ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆರೆಮೀಯ ದೇವರ ಕೆಲಸವನ್ನು ನಿಲ್ಲಿಸಿಬಿಡಲಿಲ್ಲ

ಯೆರೆಮೀಯ ದೇವರ ಕೆಲಸವನ್ನು ನಿಲ್ಲಿಸಿಬಿಡಲಿಲ್ಲ

ನಿಮ್ಮ ಮಕ್ಕಳಿಗೆ ಲಿಸಿರಿ

ಯೆರೆಮೀಯ ದೇವರ ಕೆಲಸವನ್ನು ನಿಲ್ಲಿಸಿಬಿಡಲಿಲ್ಲ

ನಿನಗೆ ಯಾವತ್ತಾದರೂ ಬೇಜಾರಾಗಿ ನಿನ್ನ ಕೆಲಸವನ್ನು ನಿಲ್ಲಿಸಿಬಿಡಲು ಮನಸ್ಸಾಗಿದೆಯಾ?— * ತುಂಬ ಜನರಿಗೆ ಹಾಗೆ ಅನಿಸುತ್ತದೆ. ಯೆರೆಮೀಯ ಎಂಬ ಯುವಕನಿಗೂ ಹಾಗೆಯೇ ಅನಿಸಿತ್ತು. ಆದರೆ ಬೇರೆಯವರು ಅವನಿಗೆ ಏನು ಹೇಳಿದರೋ ಮಾಡಿದರೋ ಅದರಿಂದ ಬೇಜಾರಾಗಿ ಅವನು ತನ್ನ ಕೆಲಸವನ್ನು ನಿಲ್ಲಿಸಿಬಿಡಲಿಲ್ಲ. ದೇವರಿಗೆ ಯೆರೆಮೀಯನ ಮೇಲೆ ತುಂಬ ಪ್ರೀತಿ ಇತ್ತು. ಆದರೂ ತನ್ನ ಕೆಲಸವನ್ನು ನಿಲ್ಲಿಸಬೇಕೆಂದು ಒಮ್ಮೆ ಯೆರೆಮೀಯನಿಗೂ ಅನಿಸಿತ್ತು. ಇವೆಲ್ಲದರ ಬಗ್ಗೆ ನಾವೀಗ ಸ್ವಲ್ಪ ಮಾತಾಡೋಣ.

ಆ ಕಾಲದಲ್ಲಿ ಜನರು ದೇವರು ಮೆಚ್ಚುವ ರೀತಿಯಲ್ಲಿ ನಡಕೊಳ್ಳುತ್ತಾ ಇರಲಿಲ್ಲ. ಆದ್ದರಿಂದ ಅವರಿಗೆ ಎಚ್ಚರಿಕೆ ನೀಡುವ ಪ್ರವಾದಿಯಾಗಿ ಕೆಲಸಮಾಡಲು ಸತ್ಯ ದೇವರಾದ ಯೆಹೋವನು ಯೆರೆಮೀಯನನ್ನು ಅವನು ಹುಟ್ಟುವ ಮುಂಚೆಯೇ ಆಯ್ಕೆ ಮಾಡಿದ್ದನು. ಆದರೆ ವರ್ಷಗಳ ನಂತರ ಯೆರೆಮೀಯನು ದೇವರಿಗೆ ಏನು ಹೇಳಿದನು ಗೊತ್ತಾ?— “ನಾನು ಮಾತು ಬಲ್ಲವನಲ್ಲ, ಬಾಲಕನು” ಎಂದನವನು.

ಅದಕ್ಕೆ ಯೆಹೋವ ದೇವರು ಏನು ಹೇಳಿರಬಹುದೆಂದು ನೆನಸುತ್ತೀ?— ಮೃದುವಾಗಿ ಆದರೆ ದೃಢವಾಗಿ ಯೆಹೋವನು ಹೀಗಂದನು: “ಬಾಲಕನೆನ್ನಬೇಡ. ಯಾರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಅವರೆಲ್ಲರ ಬಳಿಗೆ ನೀನು ಹೋಗೇ ಹೋಗುವಿ; ನಾನು ಆಜ್ಞಾಪಿಸುವದನ್ನೆಲ್ಲಾ ನುಡಿಯಲೇ ನುಡಿಯುವಿ. ಅವರಿಗೆ ಅಂಜಬೇಡ.” ಯೆರೆಮೀಯ ಯಾಕೆ ಅಂಜಬಾರದಿತ್ತು? ಯಾಕೆಂದರೆ “ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು” ಎಂದು ದೇವರು ಹೇಳಿದನು.—ಯೆರೆಮೀಯ 1:4-8.

ದೇವರು ಹೇಳಿದಂತೆ ಯೆರೆಮೀಯ ಮಾಡಲಾರಂಭಿಸಿದರೂ ನಂತರ ಅವನಿಗೆ ಬೇಜಾರಾಯಿತು. ಯಾಕೆಂದರೆ ಜನರು ಅವನನ್ನು ಅಪಹಾಸ್ಯ ಮಾಡುತ್ತಿದ್ದರು. ‘ಎಲ್ಲರೂ ಯಾವಾಗಲೂ ನನ್ನನ್ನು ಗೇಲಿಮಾಡಿ, ಅಣಕಿಸುತ್ತಾರೆ’ ಎಂದು ದೇವರ ಬಳಿ ಹೇಳಿದನು ಅವನು. ಆದ್ದರಿಂದ ದೇವರ ಕೆಲಸ ಮಾಡುವುದನ್ನು ನಿಲ್ಲಿಸಿಬಿಡುವ ನಿರ್ಣಯಕ್ಕೆ ಬಂದನು. “ನಾನು ಯೆಹೋವನ ವಿಷಯವನ್ನು ಪ್ರಕಟಿಸೆನು, ಆತನ ಹೆಸರಿನಲ್ಲಿ ಇನ್ನು ಮಾತಾಡೆನು” ಎಂದೂ ಹೇಳಿದನು. ನಿಜವಾಗಲೂ ಅವನು ಹಾಗೆಯೇ ಮಾಡಿದನಾ?

‘ಯೆಹೋವನ ವಾಕ್ಯವನ್ನು ಇನ್ನು ಮಾತಾಡೆನು ಎಂದುಕೊಂಡರೆ ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ ನನ್ನ ಹೃದಯದಲ್ಲಿ ಸಂಕಟವಾಗುತ್ತದೆ; ತಡೆದು ತಡೆದು ಆಯಾಸಗೊಂಡಿದ್ದೇನೆ, ಸಹಿಸಲಾರೆ’ ಎಂದು ಯೆರೆಮೀಯನು ಹೇಳಿದನು. (ಯೆರೆಮೀಯ 20:7-9) ಕೆಲವೊಮ್ಮೆ ಅವನಿಗೆ ಹೆದರಿಕೆಯಾದರೂ ಯೆಹೋವನ ಮೇಲಿದ್ದ ಪ್ರೀತಿಯಿಂದಾಗಿ ಅವನು ದೇವರ ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಆದ್ದರಿಂದ ಯೆರೆಮೀಯನನ್ನು ದೇವರು ರಕ್ಷಿಸಿದನು. ಹೇಗೆಂದು ನಾವೀಗ ನೋಡೋಣ.

ಜನರು ತಮ್ಮ ಕೆಟ್ಟದಾರಿಯನ್ನು ಬಿಡದೆ ಹೋದರೆ ಅವರಿರುವ ಯೆರೂಸಲೇಮ್‌ ಪಟ್ಟಣ ನಾಶವಾಗುವುದೆಂದು ಎಚ್ಚರಿಸುವಂತೆ ಯೆಹೋವನು ಯೆರೆಮೀಯನಿಗೆ ಹೇಳಿದನು. ಆ ಎಚ್ಚರಿಕೆಯನ್ನು ಕೇಳಿ ಜನರು ಬಹಳ ಸಿಟ್ಟಿನಿಂದ “ಇವನು ಮರಣದಂಡನೆಗೆ ತಕ್ಕವನು” ಎಂದು ಹೇಳಿದರು. ಆದರೂ ಯೆರೆಮೀಯನು “ದೇವರಾದ ಯೆಹೋವನ ನುಡಿಗೆ ಕಿವಿಗೊಡಿರಿ” ಎಂದು ಅವರನ್ನು ಬೇಡಿಕೊಂಡನು. ಆಮೇಲೆ ಹೀಗಂದನು: ‘ಈ ಮಾತುಗಳನ್ನೆಲ್ಲಾ ನಿಮಗೆ ಮುಟ್ಟಿಸುವಂತೆ ದೇವರೇ ನನ್ನನ್ನು ಕಳುಹಿಸಿದ್ದರಿಂದ ನೀವು ನನ್ನನ್ನು ಕೊಂದು ಹಾಕಿದರೆ ಒಬ್ಬ ನಿರ್ದೋಷಿಯ ರಕ್ತವನ್ನು ಸುರಿಸಿದ ಹಾಗಾಗುತ್ತದೆ ಎಂದು ತಿಳಿದುಕೊಳ್ಳಿರಿ.’ ಮತ್ತೆ ಏನಾಯಿತು ಗೊತ್ತಾ?—

ಬೈಬಲ್‌ ಹೇಳುವುದು: ‘ಸರದಾರರೂ ಸಕಲ ಜನರೂ ಯಾಜಕಪ್ರವಾದಿಗಳಿಗೆ—ಇವನು ಮರಣದಂಡನೆಗೆ ತಕ್ಕವನಲ್ಲ; ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಇದನ್ನು ನಮಗೆ ನುಡಿದಿದ್ದಾನಷ್ಟೆ ಎಂದು ಹೇಳಿದರು.’ ಹೀಗೆ ಜನರಿಗೆ ಹೆದರಿ ದೇವರ ಕೆಲಸ ಮಾಡುವುದನ್ನು ನಿಲ್ಲಿಸದೇ ಇದ್ದದರಿಂದ ಯೆಹೋವನು ಯೆರೆಮೀಯನನ್ನು ಕಾಪಾಡಿದನು. ಆದರೆ ಅವನು ದೇವರ ಕೆಲಸವನ್ನು ಮುಂದುವರಿಸಿದಂತೆ ಯೆಹೋವನ ಇನ್ನೊಬ್ಬ ಪ್ರವಾದಿ ಊರೀಯ ಮುಂದುವರಿಸಲಿಲ್ಲ. ಅವನಿಗೆ ಏನಾಯಿತೆಂದು ನೋಡೋಣವೇ?

‘ಊರೀಯನೆಂಬ ಪ್ರವಾದಿ ಯೆರೆಮೀಯ ನುಡಿದಂತೆಯೇ ಯೆರೂಸಲೇಮ್‌ ನಗರ ನಾಶವಾಗುವುದು ಎಂದು ಪ್ರವಾದಿಸುತ್ತಿದ್ದನು’ ಎನ್ನುತ್ತದೆ ಬೈಬಲ್‌. ಅವನ ಮೇಲೆ ರಾಜ ಯೆಹೋಯಾಕೀಮನು ಕೋಪಗೊಂಡಾಗ ಊರೀಯ ಏನು ಮಾಡಿದನು ಗೊತ್ತಾ?— ಹೆದರಿ ದೇವರ ಕೆಲಸ ಮಾಡುವುದನ್ನು ನಿಲ್ಲಿಸಿ ಈಜಿಪ್ಟ್‌ ದೇಶಕ್ಕೆ ಓಡಿಹೋದನು. ಅವನನ್ನು ಹುಡುಕಿ ಹಿಡಿದುಕೊಂಡು ಬರಲು ರಾಜನು ಕೆಲವು ಪುರುಷರನ್ನು ಆ ದೇಶಕ್ಕೆ ಕಳುಹಿಸಿದನು. ಅವನು ಸಿಕ್ಕಿದಾಗ ಕೆಟ್ಟ ರಾಜ ಯೆಹೋಯಾಕೀಮ ಏನು ಮಾಡಿದನು ಗೊತ್ತಾ?— ಊರೀಯನನ್ನು ಕತ್ತಿಯಿಂದ ಕೊಂದುಬಿಟ್ಟನು!—ಯೆರೆಮೀಯ 26:8-24.

ಯೆಹೋವ ದೇವರು ಯೆರೆಮೀಯನನ್ನು ಕಾಪಾಡಿದನು ಆದರೆ ಊರೀಯನನ್ನು ಕಾಪಾಡಲಿಲ್ಲ. ಯಾಕಿರಬಹುದು? ನೀನು ಏನು ನೆನಸುತ್ತೀಯಾ?— ಊರೀಯನಂತೆ ಯೆರೆಮೀಯನಿಗೂ ಹೆದರಿಕೆ ಆಗಿದ್ದರೂ ಯೆಹೋವ ದೇವರ ಸೇವೆಯನ್ನು ಮಾತ್ರ ಅವನು ಬಿಟ್ಟು ಓಡಿಹೋಗಲಿಲ್ಲ. ಅವನು ದೇವರ ಕೆಲಸಮಾಡುವುದನ್ನು ನಿಲ್ಲಿಸಿಬಿಡಲಿಲ್ಲ. ಯೆರೆಮೀಯನಿಂದ ನಾವು ಯಾವ ಪಾಠ ಕಲಿಯಬಹುದು, ಹೇಳು ನೋಡೋಣ?— ಪಾಠ ಏನೆಂದರೆ, ದೇವರು ಹೇಳಿದ ಹಾಗೆ ಮಾಡಲು ನಮಗೆ ಕೆಲವೊಮ್ಮೆ ಕಷ್ಟವಾಗಬಹುದು. ಹಾಗಿದ್ದರೂ ದೇವರ ಮೇಲೆ ನಾವು ಯಾವಾಗಲೂ ಭರವಸೆಯಿಟ್ಟು ಆತನು ಹೇಳಿದ ಹಾಗೆ ಮಾಡಬೇಕು. (w09-E 12/01)

[ಪಾದಟಿಪ್ಪಣಿ]

^ ಪ್ಯಾರ. 3 ಈ ಲೇಖನವನ್ನು ನೀವು ಮಕ್ಕಳಿಗೆ ಓದಿಹೇಳುತ್ತಿರುವುದಾದರೆ ಅಡ್ಡಗೆರೆ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಅವರು ಉತ್ತರ ಹೇಳುವಂತೆ ಉತ್ತೇಜಿಸಿರಿ.

ಪ್ರಶ್ನೆಗಳು:

❍ ಯಾವ ಕೆಲಸಕ್ಕಾಗಿ ಯೆರೆಮೀಯನನ್ನು ದೇವರು ಆಯ್ಕೆಮಾಡಿದನು?

❍ ದೇವರ ಕೆಲಸವನ್ನು ನಿಲ್ಲಿಸಿಬಿಡಬೇಕೆಂದು ಯೆರೆಮೀಯನಿಗೆ ಅನಿಸಿದ್ದೇಕೆ?

❍ ದೇವರು ಊರೀಯನನ್ನು ಕಾಪಾಡದೆ ಯೆರೆಮೀಯನನ್ನು ಮಾತ್ರ ಯಾಕೆ ಕಾಪಾಡಿದನು?

❍ ಯೆರೆಮೀಯನಿಂದ ನೀನು ಯಾವ ಪಾಠ ಕಲಿತೀ?