ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೂವರು ಜ್ಞಾನಿಗಳು ನವಜಾತ ಯೇಸುವನ್ನು ಭೇಟಿಮಾಡಿದ್ದು ನಿಜವೋ?

ಮೂವರು ಜ್ಞಾನಿಗಳು ನವಜಾತ ಯೇಸುವನ್ನು ಭೇಟಿಮಾಡಿದ್ದು ನಿಜವೋ?

ನಮ್ಮ ಓದುಗರ ಪ್ರಶ್ನೆ

ಮೂವರು ಜ್ಞಾನಿಗಳು ನವಜಾತ ಯೇಸುವನ್ನು ಭೇಟಿಮಾಡಿದ್ದು ನಿಜವೋ?

ಜಗತ್ತಿನಾದ್ಯಂತ ಕೇಳಿಬರುವ ಕ್ರಿಸ್ಮಸ್‌ ಕಥೆಗಳಲ್ಲಿ ಮೂವರು ಅರಸರು ಇಲ್ಲವೆ ಜ್ಞಾನಿಗಳು ನವಜಾತ ಯೇಸುವನ್ನು ನೋಡಲು ಬಂದು ಅವನಿಗಾಗಿ ಬೆಲೆಬಾಳುವ ಉಡುಗೊರೆಗಳನ್ನು ತಂದರೆಂದು ಹೇಳಲಾಗುತ್ತದೆ. ಈ ಕಥೆ ನಿಜವೋ? ನಿಜಾಂಶಗಳಿಗೆ ಹೊಂದಿಕೆಯಲ್ಲಿದೆಯೋ? ನೋಡೋಣ.

ಬೈಬಲಿನ ಭಾಗವಾಗಿರುವ ಮತ್ತಾಯ ಮತ್ತು ಲೂಕ ಎಂಬ ಎರಡು ಸುವಾರ್ತಾ ಪುಸ್ತಕಗಳಲ್ಲಿ ಯೇಸುವಿನ ಜನನದ ವೃತ್ತಾಂತವಿದೆ. ಈ ವೃತ್ತಾಂತಗಳು, ಯೇಸು ಹುಟ್ಟಿದಾಗ ಅವನನ್ನು ನೋಡಲು ಹತ್ತಿರದ ಹೊಲಗಳಲ್ಲಿದ್ದ ಬಡ ಕುರುಬರು ಮಾತ್ರ ಹೋಗಿದ್ದರೆಂದು ತೋರಿಸುತ್ತವೆ. ಅರಸರು ಇಲ್ಲವೆ ಜ್ಞಾನಿಗಳೆಂದು ಕರೆಯಲಾಗುವ ಪುರುಷರು ವಾಸ್ತವದಲ್ಲಿ ಜೋಯಿಸರಾಗಿದ್ದರು. ಅವರು ರಾಜರಾಗಿರಲಿಲ್ಲ ಮತ್ತು ಅವರೆಷ್ಟು ಮಂದಿ ಇದ್ದರೆಂದು ಬೈಬಲ್‌ ತಿಳಿಸುವುದಿಲ್ಲ. ಈ ಜೋಯಿಸರು ಪ್ರಯಾಣಿಸಿ ಬಂದಾಗ ಕಂಡದ್ದು ಒಬ್ಬ ನವಜಾತ ಕೂಸನ್ನಲ್ಲ ಬದಲಾಗಿ ಪುಟ್ಟ ಬಾಲಕನಾದ ಯೇಸುವನ್ನು; ಒಂದು ಗೋದಲಿಯಲ್ಲಿ ಅಲ್ಲ ಒಂದು ಮನೆಯಲ್ಲಿ. ಆ ಜೋಯಿಸರ ಆಗಮನದಿಂದ ಯೇಸುವಿನ ಜೀವಕ್ಕೆ ಅಪಾಯವೂ ಇತ್ತು!

ಯೇಸುವಿನ ಜನನದ ಕುರಿತು ಬೈಬಲ್‌ ಲೇಖಕರಲ್ಲಿ ಒಬ್ಬನಾದ ಲೂಕ ಬರೆದ ವೃತ್ತಾಂತಕ್ಕೆ ನಿಕಟ ಗಮನಕೊಡಿ. ಅಲ್ಲಿ ಹೀಗನ್ನಲಾಗಿದೆ: “ಅದೇ ಸೀಮೆಯಲ್ಲಿ ಕುರುಬರು ಮನೆಗಳಿಂದ ಹೊರಗೆ ವಾಸಿಸುತ್ತಿದ್ದು ರಾತ್ರಿಯಲ್ಲಿ ತಮ್ಮ ಮಂದೆಯನ್ನು ಕಾಯುತ್ತಿದ್ದರು. ಇದ್ದಕ್ಕಿದ್ದಂತೆ ಯೆಹೋವನ ದೂತನು ಅವರ ಬಳಿಯಲ್ಲಿ ನಿಂತನು ಮತ್ತು . . . ‘ಬಟ್ಟೆಯಿಂದ ಸುತ್ತಲ್ಪಟ್ಟಿದ್ದು ಗೋದಲಿಯಲ್ಲಿ ಮಲಗಿರುವ ಒಂದು ಶಿಶುವನ್ನು ನೀವು ಕಾಣುವಿರಿ’ ಎಂದು ಹೇಳಿದನು. . . . ಅವರು ಅವಸರದಿಂದ ಹೋಗಿ ಮರಿಯಳನ್ನೂ ಯೋಸೇಫನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡರು.”—ಲೂಕ 2:8-16.

ಶಿಶುವಾಗಿದ್ದ ಯೇಸುವಿನ ಹತ್ತಿರವಿದ್ದವರು ಕೇವಲ ಯೋಸೇಫ, ಮರಿಯ ಮತ್ತು ಕುರುಬರು. ಇವರನ್ನು ಬಿಟ್ಟು ಬೇರಾರ ಬಗ್ಗೆಯೂ ಲೂಕನು ವರದಿಸಲಿಲ್ಲ.

ಪವಿತ್ರ ಗ್ರಂಥ (NIBV) ಎಂಬ ಬೈಬಲ್‌ ಭಾಷಾಂತರದಿಂದ ಮತ್ತಾಯ 2:1-11ರ ವೃತ್ತಾಂತವನ್ನು ಈಗ ಪರೀಕ್ಷಿಸಿರಿ. ಅದನ್ನುವುದು: ‘ಹೆರೋದ ರಾಜನ ಕಾಲದಲ್ಲಿ ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಜನಿಸಿದಾಗ, ಪೂರ್ವ ದೇಶದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದರು. . . . ಜ್ಞಾನಿಗಳು ಮನೆಯೊಳಗೆ ಬಂದು ಆ ಮಗುವನ್ನು, ಅದರ ತಾಯಿಯಾದ ಮರಿಯಳೊಂದಿಗೆ ಕಂಡರು.’

ಗಮನಿಸಿ, ಈ ವೃತ್ತಾಂತವು ಬರೀ “ಜ್ಞಾನಿಗಳು” ಎಂದನ್ನುತ್ತದೆಯೇ ಹೊರತು “ಮೂವರು ಜ್ಞಾನಿಗಳು” ಎಂದಲ್ಲ. ಅಲ್ಲದೆ ಅವರು ಪೂರ್ವ ದೇಶದಿಂದ ನೇರವಾಗಿ ಯೇಸುವಿನ ಹುಟ್ಟೂರಾದ ಬೇತ್ಲೆಹೇಮಿಗೆ ಹೋದರೆಂದು ಅಲ್ಲ, ಯೆರೂಸಲೇಮಿಗೆ ಹೋದರೆಂದು ತಿಳಿಸುತ್ತದೆ. ಕೊನೆಗೆ ಅವರು ಬೇತ್ಲೆಹೇಮನ್ನು ತಲಪುವಷ್ಟರಲ್ಲಿ ಬಾಲಕನಾದ ಯೇಸು ಇದ್ದದ್ದು ಹಟ್ಟಿಯಲ್ಲಲ್ಲ ಬದಲಾಗಿ ಒಂದು ಮನೆಯಲ್ಲಿ.

ಪವಿತ್ರ ಗ್ರಂಥ ಈ ಸಂದರ್ಶಕರನ್ನು “ಜ್ಞಾನಿಗಳು” ಎಂದು ಕರೆಯುತ್ತದಾದರೂ, ಬೇರೆ ಭಾಷಾಂತರಗಳು “ಮೇಜೈ” ಅಥವಾ “ಜೋಯಿಸರು” ಎಂಬ ಪದಗಳನ್ನು ಬಳಸುತ್ತವೆ. “ಜ್ಞಾನಿಗಳು” ಎಂಬ ಪದವು “ಜ್ಯೋತಿಷ್ಯದಲ್ಲಿ ಪರಿಣತರಾದ ಪರ್ಷಿಯದ ಪುರೋಹಿತರಿಗೆ ಮೂಲತಃ ಬಳಸಲಾದ ಗ್ರೀಕ್‌ ನಾಮಪದದ” ಭಾಷಾಂತರ ಎಂದು ಹೇಳುತ್ತದೆ ಮತ್ತಾಯನು ಬರೆದ ಸುವಾರ್ತೆಯ ಕೈಪಿಡಿ (ಇಂಗ್ಲಿಷ್‌). ಬೈಬಲ್‌ ಪದಗಳ ಶಬ್ದಕೋಶ (ದಿ ಎಕ್ಸ್‌ಪಾಂಡೆಡ್‌ ವೈನ್ಸ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌) ಆ ನಾಮಪದವನ್ನು “ಮಾಂತ್ರಿಕ, ಗಾರುಡಿಗ, ಇಂದ್ರಜಾಲದ ಶಕ್ತಿಗಳುಳ್ಳವನೆಂದು ತೋರಿಸಿಕೊಳ್ಳುವವ, ಮಾಟಮಂತ್ರದಲ್ಲಿ ನಿಪುಣನೆಂದು ಹೇಳಿಕೊಳ್ಳುವವ” ಎಂದು ವರ್ಣಿಸುತ್ತದೆ.

ಜ್ಯೋತಿಷ್ಯ ಮತ್ತು ಮಾಟಮಂತ್ರ ಇಂದು ಕೂಡ ಜನಪ್ರಿಯವಾಗಿದೆ. ಬೈಬಲಾದರೋ ಅವನ್ನು ಖಂಡಿಸುತ್ತದೆ. (ಯೆಶಾಯ 47:13-15) ಇವು ಪ್ರೇತವ್ಯವಹಾರದ ಭಿನ್ನ ರೂಪಗಳಾಗಿದ್ದು, ಯೆಹೋವ ದೇವರು ಅವುಗಳನ್ನು ಹೇಸುತ್ತಾನೆ. (ಧರ್ಮೋಪದೇಶಕಾಂಡ 18:10-12) ಆದುದರಿಂದಲೇ ದೇವದೂತರಾರೂ ಆ ಜೋಯಿಸರಿಗೆ ಯೇಸುವಿನ ಜನನದ ಬಗ್ಗೆ ಪ್ರಕಟಿಸಲಿಲ್ಲ. ಆದರೆ ಆ ಜೋಯಿಸರಿಗೆ ಕನಸಿನಲ್ಲಿ ದೇವರಿಂದ ಎಚ್ಚರಿಕೆ ಕೊಡಲಾದದ್ದು, ಯೇಸುವನ್ನು ಕೊಲ್ಲಲು ಹವಣಿಸುತ್ತಿದ್ದ ದುಷ್ಟ ರಾಜ ಹೆರೋದನ ಬಳಿ ಅವರು ವಾಪಸ್ಸು ಹೋಗಬಾರದೆಂಬ ಕಾರಣಕ್ಕಾಗಿಯೇ. ಆದುದರಿಂದ “ಅವರು ಬೇರೊಂದು ಮಾರ್ಗವಾಗಿ ತಮ್ಮ ದೇಶಕ್ಕೆ ಹೊರಟುಹೋದರು.”—ಮತ್ತಾಯ 2:11-16.

ಹಾಗಾದರೆ, ಯೇಸು ಜನಿಸಿದಾಗ ನಡೆದ ಘಟನೆಗಳ ಸತ್ಯವನ್ನು ತಿರುಚುವಂಥ ಒಂದು ಕಥೆಯನ್ನು ಸತ್ಯ ಕ್ರೈಸ್ತರು ಪ್ರವರ್ಧಿಸುವರೋ? ಖಂಡಿತ ಇಲ್ಲ. (w09-E 12/01)