ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನು’

‘ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನು’

ದೇವರ ಸಮೀಪಕ್ಕೆ ಬನ್ನಿರಿ

‘ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನು’

ಯಾಜಕಕಾಂಡ ಅಧ್ಯಾಯ 19

“ದೇವರಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು.” (ಪ್ರಕಟನೆ 4:8) ಈ ಮಾತುಗಳಿಂದ, ಯೆಹೋವ ದೇವರು ಪರಿಶುದ್ಧನು ಅಂದರೆ ಅತ್ಯುಚ್ಚ ಮಟ್ಟದಲ್ಲಿ ಶುದ್ಧನೂ ನಿರ್ಮಲನೂ ಆಗಿದ್ದಾನೆಂದು ಬೈಬಲ್‌ ವರ್ಣಿಸುತ್ತದೆ. ದೇವರಲ್ಲಿ ಪಾಪವೇ ಇಲ್ಲ. ಆತನು ಯಾವುದೇ ವಿಧದಲ್ಲಿ ಪಾಪದಿಂದ ಕಲುಷಿತನೂ ಆಗಲಾರನು. ಇದರರ್ಥ ನಮ್ಮಂಥ ಪಾಪಿಗಳಿಗೆ ಅತಿ ಪರಿಶುದ್ಧನಾದ ದೇವರೊಂದಿಗೆ ಸಂಬಂಧವಿರಲು ಸಾಧ್ಯವೇ ಇಲ್ಲವೆಂದೋ? ಹಾಗೇನೂ ಇಲ್ಲ! ಇದರ ಬಗ್ಗೆ ನಮಗೆ ಭರವಸೆ ಕೊಡುವಂಥ ಮಾತುಗಳನ್ನು ಬೈಬಲಿನ ಯಾಜಕಕಾಂಡ ಎಂಬ ಪುಸ್ತಕದ 19ನೇ ಅಧ್ಯಾಯದಲ್ಲಿ ನಾವೀಗ ಪರಿಗಣಿಸೋಣ.

ಯೆಹೋವನು ಮೋಶೆಗೆ ಹೇಳಿದ್ದು: “ನೀನು ಇಸ್ರಾಯೇಲ್ಯರ ಸಮೂಹದವರಿಗೆ ಹೀಗೆ ಆಜ್ಞಾಪಿಸಬೇಕು.” ಅನಂತರ ದೇವರು ಹೇಳಿದ ಮಾತುಗಳು ಇಸ್ರಾಯೇಲ್‌ ಜನಾಂಗದ ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತಿದ್ದವು. ಆ ಮಾತುಗಳು ಏನಾಗಿದ್ದವು? “ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು.” (ವಚನ 2) ಹೌದು, ಪ್ರತಿಯೊಬ್ಬ ಇಸ್ರಾಯೇಲ್ಯನೂ ಪರಿಶುದ್ಧನಾಗಿರಬೇಕಿತ್ತು. ಇದು ಕೇವಲ ಒಂದು ಸಲಹೆಯಾಗಿರಲಿಲ್ಲ, ಆಜ್ಞೆಯಾಗಿತ್ತು. ಅಸಾಧ್ಯವಾದದ್ದನ್ನು ಮಾಡುವಂತೆ ದೇವರು ಜನರಿಗೆ ಹೇಳುತ್ತಿದ್ದನೋ?

ಗಮನಿಸಬೇಕಾದ ವಿಷಯವೇನೆಂದರೆ, ಯೆಹೋವನು ತನ್ನ ಪರಿಶುದ್ಧತೆಯ ಬಗ್ಗೆ ತಿಳಿಸಿದ್ದು, ಜನರು ಎಷ್ಟು ಪರಿಶುದ್ಧರಾಗಿರಬೇಕೆಂಬ ಮಟ್ಟವನ್ನು ಸೂಚಿಸಲಿಕ್ಕಲ್ಲ. ಬದಲಾಗಿ ಜನರು ಏಕೆ ಪರಿಶುದ್ಧರಾಗಿರಬೇಕು ಎಂಬುದಕ್ಕೆ ಕಾರಣ ಕೊಡಲಿಕ್ಕಾಗಿಯೇ. ಇನ್ನೊಂದು ಅರ್ಥದಲ್ಲಿ ಯೆಹೋವ ದೇವರು ಅಪರಿಪೂರ್ಣರಾದ ತನ್ನ ಆರಾಧಕರು ತನ್ನಷ್ಟು ಪರಿಶುದ್ಧರಾಗಿರಬೇಕೆಂದು ಹೇಳುತ್ತಿರಲಿಲ್ಲ. ಏಕೆಂದರೆ ಅದು ಅಸಾಧ್ಯ ಸಂಗತಿಯೇ ಸರಿ. ಅತಿ ‘ಪರಿಶುದ್ಧನಾದ’ ಯೆಹೋವನು ಬೇರೆಲ್ಲರಿಗಿಂತ ಅತ್ಯುಚ್ಚ ಮಟ್ಟದಲ್ಲಿ ಪರಿಶುದ್ಧನಾಗಿದ್ದಾನೆ. (ಜ್ಞಾನೋಕ್ತಿ 30:3) ಹಾಗಿದ್ದರೂ ಆತನು ತನ್ನ ಆರಾಧಕರಿಂದ ಅಪೇಕ್ಷಿಸುವುದು, ಅಪರಿಪೂರ್ಣ ಮಾನವರಿಂದ ಸಾಧ್ಯವಾಗುವಷ್ಟರ ಮಟ್ಟಿಗಿನ ಪರಿಶುದ್ಧತೆಯನ್ನೇ. ಅವರು ಯಾವೆಲ್ಲಾ ವಿಧಗಳಲ್ಲಿ ಪರಿಶುದ್ಧರಾಗಿರಬೇಕು?

ಪರಿಶುದ್ಧರಾಗಿರಬೇಕೆಂಬ ಆಜ್ಞೆಯ ಬಳಿಕ ಯೆಹೋವನು ಜೀವನದ ಪ್ರತಿಯೊಂದು ಅಂಶಕ್ಕೆ ಸಂಬಂಧಪಟ್ಟ ನಿಯಮಗಳನ್ನು ಮೋಶೆ ಮೂಲಕ ಕೊಟ್ಟನು. ಉದಾಹರಣೆಗೆ ಪ್ರತಿಯೊಬ್ಬ ಇಸ್ರಾಯೇಲ್ಯನು ಇಂಥ ನಡವಳಿಕೆಯ ಮಟ್ಟಗಳನ್ನು ಪಾಲಿಸಬೇಕಿತ್ತು: ಹೆತ್ತವರು ಮತ್ತು ವೃದ್ಧರಿಗೆ ಗೌರವ ತೋರಿಸಬೇಕು (ವಚನಗಳು 3, 32); ಕಿವುಡರಿಗೆ, ಕುರುಡರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು (ವಚನಗಳು 9, 10, 14); ಇತರರೊಂದಿಗೆ ಪ್ರಾಮಾಣಿಕವಾಗಿ, ನಿಷ್ಪಕ್ಷಪಾತದಿಂದ ನಡಕೊಳ್ಳಬೇಕು (ವಚನಗಳು 11-13, 15, 35, 36); ಜೊತೆ ಆರಾಧಕರನ್ನು ತನ್ನಂತೆಯೇ ಪ್ರೀತಿಸಬೇಕು. (ವಚನ 18) ಈ ಎಲ್ಲಾ ನಿಯಮಗಳು ಮತ್ತು ಇನ್ನಿತರ ಮಟ್ಟಗಳಿಗೆ ವಿಧೇಯರಾಗುವ ಮೂಲಕ ತಾವು ‘ದೇವರಿಗೆ ಪ್ರತಿಷ್ಠಿತರು’ ಇಲ್ಲವೆ ದೇವರಿಗೆ ಪರಿಶುದ್ಧ ಜನರಾಗಿದ್ದೇವೆಂದು ಇಸ್ರಾಯೇಲ್ಯರು ತೋರಿಸಿಕೊಡಬಹುದಿತ್ತು.—ಅರಣ್ಯಕಾಂಡ 15:40.

ಪರಿಶುದ್ಧತೆಯ ಕುರಿತ ಈ ಆಜ್ಞೆ ಯೆಹೋವ ದೇವರ ಆಲೋಚನೆ ಮತ್ತು ಮಾರ್ಗಗಳ ಬಗ್ಗೆ ಅಮೂಲ್ಯ ಒಳನೋಟವನ್ನು ಕೊಡುತ್ತದೆ. ಇದರಿಂದ ನಾವು ಕಲಿಯುವ ಒಂದು ವಿಷಯವೇನೆಂದರೆ ದೇವರೊಂದಿಗೆ ಆಪ್ತ ಸಂಬಂಧವನ್ನಿಡಲು ಪರಿಶುದ್ಧ ನಡತೆಯ ಕುರಿತ ಆತನ ಮಟ್ಟಗಳನ್ನು ಪಾಲಿಸಲಿಕ್ಕಾಗಿ ನಮ್ಮಿಂದಾದದ್ದೆಲ್ಲವನ್ನೂ ಮಾಡಬೇಕು. (1 ಪೇತ್ರ 1:15, 16) ಇದರಿಂದಾಗಿ ಅತ್ಯುತ್ತಮ ಜೀವನ ರೀತಿ ನಮ್ಮದಾಗುವುದು.—ಯೆಶಾಯ 48:17.

ಪರಿಶುದ್ಧತೆಯ ಕುರಿತ ಆಜ್ಞೆಯು ಯೆಹೋವನಿಗೆ ತನ್ನ ಆರಾಧಕರ ಮೇಲಿನ ಭರವಸೆಯನ್ನೂ ತೋರಿಸುತ್ತದೆ. ಆತನು ಅಸಾಧ್ಯವಾದದ್ದನ್ನು ನಮ್ಮಿಂದ ಎಂದಿಗೂ ಕೇಳಿಕೊಳ್ಳುವುದಿಲ್ಲ. (ಕೀರ್ತನೆ 103:13, 14) ದೇವರು ಮಾನವರನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿರುವುದರಿಂದ ಆತನಷ್ಟು ಅಲ್ಲದಿದ್ದರೂ ತಕ್ಕಮಟ್ಟಿಗೆ ಪರಿಶುದ್ಧರಾಗಿರುವ ಸಾಮರ್ಥ್ಯ ನಮಗಿದೆ ಎಂದು ಆತನಿಗೆ ತಿಳಿದಿದೆ. (ಆದಿಕಾಂಡ 1:26) ಇಂಥ ಪರಿಶುದ್ಧ ದೇವರಾದ ಯೆಹೋವನಿಗೆ ಆಪ್ತರಾಗಲು ಏನು ಮಾಡಬೇಕೆಂಬದರ ಬಗ್ಗೆ ಹೆಚ್ಚನ್ನು ತಿಳಿಯಲು ನಿಮಗೆ ಮನಸ್ಸಾಗುತ್ತದೋ? (w09 07/01)

[ಪಾದಟಿಪ್ಪಣಿ]

ಇತರರ ಸೇವೆಮಾಡುವುದು ಪರಿಶುದ್ಧತೆಯನ್ನು ಬೆಳೆಸಿಕೊಳ್ಳಲು ಸಹಾಯಕರ