ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶುಚಿತ್ವ ಏಕೆ ಮಹತ್ವ?

ಶುಚಿತ್ವ ಏಕೆ ಮಹತ್ವ?

ಶುಚಿತ್ವ ಏಕೆ ಮಹತ್ವ?

ಮಾರಕ ವ್ಯಾಧಿಗಳು ಮತ್ತು ಅಂಟುರೋಗಗಳು ಸಾವಿರಾರು ವರ್ಷಗಳಿಂದ ಮಾನವಕುಲವನ್ನು ಬಲಿತಕ್ಕೊಂಡಿವೆ. ಇವು ದುಷ್ಟರ ಶಿಕ್ಷೆಗಾಗಿ ನೀಡಲ್ಪಟ್ಟ ದೈವಕೋಪದ ಸೂಚನೆ ಎಂದು ಕೆಲವರು ಎಣಿಸಿದ್ದರು. ಆದರೆ ಶತಮಾನಗಳ ಪಟ್ಟುಬಿಡದ ಪರಿಶೀಲನೆ ಮತ್ತು ಜಾಗರೂಕ ಸಂಶೋಧನೆಯ ಬಳಿಕ, ನಮ್ಮ ಸುತ್ತಮುತ್ತ ಜೀವಿಸುವ ಸೂಕ್ಷ್ಮಜೀವಿಗಳೇ ಅನೇಕವೇಳೆ ಇದಕ್ಕೆ ಕಾರಣವೆಂಬ ಸತ್ಯ ಬಟ್ಟಬಯಲಾಯಿತು.

ಹೆಗ್ಗಣ, ಇಲಿ, ಜಿರಲೆ, ನೊಣ, ಸೊಳ್ಳೆ ಇವೆಲ್ಲವುಗಳು ರೋಗಗಳನ್ನು ಹರಡಿಸಬಲ್ಲವು ಎಂದು ವೈದ್ಯಕೀಯ ಸಂಶೋಧಕರು ಕಂಡುಹಿಡಿದರು. ಮಾತ್ರವಲ್ಲ ಕೇವಲ ನೈರ್ಮಲ್ಯದ ಕೊರತೆಯಿಂದಲೂ ಜನರು ಸೋಂಕುರೋಗಗಳಿಗೆ ಆಹ್ವಾನವೀಯುತ್ತಾರೆ ಎಂದು ಸಹ ತಿಳಿದುಬಂತು. ಆದುದರಿಂದ ಸ್ವಚ್ಛತೆಯು ಜೀವ-ಮರಣದಷ್ಟು ಗಂಭೀರವಾಗಿರುವಂತೆ ತೋರುತ್ತದೆ.

ಶುಚಿತ್ವದ ಮಟ್ಟಗಳು ಪದ್ಧತಿ ಮತ್ತು ಸನ್ನಿವೇಶಗಳಿಗನುಸಾರ ಭಿನ್ನವಾಗಿರಬಹುದು ನಿಜ. ನಲ್ಲಿ ನೀರು, ತಕ್ಕದಾದ ಚರಂಡಿ ವ್ಯವಸ್ಥೆ ಮತ್ತು ಶೌಚಾಲಯಗಳು ಇಲ್ಲದ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿರುತ್ತದೆ. ಪುರಾತನ ಇಸ್ರಾಯೇಲ್ಯರು ಅರಣ್ಯದಲ್ಲಿ ಪ್ರಯಾಣಿಸುವಾಗ ಅಂಥದ್ದೇ ಸನ್ನಿವೇಶದಲ್ಲಿದ್ದರೂ ದೇವರು ಶುಚಿತ್ವದ ಬಗ್ಗೆ ಅವರಿಗೆ ಸೂಚನೆಗಳನ್ನು ಕೊಟ್ಟನು. ಶುಚಿತ್ವವನ್ನು ಕಾಪಾಡಿಕೊಳ್ಳಲು ತೀರ ಕಷ್ಟಕರವಾದ ಕೆಲವು ಸನ್ನಿವೇಶಗಳಲ್ಲಿ ಅವರಿದ್ದರು!

ಶುಚಿತ್ವವು ದೇವರ ದೃಷ್ಟಿಯಲ್ಲಿ ಏಕೆ ಮಹತ್ವ? ಸ್ವಚ್ಛತೆಯ ವಿಷಯದಲ್ಲಿ ಸೂಕ್ತವಾದ ಮತ್ತು ವ್ಯಾವಹಾರಿಕ ನೋಟ ಯಾವುದು? ರೋಗರುಜಿನಗಳನ್ನು ತಡೆಯಲು ನೀವು ಮತ್ತು ನಿಮ್ಮ ಕುಟುಂಬ ಯಾವ ಸರಳ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಸಾಧ್ಯವಿದೆ?

ಕ್ಯಾಮರೂನ್‌ನಲ್ಲಿ ವಾಸಿಸುವ ಮ್ಯಾಕ್ಸ್‌ * ಎಂಬ ಪುಟ್ಟ ಹುಡುಗ ಶಾಲೆ ಮುಗಿಸಿ ತನ್ನ ಚಿಕ್ಕ ಮನೆಗೆ ಬರುವಾಗ ಅವನಿಗೆ ಎಲ್ಲಿಲ್ಲದ ಹಸಿವು, ಬಾಯಾರಿಕೆ. ಮನೆಯೊಳಗೆ ಕಾಲಿಡುತ್ತಲೇ ಅವನ ದಾರಿಯನ್ನೇ ನೋಡುತ್ತಿದ್ದ ನಾಯಿಯನ್ನು ಅಪ್ಪಿ ಮುದ್ದಿಸುತ್ತಾನೆ. ತನ್ನ ಬ್ಯಾಗನ್ನು ಡೈನಿಂಗ್‌ ಟೇಬಲ್‌ ಮೇಲೆ ಒಂದೆಡೆ ಕುಕ್ಕಿ ಊಟಕ್ಕೆ ಆತುರದಿಂದ ಕಾಯುತ್ತಾನೆ.

ಅಡುಗೆಮನೆಯಲ್ಲಿದ್ದ ಮ್ಯಾಕ್ಸ್‌ನ ಅಮ್ಮಗೆ ಅವನು ಬಂದ ಸದ್ದು ಕೇಳುತ್ತದೆ. ಕೂಡಲೆ ಅವಳು ತಟ್ಟೆಯಲ್ಲಿ ಬಿಸಿಬಿಸಿ ಅನ್ನ ಮತ್ತು ತರಕಾರಿ ಸಾರು ಹಾಕಿ ತರುತ್ತಾಳೆ. ಆದರೆ ಕ್ಲೀನ್‌ ಟೇಬಲ್‌ ಮೇಲೆ ಮ್ಯಾಕ್ಸ್‌ನ ಸ್ಕೂಲ್‌ಬ್ಯಾಗ್‌ ನೋಡಿದಾಕ್ಷಣ ಅವಳ ಚಹರೆ ಬದಲಾಗುತ್ತದೆ. ಮಗನೆಡೆಗೆ ತಿರುಗಿ ತುಸು ಗಡುಸಾಗಿ “ಮ್ಯಾ. . .ಕ್ಸ್‌!” ಎಂದು ಹೇಳುತ್ತಾಳಷ್ಟೇ. ಕೂಡಲೆ ಅವನಿಗರ್ಥವಾಗುತ್ತದೆ. ಪಟ್ಟನೆ ಟೇಬಲ್‌ ಮೇಲಿದ್ದ ಬ್ಯಾಗನ್ನು ತೆಗೆದಿಟ್ಟು ಕೈತೊಳೆಯಲು ಓಡುತ್ತಾನೆ. ಕ್ಷಣದಲ್ಲೇ ಊಟಕ್ಕೆ ಹಾಜರ್‌. ತಪ್ಪೊಪ್ಪಿಕೊಳ್ಳುತ್ತಾ “ಸಾರಿ ಮಮ್ಮಿ, ಮರೆತುಬಿಟ್ಟೆ” ಎಂದು ಗೊಣಗುತ್ತಾನೆ.

ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುವುದರಲ್ಲಿ ಅಕ್ಕರೆಯ ಅಮ್ಮ ತುಂಬ ಕೆಲಸಮಾಡಬಲ್ಲಳು. ಹಾಗಿದ್ದರೂ ಮನೆಯಲ್ಲಿರುವ ಎಲ್ಲರ ಸಹಕಾರ ಅವಳಿಗೆ ಬೇಕು. ಮ್ಯಾಕ್ಸ್‌ನ ಉದಾಹರಣೆ ತೋರಿಸುವಂತೆ ಪರಿವಾರಕ್ಕೆ ದೀರ್ಘಕಾಲದ ತರಬೇತಿ ಅತ್ಯಾವಶ್ಯಕ. ಏಕೆಂದರೆ ಸ್ವಚ್ಛತೆಗೆ ಅವಿಶ್ರಾಂತ ಪ್ರಯತ್ನ ಅಗತ್ಯ ಮತ್ತು ಮಕ್ಕಳಿಗೆ ಸತತ ಮರುಜ್ಞಾಪನಗಳು ಬೇಕು.

ಆಹಾರವು ಅನೇಕ ವಿಧಗಳಲ್ಲಿ ಕಲುಷಿತಗೊಳ್ಳಸಾಧ್ಯವಿದೆ ಎಂಬುದು ಮ್ಯಾಕ್ಸ್‌ನ ತಾಯಿಗೆ ಗೊತ್ತು. ಆದ್ದರಿಂದ ಅವಳು ಅಡುಗೆ ಮಾಡುವ ಮುಂಚೆ ತಪ್ಪದೆ ಕೈ ತೊಳೆಯುತ್ತಾಳೆ ಮಾತ್ರವಲ್ಲ ಆಹಾರ ಪದಾರ್ಥಗಳ ಮೇಲೆ ನೊಣ ಕೂತು ಕಲುಷಿತವಾಗದಂತೆ ಅವನ್ನು ಮುಚ್ಚಿಡುತ್ತಾಳೆ. ಅವಳು ಆಹಾರವನ್ನು ಸುರಕ್ಷಿತವಾಗಿಡುವುದರಿಂದ ಮತ್ತು ಮನೆಯನ್ನು ಯಾವಾಗಲು ಅಚ್ಚುಕಟ್ಟಾಗಿ, ನೀಟಾಗಿ ಇಡುವುದರಿಂದ ಜಿರಲೆ, ಇಲಿ, ಹೆಗ್ಗಣಗಳ ಕಾಟವೂ ಇಲ್ಲ.

ಮ್ಯಾಕ್ಸ್‌ನ ತಾಯಿ ಅಷ್ಟು ಜಾಗ್ರತೆವಹಿಸಲು ಒಂದು ಮುಖ್ಯ ಕಾರಣವೇನೆಂದರೆ ಅವಳು ದೇವರನ್ನು ಮೆಚ್ಚಿಸಬಯಸುವುದೇ. “ದೇವರು ಪವಿತ್ರನಾಗಿರುವುದರಿಂದ ಆತನ ಜನರು ಸಹ ಪವಿತ್ರರಾಗಿರಬೇಕೆಂದು ಬೈಬಲ್‌ ಹೇಳುತ್ತದೆ” ಎಂದು ತಿಳಿಸುತ್ತಾಳೆ ಅವಳು. (1 ಪೇತ್ರ 1:16) ಮತ್ತೂ ಅವಳಂದದ್ದು: “ಸ್ವಚ್ಛತೆಯು ಪವಿತ್ರತೆಯ ಇನ್ನೊಂದು ಮುಖ, ಆದ್ದರಿಂದ ನಮ್ಮ ಮನೆ ಮತ್ತು ಪರಿವಾರ ಯಾವಾಗಲೂ ಶುಚಿಯಾಗಿರಬೇಕೆಂದೇ ನನ್ನ ಅಪೇಕ್ಷೆ. ಆದರೆ ಇದು ಸಾಧ್ಯ ಯಾವಾಗವೆಂದರೆ ಮನೆಯಲ್ಲಿರುವ ಎಲ್ಲರೂ ಸಹಕರಿಸಿದಾಗ ಮಾತ್ರ.”

ಕುಟುಂಬದ ಸಹಕಾರ ಅತ್ಯಾವಶ್ಯ!

ಮ್ಯಾಕ್ಸ್‌ನ ತಾಯಿ ಗಮನಿಸುವಂತೆ, ಕುಟುಂಬದ ಆರೋಗ್ಯ ರಕ್ಷಣೆಯು ಮನೆಯವರೆಲ್ಲರ ಕರ್ತವ್ಯ. ಕೆಲವು ಕುಟುಂಬಗಳು ಒಟ್ಟಾಗಿ ಕೂತು ಮನೆಯನ್ನು ಒಳಗೂ ಹೊರಗೂ ಹೇಗೆ ಶುಚಿಯಾಗಿಡಬೇಕೆಂದೂ ಹಾಗೂ ಅದಕ್ಕೆ ತಾವೆಲ್ಲಾ ಇನ್ನೂ ಏನೇನು ಮಾಡಬೇಕೆಂದೂ ಕೂಡಿ ಚರ್ಚಿಸುತ್ತಾರೆ. ಇದರಿಂದ ಕುಟುಂಬದ ಐಕ್ಯವು ಬಲಗೊಳ್ಳುತ್ತದೆ ಹಾಗೂ ಪರಿವಾರದ ಹಿತಕ್ಷೇಮಕ್ಕಾಗಿ ತಮ್ಮ ತಮ್ಮ ಕರ್ತವ್ಯವನ್ನು ನೆರವೇರಿಸಲು ಪ್ರತಿಯೊಬ್ಬರಿಗೆ ಸಹಾಯ ಸಿಗುತ್ತದೆ. ಉದಾಹರಣೆಗೆ ಊಟಕ್ಕೆ ಮುಂಚೆ, ಹಣ-ಕಾಸು ಮುಂತಾದವುಗಳ ಬಳಕೆಯ ನಂತರ ಮತ್ತು ಶೌಚಾಲಯಕ್ಕೆ ಹೋಗಿ ಬಂದ ಮೇಲೆ ಏಕೆ ಕೈ ತೊಳೆಯಬೇಕೆಂದು ತಾಯಿ ಹಿರಿಯಮಕ್ಕಳಿಗೆ ವಿವರಿಸಬೇಕು. ಹಾಗೆಯೇ ಹಿರಿಯ ಮಕ್ಕಳು ತಮಗಿಂತ ಚಿಕ್ಕವರು ಅದನ್ನು ತಪ್ಪದೆ ಮಾಡುವಂತೆ ನೋಡಿಕೊಳ್ಳಬೇಕು.

ಕುಟುಂಬದಲ್ಲಿರುವ ಎಲ್ಲರೂ ಬೇರೆ ಬೇರೆ ಕೆಲಸಗಳನ್ನು ಹಂಚಿಕೊಳ್ಳಬಹುದು. ಮನೆಯನ್ನು ಪ್ರತಿವಾರ ಕ್ರಮವಾಗಿ ಶುಚಿಮಾಡಲು ಮತ್ತು ವರ್ಷದಲ್ಲಿ ಒಂದೆರಡು ಸಲ ಪೂರ್ತಿಯಾಗಿ ಸ್ವಚ್ಛಮಾಡಲು ಕುಟುಂಬವು ಯೋಜನೆ ಮಾಡಬಹುದು. ಮನೆಯ ಅಂಗಳ ಮತ್ತು ಹಿತ್ತಲಿನ ಬಗ್ಗೆ ಏನು? ಪರಿಸರವಾದಿ ಸ್ಟ್ಯುವರ್ಡ್‌ ಎಲ್‌. ಯುಡಾಲ್‌ ಅವರು ಅಮೆರಿಕವನ್ನು ನಿರ್ದೇಶಿಸಿ ಹೇಳಿದ್ದು: “ಸೌಂದರ್ಯದ ಅಳಿವು, ಕೊಳಕಿನ ವೃದ್ಧಿ, ಬಯಲು ಪ್ರದೇಶದ ಕಣ್ಮರೆ ಮತ್ತು ಪರಿಸರಮಾಲಿನ್ಯ, ಶಬ್ದಮಾಲಿನ್ಯ, ವಾಯುಮಾಲಿನ್ಯದಿಂದ ಇಡೀ ವಾತಾವರಣ ನಶಿಸಿ ಹೋಗುತ್ತಾ ಇರುವ ಈ ದೇಶದಲ್ಲಿ ನಾವು ಜೀವಿಸುತ್ತಿದ್ದೇವೆ.”

ನೀವಿರುವ ಪರಿಸರದ ಬಗೆಗೆ ನೀವೂ ಇದೇ ಭಾವನೆ ತಾಳುತ್ತಿದ್ದೀರೋ? ಹಿಂದೆ ಮಧ್ಯ ಆಫ್ರಿಕಾದಲ್ಲಿ ಮತ್ತು ಈಗಲೂ ಕೆಲವು ಪಟ್ಟಣಗಳಲ್ಲಿ ನಗರ ಘೋಷಕನಿದ್ದಾನೆ. ಅವನು ಬೀದಿಬೀದಿಗೆ ಹೋಗಿ ನಾಗರಿಕರ ಗಮನ ಸೆಳೆಯಲು ಗಂಟೆಯನ್ನು ಬಾರಿಸುತ್ತಾ ಗಟ್ಟಿಯಾದ ಸ್ವರದಲ್ಲಿ ಜನರಿಗೆ ನಗರವನ್ನು ಸ್ವಚ್ಛಗೊಳಿಸುವಂತೆ, ಮೋರಿ-ಚರಂಡಿಯನ್ನೆಲ್ಲಾ ಶುದ್ಧಮಾಡುವಂತೆ, ಗಿಡ-ಮರಗಳನ್ನು ಸಮರುವಂತೆ, ಕಳೆಯನ್ನು ಕೀಳುವಂತೆ ಮತ್ತು ಕಸ ತೊಲಗಿಸುವಂತೆ ನೆನಪಿಸುತ್ತಾನೆ.

ಕಸ ನಿರ್ಮೂಲನೆ ಒಂದು ಜಾಗತಿಕ ಸಮಸ್ಯೆ. ಅನೇಕ ಸರಕಾರೀ ಅಧಿಕಾರಿಗಳಿಗೆ ಅದೊಂದು ದುಃಸ್ವಪ್ನ. ಕೆಲವು ನಗರಪಾಲಿಕೆಗಳು ಸರಿಯಾಗಿ ಕಸ ಎತ್ತದ ಕಾರಣ ಬೀದಿಯಲ್ಲೆಲ್ಲಾ ಕಸದ ಗುಡ್ಡೆಯೋ ಗುಡ್ಡೆ. ಸ್ವಚ್ಛಮಾಡಲು ಕೆಲವೊಮ್ಮೆ ಸ್ಥಳೀಯರ ಸಹಾಯ ಕೋರಲಾಗುತ್ತದೆ. ಇಂಥ ಕೋರಿಕೆಗೆ ಪ್ರತಿವರ್ತನೆ ತೋರಿಸುವವರಲ್ಲಿ ಸಭ್ಯ ನಾಗರಿಕರಾದ ಕ್ರೈಸ್ತರು ಮೊದಲಿಗರಾಗಿ ಅಧಿಕಾರಿಗಳು ಹೇಳುವುದನ್ನು ಗೊಣಗದೆ ಮಾಡುತ್ತಾರೆ. (ರೋಮನ್ನರಿಗೆ 13:3, 5-7) ಮಾತ್ರವಲ್ಲ ಸತ್ಯ ಕ್ರೈಸ್ತರು ತಮ್ಮಿಂದ ಕೇಳಲ್ಪಡುವುದಕ್ಕಿಂತ ಹೆಚ್ಚನ್ನು ಮಾಡಲು ಸಿದ್ಧರು. ಅವರು ಪರಿಸರವನ್ನು ಶುದ್ಧವಾಗಿಡುವುದರಲ್ಲಿ ಆಸಕ್ತರು, ಮಾತ್ರವಲ್ಲ ಶುಚಿಮಾಡುವುದರಲ್ಲಿ ಮೊದಲಿಗರು. ನಗರ ಘೋಷಕನು ಯಾವಾಗಲು ನೆನಪುಹುಟ್ಟಿಸುವ ಅವಶ್ಯ ಅವರಿಗಿಲ್ಲ. ಒಳ್ಳೇ ತರಬೇತಿ ಮತ್ತು ಜವಾಬ್ದಾರಿಯುತ ವರ್ತನೆಯ ಪ್ರತಿಬಿಂಬವೇ ಶುಚಿತ್ವ ಎಂದವರು ಅರಿತಿದ್ದಾರೆ. ಇದು ಪ್ರತಿಯೊಬ್ಬನ ಮತ್ತು ಪ್ರತಿ ಕುಟುಂಬದ ಕರ್ತವ್ಯ. ಚರಂಡಿಗಳನ್ನು ಶುದ್ಧವಾಗಿಟ್ಟು, ಮನೆಯ ಒಳಗೂ ಹೊರಗೂ ಸ್ವಚ್ಛವಾಗಿಡುವಂಥ ಸರಳ ವಿಷಯಗಳನ್ನು ಮಾಡುವುದರಿಂದ ನಮಗೆ ಆರೋಗ್ಯ ಭಾಗ್ಯ ಲಭಿಸುತ್ತದೆ ಮಾತ್ರವಲ್ಲ ನಮ್ಮ ನೆರೆಹೊರೆಯ ಅಂದಚೆಂದವೂ ಹೆಚ್ಚುತ್ತದೆ.

ನಮ್ಮ ಸ್ವಚ್ಛತೆಯಿಂದ ನಮ್ಮ ದೇವರಿಗೆ ಘನ

ಸ್ವಚ್ಛವೂ ಗೌರವಯುತವೂ ಆದ ನಮ್ಮ ವೈಯಕ್ತಿಕ ತೋರಿಕೆಯು ನಮ್ಮ ಆರಾಧನೆಗೆ ಕನ್ನಡಿ ಹಿಡಿದಂತಿರುತ್ತದೆ; ಮಾತ್ರವಲ್ಲ ಅದು ಜನರನ್ನು ಆಕರ್ಷಿಸುತ್ತದೆ. ಫ್ರಾನ್ಸ್‌ನ ಟೌಲೌಸ್‌ನಲ್ಲಿ ಯೆಹೋವನ ಸಾಕ್ಷಿಗಳ ಅಧಿವೇಶನದ ನಂತರ ಸುಮಾರು 15 ಮಂದಿ ಯುವ ಸಾಕ್ಷಿಗಳು ಒಂದು ರೆಸ್ಟೋರೆಂಟ್‌ಗೆ ಹೋದರು. ಅವರ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ವೃದ್ಧ ದಂಪತಿಯು ಈ ಯೌವನಸ್ಥರ ಗುಂಪು ಬೊಬ್ಬೆ ಹಾಕಿ ಗದ್ದಲ ಮಾಡಬಹುದೆಂದು ನೆನಸಿದರು. ಆದರೆ ನೀಟಾಗಿ ಉಡುಪು ಧರಿಸಿದ್ದ ಆ ಯುವಜನರ ಸಭ್ಯ ನಡವಳಿಕೆ ಮತ್ತು ಸೌಮ್ಯ ಸಂಭಾಷಣೆ ಅವರ ಮನಸ್ಪರ್ಶಿಸಿತು. ಯುವಜನರು ಇನ್ನೇನು ಹೊರಡಲಿದ್ದಾಗ ಆ ದಂಪತಿ ಅವರ ಸದ್ವರ್ತನೆಗಾಗಿ ಅವರನ್ನು ಹೊಗಳಿದರು ಮತ್ತು ಇಂಥ ಆದರ್ಶ ನಡತೆ ಇಂದು ಅತಿ ವಿರಳವೆಂದು ಅವರಲ್ಲಿ ಒಬ್ಬನೊಂದಿಗೆ ಹೇಳಿದರು.

ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸುಗಳು, ಮುದ್ರಣಾಲಯಗಳು ಮತ್ತು ವಸತಿ ಸೌಕರ್ಯಗಳಿಗೆ ಭೇಟಿನೀಡುವ ಸಂದರ್ಶಕರು ಅಲ್ಲಿನ ಶುಚಿತ್ವವನ್ನು ನೋಡಿ ಪ್ರಭಾವಿತರಾಗುತ್ತಾರೆ. ಅಲ್ಲಿ ವಾಸಿಸುವ ಮತ್ತು ಕೆಲಸಮಾಡುವ ಸ್ವಯಂಸೇವಕರಿಗೆ ಸ್ವಚ್ಛ ಉಡುಪು ಧರಿಸಬೇಕು, ಕ್ರಮವಾಗಿ ಬಟ್ಟೆ ಒಗೆಯಬೇಕು, ಪ್ರತಿ ದಿನವೂ ಸ್ನಾನ ಮಾಡಬೇಕು ಎಂಬ ನಿಯಮವಿದೆ. ಸುಗಂಧದ್ರವ್ಯ ಮತ್ತು ಡಿಓಡರಂಟ್‌ ಮೈಕೊಳೆಯನ್ನು ತೆಗೆಯಲಾರದು, ಸ್ನಾನವೇ ಮುಖ್ಯ. ಪೂರ್ಣಸಮಯದ ಶುಶ್ರೂಷಕರಾದ ಈ ಸ್ವಯಂಸೇವಕರು ಸಂಜೆ ಅಥವಾ ವಾರಾಂತ್ಯಗಳಲ್ಲಿ ತಮ್ಮ ನೆರೆಯವರಿಗೆ ಸಾರುವಾಗ ಅವರ ಸಭ್ಯ ತೋರಿಕೆಯು ಸಹ ಅವರ ಸಂದೇಶದ ಮೇಲೆ ಸತ್ಪರಿಣಾಮ ಬೀರುತ್ತದೆ.

“ದೇವರನ್ನು ಅನುಕರಿಸುವವರಾಗಿರಿ”

“ದೇವರನ್ನು ಅನುಕರಿಸುವವರಾಗಿರಿ” ಎಂದು ಕ್ರೈಸ್ತರನ್ನು ಪ್ರೋತ್ಸಾಹಿಸಲಾಗಿದೆ. (ಎಫೆಸ 5:1) ಪ್ರವಾದಿ ಯೆಶಾಯನು ದಾಖಲಿಸಿದ ದರ್ಶನದಲ್ಲಿ ದೇವದೂತರು ಸೃಷ್ಟಿಕರ್ತನನ್ನು “ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು” ಎಂದು ವರ್ಣಿಸಿದರು. (ಯೆಶಾಯ 6:3) ಈ ವರ್ಣನೆಯು ದೇವರು ಅತ್ಯುತ್ಕೃಷ್ಟ ಮಟ್ಟದಲ್ಲಿ ಪವಿತ್ರನೂ ಪರಿಶುದ್ಧನೂ ಆಗಿದ್ದಾನೆಂದು ಒತ್ತಿಹೇಳುತ್ತದೆ. ಆದುದರಿಂದಲೇ ತನ್ನ ಎಲ್ಲ ಸೇವಕರು ಪವಿತ್ರರೂ ಶುದ್ಧರೂ ಆಗಿರಬೇಕೆಂದು ದೇವರು ಅವಶ್ಯಪಡಿಸುತ್ತಾನೆ. ಆತನು ಅವರಿಗೆ ಹೇಳುವುದು: “ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಬೇಕು.”—1 ಪೇತ್ರ 1:16.

‘ಮರ್ಯಾದೆಗೆ ತಕ್ಕ ಉಡುಪನ್ನು’ ಧರಿಸುವಂತೆ ಬೈಬಲ್‌ ಕ್ರೈಸ್ತರನ್ನು ಉತ್ತೇಜಿಸುತ್ತದೆ. (1 ತಿಮೊಥೆಯ 2:9) ದೇವರು ಪವಿತ್ರರೆಂದು ಪರಿಗಣಿಸುವ ಜನರ ನೀತಿಯ ಕೃತ್ಯಗಳನ್ನು, “ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿ” ಎಂದು ಪ್ರಕಟನೆ ಪುಸ್ತಕವು ಸೂಚಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ. (ಪ್ರಕಟನೆ 19:8) ಇದಕ್ಕೆ ವ್ಯತಿರಿಕ್ತವಾಗಿ ಪಾಪವನ್ನು ಕೊಳೆಗೆ ಅಥವಾ ಕಲೆಗೆ ಶಾಸ್ತ್ರವಚನಗಳು ಹೋಲಿಸಿವೆ.—ಜ್ಞಾನೋಕ್ತಿ 15:26; ಯೆಶಾಯ 1:16; ಯಾಕೋಬ 1:27.

ಶಾರೀರಿಕ, ನೈತಿಕ ಮತ್ತು ಆಧ್ಯಾತ್ಮಿಕ ಶುದ್ಧತೆಯನ್ನು ಕಾಪಾಡಿಕೊಳ್ಳಲು ಸತತವಾಗಿ ಹೆಣಗಾಡಬೇಕಾದ ಲೋಕದಲ್ಲಿ ಇಂದು ಲಕ್ಷಾಂತರ ಜನರು ಜೀವಿಸಬೇಕಾಗಿದೆ. ಈ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ದೇವರು ‘ಎಲ್ಲವನ್ನು ಹೊಸದು ಮಾಡುವಾಗಲೇ’ ಬರುವುದು. (ಪ್ರಕಟನೆ 21:5) ಆ ವಾಗ್ದಾನವು ನೆರವೇರುವಾಗ ಇಂದಿರುವ ಎಲ್ಲ ಮಲಿನತೆ ಮತ್ತು ಅಶುದ್ಧತೆ ನಿತ್ಯಕ್ಕೂ ಇಲ್ಲವಾಗುವವು. (w08 12/1)

[ಪಾದಟಿಪ್ಪಣಿ]

^ ಪ್ಯಾರ. 6 ಹೆಸರನ್ನು ಬದಲಾಯಿಸಲಾಗಿದೆ.

[ಪುಟ 10ರಲ್ಲಿರುವ ಚೌಕ]

ಶುಚಿತ್ವವನ್ನು ದೇವರು ಅವಶ್ಯಪಡಿಸುತ್ತಾನೆ

ಇಸ್ರಾಯೇಲ್ಯರು ಅರಣ್ಯದಲ್ಲಿ ಪ್ರಯಾಣಿಸುತ್ತಿದ್ದರು. ಅಲ್ಲಿ ಶೌಚಾಲಯದ ಯಾವ ವ್ಯವಸ್ಥೆಯೂ ಇರಲಿಲ್ಲ. ಆದುದರಿಂದ ಅವರು ಮಲವನ್ನು ತೊಲಗಿಸುವ ವಿಷಯದಲ್ಲಿ ತುಂಬ ಜಾಗ್ರತೆಯನ್ನು ವಹಿಸುವಂತೆ ಆಜ್ಞಾಪಿಸಲಾಗಿತ್ತು. ಉದಾಹರಣೆಗೆ, ಅವರು ಪಾಳೆಯದ ಹೊರಗೆ ಗುಂಡಿ ತೋಡಿ ಮಲವನ್ನು ಮಣ್ಣಿನಿಂದ ಮುಚ್ಚಿಬಿಡಬೇಕಿತ್ತು. (ಧರ್ಮೋಪದೇಶಕಾಂಡ 23:12-14) ಸುಮಾರು ಮೂವತ್ತು ಲಕ್ಷ ಜನರು ಆ ಪಾಳೆಯದಲ್ಲಿ ವಾಸಿಸುತ್ತಿದ್ದದರಿಂದ ಇದು ಪ್ರಯಾಸದ ಕೆಲಸವಾಗಿದ್ದಿರಬೇಕು ನಿಜ. ಆದರೆ ವಿಷಮಶೀತ ಜ್ವರ ಮತ್ತು ಕಾಲರದಂಥ ರೋಗಗಳನ್ನು ತಡೆಗಟ್ಟಲು ಇದು ಸಹಾಯಮಾಡಿತ್ತೆಂಬುದು ನಿಸ್ಸಂಶಯ.

ಅಷ್ಟಲ್ಲದೆ, ಹೆಣ ಯಾವುದಾದರೂ ವಸ್ತುವಿಗೆ ತಗಲಿದಲ್ಲಿ ಆ ವಸ್ತುವನ್ನು ತೊಳೆಯುವಂತೆ ಇಲ್ಲವೆ ಧ್ವಂಸಮಾಡುವಂತೆ ಸಹ ಇಸ್ರಾಯೇಲ್ಯ ಜನರಿಗೆ ಆಜ್ಞಾಪಿಸಲಾಗಿತ್ತು. ಅವರಿಗೆ ಇದರ ಕಾರಣ ಅರ್ಥವಾಗಿದ್ದಿರಲಿಕ್ಕಿಲ್ಲ, ಹಾಗಿದ್ದರೂ ಆ ಆಜ್ಞೆಯನ್ನು ಪಾಲಿಸಿದ್ದರಿಂದ ಸೋಂಕು ಮತ್ತು ವ್ಯಾಧಿಗಳನ್ನು ತಡೆಯಲು ಇಸ್ರಾಯೇಲ್ಯರಿಗೆ ಸಹಾಯವಾಯಿತು.—ಯಾಜಕಕಾಂಡ 11:32-38.

ದೇವಗುಡಾರದಲ್ಲಿ ಯಾಜಕರಿಗೂ ಕೆಲವು ಶುಚಿತ್ವದ ನಿಯಮಗಳಿದ್ದವು. ಅವರು ತಮ್ಮ ತಮ್ಮ ಕರ್ತವ್ಯ ನಿರ್ವಹಿಸುವ ಮುಂಚೆ ತಮ್ಮ ಕೈಕಾಲುಗಳನ್ನು ತೊಳೆದು ಶುದ್ಧರಾಗಬೇಕಿತ್ತು. ಇದಕ್ಕೆಂದೇ ಇಟ್ಟಿದ್ದ ತಾಮ್ರದ ದೊಡ್ಡ ಹಂಡೆಯಲ್ಲಿ ನೀರು ತುಂಬಿಸುವುದು ಸುಲಭದ ಕೆಲಸವಾಗಿರಲಿಲ್ಲವಾದರೂ ಕೈಕಾಲು ತೊಳೆಯುವುದು ಕಟ್ಟುನಿಟ್ಟಿನ ನಿಯಮವಾಗಿತ್ತು.—ವಿಮೋಚನಕಾಂಡ 30:17-21.

[ಪುಟ 11ರಲ್ಲಿರುವ ಚೌಕ]

ವೈದ್ಯರೊಬ್ಬರ ಸಲಹೆ

ನೀರು ಬದುಕಿನ ಜೀವಾಳ. ಆದರೆ ಕಲುಷಿತ ನೀರೋ ರೋಗ ಮತ್ತು ಮರಣಕ್ಕೆ ಮೂಲ. ಕ್ಯಾಮರೂನ್‌ನ ಡೌಲಾ ಪೋರ್ಟ್‌ನ ವೈದ್ಯಕೀಯ ವಿಭಾಗದ ಮುಖ್ಯಾಧಿಕಾರಿ ಡಾಕ್ಟರ್‌ ಜೆ. ಅಂಬಾಂಗೆ ಲೋಬ್‌ ಅವರು ಒಂದು ಸಂದರ್ಶನದಲ್ಲಿ ಕೆಲವು ವ್ಯಾವಹಾರಿಕ ಸಲಹೆಗಳನ್ನು ಕೊಟ್ಟರು.

“ಸಂಶಯವಿರುವಲ್ಲಿ ನೀರನ್ನು ಕುದಿಸಿ ಕುಡಿಯಿರಿ.” ಆದರೆ ಅವರು ಎಚ್ಚರಿಸಿದ್ದು: “ಬ್ಲೀಚ್‌ ಅಥವಾ ರಾಸಾಯನಿಕಗಳನ್ನು ಬಳಸುವುದು ಒಳ್ಳೆಯದು ಆದರೆ ಅವನ್ನು ಸರಿಯಾದ ಪ್ರಮಾಣದಲ್ಲಿ ಬಳಸದಿದ್ದರೆ ಅಪಾಯ. ಊಟಕ್ಕೆ ಮುಂಚೆ ಮತ್ತು ಶೌಚಾಲಯ ಬಳಸಿದ ನಂತರ ನಿಮ್ಮ ಕೈಗಳನ್ನು ಸೋಪ್‌ ಹಾಕಿ ತೊಳೆಯಿರಿ. ಬಾರ್‌ ಸೋಪ್‌ ಅಷ್ಟೇನು ದುಬಾರಿಯಲ್ಲ, ಬಡವರಿಗೂ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ. ಬಟ್ಟೆಯನ್ನೂ ಆಗಾಗ್ಗೆ ಒಗೆಯಿರಿ. ಚರ್ಮರೋಗ ಅಥವಾ ಇತರ ರೋಗಗಳಿರುವಲ್ಲಿ ಬಿಸಿ ನೀರಿನಿಂದ ಒಗೆಯಿರಿ.”

ಆ ಡಾಕ್ಟರ್‌ ಮತ್ತೂ ಹೇಳಿದ್ದು: “ಮನೆಯ ಒಳಗೂ ಹೊರಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಕುಟುಂಬದ ಪ್ರತಿಯೊಬ್ಬರ ಕರ್ತವ್ಯ. ಶೌಚಗೃಹ ಮತ್ತು ಬಚ್ಚಲು ಮನೆಗಳ ಸ್ವಚ್ಛತೆಯ ವಿಷಯದಲ್ಲಿ ಅನೇಕವೇಳೆ ದುರ್ಲಕ್ಷ್ಯವಿದೆ. ಇದು ಇದ್ದಕ್ಕಿದ್ದ ಹಾಗೆ ನೊಣ, ಜಿರಲೆಗಳಂಥ ಬೇಡವಾದ ಕೀಟಗಳ ಬೀಡಾಗುತ್ತದೆ.” ಮಕ್ಕಳ ಕುರಿತ ಒಂದು ಪ್ರಾಮುಖ್ಯ ವೀಕ್ಷಣೆಯನ್ನು ತಿಳಿಸುತ್ತಾ ಅವರು ಎಚ್ಚರಿಸಿದ್ದು: “ಮಕ್ಕಳೇ, ನಿಮ್ಮ ಅಕ್ಕಪಕ್ಕದ ಹಳ್ಳ-ಕೊಳ್ಳಗಳಲ್ಲಿ ಸ್ನಾನಮಾಡಬೇಡಿ. ಅವುಗಳಲ್ಲಿ ತುಂಬ ಮಾರಕ ಸೂಕ್ಷ್ಮಜೀವಿಗಳಿವೆ. ಪ್ರತಿ ರಾತ್ರಿ ಮಲಗುವ ಮುಂಚೆ ಕೈಕಾಲು ತೊಳೆದು, ಚೆನ್ನಾಗಿ ಹಲ್ಲುಜ್ಜಿ, ಸೊಳ್ಳೆಪರದೆಯೊಳಗೆ ಮಲಗಿ.” ಈ ಎಲ್ಲಾ ಸೂಚನೆಗಳ ತಾತ್ಪರ್ಯವೇನೆಂದರೆ, ಶುಚಿತ್ವ ಕಾಪಾಡಲು ನಿರ್ದಿಷ್ಟ ಯೋಜನೆಗಳನ್ನು ಮಾಡಿ, ಅವನ್ನು ಕೈಕೊಂಡು, ಬರುವ ತೊಂದರೆಗಳಿಂದ ತಪ್ಪಿಸಿಕೊಳ್ಳುವುದೇ.

[ಪುಟ 10ರಲ್ಲಿರುವ ಚಿತ್ರ]

ನಮ್ಮ ಬಟ್ಟೆಗಳನ್ನು ಒಗೆಯುವುದು ಚರ್ಮರೋಗ ಮತ್ತು ಇತರ ರೋಗಗಳನ್ನು ತಡೆಗಟ್ಟಬಲ್ಲದು

[ಪುಟ 10ರಲ್ಲಿರುವ ಚಿತ್ರ]

ಮನೆಯ ಸುತ್ತಮುತ್ತ ಶುಚಿ ಮಾಡುವುದರಲ್ಲಿ ಕ್ರೈಸ್ತರು ಮುಂದು

[ಪುಟ 10ರಲ್ಲಿರುವ ಚಿತ್ರ]

ಅಕ್ಕರೆಯ ಅಮ್ಮ ತನ್ನ ಮನೆಮಂದಿಯನ್ನು ಶುಚಿಯಾಗಿಡಲು ತುಂಬ ಕೆಲಸ ಮಾಡುತ್ತಾಳೆ