ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

4 ಸಂಶಯಕ್ಕೆ ಆಸ್ಪದಕೊಡಬೇಡಿ

4 ಸಂಶಯಕ್ಕೆ ಆಸ್ಪದಕೊಡಬೇಡಿ

4 ಸಂಶಯಕ್ಕೆ ಆಸ್ಪದಕೊಡಬೇಡಿ

“ಎಲೈ ಅಲ್ಪವಿಶ್ವಾಸಿಯೇ, ನೀನೇಕೆ ಸಂಶಯಕ್ಕೆ ಆಸ್ಪದಕೊಟ್ಟೆ?”—ಮತ್ತಾಯ 14:31.

ಕೆಲವರ ಆಕ್ಷೇಪಗಳು: ಕೆಲವೊಮ್ಮೆ ಯೇಸುವಿನ ಶಿಷ್ಯರು ಸಹ ಸಂಶಯಕ್ಕೆ ಆಸ್ಪದಕೊಟ್ಟರು. (ಮತ್ತಾಯ 14:30; ಲೂಕ 24:36-39; ಯೋಹಾನ 20:24, 25) ವಾಸ್ತವದಲ್ಲಿ, ಅಪನಂಬಿಕೆಯು ನಮ್ಮನ್ನು “ಸುಲಭವಾಗಿ ಸುತ್ತಿಕೊಳ್ಳುವ ಪಾಪ” ಎಂಬುದಾಗಿ ಬೈಬಲ್‌ ತಿಳಿಸುತ್ತದೆ. (ಇಬ್ರಿಯ 12:1) ಅಪೊಸ್ತಲ ಪೌಲನು ಬರೆದದ್ದು: “ನಂಬಿಕೆಯು ಎಲ್ಲರ ಸೊತ್ತಾಗಿರುವುದಿಲ್ಲ.” (2 ಥೆಸಲೊನೀಕ 3:2) ನಂಬಿಕೆಯನ್ನು ತೋರಿಸಲು ಕೆಲವರಿಗೆ ಸಾಮರ್ಥ್ಯವಿಲ್ಲ ಎಂದಿದರ ಅರ್ಥವಲ್ಲ. ಏಕೆಂದರೆ ಅನೇಕರು ನಂಬಿಕೆಯನ್ನು ಪಡಕೊಳ್ಳಲು ಪ್ರಯತ್ನವನ್ನೇ ಮಾಡುವುದಿಲ್ಲ. ಆದರೆ ಯಾರು ಪ್ರಯತ್ನಿಸುತ್ತಾರೋ ಅವರನ್ನು ದೇವರು ಖಂಡಿತವಾಗಿ ಆಶೀರ್ವದಿಸುವನು.

ನಿವಾರಣೆ: ನಿಮ್ಮ ಸಂಶಯಕ್ಕೆ ಕಾರಣವಾಗಿರುವ ವಿಷಯಗಳನ್ನು ತಿಳಿಯಿರಿ. ಉದಾಹರಣೆಗೆ, ಯೇಸುವಿನ ಶಿಷ್ಯ ತೋಮನು ಯೇಸು ಪುನರುತ್ಥಾನಗೊಂಡಿದ್ದಾನೆಂಬ ವಿಷಯದಲ್ಲಿ ಸಂದೇಹಪಟ್ಟನು. ಬೇರೆ ಶಿಷ್ಯರು ತಾವು ಯೇಸುವನ್ನು ಕಣ್ಣಾರೆ ನೋಡಿದೆವೆಂದು ಹೇಳಿದರೂ ಅವನು ನಂಬಿರಲಿಲ್ಲ. ತೋಮನಿಗೆ ರುಜುವಾತು ಬೇಕಿತ್ತು. ಪರಿಣಾಮ? ಅವನ ನಂಬಿಕೆಯನ್ನು ಬಲಪಡಿಸಲು ಬೇಕಿದ್ದ ರುಜುವಾತನ್ನು ಯೇಸು ಅವನಿಗೆ ಕೊಟ್ಟನು.—ಯೋಹಾನ 20:24-29.

ನಮ್ಮ ಸಂದೇಹಗಳನ್ನು ಪರಿಹರಿಸಲು ನಮಗೆ ಬೇಕಾದ ಉತ್ತರಗಳನ್ನು ಯೆಹೋವ ದೇವರು ಬೈಬಲಿನ ಮೂಲಕವಾಗಿ ಒದಗಿಸುತ್ತಾನೆ. ಉದಾಹರಣೆಗೆ ಅನೇಕರು ದೇವರಲ್ಲಿ ನಂಬಿಕೆಯನ್ನು ಕಳಕೊಳ್ಳುತ್ತಾರೆ ಏಕೆಂದರೆ ಮಾನವಕುಲವನ್ನು ಬಾಧಿಸುತ್ತಿರುವ ಯುದ್ಧ, ಹಿಂಸಾಚಾರ, ದುರವಸ್ಥೆಗೆ ದೇವರೇ ಕಾರಣನೆಂದು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಆತನನ್ನು ದೂರುತ್ತಾರೆ. ಬೈಬಲ್‌ ಈ ಕುರಿತು ಏನು ಹೇಳುತ್ತದೆ?

ದೇವರು ಮಾನವ ಸರಕಾರಗಳ ಮೂಲಕ ಆಳ್ವಿಕೆ ನಡೆಸುವುದಿಲ್ಲ. ಅದೃಶ್ಯ ಆತ್ಮಜೀವಿಯಾದ ಸೈತಾನನೇ “ಈ ಲೋಕದ ಅಧಿಪತಿ” ಎಂದು ಯೇಸು ಹೇಳಿದನು. (ಯೋಹಾನ 14:30) ಸೈತಾನನು ಒಮ್ಮೆ ಯೇಸುವಿಗೆ ಈ ಭೂಮಿಯ ಎಲ್ಲಾ ರಾಜ್ಯಗಳನ್ನು ತೋರಿಸಿ, ತನ್ನನ್ನು ಒಂದು ಸಾರಿ ಪೂಜಿಸಿದ್ದಲ್ಲಿ ಅದೆಲ್ಲವನ್ನು ಕೊಡುವೆನೆಂದನು. ಅವನು ಹೇಳಿದ್ದು: “ಈ ಎಲ್ಲ ಅಧಿಕಾರವನ್ನೂ ಇವುಗಳ ವೈಭವವನ್ನೂ ನಾನು ನಿನಗೆ ಕೊಡುವೆನು; ಏಕೆಂದರೆ ಇದನ್ನು ನನ್ನ ವಶಕ್ಕೆ ಕೊಡಲಾಗಿದೆ ಮತ್ತು ನನಗೆ ಮನಸ್ಸು ಬಂದವನಿಗೆ ನಾನು ಅದನ್ನು ಕೊಡುತ್ತೇನೆ.” ಅಂಥ ಅಧಿಕಾರ ಸೈತಾನನಿಗಿದೆ ಎಂದು ಯೇಸು ಅಲ್ಲಗಳೆಯಲಿಲ್ಲ. ಅವನಂದದ್ದು: “‘ನಿನ್ನ ದೇವರಾಗಿರುವ ಯೆಹೋವನನ್ನೇ ನೀನು ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆಯನ್ನು ಸಲ್ಲಿಸಬೇಕು’ ಎಂದು ಬರೆದಿದೆ.” (ಲೂಕ 4:5-8) ಇದರಿಂದ ಸೈತಾನನೇ ಈ ಲೋಕದ ಅಧಿಕಾರಿ ಎಂಬುದು ಸ್ಪಷ್ಟ. ಆದಕಾರಣ ಲೋಕದ ಕಷ್ಟಾನುಭವಕ್ಕೆ ಕಾರಣರು ಸೈತಾನ ಮತ್ತು ಮಾನವ ಸರಕಾರಗಳೇ ಹೊರತು ದೇವರಲ್ಲ.—ಪ್ರಕಟನೆ 12:9, 12.

ಶೀಘ್ರದಲ್ಲೇ ಯೆಹೋವ ದೇವರು ಕಷ್ಟಾಪತ್ತುಗಳನ್ನೆಲ್ಲಾ ತೆಗೆದುಹಾಕುವನು. ಆತನು ಮಾನವಕುಲವನ್ನಾಳಲು ತನ್ನ ಮಗನಾದ ಕ್ರಿಸ್ತ ಯೇಸುವಿನ ಕೈಕೆಳಗೆ ಒಂದು ರಾಜ್ಯ ಅಥವಾ ಸರಕಾರವನ್ನು ಈಗಾಗಲೇ ಏರ್ಪಡಿಸಿದ್ದಾನೆ. (ಮತ್ತಾಯ 6:9, 10; 1 ಕೊರಿಂಥ 15:20-28) ಈ ರಾಜ್ಯದ ಸುವಾರ್ತೆಯು ಬೈಬಲ್‌ ಪ್ರವಾದನೆಯ ನೆರವೇರಿಕೆಯಲ್ಲಿ ಭೂಮಿಯ ಎಲ್ಲಾ ಕಡೆ ಸಾರಲ್ಪಡುತ್ತಾ ಇದೆ. (ಮತ್ತಾಯ 24:14) ಈ ರಾಜ್ಯವು ಬೇಗನೆ ಎಲ್ಲಾ ವಿರೋಧಿಗಳನ್ನು ನಾಶಮಾಡಿ ಮಾನವ ಕಷ್ಟಸಂಕಟಗಳನ್ನೆಲ್ಲಾ ನಿರ್ಮೂಲಗೊಳಿಸುವುದು.—ದಾನಿಯೇಲ 2:44; ಮತ್ತಾಯ 25:31-33, 46; ಪ್ರಕಟನೆ 21:3, 4.

ಪ್ರಯೋಜನಗಳು: ಯಾರು ಸಂದೇಹಪಡುತ್ತಾರೋ ಅವರು “ಮನುಷ್ಯರ ಕುಯುಕ್ತಿಯಿಂದ . . . ಕೂಡಿದ ಬೋಧನೆಯ ಪ್ರತಿಯೊಂದು ಗಾಳಿಯಿಂದ” ಅತ್ತಿತ್ತ ನೂಕಿಸಿಕೊಂಡು ಹೋಗುವ ಅಲೆಗಳಂತಿದ್ದಾರೆ. (ಎಫೆಸ 4:14; 2 ಪೇತ್ರ 2:1) ಇದಕ್ಕೆ ವಿರುದ್ಧವಾಗಿ, ಯಾರು ತಮ್ಮ ಪ್ರಶ್ನೆಗಳಿಗೆ ಸಂತೃಪ್ತಿಕರ ಉತ್ತರಗಳನ್ನು ಕಂಡುಕೊಳ್ಳುತ್ತಾರೋ ಅವರು “ನಂಬಿಕೆಯಲ್ಲಿ ದೃಢರಾಗಿ” ನಿಂತುಕೊಳ್ಳುತ್ತಾರೆ.—1 ಕೊರಿಂಥ 16:13.

ಈ ಪತ್ರಿಕೆಯ ಪ್ರಕಾಶಕರಾದ ಯೆಹೋವನ ಸಾಕ್ಷಿಗಳು ನಿಮ್ಮ ನಂಬಿಕೆಗೆ ಸವಾಲೆಸೆಯುವ ಪ್ರಶ್ನೆಗಳಿಗೆ ಉತ್ತರ ಕೊಡಲು ಸಂತೋಷಪಡುತ್ತಾರೆ. ತಮ್ಮ ಸಾಹಚರ್ಯ ಮಾಡುವಂತೆಯೂ ತಮ್ಮ ಬೋಧನೆಗಳನ್ನು ನೀವು ಸ್ವತಃ ಪರೀಕ್ಷಿಸುವಂತೆಯೂ ಅವರು ನಿಮ್ಮನ್ನು ಆಮಂತ್ರಿಸುತ್ತಾರೆ. ಹೀಗೆ ಮಾಡುವುದರಿಂದ ದೇವರಲ್ಲಿ ನಿಮಗಿರುವ ನಂಬಿಕೆಯು ಹೆಚ್ಚೆಚ್ಚು ದೃಢಗೊಳ್ಳುವುದು. (w09 5/1)

ಹೆಚ್ಚಿನ ಮಾಹಿತಿಗಾಗಿ, ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?  * ಪುಸ್ತಕದಲ್ಲಿ “ದೇವರ ರಾಜ್ಯ ಎಂದರೇನು?” ಎಂಬ 8ನೇ ಅಧ್ಯಾಯ ಮತ್ತು “ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ?” ಎಂಬ 11ನೇ ಅಧ್ಯಾಯ ನೋಡಿ.

[ಪಾದಟಿಪ್ಪಣಿ]

^ ಪ್ಯಾರ. 10 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ

[ಪುಟ 9ರಲ್ಲಿರುವ ಚಿತ್ರ]

ಯಾರು ತಮಗಿರುವ ಪ್ರಶ್ನೆಗಳಿಗೆ ಸಂತೃಪ್ತಿಕರ ಉತ್ತರಗಳನ್ನು ಕಂಡುಕೊಳ್ಳುತ್ತಾರೋ ಅವರ ನಂಬಿಕೆಗೆ ಬಲವಾದ ಆಧಾರವಿರುತ್ತದೆ