ಯೇಸು ಕ್ರಿಸ್ತನ ಸಂದೇಶದ ಪ್ರಭಾವ ಎಷ್ಟು ವ್ಯಾಪಕ?
ಯೇಸು ಕ್ರಿಸ್ತನ ಸಂದೇಶದ ಪ್ರಭಾವ ಎಷ್ಟು ವ್ಯಾಪಕ?
“ಜಗತ್ತಿನ ಅತಿ ಶ್ರೇಷ್ಠ ಬೋಧಕರಲ್ಲಿ ನಜರೇತಿನ ಯೇಸುವೂ ಒಬ್ಬನು ಎಂಬುದು ನನ್ನ ಅಭಿಪ್ರಾಯ.” —ಮೋಹನ್ದಾಸ್ ಕೆ. ಗಾಂಧಿ.
ಮಾತುಗಳಿಗೆ ಶಕ್ತಿಯಿದೆ. ಜಾಗ್ರತೆಯಿಂದ ಆಯ್ದ ವಿವೇಕದ ನುಡಿಮುತ್ತುಗಳು ಹೃದಯಗಳನ್ನು ಪ್ರೇರಿಸಬಲ್ಲವು, ನಿರೀಕ್ಷೆಯನ್ನು ಚಿಗುರಿಸಬಲ್ಲವು, ಬದುಕನ್ನೇ ಬದಲಾಯಿಸಬಲ್ಲವು ಕೂಡ. ಯೇಸು ಕ್ರಿಸ್ತನು ಆಡಿದಂಥ ಆ ರೀತಿಯ ಪ್ರಭಾವಶಾಲಿ ಮಾತುಗಳನ್ನು ಬೇರಾರೂ ಆಡಿಲ್ಲ. ಪರ್ವತ ಪ್ರಸಂಗವೆಂದು ಪ್ರಸಿದ್ಧವಾಗಿರುವ ಯೇಸುವಿನ ಉಪನ್ಯಾಸವನ್ನು ಕೇಳಿದ ವ್ಯಕ್ತಿಯೊಬ್ಬನು, “ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದಾಗ ಜನರ ಗುಂಪುಗಳು ಅವನು ಬೋಧಿಸುವ ರೀತಿಯನ್ನು ಕಂಡು ಅತ್ಯಾಶ್ಚರ್ಯಪಟ್ಟವು” ಎಂದು ಕಾಲಾನಂತರ ಬರೆದನು.—ಮತ್ತಾಯ 7:28.
ಇವತ್ತಿಗೂ ಯೇಸುವಿನ ನುಡಿಗಳು ಜಗತ್ತಿನಾದ್ಯಂತ ಜನರಿಗೆ ಚಿರಪರಿಚಿತ. ಗಾಢಾರ್ಥವುಳ್ಳ ಆ ನುಡಿಗಳಲ್ಲಿ ಕೆಲವನ್ನು ಪರಿಗಣಿಸಿ.
“ನೀವು ದೇವರನ್ನೂ ಐಶ್ವರ್ಯವನ್ನೂ ಸೇವಿಸಲಾರಿರಿ.”—ಮತ್ತಾಯ 6:24.
“ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು.”—ಮತ್ತಾಯ 7:12.
“ಕೈಸರನದನ್ನು ಕೈಸರನಿಗೆ ಕೊಡಿರಿ, ಆದರೆ ದೇವರದನ್ನು ದೇವರಿಗೆ ಕೊಡಿರಿ.”—ಮತ್ತಾಯ 22:21.
“ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.”—ಅ. ಕಾರ್ಯಗಳು 20:35.
ಆದರೆ ಬರೀ ನೆನಪಿನಲ್ಲಿಡತಕ್ಕ ಮಾತುಗಳನ್ನು ಯೇಸು ಆಡಲಿಲ್ಲ. ಆತನು ಒಂದು ಸಂದೇಶವನ್ನೂ ಸಾರಿದನು. ಆ ಸಂದೇಶ ತುಂಬ ಪ್ರಬಲವಾಗಿತ್ತು. ಏಕೆಂದರೆ ಅದು ಜನರಿಗೆ ದೇವರ ಬಗ್ಗೆ ಸತ್ಯವನ್ನು ತಿಳಿಸಿತು, ಬದುಕನ್ನು ಸಾರ್ಥಕಗೊಳಿಸುವುದು ಹೇಗೆಂದು ಕಲಿಸಿಕೊಟ್ಟಿತು, ಮಾನವರ ಎಲ್ಲ ಕಷ್ಟಸಂಕಟಕ್ಕೆ ಪರಿಹಾರ ದೇವರ ರಾಜ್ಯದಿಂದ ಮಾತ್ರ ಸಿಗುವುದೆಂದು ಸ್ಪಷ್ಟವಾಗಿ ತೋರಿಸಿಕೊಟ್ಟಿತು. ಮುಂದಿನ ಪುಟಗಳಲ್ಲಿ ನಾವು ಈ ಸಂದೇಶವನ್ನು ಪರಿಶೀಲಿಸುವಾಗ, ಈಗಲೂ ಯೇಸು ‘ಜಗತ್ತಿನ ಅತಿ ಶ್ರೇಷ್ಠ ಬೋಧಕರಲ್ಲಿ ಒಬ್ಬನಾಗಿರಲು’ ಕಾರಣವೇನು ಎಂಬುದನ್ನು ನೋಡುವೆವು. (w10-E 04/01)