ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪವಿತ್ರಾತ್ಮ ನಮ್ಮ ಬದುಕಿಗೆ ಅವಶ್ಯವಾಗಿ ಬೇಕಾಗಿರುವ ಶಕ್ತಿ

ಪವಿತ್ರಾತ್ಮ ನಮ್ಮ ಬದುಕಿಗೆ ಅವಶ್ಯವಾಗಿ ಬೇಕಾಗಿರುವ ಶಕ್ತಿ

ಪವಿತ್ರಾತ್ಮ ನಮ್ಮ ಬದುಕಿಗೆ ಅವಶ್ಯವಾಗಿ ಬೇಕಾಗಿರುವ ಶಕ್ತಿ

“ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ.” (ಕೀರ್ತನೆ 51:11) ಹೀಗೆಂದು ರಾಜ ದಾವೀದನು ಘೋರ ಪಾಪಗೈದ ಬಳಿಕ ದೇವರನ್ನು ಅಂಗಲಾಚಿ ಬೇಡಿದನು.

ದಾವೀದನು ತನ್ನ ಬದುಕಿನಲ್ಲಿ ಅನೇಕಸಲ ಪವಿತ್ರಾತ್ಮದ ಶಕ್ತಿಯನ್ನು ಪಡೆದಿದ್ದನು. ಅವನು ಹದಿಪ್ರಾಯದಲ್ಲಿ ದೈತ್ಯ-ಸೈನಿಕನಾದ ಗೊಲ್ಯಾತನನ್ನು ಕೊಂದದ್ದು ಈ ಪವಿತ್ರಾತ್ಮದ ಸಹಾಯದಿಂದಲೇ. (1 ಸಮುವೇಲ 17:45-50) ಇದರ ನೆರವಿನಿಂದ ಅತಿ ಸೊಗಸಾದ ಕೆಲವು ಕೀರ್ತನೆಗಳನ್ನೂ ರಚಿಸಿದನು. “ಯೆಹೋವನ ಆತ್ಮವು ನನ್ನಲ್ಲಿ ಉಸುರಿತು; ಆತನ ವಾಕ್ಯವು ನನ್ನ ಬಾಯಲ್ಲಿತ್ತು” ಎಂದು ದಾವೀದನು ಹೇಳಿದನು.—2 ಸಮುವೇಲ 23:2.

ದಾವೀದನ ಬದುಕಿನಲ್ಲಿ ಪವಿತ್ರಾತ್ಮ ವಹಿಸಿದ ಪಾತ್ರವನ್ನು ಯೇಸು ಕ್ರಿಸ್ತನು ಸಹ ದೃಢೀಕರಿಸಿದನು. ಒಂದು ಸಂದರ್ಭದಲ್ಲಿ ಅವನು ತನ್ನ ಕೇಳುಗರಿಗೆ ತಿಳಿಸಿದ್ದು: “‘“ನಾನು ನಿನ್ನ ವೈರಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ಯೆಹೋವನು ನನ್ನ ಕರ್ತನಿಗೆ ನುಡಿದನು’ ಎಂಬುದಾಗಿ ದಾವೀದನು ತಾನೇ ಪವಿತ್ರಾತ್ಮ ಪ್ರೇರಿತನಾಗಿ ಹೇಳಿದನು.” (ಮಾರ್ಕ 12:36; ಕೀರ್ತನೆ 110:1) ಕೀರ್ತನೆಗಳನ್ನು ಬರೆಯುವಾಗ ಪವಿತ್ರಾತ್ಮವು ದಾವೀದನನ್ನು ಮಾರ್ಗದರ್ಶಿಸಿತು ಎಂದು ಯೇಸುವಿಗೆ ತಿಳಿದಿತ್ತು. ಇಂದು ನಮಗೂ ಅದೇ ಪವಿತ್ರಾತ್ಮದ ಸಹಾಯ ದೊರೆಯುವುದೋ?

“ಬೇಡಿಕೊಳ್ಳುತ್ತಾ ಇರಿ, ಅದು ನಿಮಗೆ ಕೊಡಲ್ಪಡುವುದು”

ದಾವೀದನಂತೆ ನಾವೆಂದೂ ಕೀರ್ತನೆಯನ್ನು ಬರೆಯಲಿಕ್ಕಿಲ್ಲವಾದರೂ ಗೊಲ್ಯಾತನಂಥ ದೈತ್ಯ ಸಮಸ್ಯೆಗಳನ್ನು ನಾವು ಎದುರಿಸಬಹುದು. ಇಸೆಬೆಲ್‌ * ಎಂಬಾಕೆಯ ಉದಾಹರಣೆಯನ್ನು ಗಮನಿಸಿ. ಗಂಡ ಅವಳನ್ನು ಬಿಟ್ಟು ಒಬ್ಬಾಕೆ ಯುವತಿಯ ಹಿಂದೆ ಹೋದನು. ಅಲ್ಲದೆ ಅವನು ಮಾಡಿದ್ದ ಸಾಲದ ಹೊರೆಯೂ ಅವಳ ತಲೆ ಮೇಲೆ ಬಂತು. ಇಬ್ಬರು ಸಣ್ಣ ಸಣ್ಣ ಹೆಣ್ಣುಮಕ್ಕಳಿದ್ದರೂ ಈಕೆಗೆ ಅವನು ಯಾವ ಆರ್ಥಿಕ ಸಹಾಯವನ್ನೂ ನೀಡಲಿಲ್ಲ. “ನನ್ನ ಗಂಡ ನನಗೆ ದ್ರೋಹಮಾಡಿ ಕಾಲು ಕಸಕ್ಕಿಂತ ಕಡೆಯಾಗಿ ನೋಡಿದನೆಂಬದು ನನ್ನನ್ನು ಎದೆಗುಂದಿಸಿತು. ಆದರೆ ಅಂದಿನಿಂದ ಇಂದಿನವರೆಗೂ ದೇವರ ಪವಿತ್ರಾತ್ಮವು ನನಗೆ ಇದೆಲ್ಲವನ್ನೂ ಸಹಿಸಿಕೊಳ್ಳಲು ಬಲಕೊಟ್ಟಿದೆ” ಎನ್ನುತ್ತಾಳೆ ಇಸೆಬೆಲ್‌.

ಆಕೆಗೆ ಪವಿತ್ರಾತ್ಮ ನಿರಾಯಾಸವಾಗಿ ಸಿಕ್ಕಿತೋ? ಇಲ್ಲ, ಅದಕ್ಕಾಗಿ ಅವಳು ಪ್ರತಿದಿನ ದೇವರ ಬಳಿ ಬೇಡುತ್ತಿದ್ದಳು. ಭವಿಷ್ಯವನ್ನು ಧೈರ್ಯದಿಂದ ಎದುರಿಸಲು, ಮಕ್ಕಳನ್ನು ಚೆನ್ನಾಗಿ ಸಾಕಿಸಲಹಲು ಮತ್ತು ನುಚ್ಚುನೂರಾಗಿದ್ದ ಆತ್ಮಗೌರವವನ್ನು ಮರಳಿ ಪಡೆಯಲು ದೇವರ ಸಹಾಯ ಬೇಕೇ ಬೇಕು ಎಂದು ಅವಳಿಗೆ ತಿಳಿದಿತ್ತು. ಯೇಸುವಿನ ಈ ಮಾತುಗಳನ್ನು ಅವಳು ಅನ್ವಯಿಸಿದಳು: “ಬೇಡಿಕೊಳ್ಳುತ್ತಾ ಇರಿ, ಅದು ನಿಮಗೆ ಕೊಡಲ್ಪಡುವುದು; ಹುಡುಕುತ್ತಾ ಇರಿ, ನೀವು ಕಂಡುಕೊಳ್ಳುವಿರಿ; ತಟ್ಟುತ್ತಾ ಇರಿ, ಅದು ನಿಮಗೆ ತೆರೆಯಲ್ಪಡುವುದು.”—ಮತ್ತಾಯ 7:7.

ರೋಬರ್ಟೋ ಎಂಬವನ ಕಥೆ ಬೇರೆ. ಅವನಿಗೂ ಪವಿತ್ರಾತ್ಮದ ಅಗತ್ಯವಿತ್ತು. ತಂಬಾಕು ಮತ್ತು ಹಾಷಿಷ್‌ ಎಂಬ ಮಾದಕದ್ರವ್ಯವನ್ನು ಎಡೆಬಿಡದೆ ಸೇದುತ್ತಿದ್ದ ಅವನು ಅದಕ್ಕೆ ಗುಲಾಮನಾಗಿದ್ದ. ಈ ಚಟ ಬಿಡಲು ಎರಡು ವರ್ಷ ಹೆಣಗಾಡಿದ. ಈ ಮಧ್ಯೆ ಎಷ್ಟೋ ಸಲ ಅದನ್ನು ಮತ್ತೆ ಶುರುಮಾಡಿದ್ದ. “ಮಾದಕದ್ರವ್ಯಗಳನ್ನು ನಿಲ್ಲಿಸಿದಾಗ ಒಂದು ರೀತಿಯ ತಳಮಳ ನನ್ನನ್ನು ಮುತ್ತುತಿತ್ತು. ದೇಹ ದಿನದಿನವೂ ಮಾದಕದ್ರವ್ಯಕ್ಕಾಗಿ ಹಪಹಪಿಸುತ್ತಿತ್ತು” ಎಂದು ಅವನು ಹೇಳುತ್ತಾನೆ.

ಅವನು ಮುಂದುವರಿಸಿ ಹೇಳಿದ್ದು: “ದೇವರು ಮೆಚ್ಚುವ ರೀತಿಯಲ್ಲಿ ಆತನನ್ನು ಆರಾಧಿಸಲಿಕ್ಕಾಗಿ ನನ್ನ ಜೀವನದಲ್ಲಿ ಬದಲಾವಣೆ ಮಾಡಲು ಗಟ್ಟಿಮನಸ್ಸು ಮಾಡಿದೆ. ಬೈಬಲ್‌ ವಿಷಯಗಳನ್ನು ನನ್ನ ಮನಸ್ಸಿನಲ್ಲಿ ತುಂಬಿಸಲು ಪ್ರಯತ್ನಿಸಿದೆ. ನನ್ನ ಜೀವನವನ್ನು ಸರಿದಾರಿಗೆ ತರಲು ಬಲಕ್ಕಾಗಿ ದಿನನಿತ್ಯ ದೇವರಿಗೆ ಶ್ರದ್ಧೆಯಿಂದ ಪ್ರಾರ್ಥಿಸಿದೆ. ಏಕೆಂದರೆ ನನ್ನ ಸ್ವಂತ ಬಲದಿಂದ ಅದು ಸಾಧ್ಯವಿಲ್ಲವೆಂದು ನನಗೆ ಗೊತ್ತಿತ್ತು. ದುಶ್ಚಟವನ್ನು ಮತ್ತೆ ಮತ್ತೆ ಶುರುಮಾಡಿ ಧೃತಿಗೆಟ್ಟಾಗ ಯೆಹೋವ ದೇವರು ನನ್ನ ಪ್ರಾರ್ಥನೆಗಳನ್ನು ಹೇಗೆ ಉತ್ತರಿಸಿದನೆಂದು ಕಣ್ಣಾರೆ ನೋಡಿದೆ. ಆತನ ಪವಿತ್ರಾತ್ಮವೇ ನನಗೆ ನವಬಲವನ್ನು ಕೊಟ್ಟಿತ್ತು; ಅದರ ಸಹಾಯವಿಲ್ಲದೆ ಆ ಕೆಟ್ಟ ಚಟವನ್ನು ಬಿಡಲು ನನ್ನಿಂದ ಖಂಡಿತ ಸಾಧ್ಯವಿರುತ್ತಿರಲಿಲ್ಲ.”—ಫಿಲಿಪ್ಪಿ 4:6-8.

“ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು” ಮೇಲಕ್ಕೇರುವುದು

ಇಸೆಬೆಲ್‌ ಮತ್ತು ರೋಬರ್ಟೋರಂತೆ ಲಕ್ಷಾಂತರ ಮಂದಿ ಯೆಹೋವನ ಸಾಕ್ಷಿಗಳು ಪವಿತ್ರಾತ್ಮಕ್ಕಿರುವ ಶಕ್ತಿಯನ್ನು ಸ್ವತಃ ಅನುಭವಿಸಿದ್ದಾರೆ. ಯೆಹೋವನು ಇಡೀ ವಿಶ್ವದ ಸೃಷ್ಟಿಗಾಗಿ ಉಪಯೋಗಿಸಿದ ಈ ಕಾರ್ಯಕಾರಿ ಶಕ್ತಿಯು ನೀವು ಇಚ್ಛಿಸುವಲ್ಲಿ ನಿಮಗೂ ದೊರೆಯುವುದು. ನೀವು ಅದಕ್ಕಾಗಿ ಮನಃಪೂರ್ವಕವಾಗಿ ಬೇಡಿಕೊಂಡರೆ ಅದನ್ನು ಕೊಡಲು ದೇವರು ಸಿದ್ಧನು ಮಾತ್ರವಲ್ಲ ಸಂತೋಷದಿಂದ ಕೊಡುವನು. ಆದರೆ ಅದನ್ನು ನೀವು ಪಡೆಯಬೇಕಾದರೆ ದೇವರ ಕುರಿತ ಸತ್ಯವನ್ನು ಕಲಿತು ಯಥಾರ್ಥ ಮನಸ್ಸಿನಿಂದ ಆತನ ಚಿತ್ತವನ್ನು ಮಾಡಬೇಕು.—ಯೆಶಾಯ 55:6; ಇಬ್ರಿಯ 11:6.

ಯಶಸ್ವಿಕರವಾಗಿ ದೇವರ ಸೇವೆಮಾಡಲು ಮತ್ತು ಬದುಕಿನ ಬವಣೆಗಳನ್ನು, ಸವಾಲುಗಳನ್ನು ನಿಭಾಯಿಸಲು ಪವಿತ್ರಾತ್ಮವು ನಿಮಗೆ ಬೇಕಾದ ಬಲಕೊಡುವುದು. ಬೈಬಲ್‌ ನಮಗೆ ಈ ಆಶ್ವಾಸನೆ ಕೊಡುತ್ತದೆ: “[ಯೆಹೋವನು] ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ. . . . ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು.”—ಯೆಶಾಯ 40:28-31. (w09-E 10/01)

[ಪಾದಟಿಪ್ಪಣಿ]

^ ಪ್ಯಾರ. 6 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 14ರಲ್ಲಿರುವ ಸಂಕ್ಷಿಪ್ತ ವಿವರಣೆ]

‘ಬಲಕ್ಕಾಗಿ ದಿನನಿತ್ಯ ದೇವರಿಗೆ ಶ್ರದ್ಧೆಯಿಂದ ಪ್ರಾರ್ಥಿಸಿದೆ. ಏಕೆಂದರೆ ನನ್ನ ಸ್ವಂತ ಬಲದಿಂದ ಅದು ಸಾಧ್ಯವಿಲ್ಲವೆಂದು ನನಗೆ ಗೊತ್ತಿತ್ತು. ದೇವರು ನನ್ನ ಪ್ರಾರ್ಥನೆಗಳನ್ನು ಹೇಗೆ ಉತ್ತರಿಸಿದನೆಂದು ಕಣ್ಣಾರೆ ನೋಡಿದೆ’

[ಪುಟ 13ರಲ್ಲಿರುವ ಚೌಕ/ಚಿತ್ರಗಳು]

ದೇವರು ಪವಿತ್ರಾತ್ಮವನ್ನು ಬಳಸಿದ ವಿಧಗಳು

ಭೂಮಿಯೂ ಸೇರಿದಂತೆ ಇಡೀ ವಿಶ್ವವನ್ನು ಸೃಷ್ಟಿಸಲಿಕ್ಕಾಗಿ. “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ” ಎಂದು ಕೀರ್ತನೆಗಾರನು ಉದ್ಗಾರವೆತ್ತಿದನು. “ನೀನು ಜೀವಶ್ವಾಸವನ್ನು [“ನಿನ್ನ ಪವಿತ್ರಾತ್ಮವನ್ನು,” NW] ಊದಲು ಅವು ಹೊಸದಾಗಿ ಹುಟ್ಟುತ್ತವೆ.”—ಕೀರ್ತನೆ 104:24, 30; ಆದಿಕಾಂಡ 1:2; ಯೋಬ 33:4.

ಬೈಬಲನ್ನು ಬರೆಯುವಂತೆ ದೇವಭಕ್ತ ಪುರುಷರನ್ನು ಪ್ರೇರಿಸಲಿಕ್ಕಾಗಿ. “ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು . . . ಉಪಯುಕ್ತವಾಗಿದೆ” ಎಂದು ಅಪೊಸ್ತಲ ಪೌಲನು ಬರೆದನು. (2 ತಿಮೊಥೆಯ 3:16) “ದೇವರಿಂದ ಪ್ರೇರಿತವಾಗಿದೆ” ಎಂಬುದಕ್ಕಿರುವ ಗ್ರೀಕ್‌ ಪದಕ್ಕೆ “ದೇವರು ಉಸಿರಿದ” ಎಂಬ ಅಕ್ಷರಾರ್ಥವಿದೆ. ಯೆಹೋವ ದೇವರ ಉಸಿರು ಇಲ್ಲವೆ ಪವಿತ್ರಾತ್ಮವು ಬೈಬಲ್‌ ಬರಹಗಾರರ ಆಲೋಚನೆಗಳನ್ನು ಮಾರ್ಗದರ್ಶಿಸಿತು. ಹೀಗೆ ಅವರು “ದೇವರ ವಾಕ್ಯವನ್ನು” ತಮ್ಮ ಬರಹಗಳ ಮೂಲಕ ನಮಗೆ ದಾಟಿಸಿದರು.—1 ಥೆಸಲೊನೀಕ 2:13.

ಭವಿಷ್ಯವನ್ನು ನಿಖರವಾಗಿ ಮುಂತಿಳಿಸಲು ದೇವರ ಸೇವಕರನ್ನು ಶಕ್ತಗೊಳಿಸಲಿಕ್ಕಾಗಿ. ಅಪೊಸ್ತಲ ಪೇತ್ರನು ವಿವರಿಸಿದ್ದು: “ಶಾಸ್ತ್ರಗ್ರಂಥದಲ್ಲಿರುವ ಯಾವ ಪ್ರವಾದನೆಯೂ ಯಾವುದೇ ಖಾಸಗಿ ಅರ್ಥವಿವರಣೆಯಿಂದ ಉಂಟಾಗುವುದಿಲ್ಲ . . . ಪ್ರವಾದನೆಯು ಎಂದೂ ಮನುಷ್ಯನ ಚಿತ್ತದಿಂದ ಉಂಟಾಗಲಿಲ್ಲ, ಬದಲಿಗೆ ಮನುಷ್ಯರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತಾಡಿದರು.”—2 ಪೇತ್ರ 1:20, 21; ಯೋವೇಲ 2:28.

ದೇವರ ರಾಜ್ಯದ ಸುವಾರ್ತೆ ಸಾರಲು ಮತ್ತು ಪವಾಡಗಳನ್ನು ನಡೆಸಲು ಯೇಸುವಿಗೆ ಮತ್ತು ಇತರ ನಂಬಿಗಸ್ತ ಪುರುಷರಿಗೆ ಸಹಾಯಮಾಡಲಿಕ್ಕಾಗಿ. ಯೇಸು ಹೇಳಿದ್ದು: “ಯೆಹೋವನ ಆತ್ಮವು ನನ್ನ ಮೇಲೆ ಇದೆ. ಆತನು ನನ್ನನ್ನು ಬಡವರಿಗೆ ಸುವಾರ್ತೆಯನ್ನು ಪ್ರಕಟಿಸುವುದಕ್ಕಾಗಿ ಅಭಿಷೇಕಿಸಿದನು; ಬಂದಿಗಳಿಗೆ ಬಿಡುಗಡೆಯನ್ನು ಸಾರುವುದಕ್ಕೂ ಕುರುಡರಿಗೆ ದೃಷ್ಟಿಯನ್ನು ಕೊಡುವುದಕ್ಕೂ . . . ನನ್ನನ್ನು ಕಳುಹಿಸಿದ್ದಾನೆ.”—ಲೂಕ 4:18, 19; ಮತ್ತಾಯ 12:28.

[ಪುಟ 15ರಲ್ಲಿರುವ ಚೌಕ/ಚಿತ್ರಗಳು]

ಪವಿತ್ರಾತ್ಮ ನಮಗೆ ಸಹಾಯಮಾಡುವ ವಿಧಗಳು

ದುಷ್ಪ್ರೇರಣೆಗಳನ್ನು ಪ್ರತಿರೋಧಿಸಲು ಮತ್ತು ದುಶ್ಚಟಗಳನ್ನು ತೊರೆಯಲು ಬಲಕೊಡುತ್ತದೆ. ಅಪೊಸ್ತಲ ಪೌಲನು ಹೇಳಿದ್ದು: “ದೇವರು ನಂಬಿಗಸ್ತನು; ನೀವು ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಪ್ರಲೋಭಿಸಲ್ಪಡುವಂತೆ ಆತನು ಅನುಮತಿಸುವುದಿಲ್ಲ; ನೀವು ತಾಳಿಕೊಳ್ಳಲು ಶಕ್ತರಾಗುವಂತೆ ಪ್ರಲೋಭನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಆತನು ಸಿದ್ಧಪಡಿಸುವನು.”—1 ಕೊರಿಂಥ 10:13.

ದೇವರು ಮೆಚ್ಚುವ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಮಾಡುತ್ತದೆ. “ಪವಿತ್ರಾತ್ಮದಿಂದ ಉಂಟಾಗುವ ಫಲವೇನೆಂದರೆ, ಪ್ರೀತಿ, ಆನಂದ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ, ಸ್ವನಿಯಂತ್ರಣ.” —ಗಲಾತ್ಯ 5:22, 23.

ಕಷ್ಟಗಳನ್ನು ತಾಳಿಕೊಳ್ಳಲು ಬಲಕೊಡುತ್ತದೆ. “ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:13.