ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಡತನ ದೇವರ ಶಾಪವೋ?

ಬಡತನ ದೇವರ ಶಾಪವೋ?

ಬಡತನ ದೇವರ ಶಾಪವೋ?

“ನಿಮ್ಮಲ್ಲಿ ಬಡವರೇ ಇರುವದಿಲ್ಲ” ಎಂದು ದೇವರು ಪುರಾತನಕಾಲದ ಇಸ್ರಾಯೇಲ್ಯರಿಗೆ ಹೇಳಿದನು. ಅವನು ಹೀಗೆ ಹೇಳಲು ಕಾರಣವೇನೆಂದರೆ ನಿರ್ಗತಿಕರನ್ನು ಉಪಚರಿಸುವ ಮತ್ತು ಸಾಲ ಮನ್ನಾಮಾಡುವ ನಿಯಮಗಳನ್ನು ಆತನು ಅವರಿಗೆ ಕೊಟ್ಟಿದ್ದನು. (ಧರ್ಮೋಪದೇಶಕಾಂಡ 15:1-4, 7-10) ಇಸ್ರಾಯೇಲ್ಯರು ಈ ನಿಯಮಗಳನ್ನು ಪಾಲಿಸುವಲ್ಲಿ ಯೆಹೋವ ದೇವರು ಆಶೀರ್ವದಿಸುವುದಾಗಿ ಮಾತುಕೊಟ್ಟಿದ್ದರಿಂದ ಅವರ ಮಧ್ಯೆ ಯಾರೂ ಬಡವರಾಗಬಾರದಿತ್ತು. ಆದರೆ ಇಸ್ರಾಯೇಲ್ಯರು ಆ ನಿಯಮಗಳಿಗೆ ವಿಧೇಯರಾಗಲು ತಪ್ಪಿಹೋದ ಕಾರಣ ಅವರಲ್ಲಿ ಬಡ ಜನರಿದ್ದರು.

ಇದರರ್ಥ ಬಡವರೆಲ್ಲರೂ ಶಾಪಗ್ರಸ್ತರು, ಶ್ರೀಮಂತರೆಲ್ಲರು ಆಶೀರ್ವದಿತರು ಎಂದಾಗಿರಲಿಲ್ಲ. ಏಕೆಂದರೆ ಅನೇಕ ದೇವಭಕ್ತರು ಬಡವರಾಗಿದ್ದರು. ಉದಾಹರಣೆಗೆ, ಆಮೋಸನೆಂಬ ದೇವರ ಪ್ರವಾದಿ ಗೊಲ್ಲನೂ ಅತ್ತಿಹಣ್ಣು ಕೀಳುವ ಕೂಲಿಯಾಳೂ ಆಗಿದ್ದನು. (ಆಮೋಸ 1:1; 7:14) ಒಮ್ಮೆ ಇಸ್ರಾಯೇಲ್‌ ದೇಶದಲ್ಲಿ ಕ್ಷಾಮಬಂದಾಗ ದೇವರ ಪ್ರವಾದಿಯಾದ ಎಲೀಯನೆಂಬವನು ಒಬ್ಬಾಕೆ ಬಡ ವಿಧವೆಯನ್ನು ಅವಲಂಬಿಸಬೇಕಾಯಿತು. ಆಕೆಯ ಬಳಿಯಿದ್ದ ಅಲ್ಪಸ್ವಲ್ಪ ಎಣ್ಣೆ ಮತ್ತು ಹಿಟ್ಟನ್ನು ಕ್ಷಾಮ ಕೊನೆಗೊಳ್ಳುವ ವರೆಗೆ ದೇವರು ಅದ್ಭುತಕರ ರೀತಿಯಲ್ಲಿ ಹೆಚ್ಚಿಸಿದನು. ಯೆಹೋವನು ಎಲೀಯನಿಗೆ ಮತ್ತು ಆ ವಿಧವೆಗೆ ಅಗತ್ಯಕ್ಕೆ ಬೇಕಾದಷ್ಟನ್ನು ಮಾತ್ರ ಒದಗಿಸಿದನೇ ಹೊರತು ಅವರನ್ನು ಶ್ರೀಮಂತರನ್ನಾಗಿ ಮಾಡಲಿಲ್ಲ.—1 ಅರಸುಗಳು 17:8-16.

ಅನಿರೀಕ್ಷಿತ ಘಟನೆಗಳು ಜನರನ್ನು ಬಡತನದ ಕೂಪಕ್ಕೆ ತಳ್ಳಬಹುದು. ಅಪಘಾತ ಇಲ್ಲವೆ ಕಾಯಿಲೆಯಿಂದ ಒಬ್ಬನು ಸ್ವಲ್ಪ ಸಮಯ ಅಥವಾ ಮುಂದೆಂದಿಗೂ ದುಡಿಯಲು ಶಕ್ತನಾಗದೆ ಹೋಗಬಹುದು. ಮರಣವು ಅನೇಕರನ್ನು ವಿಧವೆಯರನ್ನಾಗಿ ತಬ್ಬಲಿಗಳನ್ನಾಗಿ ಮಾಡಬಹುದು. ಇಂಥ ದುರಂತಮಯ ಸನ್ನಿವೇಶಗಳು ಸಹ ದೇವರ ಶಾಪದ ಸೂಚನೆಯಲ್ಲ. ಯೆಹೋವನು ಬಡವರಿಗೆ ಕೊಡುವ ಪ್ರೀತಿಪರ ಆರೈಕೆಯ ಮನಮುಟ್ಟುವ ಉದಾಹರಣೆ ನೊವೊಮಿ ಹಾಗೂ ರೂತಳ ಕುರಿತ ಬೈಬಲ್‌ ವೃತ್ತಾಂತವಾಗಿದೆ. ಅವರ ಗಂಡಂದಿರ ಸಾವಿನಿಂದಾಗಿ ಅವರು ನಿರ್ಗತಿಕರಾದರೂ ಯೆಹೋವನು ಅವರನ್ನು ಆಶೀರ್ವದಿಸಿ ಅವರ ಅಗತ್ಯಗಳನ್ನು ಪೂರೈಸಲು ವ್ಯವಸ್ಥೆಮಾಡಿದನು.—ರೂತಳು 1:1-6; 2:2-12; 4:13-17.

ಹಾಗಾದರೆ ಬಡತನ ದೇವರ ಶಾಪವಲ್ಲ ಎಂಬುದು ಸ್ಪಷ್ಟ. ಯೆಹೋವ ದೇವರಿಗೆ ನಂಬಿಗಸ್ತರಾಗಿರುವವರು ರಾಜ ದಾವೀದನ ಈ ಮಾತುಗಳಲ್ಲಿ ಪೂರ್ಣ ಭರವಸೆಯಿಡಬಲ್ಲರು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.”—ಕೀರ್ತನೆ 37:25. (w09 09/01)

[ಪುಟ 8ರಲ್ಲಿರುವ ಚಿತ್ರ]

ನೊವೊಮಿ ಮತ್ತು ರೂತಳು ಬಡವರಾಗಿದ್ದರೂ ದೇವರು ಅವರನ್ನು ಆಶೀರ್ವದಿಸಿ ಪ್ರೀತಿಯಿಂದ ಪರಾಮರಿಸಿದನು