“ಕ್ಲುಪ್ತಕಾಲ” ಸಮೀಪಿಸುತ್ತಿದೆ
“ಕ್ಲುಪ್ತಕಾಲ” ಸಮೀಪಿಸುತ್ತಿದೆ
ಹಬಕ್ಕೂಕನಂತೆ ಯೇಸುವಿನ ಶಿಷ್ಯರಿಗೂ ಕಷ್ಟನೋವುಗಳ ಅಂತ್ಯ ನೋಡುವ ಹಂಬಲವಿತ್ತು. ದೇವರ ರಾಜ್ಯ ಈ ಭೂಮಿಯ ದುಃಸ್ಥಿತಿಯನ್ನು ಸರಿಪಡಿಸಲು ಏನು ಮಾಡಲಿದೆಯೆಂದು ತಿಳಿದಿದ್ದ ಅವರು ಯೇಸುವಿಗೆ, “ಈ ಸಂಗತಿಗಳು ಯಾವಾಗ ಸಂಭವಿಸುವವು ಮತ್ತು [ರಾಜ್ಯಾಧಿಕಾರದೊಂದಿಗಿನ] ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು?” ಎಂದು ಕೇಳಿದರು. (ಮತ್ತಾಯ 24:3) ಉತ್ತರವಾಗಿ ಯೇಸು, ದೇವರ ರಾಜ್ಯವು ಈ ಭೂಮಿಯನ್ನು ಪೂರ್ಣ ವಶಕ್ಕೆ ತೆಗೆದುಕೊಳ್ಳುವ ನಿರ್ದಿಷ್ಟ ಸಮಯ ಯೆಹೋವ ದೇವರೊಬ್ಬರಿಗೆ ಮಾತ್ರ ತಿಳಿದಿದೆ ಎಂದು ಹೇಳಿದನು. (ಮತ್ತಾಯ 24:36; ಮಾರ್ಕ 13:32) ಹಾಗಿದ್ದರೂ ಯೇಸು ಮತ್ತು ಅವನ ಹಿಂಬಾಲಕರಲ್ಲಿ ಕೆಲವರು ಆ ಕ್ಲುಪ್ತಕಾಲವು ಸಮೀಪಿಸುವಾಗ ಭೂಮಿಯ ಮೇಲೆ ಏನೇನು ನಡೆಯಲಿಕ್ಕಿದೆ ಎಂದು ಮುಂತಿಳಿಸಿದರು.—ಬಲಗಡೆಯ ಚೌಕ ನೋಡಿ.
ಆ ವಿಷಯಗಳು ಇಂದು ಸರ್ವೇಸಾಮಾನ್ಯವೆಂದು ನೀವು ಒಪ್ಪುವಿರಲ್ಲವೇ? ಭೂವ್ಯಾಪಕವಾಗಿ ಒಂದು ಶೈಕ್ಷಣಿಕ ಕೆಲಸ ನಡೆಯುವುದೆಂದು ಸಹ ಯೇಸು ಮುಂತಿಳಿಸಿದನು. ಅವನಂದದ್ದು: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.”—ಮತ್ತಾಯ 24:14.
ಈ ಶೈಕ್ಷಣಿಕ ಕೆಲಸವೇ ಇಂದು ನಡೆಯುತ್ತಿದೆ. ಅದನ್ನು ಮಾಡುತ್ತಿರುವವರು ಯೆಹೋವನ ಸಾಕ್ಷಿಗಳು. 236 ದೇಶಗಳಲ್ಲಿ 70 ಲಕ್ಷಕ್ಕಿಂತಲೂ ಹೆಚ್ಚು ಸಾಕ್ಷಿಗಳು ದೇವರ ರಾಜ್ಯ ಏನು ಮಾಡಲಿದೆಯೆಂದು ಜನರಿಗೆ ತಿಳಿಸುತ್ತಿದ್ದಾರೆ ಮತ್ತು ಕಷ್ಟನೋವುಗಳನ್ನು ಕೊನೆಗಾಣಿಸುವ ದೇವರ ನೀತಿಯ ನಿಯಮಗಳಿಗನುಸಾರ ಜೀವಿಸಲು ಅವರಿಗೆ ಸಹಾಯಮಾಡುತ್ತಿದ್ದಾರೆ. ದೇವರ ರಾಜ್ಯದ ಕುರಿತು ಕಲಿಯುವುದನ್ನು ಮುಂದುವರಿಸಿರಿ. ಆಗ ಸಂಕಷ್ಟಗಳೇ ಇಲ್ಲದ ಲೋಕದಲ್ಲಿ ಶಾಶ್ವತವಾಗಿ ಜೀವಿಸುವ ಪ್ರತೀಕ್ಷೆ ನಿಮ್ಮದಾಗುವುದು. (w09-E 12/01)
[ಪುಟ 8ರಲ್ಲಿರುವ ಚೌಕ]
ಕಡೇ ದಿವಸಗಳಿಗೆ ಬೊಟ್ಟುಮಾಡುವ ಬೈಬಲ್ ವಚನಗಳು
• ಹಿಂದೆಂದೂ ನಡೆದಿರದಂಥ ರೀತಿಯ ಯುದ್ಧಗಳು
• ಮಹಾ ಭೂಕಂಪಗಳು
• ಆಹಾರದ ಅಭಾವ
• ಅಂಟುರೋಗಗಳು
• ಅನ್ಯಾಯದ ಹೆಚ್ಚಳ
• ಪ್ರೀತಿಯ ತಣ್ಣಗಾಗುವಿಕೆ
• ಭೂಮಿಗೆ ಹಾನಿಮಾಡುವುದು
• ಹಣದಾಸೆ
• ಹೆತ್ತವರಿಗೆ ಅವಿಧೇಯತೆ
• ಅತಿಯಾದ ಸ್ವಪ್ರೀತಿ
• ಸ್ವಾಭಾವಿಕ ಮಮತೆಯಿಲ್ಲದಿರುವಿಕೆ
• ಯಾವುದೇ ಒಪ್ಪಂದಕ್ಕೆ ಬಾರದವರು
• ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸ್ವನಿಯಂತ್ರಣದ ಕೊರತೆ
• ಒಳ್ಳೇತನದ ಮೇಲಿನ ಪ್ರೀತಿ ಕಡಿಮೆ
• ದೇವರಿಗಿಂತ ಹೆಚ್ಚಾಗಿ ಭೋಗಗಳ ಮೇಲೆ ಪ್ರೀತಿ
• ಅನೇಕರು ನಾಮಮಾತ್ರಕ್ಕೆ ಕ್ರೈಸ್ತರಾಗಿರುವರು
• ಸುಳ್ಳು ಪ್ರವಾದಿಗಳು ಹೆಚ್ಚುವರು
• ನಿಜ ಕ್ರೈಸ್ತರಿಗೆ ಹಿಂಸೆ
• ಬೈಬಲ್ ಎಚ್ಚರಿಕೆಗಳ ಕಡೆಗೆ ಜನರ ನಿರ್ಲಕ್ಷ್ಯ
[ಪುಟ 8ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳು ಭೂವ್ಯಾಪಕವಾಗಿ ದೇವರ ರಾಜ್ಯದ ಕುರಿತು ಕಲಿಸುತ್ತಾರೆ