ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂಗಾತಿಗೆ ವಿಶೇಷ ಆರೈಕೆ ಅಗತ್ಯವಿರುವಾಗ

ಸಂಗಾತಿಗೆ ವಿಶೇಷ ಆರೈಕೆ ಅಗತ್ಯವಿರುವಾಗ

ಕುಟುಂಬ ಸಂತೋಷಕ್ಕೆ ಕೀಲಿಕೈಗಳು

ಸಂಗಾತಿಗೆ ವಿಶೇಷ ಆರೈಕೆ ಅಗತ್ಯವಿರುವಾಗ

ನನಗೆ ಕ್ರಾನಿಕ್‌ ಫಟೀಗ್‌ ಸಿಂಡ್ರೋಮ್‌ (ವಿಪರೀತ ಸುಸ್ತು ರೋಗ) ಇದೆಯೆಂದು ಪತ್ತೆಯಾದಾಗಿನಿಂದ ಎಲ್ಲ ಕೆಲಸ ನನ್ನ ಪತಿಯೇ ಮಾಡಬೇಕಾಗಿದೆ. ಆದರೆ ಅವರು ನನಗೆ ಖರ್ಚುಗಳ ಬಗ್ಗೆ ಒಂದು ಮಾತನ್ನೂ ಹೇಳುವುದಿಲ್ಲ. ಯಾಕೆ ನನ್ನಿಂದ ಮುಚ್ಚಿಡುತ್ತಾರೋ? ನಮ್ಮ ಆರ್ಥಿಕ ಸ್ಥಿತಿ ತುಂಬ ಕೆಟ್ಟಿರಬೇಕು, ನನಗೆ ತಿಳಿದರೆ ಗಾಬರಿಯಾಗುತ್ತೇನೆಂದು ಅವರಿಗೆ ಗೊತ್ತಿರುವುದರಿಂದ ಏನೂ ಹೇಳುತ್ತಿಲ್ಲವೋ ಏನೋ?—ನ್ಯಾನ್ಸಿ. *

ವೈವಾಹಿಕಜೀವನ ಒಂದು ಸವಾಲಾಗಿರಬಲ್ಲದು. ಅದರಲ್ಲೂ, ಸಂಗಾತಿಯೊಬ್ಬರು ದೀರ್ಘಕಾಲದ ಕಾಯಿಲೆಗೆ ಒಳಗಾಗಿ ಇನ್ನೊಬ್ಬರು ಆರೋಗ್ಯವಾಗಿ ಇರುವಾಗ ಪರಿಸ್ಥಿತಿ ಇನ್ನಷ್ಟು ಜಟಿಲವಾಗಬಲ್ಲದು. * ನೀವು ಅಸ್ವಸ್ಥ ಸಂಗಾತಿಯ ಆರೈಕೆ ಮಾಡುತ್ತಿದ್ದೀರೋ? ಹಾಗಿದ್ದರೆ ಈ ಕೆಳಗಿನ ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು: ‘ಅವರ/ಳ ಆರೋಗ್ಯ ಇನ್ನಷ್ಟು ಕೆಡುವಲ್ಲಿ ನಾನೇನು ಮಾಡಲಿ? ಒಂದು ಕಡೆ ಸಂಗಾತಿಯ ಆರೈಕೆ, ಇನ್ನೊಂದು ಕಡೆ ಮನೆಕೆಲಸ, ಉದ್ಯೋಗ ಇದೆಲ್ಲವನ್ನೂ ನನ್ನಿಂದ ಎಷ್ಟು ದಿನ ಸಂಭಾಳಿಸಲಿಕ್ಕಾಗುವುದು? ನನ್ನ ಸಂಗಾತಿಯ ಬದಲು ನನಗೆ ಆ ಕಾಯಿಲೆ ಬರಬಾರದಿತ್ತೇ ಎಂದು ನನಗನಿಸುವುದೇಕೆ?’

ಒಂದುವೇಳೆ ನೀವು ಅಸ್ವಸ್ಥ ಸಂಗಾತಿ ಆಗಿರುವಲ್ಲಿ ಹೀಗೆ ಯೋಚಿಸುತ್ತಿರಬಹುದು: ‘ಸ್ವಂತ ಜವಾಬ್ದಾರಿಯನ್ನು ಹೊರಲಿಕ್ಕಾಗದ ನಾನು ಆತ್ಮಗೌರವವನ್ನು ಹೇಗೆ ಕಾಪಾಡಿಕೊಳ್ಳಲಿ? ನಾನು ಕಾಯಿಲೆಬಿದ್ದ ಕಾರಣ ನನ್ನ ಸಂಗಾತಿಗೆ ಏನಾದರೂ ಅಸಮಾಧಾನವಿದೆಯೇ? ನನ್ನ ಅನಾರೋಗ್ಯ ನಮ್ಮ ಸಂಸಾರದ ಸುಖಕ್ಕೆ ಕೊಳ್ಳಿ ಇಟ್ಟಿದೆಯೋ?’

ದುಃಖದ ವಿಷಯವೇನೆಂದರೆ ಇಂಥ ಸಂದರ್ಭಗಳಲ್ಲಿ ಕೆಲವರ ವಿವಾಹಜೀವನ ಮುರಿದುಬಿದ್ದಿದೆ. ಆದರೆ ಇದರರ್ಥ ನಿಮ್ಮ ವಿವಾಹಜೀವನವೂ ಖಂಡಿತ ವೈಫಲ್ಯಗೊಳ್ಳುವುದೆಂದಲ್ಲ.

ಅನೇಕ ದಂಪತಿಗಳ ವಿವಾಹಜೀವನವು ಇಂಥ ಪರಿಸ್ಥಿತಿಗಳ ಮಧ್ಯೆಯೂ ಬಾಳಿದೆ. ವಾಸ್ತವದಲ್ಲಿ ಅವರು ಇನ್ನಷ್ಟು ಆಪ್ತರಾಗಿದ್ದಾರೆ. ದೃಷ್ಟಾಂತಕ್ಕೆ, ಯೋಷಿಯಾಕಿ ಮತ್ತು ಕಸೂಕೊ ದಂಪತಿಯನ್ನು ಪರಿಗಣಿಸಿರಿ. ಬೆನ್ನುಹುರಿಯ ತೊಂದರೆಯಿಂದಾಗಿ ಯೋಷಿಯಾಕಿಗೆ ಇನ್ನೊಬ್ಬರ ನೆರವಿಲ್ಲದೆ ಸ್ವಲ್ಪವೂ ಅಲುಗಾಡಲಾಗುವುದಿಲ್ಲ. ಕಸೂಕೊ ವಿವರಿಸುವುದು: “ನನ್ನ ಗಂಡನಿಗೆ ಇನ್ನೊಬ್ಬರ ಸಹಾಯವಿಲ್ಲದೆ ಏನೂ ಮಾಡಲಿಕ್ಕಾಗುವುದಿಲ್ಲ. ಅವರ ಆರೈಕೆ ಮಾಡುತ್ತಾ ಮಾಡುತ್ತಾ ನನ್ನ ಕತ್ತು, ಭುಜ, ಕೈಗಳಲ್ಲಿ ವಿಪರೀತ ನೋವು ಶುರುವಾಗಿದೆ. ಅದಕ್ಕೆ ಚಿಕಿತ್ಸೆಗೆಂದು ನಾನು ಆಗಾಗ್ಗೆ ಆಸ್ಪತ್ರೆಗೆ ಹೋಗಿಬರುತ್ತೇನೆ. ಅಸ್ವಸ್ಥರ ಆರೈಕೆ ಸುಲಭವಲ್ಲ ಎಂದು ನನಗೆಷ್ಟೋ ಸಲ ಅನಿಸಿದೆ.” ಆದರೆ ಈ ಎಲ್ಲ ಕಷ್ಟಗಳ ಮಧ್ಯೆಯೂ “ನಮ್ಮಿಬ್ಬರ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿದೆ” ಅನ್ನುತ್ತಾರೆ ಕಸೂಕೊ.

ಇಂಥ ಪರಿಸ್ಥಿತಿಗಳಲ್ಲಿ ಸಂತೋಷದಿಂದಿರುವುದರ ಗುಟ್ಟೇನು? ಕಾಯಿಲೆಯನ್ನು ಕೇವಲ ರೋಗಗ್ರಸ್ತ ಸಂಗಾತಿಯ ಮೇಲಿನ ದಾಳಿಯೆಂದಲ್ಲ ಬದಲಾಗಿ ತಮ್ಮಿಬ್ಬರ ಮೇಲೂ ನಡೆದಿರುವ ದಾಳಿಯಾಗಿ ಪರಿಗಣಿಸಿರುವವರು ತಮ್ಮ ವಿವಾಹಜೀವನದಲ್ಲಿ ತಕ್ಕಮಟ್ಟಿಗೆ ಸಂತೃಪ್ತಿ ಸಮಾಧಾನ ಉಳಿಸಿಕೊಂಡಿದ್ದಾರೆ. ಸಂಗಾತಿಯಲ್ಲೊಬ್ಬರು ಅಸ್ವಸ್ಥರಾಗಿದ್ದರೆ ಇಬ್ಬರೂ ಬಾಧಿತರಾಗುತ್ತಾರೆ ಆದರೆ ಭಿನ್ನ ವಿಧಗಳಲ್ಲಿ. ಗಂಡಹೆಂಡತಿಯರ ಈ ಪರಸ್ಪರಾವಲಂಬಿ ಸಂಬಂಧವನ್ನು ಬೈಬಲ್‌ನ ಆದಿಕಾಂಡ 2:24ರಲ್ಲಿ ವರ್ಣಿಸಲಾಗಿದೆ. ಅದನ್ನುವುದು: “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.” ಆದುದರಿಂದ ಪತಿಪತ್ನಿಯಲ್ಲಿ ಒಬ್ಬರು ಬಹುಕಾಲದ ಶಾರೀರಿಕ ಕಾಯಿಲೆಯಿಂದ ಬಳಲುವಾಗ, ಅವರಿಬ್ಬರೂ ಸೇರಿ ಆ ಸವಾಲನ್ನು ಎದುರಿಸುವುದು ಅತಿ ಪ್ರಾಮುಖ್ಯ.

ಅಷ್ಟಲ್ಲದೆ ಸಂಶೋಧನೆಯು ತೋರಿಸುವಂತೆ, ತಮ್ಮ ಪರಿಸ್ಥಿತಿಯನ್ನು ಒಪ್ಪಿಕೊಂಡು ನಿಭಾಯಿಸಲಿಕ್ಕಾಗಿ ಪರಿಣಾಮಕಾರಿ ವಿಧಗಳನ್ನು ಕಲಿತಿರುವ ಅನೇಕ ದಂಪತಿಗಳು ಇಂಥ ಇಕ್ಕಟ್ಟಿನ ಮಧ್ಯೆಯೂ ಒಳ್ಳೇ ಸಂಬಂಧವನ್ನು ಕಾಪಾಡಿಕೊಂಡಿದ್ದಾರೆ. ಆ ವಿಧಗಳಲ್ಲಿ ಹಲವು, ಸರ್ವಕಾಲಕ್ಕೂ ಅನ್ವಯವಾಗುವ ಬೈಬಲ್‌ ಬುದ್ಧಿವಾದವನ್ನು ಹೋಲುತ್ತವೆ. ಮುಂದಿನ ಮೂರು ಸಲಹೆಗಳನ್ನು ಪರಿಗಣಿಸಿರಿ.

ಪರಸ್ಪರ ಪರಿಗಣನೆ ತೋರಿಸಿ

“ಒಬ್ಬನಿಗಿಂತ ಇಬ್ಬರು ಲೇಸು” ಎನ್ನುತ್ತದೆ ಬೈಬಲಿನ ಪ್ರಸಂಗಿ 4:9. ಏಕೆ? ಏಕೆಂದರೆ “ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು” ಎಂದು ವಿವರಿಸುತ್ತದೆ 10ನೇ ವಚನ. ನೀವು ನಿಮ್ಮ ಸಂಗಾತಿಯನ್ನು ಮೇಲೆ ‘ಎತ್ತಲು’ ಮೆಚ್ಚುಗೆಯ ಮಾತುಗಳನ್ನಾಡುತ್ತೀರೋ?

ಪರಸ್ಪರ ವ್ಯಾವಹಾರಿಕ ನೆರವನ್ನು ನೀಡುವ ಮಾರ್ಗಗಳಿಗಾಗಿ ನೀವು ಹುಡುಕಬಹುದೋ? ಯಾಂಗ್‌ ಎಂಬವರ ಪತ್ನಿಗೆ ಲಕ್ವಹೊಡೆದಿದೆ. ಅವರನ್ನುವುದು: “ಪ್ರತಿಯೊಂದು ಸಂದರ್ಭದಲ್ಲೂ ನನ್ನ ಹೆಂಡತಿಗೆ ಪರಿಗಣನೆ ತೋರಿಸಲು ಪ್ರಯತ್ನಿಸುತ್ತೇನೆ. ನನಗೆ ಬಾಯಾರಿಕೆಯಾದಾಗ ಅವಳಿಗೂ ಬಾಯಾರಿಕೆ ಆಗಿದೆಯೆಂದು ಎಣಿಸಿ ಅವಳಿಗೆ ಕುಡಿಯಲಿಕ್ಕೆ ಕೊಡುತ್ತೇನೆ. ಹೊರಗೆ ಹೋಗಿ ರಮಣೀಯ ದೃಶ್ಯವನ್ನು ನನಗೆ ನೋಡಬೇಕನಿಸಿದರೆ, ಆಕೆಗೂ ನನ್ನ ಜೊತೆ ಬರಲು ಮನಸ್ಸಿದೆಯೋ ಎಂದು ಕೇಳುತ್ತೇನೆ. ನಾವಿಬ್ಬರೂ ನೋವಿನಲ್ಲಿ ಸಮಭಾಗಿಗಳು. ಜೊತೆಯಾಗಿ ಈ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ.”

ಒಂದುವೇಳೆ ಸಂಗಾತಿಯಿಂದ ಆರೈಕೆ ಪಡೆಯುತ್ತಿರುವವರು ನೀವಾಗಿದ್ದರೆ, ನಿಮ್ಮ ಆರೋಗ್ಯಕ್ಕೆ ಹಾನಿಯಾಗದ ರೀತಿಯಲ್ಲಿ ನಿಮ್ಮ ಕೆಲವೊಂದು ಕೆಲಸಗಳನ್ನು ನಿಮ್ಮಷ್ಟಕ್ಕೆ ಮಾಡಲಿಕ್ಕಾಗುತ್ತದೋ? ಹಾಗೆ ಮಾಡಲು ಸಾಧ್ಯವಿದ್ದರೆ ಅದರಿಂದ ನಿಮ್ಮ ಆತ್ಮಗೌರವ ಹೆಚ್ಚುವುದು ಮಾತ್ರವಲ್ಲ ನಿಮ್ಮ ಆರೈಕೆ ಮಾಡುವುದನ್ನು ಮುಂದುವರಿಸಲು ನಿಮ್ಮ ಸಂಗಾತಿಗೂ ನೆರವಾಗುವುದು.

ನಿಮ್ಮ ಸಂಗಾತಿಗೆ ಪರಿಗಣನೆ ತೋರಿಸುವ ಅತ್ಯುತ್ತಮ ವಿಧ ನಿಮಗೆ ಗೊತ್ತಿದೆಯೆಂದು ಎಣಿಸದೆ, ಆ ಬಗ್ಗೆ ಅವರನ್ನೇ ಏಕೆ ಕೇಳಿನೋಡಬಾರದು? ಆರಂಭದಲ್ಲಿ ತಿಳಿಸಲಾದ ನ್ಯಾನ್ಸಿ ಕೊನೆಗೂ ತನ್ನ ಗಂಡನೊಂದಿಗೆ ಮಾತಾಡಿ, ಕುಟುಂಬದ ಆರ್ಥಿಕ ಸ್ಥಿತಿಯ ಬಗ್ಗೆ ಏನೂ ತಿಳಿಸದಿರುವುದು ತನ್ನನ್ನು ಹೇಗೆ ಬಾಧಿಸುತ್ತದೆಂದು ಹೇಳಿದಳು. ಈಗ ಆಕೆಯ ಗಂಡ ಆ ವಿಷಯದ ಕುರಿತು ಆಕೆಯೊಂದಿಗೆ ಮುಕ್ತವಾಗಿ ಮಾತಾಡುತ್ತಾನೆ.

ಪ್ರಯತ್ನಿಸಿ ನೋಡಿ: ನಿಮ್ಮ ಸಂಗಾತಿ ಸದ್ಯದ ಸನ್ನಿವೇಶದಲ್ಲಿ ನಿಮಗೆ ಹೇಗೆ ಸಹಾಯ ನೀಡಬಹುದೆಂದು ನೀವೆಣಿಸುತ್ತೀರೋ ಆ ವಿಧಗಳನ್ನು ಪಟ್ಟಿಮಾಡಿ. ನಿಮ್ಮ ಸಂಗಾತಿಯೂ ಹಾಗೆ ಮಾಡಲಿ. ನಂತರ ಪಟ್ಟಿಗಳನ್ನು ಅದಲುಬದಲು ಮಾಡಿ. ಕಾರ್ಯರೂಪಕ್ಕೆ ಹಾಕಬಹುದಾದ ಎರಡೆರಡು ಸಲಹೆಗಳನ್ನು ಇಬ್ಬರೂ ಆಯ್ಕೆಮಾಡಿ.

ಸಮತೋಲನ ಕಾಪಾಡಿಕೊಳ್ಳಿ

ವಿವೇಕಿ ರಾಜ ಸೊಲೊಮೋನ ಬರೆದದ್ದು: “ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.” (ಪ್ರಸಂಗಿ 3:1) ಆದರೆ ಸಂಗಾತಿ ಬಹುಕಾಲ ರೋಗದಿಂದ ನರಳುತ್ತಿರುವಾಗ ಕುಟುಂಬದ ದಿನಚರಿಯಲ್ಲಿ ಏರುಪೇರಾಗುವ ಕಾರಣ ಪ್ರತಿಯೊಂದಕ್ಕೂ ಸಮಯ ಕೊಡುವುದು ಅಸಾಧ್ಯವೆಂಬಂತೆ ತೋರಬಹುದು. ಹೀಗಿರಲಾಗಿ ಸ್ವಲ್ಪಮಟ್ಟಿಗಾದರೂ ಸಮತೋಲನ ಕಾಪಾಡಿಕೊಳ್ಳಲು ನೀವೇನು ಮಾಡಬಲ್ಲಿರಿ?

ಕಾಯಿಲೆಯನ್ನು ಮರೆಯುವಂತೆ ಮಾಡುವ ಚಟುವಟಿಕೆಗಳಲ್ಲಿ ಜೊತೆಯಾಗಿ ಆನಂದಿಸಲು ಆಗಾಗ್ಗೆ ಸಮಯಮಾಡಿಕೊಳ್ಳಿ. ಈ ಕಾಯಿಲೆ ಬರುವ ಮುಂಚೆ ನೀವಿಬ್ಬರೂ ಒಟ್ಟಾಗಿ ಮಾಡುತ್ತಿದ್ದ ಚಟುವಟಿಕೆಗಳನ್ನು ಈಗಲೂ ಮಾಡಬಹುದೋ? ಇದು ಸಾಧ್ಯವಿಲ್ಲದಿದ್ದರೆ, ಬೇರಾವುದೇ ಹೊಸ ಚಟುವಟಿಕೆಗಳನ್ನು ಪ್ರಯತ್ನಿಸಿ ನೋಡಬಹುದೋ? ಅದು, ಒಬ್ಬರಿಗೊಬ್ಬರು ಓದಿಹೇಳುವಂಥ ಸರಳ ಚಟುವಟಿಕೆ ಅಥವಾ ಹೊಸ ಭಾಷೆಯನ್ನು ಕಲಿಯುವಂಥ ಸವಾಲು ಆಗಿರಬಹುದು. ಇಂಥ ಪರಿಸ್ಥಿತಿಯಲ್ಲೂ ನೀವು ಜೊತೆಗೂಡಿ ಮಾಡಬಹುದಾದ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಿಮ್ಮಿಬ್ಬರ ಆಪ್ತ ಸಂಬಂಧ ಬಲಗೊಂಡು ನಿಮ್ಮ ಸಂತೋಷ ಹೆಚ್ಚಾಗುವುದು.

ಸಮತೋಲನ ಕಾಪಾಡಲು ಇನ್ನೊಂದು ಸಹಾಯಕ ಇತರರೊಂದಿಗಿನ ಒಡನಾಟವೇ. ಬೈಬಲಿನ ಜ್ಞಾನೋಕ್ತಿ 18:1 ಹೀಗನ್ನುತ್ತದೆ: “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.” ಯಾರೊಂದಿಗೂ ಸೇರದಿರುವುದರಿಂದ ಮನಸ್ಸಿನ ಮೇಲಾಗುವ ದುಷ್ಪರಿಣಾಮವನ್ನು ಗಮನಿಸಿದ್ದೀರೋ? ವ್ಯತಿರಿಕ್ತವಾಗಿ, ಆಗಾಗ್ಗೆ ಇತರರೊಂದಿಗೆ ಸಹವಾಸ ಮಾಡುವುದು ನಿಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸಿ, ನಿಮ್ಮ ದೃಷ್ಟಿಕೋನವನ್ನು ಪುನಃ ಸರಿಹೊಂದಿಸಲು ಸಹಾಯಮಾಡುವುದು. ಹೀಗಿರುವುದರಿಂದ ನಿಮ್ಮ ಮನೆಗೆ ನೀವೇ ಏಕೆ ಯಾರನ್ನಾದರೂ ಆಮಂತ್ರಿಸಬಾರದು?

ಕೆಲವೊಮ್ಮೆ ಆರೈಕೆಮಾಡುವ ಸಂಗಾತಿಗಳಿಗೆ ಸ್ವತಃ ಸಮತೋಲನ ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. ಕೆಲವರು ತಮ್ಮ ಸಾಮರ್ಥ್ಯ ಮೀರಿ ಕೆಲಸ ಮಾಡುತ್ತಾರೆ. ಇದರಿಂದಾಗಿ ಅವರು ಕ್ರಮೇಣ ಸೋತು ಸುಣ್ಣವಾಗುತ್ತಾರೆ ಮತ್ತು ತಮ್ಮ ಆರೋಗ್ಯವನ್ನೇ ಕೆಡಿಸಿಕೊಳ್ಳುತ್ತಾರೆ. ಕಟ್ಟಕಡೆಗೆ ತಮ್ಮ ಪ್ರೀತಿಯ ಸಂಗಾತಿಯ ಆರೈಕೆಮಾಡಲೂ ಅಶಕ್ತರಾಗುತ್ತಾರೆ. ಹೀಗಿರುವುದರಿಂದ, ಬಹುಕಾಲದ ಕಾಯಿಲೆಯಿಂದ ಬಳಲುತ್ತಿರುವ ಸಂಗಾತಿಯ ಆರೈಕೆಯನ್ನು ನೀವು ಮಾಡುತ್ತಿರುವಲ್ಲಿ ನಿಮ್ಮ ವೈಯಕ್ತಿಕ ಅಗತ್ಯಗಳನ್ನು ಅಲಕ್ಷ್ಯಮಾಡಬೇಡಿ. ನವಚೈತನ್ಯ ಪಡೆಯಲು ನಿಮಗೋಸ್ಕರವೆಂದೇ ಸ್ವಲ್ಪ ಸಮಯ ಬದಿಗಿರಿಸಿರಿ. * ಆರೈಕೆಮಾಡುತ್ತಿರುವವರು ಗಂಡನಾಗಿರುವಲ್ಲಿ ವಿಶ್ವಾಸಾರ್ಹ ಗೆಳೆಯನೊಂದಿಗೆ, ಹೆಂಡತಿಯಾಗಿರುವಲ್ಲಿ ವಿಶ್ವಾಸಾರ್ಹ ಗೆಳತಿಯೊಂದಿಗೆ ತಮ್ಮ ದುಃಖದುಮ್ಮಾನವನ್ನು ತೋಡಿಕೊಳ್ಳುವುದು ಚೇತೋಹಾರಿ ಎಂದು ಕೆಲವರು ಕಂಡುಕೊಂಡಿದ್ದಾರೆ.

ಪ್ರಯತ್ನಿಸಿ ನೋಡಿ: ನಿಮ್ಮ ಸಂಗಾತಿಯ ಆರೈಕೆಮಾಡುವಾಗ ನಿಮಗೆದುರಾಗುವ ಅಡಚಣೆಗಳನ್ನು ಒಂದು ಕಾಗದದಲ್ಲಿ ಪಟ್ಟಿಮಾಡಿ. ಅನಂತರ, ಅವುಗಳನ್ನು ಸಮರ್ಥವಾಗಿ ಎದುರಿಸಲು ನೀವು ತೆಗೆದುಕೊಳ್ಳಬಹುದಾದ ಹೆಜ್ಜೆಗಳನ್ನೂ ಪಟ್ಟಿಮಾಡಿ. ಅವುಗಳನ್ನು ಅತಿಯಾಗಿ ವಿಶ್ಲೇಷಿಸುವ ಬದಲು, ‘ಸನ್ನಿವೇಶವನ್ನು ಉತ್ತಮಗೊಳಿಸಲು ಅತಿ ಸರಳ ಹಾಗೂ ಸ್ಪಷ್ಟ ವಿಧಾನ ಯಾವುದು?’ ಎಂದು ಕೇಳಿಕೊಳ್ಳಿ.

ಸಕಾರಾತ್ಮಕ ನೋಟವನ್ನಿಟ್ಟುಕೊಳ್ಳಿ

“ಹಿಂದಿನ ಕಾಲವು ಈ ಕಾಲಕ್ಕಿಂತ ಮೇಲಾದದ್ದಕ್ಕೆ ಕಾರಣವೇನು ಅನ್ನಬೇಡ” ಎಂದು ಬೈಬಲ್‌ ಎಚ್ಚರಿಸುತ್ತದೆ. (ಪ್ರಸಂಗಿ 7:10) ಆದುದರಿಂದ ‘ಈ ಕಾಯಿಲೆ ಬಾರದಿದ್ದರೆ ನಮ್ಮ ಜೀವನ ಎಷ್ಟು ಒಳ್ಳೇದಿರುತ್ತಿತ್ತು’ ಎಂದು ಕೊರಗುತ್ತಾ ಇರಬೇಡಿ. ಈ ಲೋಕದಲ್ಲಿ ಎಲ್ಲ ಸುಖಸಂತೋಷಕ್ಕೆ ಒಂದಲ್ಲ ಒಂದು ಮಿತಿ ಇದ್ದೇ ಇರುತ್ತದೆಂದು ನೆನಪಿಡಿ. ನಿಮ್ಮ ಪರಿಸ್ಥಿತಿಯನ್ನು ಒಪ್ಪಿಕೊಂಡು, ಆದಷ್ಟು ಹೊಂದಿಕೊಂಡು ಹೋಗುವುದೇ ಸಂತೋಷದ ಗುಟ್ಟು.

ಈ ವಿಷಯದಲ್ಲಿ ನಿಮಗೂ ನಿಮ್ಮ ಸಂಗಾತಿಗೂ ಯಾವುದು ಸಹಾಯಮಾಡುವುದು? ನಿಮಗೆ ದೊರೆತ ಆಶೀರ್ವಾದಗಳ ಬಗ್ಗೆ ಒಟ್ಟಿಗೆ ಚರ್ಚಿಸಿರಿ. ನಿಮ್ಮ ಆರೋಗ್ಯದಲ್ಲಿ ಅಲ್ಪಸ್ವಲ್ಪ ಸುಧಾರಣೆಯಾದರೂ ಖುಷಿಪಡಿ. ನೀವು ಮುನ್ನೋಡಬಹುದಾದ ವಿಷಯಗಳ ಕುರಿತು ಯೋಚಿಸಿ. ನೀವು ಜೊತೆಗೂಡಿ ಮುಟ್ಟಬಹುದಾದ ಗುರಿಗಳನ್ನಿಡಿ.

ಶೋಜಿ ಮತ್ತು ಅಕೀಕೊ ಎಂಬ ದಂಪತಿ ಮೇಲಿನ ಸಲಹೆಯನ್ನು ಅನ್ವಯಿಸಿ ಪ್ರಯೋಜನ ಪಡೆದಿದ್ದಾರೆ. ಅಕೀಕೊಳಿಗೆ ಫೈಬ್ರಮೈಆಲ್ಜೀಯ ರೋಗ ಇದೆಯೆಂದು ಪತ್ತೆಯಾದ ಬಳಿಕ ಅವರಿಬ್ಬರೂ ತಮಗಿದ್ದ ಪೂರ್ಣ ಸಮಯದ ಕ್ರೈಸ್ತ ಶುಶ್ರೂಷೆಯ ವಿಶೇಷ ನೇಮಕವನ್ನು ಕೈಬಿಡಬೇಕಾಯಿತು. ಅವರಿಗೆ ನಿರಾಶೆಯಾಯಿತೋ? ಸಹಜವಾಗಿ ಆಯಿತು! ಆದರೆ ಇಂಥ ಯಾವುದೇ ಪರಿಸ್ಥಿತಿಯಲ್ಲಿರುವವರಿಗೆ ಶೋಜಿ ಅವರು ಕೊಡುವ ಸಲಹೆ: “ನಿಮ್ಮಿಂದ ಮಾಡಲಾಗದ ಸಂಗತಿಗಳ ಬಗ್ಗೆ ಯೋಚಿಸುತ್ತಾ ನಿರಾಶರಾಗಬೇಡಿ. ಸಕಾರಾತ್ಮಕ ನೋಟವನ್ನಿಟ್ಟುಕೊಳ್ಳಿ. ಮುಂದೊಂದು ದಿನ ನಿಮ್ಮ ಹಿಂದಿನ ದಿನಚರಿಗೆ ಮರಳುವ ನಿರೀಕ್ಷೆ ಇದ್ದರೂ, ನಿಮ್ಮ ಸದ್ಯದ ಜೀವನಸ್ಥಿತಿಯ ಮೇಲೆ ಗಮನ ಕೇಂದ್ರೀಕರಿಸಿ. ಇದನ್ನೇ ನಾನು ಅನ್ವಯಿಸುವುದಾದರೆ ನಾನೀಗ ಗಮನಕೊಡಬೇಕಾಗಿರುವುದು ನನ್ನ ಹೆಂಡತಿಗೆ ಮತ್ತು ಅವಳಿಗೆ ನೀಡಬೇಕಾದ ಸಹಾಯಕ್ಕೆ.” ನಿಮ್ಮ ಸಂಗಾತಿಗೆ ವಿಶೇಷ ಆರೈಕೆ ಅಗತ್ಯವಿರುವಲ್ಲಿ ಈ ಪ್ರಾಯೋಗಿಕ ಸಲಹೆ ನಿಮಗೂ ಸಹಾಯಮಾಡಬಲ್ಲದು. (w09-E 11/01)

[ಪಾದಟಿಪ್ಪಣಿಗಳು]

^ ಪ್ಯಾರ. 3 ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 4 ಈ ಲೇಖನ, ಸಂಗಾತಿಗೆ ನಿರಂತರ ಶಾರೀರಿಕ ಕಾಯಿಲೆಯಿರುವ ಸನ್ನಿವೇಶವನ್ನು ಚರ್ಚಿಸುತ್ತದೆ. ಆದರೆ ಅಪಘಾತದಿಂದ ಶಾರೀರಿಕ ಸಮಸ್ಯೆಗಳನ್ನು ಅಥವಾ ಖಿನ್ನತೆಯಂಥ ಭಾವನಾತ್ಮಕ ತೊಂದರೆಗಳನ್ನು ನಿಭಾಯಿಸುತ್ತಿರುವ ದಂಪತಿಗಳಿಗೂ ಮುಂದಿನ ಸಲಹೆಗಳ ಅನ್ವಯ ಸಹಾಯಕಾರಿ.

^ ಪ್ಯಾರ. 20 ನಿಮ್ಮ ಪರಿಸ್ಥಿತಿಗಳಿಗನುಸಾರ, ವೃತ್ತಿಪರ ಆರೋಗ್ಯಾರೈಕೆ ಮಾಡುವವರ ಇಲ್ಲವೆ ಸಾಮಾಜಿಕ ಏಜೆನ್ಸಿಗಳ ಸೌಲಭ್ಯವಿರುವಲ್ಲಿ ಅವುಗಳ ಸಹಾಯವನ್ನು ಕಡಿಮೆಪಕ್ಷ ಪಾರ್ಟ್‌ ಟೈಮ್‌ಗಾದರೂ ಪಡೆದುಕೊಳ್ಳುವುದು ಉತ್ತಮ.

ಕೇಳಿಕೊಳ್ಳಿ . . .

ನಾನೂ ನನ್ನ ಸಂಗಾತಿಯೂ ಈಗ ಅಗತ್ಯವಾಗಿ ಏನು ಮಾಡಬೇಕು?

▪ ಈ ಕಾಯಿಲೆ ಬಗ್ಗೆ ಹೆಚ್ಚು ಮಾತಾಡಬೇಕು

▪ ಈ ಕಾಯಿಲೆ ಬಗ್ಗೆ ಕಡಿಮೆ ಮಾತಾಡಬೇಕು

▪ ಚಿಂತೆ ಕಡಿಮೆ ಮಾಡಬೇಕು

▪ ಪರಸ್ಪರ ಹೆಚ್ಚು ಪರಿಗಣನೆ ತೋರಿಸಬೇಕು

▪ ಕಾಯಿಲೆಗೆ ಸಂಬಂಧಿಸದ ಮತ್ತು ಇಬ್ಬರಿಗೂ ಇಷ್ಟವಿರುವ ಒಂದು ಚಟುವಟಿಕೆಯಲ್ಲಿ ತೊಡಗಬೇಕು

▪ ಇತರರೊಂದಿಗೆ ಹೆಚ್ಚು ಸಹವಾಸ ಮಾಡಬೇಕು

▪ ಜೊತೆಗೂಡಿ ಗುರಿಗಳನ್ನಿಡಬೇಕು

[ಪುಟ 11ರಲ್ಲಿರುವ ಚಿತ್ರ]

ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಇಬ್ಬರಿಗೂ ಇಷ್ಟವಾದ ಚಟುವಟಿಕೆಯಲ್ಲಿ ಒಟ್ಟಿಗೆ ಒಳಗೂಡಬಹುದೋ?