ನಿಮಗೆ ತಿಳಿದಿತ್ತೋ?
ನಿಮಗೆ ತಿಳಿದಿತ್ತೋ?
ಪ್ರಾರ್ಥನೆಯಲ್ಲಿ ಯೇಸು ಯೆಹೋವ ದೇವರನ್ನು “ಅಪ್ಪಾ, ತಂದೆಯೇ” ಎಂದು ಕರೆದದ್ದೇಕೆ?
ಆರಮೇಯಿಕ್ ಭಾಷೆಯಲ್ಲಿ “ಅಬ” (ಅಪ್ಪ) ಎಂಬ ಪದಕ್ಕೆ “ನನ್ನ ತಂದೆಯೇ” ಅಥವಾ “ಓ ತಂದೆಯೇ” ಎಂಬ ಅರ್ಥವಿದೆ. ಈ ಅಭಿವ್ಯಕ್ತಿಯು ಬೈಬಲಿನಲ್ಲಿ ಮೂರು ಬಾರಿ ಮಾತ್ರ ಕಂಡುಬರುತ್ತದೆ. ಆ ಪ್ರತಿಯೊಂದು ಸಂದರ್ಭಗಳಲ್ಲಿಯೂ ಅದು ಪ್ರಾರ್ಥನೆಯ ಭಾಗವಾಗಿದೆ ಮತ್ತು ಸ್ವರ್ಗೀಯ ತಂದೆಯಾದ ಯೆಹೋವ ದೇವರಿಗೆ ಸೂಚಿಸಿ ಹೇಳಲಾಗಿದೆ. ಈ ಪದಕ್ಕೆ ಯಾವ ಮಹತ್ವಾರ್ಥವಿದೆ?
ದಿ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲಪೀಡಿಯ ಹೇಳುವುದು: “ಯೇಸುವಿನ ಕಾಲದ ಆಡುಮಾತಿನಲ್ಲಿ ‘ಅಬ’ ಎಂಬ ಪದವನ್ನು ಮಕ್ಕಳು ತಮ್ಮ ತಂದೆಯನ್ನು ಅಕ್ಕರೆಯಿಂದ ಹಾಗೂ ಗೌರವಾದರದಿಂದ ಕರೆಯುವಾಗ ಮುಖ್ಯವಾಗಿ ಬಳಸುತ್ತಿದ್ದರು.” ಮಗು ತನ್ನ ತೊದಲುಮಾತಿನಲ್ಲಿ ಮೊತ್ತಮೊದಲಾಗಿ ತಂದೆಯನ್ನು ಮಮತೆಯಿಂದ ಕರೆಯುವ ಪದ ಅದಾಗಿತ್ತು. ತನ್ನ ತಂದೆಗೆ ತೀವ್ರ ಕಟ್ಟಾಸಕ್ತಿಯಿಂದ ಮಾಡಿದ ಪ್ರಾರ್ಥನೆಯಲ್ಲಿ ಆ ಅಭಿವ್ಯಕ್ತಿಯನ್ನು ಯೇಸು ಉಪಯೋಗಿಸಿದನು. ಯೇಸು ತಾನು ಸಾಯುವುದಕ್ಕೆ ಕೆಲವೇ ತಾಸುಗಳ ಮುಂಚಿತವಾಗಿ ಗೆತ್ಸೇಮನೆ ತೋಟದಲ್ಲಿ ಮಾಡಿದ ಪ್ರಾರ್ಥನೆಯಲ್ಲಿ ಯೆಹೋವನನ್ನು “ಅಪ್ಪಾ, ತಂದೆಯೇ” ಎಂದು ಸಂಬೋಧಿಸಿದನು.—ಮಾರ್ಕ 14:36.
“ಗ್ರೀಕೋ-ರೋಮನ್ ಕಾಲದ ಯೆಹೂದಿ ಸಾಹಿತ್ಯದಲ್ಲಿ ದೇವರನ್ನು ‘ಅಪ್ಪಾ’ ಎಂದು ಸಂಬೋಧಿಸುವುದು ವಾಡಿಕೆಯಲ್ಲೇ ಇರಲಿಲ್ಲ. ಯಾಕೆಂದರೆ ದೇವರನ್ನು ಹಾಗೆ ಸಲಿಗೆಯಿಂದ ಸಂಬೋಧಿಸುವುದು ಅಗೌರವವಾದದ್ದಾಗಿ ಕಂಡುಬರುತ್ತಿತ್ತು ನಿಸ್ಸಂಶಯ” ಎಂದು ಮೇಲೆ ತಿಳಿಸಿದ ಪರಾಮರ್ಶೆ ಕೃತಿಯು ಹೇಳುತ್ತದೆ. ಆದರೂ “ಯೇಸು . . . ಈ ಶಬ್ದವನ್ನು ಪ್ರಾರ್ಥನೆಯಲ್ಲಿ ಉಪಯೋಗಿಸಿದ್ದು ತನಗೆ ದೇವರೊಂದಿಗೆ ಅತ್ಯಂತ ಆಪ್ತ ಸಂಬಂಧವಿತ್ತು ಎಂಬ ಅವನ ಅಸಾಮಾನ್ಯ ವಾದದ ಪರೋಕ್ಷ ರುಜುವಾತಾಗಿದೆ.” “ಅಪ್ಪಾ” ಎಂಬ ಬೇರೆ ಎರಡೂ ಶಾಸ್ತ್ರೀಯ ಉಲ್ಲೇಖಗಳು ಅಪೊಸ್ತಲ ಪೌಲನ ಬರಹಗಳಲ್ಲಿ ಕಂಡುಬರುತ್ತವೆ. ಇದು, ಒಂದನೇ ಶತಕದ ಕ್ರೈಸ್ತರು ಸಹ ಆ ಶಬ್ದವನ್ನು ಬಳಸಿದ್ದರು ಎಂದು ಸೂಚಿಸುತ್ತದೆ.—ರೋಮನ್ನರಿಗೆ 8:15; ಗಲಾತ್ಯ 4:6. (w09 4/1)