ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಿಶಾಚ—ವ್ಯಕ್ತಿಯೋ ಬರೇ ಕೆಟ್ಟಗುಣವೋ?

ಪಿಶಾಚ—ವ್ಯಕ್ತಿಯೋ ಬರೇ ಕೆಟ್ಟಗುಣವೋ?

ನಮ್ಮ ಓದುಗರ ಪ್ರಶ್ನೆ

ಪಿಶಾಚ—ವ್ಯಕ್ತಿಯೋ ಬರೇ ಕೆಟ್ಟಗುಣವೋ?

ಪಿಶಾಚನಾದ ಸೈತಾನನು ಒಬ್ಬ ವ್ಯಕ್ತಿಯೆಂದು ಬೈಬಲ್‌ ಬೋಧಿಸುತ್ತದೆ. ಈ ವಿಚಾರವು ಬೈಬಲಿನ ಟೀಕಾಕಾರರ ಅಪಹಾಸ್ಯಕ್ಕೆ ಗುರಿಯಾಗಿದೆ. ಏಕೆಂದರೆ ಮಾನವರಲ್ಲಿರುವ ಕೆಟ್ಟಗುಣವೇ ಸೈತಾನ ಎಂಬುದು ಅವರ ಅಂಬೋಣ.

ಸೈತಾನ ವ್ಯಕ್ತಿಯೋ ಬರೇ ಕೆಟ್ಟಗುಣವೋ ಎಂಬದರ ಕುರಿತ ಈ ಗೊಂದಲ ನಮ್ಮನ್ನು ಆಶ್ಚರ್ಯಗೊಳಿಸಬೇಕೋ? ಇಲ್ಲ. ದೃಷ್ಟಾಂತಕ್ಕೆ, ಒಬ್ಬ ಪಾತಕಿ ಅಪರಾಧಕೃತ್ಯವೆಸಗಿ ತನ್ನ ಬೆರಳಗುರುತುಗಳನ್ನು ಅಳಿಸಿಹಾಕುತ್ತಾನೆ. ಯಾಕೆ? ತನ್ನ ಗುರುತನ್ನು ಮರೆಮಾಚಿ, ಒಂದಿಷ್ಟೂ ಸುಳಿವು ಬಿಡದೆ ಕಾನೂನುಬಾಹಿರ ಕೆಲಸವನ್ನು ಮುಂದುವರಿಸಲಿಕ್ಕಾಗಿಯೇ. ಅದೇ ರೀತಿಯಲ್ಲಿ ಸೈತಾನನು ಪ್ರಧಾನ ಸಂಚುಕೋರ. ಅವನು ನೈತಿಕ ಭ್ರಷ್ಟತೆಗೆ ಕುಮ್ಮಕ್ಕುಕೊಡುತ್ತಾ ತೆರೆಯ ಹಿಂದೆ ಇದ್ದೇ ಕೆಲಸಗಳನ್ನು ಮಾಡುವ ದುಷ್ಟ. ಜಗತ್ತಿನಲ್ಲಿರುವ ದುಷ್ಟ ಪರಿಸ್ಥಿತಿಗೆ ಸೈತಾನನೇ ಜವಾಬ್ದಾರನೆಂದು ಯೇಸು ಸ್ಪಷ್ಟವಾಗಿ ಗುರುತಿಸಿದನು. ಅವನು ಸೈತಾನನನ್ನು “ಈ ಲೋಕದ ಅಧಿಪತಿ” ಎಂದು ಕರೆದನು.—ಯೋಹಾನ 12:31.

ಪಿಶಾಚನು ಅಸ್ತಿತ್ವಕ್ಕೆ ಬಂದದ್ದು ಹೇಗೆ? ಈತನನ್ನು ಮೂಲತಃ ಸ್ವರ್ಗದಲ್ಲಿ ಒಬ್ಬ ಪರಿಪೂರ್ಣ ಆತ್ಮಜೀವಿಯಾಗಿ ಸೃಷ್ಟಿಸಲಾಗಿತ್ತು. ಆದರೆ ಕಾಲಾನಂತರ, ಮಾನವರು ದೇವರ ಬದಲಿಗೆ ತನ್ನನ್ನೇ ಆರಾಧಿಸಬೇಕೆಂಬ ದುರಿಚ್ಛೆ ಅವನಲ್ಲಿ ಮೊಳೆಯಿತು. ಅದು ಹೆಮ್ಮರವಾಗಿ ಅವನು ದಂಗೆಯೇಳುವಂತೆ ಮಾಡಿತು. ಹೀಗೆ ಈ ದೇವದೂತನು ತನ್ನನ್ನೇ ಪಿಶಾಚನನ್ನಾಗಿ ಮಾಡಿಕೊಂಡನು. ಭೂಮಿ ಮೇಲೆ ಸೈತಾನ ಹಾಗೂ ಯೇಸುವಿನ ನಡುವೆ ನಡೆದ ಒಂದು ಸಂಭಾಷಣೆಯ ದಾಖಲೆ ಬೈಬಲಿನಲ್ಲಿದೆ. ಆ ಸಂದರ್ಭದಲ್ಲಿ ಯೇಸು ತನಗೆ ಅಡ್ಡಬಿದ್ದು ಆರಾಧಿಸುವಂತೆ ಮಾಡಲು ಸೈತಾನನು ಯತ್ನಿಸಿದನು. ಹೀಗೆ ಪಿಶಾಚನು ತನಗಿದ್ದ ಸ್ವಾರ್ಥ ಹೆಬ್ಬಯಕೆಯನ್ನು ಬಯಲುಪಡಿಸಿದನು.—ಮತ್ತಾಯ 4:8, 9.

ಯೋಬ ಪುಸ್ತಕದಲ್ಲಿ, ದೇವರೊಂದಿಗೆ ಸೈತಾನನು ನಡೆಸಿದ ಸಂಭಾಷಣೆಗಳ ದಾಖಲೆಯಿದೆ. ಈ ಸಂಭಾಷಣೆಗಳಲ್ಲೂ ಸೈತಾನನು ತನ್ನ ಇರಾದೆಗಳನ್ನು ಹೊರಗೆಡಹಿದನು. ಮನುಷ್ಯರು ದೇವರನ್ನು ತೊರೆದುಬಿಡುವಂತೆ ಮಾಡಲು ಅವನು ಏನನ್ನೂ ಮಾಡಲು ಹೇಸದವನು.—ಯೋಬ 1:13-19; 2:7, 8.

ಸ್ವಲ್ಪ ಯೋಚಿಸಿ: ಯೆಹೋವ ದೇವರು ಮತ್ತು ಯೇಸು ಕ್ರಿಸ್ತನೊಂದಿಗೆ ಸೈತಾನನು ಮಾತಾಡಿರುವಾಗ ಅವನು ಹೇಗೆ ಬರೇ ಕೆಟ್ಟಗುಣವಾಗಿರಸಾಧ್ಯ? ದೇವರಲ್ಲಾಗಲಿ ಆತನ ಪುತ್ರನಲ್ಲಾಗಲಿ ಯಾವ ಕೆಟ್ಟತನವೂ ಇಲ್ಲವಲ್ಲ! ಆದ್ದರಿಂದ ಸೈತಾನನು ಒಬ್ಬ ವ್ಯಕ್ತಿ, ಯೆಹೋವನಿಗಾಗಲಿ ಯೇಸುವಿಗಾಗಲಿ ಕಿಂಚಿತ್ತೂ ಗೌರವ ತೋರಿಸದ ದುಷ್ಟ ಆತ್ಮಜೀವಿ ಎಂಬುದು ಸ್ಫಟಿಕ ಸ್ಪಷ್ಟ.

ಜಗತ್ತಿನಲ್ಲಿರುವ ಭ್ರಷ್ಟ ಪರಿಸ್ಥಿತಿ ಪಿಶಾಚನ ಅಸ್ತಿತ್ವಕ್ಕೆ ಸಾಕ್ಷ್ಯವಾಗಿದೆ. ಉದಾಹರಣೆಗೆ, ಈ ಲೋಕದ ರಾಷ್ಟ್ರಗಳು ತಮ್ಮ ಹೆಚ್ಚುವರಿ ಆಹಾರವನ್ನು ಕೊಳೆಯುವಂತೆ ಬಿಡಲು ಸಿದ್ಧರಿದ್ದರೂ ಹಸಿವಿನಿಂದ ನರಳುತ್ತಿರುವ ಜನತೆಗಂತೂ ಕೊಡುವುದಿಲ್ಲ. ರಾಷ್ಟ್ರಗಳು ಪರಸ್ಪರರ ವಿನಾಶಕ್ಕಾಗಿ ಸಾಮೂಹಿಕ ನಾಶನದ ಅಸ್ತ್ರಗಳನ್ನು ಶೇಖರಿಸಿಟ್ಟಿದ್ದಾರೆ. ಪರಿಸರವನ್ನೂ ಮಲಿನಗೊಳಿಸುತ್ತಾರೆ. ಇಂಥ ದ್ವೇಷಪೂರಿತ, ಸ್ವಘಾತುಕ ನಡವಳಿಕೆಗೆ ಕಾರಣ ಏನೆಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಏಕೆ?

ಸೈತಾನನು “ಅವಿಶ್ವಾಸಿಗಳ ಮನಸ್ಸನ್ನು ಕುರುಡುಮಾಡಿದ್ದಾನೆ” ಎಂದು ಬೈಬಲ್‌ ತಿಳಿಯಪಡಿಸುತ್ತದೆ. (2 ಕೊರಿಂಥ 4:4) ಮಾನವಕುಲವನ್ನು ತನ್ನ ಹತೋಟಿಯಲ್ಲಿಡಲು ಸೈತಾನನು ಒಂದು ಅದೃಶ್ಯ ಸಂಘಟನೆಯನ್ನು ಬಳಸುತ್ತಾನೆ. ಅವನು “ದೆವ್ವಗಳ ಅಧಿಪತಿ” ಆಗಿದ್ದಾನೆ. (ಮತ್ತಾಯ 12:24) ಅಪರಾಧ ಕೃತ್ಯಗಳನ್ನೆಸಗುವ ಒಂದು ದೊಡ್ಡ ಗ್ಯಾಂಗ್‌ನ ದೊರೆಯ ಬಗ್ಗೆ ಯೋಚಿಸಿ. ಅವನು ಹೊರಜಗತ್ತಿಗೆ ತನ್ನನ್ನು ತೋರಗೊಡಿಸದೇ ತನ್ನ ಗ್ಯಾಂಗನ್ನು ಚಲಾಯಿಸಬಲ್ಲನು. ಹಾಗೆಯೇ ಸೈತಾನನ ಪಾತ್ರದ ಬಗ್ಗೆಯಾಗಲಿ, ಪ್ರಭಾವದ ಬಗ್ಗೆಯಾಗಲಿ ಅಧಿಕಾಂಶ ಜನರಿಗೆ ಯಾವುದೇ ಅರಿವಿಲ್ಲ. ಈ ಜನಸಮೂಹಗಳನ್ನು ಮುಷ್ಟಿಯಲ್ಲಿಡಲಿಕ್ಕಾಗಿ ಸೈತಾನನು ದುಷ್ಟ ದೂತರಿಂದ ಕೂಡಿರುವ ತನ್ನ ಅಪಾಯಕಾರಿ ಸಂಘಟನೆಯನ್ನು ಬಳಸುತ್ತಾನೆ.

ಪಿಶಾಚ ಮತ್ತು ಅವನ ಸಂಘಟನೆಯ ನಿಜ ಸ್ವರೂಪವನ್ನು ಬೈಬಲಿನಲ್ಲಿ ಬಯಲುಪಡಿಸಿರುವುದಕ್ಕೆ ನಾವು ದೇವರಿಗೆ ತುಂಬ ಆಭಾರಿಗಳು! ಆ ತಿಳುವಳಿಕೆಯಿಂದಾಗಿ ನಾವು ಪಿಶಾಚನ ಪ್ರಭಾವವನ್ನು ಪ್ರತಿರೋಧಿಸಲು ಹೆಜ್ಜೆಗಳನ್ನು ತೆಗೆದುಕೊಳ್ಳಬಹುದು. ಬೈಬಲ್‌ ನಮಗೆ ಈ ಬುದ್ಧಿವಾದ ಕೊಡುತ್ತದೆ: “ದೇವರಿಗೆ ನಿಮ್ಮನ್ನು ಅಧೀನಪಡಿಸಿಕೊಳ್ಳಿರಿ; ಆದರೆ ಪಿಶಾಚನನ್ನು ಎದುರಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು.”—ಯಾಕೋಬ 4:7. (w09-E 10/01)