ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕರ್ತನಿಂದ ಕ್ಷಮೆಯ ಪಾಠ ಕಲಿತವನು

ಕರ್ತನಿಂದ ಕ್ಷಮೆಯ ಪಾಠ ಕಲಿತವನು

ಅವರ ನಂಬಿಕೆಯನ್ನು ಅನುಕರಿಸಿರಿ

ಕರ್ತನಿಂದ ಕ್ಷಮೆಯ ಪಾಠ ಕಲಿತವನು

ಕರ್ತನು ತನ್ನನ್ನು ನೋಡಿದ ಆ ಕ್ಷಣವನ್ನು ಪೇತ್ರನಿಗೆ ಮರೆಯಲಿಕ್ಕೇ ಆಗಲಿಲ್ಲ. ಆ ನೋಟದಲ್ಲಿ ನಿರಾಶೆ ಅಥವಾ ಕೋಪದ ಛಾಯೆಯಿತ್ತೋ? ನಮಗದು ಖಚಿತವಾಗಿ ಹೇಳಲಾಗದು. “ಕರ್ತನು ತಿರುಗಿ ಪೇತ್ರನನ್ನು ದೃಷ್ಟಿಸಿ ನೋಡಿದನು” ಎಂದಷ್ಟೇ ಹೇಳುತ್ತದೆ ದೇವಪ್ರೇರಿತ ದಾಖಲೆ. (ಲೂಕ 22:61) ಕರ್ತನ ಆ ಕ್ಷಣಮಾತ್ರದ ನೋಟದಿಂದ ಪೇತ್ರನಿಗೆ ತಾನೆಂಥ ಗಂಭೀರ ತಪ್ಪು ಮಾಡಿದ್ದೇನೆಂದು ತಿಳಿಯಿತು. ಯೇಸು ಇದನ್ನು ಮುಂತಿಳಿಸಿದಾಗ ಹಾಗೆ ಮಾಡುವುದೇ ಇಲ್ಲವೆಂದು ತಾನು ಘಂಟಾಘೋಷವಾಗಿ ಹೇಳಿದ್ದನ್ನೇ ಈಗ ಮಾಡಿದ್ದೇನೆಂದು ಪೇತ್ರನಿಗೆ ಅರಿವಾಯಿತು. ಹೌದು, ತನ್ನ ಪ್ರೀತಿಯ ಕರ್ತನನ್ನೇ ಅರಿಯೆನೆಂದು ಎಲ್ಲರ ಮುಂದೆ ಹೇಳಿದ್ದನು. ಪೇತ್ರನ ಮನಕುಗ್ಗಿಹೋಯಿತು. ಪ್ರಾಯಶಃ ಇದು ಅವನ ಜೀವನದ ಅತ್ಯಂತ ಕೆಟ್ಟ ದಿನದ ಅತ್ಯಂತ ಕೆಟ್ಟ ಕ್ಷಣವಾಗಿತ್ತು.

ಆದರೆ ಇದೊಂದು ನಿರೀಕ್ಷಾಹೀನ ಸ್ಥಿತಿಯಾಗಿರಲಿಲ್ಲ. ಏಕೆಂದರೆ ಪೇತ್ರನು ಬಹು ನಂಬಿಕೆಯಿದ್ದ ವ್ಯಕ್ತಿಯಾಗಿದ್ದನು. ತನ್ನ ತಪ್ಪನ್ನು ತಿದ್ದಿಕೊಳ್ಳಲು ಮತ್ತು ಯೇಸು ಕಲಿಸಿದ ಅತ್ಯುತ್ತಮ ಪಾಠಗಳಲ್ಲಿ ಒಂದನ್ನು ಕಲಿಯಲು ಅವನಿಗಿನ್ನೂ ಅವಕಾಶವಿತ್ತು. ಅದೇ ಕ್ಷಮೆಯ ಪಾಠವಾಗಿತ್ತು. ಈ ಪಾಠವನ್ನು ಪೇತ್ರನಷ್ಟೇ ಅಲ್ಲ ನಾವು ಪ್ರತಿಯೊಬ್ಬರೂ ಕಲಿಯಬೇಕು. ಅದಕ್ಕಾಗಿ ನಾವೀಗ ಪೇತ್ರನು ಆ ಪಾಠವನ್ನು ಕಲಿತದ್ದು ಹೇಗೆಂದು ನೋಡೋಣ.

ಅನೇಕ ಪಾಠಗಳನ್ನು ಕಲಿಯಬೇಕಿದ್ದವನು

ಸುಮಾರು 6 ತಿಂಗಳ ಹಿಂದೆ ಪೇತ್ರನು ತನ್ನ ಹುಟ್ಟೂರಾದ ಕಪೆರ್ನೌಮಿನಲ್ಲಿದ್ದಾಗ ಯೇಸುವನ್ನು, “ಕರ್ತನೇ, ನನ್ನ ಸಹೋದರನು ನನ್ನ ವಿರುದ್ಧ ಪಾಪಮಾಡುವುದಾದರೆ ನಾನು ಎಷ್ಟು ಸಾರಿ ಅವನನ್ನು ಕ್ಷಮಿಸಬೇಕು? ಏಳು ಸಾರಿಯೊ?” ಎಂದು ಕೇಳಿದ್ದನು. ತಾನು ಉದಾರವಾಗಿ ಕ್ಷಮಿಸುವವನೆಂದು ಪೇತ್ರನು ನೆನಸಿದ್ದಿರಬೇಕು. ಏಕೆಂದರೆ ಆ ಕಾಲದ ಧಾರ್ಮಿಕ ಮುಖಂಡರು 3 ಬಾರಿ ಮಾತ್ರ ಕ್ಷಮಿಸಬೇಕೆಂದು ಜನರಿಗೆ ಕಲಿಸುತ್ತಿದ್ದರು! ಯೇಸು ಪ್ರತ್ಯುತ್ತರವಾಗಿ ಪೇತ್ರನಿಗೆ, “ಏಳು ಸಾರಿಯಲ್ಲ, ಎಪ್ಪತ್ತೇಳು ಸಾರಿ” ಕ್ಷಮಿಸಬೇಕು ಎಂದು ಹೇಳಿದನು.—ಮತ್ತಾಯ 18:21, 22.

ಬೇರೆಯವರು ತಪ್ಪುಮಾಡಿದಾಗಲೆಲ್ಲ ಲೆಕ್ಕವಿಡಬೇಕು ಎಂದು ಯೇಸು ಹೇಳುತ್ತಿದ್ದನೋ? ಖಂಡಿತ ಇಲ್ಲ. ಪೇತ್ರನು ಹೇಳಿದ 7ನ್ನು 77 ಎಂದು ಹೇಳುವ ಮೂಲಕ ಇಂತಿಷ್ಟೇ ಬಾರಿ ಕ್ಷಮಿಸಬೇಕೆಂಬ ಯಾವುದೇ ಮಿತಿಯಿಲ್ಲ ಎಂದು ಯೇಸು ಹೇಳುತ್ತಿದ್ದನು. ಆ ದಿನಗಳಲ್ಲಿ ಹೆಚ್ಚಿನವರು ಕಲ್ಲೆದೆಯವರೂ ಕ್ಷಮಿಸದವರೂ ಆಗಿದ್ದರು. ಸಾಲಗಳ ಲೆಕ್ಕವಿಡುವಂತೆ ಯಾರ್ಯಾರು ಎಷ್ಟೆಷ್ಟು ತಪ್ಪುಗಳನ್ನು ಮಾಡಿದರೆಂದು ಲೆಕ್ಕವಿಡುತ್ತಿದ್ದರು. ಇದೇ ಮನೋಭಾವ ಪೇತ್ರನಿಗೂ ಸೋಂಕಿತ್ತೆಂದು, ಆದರೆ ದೇವರ ಮಟ್ಟಗಳಿಗನುಸಾರ ತೋರಿಸುವ ಕ್ಷಮೆಯಲ್ಲಿ ಉದಾರಿಗಳಾಗಿರಬೇಕೆಂದು ಯೇಸು ಕಲಿಸಿದನು.

ಪೇತ್ರನು ಯೇಸುವಿನೊಂದಿಗೆ ವಾದಕ್ಕಿಳಿಯಲಿಲ್ಲ. ಆದರೆ ಯೇಸು ಕಲಿಸಿದ ಪಾಠ ಅವನ ಹೃದಯಕ್ಕೆ ಇಳಿಯಿತೋ? ಸ್ವತಃ ನಮಗೆ ಕ್ಷಮೆಯ ಅಗತ್ಯ ಬಿದ್ದಾಗಲೇ ಕ್ಷಮಾಭಾವ ಎಷ್ಟು ಮಹತ್ವದ್ದೆಂದು ನಾವು ಚೆನ್ನಾಗಿ ಕಲಿಯುತ್ತೇವೆ. ಯೇಸುವಿನ ಮರಣಕ್ಕೆ ಸ್ವಲ್ಪ ಮುಂಚೆ ನಡೆದ ಘಟನೆಗಳ ಕಡೆಗೆ ನಾವೀಗ ಹಿಂತೆರಳೋಣ. ಅಂಥ ಕಷ್ಟದ ಸಮಯದಲ್ಲಿ ಪೇತ್ರನಿಗೆ ಅವನ ಕರ್ತನಿಂದ ಅನೇಕ ವಿಷಯಗಳಲ್ಲಿ ಕ್ಷಮೆಯ ಅಗತ್ಯಬಿತ್ತು.

ಕ್ಷಮೆ ಬೇಕೇ ಬೇಕಾಗಿತ್ತು

ಅದು ಮರೆಯಲಾಗದ ಒಂದು ಸಂಜೆ. ಯೇಸುವಿನ ಭೂಜೀವಿತದ ಕೊನೇ ರಾತ್ರಿ. ಆತನು ತನ್ನ ಅಪೊಸ್ತಲರಿಗೆ ಇನ್ನೂ ಕಲಿಸಲಿಕ್ಕಿದ್ದ ಅನೇಕ ವಿಷಯಗಳಲ್ಲಿ ದೀನತೆಯ ಪಾಠ ಒಂದು. ಅದನ್ನು ಆತ ಕಲಿಸಿದ್ದು ತನ್ನ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕವೇ. ಈ ಕೆಲಸವನ್ನು ಸಾಮಾನ್ಯವಾಗಿ ಕೆಳದರ್ಜೆಯ ಸೇವಕರು ಮಾಡುತ್ತಿದ್ದರು. ಯೇಸು ಪೇತ್ರನ ಪಾದಗಳನ್ನು ತೊಳೆಯಲು ಬಂದಾಗ ಪೇತ್ರನು ಮೊದಲು ಪ್ರಶ್ನಿಸಿದನು. ನಂತರ ಬೇಡವೆಂದನು. ಬಳಿಕ ಪಾದಗಳನ್ನು ಮಾತ್ರವಲ್ಲ ತನ್ನ ಕೈಗಳನ್ನೂ ತಲೆಯನ್ನೂ ತೊಳೆಯಬೇಕೆಂದು ಒತ್ತಾಯಿಸಿದನು! ಈ ಸಮಯದಲ್ಲಿ ಯೇಸು ತಾಳ್ಮೆ ಕಳಕೊಳ್ಳದೆ ತಾನು ಮಾಡುತ್ತಿದ್ದ ಕೆಲಸದ ಮಹತ್ವವನ್ನೂ ಅರ್ಥವನ್ನೂ ಶಾಂತವಾಗಿ ವಿವರಿಸಿದನು.—ಯೋಹಾನ 13:1-17.

ಆದರೆ ಇದಾದ ಸ್ವಲ್ಪದರಲ್ಲೇ ಅಪೊಸ್ತಲರು ತಮ್ಮಲ್ಲಿ ಯಾರು ಶ್ರೇಷ್ಠರೆಂದು ವಾಗ್ವಾದ ಮಾಡಲಾರಂಭಿಸಿದರು. ಮಾನವ ಹೆಮ್ಮೆಯು ತೋರಿಬಂದ ಈ ನಾಚಿಕೆಗೇಡು ಕೃತ್ಯದಲ್ಲಿ ಪೇತ್ರನೂ ಖಂಡಿತ ಒಳಗೂಡಿದ್ದನು. ಹಾಗಿದ್ದರೂ ಯೇಸು ದಯೆಯಿಂದ ಅವರನ್ನು ತಿದ್ದಿದನು. ಮಾತ್ರವಲ್ಲ ಅವರು ತನಗೆ ನಿಷ್ಠೆ ತೋರಿಸಿದ್ದಕ್ಕಾಗಿ ಪ್ರಶಂಸಿಸಿದನು. ಆದರೆ ಅವರೆಲ್ಲರೂ ತನ್ನನ್ನು ಬಿಟ್ಟು ಓಡಿಹೋಗುವರೆಂದೂ ಯೇಸು ಮುನ್ನುಡಿದನು. ಅದಕ್ಕೆ ಪೇತ್ರನು, ತಾನು ಸಾಯಬೇಕಾಗಿ ಬಂದರೂ ಹಾಗೆ ಮಾಡೆನೆಂದು ಹೇಳಿದನು. ಆಗ ಯೇಸು, ಅದೇ ರಾತ್ರಿಯಂದು ಹುಂಜವು 2 ಬಾರಿ ಕೂಗುವುದರೊಳಗೆ ತನ್ನನ್ನು ಅರಿಯನೆಂದು 3 ಬಾರಿ ಪೇತ್ರನು ಹೇಳುವನೆಂದು ಪ್ರವಾದನೆ ನುಡಿದನು. ತಕ್ಷಣ ಪೇತ್ರನು ತಾನು ಹಾಗೆಂದೂ ಮಾಡುವುದಿಲ್ಲವೆಂದು ಹೇಳಿದನು ಮಾತ್ರವಲ್ಲ ಇತರ ಅಪೊಸ್ತಲರಿಗಿಂತ ಹೆಚ್ಚು ನಂಬಿಗಸ್ತನಾಗಿ ಇರುವೆನೆಂದೂ ಕೊಚ್ಚಿಕೊಂಡನು!—ಮತ್ತಾಯ 26:31-35; ಮಾರ್ಕ 14:27-31; ಲೂಕ 22:24-28.

ಪೇತ್ರನ ಮಾತುಗಳನ್ನು ಕೇಳಿ ಯೇಸುವಿನ ತಾಳ್ಮೆಯ ಕಟ್ಟೆಯೊಡೆಯಿತೋ? ಇಂಥ ಕಷ್ಟಕರ ಸಮಯದಲ್ಲೂ ಯೇಸು ತನ್ನ ಈ ಅಪರಿಪೂರ್ಣ ಅಪೊಸ್ತಲರಲ್ಲಿ ಒಳ್ಳೇದನ್ನೇ ಹುಡುಕಿದನು. ಪೇತ್ರನು ಖಂಡಿತ ತನ್ನನ್ನು ಅಲ್ಲಗೆಳೆಯುವನೆಂದು ತಿಳಿದಿದ್ದರೂ ಯೇಸು ಹೇಳಿದ್ದು: “ನಿನ್ನ ನಂಬಿಕೆಯು ಮುರಿದುಬೀಳದಂತೆ ನಾನು ನಿನಗೋಸ್ಕರ ಯಾಚಿಸಿದ್ದೇನೆ; ನೀನು ತಿರುಗಿ ಬಂದ ಮೇಲೆ ನಿನ್ನ ಸಹೋದರರನ್ನು ಬಲಪಡಿಸು.” (ಲೂಕ 22:32) ಹೀಗೆ ಹೇಳುವ ಮೂಲಕ, ಪೇತ್ರನು ತನ್ನ ತಪ್ಪನ್ನು ತಿದ್ದಿಕೊಂಡು ನಂಬಿಗಸ್ತನಾಗಿ ಸೇವೆಮಾಡುವುದನ್ನು ಮುಂದುವರಿಸುವನೆಂಬ ಭರವಸೆಯನ್ನು ಯೇಸು ವ್ಯಕ್ತಪಡಿಸಿದನು. ಎಂಥ ದಯೆ ಮತ್ತು ಕ್ಷಮಾಭಾವವನ್ನು ಯೇಸು ತೋರಿಸಿದನಲ್ಲವೇ?

ಬಳಿಕ ಗೆತ್ಸೇಮನೆ ತೋಟದಲ್ಲಿ ಯೇಸು ಪೇತ್ರನನ್ನು ಒಮ್ಮೆಯಲ್ಲ, ಅನೇಕ ಸಲ ತಿದ್ದಬೇಕಾಗಿ ಬಂತು. ಅಲ್ಲಿ ಯೇಸು ಅವನಿಗೂ ಯಾಕೋಬ ಯೋಹಾನರಿಗೂ ತಾನು ಪ್ರಾರ್ಥಿಸುತ್ತಿರುವಾಗ ಎಚ್ಚರವಾಗಿರುವಂತೆ ಹೇಳಿದನು. ಆ ಸಮಯದಲ್ಲಿ ಯೇಸು ಕಡು ಸಂಕಟದಲ್ಲಿದ್ದನು. ಆತನಿಗೆ ಬೆಂಬಲದ ಅಗತ್ಯವಿತ್ತು. ಅಂಥ ಸಮಯದಲ್ಲಿ ಪೇತ್ರ ಮತ್ತು ಇತರ ಶಿಷ್ಯರು ನಿದ್ದೆಹೋದರು. ಪದೇ ಪದೇ ಎಚ್ಚರಿಸಿದಾಗಲೂ ಅವರು ನಿದ್ದೆ ಹೋದಾಗ ಯೇಸು ಪರಾನುಭೂತಿಯಿಂದ ಕ್ಷಮಿಸುತ್ತಾ, “ಹೃದಯವು ಸಿದ್ಧವಾಗಿದೆ ನಿಜ, ಆದರೆ ದೇಹಕ್ಕೆ ಬಲ ಸಾಲದು” ಎಂದು ಹೇಳಿದನು.—ಮಾರ್ಕ 14:32-38.

ಸ್ವಲ್ಪ ಸಮಯದಲ್ಲೇ ಜನರ ಒಂದು ಗುಂಪು ಪಂಜುಗಳನ್ನೂ ಕತ್ತಿದೊಣ್ಣೆಗಳನ್ನೂ ಹಿಡಿದುಕೊಂಡು ಬಂತು. ಎಚ್ಚರಿಕೆ, ವಿವೇಚನೆಯಿಂದ ವರ್ತಿಸುವ ಸಮಯ ಅದಾಗಿತ್ತು. ಆದರೆ ಪೇತ್ರ ಹಿಂದೆಮುಂದೆ ನೋಡದೆ ತನ್ನ ಕತ್ತಿಯನ್ನು ಬೀಸಿ ಮಹಾ ಯಾಜಕನ ಆಳಾದ ಮಲ್ಕನ ಕಿವಿ ಕತ್ತರಿಸಿಬಿಟ್ಟನು. ಆಗಲೂ ಯೇಸು ಶಾಂತವಾಗಿ ಪೇತ್ರನನ್ನು ತಿದ್ದಿದನು. ಮಲ್ಕನ ಕಿವಿಯನ್ನು ಗುಣಪಡಿಸಿದನು. ಅನಂತರ, ಇವತ್ತಿಗೂ ಆತನ ಅನುಯಾಯಿಗಳನ್ನು ಮಾರ್ಗದರ್ಶಿಸುತ್ತಿರುವ ಅಹಿಂಸಾ ತತ್ತ್ವವೊಂದನ್ನು ತಿಳಿಸಿದನು. (ಮತ್ತಾಯ 26:47-55; ಲೂಕ 22:47-51; ಯೋಹಾನ 18:10, 11) ಹೀಗೆ ಪೇತ್ರನು ಈಗಾಗಲೇ ಮಾಡಿದ್ದ ಅನೇಕ ತಪ್ಪುಗಳಿಗೆ ಯೇಸುವಿನಿಂದ ಕ್ಷಮೆಪಡೆದಿದ್ದನು. ಪೇತ್ರನ ತಪ್ಪುಗಳು, “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ” ಎಂಬದನ್ನು ನೆನಪಿಸುತ್ತವೆ. (ಯಾಕೋಬ 3:2) ಪ್ರತಿದಿನ ದೇವರ ಕ್ಷಮೆಯ ಅಗತ್ಯವಿಲ್ಲದವರು ನಮ್ಮಲ್ಲಿ ಯಾರಿದ್ದಾರೆ? ಪೇತ್ರನ ವಿಷಯಕ್ಕೆ ಬರುವುದಾದರೆ ಆ ರಾತ್ರಿ ಇನ್ನೊಂದು ಸಂಗತಿ ನಡೆಯಲಿಕ್ಕಿತ್ತು. ಅವನು ಮುಂಚೆಗಿಂತಲೂ ದೊಡ್ಡ ತಪ್ಪನ್ನು ಮಾಡಲಿದ್ದನು.

ಪೇತ್ರನ ಅತ್ಯಂತ ದೊಡ್ಡ ತಪ್ಪು

ಕತ್ತಿದೊಣ್ಣೆಗಳನ್ನು ಹಿಡಿದುಕೊಂಡು ಸುತ್ತುವರಿದಿದ್ದ ಜನರ ಬಳಿ ಯೇಸು, ಅವರು ಹುಡುಕುತ್ತಿರುವ ಮನುಷ್ಯನು ತಾನೇ ಎಂದೂ ತನ್ನ ಅಪೊಸ್ತಲರನ್ನು ಬಿಟ್ಟುಬಿಡಬೇಕೆಂದೂ ಹೇಳಿದನು. ಅವರು ಯೇಸುವನ್ನು ಬಂಧಿಸಿದಾಗ ಪೇತ್ರನು ನಿಸ್ಸಹಾಯಕನಾಗಿ ನೋಡುತ್ತಾ ನಿಂತನಷ್ಟೆ. ಬಳಿಕ ಇತರ ಅಪೊಸ್ತಲರಂತೆ ಅವನೂ ಯೇಸುವನ್ನು ಬಿಟ್ಟು ಓಡಿಹೋದನು.

ಹೀಗೆ ಓಡಿಹೋಗುತ್ತಿದ್ದ ಪೇತ್ರ ಯೋಹಾನರು ಥಟ್ಟನೆ ಒಂದೆಡೆ ನಿಂತರು. ಪ್ರಾಯಶಃ ಮಾಜಿ ಮಹಾ ಯಾಜಕನಾದ ಅನ್ನನ ಮನೆಯ ಬಳಿ. ಯೇಸುವನ್ನು ವಿಚಾರಣೆಗೆಂದು ಮೊದಲು ಅಲ್ಲಿ ಕರೆತರಲಾಗಿತ್ತು. ಅಲ್ಲಿಂದ ಆತನನ್ನು ಬೇರೆಡೆ ಕರಕೊಂಡು ಹೋಗುವಾಗ ಪೇತ್ರ ಯೋಹಾನರು “ದೂರದಿಂದ ಅವನನ್ನು ಹಿಂಬಾಲಿಸುತ್ತಾ” ಇದ್ದರು. (ಮತ್ತಾಯ 26:58; ಯೋಹಾನ 18:12, 13) ಪೇತ್ರನು ಹೇಡಿಯಾಗಿರಲಿಲ್ಲ. ಈ ರೀತಿ ಯೇಸುವನ್ನು ಹಿಂಬಾಲಿಸಲಿಕ್ಕೂ ಅವನಿಗೆ ತುಂಬ ಧೈರ್ಯ ಬೇಕಿತ್ತು. ಏಕೆಂದರೆ ಆ ಜನರ ಗುಂಪು ಶಸ್ತ್ರಸಜ್ಜಿತವಾಗಿತ್ತು ಮತ್ತು ಅವನು ಆ ಗುಂಪಿನಲ್ಲಿ ಒಬ್ಬನ ಮೇಲೆ ಈಗಾಗಲೇ ಕೈಮಾಡಿದ್ದನು. ಆದರೂ, ತನ್ನ ಕರ್ತನಿಗಾಗಿ ಪ್ರಾಣವನ್ನೇ ಕೊಡುವೆನೆಂದು ಸ್ವತಃ ಹೇಳಿದ ಪೇತ್ರನು ಇಲ್ಲಿ ಆ ನಿಷ್ಠಾವಂತ ಪ್ರೀತಿಯನ್ನು ತೋರಿಸಲಿಲ್ಲವೆಂದು ನಾವು ನೋಡುತ್ತೇವೆ.—ಮಾರ್ಕ 14:31.

ಪೇತ್ರನಂತೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಯೇಸುವನ್ನು “ದೂರದಿಂದ” ಹಿಂಬಾಲಿಸುವವರು ಇಂದು ಅನೇಕರಿದ್ದಾರೆ. ಆದರೆ ಕ್ರಿಸ್ತನನ್ನು ಸರಿಯಾಗಿ ಹಿಂಬಾಲಿಸುವ ಏಕೈಕ ಮಾರ್ಗವನ್ನು ಪೇತ್ರನೇ ಸಮಯಾನಂತರ ತಿಳಿಸಿದನು. ಅದೇನಂದರೆ, ಪರಿಣಾಮಗಳ ಬಗ್ಗೆ ಚಿಂತಿಸದೆ ಎಲ್ಲ ವಿಷಯಗಳಲ್ಲಿ ಯೇಸುವಿನ ಮಾದರಿಯನ್ನು ಅನುಕರಿಸುವ ಮೂಲಕ ನಮ್ಮಿಂದಾದಷ್ಟು ಮಟ್ಟಿಗೆ ಆತನಿಗೆ ನಿಕಟವಾಗಿ ಅಂಟಿಕೊಳ್ಳಬೇಕು.—1 ಪೇತ್ರ 2:21.

ಹೀಗೆ ಪೇತ್ರನು ತುಂಬ ಹುಷಾರಾಗಿ ಯೇಸುವನ್ನು ಹಿಂಬಾಲಿಸುತ್ತಾ ಯೆರೂಸಲೇಮಿನ ಅತಿ ಭವ್ಯ ಕಟ್ಟಡಗಳಲ್ಲೊಂದರ ಹೆಬ್ಬಾಗಿಲ ತನಕ ಬಂದನು. ಅದು ಧನಿಕನೂ ಪ್ರಭಾವಶಾಲಿಯೂ ಆಗಿದ್ದ ಮಹಾ ಯಾಜಕ ಕಾಯಫನ ಮನೆಯಾಗಿತ್ತು. ಸಾಮಾನ್ಯವಾಗಿ ಇಂಥ ಮನೆಗಳಿಗೆ ದೊಡ್ಡ ಅಂಗಳ ಮತ್ತು ಹೆಬ್ಬಾಗಿಲು ಇರುತ್ತಿದ್ದವು. ಹೆಬ್ಬಾಗಿಲ ಬಳಿ ಬಂದ ಪೇತ್ರನನ್ನು ಬಾಗಲುಕಾಯುವವಳು ಒಳಗೆ ಬಿಡಲಿಲ್ಲ. ಆದರೆ ಈಗಾಗಲೇ ಒಳಸೇರಿದ್ದ ಯೋಹಾನನು ಬಂದು ಅವಳಿಗೆ ಪೇತ್ರನನ್ನು ಒಳಬಿಡುವಂತೆ ಹೇಳಿದನು. ಪೇತ್ರನು ಯೋಹಾನನ ಒಟ್ಟಿಗೂ ಇರಲಿಲ್ಲ, ಯೇಸುವಿನ ಹತ್ತಿರವಿರಲು ಮನೆಯ ಒಳಹೋಗಲೂ ಪ್ರಯತ್ನಿಸಲಿಲ್ಲ ಎಂದು ತೋರುತ್ತದೆ. ಅವನು ಅಂಗಳದಲ್ಲಿ ರಾತ್ರಿ ಚಳಿಕಾಯಿಸಿಕೊಳ್ಳುತ್ತಿದ್ದ ಆಳುಗಳ ಮತ್ತು ಸೇವಕರ ಜೊತೆಗೆ ನಿಂತುಕೊಂಡನು. ಅಲ್ಲಿಂದ ಅವನಿಗೆ ಯೇಸುವಿನ ವಿರುದ್ಧ ಸುಳ್ಳು ಸಾಕ್ಷಿಹೇಳುವವರು ಒಳಗೆ ಹೋಗಿ ಬರುತ್ತಿದ್ದದ್ದು ಕಾಣುತ್ತಿತ್ತು.—ಮಾರ್ಕ 14:54-57; ಯೋಹಾನ 18:15, 16, 18.

ಪೇತ್ರನನ್ನು ಒಳಗೆ ಬಿಟ್ಟ ಸೇವಕಿಯು ಬೆಂಕಿಯ ಬೆಳಕಿನಲ್ಲಿ ಅವನ ಮುಖ ಕಂಡು ಗುರುತುಹಿಡಿದು, “ನೀನು ಸಹ ಗಲಿಲಾಯದವನಾದ ಯೇಸುವಿನೊಂದಿಗೆ ಇದ್ದವನು” ಎಂದು ಹೇಳಿದಳು. ಅವನು ಆ ಹುಡುಗಿಯ ಮಾತಿಗೆ ಬೆಚ್ಚಿಬಿದ್ದು ಯೇಸು ಯಾರೆಂದು ತನಗೆ ಗೊತ್ತೇ ಇಲ್ಲ ಎಂದೂ ಅವಳು ಹೇಳುತ್ತಿರುವುದು ತನಗೆ ಅರ್ಥವಾಗುತ್ತಿಲ್ಲ ಎಂದೂ ಹೇಳಿದನು. ಆಗ ಅವನು ಜನರ ಕಣ್ತಪ್ಪಿಸಲು ಪುನಃ ಹೆಬ್ಬಾಗಿಲ ಬಳಿ ಬಂದು ನಿಂತನು. ಅಷ್ಟರಲ್ಲಿ ಇನ್ನೊಂದು ಹುಡುಗಿ ಕೂಡ ಅವನನ್ನು ನೋಡಿ, “ಇವನು ನಜರೇತಿನವನಾದ ಯೇಸುವಿನೊಂದಿಗೆ ಇದ್ದನು” ಎಂದು ಹೇಳಿದಳು. ಆಗ ಪೇತ್ರ “ಆ ಮನುಷ್ಯನನ್ನು ನಾನರಿಯೆ” ಎಂದು ಆಣೆಯಿಟ್ಟು ಹೇಳಿದನು. (ಮತ್ತಾಯ 26:69-72) ಹೀಗೆ ಎರಡು ಬಾರಿ ಯೇಸುವನ್ನು ಅಲ್ಲಗಳೆದ ನಂತರ ಹುಂಜ ಕೂಗಿದ್ದನ್ನು ಅವನು ಬಹುಶಃ ಕೇಳಿರಬಹುದು. ಆದರೆ ಅವನೆಷ್ಟು ಗೊಂದಲದಲ್ಲಿದ್ದನೆಂದರೆ ಕೆಲವೇ ತಾಸುಗಳ ಮುಂಚೆ ಯೇಸು ಹೇಳಿದ ಪ್ರವಾದನೆಯ ಮಾತು ಅವನ ನೆನಪಿಗೆ ಬರಲೇ ಇಲ್ಲ.

ಇದಾದ ನಂತರವೂ ಪೇತ್ರನು ಯಾರ ಕಣ್ಣಿಗೂ ಬೀಳದಿರಲು ಸಿಕ್ಕಾಪಟ್ಟೆ ಪ್ರಯತ್ನಿಸಿದನು. ಆದರೆ ಅಂಗಳದಲ್ಲಿ ನಿಂತಿದ್ದ ಜನರ ಗುಂಪೊಂದು ಪೇತ್ರನ ಬಳಿ ಬಂತು. ಗೆತ್ಸೇಮನೆ ತೋಟದಲ್ಲಿ ಪೇತ್ರನು ಗಾಯಗೊಳಿಸಿದ್ದ ಮಲ್ಕನ ಸಂಬಂಧಿಕನೊಬ್ಬನು ಆ ಗುಂಪಿನಲ್ಲಿದ್ದನು. ಅವನು ಪೇತ್ರನಿಗೆ, “ನಾನು ನಿನ್ನನ್ನು ತೋಟದಲ್ಲಿ ಅವನೊಂದಿಗೆ ನೋಡಿದೆನಲ್ಲವೆ?” ಎಂದಾಗ ಅವರು ತಪ್ಪು ತಿಳಿದಿದ್ದಾರೆಂದು ನಂಬಿಸಲು ಶತಪ್ರಯತ್ನ ಮಾಡಿದನು. ಅದಕ್ಕಾಗಿ ಅವನು ಆಣೆಯನ್ನೂ ಇಟ್ಟನು. ಅಂದರೆ ತಾನು ಹೇಳುತ್ತಿರುವುದು ಸುಳ್ಳಾದರೆ ತನಗೆ ಶಾಪತಗಲಲಿ ಎಂದವನು ಹೇಳಿರಬಹುದು. ಆ ಮಾತುಗಳು ಅವನ ಬಾಯಿಂದ ಹೊರಬೀಳುತ್ತಿದ್ದಂತೆ ಹುಂಜ ಎರಡನೇ ಬಾರಿ ಕೂಗಿದ್ದು ಪೇತ್ರನ ಕಿವಿಗೆ ಬಿತ್ತು.—ಯೋಹಾನ 18:26, 27; ಮಾರ್ಕ 14:71, 72.

ಅದೇ ವೇಳೆಗೆ ಯೇಸು ಮಹಡಿಯ ಮೊಗಸಾಲೆಗೆ ಬಂದನು. ಲೇಖನದ ಆರಂಭದಲ್ಲಿ ತಿಳಿಸಲಾದಂತೆ ಆ ಕ್ಷಣದಲ್ಲೇ ಆತನು ಅಂಗಳದಲ್ಲಿದ್ದ ಪೇತ್ರನನ್ನು ನೋಡಿದನು. ತಾನೆಂಥ ದೊಡ್ಡ ತಪ್ಪುಮಾಡಿ ಕರ್ತನನ್ನು ನಿರಾಶೆಗೊಳಿಸಿದ್ದೇನೆ ಎಂದು ಆಗ ಪೇತ್ರನಿಗೆ ಅರಿವಾಯಿತು. ತಪ್ಪಿತಸ್ಥ ಭಾವನೆಯಿಂದ ಜಜ್ಜಿಹೋದ ಪೇತ್ರನು ಆ ಮನೆಯಂಗಳದಿಂದ ಹೊರಬಂದನು. ಮರೆಯಾಗುತ್ತಿದ್ದ ಪೂರ್ಣಚಂದ್ರ ಊರ ರಸ್ತೆಗಳಲ್ಲಿ ಚೆಲ್ಲಿದ ಬೆಳಕಲ್ಲಿ ಪೇತ್ರ ಭಾರವಾದ ಹೆಜ್ಜೆಹಾಕಿದನು. ಆ ಮನೆಯಂಗಳದಲ್ಲಿ ನಡೆದ ಘಟನೆಗಳೇ ಅವನ ಕಣ್ಣೆದುರಿಗೆ ಬರುತ್ತಿದ್ದವು. ಅವನ ಕಣ್ಣುಗಳು ತುಂಬಿಬಂದವು. ಸಹಿಸಿಕೊಳ್ಳಲಾಗದೆ ಬಿಕ್ಕಿಬಿಕ್ಕಿ ಅತ್ತನು.—ಮಾರ್ಕ 14:72; ಲೂಕ 22:61, 62.

ಅಂಥಿಂಥ ತಪ್ಪನ್ನಲ್ಲ, ಘೋರ ತಪ್ಪನ್ನೇ ಮಾಡಿದ್ದೇನೆ ಎಂದು ಒಬ್ಬ ವ್ಯಕ್ತಿಗೆ ಅರಿವಾದಾಗ ತನಗೆ ದೇವರ ಕ್ಷಮೆ ದೊರೆಯಲಾರದು ಎಂದನಿಸುವುದು ಸಹಜ. ಪೇತ್ರನೂ ಹಾಗೆಯೇ ಅಂದುಕೊಂಡಿರಬಹುದು. ಅದು ನಿಜವಾಯಿತೊ?

ಪೇತ್ರನ ತಪ್ಪು ಅಕ್ಷಮ್ಯವಾಗಿತ್ತೋ?

ಸೂರ್ಯೋದಯವಾಗಿ ಆ ದಿನ ಒಂದೊಂದು ಘಟನೆ ನಡೆಯುತ್ತಾ ಹೋದಂತೆ ಪೇತ್ರನ ಹೃದಯಾಳದ ನೋವು ಹೆಚ್ಚುತ್ತಾ ಹೋದದ್ದನ್ನು ನಾವು ಊಹಿಸಬಹುದು. ಯೇಸು ಅನೇಕ ತಾಸುಗಳ ತನಕ ನರಳಿ ಆ ಮಧ್ಯಾಹ್ನ ಪ್ರಾಣಬಿಟ್ಟಾಗಲಂತೂ ಪೇತ್ರನು ತನ್ನನ್ನೇ ಎಷ್ಟು ದೂಷಿಸಿಕೊಂಡಿರಬೇಕು ಅಲ್ಲವೇ? ಯೇಸು ಮಾನವನಾಗಿ ಜೀವಿಸಿದ ಕೊನೆಯ ದಿನದಂದು ಅನುಭವಿಸಿದ ನೋವಿಗೆ ತಾನು ಇನ್ನಷ್ಟೂ ನೋವನ್ನು ಸೇರಿಸಿದೆನೆಲ್ಲ ಎಂದು ನೆನಸಿ ನೆನಸಿ ಪೇತ್ರನು ತುಂಬ ಕೊರಗಿರಬೇಕು. ಅವನಿಗೆ ಅತೀವ ದುಃಖವಾಗಿದ್ದರೂ ಅದರಲ್ಲೇ ಮುಳುಗಿಹೋಗಲಿಲ್ಲ. ಇದು ನಮಗೆ ಗೊತ್ತಾಗುವುದು ಹೇಗೆಂದರೆ ಅವನು ಆದಷ್ಟು ಬೇಗನೆ ಬೇರೆ ಅಪೊಸ್ತಲರೊಂದಿಗೆ ಇದ್ದನೆಂದು ನಾವು ಓದುತ್ತೇವೆ. (ಲೂಕ 24:33) ಆ ಕರಾಳ ರಾತ್ರಿಯಂದು ತಾವು ನಡೆದುಕೊಂಡ ರೀತಿಗಾಗಿ ಅಪೊಸ್ತಲರೆಲ್ಲರೂ ವಿಷಾದಿಸಿರಬೇಕು ಮತ್ತು ಒಬ್ಬರನ್ನೊಬ್ಬರು ಸಂತೈಸಿರಬೇಕು ಎಂಬುದರಲ್ಲಿ ಸಂಶಯವಿಲ್ಲ.

ಪೇತ್ರನು ಮಾಡಿದ ಒಂದು ವಿವೇಕಯುತ ನಿರ್ಣಯವನ್ನು ನಾವಿಲ್ಲಿ ಕಾಣಬಹುದು. ದೇವರ ಸೇವಕನೊಬ್ಬನು ಎಡವಿದಾಗ ಅಥವಾ ತಪ್ಪುಮಾಡಿದಾಗ ಅವನು ಮಾಡಿದ ತಪ್ಪು ಎಷ್ಟು ದೊಡ್ಡದಾಗಿತ್ತು ಎಂಬದು ಮುಖ್ಯವಲ್ಲ, ಬದಲಾಗಿ ಆ ತಪ್ಪನ್ನು ಸರಿಪಡಿಸಲು ಎಡವಿ ಬಿದ್ದಲ್ಲಿಂದ ಏಳಲು ಅವನಿಗಿರುವ ದೃಢಮನಸ್ಸು ಮುಖ್ಯ. (ಜ್ಞಾನೋಕ್ತಿ 24:16) ಪೇತ್ರನು ತುಂಬ ನೊಂದಿದ್ದರೂ ಇತರ ಅಪೊಸ್ತಲರೊಂದಿಗೆ ಪುನಃ ಸೇರಿಕೊಳ್ಳುವ ಮೂಲಕ ನಿಜ ನಂಬಿಕೆಯನ್ನು ತೋರಿಸಿದನು. ದುಃಖ ಅಥವಾ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಿರುವಾಗ ಒಬ್ಬ ವ್ಯಕ್ತಿಗೆ ಯಾರೊಂದಿಗೂ ಬೆರೆಯದೆ ಒಂಟಿಯಾಗಿರಲು ಮನಸ್ಸಾಗಬಹುದು. ಆದರೆ ಅದು ಅಪಾಯಕರ. (ಜ್ಞಾನೋಕ್ತಿ 18:1) ಅಂಥ ಸಂದರ್ಭದಲ್ಲಿ ನಮ್ಮ ಜೊತೆವಿಶ್ವಾಸಿಗಳಿಗೆ ಅಂಟಿಕೊಂಡು, ದೇವರ ಸೇವೆಯನ್ನು ಮುಂದುವರಿಸಿಕೊಂಡು ಹೋಗಲು ಬೇಕಾದ ಬಲವನ್ನು ಪಡೆದುಕೊಳ್ಳುವುದೇ ವಿವೇಕಯುತ ಕ್ರಮ.—ಇಬ್ರಿಯ 10:24, 25.

ಪೇತ್ರನು ಯೇಸುವಿನ ಇತರ ಶಿಷ್ಯರೊಂದಿಗೆ ಇದ್ದದ್ದರಿಂದಲೇ ಯೇಸುವಿನ ಮೃತದೇಹ ಸಮಾಧಿಯಲ್ಲಿಲ್ಲ ಎಂಬ ಆಘಾತಕಾರಿ ವಿಷಯ ಅವನಿಗೂ ತಿಳಿಯಿತು. ಕೂಡಲೇ ಅವನೂ ಯೋಹಾನನೂ ಯೇಸುವಿನ ಸಮಾಧಿಯ ಬಳಿ ಓಡಿದರು. ಪ್ರಾಯದಲ್ಲಿ ಪೇತ್ರನಿಗಿಂತ ಚಿಕ್ಕವನಾಗಿದ್ದಿರಬಹುದಾದ ಯೋಹಾನನು ಸಮಾಧಿ ಬಳಿ ಮೊದಲು ತಲಪಿದನು. ಯೇಸುವನ್ನು ಹೂಣಿಟ್ಟ ಬಳಿಕ ಸಮಾಧಿಯ ಬಾಗಿಲಿಗೆ ಭದ್ರವಾಗಿ ಮುಚ್ಚಲಾಗಿದ್ದ ಕಲ್ಲು ಉರುಳಿಸಲ್ಪಟ್ಟಿರುವುದನ್ನು ಕಂಡು ಒಳಹೋಗಲು ಅವನು ಸ್ವಲ್ಪ ಹಿಂಜರಿದನು. ಆದರೆ ಪೇತ್ರನು ಹಿಂಜರಿಯಲಿಲ್ಲ. ಅವನು ಓಡೋಡಿ ಬಂದದ್ದರಿಂದ ಏದುಸಿರು ಬಿಡುತ್ತಿದ್ದನಾದರೂ ನೇರವಾಗಿ ಒಳಗೆ ಹೋದನು. ಅಲ್ಲಿ ನೋಡಿದರೆ ಯೇಸುವಿನ ದೇಹ ನಾಪತ್ತೆ!—ಯೋಹಾನ 20:3-9.

ಯೇಸುವಿನ ಪುನರುತ್ಥಾನ ಆಗಿದೆಯೆಂದು ಪೇತ್ರನು ನಂಬಿದನೋ? ಮೊದಮೊದಲು ನಂಬಲಿಲ್ಲ. ಯೇಸು ಜೀವಿತನಾಗಿ ಎದ್ದಿರುವುದನ್ನು ತಮಗೆ ದೇವದೂತರು ತಿಳಿಸಿದ್ದಾರೆಂದು ಕೆಲವು ದೇವಭಕ್ತ ಸ್ತ್ರೀಯರು ಹೇಳಿದಾಗಲೂ ಅವನು ನಂಬಲಿಲ್ಲ. (ಲೂಕ 23:55; 24:11) ಆದರೆ ಪೇತ್ರನ ಮನಸ್ಸಿನಲ್ಲಿ ಮಡುಗಟ್ಟಿದ್ದ ಎಲ್ಲ ದುಃಖ ಮತ್ತು ಸಂಶಯ ಆ ದಿನದ ಕೊನೆಯಷ್ಟಕ್ಕೆ ಕರಗಿಹೋಗಿತ್ತು. ಏಕೆಂದರೆ ಯೇಸು ಜೀವಿತನಾಗಿ ಎದ್ದಿದ್ದನು ಮತ್ತು ಆತನೀಗ ಒಬ್ಬ ಶಕ್ತಿಶಾಲಿ ಆತ್ಮಜೀವಿಯಾಗಿದ್ದನು! ತನ್ನ ಎಲ್ಲ ಅಪೊಸ್ತಲರಿಗೆ ಕಾಣಿಸಿಕೊಂಡನು. ಆದರೆ ಅದಕ್ಕೂ ಮುಂಚೆ ಅದೇ ದಿನದಂದು ಪೇತ್ರನಿಗೆ ಮಾತ್ರ ಕಾಣಿಸಿಕೊಂಡಿದ್ದನು. “ಕರ್ತನು ಎಬ್ಬಿಸಲ್ಪಟ್ಟಿದ್ದಾನೆ ಎಂಬುದು ನಿಜ, ಅವನು ಸೀಮೋನನಿಗೆ ಕಾಣಿಸಿಕೊಂಡನು” ಎಂದು ಇತರ ಅಪೊಸ್ತಲರು ಹೇಳಿದರು. (ಲೂಕ 24:34) ಹಾಗೇ ಸಮಯಾನಂತರ ಅಪೊಸ್ತಲ ಪೌಲನು ಕೂಡ ಆ ಗಮನಾರ್ಹ ದಿನದ ಕುರಿತು ಬರೆಯುತ್ತಾ, ಯೇಸು “ಕೇಫನಿಗೂ ಬಳಿಕ ಹನ್ನೆರಡು ಮಂದಿಗೂ ಕಾಣಿಸಿಕೊಂಡನು” ಎಂದು ಹೇಳಿದನು. (1 ಕೊರಿಂಥ 15:5) ಕೇಫ ಮತ್ತು ಸೀಮೋನ ಎಂಬುದು ಪೇತ್ರನ ಇನ್ನೆರಡು ಹೆಸರುಗಳು. ಯೇಸು ಪುನರುತ್ಥಾನಗೊಂಡ ದಿನವೇ ಪೇತ್ರನು ಒಬ್ಬನೇ ಇದ್ದಾಗ ಅವನಿಗೆ ಕಾಣಿಸಿಕೊಂಡನು.

ಯೇಸು ಮತ್ತು ಪೇತ್ರನ ಆ ವಿಶೇಷ ಪುನರ್ಮಿಲನದ ಸಮಯದಲ್ಲಿ ಏನೆಲ್ಲ ನಡೆಯಿತೆಂದು ಬೈಬಲ್‌ ವಿವರಿಸುವುದಿಲ್ಲ. ಆದರೆ ಆ ಸಮಯದಲ್ಲಿ ತನ್ನ ಪ್ರೀತಿಯ ಕರ್ತನು ಪುನಃ ಜೀವಿತನಾಗಿರುವುದನ್ನು ನೋಡಲು ಮತ್ತು ತನ್ನ ತಪ್ಪಿಗಾಗಿ ಪಶ್ಚಾತ್ತಾಪವನ್ನು ವ್ಯಕ್ತಪಡಿಸಲು ಸಂದರ್ಭ ಸಿಕ್ಕಿದ್ದಕ್ಕಾಗಿ ಪೇತ್ರನು ಎಷ್ಟು ಭಾವುಕನಾದನೆಂದು ನಾವು ಕಲ್ಪಿಸಿಕೊಳ್ಳಬಹುದಷ್ಟೆ. ಅವನಿಗೀಗ ಬೇರೇನೂ ಬೇಕಾಗಿರಲಿಲ್ಲ. ಯೇಸುವಿನಿಂದ ಕ್ಷಮೆಯೊಂದೇ ಬೇಕಾಗಿತ್ತು. ಯೇಸು ಪೇತ್ರನನ್ನು ಉದಾರವಾಗಿ ಕ್ಷಮಿಸಿದನೆಂಬದರಲ್ಲಿ ಸಂಶಯವೇ ಇಲ್ಲ. ಇದನ್ನು ಇಂದು ಗಂಭೀರ ಪಾಪಗೈದಿರುವ ಕ್ರೈಸ್ತರು ನೆನಪಿನಲ್ಲಿಡತಕ್ಕದ್ದು. ದೇವರು ಕ್ಷಮಿಸಲಾಗದಂಥ ದೊಡ್ಡ ತಪ್ಪನ್ನು ಮಾಡಿದ್ದಾರೆಂದು ಅವರು ಎಂದಿಗೂ ಎಣಿಸಬಾರದು. ಯೇಸು ಪೇತ್ರನನ್ನು ಕ್ಷಮಿಸುವ ಮೂಲಕ “ಮಹಾಕೃಪೆಯಿಂದ ಕ್ಷಮಿಸುವ” ತನ್ನ ತಂದೆಯನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸಿದನು.—ಯೆಶಾಯ 55:7.

ಪೇತ್ರನಿಗೆ ಕ್ಷಮೆ ಸಿಕ್ಕಿದ್ದಕ್ಕೆ ಇನ್ನಷ್ಟು ಪುರಾವೆ

ಯೇಸು ಅಪೊಸ್ತಲರಿಗೆ ಗಲಿಲಾಯಕ್ಕೆ ಹೋಗುವಂತೆ ಹೇಳಿದನು. ಅಲ್ಲಿ ಅವರು ಆತನನ್ನು ಪುನಃ ನೋಡಲಿದ್ದರು. ಅವರು ಅಲ್ಲಿ ತಲಪಿದಾಗ ಪೇತ್ರನು ಗಲಿಲಾಯ ಸಮುದ್ರದಲ್ಲಿ ಮೀನುಹಿಡಿಯಲು ಹೋದನು. ಅವನೊಂದಿಗೆ ಇತರ ಅನೇಕರು ಸೇರಿಕೊಂಡರು. ಪೇತ್ರನು ಈ ಹಿಂದೆ ತನ್ನ ಹೆಚ್ಚಿನ ಸಮಯವನ್ನು ಎಲ್ಲಿ ಕಳೆದಿದ್ದನೋ ಆ ಸರೋವರಕ್ಕೆ ಈಗ ಪುನಃ ಒಮ್ಮೆ ಹೋದನು. ಕಿರ್ರೆನ್ನುತ್ತಾ ಚಲಿಸುತ್ತಿದ್ದ ದೋಣಿ, ಲಪಲಪನೆ ದಡಕ್ಕೆ ಬಡಿಯುತ್ತಿದ್ದ ಅಲೆಗಳು, ಕೈಯಲ್ಲಿ ಹಿಡಿದಿದ್ದ ಒರಟಾದ ಬಲೆಗಳು ಇವೆಲ್ಲ ಅವನಿಗೆ ಚಿರಪರಿಚಿತವಾಗಿದ್ದರಿಂದ ತುಂಬ ಹಿತವೆನಿಸಿತು. ಭೂಮಿಯ ಮೇಲೆ ಯೇಸುವಿನ ಶುಶ್ರೂಷೆ ಕೊನೆಗೊಂಡದ್ದರಿಂದ ಆ ರಾತ್ರಿ ಪೇತ್ರನು ಮುಂದೆ ತಾನೇನು ಮಾಡಬೇಕೆಂದು ಯೋಚಿಸಿರಬಹುದೋ? ಒಬ್ಬ ಬೆಸ್ತನಾಗಿ ಒಂದು ವಿವಾದರಹಿತ ಜೀವನ ಸಾಗಿಸುವ ಮನಸ್ಸಾಯಿತೋ? ಅವನು ಹಾಗೆ ಯೋಚಿಸಿರಲಿ ಇಲ್ಲದಿರಲಿ ಆ ರಾತ್ರಿಯಂತೂ ಅವರಿಗೆ ಮೀನೇ ಸಿಗಲಿಲ್ಲ.—ಮತ್ತಾಯ 26:32; ಯೋಹಾನ 21:1-3.

ಆದರೆ ಬೆಳಗ್ಗಿನ ಜಾವದಲ್ಲಿ ದಡದಲ್ಲಿದ್ದ ಒಬ್ಬ ವ್ಯಕ್ತಿ ಅವರಿಗೆ ದೋಣಿಯ ಇನ್ನೊಂದು ಬದಿಯಲ್ಲಿ ಬಲೆಬೀಸುವಂತೆ ಕೂಗಿ ಹೇಳಿದನು. ಅದರಂತೆ ಬಲೆಬೀಸಿದಾಗ ಅವರಿಗೆ 153 ಮೀನುಗಳು ಸಿಕ್ಕಿದವು! ಆ ವ್ಯಕ್ತಿ ಯಾರೆಂದು ಪೇತ್ರನಿಗೆ ಗೊತ್ತಾಯಿತು. ಅವನು ದೋಣಿಯಿಂದ ಧುಮುಕಿ ಈಜಿ ದಡ ಸೇರಿದನು. ಅಲ್ಲಿ ಯೇಸು ಇದ್ದಲಿನಿಂದ ಸುಟ್ಟ ಮೀನುಗಳನ್ನು ಅವನಿಗೂ ಉಳಿದವರಿಗೂ ತಿನ್ನಲು ಕೊಟ್ಟನು. ನಂತರ ಪೇತ್ರನನ್ನು ನಿರ್ದೇಶಿಸಿ ಮಾತಾಡಿದನು.

ಅವರು ಹಿಡಿದಿದ್ದ ಮೀನಿನ ದೊಡ್ಡ ರಾಶಿಗೆ ಕೈತೋರಿಸುತ್ತಾ, “ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?” ಎಂದು ಯೇಸು ಪೇತ್ರನಿಗೆ ಕೇಳಿದನು. ಪೇತ್ರನ ಹೃದಯದಲ್ಲಿ, ಯೇಸುವಿನ ಮೇಲಿನ ಪ್ರೀತಿಗಿಂತಲೂ ಮೀನು ಹಿಡಿಯುವ ಕಸುಬಿನ ಮೇಲಿನ ಪ್ರೀತಿ ಹೆಚ್ಚಾಗಿತ್ತೋ? ಪೇತ್ರನು ಹೇಗೆ ಮೂರು ಸಾರಿ ಯೇಸುವನ್ನು ಅಲ್ಲಗಳೆದಿದ್ದನೋ ಅದೇ ರೀತಿ ಈಗ ಯೇಸುವಿನ ಮೇಲಿದ್ದ ಪ್ರೀತಿಯನ್ನು ತನ್ನ ಮಿತ್ರರ ಮುಂದೆ ಮೂರು ಸಲ ದೃಢೀಕರಿಸುವ ಒಂದು ಅವಕಾಶವನ್ನು ಯೇಸು ಕೊಟ್ಟನು. ಪೇತ್ರನು ಪ್ರತಿಸಲ ತನ್ನ ಪ್ರೀತಿಯನ್ನು ದೃಢೀಕರಿಸುತ್ತಾ ಹೋದಂತೆ ಅದನ್ನು ಹೇಗೆ ತೋರಿಸಬೇಕೆಂದು ಯೇಸು ತಿಳಿಸಿದನು. ಹೇಗೆಂದರೆ, ಬೇರೆಲ್ಲದಕ್ಕಿಂತಲೂ ಪವಿತ್ರ ಸೇವೆಗೆ ಪ್ರಾಧಾನ್ಯ ಕೊಡುತ್ತಾ ಕ್ರಿಸ್ತನ ಕುರಿಹಿಂಡಿಗೆ ಅಂದರೆ ನಿಷ್ಠಾವಂತ ಅನುಯಾಯಿಗಳಿಗೆ ಆಧ್ಯಾತ್ಮಿಕ ಆಹಾರವನ್ನು ಉಣಿಸುತ್ತಾ ಪಾಲಿಸುವ ಮೂಲಕವೇ.—ಯೋಹಾನ 21:4-17.

ಹೀಗೆ ತನಗೂ ತನ್ನ ತಂದೆಗೂ ಪೇತ್ರನು ಇನ್ನೂ ಉಪಯುಕ್ತನಾಗಿದ್ದಾನೆಂಬ ಆಶ್ವಾಸನೆಯನ್ನು ಯೇಸು ಕೊಟ್ಟನು. ಕ್ರಿಸ್ತನ ನಿರ್ದೇಶನದಡಿಯಿರುವ ಸಭೆಯಲ್ಲಿ ಪೇತ್ರನು ಮಹತ್ವಪೂರ್ಣ ಪಾತ್ರವಹಿಸಲಿದ್ದನು. ಇದು ಯೇಸು ಪೇತ್ರನನ್ನು ಸಂಪೂರ್ಣವಾಗಿ ಕ್ಷಮಿಸಿದ್ದರ ಪ್ರಬಲವಾದ ಸಾಕ್ಷ್ಯವೇ ಸರಿ! ಯೇಸು ತೋರಿಸಿದ ಕರುಣೆ ನಿಜವಾಗಿಯೂ ಪೇತ್ರನ ಮನಸ್ಪರ್ಶಿಸಿತು ಮತ್ತು ಅವನ ಮೇಲೆ ಗಾಢ ಪರಿಣಾಮಬೀರಿತು.

ತನಗೆ ನೀಡಿದ್ದ ನೇಮಕವನ್ನು ಹಲವಾರು ವರ್ಷಗಳ ವರೆಗೆ ಅಂದರೆ ಕೊನೇ ತನಕ ನಂಬಿಗಸ್ತಿಕೆಯಿಂದ ಪೇತ್ರನು ಪೂರೈಸಿದನು. ಯೇಸು ತನ್ನ ಮರಣದ ಮುಂಚಿನ ದಿನ ಆಜ್ಞೆಯಿತ್ತಂತೆ ಪೇತ್ರನು ತನ್ನ ಸಹೋದರರನ್ನು ಬಲಪಡಿಸಿದನು. ದಯೆಯಿಂದಲೂ ತಾಳ್ಮೆಯಿಂದಲೂ ಕ್ರಿಸ್ತನ ಅನುಯಾಯಿಗಳನ್ನು ನೋಡಿಕೊಳ್ಳುತ್ತಾ ಅವರಿಗೆ ಆಧ್ಯಾತ್ಮಿಕ ಆಹಾರವನ್ನು ಉಣಿಸಿದನು. ಸೀಮೋನ ಎಂಬ ಹೆಸರಿನ ಈ ವ್ಯಕ್ತಿಗೆ ಯೇಸು ಬಂಡೆ ಎಂಬರ್ಥವುಳ್ಳ ಪೇತ್ರ ಎಂಬ ಹೆಸರನ್ನು ಕೊಟ್ಟಿದ್ದನು. ಅವನು ಆ ಹೆಸರಿಗೆ ತಕ್ಕಂತೆ ಜೀವಿಸುತ್ತಾ ಸಭೆಯಲ್ಲಿ ಸತ್ಪ್ರಭಾವಬೀರುವ ಅಚಲ, ದೃಢ ಮತ್ತು ಭರವಸಾರ್ಹ ವ್ಯಕ್ತಿಯಾಗಿದ್ದನು. ಇದಕ್ಕೆ ಅವನು ಪ್ರೀತಿಯಿಂದ ಬರೆದ ಎರಡು ಪತ್ರಗಳೇ ಸಾಕ್ಷಿ. ಆ ಎರಡೂ ಪತ್ರಗಳು ಇಂದು ಬೈಬಲಿನಲ್ಲಿ ಅಮೂಲ್ಯ ಪುಸ್ತಕಗಳಾಗಿವೆ. ಪೇತ್ರನು ಯೇಸುವಿನಿಂದ ಕಲಿತ ಕ್ಷಮೆಯ ಪಾಠವನ್ನು ಎಂದಿಗೂ ಮರೆಯಲಿಲ್ಲ ಎಂಬದನ್ನೂ ಆ ಪುಸ್ತಕಗಳು ತೋರಿಸುತ್ತವೆ.—1 ಪೇತ್ರ 3:8, 9; 4:8.

ಆ ಪಾಠವನ್ನು ನಾವು ಕೂಡ ಕಲಿಯೋಣ. ನಾವು ಮಾಡುವ ತಪ್ಪುಗಳಿಗಾಗಿ ಪ್ರತಿದಿನ ದೇವರ ಬಳಿ ಕ್ಷಮೆಯಾಚಿಸುತ್ತೇವೋ? ದೇವರು ನಮ್ಮನ್ನು ಕ್ಷಮಿಸಿದ್ದಾನೆಂದು ಅಂಗೀಕರಿಸಿ ಆತನ ಕ್ಷಮೆ ನಮ್ಮ ಮನಸ್ಸಿನಲ್ಲಿರುವ ತಪ್ಪಿತಸ್ಥ ಭಾವನೆಯನ್ನು ತೊಳೆದು ಶುದ್ಧೀಕರಿಸಬಲ್ಲದೆಂದು ನಂಬುತ್ತೇವೋ? ಹಾಗೆಯೇ ನಾವೂ ಎಲ್ಲರನ್ನು ಕ್ಷಮಿಸುತ್ತೇವೋ? ಹೀಗೆ ಮಾಡುವಾಗ ನಾವು ಪೇತ್ರನ ನಂಬಿಕೆಯನ್ನೂ ಅವನ ಕರ್ತನ ಕರುಣೆಯನ್ನೂ ಅನುಕರಿಸುವೆವು. (w10-E 04/01)

[ಪುಟ 22ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪೇತ್ರನು ತನ್ನ ಅನೇಕ ತಪ್ಪುಗಳಿಗೆ ಯೇಸುವಿನಿಂದ ಕ್ಷಮೆಪಡೆದಿದ್ದನು. ಪ್ರತಿದಿನ ಕ್ಷಮೆಯ ಅಗತ್ಯವಿಲ್ಲದವರು ನಮ್ಮಲ್ಲಿ ಯಾರಿದ್ದಾರೆ?

[ಪುಟ 23ರಲ್ಲಿರುವ ಚಿತ್ರ]

“ಕರ್ತನು ತಿರುಗಿ ಪೇತ್ರನನ್ನು ದೃಷ್ಟಿಸಿ ನೋಡಿದನು”

[ಪುಟ 24ರಲ್ಲಿರುವ ಚಿತ್ರ]

“ಕರ್ತನು . . . ಸೀಮೋನನಿಗೆ ಕಾಣಿಸಿಕೊಂಡನು”