ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಅವರ ದುಃಖವನ್ನೆಲ್ಲಾ ನಾನು ಬಲ್ಲೆನು”

“ಅವರ ದುಃಖವನ್ನೆಲ್ಲಾ ನಾನು ಬಲ್ಲೆನು”

ದೇವರ ಸಮೀಪಕ್ಕೆ ಬನ್ನಿರಿ

“ಅವರ ದುಃಖವನ್ನೆಲ್ಲಾ ನಾನು ಬಲ್ಲೆನು”

ವಿಮೋಚನಕಾಂಡ 3:1-10

“ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು.” (ಯೆಶಾಯ 6:3) ಈ ದೈವಪ್ರೇರಿತ ಮಾತುಗಳು ಯೆಹೋವ ದೇವರು ಸರ್ವೋತ್ಕೃಷ್ಟ ಮಟ್ಟದಲ್ಲಿ ನಿರ್ಮಲನೂ ಪರಿಶುದ್ಧನೂ ಆಗಿದ್ದಾನೆಂದು ಸೂಚಿಸುತ್ತದೆ. ‘ಆತನು ಪರಿಶುದ್ಧನಾಗಿರುವ ಕಾರಣ ನಮ್ಮ ಬಗ್ಗೆ ಭಾವಶೂನ್ಯನೂ ನಿರಾಸಕ್ತನೂ ಎಂದರ್ಥವೋ? ಅಂಥ ಪರಿಶುದ್ಧ ದೇವರು ಪಾಪಿಯೂ ಅಪರಿಪೂರ್ಣ ಮನುಷ್ಯನೂ ಆದ ನನ್ನ ಬಗ್ಗೆ ನಿಜವಾಗಿ ಚಿಂತಿಸುತ್ತಾನೋ?’ ಎಂದು ನೀವು ಕೇಳಬಹುದು. ಈ ವಿಷಯದಲ್ಲಿ ದೇವರು ಮೋಶೆಗೆ ತಿಳಿಸಿದ ಆಶ್ವಾಸನೆಯ ಮಾತುಗಳನ್ನು ನಾವೀಗ ಪರಿಗಣಿಸೋಣ. ಅದು ವಿಮೋಚನಕಾಂಡ 3:1-10ರಲ್ಲಿ ದಾಖಲಾಗಿದೆ.

ಒಂದು ದಿನ ಮೋಶೆ ಕುರಿಗಳನ್ನು ಮೇಯಿಸುತ್ತಿದ್ದಾಗ ಅದ್ಭುತ ನೋಟವೊಂದು ಅವನ ಕಣ್ಣಿಗೆ ಬಿತ್ತು. ಮುಳ್ಳಿನ ಪೊದೆಯೊಂದು ಉರಿಯುತ್ತಾ ಇತ್ತು ಆದರೆ “ಅದು ಸುಟ್ಟುಹೋಗದೆ ಇತ್ತು.” (ವಚನ 2) ಆಶ್ಚರ್ಯಚಕಿತನಾಗಿ ಮೋಶೆಯು ಅದೇನಿರಬಹುದೆಂದು ನೋಡಲು ಹತ್ತಿರಹೋದನು. ಆಗ ಯೆಹೋವನು ಒಬ್ಬ ದೇವದೂತನ ಮೂಲಕ ಪೊದೆಯೊಳಗಿಂದ ಮಾತಾಡುತ್ತಾ ಅಂದದ್ದು: “ನೀನು ಹತ್ತಿರ ಬರಬೇಡ; ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು; ನೀನು ನಿಂತಿರುವ ಸ್ಥಳವು ಪರಿಶುದ್ಧಭೂಮಿ.” (ವಚನ 5) ಉರಿಯುತ್ತಿದ್ದ ಆ ಪೊದೆಯು ದೇವರ ಸಾನಿಧ್ಯವನ್ನು ಮಾತ್ರ ಸೂಚಿಸಿತ್ತಾದರೂ ಆ ಸ್ಥಳವು ತಾನೇ ಪರಿಶುದ್ಧವಾಗಿದ್ದ ಬಗ್ಗೆ ತುಸು ಯೋಚಿಸಿರಿ!

ಪರಿಶುದ್ಧ ದೇವರಿಗೆ ಮೋಶೆಯೊಂದಿಗೆ ಮಾತಾಡಲು ಸಕಾರಣವಿತ್ತು. ದೇವರು ಹೇಳಿದ್ದು: “ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ. ಬಿಟ್ಟೀಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು; ಅವರ ದುಃಖವನ್ನೆಲ್ಲಾ ನಾನು ಬಲ್ಲೆನು.” (ವಚನ 7) ದೇವರು ತನ್ನ ಜನರ ದುರವಸ್ಥೆಯ ಬಗ್ಗೆ ಚಿಂತಿಸದೆ ಇರಲಿಲ್ಲ, ಅಥವಾ ಜನರ ದುಃಖದ ಮೊರೆಗಳಿಗೆ ಕಿವಿಗೊಡದೆ ಇರಲಿಲ್ಲ. ಬದಲಾಗಿ ಅವರು ನೋವನ್ನು ಅನುಭವಿಸಿದಾಗ ಆತನಿಗೂ ನೋವಾಯಿತು. ದೇವರು ಏನಂದನೆಂದು ಗಮನಿಸಿ: “ಅವರ ದುಃಖವನ್ನೆಲ್ಲಾ ನಾನು ಬಲ್ಲೆನು.” “ನಾನು ಬಲ್ಲೆನು” ಎಂಬ ಮಾತುಗಳ ಕುರಿತು ಒಂದು ರೆಫರೆನ್ಸ್‌ ಕೃತಿ ಹೇಳುವುದು: “ಈ ಅಭಿವ್ಯಕ್ತಿಯಲ್ಲಿ ವೈಯಕ್ತಿಕ ಅನಿಸಿಕೆ, ಕೋಮಲಭಾವ, ಕನಿಕರವು ಕೂಡಿರುತ್ತದೆ.” ಮೋಶೆಗೆ ಯೆಹೋವನು ನುಡಿದ ಮಾತುಗಳು ಆತನಲ್ಲಿರುವ ಆಳವಾದ ವ್ಯಾಕುಲತೆ ಮತ್ತು ಚಿಂತೆಯನ್ನು ಸೂಚಿಸುತ್ತವೆ.

ದೇವರು ಏನು ಮಾಡಲಿದ್ದನು? ಬರೇ ಮರುಕಪಡಲಿಲ್ಲ ಅಥವಾ ಕನಿಕರದಿಂದ ಬರೇ ಕಿವಿಗೊಡಲಿಲ್ಲ. ಕ್ರಿಯೆಗೈಯಲು ಪ್ರಚೋದಿಸಲ್ಪಟ್ಟನು. ತನ್ನ ಜನರನ್ನು ಈಜಿಪ್ಟಿನಿಂದ ಬಿಡಿಸಿ “ಹಾಲೂ ಜೇನೂ ಹರಿಯುವ ದೇಶಕ್ಕೆ” ಕರೆತರಲು ಉದ್ದೇಶಿಸಿದನು. (ವಚನ 8) ಅದನ್ನು ಮಾಡಲಿಕ್ಕಾಗಿ ಯೆಹೋವನು ಮೋಶೆಗೆ ಈ ಅಪ್ಪಣೆಯನ್ನು ಕೊಟ್ಟನು: ‘ನನ್ನ ಜನರನ್ನು ಐಗುಪ್ತದೇಶದಿಂದ ಹೊರಗೆ ಬರಮಾಡು.’ (ವಚನ 10) ಆ ಆಜ್ಞೆಗೆ ವಿಧೇಯನಾಗಿ ಮೋಶೆಯು ಇಸ್ರಾಯೇಲ್ಯರನ್ನು ಕ್ರಿ.ಪೂ. 1513ರಲ್ಲಿ ಈಜಿಪ್ಟಿನಿಂದ ಹೊರತಂದನು.

ಯೆಹೋವನು ಬದಲಾಗಿಲ್ಲ. ತಮ್ಮ ದುರವಸ್ಥೆ ಕಷ್ಟಗಳನ್ನು ಆತನು ನೋಡುತ್ತಾನೆ ಮತ್ತು ಸಹಾಯಕ್ಕಾಗಿ ಅವರ ಕೂಗನ್ನು ಕೇಳುತ್ತಾನೆ ಎಂಬ ವಿಷಯದಲ್ಲಿ ಆತನ ಸೇವಕರು ಭರವಸೆಯಿಂದ ಇರಬಹುದು. ಅವರು ಅನುಭವಿಸುವ ನೋವು ನಷ್ಟಗಳನ್ನು ಆತನು ಚೆನ್ನಾಗಿ ಬಲ್ಲನು. ಆದರೆ ತನ್ನ ಭಕ್ತರಾದ ಸೇವಕರ ಬಗ್ಗೆ ಬರೇ ಕನಿಕರದ ಭಾವನೆಯಷ್ಟೇ ಅಲ್ಲ, ಅವರ ಪರವಾಗಿ ಕ್ರಿಯೆಗೈಯಲು ಕೋಮಲಭಾವದ ದೇವರು ಪ್ರಚೋದಿಸಲ್ಪಡುತ್ತಾನೆ ಏಕೆಂದರೆ “ಆತನು [ಅವರಿಗೋಸ್ಕರ] ಚಿಂತಿಸುತ್ತಾನೆ.”—1 ಪೇತ್ರ 5:7.

ದೇವರ ಕನಿಕರವು ನಮಗೆ ನಿರೀಕ್ಷೆಗೆ ಆಧಾರವನ್ನು ಕೊಡುತ್ತದೆ. ಅಪರಿಪೂರ್ಣ ಮಾನವರಾದ ನಾವು ಸ್ವಲ್ಪ ಮಟ್ಟಿಗಿನ ಪರಿಶುದ್ಧತೆಯನ್ನು ಆತನ ಸಹಾಯದಿಂದ ಪಡೆದುಕೊಂಡು ಆತನಿಗೆ ಸ್ವೀಕಾರಾರ್ಹರು ಆಗಿರಬಲ್ಲೆವು. (1 ಪೇತ್ರ 1:15, 16) ಖಿನ್ನತೆ ಮತ್ತು ನಿರುತ್ತೇಜನದಿಂದ ಕಷ್ಟಪಡುತ್ತಿದ್ದ ಕ್ರೈಸ್ತ ಮಹಿಳೆಯೊಬ್ಬಳು, ಉರಿಯುವ ಪೊದೆಯಲ್ಲಿ ಮೋಶೆಗಾದ ಅನುಭವ ವೃತ್ತಾಂತದಿಂದ ಆದರಣೆಯನ್ನು ಕಂಡುಕೊಂಡಳು. ಅವಳನ್ನುವುದು: “ಅಶುದ್ಧ ಸ್ಥಳವನ್ನು ಸಹ ದೇವರು ಪರಿಶುದ್ಧವಾಗಿ ಮಾಡಶಕ್ತನೆಂದ ಮೇಲೆ ನನಗೆ ಸ್ವಲ್ಪವಾದರೂ ಆಶಾಕಿರಣವಿದ್ದೀತು. ಈ ವಿಚಾರವು ನನಗೆ ಬಹಳವಾಗಿ ಸಹಾಯಮಾಡಿದೆ.”

ಪರಿಶುದ್ಧ ದೇವರಾದ ಯೆಹೋವನ ಕುರಿತು ಕಲಿಯಲು ನೀವು ಪ್ರಚೋದಿತರೋ? ಆತನೊಂದಿಗೆ ನಾವು ಆಪ್ತ ಸಂಬಂಧವನ್ನಿಡಲು ಸಾಧ್ಯವಿದೆ ಏಕೆಂದರೆ “ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.”—ಕೀರ್ತನೆ 103:14. (w09 3/1)