂ ಭೂಪರಿಸರವು ಸಮತೋಲನದಲ್ಲಿರಬೇಕಾದರೆ ಮನುಷ್ಯರಿಗೆ ಯೋಗ್ಯ ಮನೋಭಾವವಿರಬೇಕಾದ ಅಗತ್ಯವಿತ್ತು. ನಿಜಾಂಶವೇನೆಂದರೆ ಅವನು ತನ್ನ ಬೀಡಾಗಿದ್ದ ಈ ಭೂಮಿಯನ್ನು ಪ್ರೀತಿಸುವ ಅಗತ್ಯವಿತ್ತು. ಅದನ್ನು ಒಂದು ಸುಂದರವಾದ ಪರಿಸರದಲ್ಲಿ ಉಳಿಸಿಕೊಳ್ಳುವ ಇಚ್ಛೆಯು ಅವನಲ್ಲಿರಬೇಕಿತ್ತು. ಆದರೆ ಮಾನವನಿಗೆ ತನ್ನ ಇಷ್ಟಕ್ಕನುಸಾರ ನಡೆಯುವ ಇಚ್ಛಾಸ್ವಾತಂತ್ರ್ಯ ಕೂಡ ಇತ್ತು. ಆದ್ದರಿಂದ ಮಾನವನು ಈ ಭೂಮಿಯನ್ನು ಸ್ವಾರ್ಥಕ್ಕಾಗಿಯೂ ದುರುಪಯೋಗಿಸುವ ಸಂಭಾವ್ಯತೆಯಿತ್ತು. ಮಾನವನು ಆಯ್ಕೆಮಾಡಿದ್ದೂ ಇದೇ. ಮಾನವನ ಅಸಡ್ಡೆ ಮತ್ತು ಅತ್ಯಾಶೆಯ ಫಲಿತಾಂಶಗಳು ನಿಜವಾಗಿ ವಿಧ್ವಂಸಕರವಾಗಿದ್ದವು.

ಅವುಗಳಲ್ಲಿ ಕೆಲವು ಹೀಗಿವೆ: (1) ಅರಣ್ಯನಾಶದಿಂದಾಗಿ ಕಾರ್ಬನ್‌ ಡೈ ಆಕ್ಸೈಡನ್ನು ಹೀರಿಕೊಳ್ಳುವ ಭೂಮಿಯ ಶಕ್ತಿಯು ಇಳಿಗುಂದಿದೆ. ಪರಿಣಾಮವಾಗಿ ಅತಿರೇಕ ಹವಾಮಾನಗಳು ಉಂಟಾಗುತ್ತವೆ. (2) ಕೀಟನಾಶಕಗಳ ಅತಿಯಾದ ಬಳಕೆಯು ಸಸ್ಯಗಳ ಪರಾಗಸ್ಪರ್ಶ ಪ್ರಕ್ರಿಯೆಯೂ ಸೇರಿದಂತೆ ಪ್ರಧಾನ ಜೀವವಿನ್ಯಾಸ ಪಾತ್ರಗಳನ್ನು ನಡಿಸುವ ಕೀಟಸಮೂಹವನ್ನು ನಾಶಗೊಳಿಸುತ್ತವೆ. (3) ಅತಿರೇಕ ಮೀನುಗಾರಿಕೆಯೂ ನದೀಸಮುದ್ರಗಳ ಮಾಲಿನ್ಯತೆಯೂ ಮೀನುಗಳನ್ನು ಕಣ್ಮರೆಗೊಳಿಸುತ್ತಿವೆ. (4) ಭೂಮಿಯ ಪರಿಸರ ಸಂಪತ್ತನ್ನು ಜನರು ಸ್ವಾರ್ಥಕ್ಕೆ ಬಳಸುತ್ತಿರುವುದರಿಂದ ಮುಂದಿನ ಪೀಳಿಗೆಗೆ ಏನೂ ಉಳಿದಿರುವುದಿಲ್ಲ, ಮಾತ್ರವಲ್ಲದೆ ಅದು ಭೂಮಿಯ ಬಿಸಿಯೇರುವಿಕೆಯನ್ನು ಇನ್ನಷ್ಟು ತೀವ್ರಗೊಳಿಸುತ್ತಿದೆ. ಹಿಮನದಿಗಳ ಕಣ್ಮರೆ ಹಾಗೂ ಉತ್ತರ-ದಕ್ಷಿಣ ಧ್ರುವಪ್ರದೇಶಗಳಲ್ಲಿ ನೀರ್ಗಲ್ಲುಗಳು ಒಡೆದು ಮಂಜುಗಡ್ಡೆಗಳಾಗುತ್ತಿರುವುದು ಭೂಮಿ ಬಿಸಿಯೇರುವಿಕೆಗೆ ಮುಖ್ಯ ಕಾರಣವೆಂದು ಕೆಲವು ಪರಿಸರವಾದಿಗಳು ಹೇಳುತ್ತಾರೆ.

ಇಷ್ಟೊಂದು ನೈಸರ್ಗಿಕ ವಿಪತ್ತುಗಳ ಎದುರಾಟವನ್ನು ಭೂಮಿಯು ಪ್ರತಿರೋಧಿಸುವುದರಿಂದಲೇ ಮಾನವನು ದುರವಸ್ಥೆಗೆ ಒಳಗಾಗಿದ್ದಾನೆ ಎಂದು ಅನ್ನುತ್ತಾರೆ ಕೆಲವರು. ದೇವರು ಭೂಮಿಯನ್ನು ನಮಗೆ ಕೊಟ್ಟಿರುವುದು ಕೇವಲ ಕ್ರಯವಿಲ್ಲದೆ. ಅಂದರೆ ಮನುಷ್ಯನಿಗೆ ಉಚಿತ ಒಕ್ಕಲು ಕೊಡಲಾಗಿದೆ. (ಆದಿಕಾಂಡ 1:​26-29) ಆದರೂ ಪ್ರಸ್ತುತ ಲೋಕ ಘಟನೆಗಳು ತೋರಿಸುವುದೇನೆಂದರೆ ಅನೇಕ ಜನರಿಗೆ ಈ ಸುಂದರ ಭೂ-ಮನೆಯನ್ನು ಕಾಪಾಡುವ ಯಾವ ಅಪೇಕ್ಷೆಯೂ ಇಲ್ಲ ಎಂಬುದಾಗಿ. ಬದಲಾಗಿ ಮನುಷ್ಯನು ತನ್ನ ಸ್ವಂತ ಆಶೆಗಳನ್ನು ಮತ್ತು ಅಪೇಕ್ಷೆಗಳನ್ನು ಪೂರೈಸುವುದರಲ್ಲೇ ತಲ್ಲೀನನು. ನಿಜವೇನೆಂದರೆ ಅವನು ಭೂಮಿಯನ್ನು ನಾಶಗೊಳಿಸುವ ಒಬ್ಬ ಕೆಟ್ಟ ಒಕ್ಕಲುಗಾರನಾಗಿ ಸಾಬೀತಾಗಿದ್ದಾನೆ.​—⁠ಪ್ರಕಟನೆ 11:⁠8.

ಭೂಮಿಯ ಜೀವಪೋಷಕ ಪರಿಸರದ ನಿರ್ಮಾಣಿಕ ಸರ್ವಶಕ್ತ ಯೆಹೋವ ದೇವರು ಬೇಗನೆ ಕೆಟ್ಟ ಒಕ್ಕಲುಗಳನ್ನು ತೆಗೆದುಬಿಡಲಿದ್ದಾನೆ ಎಂದು ಬೈಬಲ್‌ ಪ್ರವಾದನೆ ತೋರಿಸುತ್ತದೆ. (ಚೆಫನ್ಯ 1:14; ಪ್ರಕಟನೆ 19:​11-15) ಮನುಷ್ಯನು ಪರಿಸರವನ್ನು ಪೂರ್ಣವಾಗಿ ಕೆಡಿಸಿಬಿಡುವ ಮೊದಲು ದೇವರು ತಾನೇ ಕ್ರಿಯೆಗೈಯಲಿದ್ದಾನೆ. ಅದೂ ನಾವು ನೆನಸುವುದಕ್ಕಿಂತ ಬಲು ಬೇಗನೆ. * (ಮತ್ತಾಯ 24:44) ಹೌದು, ಭೂಮಿಯನ್ನು ರಕ್ಷಿಸಶಕ್ತನು ದೇವರು ಮಾತ್ರವೇ! (w09 1/1)

[ಪಾದಟಿಪ್ಪಣಿ]

^ ಪ್ಯಾರ. 7 ನಮ್ಮ ಸಮಯ ಎಷ್ಟು ತುರ್ತಿನದ್ದೆಂದು ಮನಗಾಣಲು ಹೆಚ್ಚಿನ ಮಾಹಿತಿಗಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಟಿತವಾದ ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೋಡಿರಿ.