ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವೇ ಪ್ರಧಾನ ದೇವದೂತನಾದ ಮೀಕಾಯೇಲನೋ?

ಯೇಸುವೇ ಪ್ರಧಾನ ದೇವದೂತನಾದ ಮೀಕಾಯೇಲನೋ?

ನಮ್ಮ ಓದುಗರ ಪ್ರಶ್ನೆ

ಯೇಸುವೇ ಪ್ರಧಾನ ದೇವದೂತನಾದ ಮೀಕಾಯೇಲನೋ?

▪ ಸರಳ ಉತ್ತರ ‘ಹೌದು’ ಎಂದಾಗಿದೆ. ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಹೆಸರುಗಳಿರುವುದು ಅನೇಕ ಸಂಸ್ಕೃತಿಗಳಲ್ಲಿ ಸಾಮಾನ್ಯ. ಬೈಬಲಿನಲ್ಲಿರುವ ವ್ಯಕ್ತಿಗಳ ವಿಷಯದಲ್ಲೂ ಇದು ಸತ್ಯ. ಉದಾಹರಣೆಗೆ, ಪೂರ್ವಜನಾದ ಯಾಕೋಬನಿಗೆ ಇಸ್ರಾಯೇಲ ಎಂದೂ ಹೆಸರಿತ್ತು. (ಆದಿಕಾಂಡ 35:10) ಅಪೊಸ್ತಲ ಪೇತ್ರನಿಗೆ ಐದು ಹೆಸರುಗಳಿದ್ದವು—ಸಿಮೆಯೋನ, ಸೀಮೋನ, ಪೇತ್ರ, ಕೇಫ ಮತ್ತು ಸೀಮೋನ ಪೇತ್ರ. (ಮತ್ತಾಯ 10:2; 16:16; ಯೋಹಾನ 1:42; ಅ. ಕಾರ್ಯಗಳು 15:7, 14) ಹಾಗೆಯೇ ಮೀಕಾಯೇಲ ಎಂಬುದು ಯೇಸುವಿನ ಇನ್ನೊಂದು ಹೆಸರೆಂದು ಹೇಗೆ ಖಚಿತವಾಗಿ ಹೇಳಸಾಧ್ಯ? ಬೈಬಲ್‌ನ ಮುಂದಿನ ಸಾಕ್ಷ್ಯವನ್ನು ಪರಿಗಣಿಸಿರಿ.

ಬಲಿಷ್ಠ ಆತ್ಮಜೀವಿಯಾದ ಮೀಕಾಯೇಲನ ಕುರಿತು ಬೈಬಲ್‌ನಲ್ಲಿ ಐದು ಉಲ್ಲೇಖಗಳಿವೆ. ಇವುಗಳಲ್ಲಿ ಮೂರು ದಾನಿಯೇಲನ ಪುಸ್ತಕದಲ್ಲಿವೆ. ನೇಮಕವೊಂದನ್ನು ಪೂರೈಸಲು ಕಳುಹಿಸಲಾಗಿದ್ದ ದೇವದೂತನಿಗೆ ಮೀಕಾಯೇಲನು ಸಹಾಯಮಾಡಿದ್ದರ ಕುರಿತು ದಾನಿಯೇಲ 10:13, 21ರಲ್ಲಿ ಓದುತ್ತೇವೆ. ಮೀಕಾಯೇಲನನ್ನು ಅಲ್ಲಿ, “ಪ್ರಧಾನ ದಿವ್ಯಪಾಲಕರಲ್ಲೊಬ್ಬ” ಮತ್ತು “ನಿಮ್ಮ ಪಾಲಕನಾದ ಮೀಕಾಯೇಲ” ಎಂದು ಕರೆಯಲಾಗಿದೆ. ಅನಂತರ ದಾನಿಯೇಲ 12:1ರಲ್ಲಿ, “ನಿನ್ನ ಜನರ ಪಕ್ಷವನ್ನು ಹಿಡಿದಿರುವ ಮಹಾ ಪಾಲಕನಾದ ಮೀಕಾಯೇಲನು ಆ [ಅಂತ್ಯ] ಕಾಲದಲ್ಲಿ ಏಳುವನು” ಎಂದು ತಿಳಿಸಲಾಗಿದೆ.

ಮೀಕಾಯೇಲನ ಬಗ್ಗೆ ನಂತರ ತಿಳಿಸಲಾಗಿರುವುದು ಪ್ರಕಟನೆ 12:7ರಲ್ಲಿ. ಅಲ್ಲಿ “ಮೀಕಾಯೇಲನೂ ಅವನ ದೂತರೂ” ಪಿಶಾಚನಾದ ಸೈತಾನ ಮತ್ತವನ ದುಷ್ಟ ದೂತರ ವಿರುದ್ಧ ಒಂದು ಪ್ರಮುಖ ಯುದ್ಧದಲ್ಲಿ ಹೋರಾಡಿ ಅವರನ್ನು ಸ್ವರ್ಗದಿಂದ ಹೊರದೊಬ್ಬುವುದನ್ನು ವರ್ಣಿಸಲಾಗಿದೆ.

ಮೇಲೆ ತಿಳಿಸಲಾಗಿರುವ ಪ್ರತಿಯೊಂದು ಸಂದರ್ಭದಲ್ಲಿ ಮೀಕಾಯೇಲನ ಬಗ್ಗೆ ಒಂದು ಅಂಶವನ್ನು ಗಮನಿಸಬಹುದು. ಅದೇನೆಂದರೆ, ದೇವಜನರ ಪರವಹಿಸಿ ಅವರ ಸಂರಕ್ಷಣೆಗಾಗಿ ಹೋರಾಡುತ್ತಿರುವ ಮತ್ತು ಅದಕ್ಕಾಗಿ ಯೆಹೋವನ ಪರಮಶತ್ರುವಾದ ಸೈತಾನನನ್ನೂ ಎದುರಿಸುತ್ತಿರುವ ಯೋಧ ದೇವದೂತನಾಗಿ ಚಿತ್ರಿಸಲಾಗಿದೆ.

ಯೂದ 9ನೇ ವಚನವು ಮೀಕಾಯೇಲನನ್ನು “ಪ್ರಧಾನ ದೇವದೂತ” ಎಂದು ಕರೆಯುತ್ತದೆ. ಬೈಬಲಿನಲ್ಲಿ ಎಲ್ಲೂ ‘ಪ್ರಧಾನ ದೇವದೂತರು’ ಎಂದು ಬಹುವಚನವನ್ನು ಬಳಸಲಾಗಿಲ್ಲ. ಇದರಿಂದ, ಆ ಬಿರುದನ್ನು ಹೊಂದಿರುವವನು ಒಬ್ಬನೇ ಎಂದು ತಿಳಿದುಬರುತ್ತದೆ. ಪ್ರಧಾನ ದೇವದೂತನ ಬಗ್ಗೆ ತಿಳಿಸಲಾಗಿರುವ ಇನ್ನೊಂದು ವಚನವೆಂದರೆ 1 ಥೆಸಲೊನೀಕ 4:16 ಮಾತ್ರ. ಅಲ್ಲಿ, ಪುನರುತ್ಥಾನಗೊಂಡಿರುವ ಯೇಸುವನ್ನು ವರ್ಣಿಸುತ್ತಾ ಪೌಲನು ಅನ್ನುವುದು: “ಕರ್ತನು [ಯೇಸು] ತಾನೇ ಆಜ್ಞಾಘೋಷದೊಡನೆಯೂ ಪ್ರಧಾನ ದೇವದೂತನ ಧ್ವನಿಯೊಡನೆಯೂ ದೇವರ ತುತೂರಿಯೊಡನೆಯೂ ಸ್ವರ್ಗದಿಂದ ಇಳಿದುಬರುವನು.” ಇಲ್ಲಿ, ಪ್ರಧಾನ ದೇವದೂತನು ಸ್ವತಃ ಯೇಸು ಕ್ರಿಸ್ತನೇ ಎಂದು ಗುರುತಿಸಲಾಗಿದೆ.

ಇದೆಲ್ಲವನ್ನು ಮನಸ್ಸಿನಲ್ಲಿಟ್ಟು ನಾವು ಯಾವ ತೀರ್ಮಾನಕ್ಕೆ ಬರಬಲ್ಲೆವು? ಯೇಸು ಕ್ರಿಸ್ತನೇ ಪ್ರಧಾನ ದೇವದೂತನಾದ ಮೀಕಾಯೇಲನಾಗಿದ್ದಾನೆ. ಮೀಕಾಯೇಲ (ಅರ್ಥ, “ದೇವರಂತೆ ಯಾರಿದ್ದಾನೆ?”) ಮತ್ತು ಯೇಸು (ಅರ್ಥ, “ಯೆಹೋವನೇ ರಕ್ಷಣೆಯಾಗಿದ್ದಾನೆ”) ಎಂಬ ಎರಡೂ ಹೆಸರುಗಳು, ದೇವರ ಪರಮಾಧಿಕಾರದ ಮುಖ್ಯ ಸಮರ್ಥಕನಾಗಿ ಆತನಿಗಿರುವ ಪಾತ್ರದೆಡೆಗೆ ಗಮನ ಸೆಳೆಯುತ್ತವೆ. ಫಿಲಿಪ್ಪಿ 2:9 ಹೇಳುವುದು: ‘ದೇವರು ಅವನನ್ನು [ಮಹಿಮಾಭರಿತ ಯೇಸುವನ್ನು] ಉನ್ನತವಾದ ಸ್ಥಾನಕ್ಕೆ ಏರಿಸಿ ಬೇರೆ ಎಲ್ಲ ಹೆಸರುಗಳಿಗಿಂತಲೂ ಉನ್ನತವಾದ ಹೆಸರನ್ನು ಅವನಿಗೆ ದಯಪಾಲಿಸಿದನು.’

ಗಮನಿಸಬೇಕಾದ ಮುಖ್ಯ ಸಂಗತಿಯೇನೆಂದರೆ, ಯೇಸುವಿನ ಜೀವನ ಆರಂಭವಾದದ್ದು ಆತನು ಭೂಮಿಯಲ್ಲಿ ಮಾನವನಾಗಿ ಹುಟ್ಟಿದಾಗ ಅಲ್ಲ. ಆತನ ಜನನದ ಮುಂಚೆ ಮರಿಯಳ ಬಳಿ ಬಂದ ದೇವದೂತನು, ಆಕೆ ಪವಿತ್ರಾತ್ಮದ ಮೂಲಕ ಗರ್ಭಿಣಿಯಾಗುವಳೆಂದೂ ಹುಟ್ಟುವ ಮಗುವಿಗೆ ಯೇಸು ಎಂದು ಹೆಸರಿಡಬೇಕೆಂದೂ ಹೇಳಿದನು. (ಲೂಕ 1:31) ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿ ಅನೇಕಸಲ ತನ್ನ ಮಾನವಪೂರ್ವ ಅಸ್ತಿತ್ವದ ಬಗ್ಗೆ ಮಾತಾಡಿದನು.—ಯೋಹಾನ 3:13; 8:23, 58.

ಹಾಗಾದರೆ ಪ್ರಧಾನ ದೇವದೂತನಾದ ಮೀಕಾಯೇಲನು ಭೂಮಿಗೆ ಬರುವ ಮುಂಚೆ ಸ್ವರ್ಗದಲ್ಲಿದ್ದ ಯೇಸುವೇ ಆಗಿದ್ದಾನೆ. ಆತನು ಪುನರುತ್ಥಾನಗೊಂಡು ಪುನಃ ಸ್ವರ್ಗಕ್ಕೆ ಹೋದ ಬಳಿಕ, ‘ತಂದೆಯಾದ ದೇವರ ಮಹಿಮೆಗೋಸ್ಕರ’ ಪ್ರಧಾನ ದೇವದೂತನಾದ ಮೀಕಾಯೇಲನಾಗಿ ತನ್ನ ಸೇವೆಯನ್ನು ಪುನಃ ಆರಂಭಿಸಿದನು.—ಫಿಲಿಪ್ಪಿ 2:11. (w10-E 04/01)