ನಮ್ಮ ಬಾಳು ವಿಧಿವಶವೋ?
ನಮ್ಮ ಓದುಗರ ಪ್ರಶ್ನೆ
ನಮ್ಮ ಬಾಳು ವಿಧಿವಶವೋ?
ನಮ್ಮ ಸಾವಿನ ದಿನವನ್ನು ವಿಧಿ ನಿರ್ಣಯಿಸುತ್ತದೆಂದು ಕೆಲವರು ಅನ್ನುತ್ತಾರೆ. ನಮ್ಮ ಸಾಯುವ ಗಳಿಗೆಯು ದೈವಸಂಕಲ್ಪವೇ ಎಂಬುದು ಇತರರ ಕಂಠೋಕ್ತ ಹೇಳಿಕೆ. ಬದುಕುಬಾಳಿನ ಮುಖ್ಯ ಆಗುಹೋಗುಗಳು ಸಂಭವಿಸಿಯೇ ತೀರುತ್ತವೆ, ತಪ್ಪಿಸಲು ಸಾಧ್ಯವೇ ಇಲ್ಲ ಎಂದೂ ಅವರು ನಂಬುತ್ತಾರೆ. ನಿಮಗೂ ಹಾಗೆಯೇ ಅನಿಸುತ್ತದೋ?
ಹಾಗಿರುವಲ್ಲಿ ಹೀಗೆ ಕೇಳಿಕೊಳ್ಳಿ: ‘ಒಂದುವೇಳೆ ನಮ್ಮ ಅದೃಷ್ಟವನ್ನು ಬದಲಾಯಿಸಲು ಸಾಧ್ಯವಿಲ್ಲವಾದರೆ ಮತ್ತು ಬಾಳಿನ ಸೋಲುಗೆಲುವನ್ನು ದೇವರು ಅಥವಾ ವಿಧಿಯು ಮೊದಲೇ ನಿರ್ಣಯಿಸಿರುವುದಾದರೆ ದೇವರಿಗೆ ಪ್ರಾರ್ಥಿಸುವುದರಲ್ಲಿ ಯಾವ ಅರ್ಥವಾದರೂ ಉಂಟೋ? ನಮ್ಮ ಸಾವು ವಿಧಿನಿರ್ಣಯವಾಗಿದ್ದರೆ ಸುರಕ್ಷೆಗಾಗಿ ಏಕೆ ಮುಂಜಾಗ್ರತೆ ವಹಿಸಬೇಕು? ಕಾರಿನಲ್ಲಿ ಹೋಗುವಾಗ ಸೀಟ್ ಬೆಲ್ಟನ್ನು ಏಕೆ ಧರಿಸಬೇಕು? ಮದ್ಯಪಾನ ಮಾಡಿ ವಾಹನವನ್ನು ಏಕೆ ಚಲಾಯಿಸಬಾರದು?’
ಇಂಥಾ ಅವಿವೇಕದ ವರ್ತನೆಯನ್ನು ಬೈಬಲ್ ಸ್ವಲ್ಪವೂ ಒಪ್ಪುವುದಿಲ್ಲ. ಪ್ರತಿಯೊಂದಕ್ಕೂ ವಿಧಿಯೇ ಕಾರಣವೆಂದು ಹೇಳುವ ಬದಲು ಸುರಕ್ಷೆಯ ಪ್ರಜ್ಞೆಯುಳ್ಳವರಾಗಿರುವಂತೆ ಬೈಬಲ್ ಪ್ರಾಚೀನ ಇಸ್ರಾಯೇಲ್ ಜನರಿಗೆ ಆಜ್ಞೆಯಿತ್ತಿತು. ಉದಾಹರಣೆಗೆ, ತಮ್ಮ ಮನೇಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಬೇಕೆಂಬ ಆಜ್ಞೆಯನ್ನು ದೇವರು ಅವರಿಗೆ ಕೊಟ್ಟಿದ್ದನು. ಕಾರಣ? ಯಾರೂ ಆಕಸ್ಮಿಕವಾಗಿ ಮಾಳಿಗೆಯ ಮೇಲಿಂದ ಬೀಳಬಾರದು ಎಂಬುದಕ್ಕಾಗಿಯೇ. ಈಗ ಸ್ವಲ್ಪ ಯೋಚಿಸಿ: ಒಂದುವೇಳೆ ಒಬ್ಬನು ಮಾಳಿಗೆಯಿಂದ ಬಿದ್ದೇ ಸಾಯಬೇಕೆಂದು ವಿಧಿ ನಿರ್ಣಯಿಸಿದ್ದಲ್ಲಿ, ದೇವರು ಈ ಆಜ್ಞೆಯನ್ನು ಏಕೆ ಕೊಡುತ್ತಿದ್ದನು?—ಧರ್ಮೋಪದೇಶಕಾಂಡ 22:8.
ತಮ್ಮ ಕೈಮೀರಿದ ನೈಸರ್ಗಿಕ ವಿಪತ್ತು ಅಥವಾ ಇತರ ದುರಂತಗಳಿಂದ ಸಾಯುವವರ ಕುರಿತೇನು? ಅವರ ಸಾವಿನ ಗಳಿಗೆಯನ್ನು ವಿಧಿ ಈ ಮೊದಲೇ ನಿರ್ಣಯಿಸಿರುತ್ತದೋ? ಖಂಡಿತ ಇಲ್ಲ. “ಕಾಲವೂ ಪ್ರಾಪ್ತಿಯೂ [“ಮುಂಗಾಣದ ಘಟನೆ,” NW] ಯಾರಿಗೂ ತಪ್ಪಿದ್ದಲ್ಲ” ಎಂದು ಬೈಬಲ್ ಬರಹಗಾರ ರಾಜ ಸೊಲೊಮೋನನು ಆಶ್ವಾಸನೆ ನೀಡಿದ್ದಾನೆ. (ಪ್ರಸಂಗಿ 9:11) ಆದ್ದರಿಂದ, ಸನ್ನಿವೇಶವು ಎಷ್ಟೇ ವಿಲಕ್ಷಣ ಅಥವಾ ಅಸಂಭಾವ್ಯವಾಗಿರಲಿ ದುರ್ಘಟನೆಗಳು ವಿಧಿನಿರ್ಣಯವಲ್ಲ.
ಆದರೆ ಇದು ಸೊಲೊಮೋನನು ಮುಂಚೆ ತಿಳಿಸಿದ ಈ ಹೇಳಿಕೆಗೆ ಪ್ರತಿವಿರುದ್ಧ ಎಂದು ಕೆಲವರು ನೆನಸುತ್ತಾರೆ: “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು. ಹುಟ್ಟುವ ಸಮಯ, ಸಾಯುವ ಸಮಯ.” (ಪ್ರಸಂಗಿ 3:1, 2) ಹೀಗಂದಾಗ ಜೀವನವು ವಿಧಿವಶವೆಂಬ ನೋಟವನ್ನು ಸೊಲೊಮೋನನು ಸಮರ್ಥಿಸುತ್ತಿದ್ದನೋ? ಆ ಮಾತುಗಳನ್ನು ನಾವೀಗ ನಿಕಟವಾಗಿ ಪರಿಗಣಿಸೋಣ.
ಇಲ್ಲಿ, ಹುಟ್ಟು-ಸಾವು ವಿಧಿನಿರ್ಣಯ ಎಂದು ಸೊಲೊಮೋನನು ತಿಳಿಸುತ್ತಿಲ್ಲ. ಬದಲಾಗಿ ಹುಟ್ಟು-ಸಾವುಗಳು ಒಂದು ನಿರಂತರದ ಪ್ರಕ್ರಿಯೆ ಎಂಬುದೇ ಅವನ ಮಾತಿನ ಅರ್ಥ. ಬದುಕಿನಲ್ಲಿ ಏರುಪೇರುಗಳು ಇದ್ದೇ ಇರುತ್ತವೆ ನಿಶ್ಚಯ. “ಅಳುವ ಸಮಯ, ನಗುವ ಸಮಯ” ಇವೆ ಎಂದು ಸೊಲೊಮೋನನು ಹೇಳಿದನು. ಅಂದರೆ ‘ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸದಲ್ಲಿ’ ಅಂಥಾ ಸುಖದುಃಖಗಳು, ಮುಂಗಾಣದ ದುರಂತಗಳು ಸಂಭವಿಸುವುದು ಜೀವನದಲ್ಲಿ ಸರ್ವಸಾಮಾನ್ಯ ಎಂದು ಸೊಲೊಮೋನನು ಹೇಳುತ್ತಾನೆ. (ಪ್ರಸಂಗಿ 3:1-8; 9:11, 12) ಆದುದರಿಂದ ಅವನ ಕೊನೇ ಮಾತುಗಳೇನೆಂದರೆ ಸೃಷ್ಟಿಕರ್ತನನ್ನು ಕಡೆಗಣಿಸುವಷ್ಟರ ಮಟ್ಟಿಗೆ ನಾವು ದಿನನಿತ್ಯದ ಕೆಲಸಕಾರ್ಯಗಳಲ್ಲಿ ತಲ್ಲೀನರಾಗಬಾರದು ಎಂದೇ.—ಪ್ರಸಂಗಿ 12:1, 13.
ನಮ್ಮ ನಿರ್ಮಾಣಿಕನಿಗೆ ಜೀವ ಮತ್ತು ಮರಣದ ಮೇಲೆ ಅಧಿಕಾರ ಇದೆಯಾದರೂ ನಾವು ಇಂತಿಂಥ ಸಮಯದಲ್ಲಿ ಸಾಯಬೇಕೆಂದು ಆತನು ವಿಧಿನಿರ್ಣಯ ಮಾಡಿರುವುದಿಲ್ಲ. ದೇವರು ನಮ್ಮೆಲ್ಲರಿಗೆ ಶಾಶ್ವತವಾಗಿ ಜೀವಿಸುವ ಪ್ರತೀಕ್ಷೆಯನ್ನು ಕೊಟ್ಟಿದ್ದಾನೆಂದು ಬೈಬಲ್ ಕಲಿಸುತ್ತದೆ. ಆದರೆ ಆ ನೀಡುವಿಕೆಯನ್ನು ಸ್ವೀಕರಿಸಲೇಬೇಕೆಂದು ದೇವರು ನಮ್ಮನ್ನು ಒತ್ತಾಯಪಡಿಸುವುದಿಲ್ಲ. ಬದಲಾಗಿ ಆತನ ವಾಕ್ಯವು ತಿಳಿಸುವುದು: “ಇಷ್ಟವುಳ್ಳ ಪ್ರತಿಯೊಬ್ಬನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.”—ಪ್ರಕಟನೆ 22:17.
ಹೌದು, “ಜೀವಜಲವನ್ನು” ನಾವು ತೆಗೆದುಕೊಳ್ಳಲು ಇಷ್ಟಪಡಬೇಕು. ಯಾಕೆಂದರೆ ನಮ್ಮ ಬಾಳು ವಿಧಿಲಿಖಿತವಲ್ಲ. ನಮ್ಮ ಸ್ವಂತ ನಿರ್ಣಯಗಳು, ಮನೋಭಾವಗಳು, ಕ್ರಿಯೆಗಳು ನಮ್ಮ ಭವಿಷ್ಯದ ಮೇಲೆ ನಿಜವಾಗಿ ಪ್ರಭಾವವನ್ನು ಬೀರುತ್ತವೆ. (w09 4/1)