ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರತಿಯೊಂದಕ್ಕೂ ಒಂದೊಂದು ಸಮಯ

ಪ್ರತಿಯೊಂದಕ್ಕೂ ಒಂದೊಂದು ಸಮಯ

ಪ್ರತಿಯೊಂದಕ್ಕೂ ಒಂದೊಂದು ಸಮಯ

“ಆಕಾಶದ ಕೆಳಗೆ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲವಿದೆ. ಪ್ರತಿಯೊಂದಕ್ಕೂ ಒಂದೊಂದು ಸಮಯವಿದೆ.” ಎನ್ನುತ್ತದೆ ಬೈಬಲ್‌. ಈ ಮಾತುಗಳ ಲೇಖಕನು ಪ್ರಾಚೀನ ರಾಜ ಸೊಲೊಮೋನ. ಆ ವಿವೇಕಿ ರಾಜನು ಮುಂದುವರಿಸಿ ಹುಟ್ಟುವುದಕ್ಕೆ ಒಂದು ಸಮಯ, ಸಾಯುವುದಕ್ಕೆ ಒಂದು ಸಮಯ, ಕಟ್ಟುವುದಕ್ಕೆ ಒಂದು ಸಮಯ, ಕೆಡವಿ ಬಿಡುವುದಕ್ಕೆ ಒಂದು ಸಮಯ, ಪ್ರೀತಿಸುವುದಕ್ಕೆ ಒಂದು ಸಮಯ, ದ್ವೇಷಿಸುವುದಕ್ಕೆ ಒಂದು ಸಮಯ ಇದೆ ಎಂದು ಹೇಳಿದನು. ಕೊನೆಯಲ್ಲಿ ಅವನಂದದ್ದು: “ತಾನು ಪ್ರಯಾಸಪಡುವುದರಲ್ಲಿ ದುಡಿಯುವವನಿಗೆ ಲಾಭವೇನಿದೆ?”—ಪ್ರಸಂಗಿ 3:1-9, NIBV.

ಮೇಲಿನ ಮಾತುಗಳನ್ನು ಓದಿ ಕೆಲವರು, ಪ್ರತಿಯೊಂದಕ್ಕೂ ಸಮಯ ಪೂರ್ವನಿರ್ಧರಿತವಾಗಿದೆ ಎಂದು ಬೈಬಲೇ ಕಲಿಸುತ್ತದೆ ಎಂಬ ನಿರ್ಣಯಕ್ಕೆ ಬರುತ್ತಾರೆ. ಅಂದರೆ ವಿಧಿನಿರ್ಣಯದಲ್ಲಿನ ನಂಬಿಕೆಯನ್ನು ಬೈಬಲ್‌ ಸಮರ್ಥಿಸುತ್ತದೆ ಎಂದವರ ಅಭಿಪ್ರಾಯ. ಅದು ಸತ್ಯವೋ? ಜೀವನದ ಪ್ರತಿಯೊಂದು ವಿಷಯ ವಿಧಿನಿಯಮಕ್ಕೆ ತಕ್ಕಂತೆ ನಡೆಯುತ್ತದೆಂಬ ಅಭಿಪ್ರಾಯವನ್ನು ಬೈಬಲ್‌ ಬೆಂಬಲಿಸುತ್ತದೋ? ‘ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿರುವ’ ಕಾರಣ ಬೈಬಲಿನ ಒಂದು ಭಾಗದಲ್ಲಿ ನಾವು ಏನು ಓದುತ್ತೇವೋ ಅದು ಇನ್ನೊಂದು ಭಾಗದೊಂದಿಗೆ ಹೊಂದಿಕೆಯಲ್ಲಿರಬೇಕಲ್ಲವೇ? ಆದುದರಿಂದ ವಿಧಿನಿರ್ಣಯದ ಕುರಿತು ದೇವರ ವಾಕ್ಯವಾದ ಬೈಬಲಿನ ಉಳಿದ ಭಾಗ ಏನು ಹೇಳುತ್ತದೆಂದು ನಾವೀಗ ಪರಿಗಣಿಸೋಣ.—2 ತಿಮೊಥೆಯ 3:16.

ಕಾಲ ಮತ್ತು ಮುಂಗಾಣದ ಘಟನೆ

ಬೈಬಲಿನ ಪ್ರಸಂಗಿ ಪುಸ್ತಕದಲ್ಲಿ ಸೊಲೊಮೋನನು ಮತ್ತೂ ಬರೆದದ್ದು: “ನಾನು ಲೋಕದಲ್ಲಿ ತಿರಿಗಿ ದೃಷ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ, ಬಲಿಷ್ಠರಿಗೆ ಯುದ್ಧದಲ್ಲಿ ಜಯವಾಗದು, ಜ್ಞಾನಿಗಳಿಗೆ ಅನ್ನ ಸಿಕ್ಕದು, ವಿವೇಕಿಗಳಿಗೆ ಧನ ಲಭಿಸದು, ಪ್ರವೀಣರಿಗೆ ದಯೆ ದೊರೆಯದು.” ಹಾಗೇಕೆ? ಅವನು ವಿವರಿಸಿದ್ದು: “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ.”—ಪ್ರಸಂಗಿ 9:11.

ಇಲ್ಲಿ ಸೊಲೊಮೋನನು, ಜೀವನದ ಪ್ರತಿಯೊಂದು ವಿಷಯ ವಿಧಿಲಿಖಿತ ಎಂದು ತಿಳಿಸಲಿಲ್ಲ. “ಕಾಲವೂ ಪ್ರಾಪ್ತಿಯೂ [ಅಂದರೆ ಮುಂಗಾಣದ ಘಟನೆ] ಯಾರಿಗೂ ತಪ್ಪಿದ್ದಲ್ಲ” ಎಂದು ಅವನು ಹೇಳಿದ್ದು ಏಕೆಂದರೆ ಮನುಷ್ಯರು ಯಾವುದೇ ಕೆಲಸದ ಫಲಿತಾಂಶವನ್ನು ನಿಖರವಾಗಿ ಹೇಳಸಾಧ್ಯವಿಲ್ಲ ಎಂದು ಸೂಚಿಸುವುದಕ್ಕಾಗಿಯೇ. ಕೆಲವೊಮ್ಮೆ ಒಬ್ಬ ವ್ಯಕ್ತಿ ಅನಿರೀಕ್ಷಿತವಾಗಿ ಅವಘಡಕ್ಕೆ ತುತ್ತಾಗುತ್ತಾನೆ, ಏಕೆಂದರೆ ಅದು ಸಂಭವಿಸುವ ಸಮಯದಲ್ಲಿ ಅವನು ಅಲ್ಲಿ ಇರುವುದರಿಂದಲೇ.

ಉದಾಹರಣೆಗೆ, “ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ” ಎಂಬ ಹೇಳಿಕೆಯನ್ನು ತಕ್ಕೊಳ್ಳಿ. 1984ರಲ್ಲಿ ಅಮೆರಿಕದಲ್ಲಿನ ಕ್ಯಾಲಿಫೋರ್ನಿಯದ ಲಾಸ್‌ ಏಂಜಲಿಸ್‌ನಲ್ಲಿ ನಡೆದ ಒಲಿಂಪಿಕ್‌ ಕ್ರೀಡೆಯಲ್ಲಿ ಸುದ್ದಿಯಾದ ಅಪರೂಪದ ಘಟನೆಯೊಂದು ನಿಮಗೆ ನೆನಪಿರಬಹುದು ಅಥವಾ ನೀವು ಆ ಕುರಿತು ಓದಿರಬಹುದು. ಮಹಿಳೆಯರ 3,000 ಮೀಟರ್‌ ಓಟದ ಸ್ಪರ್ಧೆಯಲ್ಲಿ ಇಬ್ಬರು ಓಟಗಾರ್ತಿಯರು ಚಿನ್ನದ ಪದಕವನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಅವರಲ್ಲಿ ಒಬ್ಬಳು ಬ್ರಿಟನ್‌ನವಳು ಮತ್ತು ಇನ್ನೊಬ್ಬಳು ಅಮೆರಿಕದವಳು. ಓಟದ ಮಧ್ಯದಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಬಲವಾಗಿ ಡಿಕ್ಕಿಹೊಡೆದರು. ಪರಿಣಾಮ ಒಬ್ಬಳು ಬಿದ್ದು ಸ್ಪರ್ಧೆಯಿಂದ ಹೊರಹೋದಳು. ಇನ್ನೊಬ್ಬಳು ಎಷ್ಟು ಹತಾಶಳಾದಳೆಂದರೆ ಏಳನೆಯ ಸ್ಥಾನಕ್ಕೆ ಹಿಂದೆಬಿದ್ದಳು.

ಹೀಗಾಗಲು ವಿಧಿಯೇ ಕಾರಣವೋ? ‘ಹೌದು’ ಎನ್ನಬಹುದು ಕೆಲವರು. ಆದರೆ ಅವರಿಬ್ಬರ ಸೋಲಿಗೆ ಕಾರಣ ಡಿಕ್ಕಿಹೊಡೆದದ್ದೇ ಎಂಬುದು ಸ್ಪಷ್ಟ. ಈ ಆಕಸ್ಮಿಕ ಘಟನೆಯನ್ನು ಯಾರೂ ಮುನ್ನೋಡಿರಲಿಕ್ಕಿಲ್ಲ. ಹಾಗಾದರೆ ಅವರು ಡಿಕ್ಕಿಹೊಡೆದುಕೊಂಡದ್ದು ವಿಧಿನಿರ್ಣಯವೋ? ಇದಕ್ಕೂ ಕೆಲವರು ‘ಹೌದು’ ಎನ್ನಬಹುದು. ಆದರೆ ಕಾಮೆಂಟೇಟರ್‌ ಹೇಳಿಕೆಯಿತ್ತ ಪ್ರಕಾರ ಬಲಸಾಮರ್ಥ್ಯದಲ್ಲಿ ಸರಿಸಮಾನರಾಗಿದ್ದ ಆ ಇಬ್ಬರು ಕ್ರೀಡಾಪಟುಗಳು ಜಯಸಾಧಿಸಲು ಮಾಡಿದ ತೀವ್ರ ಪೈಪೋಟಿಯೇ ಅವರ ಅಪಘಾತಕ್ಕೆ ಕಾರಣವಾಗಿತ್ತು. ಬೈಬಲ್‌ ಹೇಳುವಂತೆ “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ.” ಅಂದರೆ ಒಬ್ಬನು ಒಂದು ಕೆಲಸಕ್ಕೆ ಕೈಹಾಕುವ ಮುಂಚೆ ಎಷ್ಟೇ ಮುನ್‌ತಯಾರಿ ಮಾಡಿದರೂ ಅನಿರೀಕ್ಷಿತ ಘಟನೆಗಳು ಅದರ ಫಲಿತಾಂಶವನ್ನು ಮೇಲೆಕೆಳಗೆ ಮಾಡಬಹುದು. ಇದಕ್ಕೆ ವಿಧಿಯೊಂದಿಗೆ ಯಾವುದೇ ಸಂಬಂಧವಿಲ್ಲ.

ಹಾಗಾದರೆ, “ಪ್ರತಿಯೊಂದಕ್ಕೂ ಒಂದೊಂದು ಸಮಯವಿದೆ” ಎಂದು ಬೈಬಲ್‌ ಹೇಳುವುದರ ಅರ್ಥವೇನು? ನಮ್ಮ ಬದುಕಿನ ಆಗುಹೋಗುಗಳ ಫಲಿತಾಂಶವನ್ನು ಪ್ರಭಾವಿಸಲು ನಾವೇನಾದರೂ ಮಾಡಸಾಧ್ಯವಿದೆಯೋ?

ಪ್ರತಿಯೊಂದು ಕಾರ್ಯಕ್ಕೆ ಅತ್ಯುತ್ತಮ ಸಮಯ

ಯಾವನೇ ಒಬ್ಬನ ಅದೃಷ್ಟವನ್ನಾಗಲಿ ಅವನ ಜೀವನದ ಆಗುಹೋಗುಗಳನ್ನಾಗಲಿ ಆ ಬೈಬಲ್‌ ಬರಹಗಾರನು ವರ್ಣಿಸುತ್ತಿರಲಿಲ್ಲ. ಬದಲಿಗೆ ದೇವರ ಉದ್ದೇಶ ಮತ್ತು ಅದು ಮಾನವಕುಲದ ಮೇಲೆ ಬೀರುವ ಪರಿಣಾಮದ ಕುರಿತು ತಿಳಿಸುತ್ತಿದ್ದನು. ಅದು ನಮಗೆ ಹೇಗೆ ಗೊತ್ತು? ಆ ವಚನದ ಪೂರ್ವಾಪರವೇ ನಮಗದನ್ನು ತಿಳಿಸುತ್ತದೆ. ಪ್ರತಿಯೊಂದು ಕೆಲಸಕ್ಕೂ “ಒಂದೊಂದು ಸಮಯವಿದೆ” ಎಂದು ತಿಳಿಸಿದ ಬಳಿಕ ಸೊಲೊಮೋನನು ಬರೆದದ್ದು: “ನರಜನ್ಮದವರ ಕರ್ತವ್ಯವೆಂದು ದೇವರು ನೇಮಿಸಿರುವ ಪ್ರಯಾಸವನ್ನು ನೋಡಿದ್ದೇನೆ. ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ.”—ಪ್ರಸಂಗಿ 3:10, 11.

ದೇವರು ಮಾನವಕುಲಕ್ಕೆ ಅನೇಕ ಕರ್ತವ್ಯಗಳನ್ನು ಅಂದರೆ ಮಾಡಲು ಕೆಲಸಗಳನ್ನು ಕೊಟ್ಟಿದ್ದಾನೆ. ಅವುಗಳಲ್ಲಿ ಹಲವಾರನ್ನು ಸೊಲೊಮೋನನು ಪಟ್ಟಿಮಾಡಿದನು. ನಾವು ಮಾಡಬಯಸುವುದನ್ನು ಆರಿಸಿಕೊಳ್ಳಲು ದೇವರು ನಮಗೆ ಇಚ್ಛಾಸ್ವಾತಂತ್ರ್ಯವನ್ನು ಸಹ ಕೊಟ್ಟಿದ್ದಾನೆ. ಹಾಗಿದ್ದರೂ ಉತ್ತಮ ಫಲಿತಾಂಶ ಸಿಗಬೇಕಾದರೆ ಪ್ರತಿಯೊಂದು ಕೆಲಸಕ್ಕೂ ಸರಿಯಾದ ಇಲ್ಲವೆ ಅನುಕೂಲಕರವಾದ ಸಮಯವೊಂದಿದೆ. ಉದಾಹರಣೆಗೆ, “ನೆಡುವುದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತುಹಾಕುವುದಕ್ಕೆ ಒಂದು ಸಮಯ” ಎಂದು ಪ್ರಸಂಗಿ 3:2ರಲ್ಲಿ (NIBV) ಸೊಲೊಮೋನನು ಹೇಳಿದ ಮಾತನ್ನು ಗಮನಿಸಿ. ಯಾವುದೇ ಬೆಳೆಯನ್ನು ನೆಡಬೇಕಾದರೆ ಅದಕ್ಕೆ ತಕ್ಕ ಸಮಯವಿದೆ ಎಂಬುದು ರೈತರಿಗೆ ತಿಳಿದಿದೆ. ಆ ಸರಳ ಸತ್ಯವನ್ನು ರೈತನೊಬ್ಬನು ಅಲಕ್ಷಿಸಿ ತಕ್ಕ ಸಮಯ ಅಥವಾ ಕಾಲದಲ್ಲಿ ಒಂದು ಬೆಳೆಯನ್ನು ನೆಡದಿದ್ದಲ್ಲಿ ಏನಾಗಬಹುದು? ಅವನು ಬೆವರಿಳಿಸಿ ದುಡಿದಿದ್ದರೂ ಒಳ್ಳೇ ಫಸಲು ದೊರೆಯದಿದ್ದಲ್ಲಿ ವಿಧಿಯೇ ಕಾರಣವೆಂದು ದೂರುವುದು ಸರಿಯೇ? ಖಂಡಿತ ಇಲ್ಲ! ಅವನು ತಕ್ಕ ಸಮಯದಲ್ಲಿ ಬೆಳೆ ನೆಡದಿದ್ದದ್ದೇ ಅದಕ್ಕೆ ಕಾರಣ. ಸೃಷ್ಟಿಕರ್ತನು ಸ್ಥಾಪಿಸಿರುವ ನೈಸರ್ಗಿಕ ನಿಯಮಕ್ಕನುಗುಣವಾಗಿ ಆ ರೈತನು ಬೆಳೆ ನೆಟ್ಟಿದ್ದಲ್ಲಿ ಒಳ್ಳೇ ಫಸಲನ್ನು ಕೊಯ್ಯಬಹುದಿತ್ತು.

ಹೀಗಿರುವುದರಿಂದ ದೇವರು ವ್ಯಕ್ತಿಗಳ ಅದೃಷ್ಟವನ್ನಾಗಲಿ ಅಥವಾ ಪ್ರತಿಯೊಂದು ಘಟನೆಯ ಫಲಿತಾಂಶವನ್ನಾಗಲಿ ಪೂರ್ವನಿರ್ಧರಿಸಿರುವುದಿಲ್ಲ. ಬದಲಿಗೆ ಮಾನವ ಕಾರ್ಯಾಚರಣೆ ಮುಂದೆಸಾಗುವಂತೆ ನೆರವಾಗುವ ನಿರ್ದಿಷ್ಟ ಮೂಲತತ್ತ್ವಗಳನ್ನು ಮಾತ್ರ ನಿರ್ಧರಿಸಿದ್ದಾನೆ. ಮಾನವರು ತಮ್ಮ ಕೈಕೆಲಸದ ಫಲವನ್ನು ಅನುಭವಿಸಬೇಕಾದರೆ ಅವರು ದೇವರ ಉದ್ದೇಶ ಮತ್ತು ಕ್ಲುಪ್ತ ಕಾಲವನ್ನು ಅರಿತು ಅದಕ್ಕೆ ಹೊಂದಿಕೆಯಲ್ಲಿ ಕಾರ್ಯವೆಸಗಲೇಬೇಕು. ಮನುಷ್ಯನ ಅದೃಷ್ಟವು ಪೂರ್ವನಿರ್ಧರಿತವೂ ಅಲ್ಲ, ಬದಲಾಯಿಸಲು ಅಸಾಧ್ಯವಾದ್ದದ್ದೂ ಅಲ್ಲ. ದೇವರ ಉದ್ದೇಶ ಮಾತ್ರ ಪೂರ್ವನಿರ್ಧರಿತವೂ ಬದಲಾಯಿಸಲು ಅಸಾಧ್ಯವೂ ಆಗಿದೆ. ಪ್ರವಾದಿ ಯೆಶಾಯನ ಮೂಲಕ ಯೆಹೋವ ದೇವರು ಪ್ರಕಟಿಸಿದ್ದು: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”—ಯೆಶಾಯ 55:11.

ಹಾಗಾದರೆ, ಭೂಮಿ ಮತ್ತು ಮಾನವರ ಭವಿಷ್ಯದ ಕುರಿತು ದೇವರ ‘ವ್ಯರ್ಥವಾಗದ’ “ಮಾತು” ಅಂದರೆ ಆತನು ಪ್ರಕಟಿಸಿರುವ ಉದ್ದೇಶ ಯಾವುದು?

ದೇವರ ಕ್ಲುಪ್ತಕಾಲವನ್ನು ಅರಿತುಕೊಳ್ಳುವುದು

ದೇವರ ಆ ಉದ್ದೇಶದ ಕುರಿತು ಸೊಲೊಮೋನನು ಒಂದು ಸುಳಿವನ್ನು ಕೊಟ್ಟಿದ್ದಾನೆ. “ಒಂದೊಂದು ವಸ್ತುವನ್ನು [ದೇವರು] ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ” ಎಂದು ಹೇಳಿದ ಬಳಿಕ ಅವನಂದದ್ದು: “ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ; ಆದರೂ ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ.”—ಪ್ರಸಂಗಿ 3:11.

ಈ ವಚನದ ಕುರಿತು ಬಹಳ ವಿವರಣೆಗಳನ್ನು ಕೊಡಲಾಗಿದೆ. ಹಾಗಿದ್ದರೂ ಒಂದು ನಿಜತ್ವವೇನೆಂದರೆ ಒಂದಲ್ಲ ಒಂದು ಸಮಯ ನಮ್ಮ ಹೃದಯದಾಳದಲ್ಲಿ ಜೀವನಕ್ಕೆ ಅರ್ಥವಿದೆಯೋ ಮತ್ತು ಭವಿಷ್ಯದಲ್ಲಿ ಏನಿದೆ ಎಂಬ ಪ್ರಶ್ನೆ ಬಂದೇ ಬರುತ್ತದೆ. ತಮ್ಮ ಕೈಕೆಲಸದಲ್ಲಿ ಶ್ರಮಪಟ್ಟು ದುಡಿದು ಕಟ್ಟಕಡೆಗೆ ಸಾಯುವುದಷ್ಟೇ ಜೀವನ ಎಂಬುದು ಮುಂಚಿನಿಂದಲೂ ಜನರಿಗೆ ಅರಗಿಸಿಕೊಳ್ಳಲಾಗದ ವಿಷಯ. ಇಂದಿನ ಕುರಿತು ಮಾತ್ರವಲ್ಲ ಭವಿಷ್ಯದ ಕುರಿತೂ ಯೋಚಿಸುವ ವಿಷಯದಲ್ಲಿ ಬೇರೆಲ್ಲಾ ಜೀವಿಗಳಿಗಿಂತ ನಾವು ಭಿನ್ನರು. ಅನಂತಕಾಲ ಜೀವಿಸಲು ಸಹ ನಾವು ಸದಾ ಹಂಬಲಿಸುತ್ತೇವೆ. ಏಕೆ? ವಚನವು ತಿಳಿಸುವಂತೆ ದೇವರು “ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ.”

ಆ ಹಂಬಲವನ್ನು ತಣಿಸಲು ಜನರು ಮರಣಾನಂತರ ಜೀವನ ಇದೆ ಎಂಬ ಕಲ್ಪನೆಯನ್ನು ನಂಬುತ್ತಾರೆ. ಮರಣದ ಬಳಿಕ ಆತ್ಮ ಅಮರವಾಗಿ ಜೀವಿಸುತ್ತಿರುತ್ತದೆ ಎಂದು ಕೆಲವರು ನೆನಸುತ್ತಾರೆ. ಪುನರ್ಜನ್ಮದಲ್ಲಿ ಹುಟ್ಟು-ಸಾವು ಒಂದು ಚಕ್ರದಂತೆ ಪುನರಾವರ್ತಿಸುತ್ತದೆ ಎಂಬುದು ಇತರರ ನಂಬಿಕೆ. ಬದುಕಿನ ಪ್ರತಿಯೊಂದು ವಿಷಯ ವಿಧಿಲಿಖಿತ ಅಥವಾ ಪೂರ್ವನಿರ್ಧರಿತ ಮತ್ತು ನಾವದನ್ನು ಬದಲಾಯಿಸಲಾರೆವೆಂದು ಇನ್ನೂ ಕೆಲವರು ನೆನಸುತ್ತಾರೆ. ವಿಷಾದಕರವಾಗಿ ಈ ಯಾವುದೇ ವಿವರಣೆಗಳು ಸದಾ ಜೀವಿಸಬೇಕೆಂಬ ಮಾನವರ ಹಂಬಲವನ್ನು ತಣಿಸಿಲ್ಲ. ಏಕೆಂದರೆ “ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ” ಎನ್ನುತ್ತದೆ ಬೈಬಲ್‌. ಅಂದರೆ ಮಾನವರು ತಮ್ಮ ಸ್ವಂತ ಪ್ರಯತ್ನದಿಂದ ದೇವರ ಕೆಲಸವನ್ನು ಗ್ರಹಿಸಲಾರರು.

ಚಿಂತಕರು ಮತ್ತು ತತ್ತ್ವಜ್ಞಾನಿಗಳು ಶತಮಾನಗಳಿಂದ ಅನಂತಜೀವನದ ಕುರಿತು ತಿಳಿಯಲು ಹಂಬಲಿಸಿದರೂ ಅದನ್ನು ಗಳಿಸುವ ವಿಧಾನವನ್ನು ಕಂಡುಹಿಡಿಯಲು ಶಕ್ತರಾಗದೆ ಚಿಂತೆಗೀಡಾಗಿದ್ದಾರೆ. ಆದರೂ ಅನಂತಕಾಲ ಜೀವಿಸುವ ಆಸೆಯನ್ನು ದೇವರೇ ನಮ್ಮ ಹೃದಯದಲ್ಲಿ ಇಟ್ಟಿರುವುದರಿಂದ ಆ ಹಂಬಲವನ್ನು ತಣಿಸಲು ಬೇಕಾದದ್ದನ್ನು ಒದಗಿಸುವಂತೆ ನಾವು ಆತನೆಡೆಗೆ ತಿರುಗುವುದು ತರ್ಕಬದ್ಧವಲ್ಲವೇ? ಮಾತ್ರವಲ್ಲ ಯೆಹೋವ ದೇವರ ಕುರಿತು ಬೈಬಲ್‌ ಹೇಳುವುದು: “ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ.” (ಕೀರ್ತನೆ 145:16) ದೇವರ ವಾಕ್ಯವಾದ ಬೈಬಲನ್ನು ಅಧ್ಯಯನಮಾಡುವಾಗ ಜೀವ-ಮರಣದ ಬಗ್ಗೆ, ಭೂಮಿ ಹಾಗೂ ಮಾನವ ಕುಟುಂಬಕ್ಕಾಗಿ ದೇವರ ಶಾಶ್ವತ ಉದ್ದೇಶದ ಬಗ್ಗೆ ತೃಪ್ತಿಕರ ಉತ್ತರಗಳನ್ನು ಪಡೆಯಬಲ್ಲೆವು.—ಎಫೆಸ 3:10. (w09 3/1)

[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]

“ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ.”—ಪ್ರಸಂಗಿ 9:11.

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ತಕ್ಕ ಸಮಯದಲ್ಲಿ ಬೆಳೆ ನೆಡದಿದ್ದ ರೈತನೊಬ್ಬನು ಒಳ್ಳೇ ಫಸಲು ದೊರೆಯದಿದ್ದಲ್ಲಿ ವಿಧಿಯೇ ಅದಕ್ಕೆ ಕಾರಣವೆಂದು ದೂರುವುದು ಸರಿಯೇ?

[ಪುಟ 7ರಲ್ಲಿರುವ ಸಂಕ್ಷಿಪ್ತ ವಿವರಣೆ]

ಜೀವ-ಮರಣದ ಬಗ್ಗೆ ನಾವು ಯೋಚಿಸಲು ಕಾರಣ, ದೇವರು “ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು” ಇಟ್ಟಿರುವುದರಿಂದಲೇ