ಬೈಬಲ್ ಯೇಸುವಿನ ಬಗ್ಗೆ ಎಲ್ಲವನ್ನೂ ಹೇಳುತ್ತದೋ?
ಬೈಬಲ್ ಯೇಸುವಿನ ಬಗ್ಗೆ ಎಲ್ಲವನ್ನೂ ಹೇಳುತ್ತದೋ?
ಯೇಸು ಗೊಲ್ಗೊಥಾದಲ್ಲಿ ಸತ್ತನೆಂದು ಬೈಬಲ್ ಹೇಳುತ್ತದಾದರೂ ನಿಜವಾಗಿ ಆತನು ಸಾಯದೆ ಬದುಕಿ ಉಳಿದನೋ? ಆತನು ಮಗ್ದಲದ ಮರಿಯಳನ್ನು ಮದುವೆಯಾಗಿ ಮಕ್ಕಳನ್ನು ಪಡೆದನೋ? ಅಥವಾ ಆತನು ಎಲ್ಲ ಪ್ರಾಪಂಚಿಕ ಭೋಗಗಳನ್ನು ತ್ಯಜಿಸಿ ತಪಸ್ಸು ಮಾಡಿದ ಯೋಗಿಯಾಗಿದ್ದನೋ? ಯೇಸು ನಿಜವಾಗಿ ಕಲಿಸಿದ ಬೋಧನೆಗಳು ನಾವು ಬೈಬಲ್‌ನಲ್ಲಿ ಓದುವ ಆತನ ಬೋಧನೆಗಳಿಗಿಂತ ತೀರ ಭಿನ್ನವಾಗಿದ್ದವೋ?
ಇತ್ತೀಚಿನ ವರ್ಷಗಳಲ್ಲಿ ಇಂಥ ಊಹಾಪೋಹಗಳು ಎಲ್ಲೆಡೆಯೂ ಹಬ್ಬಿಕೊಂಡಿವೆ. ಇವುಗಳ ಪುನರ್ ಆಗಮನಕ್ಕೆ ಒಂದು ಕಾರಣ ಜನಪ್ರಿಯ ಸಿನೆಮಾಗಳೂ ಕಾದಂಬರಿಗಳೂ ಆಗಿವೆ. ಚಿತ್ರವಿಚಿತ್ರವಾದ ಕಲ್ಪನಾಕಥೆಗಳಲ್ಲದೆ, ಕ್ರಿ.ಶ. 2ನೇ ಮತ್ತು 3ನೇ ಶತಮಾನಗಳಲ್ಲಿ ಬರೆಯಲಾದ ಅಪಾಕ್ರಿಫಲ್ ಬರಹಗಳ (ಪ್ರಮಾಣಬದ್ಧತೆಯ ವಿಷಯದಲ್ಲಿ ಸಂಶಯವಿರುವ ಬರಹಗಳು) ಮೇಲೆ ಆಧಾರಿತವಾದ ಅನೇಕ ಪುಸ್ತಕಗಳೂ ಲೇಖನಗಳೂ ಇವೆ. ಇವು, ಯೇಸುವಿನ ಬಗ್ಗೆ ಸುವಾರ್ತಾ ಪುಸ್ತಕಗಳಲ್ಲಿ ಬಿಟ್ಟುಬಿಡಲಾಗಿರುವ ವಾಸ್ತವಾಂಶಗಳು ಅಪಾಕ್ರಿಫಲ್ ಬರಹಗಳಲ್ಲಿವೆಯೆಂದು ಪ್ರತಿಪಾದಿಸುತ್ತವೆ. ಈ ಪ್ರತಿಪಾದನೆಗಳು ನಿಜವೋ? ಯೇಸುವಿನ ಬಗ್ಗೆ ಬೈಬಲ್ ನಮಗೆ ಎಲ್ಲವನ್ನೂ ಸತ್ಯವಾಗಿ ಹೇಳುತ್ತದೆಂದು ಖಾತ್ರಿಯಿಂದಿರಬಲ್ಲೆವೋ?
ಇಂಥ ಪ್ರಶ್ನೆಗಳನ್ನು ಉತ್ತರಿಸಲಿಕ್ಕಾಗಿ ಮುಖ್ಯವಾಗಿ ಮೂರು ವಿಷಯಗಳನ್ನು ತಿಳಿದುಕೊಳ್ಳುವುದು ಸಹಾಯಕರ. ಮೊದಲನೆಯದಾಗಿ, ಸುವಾರ್ತಾ ವೃತ್ತಾಂತಗಳನ್ನು ಯಾರು, ಯಾವಾಗ ಬರೆದರೆಂಬ ಮಹತ್ವಭರಿತ ಮಾಹಿತಿಯನ್ನು ನಾವು ತಿಳಿದುಕೊಳ್ಳಬೇಕು. ಎರಡನೆಯದಾಗಿ, ಬೈಬಲ್‌ನಲ್ಲಿರಬೇಕಾದ ಅಧಿಕೃತ ಪುಸ್ತಕಗಳ ಪಟ್ಟಿಯನ್ನು ಯಾರು, ಹೇಗೆ ನಿರ್ಧರಿಸಿದರು ಎಂಬದನ್ನು ತಿಳಿಯಬೇಕು; ಮೂರನೆಯದಾಗಿ, ಅಪಾಕ್ರಿಫಲ್ ಬರಹಗಳ ಸ್ವಲ್ಪ ಹಿನ್ನೆಲೆ ಮತ್ತು ಅವು ಹೇಗೆ ಬೈಬಲಿನಲ್ಲಿರುವ ಅಧಿಕೃತ ಪುಸ್ತಕಗಳಿಗಿಂತ ಭಿನ್ನ ಎಂಬುದನ್ನು ತಿಳಿಯುವುದು ಅಗತ್ಯ.ಕ್ರೈಸ್ತ ಗ್ರೀಕ್ ಶಾಸ್ತ್ರಗಳನ್ನು ಯಾವಾಗ, ಯಾರು ಬರೆದರು?
ಕೆಲವು ಮೂಲಗಳಿಗನುಸಾರ, ಮತ್ತಾಯನ ಸುವಾರ್ತಾ ಪುಸ್ತಕವನ್ನು ಕ್ರಿಸ್ತನ ಮರಣಾನಂತರ ಎಂಟನೇ ವರ್ಷದಲ್ಲಿ ಅಂದರೆ ಸುಮಾರು ಕ್ರಿ.ಶ. 41ರಲ್ಲಿ ಬರೆಯಲಾಗಿತ್ತು. ಆದರೆ ಅನೇಕ ವಿದ್ವಾಂಸರು ಆ ಪುಸ್ತಕವನ್ನು ಅದಕ್ಕೂ ನಂತರದ ಸಮಯದಲ್ಲಿ ಬರೆಯಲಾಗಿತ್ತೆಂದು ಹೇಳುತ್ತಾರೆ. ಹಾಗಿದ್ದರೂ, ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಎಲ್ಲ ಪುಸ್ತಕಗಳನ್ನು ಕ್ರಿ.ಶ. ಪ್ರಥಮ ಶತಮಾನದಲ್ಲೇ ಬರೆದು ಮುಗಿಸಲಾಗಿತ್ತೆಂಬದಕ್ಕೆ ಹೆಚ್ಚಿನ ವಿದ್ವಾಂಸರಲ್ಲಿ ಒಮ್ಮತವಿದೆ.
ಯೇಸುವಿನ ಜೀವನ, ಮರಣ ಮತ್ತು ಪುನರುತ್ಥಾನಕ್ಕೆ ಪ್ರತ್ಯಕ್ಷಸಾಕ್ಷಿಗಳಾಗಿದ್ದವರು ಪ್ರಥಮ ಶತಮಾನದಲ್ಲಿ ಇನ್ನೂ ಬದುಕಿದ್ದರು. ಅವರು ಸುವಾರ್ತಾ ವೃತ್ತಾಂತಗಳು ಸತ್ಯವೆಂದು ದೃಢೀಕರಿಸಸಾಧ್ಯವಿತ್ತು. ಅಷ್ಟೇ ಅಲ್ಲ, ಸುಳ್ಳು ಸಂಗತಿಗಳನ್ನು ಸುಲಭವಾಗಿ ಬಯಲಿಗೆಳೆಯಲೂ ಸಾಧ್ಯವಿತ್ತು. ಪ್ರೊಫೆಸರ್ ಎಫ್. ಎಫ್. ಬ್ರೂಸ್ ಹೇಳುವುದು: “ಆರಂಭದ ಅಪೊಸ್ತಲರು ತಮ್ಮ ಕೇಳುಗರಿಗೆ, ‘ಈ ವಿಷಯಗಳಿಗೆ ನಾವೇ ಸಾಕ್ಷಿಗಳು’ ಎಂದು ಮಾತ್ರ ಹೇಳದೆ, ‘ನಿಮಗೆ ತಿಳಿದಿರುವಂತೆ’ ಎಂದೂ ಹೇಳುವ ಮೂಲಕ ತಮ್ಮ ಕೇಳುಗರಿಗೆ ತಿಳಿದಿದ್ದ ಸಂಗತಿಗಳಿಗೆ ದೃಢಭರವಸೆಯಿಂದ ಸೂಚಿಸಿದರು (ಅ. ಕಾರ್ಯಗಳು 2:22). ಇದು, ಆ ಅಪೊಸ್ತಲರ ಸಾರುವ ಕೆಲಸದ ವೈಶಿಷ್ಟ್ಯಗಳಲ್ಲಿ ಒಂದಾಗಿತ್ತು.”
ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಬರಹಗಾರರು ಯಾರಾಗಿದ್ದರು? ಇವರಲ್ಲಿ, ಯೇಸುವಿನ 12 ಅಪೊಸ್ತಲರಲ್ಲಿ ಕೆಲವರೂ ಇದ್ದರು. ಕ್ರಿ.ಶ. 33ರ ಪಂಚಾಶತ್ತಮದ ದಿನದಂದು ಕ್ರೈಸ್ತ ಸಭೆ ಸ್ಥಾಪನೆಯಾದಾಗ ಬೈಬಲಿನ ಇತರ ಬರಹಗಾರರಾದ ಯಾಕೋಬ, ಯೂದ, ಬಹುಶಃ ಮಾರ್ಕ ಮತ್ತು 12 ಅಪೊಸ್ತಲರು ಹಾಜರಿದ್ದರು. ಪೌಲನನ್ನು ಸೇರಿಸಿ ಎಲ್ಲ ಬರಹಗಾರರಿಗೆ ಆರಂಭದ ಕ್ರೈಸ್ತ ಸಭೆಯ ಆಡಳಿತ ಮಂಡಲಿಯೊಂದಿಗೆ ಆಪ್ತ ಒಡನಾಟವಿತ್ತು. ಈ ಮೊತ್ತಮೊದಲ ಆಡಳಿತ ಮಂಡಲಿಯು ಅಪೊಸ್ತಲರಿಂದಲೂ ಯೆರೂಸಲೇಮಿನಲ್ಲಿದ್ದ ಹಿರಿಯರಿಂದಲೂ ರಚಿತವಾಗಿತ್ತು.—ಅ. ಕಾರ್ಯಗಳು 15:2, 6, 12-14, 22; ಗಲಾತ್ಯ 2:7-10.
ಯೇಸು ತಾನು ಆರಂಭಿಸಿದ್ದ ಸಾರುವ ಮತ್ತು ಬೋಧಿಸುವ ಕೆಲಸವನ್ನು ಮುಂದುವರಿಸುವ ನೇಮಕವನ್ನು ತನ್ನ ಹಿಂಬಾಲಕರಿಗೆ ಕೊಟ್ಟನು. (ಮತ್ತಾಯ 28:19, 20) ಆತನು ಹೀಗೂ ಅಂದನು: “ನಿಮಗೆ ಕಿವಿಗೊಡುವವನು ನನಗೂ ಕಿವಿಗೊಡುವವನಾಗಿದ್ದಾನೆ.” (ಲೂಕ 10:16) ಅಷ್ಟುಮಾತ್ರವಲ್ಲದೆ ದೇವರ ಕಾರ್ಯಕಾರಿ ಶಕ್ತಿಯಾದ ಪವಿತ್ರಾತ್ಮವು ಅವರನ್ನು ಆ ಕೆಲಸಕ್ಕಾಗಿ ಬಲಪಡಿಸುವುದೆಂದು ಮಾತುಕೊಟ್ಟನು. ಹೀಗಿರುವುದರಿಂದ, ಈ ಪವಿತ್ರಾತ್ಮವನ್ನು ಹೊಂದಿದ್ದಕ್ಕೆ ಸ್ಪಷ್ಟ ರುಜುವಾತನ್ನು ಕೊಟ್ಟ ಅಪೊಸ್ತಲರ ಇಲ್ಲವೆ ಅವರ ಆಪ್ತ ಜೊತೆಕೆಲಸಗಾರರ ಬರಹಗಳನ್ನು ಆದಿ ಕ್ರೈಸ್ತರು ಪಡೆದಾಗ ಸಂದೇಹಪಡದೆ ಅವನ್ನು ಅಧಿಕೃತವೆಂದು ಅಂಗೀಕರಿಸಿದರು.
ಕೆಲವು ಬೈಬಲ್ ಬರಹಗಾರರು ಸಹ ತಮ್ಮ ಜೊತೆ ಬರಹಗಾರರ ಅಧಿಕಾರ ಮತ್ತು ಅವರಿಗಿದ್ದ ದೈವಿಕ ಪ್ರೇರಣೆಯ ಬಗ್ಗೆ ಸಾಕ್ಷ್ಯಕೊಟ್ಟರು. ಉದಾಹರಣೆಗೆ, ಅಪೊಸ್ತಲ ಪೇತ್ರನು ಪೌಲನ ಪತ್ರಗಳಿಗೆ ಸೂಚಿಸಿ ಬರೆದನು. ಹೀಗೆ ಅವು ‘ಶಾಸ್ತ್ರಗ್ರಂಥದ ಉಳಿದ ಭಾಗಕ್ಕೆ’ ಸರಿಸಮವಾಗಿವೆ ಎಂದು ತೋರಿಸಿದನು. (2 ಪೇತ್ರ 3:15, 16) ಪೌಲನು ಸಹ ಅಪೊಸ್ತಲರು ಹಾಗೂ ಇತರ ಕ್ರೈಸ್ತ ಪ್ರವಾದಿಗಳು ದೇವಪ್ರೇರಣೆಯಿಂದ ಬರೆದರೆಂಬ ಸಂಗತಿಯನ್ನು ಅಂಗೀಕರಿಸಿದನು.—ಎಫೆಸ 3:5.
ಹೀಗಿರುವುದರಿಂದ ಸುವಾರ್ತಾ ಪುಸ್ತಕಗಳು ವಿಶ್ವಾಸಾರ್ಹ ಮತ್ತು ನೈಜ ಎಂಬದಕ್ಕೆ ಬಲವಾದ ಆಧಾರವಿದೆ. ಅವು ಬರೀ ದಂತಕಥೆಗಳಲ್ಲ, ಅಜ್ಜಿಕಥೆಗಳಲ್ಲ. ಅವು ಜಾಗ್ರತೆಯಿಂದ ದಾಖಲಿಸಲಾದ ಇತಿಹಾಸವಾಗಿವೆ. ಪ್ರತ್ಯಕ್ಷಸಾಕ್ಷಿಗಳ ಹೇಳಿಕೆಗಳ ಮೇಲೆ ಆಧಾರಿತವಾಗಿವೆ. ದೇವರ ಪವಿತ್ರಾತ್ಮದಿಂದ ಪ್ರೇರಿತರಾದ ಪುರುಷರಿಂದ ಬರೆಯಲಾಗಿವೆ.
ಅಧಿಕೃತ ಪುಸ್ತಕಗಳ ಪಟ್ಟಿಯನ್ನು ಆಯ್ಕೆಮಾಡಿದವರು ಯಾರು?
ಶತಮಾನಗಳ ನಂತರ ಚಕ್ರವರ್ತಿ ಕಾನ್‌ಸ್ಟೆಂಟೀನನ ನಿರ್ದೇಶನದ ಕೆಳಗಿದ್ದ ಚರ್ಚ್ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಅಧಿಕೃತ ಪುಸ್ತಕಗಳ ಪಟ್ಟಿಯನ್ನು ಆಯ್ಕೆಮಾಡಿತ್ತೆಂದು ಕೆಲವು ಲೇಖಕರ ಅಂಬೋಣ. ಆದರೆ ವಾಸ್ತವಾಂಶಗಳು ಬೇರೆ.
ಉದಾಹರಣೆಗೆ, ಚರ್ಚ್ ಇತಿಹಾಸದ ಪ್ರೊಫೆಸರ್ ಆಸ್ಕರ್ ಸ್ಕಾರ್‌ಸೌನಾ ಹೇಳಿದ ಮಾತನ್ನು ಗಮನಿಸಿರಿ: “ಹೊಸ ಒಡಂಬಡಿಕೆಯಲ್ಲಿ ಯಾವ ಬರಹಗಳನ್ನು ಸೇರಿಸಬೇಕು ಯಾವುದನ್ನು ಸೇರಿಸಬಾರದು ಎಂಬುದನ್ನು ಯಾವುದೇ ಚರ್ಚ್ ಮಂಡಲಿಯಾಗಲಿ ಒಬ್ಬ ವ್ಯಕ್ತಿಯಾಗಲಿ ನಿರ್ಣಯಿಸಲಿಲ್ಲ . . .
ಅದರ ಆಯ್ಕೆಗಾಗಿ ತೀರ ಮುಕ್ತವಾದ, ಹೆಚ್ಚು ತಿಳುವಳಿಕೆಯಿಂದ ಕೂಡಿದ್ದ ಈ ಮುಂದಿನ ಮಾನದಂಡವನ್ನು ಬಳಸಲಾಗಿತ್ತು: ಕ್ರಿ.ಶ. ಪ್ರಥಮ ಶತಮಾನದಲ್ಲಿ ಅಪೊಸ್ತಲರು ಇಲ್ಲವೆ ಅವರ ಜೊತೆ ಕೆಲಸಗಾರರು ಬರೆದಂಥ ಬರಹಗಳನ್ನು ಭರವಸಾರ್ಹವೆಂದು ಪರಿಗಣಿಸಿ ಆಯ್ಕೆಮಾಡಲಾಗಿತ್ತು. ಆದರೆ ಆ ಸಮಯಾನಂತರ ಬರೆಯಲಾದ ಇತರ ಬರಹಗಳು, ಪತ್ರಗಳು ಇಲ್ಲವೆ ಸುವಾರ್ತಾ ಪುಸ್ತಕಗಳೆಂದು ಹೇಳಿಕೊಳ್ಳುವಂಥವುಗಳು ಆಯ್ಕೆಯಾಗಲಿಲ್ಲ . . . ಈ ಕ್ರಿಯಾಗತಿಯನ್ನು ಕಾನ್‌ಸ್ಟೆಂಟೀನನಿಗಿಂತ ಮತ್ತು ಅವನು ಸ್ಥಾಪಿಸಿದ್ದ ಚರ್ಚ್‌ಗಿಂತಲೂ ಎಷ್ಟೋ ಹಿಂದೆಯೇ ಪೂರೈಸಲಾಗಿತ್ತು. ನಮಗೆ ಹೊಸ ಒಡಂಬಡಿಕೆಯನ್ನು ಕೊಟ್ಟದ್ದು ಕಾನ್‌ಸ್ಟೆಂಟೀನ್ ಸ್ಥಾಪಿಸಿದ ಚರ್ಚ್ ಅಲ್ಲ ಬದಲಾಗಿ ತಮ್ಮ ನಂಬಿಕೆಗಾಗಿ ಹುತಾತ್ಮರಾದ ಕ್ರೈಸ್ತರೇ.”ಕ್ರೈಸ್ತ ಗ್ರೀಕ್ ಶಾಸ್ತ್ರಗಳನ್ನು ತನ್ನ ಅಧ್ಯಯನದ ಕ್ಷೇತ್ರವನ್ನಾಗಿ ಮಾಡಿರುವ ಇನ್ನೊಬ್ಬ ಪ್ರೊಫೆಸರ್ ಕೆನ್ ಬೇರ್ಡಿಂಗ್ ಈ ಅಧಿಕೃತ ಪುಸ್ತಕಗಳ ಪಟ್ಟಿ ನಿರ್ಧರಿಸಲ್ಪಟ್ಟದ್ದು ಹೇಗೆಂಬುದರ ಕುರಿತು ಹೀಗನ್ನುತ್ತಾರೆ: “ಹಿಂದಿನಿಂದಲೂ ಕ್ರೈಸ್ತರು ದೇವರ ಅಧಿಕೃತ ವಾಕ್ಯವೆಂದು ಪರಿಗಣಿಸಿದ್ದ ಪುಸ್ತಕಗಳನ್ನು ಚರ್ಚು ಅಂಗೀಕರಿಸಿತೇ ಹೊರತು ಯಾವ್ಯಾವ ಪುಸ್ತಕಗಳು ಅಧಿಕೃತ ಎಂಬ ಪಟ್ಟಿಯನ್ನು ಚರ್ಚು ನಿರ್ಧರಿಸಲಿಲ್ಲ ಎಂದು ಹೇಳುವುದೇ ಸೂಕ್ತ.”
ಆದರೆ, ಬೈಬಲಿನಲ್ಲಿರಬೇಕಾದ ಅಧಿಕೃತ ಪುಸ್ತಕಗಳ ಪಟ್ಟಿಯನ್ನು ನಿರ್ಧರಿಸಿದವರು ಪ್ರಥಮ ಶತಮಾನದ ಆ ನಮ್ರ ಕ್ರೈಸ್ತರು ಮಾತ್ರವೋ? ಹೆಚ್ಚು ಪ್ರಮುಖ ಮತ್ತು ಬಲಶಾಲಿಯಾದ ಶಕ್ತಿಯು ಕಾರ್ಯನಿರತವಾಗಿತ್ತೆಂದು ಬೈಬಲ್ ತಿಳಿಸುತ್ತದೆ.
ಬೈಬಲಿಗನುಸಾರ ಕ್ರೈಸ್ತ ಸಭೆಯ ಆರಂಭದ ದಶಕಗಳಲ್ಲಿ ಅದಕ್ಕೆ ಕೊಡಲಾದ ಪವಿತ್ರಾತ್ಮದ ಅದ್ಭುತಕರ ವರಗಳಲ್ಲಿ, “ಪ್ರೇರಿತ ಮಾತುಗಳನ್ನು ಅರ್ಥಮಾಡಿಕೊಳ್ಳುವ” ವರವೂ ಒಂದಾಗಿತ್ತು. (1 ಕೊರಿಂಥ 12:4, 10) ಹಾಗಾಗಿ, ಯಾವ ಮಾತುಗಳು ನಿಜವಾಗಿ ದೇವರಿಂದ ಪ್ರೇರಿತವಾಗಿವೆ ಯಾವುದು ಪ್ರೇರಿತವಲ್ಲ ಎಂಬುದನ್ನು ಗ್ರಹಿಸುವಂಥ ಅತಿಮಾನುಷ ಸಾಮರ್ಥ್ಯವನ್ನು ಕೆಲವು ಕ್ರೈಸ್ತರಿಗೆ ಕೊಡಲಾಗಿತ್ತು. ಆದುದರಿಂದ, ಈಗ ಬೈಬಲಿನಲ್ಲಿರುವ ಪುಸ್ತಕಗಳು ದೇವಪ್ರೇರಿತವೆಂದು ಆ ಕ್ರೈಸ್ತರು ಗುರುತಿಸಿದ್ದರು ಎಂಬ ಭರವಸೆ ಇಂದಿನ ಕ್ರೈಸ್ತರಿಗಿರಬಲ್ಲದು.
ಹಾಗಾದರೆ, ಬೈಬಲಿನ ಅಧಿಕೃತ ಪುಸ್ತಕಗಳ ಪಟ್ಟಿಯನ್ನು ಆರಂಭದ ಹಂತದಲ್ಲೇ ಪವಿತ್ರಾತ್ಮದ ನಿರ್ದೇಶನದಿಂದ ಸ್ಥಾಪಿಸಲಾಗಿತ್ತೆಂಬುದು ಸ್ಪಷ್ಟ. ಕ್ರಿ.ಶ. 2ನೇ ಶತಮಾನದ ಕೊನೆಯಿಂದ ಆರಂಭಿಸುತ್ತಾ ಕೆಲವು ಬರಹಗಾರರು ಆ ಪಟ್ಟಿಯಲ್ಲಿ ಬೈಬಲಿನ ಯಾವ ಪುಸ್ತಕಗಳಿವೆ ಎಂಬುದರ ಕುರಿತು ಹೇಳಿಕೆಗಳನ್ನು ಮಾಡಿದರೇ ಹೊರತು ಅದರಲ್ಲಿ ಯಾವ ಪುಸ್ತಕಗಳಿರಬೇಕೆಂದು ನಿರ್ಧರಿಸಲಿಲ್ಲ. ಅವರ ಹೇಳಿಕೆಗಳು, ಪವಿತ್ರಾತ್ಮದಿಂದ ನಿರ್ದೇಶಿಸಲ್ಪಟ್ಟ ತನ್ನ ಪ್ರತಿನಿಧಿಗಳ ಮೂಲಕ ದೇವರು ಈಗಾಗಲೇ ಸ್ವೀಕರಿಸಿದ್ದ ಪುಸ್ತಕಗಳಿಗೆ ಸಾಕ್ಷ್ಯ ಕೊಟ್ಟವು ಅಷ್ಟೇ.
ಇಂದು ಸಾಮಾನ್ಯವಾಗಿ ಸ್ವೀಕೃತವಾದ ಬೈಬಲಿನ ಅಧಿಕೃತ ಪುಸ್ತಕಗಳ ಪಟ್ಟಿಯ ಬಗ್ಗೆ ಪ್ರಾಚೀನ ಹಸ್ತಪ್ರತಿಗಳೂ ಮನಗಾಣಿಸುವಂಥ ಪುರಾವೆ ಕೊಡುತ್ತವೆ. ಗ್ರೀಕ್ ಶಾಸ್ತ್ರಗ್ರಂಥದ 5,000ಕ್ಕಿಂತಲೂ ಹೆಚ್ಚು ಹಸ್ತಪ್ರತಿಗಳು ಮೂಲ ಭಾಷೆಯಲ್ಲಿ ಲಭ್ಯ. ಕೆಲವೊಂದಂತೂ ಎರಡನೇ ಹಾಗೂ ಮೂರನೇ ಶತಮಾನದವುಗಳು. ಅಪಾಕ್ರಿಫಲ್ ಬರಹಗಳನ್ನಲ್ಲ, ಆ ಬರಹಗಳನ್ನೇ ಕ್ರಿಸ್ತ ಶಕದ ಆರಂಭದ ಶತಮಾನಗಳಲ್ಲಿ ಅಧಿಕೃತವೆಂದು ಪರಿಗಣಿಸಲಾಗಿತ್ತು. ಆದುದರಿಂದ ಇವುಗಳ ಪ್ರತಿಗಳನ್ನೇ ಮಾಡಿ, ವ್ಯಾಪಕವಾಗಿ ವಿತರಿಸಲಾಯಿತು.
ಆದರೆ ಆ ಬರಹಗಳು ಬೈಬಲಿನ ಅಧಿಕೃತ ಪುಸ್ತಕಗಳ ಪಟ್ಟಿಯಲ್ಲಿದ್ದವು 2 ತಿಮೊಥೆಯ 1:13) ಯೆಹೋವನನ್ನು ಪ್ರೀತಿಸಿ, ಆರಾಧಿಸಿ, ಸೇವಿಸುವಂತೆ ವಾಚಕರನ್ನು ಪ್ರೋತ್ಸಾಹಿಸುತ್ತವೆ; ಮೂಢನಂಬಿಕೆ, ಭೂತಾರಾಧನೆ ಹಾಗೂ ಸೃಷ್ಟಿಜೀವಿಗಳ ಆರಾಧನೆಯನ್ನು ಖಂಡಿಸುತ್ತವೆ. ಅವುಗಳಲ್ಲಿ ನಿಷ್ಕೃಷ್ಟ ಇತಿಹಾಸ ಮತ್ತು ಸತ್ಯ ಪ್ರವಾದನೆಗಳು ಇವೆ. ಪರರನ್ನು ಪ್ರೀತಿಸುವಂತೆ ವಾಚಕರಿಗೆ ಉತ್ತೇಜನ ನೀಡುತ್ತವೆ. ಈ ವಿಶಿಷ್ಟ ಗುರುತುಗಳು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ಪುಸ್ತಕಗಳಲ್ಲಿವೆ. ಈ ವೈಶಿಷ್ಟ್ಯಗಳು ಅಪಾಕ್ರಿಫಲ್ ಪುಸ್ತಕಗಳಲ್ಲೂ ಇವೆಯೋ?
ಎಂಬದಕ್ಕೆ ಅತ್ಯಂತ ಪ್ರಮುಖ ಸಾಕ್ಷ್ಯ ಅವುಗಳಲ್ಲಿರುವ ವಿಷಯಗಳೇ ಆಗಿವೆ. ಅವು, ಬೈಬಲಿನ ಉಳಿದ ಭಾಗದಲ್ಲಿರುವ “ಸ್ವಸ್ಥಕರವಾದ ಮಾತುಗಳ ನಮೂನೆ”ಯೊಂದಿಗೆ ಹೊಂದಿಕೆಯಲ್ಲಿವೆ. (ಅಪಾಕ್ರಿಫಲ್ ಪುಸ್ತಕಗಳು ಹೇಗೆ ಭಿನ್ನವಾಗಿವೆ?
ಅವು ಬೈಬಲಿನ ಅಧಿಕೃತ ಪುಸ್ತಕಗಳಿಗಿಂತ ತೀರ ಭಿನ್ನವಾಗಿವೆ. ಈ ಅಪಾಕ್ರಿಫಲ್ ಪುಸ್ತಕಗಳನ್ನು ಸುಮಾರು ಎರಡನೇ ಶತಮಾನದ ಮಧ್ಯಭಾಗದಷ್ಟಕ್ಕೆ ಬರೆಯಲಾಯಿತು. ಅಷ್ಟರಲ್ಲಿ ಅಧಿಕೃತ ಪುಸ್ತಕಗಳನ್ನು ಬರೆದು ಎಷ್ಟೋ ಸಮಯವಾಗಿತ್ತು. ಯೇಸು ಮತ್ತು ಕ್ರೈಸ್ತ ಧರ್ಮದ ಬಗ್ಗೆ ಅಪಾಕ್ರಿಫಲ್ ಪುಸ್ತಕಗಳು ಕೊಡುವ ಚಿತ್ರಣವು ಬೈಬಲಿನಲ್ಲಿರುವ ದೇವಪ್ರೇರಿತ ಪುಸ್ತಕಗಳಿಗೆ ಹೊಂದಿಕೆಯಲ್ಲಿಲ್ಲ.
ಉದಾಹರಣೆಗೆ, ‘ತೋಮನ ಸುವಾರ್ತೆ’ ಎಂಬ ಅಪಾಕ್ರಿಫಲ್ ಪುಸ್ತಕವು ಯೇಸು ಹಲವಾರು ವಿಚಿತ್ರ ಮಾತುಗಳನ್ನು ಹೇಳಿದ್ದನೆಂದು ತಿಳಿಸುತ್ತದೆ. ಮರಿಯಳು ಸ್ವರ್ಗದ ರಾಜ್ಯವನ್ನು ಪ್ರವೇಶಿಸಲು ಸಾಧ್ಯವಾಗುವಂತೆ ಆಕೆಯನ್ನು ಗಂಡಾಗಿ ಮಾರ್ಪಡಿಸುವುದಾಗಿ ಯೇಸು ಹೇಳಿದನಂತೆ. ಶೈಶವದ ಕುರಿತ ತೋಮನ ಸುವಾರ್ತೆಯು ಎಳೆಯ ಯೇಸುವನ್ನು ಇನ್ನೊಂದು ಮಗುವಿನ ಸಾವಿಗೆ ಕಾರಣನಾದ ಕ್ರೂರ ಹುಡುಗನೆಂದು ವರ್ಣಿಸುತ್ತದೆ. ‘ಪೌಲನ ಕಾರ್ಯಗಳು’ ಮತ್ತು ‘ಪೇತ್ರನ ಕಾರ್ಯಗಳು’ ಎಂಬ ಅಪಾಕ್ರಿಫಲ್ ಪುಸ್ತಕಗಳು, ಲೈಂಗಿಕ ಸಂಬಂಧಗಳಿಂದ ಸಂಪೂರ್ಣವಾಗಿ ದೂರವಿರುವುದಕ್ಕೆ ಒತ್ತುಕೊಡುತ್ತವೆ ಮತ್ತು ಅಪೊಸ್ತಲರು ಸ್ತ್ರೀಯರಿಗೆ ತಮ್ಮ ಗಂಡಂದಿರಿಂದ ಪ್ರತ್ಯೇಕರಾಗುವಂತೆ ಹೇಳುತ್ತಿದ್ದರೆಂದು ವರ್ಣಿಸಲಾಗಿದೆ. ‘ಯೂದನ ಸುವಾರ್ತೆ’ ಎಂಬ ಅಪಾಕ್ರಿಫಲ್ ಪುಸ್ತಕವು, ತನ್ನ ಶಿಷ್ಯರು ಊಟ ಮಾಡುವ ಮುಂಚೆ ದೇವರಿಗೆ ಪ್ರಾರ್ಥನೆ ಮಾಡಿದಕ್ಕೆ ಯೇಸು ನಗಾಡಿದ್ದನ್ನು ವರ್ಣಿಸುತ್ತದೆ. ಇಂಥ ವಿಚಾರಗಳು, ಬೈಬಲಿನ ಅಧಿಕೃತ ಪುಸ್ತಕಗಳಲ್ಲಿರುವ ವಿಷಯಕ್ಕೆ ತದ್ವಿರುದ್ಧವಾಗಿವೆ.—ಮಾರ್ಕ 14:22; 1 ಕೊರಿಂಥ 7:3-5; ಗಲಾತ್ಯ 3:28; ಇಬ್ರಿಯ 7:26.
ಅಪಾಕ್ರಿಫಲ್ ಬರಹಗಳಲ್ಲಿ ಹೆಚ್ಚಿನವು ನಾಸ್ಟಿಕ್ ಪಂಗಡದವರ ನಂಬಿಕೆಗಳನ್ನು ಪ್ರತಿಬಿಂಬಿಸಿದವು. ಇವರ ನಂಬಿಕೆಗಳೇನೆಂದರೆ ಸೃಷ್ಟಿಕರ್ತನಾದ ಯೆಹೋವನು ಒಳ್ಳೇ ದೇವರಲ್ಲ, ಪುನರುತ್ಥಾನ ಅಕ್ಷರಶಃ ನಡೆಯುವುದಿಲ್ಲ, ಭೌತಿಕ ವಿಷಯವೆಲ್ಲವೂ ಕೆಟ್ಟದ್ದು, ಸೈತಾನನೇ ವಿವಾಹ ಹಾಗೂ ಪುನರುತ್ಪತ್ತಿಯ ಉಗಮನು.
ಹಲವು ಅಪಾಕ್ರಿಫಲ್ ಪುಸ್ತಕಗಳಿಗೆ ಬೈಬಲ್ ವ್ಯಕ್ತಿಗಳ ಹೆಸರನ್ನು ಕೊಡಲಾಗಿದೆಯಾದರೂ ವಾಸ್ತವದಲ್ಲಿ ಅವರು ಅವುಗಳನ್ನು ಬರೆದಿಲ್ಲ. ಪಿತೂರಿ ನಡಿಸಿ ಆ ಪುಸ್ತಕಗಳನ್ನು ಬೈಬಲ್‌ನಿಂದ ಹೊರಗಿಡಲಾಯಿತೊ? ಅಪಾಕ್ರಿಫಲ್ ಪುಸ್ತಕಗಳ ತಜ್ಞರಾದ ಎಮ್. ಆರ್. ಜೇಮ್ಸ್ ಎಂಬವರು ಹೇಳಿದ್ದು: “ಈ ಪುಸ್ತಕಗಳನ್ನು ಹೊಸ ಒಡಂಬಡಿಕೆಯಲ್ಲಿ ಸೇರಿಸಲಿಲ್ಲವೆಂದು ಯಾರ ಮೇಲೂ ಆರೋಪ ಹೊರಿಸಸಾಧ್ಯವಿಲ್ಲ. ಅವುಗಳಲ್ಲಿರುವ ಮಾಹಿತಿಯೇ ಅವನ್ನು ಅನರ್ಹಗೊಳಿಸಿವೆ.”
ಧರ್ಮಭ್ರಷ್ಟತೆಯ ಬಗ್ಗೆ ಬೈಬಲ್ ಲೇಖಕರ ಎಚ್ಚರಿಕೆ
ಬೈಬಲಿನ ಅಧಿಕೃತ ಪುಸ್ತಕಗಳಲ್ಲಿ, ಧರ್ಮಭ್ರಷ್ಟತೆಯು ಸ್ವಲ್ಪದರಲ್ಲೇ ಕ್ರೈಸ್ತ ಸಭೆಯನ್ನು ಭ್ರಷ್ಟಗೊಳಿಸಲಿದೆ ಎಂಬ ಹಲವಾರು ಎಚ್ಚರಿಕೆಗಳನ್ನು ನೋಡಬಲ್ಲೆವು. ವಾಸ್ತವದಲ್ಲಿ ಈ ಧರ್ಮಭ್ರಷ್ಟತೆಯು ಪ್ರಥಮ ಶತಮಾನದಲ್ಲೇ ಆರಂಭವಾಗಿತ್ತು. ಆದರೆ ಅದು ಹಬ್ಬಿಕೊಳ್ಳದಂತೆ ಅಪೊಸ್ತಲರು ತಡೆದುಹಿಡಿದಿದ್ದರು. (ಅ. ಕಾರ್ಯಗಳು 20:30; 2 ಥೆಸಲೊನೀಕ 2:3, 6, 7; 1 ತಿಮೊಥೆಯ 4:1-3; 2 ಪೇತ್ರ 2:1; 1 ಯೋಹಾನ 2:18, 19; 4:1-3) ಈ ಎಚ್ಚರಿಕೆಗಳು, ಅಪೊಸ್ತಲರ ಮರಣಾನಂತರ ಯೇಸುವಿನ ಬೋಧನೆಗಳಿಗೆ ವಿರುದ್ಧವಾದ ಬರಹಗಳು ತಲೆಯೆತ್ತಲು ಕಾರಣವೇನೆಂದು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತವೆ.
ಈ ದಾಖಲೆಗಳು ಹಳೆಯದ್ದೂ ಪೂಜ್ಯವಾದವುಗಳೆಂದೂ ಕೆಲವು ವಿದ್ವಾಂಸರಿಗೆ ಹಾಗೂ ಇತಿಹಾಸಕಾರರಿಗೆ ತೋರಬಹುದು. ಆದರೆ ಇದನ್ನು ಊಹಿಸಿ: ಇಂದಿರುವ ಗಾಳಿಸುದ್ದಿಯ ಪತ್ರಿಕೆಗಳಿಂದ ಮತ್ತು ತೀವ್ರಗಾಮಿ ಧಾರ್ಮಿಕ ಪಂಥಗಳ ಪ್ರಕಾಶನಗಳಿಂದ ವಿದ್ವಾಂಸರು ಸಂಶಯಾಸ್ಪದ ಮಾಹಿತಿಯುಳ್ಳ ಪುಟಗಳನ್ನು ಸಂಗ್ರಹಿಸುತ್ತಾರೆ. ನಂತರ ಅವುಗಳನ್ನು ಒಂದು ಕೋಣೆಯಲ್ಲಿಟ್ಟು ಯಾರೂ ಒಳಹೋಗದಂತೆ ಭದ್ರಗೊಳಿಸುತ್ತಾರೆ. ಸಮಯ ದಾಟಿದಷ್ಟಕ್ಕೆ ಆ ಪುಟಗಳಲ್ಲಿರುವ ಮಾಹಿತಿ ಸತ್ಯವೂ ವಿಶ್ವಾಸಾರ್ಹವೂ ಆಗುವುದೋ? 1,700 ವರ್ಷಗಳ ಬಳಿಕ, ಆ ಪುಟಗಳು ತೀರ ಹಳೆಯದ್ದಾಗಿವೆ ಎಂಬಮಾತ್ರಕ್ಕೆ ಅವುಗಳಲ್ಲಿರುವ ಸುಳ್ಳಾದ ಹುಚ್ಚುಹುಚ್ಚು ಮಾತುಗಳು ಸತ್ಯವಾಗಿಬಿಡುವವೋ?
ಖಂಡಿತ ಇಲ್ಲ! ಯೇಸು ಮಗ್ದಲದ ಮರಿಯಳನ್ನು ಮದುವೆಯಾದನು ಎಂಬ ಮಾತು ಮತ್ತು ಅಪಾಕ್ರಿಫಲ್ ಪುಸ್ತಕಗಳಿಂದ ಇತರ ವಿಲಕ್ಷಣವಾದ ಹೇಳಿಕೆಗಳ ವಿಷಯದಲ್ಲೂ ಅದು ಸತ್ಯ. ವಿಶ್ವಾಸಾರ್ಹ ದಾಖಲೆಗಳು ಲಭ್ಯವಿರುವಾಗ ಅಂಥ ಅವಿಶ್ವಾಸಾರ್ಹ ಮೂಲಗಳನ್ನು ಏಕೆ ನಂಬಬೇಕು? ತನ್ನ ಪುತ್ರನ ಬಗ್ಗೆ ನಾವೇನನ್ನು ತಿಳಿದುಕೊಳ್ಳಬೇಕೆಂದು ದೇವರು ಬಯಸುತ್ತಾನೋ ಅದೆಲ್ಲವೂ ಬೈಬಲ್‌ನಲ್ಲಿದೆ. ಇದು ನಾವು ಪೂರ್ಣ ವಿಶ್ವಾಸವನ್ನಿಡಬಲ್ಲ ದಾಖಲೆಯಾಗಿದೆ. (w10-E 04/01)
[ಪಾದಟಿಪ್ಪಣಿ]
^ ಪ್ಯಾರ. 4 ಬೈಬಲಿನಲ್ಲಿರುವ ಅಧಿಕೃತ ಪುಸ್ತಕಗಳ ಪಟ್ಟಿ (ಬೈಬಲ್ ಕ್ಯಾನನ್) ಅಂದರೆ, ದೇವರಿಂದ ಪ್ರೇರಿತವಾಗಿವೆ ಎಂಬದಕ್ಕೆ ಮನಗಾಣಿಸುವ ರುಜುವಾತನ್ನು ಕೊಡುವ ಪುಸ್ತಕಗಳ ಸಂಗ್ರಹವಾಗಿದೆ. ಸಾಮಾನ್ಯವಾಗಿ 66 ಪುಸ್ತಕಗಳನ್ನು ಅಧಿಕೃತವೆಂದು ಅಂಗೀಕರಿಸಲಾಗಿದೆ. ಇವು ದೇವರ ವಾಕ್ಯದ ಅವಿಭಾಜ್ಯ, ಅತ್ಯಗತ್ಯ ಅಂಗವಾಗಿವೆ.
[ಪುಟ 26ರಲ್ಲಿರುವ ರೇಖಾಕೃತಿ/ಚಿತ್ರಗಳು]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಯೇಸುವಿನ ಜೀವನ ಬೈಬಲಿನ ಗ್ರೀಕ್ ಭಾಗವನ್ನು ಅಪಾಕ್ರಿಫಲ್ ಬರೆಯಲಾದ ಸಮಯ ಕೃತಿಗಳನ್ನು ಬರೆಯಲಾದ ಸಮಯ
ಕ್ರಿ.ಪೂ. 2 ಕ್ರಿ.ಶ. 33 41 98 130 300
[ಕೃಪೆ]
Kenneth Garrett/National Geographic Image Collection
[ಪುಟ 28ರಲ್ಲಿರುವ ಚಿತ್ರ]
ಅಪೊಸ್ತಲ ಪೌಲನು ಅದ್ಭುತಗಳನ್ನು ನಡೆಸಿದನು, ಸತ್ತ ವ್ಯಕ್ತಿಯನ್ನೂ ಬದುಕಿಸಿದನು. ಇವೆಲ್ಲ, ಅವನಿಗೂ ಅವನ ಬರಹಗಳಿಗೂ ದೇವರಾತ್ಮದ ಸಹಾಯ ಇತ್ತೆಂಬದಕ್ಕೆ ಪ್ರಬಲ ಸಾಕ್ಷ್ಯಕೊಟ್ಟಿತು