ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮ್ಯಾನ್‌ಮಾರ್‌ನ ಚಂಡಮಾರುತ ಪೀಡಿತರಿಗೆ ಪರಿಹಾರ

ಮ್ಯಾನ್‌ಮಾರ್‌ನ ಚಂಡಮಾರುತ ಪೀಡಿತರಿಗೆ ಪರಿಹಾರ

ಮ್ಯಾನ್‌ಮಾರ್‌ನ ಚಂಡಮಾರುತ ಪೀಡಿತರಿಗೆ ಪರಿಹಾರ

ಮ್ಯಾನ್‌ಮಾರನ್ನು ಮೇ 2, 2008ರಲ್ಲಿ ಸದೆಬಡಿದ ಚಂಡಮಾರುತ ನಾರ್ಗಿಸ್‌ ಬೇಗನೆ ಅಂತಾರಾಷ್ಟ್ರೀಯ ವಾರ್ತಾಮಾಧ್ಯಮದ ಮುಖ್ಯ ಶಿರೋನಾಮವಾಯಿತು. * ಇರಾವತಿ ನದೀಮುಖಜ ಭೂಮಿಯನ್ನು ಸದೆಬಡಿದ ಈ ಮಹಾ ಚಂಡಮಾರುತದ ದಾಳಿಯ ನಂತರ ಹೆಚ್ಚುಕಡಿಮೆ 1,40,000 ಜನರು ಸತ್ತರೆಂದೋ ಕಾಣೆಯಾದರೆಂದೋ ವರದಿಯಾಯಿತು.

ಆ ಕ್ಷೇತ್ರದಲ್ಲಿ ಯೆಹೋವನ ಸಾಕ್ಷಿಗಳು ಅನೇಕರಿದ್ದರೂ ಯಾರಿಗೂ ಹಾನಿಯಾಗದಿದ್ದದ್ದೂ ಆಶ್ಚರ್ಯವೇ ಸರಿ! ಏಕೆಂದರೆ ಸುದೃಢವಾಗಿ ಕಟ್ಟಲ್ಪಟ್ಟ ರಾಜ್ಯ ಸಭಾಗೃಹಗಳನ್ನು ಅವರು ಆಶ್ರಯಿಸಿದ್ದರಿಂದಲೇ. ಒಂದು ಸ್ಥಳದಲ್ಲಿ 20 ಸಾಕ್ಷಿಗಳು ಮತ್ತು 80 ಇತರ ಹಳ್ಳಿಯವರು ನೆರೆ ನೀರು 5 ಮೀಟರ್‌ ಎತ್ತರಕ್ಕೆ ಏರಿದಾಗ ರಾಜ್ಯ ಸಭಾಗೃಹದ ಮೇಲ್ಚಾವಣಿಯ ಮೇಲೆ ಹತ್ತಿ ಮುದುಡಿಕೊಂಡು ಒಂಭತ್ತು ತಾಸುಗಳ ತನಕ ಕೂತಿದ್ದರು. ಅವರೆಲ್ಲರೂ ಬಚಾವಾದರು. ಆದರೆ ಆ ಹಳ್ಳಿಯ ಇತರ 300 ಮಂದಿ ಜೀವಕಳಕೊಂಡದ್ದು ವಿಷಾದನೀಯ. ಅನೇಕ ಹಳ್ಳಿಗಳಲ್ಲಿ ಬಿರುಗಾಳಿಯಿಂದ ಬೀಳದೆ ನಿಂತ ಒಂದೇ ಕಟ್ಟಡ ರಾಜ್ಯ ಸಭಾಗೃಹ ಮಾತ್ರ.

ಚಂಡಮಾರುತದ ದಾಳಿಯ ಎರಡು ದಿನಗಳ ನಂತರ ಯಾಂಗಾನ್‌ನಲ್ಲಿದ್ದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸು ಒಂದು ಪರಿಹಾರ ತಂಡವನ್ನು ನದೀಮುಖಜ ಪ್ರದೇಶದಲ್ಲಿದ್ದ ಬೋತಿಂಗೋನ್‌ ಸಭೆಗೆ ಕಳುಹಿಸಿತು. ಧ್ವಂಸವಾಗಿ ಹೋದ ಈ ಪ್ರದೇಶದಲ್ಲಿ ಲೂಟಿಗಾರರ ಕಣ್ತಪ್ಪಿಸಿ, ಕೊಳೆಯುತ್ತಿರುವ ಶವಗಳನ್ನು ದಾಟುತ್ತಾ ಸರಿಸುತ್ತಾ ಪರಿಹಾರ ತಂಡವು ಅಕ್ಕಿ, ನೂಡಲ್ಸ್‌, ನೀರು, ಮೇಣದಬತ್ತಿಗಳ ದೊಡ್ಡ ಸಂಗ್ರಹವನ್ನು ತೆಗೆದುಕೊಂಡು ಬೋತಿಂಗೋನ್‌ಗೆ ತಲಪಿತು. ಆ ಕ್ಷೇತ್ರವನ್ನು ತಲಪಿದವರಲ್ಲಿ ಅವರ ಪರಿಹಾರ ತಂಡವೇ ಮೊದಲನೇದು. ಸ್ಥಳಿಕ ಸಾಕ್ಷಿಗಳಿಗೆ ಪರಿಹಾರ ಸಂಗ್ರಹಗಳನ್ನು ಕೊಟ್ಟಾದ ಮೇಲೆ ಆ ತಂಡವು ಅವರ ಉತ್ತೇಜನಕ್ಕಾಗಿ ಬೈಬಲ್‌ ಭಾಷಣಗಳನ್ನು ಕೊಟ್ಟು ಬೈಬಲ್‌ ಮತ್ತು ಬೈಬಲಾಧಾರಿತ ಸಾಹಿತ್ಯಗಳನ್ನು ಬಿಟ್ಟುಹೋದರು. ಏಕೆಂದರೆ ಅವರ ಸಮಸ್ತ ಸ್ವತ್ತುಗಳನ್ನು ಚಂಡಮಾರುತವು ಕೊಚ್ಚಿಕೊಂಡು ಹೋಗಿತ್ತು.

ಆ ಬಿರುಗಾಳಿಯಿಂದ ಬಾಧಿಸಲ್ಪಟ್ಟ ಯೆಹೋವನ ಸಾಕ್ಷಿಗಳ ಮನೋಭಾವವಾದರೋ ನಿಜವಾಗಿಯೂ ಎದ್ದುಕಾಣುವಂಥಾದ್ದು. ಇರಾವತಿ ಪ್ರದೇಶದಲ್ಲಿ ದಾಳಿಗೊಳಗಾದ ಸಭೆಯ ಒಬ್ಬರು ಹೇಳಿದ್ದು: “ನಮಗಿದ್ದ ಎಲ್ಲವನ್ನೂ ಕಳಕೊಂಡೆವು. ಎಲ್ಲ ಮನೆಗಳೂ ಧ್ವಂಸವಾದವು. ಪೈರುಗಳೆಲ್ಲವೂ ನಾಶವಾದವು. ಕುಡಿಯುವ ನೀರೆಲ್ಲಾ ನೆರೆನೀರಿನಿಂದಾಗಿ ಕಲುಷಿತಗೊಂಡಿತು. ಆದರೂ ಸಹೋದರ ಸಹೋದರಿಯರು ಇತರ ಜನರಷ್ಟು ಚಿಂತಿತರಾಗಿರಲಿಲ್ಲ. ಅವರ ಭರವಸೆ ಯೆಹೋವನ ಮೇಲೆ ಮತ್ತು ಆತನ ಸಂಘಟನೆಯ ಮೇಲೆ ಇದೆ. ಹಳ್ಳಿಯಲ್ಲಿರಲಿ ಬೇರೆಲ್ಲಿಯೇ ಇರಲಿ ಅವರಿಂದ ಬರುವ ಯಾವುದೇ ಮಾರ್ಗದರ್ಶನವನ್ನು ನಾವು ಪಾಲಿಸುವೆವು.”

ಎಲ್ಲವನ್ನೂ ಕಳಕೊಂಡಿದ್ದ ಮೂವತ್ತು ಸಾಕ್ಷಿಗಳ ಒಂದು ಗುಂಪು ತಮಗಾಗಿ ಪರಿಹಾರ ತಂಡ ಸಿದ್ಧಪಡಿಸಿದ್ದ ಆಹಾರ, ಬಟ್ಟೆ, ಆಶ್ರಯವಿದ್ದ ಸ್ಥಳಕ್ಕೆ ಹೋಗಲು ಹತ್ತು ತಾಸಿನ ಪ್ರಯಾಣದಲ್ಲಿ ರಾಜ್ಯಗೀತೆಗಳನ್ನು ಹಾಡುತ್ತಾ ಸಂತೋಷದಿಂದ ಹೋದರು. ಆದರೆ ಆ ಸ್ಥಳವನ್ನು ತಲುಪುವ ಮುಂಚಿತವಾಗಿ ಯೆಹೋವನ ಸಾಕ್ಷಿಗಳ ಸರ್ಕಿಟ್‌ ಸಮ್ಮೇಳನವೊಂದು ಸಮೀಪದ ಊರಲ್ಲಿ ನಡೆಯುತ್ತಿದೆ ಎಂದು ಅವರಿಗೆ ಸುದ್ದಿ ಸಿಕ್ಕಿದ್ದರಿಂದ, ಅವರು ಮೊದಲಾಗಿ ಆ ಸಮ್ಮೇಳನವನ್ನು ಹಾಜರಾಗಿ ಆಧ್ಯಾತ್ಮಿಕ ಆಹಾರವನ್ನು ಪಡೆಯಲು ಮತ್ತು ಕ್ರೈಸ್ತ ಸಹವಾಸದಲ್ಲಿ ಆನಂದಿಸಲು ನಿರ್ಧರಿಸಿದರು.

ಚಂಡಮಾರುತದಿಂದ ಹೊಡೆಯಲ್ಪಟ್ಟ ಆ ಕ್ಷೇತ್ರದಲ್ಲೆಲ್ಲಾ ಸಾಕ್ಷಿಗಳ 35 ಮನೆಗಳು ಸಂಪೂರ್ಣ ನೆಲಸಮವಾದವು. 125 ಮನೆಗಳು ಆಂಶಿಕವಾಗಿ ಹಾಳುಗೆಡವಲ್ಪಟ್ಟವು. 8 ರಾಜ್ಯಸಭಾಗೃಹಗಳಿಗೂ ತುಸು ಹಾನಿಯಾಗಿತ್ತು. ಬ್ರಾಂಚ್‌ ಸೌಕರ್ಯಗಳು ತೀರ ಹೆಚ್ಚು ಹಾನಿಗೆ ಒಳಗಾಗಿರಲಿಲ್ಲ.

ಚಂಡಮಾರುತವು ದೊಡ್ಡದೊಡ್ಡ ಮರಗಳನ್ನು ಬೀಳಿಸಿ ಸಮೀಪದ ರಸ್ತೆಗಳಿಗೆ ತಡೆಯೊಡ್ಡಿದ ಕಾರಣ ಆರಂಭದಲ್ಲಿ ಬ್ರಾಂಚ್‌ ಆಫೀಸಿನ ಸಂಪರ್ಕವು ಪೂರ್ಣವಾಗಿ ಕಡಿದುಹೋಗಿತ್ತು. ಬಿರುಗಾಳಿ ನಿಂತ ಕೆಲವೇ ತಾಸುಗಳ ಬಳಿಕ ಬ್ರಾಂಚ್‌ ಸಿಬ್ಬಂದಿಯ 30ಕ್ಕಿಂತಲೂ ಹೆಚ್ಚು ಸದಸ್ಯರು ಬಿದ್ದ ಮರಗಳನ್ನು ತಾವಾಗಿಯೇ ದೂರಸರಿಸುವ ಕೆಲಸದಲ್ಲಿ ಪಾಲ್ಗೊಂಡರು. ಅವರು ಕೆಲಸಮಾಡುತ್ತಿದ್ದಾಗ ನೆರೆಹೊರೆಯ ಜನರು ಬೆರಗುಗಣ್ಣುಗಳಿಂದ ನೋಡುತ್ತಾ ನಿಂತರು. ಸ್ವಲ್ಪ ಹೊತ್ತಿನಲ್ಲೇ ಸ್ತ್ರೀಸಾಕ್ಷಿಗಳ ಗುಂಪೊಂದು ಕೋಲ್ಡ್‌ ಡ್ರಿಂಕ್ಸ್‌ ಮತ್ತು ಹಣ್ಣುಹಂಪಲುಗಳನ್ನು ತಂದು ಕೆಲಸಗಾರರಿಗೂ ನೆರೆಯವರಿಗೂ ಹಂಚಿದರು. ನೋಡುವವರಿಗೆ ಇದನ್ನು ನಂಬಲಾಗಲಿಲ್ಲ. ಪತ್ರಕರ್ತನೊಬ್ಬನು ಇದನ್ನು ಗಮನಿಸಿ, “ಇಷ್ಟು ಶ್ರದ್ಧೆಯಿಂದ ಕೆಲಸಮಾಡುವ ಈ ಜನರು ಯಾರಪ್ಪಾ?” ಎಂದು ಕೇಳಿದನು. ಅವರು ಸಾಕ್ಷಿಗಳೆಂದು ತಿಳಿದಾಗ “ಈ ಯೆಹೋವನ ಸಾಕ್ಷಿಗಳಂತೆ ನಿಜ ಸಾಮಾಜಿಕ ಆತ್ಮವನ್ನು ಹೆಚ್ಚಿನವರು ತೋರಿಸಿದ್ದರೆ ಅದೆಷ್ಟು ಒಳ್ಳೇದಿತ್ತು!” ಎಂದನವನು.

ದೇಶದ ಪ್ರತ್ಯೇಕ ಭಾಗಗಳಲ್ಲಿ ಪರಿಹಾರ ಕಾರ್ಯದ ಸಂಯೋಜನೆಗಾಗಿ ಸಾಕ್ಷಿಗಳು ಬೇಗನೆ ವಿಪತ್ತು ಪರಿಹಾರ ಕಮಿಟಿಗಳ ಎರಡು ವಿಭಾಗಗಳನ್ನು ಸ್ಥಾಪಿಸಿದರು. ಆ ಪರಿಹಾರ ತಂಡಗಳಲ್ಲಿ ನೂರಾರು ಸ್ವಯಂಸೇವಕರು ಕೆಲಸಮಾಡಿದ್ದರು. ಕೆಲವೇ ದಿನಗಳೊಳಗೆ, ತಮ್ಮ ಮನೆಗಳನ್ನು ಕಳಕೊಂಡ ಸಾಕ್ಷಿಗಳಿಗಾಗಿ ಹೊಸಮನೆಗಳು ಕಟ್ಟಲ್ಪಟ್ಟವು. ಒಬ್ಬ ಸಾಕ್ಷಿಗಾಗಿ ಹೊಸಮನೆಯನ್ನು ಕಟ್ಟಲು ಪರಿಹಾರ ತಂಡವು ಆಗಮಿಸಿದಾಗ ಆಕೆಯ ನೆರೆಯವರಿಗೆ ಆಶ್ಚರ್ಯದಿಂದ ನಂಬಲಿಕ್ಕಾಗಲಿಲ್ಲ. ಒಬ್ಬಾಕೆ ನೆರೆಯವಳು ಹೇಳಿದ್ದು: “ಈ ಸಾಕ್ಷಿಯ ಮನೆಯನ್ನು ಅವಳ ಚರ್ಚಿನವರು ಕಟ್ಟಿಕೊಡುತ್ತಿದ್ದಾರೆ. ನನ್ನ ಬೌದ್ಧ ಬಾಂಧವರಲ್ಲಿ ಮಾತ್ರ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಆಕೆ ನನಗೆ ಸಾರಿದಾಗಲೇ ನಾನು ಸಾಕ್ಷಿಯಾಗಿರಬೇಕಿತ್ತು!”

ಥಾನ್ಲಿನ್‌ನಲ್ಲಿ ಪೂರಾರೀತಿಯಲ್ಲಿ ಹಾನಿಗೊಳಗಾದ ಒಂದು ಮನೆಯನ್ನು ಕಟ್ಟಡದ ಕೆಲಸಗಾರರು ಹಾಗೂ ಪರಿಹಾರ ಕಮಿಟಿಯವರು ಪರೀಕ್ಷಿಸಿದಾಗ ಆ ಸಾಕ್ಷಿ ಕುಟುಂಬವು ಹೇಳಿದ ಮಾತುಗಳು ಅವರ ಮನಸ್ಪರ್ಶಿಸಿತು: “ನಮಗೇನೂ ಆಗಿಲ್ಲ. ನಮ್ಮ ಮನೆ ಚೆನ್ನಾಗಿದೆ. ನಾವಿನ್ನೂ ಅದರಲ್ಲಿ ವಾಸಿಸಬಹುದು. ಕೆಲವು ಸಾಕ್ಷಿಗಳಿಗಾದರೋ ಮನೆಯೇ ಇಲ್ಲ. ದಯವಿಟ್ಟು ಅವರಿಗೆ ಸಹಾಯಮಾಡಿ!”

ಯಾಂಗಾನ್‌ನ ಒಂದು ಕ್ಷೇತ್ರದಲ್ಲಿ ಕೆಲವು ಜನರು ಸ್ಥಳಿಕ ಚರ್ಚೊಂದರಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸಿದರು. ಆದರೆ ಚರ್ಚಿನ ಬಾಗಲಿಗೆ ಭದ್ರ ಬೀಗ ಜಡಿದಿತ್ತು. ಯಾರಿಗೂ ಒಳಗೆ ಹೋಗಲಿಕ್ಕೆ ಆಗಲಿಲ್ಲ. ಜನರಿಗೆ ತುಂಬ ಕೋಪಬಂದಿತ್ತು. ಬಾಗಲನ್ನು ಒಡೆಯಲು ಬಯಸಿದ್ದರು. ಆದರೆ ಯೆಹೋವನ ಸಾಕ್ಷಿಗಳಾದರೋ ಚಂಡಮಾರುತದ ವಿಪತ್ತಿನ ಸಮಯದಲ್ಲಿ ತಮ್ಮ ರಾಜ್ಯ ಸಭಾಗೃಹಗಳಲ್ಲಿ ಅನೇಕರಿಗೆ ಆಶ್ರಯ ಕೊಟ್ಟರು. ಉದಾಹರಣೆಗೆ, ಸುರಕ್ಷೆಗಾಗಿ ಪಲಾಯನಗೈದ 20ಮಂದಿ ನೆರೆಯವರಿಗೆ ಸಾಕ್ಷಿದಂಪತಿಯೊಂದು ಡಾಲಾ ರಾಜ್ಯ ಸಭಾಗೃಹದಲ್ಲಿ ಆಶ್ರಯ ನೀಡಿತು. ಬೆಳಗಾತ ಮರಳಲು ಆ ಕುಟುಂಬಕ್ಕೆ ಯಾವ ಮನೆಯೂ ಇರಲಿಲ್ಲ ಮತ್ತು ತುಂಬ ಹಸಿದಿದ್ದರು. ಗಂಡನು ಅಂಗಡಿಯಿಂದ ಅಕ್ಕಿ ತಂದು ಎಲ್ಲರಿಗೂ ಉಣಬಡಿಸಿದನು.

ಯಾಂಗಾನ್‌ನ ಒಂದು ಕುಟುಂಬದ ಕೆಲವು ಸದಸ್ಯರು ಸಾಕ್ಷಿಗಳಾಗಿದ್ದರು, ಇತರರು ಬೇರೆ ಬೇರೆ ಚರ್ಚಿಗಳಿಗೆ ಹೋಗುತ್ತಿದ್ದರು. ಬಿರುಗಾಳಿಯ ನಂತರ ಇಡೀ ಕುಟುಂಬವೇ ರಾಜ್ಯ ಸಭಾಗೃಹದ ಕೂಟಕ್ಕೆ ಹಾಜರಾಯಿತು. ಏಕೆ? ಕುಟುಂಬ ಸದಸ್ಯನೊಬ್ಬನು ವಿವರಿಸಿದ್ದು: “ಬಿರುಗಾಳಿಯ ನಂತರ ನಮ್ಮ ಚರ್ಚಿನವರು ನಮ್ಮನ್ನು ಭೇಟಿಮಾಡುವೆವು ಎಂದಿದ್ದರು. ಆದರೆ ಬರಲೇ ಇಲ್ಲ. ಬಂದವರು ಸಾಕ್ಷಿಗಳು ಮಾತ್ರವೇ. ನೀವು ನಮಗೆ ಅನ್ನ ಮತ್ತು ನೀರು ಕೊಟ್ಟಿರಿ. ನೀವು ಬೇರೆ ಚರ್ಚಿನವರಂತಲ್ಲ!” ಆ ಸಾಕ್ಷ್ಯೇತರ ಕುಟುಂಬದವರು “ನಾವು ಮೊರೆಯಿಡುವಾಗ ಯೆಹೋವನು ಕಿವಿಗೊಡುತ್ತಾನೆ” ಎಂಬ ಕಾವಲಿನಬುರುಜು ಲೇಖನದ ಚರ್ಚೆಯಲ್ಲಿ ಆನಂದಿಸಿದರು ಮತ್ತು ಉತ್ತರಗಳನ್ನೂ ಕೊಟ್ಟರು.

ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನಿಸುತ್ತಿದ್ದ ಒಬ್ಬಾಕೆ ಮಹಿಳೆ ಬಿರುಗಾಳಿಯ ಹೊಡೆತದ ಒಂದು ವಾರದ ನಂತರ ಸಭಾ ಕೂಟಕ್ಕೆ ಬಂದಳು. ಕೂಟದ ಸಮಯದಲ್ಲಿ ಬ್ರಾಂಚ್‌ನಿಂದ ಬಂದ ಒಂದು ಪತ್ರವನ್ನು ಓದಲಾಯಿತು. ಚಂಡಮಾರುತದಿಂದ ಪಾರಾದವರ ಅನುಭವಗಳು ಮತ್ತು ಸಹಾಯಕ್ಕಾಗಿ ಏನೆಲ್ಲಾ ಮಾಡಲಾಯಿತು ಎಂಬ ಅನುಭವಗಳು ಅದರಲ್ಲಿದ್ದವು. ಆ ಪತ್ರವನ್ನು ಓದುತ್ತಿದ್ದಾಗಲೇ ಆ ಮಹಿಳೆಯು ಅಳತೊಡಗಿದಳು. ಸಾಕ್ಷಿಗಳೆಲ್ಲರು ಸುರಕ್ಷಿತರೂ ಕ್ಷೇಮವಾಗಿಯೂ ಇದ್ದಾರೆಂದು ಕೇಳಿದಾಗ ಆಕೆ ಸಂತೋಷಪಟ್ಟಳು ಮತ್ತು ತುಂಬ ಪ್ರಭಾವಿತಳಾದಳು. ತದನಂತರ, ಅವಳಿಗೆ ಕೆಲವು ಪರಿಹಾರ ಸಾಮಗ್ರಿಗಳು ನೀಡಲ್ಪಟ್ಟವು ಮತ್ತು ಬಿದ್ದುಹೋಗಿದ್ದ ಅವಳ ಮನೆಯ ಪಕ್ಕದಲ್ಲಿ ಅವಳಿಗಾಗಿ ಒಂದು ಡೇರೆಯನ್ನು ಹಾಕಲಾಯಿತು. ಸಾಕ್ಷಿಗಳು ನಿಜವಾಗಿಯೂ ತನ್ನನ್ನು ಚೆನ್ನಾಗಿ ಪರಾಮರಿಕೆ ಮಾಡಿದ್ದಾರೆಂದು ಅವಳಂದಳು.

ಯೇಸು ಅಂದದ್ದು: “ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.” (ಯೋಹಾನ 13:35) ಮತ್ತು ಶಿಷ್ಯ ಯಾಕೋಬನು ನಿಜ ನಂಬಿಕೆಯು ಸತ್ಕಾರ್ಯಗಳಿಂದ ಕೂಡಿರುತ್ತದೆ ಎಂದು ಒತ್ತಿಹೇಳಿದನು. (ಯಾಕೋಬ 2:14-17) ಯೆಹೋವನ ಸಾಕ್ಷಿಗಳು ಆ ಮಾತುಗಳನ್ನು ಮನಸ್ಸಿಗೆ ತಕ್ಕೊಳ್ಳುತ್ತಾರೆ. ಅಲ್ಲದೆ ಕೊರತೆಯಲ್ಲಿರುವವರಿಗೆ ಸಹಾಯ ಮತ್ತು ಬೆಂಬಲ ನೀಡುವ ಮೂಲಕ ಅಂತಹ ಪ್ರೀತಿಯನ್ನು ತೋರಿಸಲು ಪ್ರಯತ್ನಿಸುತ್ತಾರೆ. (w09 3/1)

[ಪಾದಟಿಪ್ಪಣಿ]

^ ಪ್ಯಾರ. 2 ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ ವಿವರಿಸುವುದು: “ಅಟ್ಲಾಂಟಿಕ್‌ ಮತ್ತು ಕೆರೀಬಿಯನ್‌ ಪ್ರದೇಶಗಳಲ್ಲಿ ಉಷ್ಣವಲಯದ ಚಂಡಮಾರುತಗಳನ್ನು ಸಾಮಾನ್ಯವಾಗಿ ‘ಹರಿಕೇನ್‌’ ಎಂದೂ ಪಶ್ಚಿಮ ಪೆಸಿಫಿಕ್‌ ಮತ್ತು ಚೀನಾ ಸಮುದ್ರದಲ್ಲಿ ಅದನ್ನು ‘ಟೈಫೂನ್‌’ ಎಂದೂ ಕರೆಯುತ್ತಾರೆ.

[ಪುಟ 27ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಿಜ ನಂಬಿಕೆಯಲ್ಲಿ ಸತ್ಕಾರ್ಯಗಳೂ ಕೂಡಿವೆ ಎಂದು ಬೈಬಲ್‌ ಹೇಳುತ್ತದೆ