ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಎಲೆ ಬಾಡದೇ’ ಇರುವ ಮರ

‘ಎಲೆ ಬಾಡದೇ’ ಇರುವ ಮರ

‘ಎಲೆ ಬಾಡದೇ’ ಇರುವ ಮರ

ದಟ್ಟವಾದ ಹಚ್ಚಹಸುರು ಎಲೆಗಳಿಂದ ಕಂಗೊಳಿಸುವ ಮರಗಳಿರುವ ಹಳ್ಳಿಗಾಡನ್ನು ನೀವೆಂದಾದರೂ ನೋಡಿದ್ದೀರಾ? ಆ ದೃಶ್ಯ ನಿಮ್ಮ ಕಣ್ಮನಕ್ಕೆ ಮುದನೀಡುತ್ತದೆಂದು ಬಹುಮಟ್ಟಿಗೆ ನೀವು ಒಪ್ಪುವಿರಿ. ರೆಂಬೆಕೊಂಬೆಗಳೇ ಕಾಣದಷ್ಟು ಎಲೆಗಳಿಂದ ಮುಚ್ಚಿಕೊಂಡಿರುವ ದೊಡ್ಡದೊಡ್ಡ ಮರಗಳನ್ನು ನೋಡುವಾಗ ಆ ಸ್ಥಳದಲ್ಲಿ ನೀರಿನ ಬರವಿದೆಯೆಂದು ನಿಮಗನಿಸುತ್ತದೋ? ಖಂಡಿತ ಇಲ್ಲ. ಬದಲಿಗೆ ನಳನಳಿಸುವ ಸುದೃಢ ಮರಗಳಿಗೆ ಕಾರಣವಾದ ನೀರು ಅಲ್ಲಿ ಯಥೇಚ್ಛವಾಗಿದೆ ಎಂದು ನೀವು ತಿಳುಕೊಳ್ಳುವಿರಿ.

ಸೂಕ್ತವಾಗಿಯೇ, ಬೈಬಲ್‌ ಆಧ್ಯಾತ್ಮಿಕವಾಗಿ ಸುದೃಢರಾದವರನ್ನು ಹುಲುಸಾಗಿ ಬೆಳೆದ ದೊಡ್ಡ ಮರಗಳಿಗೆ ಹೋಲಿಸುತ್ತದೆ. ಉದಾಹರಣೆಗೆ, ಒಂದನೆಯ ಕೀರ್ತನೆಯ ಆರಂಭದ ಈ ಮೂರು ಸೊಗಸಾದ ವಚನಗಳನ್ನು ಗಮನಿಸಿ:

“ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ ಧರ್ಮನಿಂದಕರೊಡನೆ ಕೂತುಕೊಳ್ಳದೆ ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು [“ಸಂತೋಷಿತನು,” NW]. ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.”

ತದ್ರೀತಿ ಯೆರೆಮೀಯ 17:7, 8ರಲ್ಲಿ ನಾವು ಓದುವುದು: “ಯಾವನು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾನೋ ಯಾವನಿಗೆ ಯೆಹೋವನು ಭರವಸವಾಗಿದ್ದಾನೋ ಅವನು ಧನ್ಯನು. ನೀರಾವರಿಯಲ್ಲಿ ನೆಡಲ್ಪಟ್ಟು ಹೊಳೆಯ ದಡದಲ್ಲಿ ತನ್ನ ಬೇರುಗಳನ್ನು ಹರಡಿ ದಗೆಗೆ ಭಯಪಡದೆ ಹಸುರೆಲೆಯನ್ನು ಬಿಡುತ್ತಾ ಕ್ಷಾಮವರ್ಷದಲ್ಲಿಯೂ ನಿಶ್ಚಿಂತೆಯಾಗಿ ಸದಾ ಫಲಕೊಡುತ್ತಾ ಇರುವ ಮರಕ್ಕೆ ಸಮಾನನಾಗಿರುವನು.”

ಬೈಬಲಿನ ಈ ಎರಡೂ ಪುಸ್ತಕಗಳಲ್ಲಿ ದೇವರ ಧರ್ಮಶಾಸ್ತ್ರದಲ್ಲಿ ಆನಂದಪಡುವ, ಆತನಲ್ಲಿ ಪೂರ್ಣ ಭರವಸೆಯಿಡುವ ಮತ್ತು ಸರಿಯಾದದ್ದನ್ನೇ ಮಾಡುವ ವ್ಯಕ್ತಿಗೆ ಸಿಗುವ ಪ್ರತಿಫಲವನ್ನು ದೃಷ್ಟಾಂತಿಸಲು ಮರಗಳನ್ನು ಬಳಸಲಾಗಿದೆ. ಹಾಗಾದರೆ ಅಂಥ ವ್ಯಕ್ತಿ ಯಾವ ವಿಧಗಳಲ್ಲಿ ಆಧ್ಯಾತ್ಮಿಕವಾಗಿ ಸೊಂಪಾಗಿ ಬೆಳೆದಿರುವ ಮರದಂತಿದ್ದಾನೆ? ಇದನ್ನು ತಿಳಿಯಲು ಆ ವಚನಗಳನ್ನು ನಿಕಟವಾಗಿ ಪರಿಗಣಿಸೋಣ.

“ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರ”

ಆ ಮರಗಳು ಕೇವಲ ಒಂದೇ ಒಂದು ಕಾಲಿವೆಯ ಬಳಿ ಅಥವಾ ಒಂದು ಹೊಳೆಯ ಬಳಿಯಲ್ಲಿ ಬೆಳೆದವುಗಳಲ್ಲ. ಬದಲಾಗಿ ಅನೇಕ “ನೀರಿನ ಕಾಲಿವೆಗಳ ಬಳಿಯಲ್ಲಿ” ಮತ್ತು “ನೀರಾವರಿಯಲ್ಲಿ” ಬೆಳೆದವೆಂದು ವರ್ಣಿಸಲಾಗಿವೆ. ತದ್ರೀತಿಯ ಸಾಂಕೇತಿಕ ವರ್ಣನೆ ಯೆಶಾಯ 44:3, 4ರಲ್ಲಿಯೂ ಇದೆ. ಆ ವಚನದಲ್ಲಿ, ಬಾಬೆಲಿನ ಬಂಧಿವಾಸದಿಂದ ಹಿಂದಿರುಗಿದ ಪಶ್ಚಾತ್ತಾಪಿ ಯೆಹೂದ್ಯರನ್ನು ತಾನು ಹೇಗೆ ಆರೈಕೆಮಾಡುವೆನೆಂದು ಯೆಹೋವ ದೇವರು ಹೇಳಿದನು. ಪ್ರವಾದಿ ಯೆಶಾಯನ ಮೂಲಕ ಆತನಂದದ್ದು: “ಬತ್ತಿದ ಭೂಮಿಯಲ್ಲಿ ಮಳೆಗರೆದು ಒಣ ನೆಲದಲ್ಲಿ ಕಾಲಿವೆಗಳನ್ನು ಹರಿಸುವೆನು; . . . [ಅವರು] ನೀರಿನ ಕಾಲಿವೆಗಳ ಬಳಿಯಲ್ಲಿ ಹಸುರು ಹುಲ್ಲಿನ ನಡುವೆ ಬೆಳೆಯುವ ನೀರವಂಜಿಗಳಂತೆ ವೃದ್ಧಿಯಾಗುವರು.” ದೇವರ ಆ ಆಶೀರ್ವಾದಿತರನ್ನು ನೀರವಂಜಿಗಳ ಹಾಗೆ ವೃದ್ಧಿಯಾಗುವಂತೆ ಮಾಡುವುದು ಆ ‘ನೀರಿನ ಕಾಲಿವೆಗಳೇ’ ಎಂದು ಇಲ್ಲಿ ಹೇಳಲಾಗಿದೆ.

ಇಂದು ಸಹ ಕೃಷಿಪ್ರದೇಶಗಳಲ್ಲಿ ಆಳವಾದ ಬಾವಿ, ನದಿ, ಸರೋವರ ಮತ್ತು ಅಣೆಕಟ್ಟು ಮೊದಲಾದ ನೀರಿನ ದೊಡ್ಡ ಉಗಮದಿಂದ ನೀರು ಹಳ್ಳಗಳಾಗಿ ಮತ್ತು ತೊರೆಗಳಾಗಿ ಹರಿದು ಬರುವುದನ್ನು ನಾವು ನೋಡುತ್ತೇವೆ. ಸಾಮಾನ್ಯವಾಗಿ ಇವು ತೋಟ ಅಥವಾ ಹೊಲಗದ್ದೆಗಳ ನೀರಾವರಿ ವ್ಯವಸ್ಥೆಯ ಭಾಗವಾಗಿವೆ. ಕೆಲವೊಮ್ಮೆ ಈ ಕಾಲುವೆಗಳನ್ನು ಹಣ್ಣಿನ ಮರಗಳ ತೋಟದ ಕಡೆ ತಿರುಗಿಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಈ ತೊರೆಗಳು ಒಂದು ಪಕ್ಕದಲ್ಲಿ ಗದ್ದೆಗಳಿಗೆ ಮತ್ತು ಇನ್ನೊಂದು ಪಕ್ಕದಲ್ಲಿ ಆಸ್ತಿಯ ಗಡಿ-ಮೇರೆಯಾಗಿ ಸಾಲಾಗಿ ನೆಟ್ಟಿರುವ ಮರಗಳಿಗೂ ನೀರುಣಿಸುತ್ತವೆ.

ಅಂಥ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರಗಳು ಹೇಗಿರುತ್ತವೆ? ಕೀರ್ತನೆ 1:3 ಅಂಥ ಒಂದು ಮರದ ಕುರಿತು ತಿಳಿಸುವುದು: ‘ಅದು ತಕ್ಕ ಕಾಲದಲ್ಲಿ ಫಲಕೊಡುತ್ತದೆ.’ ಬೈಬಲ್‌ ದೇಶಗಳಲ್ಲಿ ಅಂಜೂರ, ದಾಳಿಂಬೆ, ಸೇಬು, ಖರ್ಜೂರ ಮತ್ತು ಆಲಿವ್‌ ಮರಗಳಿವೆ. ಅಂಜೂರ ಮರಗಳು ಉದ್ದುದ್ದ ಕೊಂಬೆಗಳಿಂದ 30 ಅಡಿಗಳಷ್ಟು ಎತ್ತರ ಬೆಳೆಯುತ್ತವಾದರೂ ಇತರ ಹಣ್ಣಿನ ಮರಗಳಲ್ಲಿ ಹೆಚ್ಚಿನವು ಅಷ್ಟು ಎತ್ತರ ಬೆಳೆಯುವುದಿಲ್ಲ. ಹಾಗಿದ್ದರೂ ಅವು ಸೊಂಪಾಗಿ, ಸುದೃಢವಾಗಿ ಬೆಳೆದು ತಕ್ಕ ಸಮಯದಲ್ಲಿ ಯಥೇಚ್ಛವಾಗಿ ಫಲಗಳನ್ನು ಕೊಡುತ್ತವೆ.

ಪ್ರಾಚೀನ ಸಮಯಗಳಲ್ಲಿ ಸಿರಿಯ ಮತ್ತು ಪ್ಯಾಲಸ್ತಿನ್‌ ದೇಶಗಳಲ್ಲಿ ದೊಡ್ಡ ದೊಡ್ಡ ನೀರವಂಜಿ ಮರಗಳು ಕಾಲುವೆ ಮತ್ತು ನದಿತೀರಗಳಲ್ಲಿ ಬೆಳೆಯುತ್ತಿದ್ದವು. ಬೈಬಲಿನಲ್ಲಿ ಸಾಮಾನ್ಯವಾಗಿ ನೀರವಂಜಿ ಮರಗಳ ಕುರಿತು ತಿಳಿಸುವಾಗ ಅವು ನೀರಿರುವ ಜಾಗದಲ್ಲಿ ಅಥವಾ ‘ನೀರಿನ ಕಾಲುವೆಗಳ’ ಬಳಿ ಬೆಳೆದಿರುವುದಾಗಿ ಹೇಳಲಾಗಿದೆ. (ಯಾಜಕಕಾಂಡ 23:40; ಯೆಹೆಜ್ಕೇಲ 17:5) ನೀರವಂಜಿಯ ಅದೇ ಜಾತಿಗೆ ಸೇರಿದ ವಿಲೋ ಮರಗಳು ಸಹ ತುಂಬ ನೀರು ದೊರೆಯುವ ಸ್ಥಳದಲ್ಲಿ ಬೆಳೆಯುತ್ತಿದ್ದವು. ಸೊಂಪಾಗಿ ಬೆಳೆಯುವ ಈ ದೊಡ್ಡ ಮರಗಳು ಕೀರ್ತನೆಗಾರನೂ ಯೆರೆಮೀಯನೂ ತಿಳಿಸಲು ಬಯಸಿದ್ದ ವಿಷಯವನ್ನು ಉತ್ತಮವಾಗಿ ಚಿತ್ರಿಸುತ್ತವೆ. ಅದೇನೆಂದರೆ, ದೇವರ ಆಜ್ಞಾನಿಯಮಗಳನ್ನು ಪಾಲಿಸಿ, ಆತನಲ್ಲಿ ಪೂರ್ಣ ಭರವಸೆಯಿಡುವ ಜನರು ಆಧ್ಯಾತ್ಮಿಕವಾಗಿ ಆರೋಗ್ಯವಂತರಾಗಿರುವರು ಹಾಗೂ ಅವರ “ಕಾರ್ಯವೆಲ್ಲವೂ ಸಫಲವಾಗುವದು.” ಜೀವನದಲ್ಲಿ ನಾವು ಕಾಣಬಯಸುವುದು ಇಂಥಾ ಯಶಸ್ಸನ್ನೇ ಅಲ್ಲವೇ?

ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸಿ

ಇಂದು ಜನರು ಯಶಸ್ಸು ಗಳಿಸಲು ನಾನಾ ಮಾರ್ಗಗಳನ್ನು ಹುಡುಕುತ್ತಾರೆ. ಕೀರ್ತಿ, ಹಣಸಂಪತ್ತುಗಳನ್ನು ಕೊಡಬಲ್ಲ ಬೆನ್ನಟ್ಟುವಿಕೆಗಳಲ್ಲೇ ಮುಳುಗಿರುತ್ತಾರೆ. ಇವೆಲ್ಲಾ ಕೇವಲ ಭ್ರಾಂತಿಯಾಗಿದ್ದು ಅದರ ಕೊನೆಯು ಹೆಚ್ಚಾಗಿ ನಿರಾಶೆಯೇ. ಹಾಗಾದರೆ, ನಿಜ ಸಂತೃಪ್ತಿ ಮತ್ತು ಬಾಳುವ ಸಂತೋಷವನ್ನು ತರುವಂಥಾದ್ದು ಯಾವುದು? ಯೇಸುವಿನ ಪರ್ವತ ಪ್ರಸಂಗದ ಮಾತುಗಳು ಇದಕ್ಕೆ ಉತ್ತರ ನೀಡುತ್ತವೆ. ಅವನು ಹೇಳಿದ್ದು: “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು; ಸ್ವರ್ಗದ ರಾಜ್ಯವು ಅವರದು.” (ಮತ್ತಾಯ 5:3) ನಿಜ ಸಂತೋಷವು ಸುಖಭೋಗದ ಅನೇಕ ವಸ್ತುಗಳನ್ನು ಹೊಂದಿರುವುದರಿಂದ ಬರುವುದಿಲ್ಲ ನಿಶ್ಚಯ, ಬದಲಿಗೆ ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ಗುರುತಿಸಿ ತೃಪ್ತಿಪಡಿಸುವುದರಿಂದ ಮಾತ್ರ ಬರುತ್ತದೆ. ಆಗ ನಾವು ತಕ್ಕ ಕಾಲದಲ್ಲಿ ಫಲಕೊಡುವ ಮರದಂತೆ ಸೊಂಪಾಗಿ ಅಂದರೆ ಆಧ್ಯಾತ್ಮಿಕವಾಗಿ ಆರೋಗ್ಯವಂತರಾಗಿ ಬೆಳೆಯುವೆವು. ಆಧ್ಯಾತ್ಮಿಕವಾಗಿ ನಾವು ಸೊಂಪಾಗಿ ಬೆಳೆಯುವುದು ಹೇಗೆ?

ಕೀರ್ತನೆಗಾರನಿಗೆ ಅನುಸಾರವಾಗಿ, ಮೊದಲು ನಾವು ತೊರೆದುಬಿಡಬೇಕಾದ ಕೆಲವು ವಿಷಯಗಳಿವೆ. ಅವು, “ದುಷ್ಟರ ಆಲೋಚನೆ,” “ಪಾಪಾತ್ಮರ ಮಾರ್ಗ” ಮತ್ತು ‘ಧರ್ಮನಿಂದಕರೊಡನೆ ಕೂತುಕೊಳ್ಳುವುದೇ’ ಆಗಿವೆ ಎಂದವನು ಹೇಳಿದನು. ಸಂತೋಷಿತರಾಗಿರಬೇಕಾದರೆ ದೇವರ ಧರ್ಮಶಾಸ್ತ್ರವನ್ನು ಅಂದರೆ ಆತನ ನಿಯಮಗಳನ್ನು ನಿಂದಿಸುವ ಇಲ್ಲವೆ ಕಡೆಗಣಿಸುವ ಜನರಿಂದ ನಾವು ದೂರವಿರಬೇಕು.

ಮಾತ್ರವಲ್ಲ, ಯೆಹೋವ ದೇವರ ಧರ್ಮಶಾಸ್ತ್ರದಲ್ಲೂ ನಾವು ಆನಂದಿಸಬೇಕು. ನಾವು ಯಾವುದಾದರೂ ಒಂದು ವಿಷಯ ಅಥವಾ ಕೆಲಸದಲ್ಲಿ ಸಂತೋಷಿಸುವಾಗ ಪ್ರತಿಯೊಂದು ಸಂದರ್ಭದಲ್ಲಿ ಅದರಲ್ಲಿ ಒಳಗೂಡುವ ಅವಕಾಶಕ್ಕಾಗಿ ನೋಡುತ್ತೇವೆ ಅಲ್ಲವೇ? ಅದೇರೀತಿ ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುವುದೆಂದರೆ ದೇವರ ವಾಕ್ಯಕ್ಕಾಗಿ ಆಳವಾದ ಗಣ್ಯತೆ ತೋರಿಸುವುದು, ಅದರ ಕುರಿತು ಹೆಚ್ಚನ್ನು ಕಲಿಯುವ ಮತ್ತು ಉತ್ತಮ ತಿಳಿವಳಿಕೆಯನ್ನು ಪಡಕೊಳ್ಳುವ ಅಪೇಕ್ಷೆಯನ್ನು ಹೊಂದಿರುವುದು ಆಗಿದೆ.

ಕೊನೇದಾಗಿ, ನಾವು ದೇವರ ವಾಕ್ಯವನ್ನು ಓದಿ ‘ಹಗಲಿರುಳು ಧ್ಯಾನಿಸಬೇಕು.’ ಅಂದರೆ ಕ್ರಮವಾಗಿ ಬೈಬಲನ್ನು ಓದಿ ಅದನ್ನು ಮನನಮಾಡಬೇಕು. ದೇವರ ವಾಕ್ಯದ ಕಡೆಗೆ ಕೀರ್ತನೆಗಾರನಿಗಿದ್ದಂಥ ಮನೋಭಾವವೇ ನಮಗಿರಬೇಕು. ಅವನು ಹಾಡಿದ್ದು: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.”—ಕೀರ್ತನೆ 119:97.

ಹೌದು, ಯೆಹೋವ ದೇವರ ಕುರಿತ ನಿಷ್ಕೃಷ್ಟ ಜ್ಞಾನ ಮತ್ತು ತಿಳಿವಳಿಕೆಯನ್ನು ಪಡೆದು, ಆತನಲ್ಲಿ ಹಾಗೂ ಆತನ ವಾಗ್ದಾನಗಳಲ್ಲಿ ಪೂರ್ಣ ಭರವಸೆಯನ್ನು ಬೆಳೆಸಿಕೊಳ್ಳುವಲ್ಲಿ ನಾವು ಖಂಡಿತ ಆಧ್ಯಾತ್ಮಿಕವಾಗಿ ಆರೋಗ್ಯವಂತರಾಗಿ ಇರುವೆವು. ಹೀಗೆ ಮಾಡುವಲ್ಲಿ, “ಅವನ ಕಾರ್ಯವೆಲ್ಲವೂ ಸಫಲವಾಗುವದು” ಎಂದು ಕೀರ್ತನೆಗಾರನು ವರ್ಣಿಸಿದ ಆ ಸಂತೋಷಿತ ವ್ಯಕ್ತಿಯಂತೆ ನಾವಿರುವೆವು! (w09 3/1)