ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏನು ಮಾಡುತ್ತಿದ್ದಾನೆ ದೇವರು?

ಏನು ಮಾಡುತ್ತಿದ್ದಾನೆ ದೇವರು?

ಏನು ಮಾಡುತ್ತಿದ್ದಾನೆ ದೇವರು?

“ಯೆಹೋವನೇ, ನೀನು ಯಾಕೆ ದೂರವಾಗಿ ನಿಂತಿದ್ದೀ; ಕಷ್ಟಕಾಲದಲ್ಲಿ ಯಾಕೆ ಮರೆಯಾಗುತ್ತೀ?” *ಕೀರ್ತನೆ 10:1.

ಇಂದಿನ ವಾರ್ತಾ ಮುಖ್ಯಾಂಶಗಳೆಡೆಗೆ ಕಣ್ಣಾಡಿಸಿದರೆ ಸಾಕು ನಾವು “ಕಷ್ಟಕಾಲದಲ್ಲಿ” ಜೀವಿಸುತ್ತಿದ್ದೇವೆ ಎಂಬ ಸಂಗತಿ ದೃಢವಾಗುತ್ತದೆ. ಅಲ್ಲದೆ ನಾವು ಸ್ವತಃ ಒಂದು ದುಷ್ಕೃತ್ಯಕ್ಕೆ ಬಲಿಯಾಗುವಾಗ, ಗಂಭೀರ ಅಪಘಾತಕ್ಕೆ ತುತ್ತಾಗುವಾಗ, ನಮ್ಮ ಪ್ರಿಯರೊಬ್ಬರು ಸಾವನ್ನಪ್ಪುವಾಗ ‘ದೇವರು ಇದನ್ನೆಲ್ಲ ನೋಡುತ್ತಾನೋ? ಅವನಿಗೆ ನಮ್ಮ ಮೇಲೆ ಪ್ರೀತಿ ಇದೆಯೋ? ದೇವರು ಇದ್ದಾನೋ ಇಲ್ಲವೋ?’ ಎಂಬ ಪ್ರಶ್ನೆಗಳು ನಮ್ಮ ಮನಸ್ಸಿಗೆ ಬರಬಹುದು.

ದೇವರಿಂದ ನಾವು ನಿರೀಕ್ಷಿಸುವಂಥ ವಿಷಯಗಳು ಯಾವುದೊ ದೋಷಯುಕ್ತ ಕಲ್ಪನೆಯ ಮೇಲೆ ಆಧರಿತ ಆಗಿರಬಹುದಲ್ಲವೇ? ಇದಕ್ಕೊಂದು ಉದಾಹರಣೆ ತಕ್ಕೊಳ್ಳೋಣ. ಒಂದು ಚಿಕ್ಕ ಮಗು, ಕೆಲಸಕ್ಕೆಂದು ತಂದೆ ಮನೆಯಿಂದ ಹೊರಗೆ ಹೋದಾಗ ಅಳುತ್ತದೆ. ಅಪ್ಪ ತನ್ನನ್ನು ತೊರೆದುಬಿಟ್ಟರೆಂದು ಅದಕ್ಕನಿಸುತ್ತದೆ. ಅವರು ಹಿಂದೆ ಬರಬೇಕು, ತನ್ನೊಂದಿಗಿರಬೇಕು ಎಂದು ಆ ಮಗು ಆಶಿಸುತ್ತದೆ. “ಅಪ್ಪ ಎಲ್ಲಿ?” ಎಂದು ದಿನವಿಡೀ ಕೇಳುತ್ತಾ ಇರುತ್ತದೆ.

ಆದರೆ ತಂದೆ ತನ್ನ ಇಡೀ ಕುಟುಂಬದ ಪೋಷಣೆಗಾಗಿ ದುಡಿಯುವುದಕ್ಕೆ ಹೋಗಲೇ ಬೇಕು. ಆದುದರಿಂದ ಆ ಮಗುವಿನ ಯೋಚನೆ ತಪ್ಪಾಗಿದೆಯೆಂದು ನಮಗೆ ಗೊತ್ತು. ಹಾಗೆಯೇ, “ಎಲ್ಲಿದ್ದಾನೆ ದೇವರು?” ಎಂದು ನಾವು ಕೇಳುವಾಗ ನಮ್ಮ ಯೋಚನೆಯಲ್ಲೂ ಇದೇ ರೀತಿ ಏನಾದರೂ ತಪ್ಪಿರಬಹುದೋ?

ಉದಾಹರಣೆಗೆ ಒಂದು ಕೆಟ್ಟ ಕೆಲಸ ಮಾಡಿರುವ ವ್ಯಕ್ತಿಯನ್ನು ಅದೇ ಕ್ಷಣದಲ್ಲಿ ದೇವರು ದಂಡಿಸಬೇಕು ಎಂದು ಕೆಲವರು ನೆನಸುತ್ತಾರೆ. ಇನ್ನೂ ಕೆಲವರು, ಕ್ರಿಸ್‌ಮಸ್‌ ತಾತಾ ಉಡುಗೊರೆಗಳನ್ನು ಕೊಡುವಂತೆ ದೇವರು ತಮಗೆ ಸದಾ ವರಗಳನ್ನು ಉದಾಹರಣೆಗೆ ಒಳ್ಳೇ ಉದ್ಯೋಗವನ್ನೋ, ಬಾಳಸಂಗಾತಿಯನ್ನೋ, ಲಾಟರಿ ಹಣವನ್ನೋ ಕೊಡಬೇಕೆಂದು ನೆನಸುತ್ತಾರೆ.

ಈ ರೀತಿಯ ಅಭಿಪ್ರಾಯವಿರುವ ಜನರು, ದೇವರು ಕೂಡಲೇ ನ್ಯಾಯತೀರಿಸದಿದ್ದರೆ ಅಥವಾ ಕೇಳಿದ್ದನ್ನು ಕೊಡದಿದ್ದರೆ ಆತನಿಗೆ ನಮ್ಮ ಕಷ್ಟ ನೋಡಿ ಏನೂ ಅನಿಸುವುದಿಲ್ಲ ಅಥವಾ ನಮಗೇನು ಬೇಕೆಂಬುದೇ ಆತನಿಗೆ ಗೊತ್ತಿಲ್ಲ ಎಂದು ಭಾವಿಸುತ್ತಾರೆ. ಆದರೆ ಇದು ಸತ್ಯವಲ್ಲ. ನಿಜವೇನೆಂದರೆ, ಯೆಹೋವ ದೇವರು ಈ ಕ್ಷಣದಲ್ಲೂ ಇಡೀ ಮಾನವ ಕುಟುಂಬವನ್ನು ಪೋಷಿಸಲು ಕೆಲಸಮಾಡುತ್ತಿದ್ದಾನೆ; ಆದರೆ ಅನೇಕರು ಬಯಸುವಂಥ ರೀತಿಯಲ್ಲಿ ಅಲ್ಲ ಅಷ್ಟೇ.

ಹಾಗಾದರೆ ದೇವರು ಏನು ಮಾಡುತ್ತಿದ್ದಾನೆ? ಉತ್ತರಕ್ಕಾಗಿ ನಾವು ಮಾನವ ಇತಿಹಾಸದ ಆರಂಭಕ್ಕೆ ತೆರಳಬೇಕು. ಆ ಸಮಯದಲ್ಲಿ ದೇವರ ಮತ್ತು ಮಾನವಕುಲದ ಸಂಬಂಧದಲ್ಲಿ ದೊಡ್ಡ ಬಿರುಕು ಉಂಟಾಯಿತು. ಆದರೆ ಅದು ಸರಿಪಡಿಸಲಾಗದಂಥ ಬಿರುಕಲ್ಲ.

ಪಾಪದಿಂದಾಗಿರುವ ಹಾನಿ

ಒಂದು ಮನೆ ಅನೇಕ ವರ್ಷಗಳಿಂದ ಹಾಳುಬಿದ್ದಿದೆ ಎಂದಿಟ್ಟುಕೊಳ್ಳಿ. ಅದರ ಛಾವಣಿ ಬಿದ್ದುಹೋಗಿದೆ, ಬಾಗಿಲುಗಳು ಕಿತ್ತುಹೋಗಿವೆ, ಅದನ್ನು ಹೊರಗಿನಿಂದ ಪೂರ್ತಿಯಾಗಿ ಹಾಳುಮಾಡಲಾಗಿದೆ. ಒಂದು ಕಾಲದಲ್ಲಿ ಆ ಮನೆ ಸುಸ್ಥಿತಿಯಲ್ಲಿತ್ತು; ಆದರೆ ಈಗ ಅದಕ್ಕಾಗಿರುವ ಹಾನಿಯನ್ನು ನೋಡಿದರೆ ಸರಿಪಡಿಸುವುದು ಸಣ್ಣ ಕೆಲಸವೇನೂ ಅಲ್ಲ, ರಾತೋರಾತ್ರಿ ಮುಗಿಯುವಂಥದ್ದೂ ಅಲ್ಲ.

ನಾವೀಗ ಸುಮಾರು 6,000 ವರ್ಷಗಳ ಹಿಂದೆ ಮಾನವಕುಲಕ್ಕಾದ ಹಾನಿಯನ್ನು ಪರಿಗಣಿಸೋಣ. ಒಬ್ಬ ಅದೃಶ್ಯ ಆತ್ಮಜೀವಿಯಾದ ಸೈತಾನನು ಪ್ರಥಮ ಮಾನವ ದಂಪತಿಯಾದ ಆದಾಮಹವ್ವರನ್ನು ದೇವರ ವಿರುದ್ಧ ದಂಗೆಯೇಳುವಂತೆ ಚಿತಾಯಿಸಿದನು. ಅಲ್ಲಿಯವರೆಗೆ ಅವರಿಗೆ ಪರಿಪೂರ್ಣ ಆರೋಗ್ಯವಿತ್ತು ಮತ್ತು ತಮ್ಮ ಸಂತತಿಯೊಂದಿಗೆ ಸದಾಕಾಲ ಬದುಕುವ ಉಜ್ವಲ ಭವಿಷ್ಯ ಅವರ ಮುಂದಿತ್ತು. (ಆದಿಕಾಂಡ 1:28) ಆದರೆ ಅವರು ಪಾಪಮಾಡಿದಾಗ, ಇನ್ನೂ ಹುಟ್ಟಿರದಿದ್ದ ಮಾನವ ಸಂತತಿಯ ಭವಿಷ್ಯವನ್ನೇ ಹಾಳುಮಾಡಿದರು.

ಈ ದಂಗೆಯ ಹಾನಿ ಸಣ್ಣ ಪ್ರಮಾಣದ್ದಾಗಿರಲಿಲ್ಲ. ‘ಒಬ್ಬ ಮನುಷ್ಯನಿಂದ [ಆದಾಮನಿಂದ] ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿತು’ ಎಂದು ಬೈಬಲ್‌ ಹೇಳುತ್ತದೆ. (ರೋಮನ್ನರಿಗೆ 5:12) ಪಾಪವು ಮರಣವನ್ನು ತಂದಿತಲ್ಲದೆ ನಿರ್ಮಾಣಿಕನೊಂದಿಗಿನ ನಮ್ಮ ಸಂಬಂಧಕ್ಕೆ ಧಕ್ಕೆ ತಂದಿತು. ಅದು ನಮ್ಮನ್ನು ಶಾರೀರಿಕವಾಗಿ, ಮಾನಸಿಕವಾಗಿ, ಭಾವಾತ್ಮಕವಾಗಿಯೂ ಬಾಧಿಸಿದೆ. ಇದರ ಪರಿಣಾಮವಾಗಿ ನಮ್ಮ ಸ್ಥಿತಿಯೂ ಆ ಹಾಳುಬಿದ್ದಿರುವ ಮನೆಯಂತೆ ಆಗಿದೆ. ನಮ್ಮ ಈ ಸ್ಥಿತಿಯನ್ನು ನೀತಿವಂತ ಮನುಷ್ಯನಾದ ಯೋಬನು ವರ್ಣಿಸುತ್ತಾ “ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ” ಇದ್ದಾನೆ ಎಂದು ಸರಿಯಾಗಿಯೇ ಹೇಳಿದನು.—ಯೋಬ 14:1.

ಆದರೆ ಆದಾಮಹವ್ವರು ಪಾಪಮಾಡಿದಾಗ ದೇವರು ಮಾನವಕುಲವನ್ನು ತೊರೆದುಬಿಟ್ಟನೋ? ಖಂಡಿತ ಇಲ್ಲ. ಸತ್ಯವೇನೆಂದರೆ ಆ ಹಾನಿಯನ್ನು ಸರಿಪಡಿಸಲು ಆತನು ಮಾನವ ಕುಟುಂಬಕ್ಕೋಸ್ಕರ ಅಂದಿನಿಂದ ಇಂದಿನವರೆಗೂ ಕೆಲಸಮಾಡುತ್ತಲೇ ಇದ್ದಾನೆ. ದೇವರು ನಮಗಾಗಿ ಏನು ಮಾಡುತ್ತಿದ್ದಾನೆಂಬುದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಒಂದು ಹಾಳಾದ ಮನೆಯನ್ನು ರಿಪೇರಿಮಾಡಲು ತೆಗೆದುಕೊಳ್ಳಲಾಗುವ ಮೂರು ಮುಖ್ಯ ಹೆಜ್ಜೆಗಳನ್ನು ಪರಿಗಣಿಸೋಣ. ಇವುಗಳಲ್ಲಿ ಪ್ರತಿಯೊಂದು ಹೆಜ್ಜೆಯು ದೇವರು ಮಾನವಕುಲದ ಪರಿಸ್ಥಿತಿಯ ಸುಧಾರಣೆಗಾಗಿ ಕೈಗೊಂಡ ಕ್ರಮಕ್ಕೆ ಹೇಗೆ ಹೋಲುತ್ತದೆಂಬುದನ್ನೂ ಪರಿಗಣಿಸೋಣ.

1 ಹಾಳಾಗಿರುವ ಮನೆಯನ್ನು ಪರಿಶೀಲಿಸಿ ಅದನ್ನು ದುರಸ್ತಿಗೊಳಿಸಬೇಕೋ ನೆಲಸಮಮಾಡಬೇಕೋ ಎಂದು ಮನೆಯೊಡೆಯ ನಿರ್ಣಯಿಸುತ್ತಾನೆ.

ಏದೆನ್‌ ತೋಟದಲ್ಲಿ ಆದಾಮಹವ್ವರು ದಂಗೆಯೆದ್ದ ಕೂಡಲೇ ಯೆಹೋವ ದೇವರು ಮಾನವಕುಲವನ್ನು ಅದರ ಪೂರ್ವಸ್ಥಿತಿಗೆ ತರುವ ತನ್ನ ಉದ್ದೇಶವನ್ನು ತಿಳಿಯಪಡಿಸಿದನು. ಈ ದಂಗೆಯ ಹಿಂದೆ ಇದ್ದ ಅದೃಶ್ಯ ಆತ್ಮಜೀವಿಗೆ ದೇವರು ಹೇಳಿದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.”—ಆದಿಕಾಂಡ 3:15.

ಹೀಗೆ ಯೆಹೋವನು ಏದೆನಿನಲ್ಲಾದ ದಂಗೆಯ ಚಿತಾವಣೆಗಾರನನ್ನು ತಾನು ನಾಶಮಾಡುವೆನೆಂದು ಮಾತುಕೊಟ್ಟನು. (ರೋಮನ್ನರಿಗೆ 16:20; ಪ್ರಕಟನೆ 12:9) ಅಲ್ಲದೆ, ಮುಂದೆ ಬರಲಿದ್ದ ‘ಸಂತಾನವೊಂದು’ ಮಾನವಕುಲವನ್ನು ಪಾಪದಿಂದ ಬಿಡಿಸಲಿರುವುದು ಎಂದೂ ಯೆಹೋವನು ತಿಳಿಸಿದನು. * (1 ಯೋಹಾನ 3:8) ಈ ವಾಗ್ದಾನಗಳು ಒಂದು ಪ್ರಧಾನ ಸತ್ಯವನ್ನು ಹೊರಗೆಡಹಿದವು: ದೇವರು ಮಾನವ ಸೃಷ್ಟಿಯನ್ನು ನಾಶಮಾಡುವುದಿಲ್ಲ ಬದಲಾಗಿ ಅದಕ್ಕಾಗಿರುವ ಹಾನಿಯನ್ನು ಸರಿಪಡಿಸಿ ದುರಸ್ತಿಗೊಳಿಸುವನು. ಆದರೆ ಇದಕ್ಕೆ ಸಮಯಹಿಡಿಯಲಿತ್ತು.

2 ದುರಸ್ತಿಕಾರ್ಯದಲ್ಲಿ ಏನೆಲ್ಲಾ ಕೆಲಸ ಒಳಗೂಡಿದೆ ಎಂಬುದರ ಬಗ್ಗೆ ಮೊದಲೇ ಒಂದು ನೀಲಿನಕ್ಷೆಯನ್ನು ವಿನ್ಯಾಸಗಾರನು ತಯಾರಿಸುತ್ತಾನೆ.

ಯೆಹೋವ ದೇವರು ಇಸ್ರಾಯೇಲ್ಯರಿಗೆ ಒಂದು ನಿಯಮಾವಳಿ ಕೊಟ್ಟನು ಮತ್ತು ತನ್ನ ಆರಾಧನೆಗಾಗಿ ಕಟ್ಟಬೇಕಾಗಿದ್ದ ಆಲಯದ ವಿನ್ಯಾಸವನ್ನು ತಿಳಿಯಪಡಿಸಿದನು. “ಅವು ಬರಬೇಕಾಗಿರುವ ಸಂಗತಿಗಳ ಛಾಯೆಯಾಗಿವೆ” ಎಂದು ಬೈಬಲ್‌ ಹೇಳುತ್ತದೆ. (ಕೊಲೊಸ್ಸೆ 2:17) ಇವು ಒಂದು ನೀಲಿನಕ್ಷೆಯಂತೆ, ಮುಂದೆ ಬರಲಿದ್ದ ಶ್ರೇಷ್ಠವಾದ ವಾಸ್ತವಿಕತೆಗಳನ್ನು ಚಿತ್ರಿಸಿದವು.

ಉದಾಹರಣೆಗೆ, ಇಸ್ರಾಯೇಲ್ಯರು ತಮ್ಮ ಪಾಪಗಳ ಕ್ಷಮಾಪಣೆಗಾಗಿ ಪ್ರಾಣಿಯಜ್ಞಗಳನ್ನು ಅರ್ಪಿಸುತ್ತಿದ್ದರು. (ಯಾಜಕಕಾಂಡ 17:11) ಇವು ಶತಮಾನಗಳ ನಂತರ ಅರ್ಪಿಸಲ್ಪಡಲಿದ್ದ ಒಂದು ಶ್ರೇಷ್ಠ ಯಜ್ಞವನ್ನು ಮುನ್‌ಸೂಚಿಸಿದವು. ಆ ಯಜ್ಞವು ಇಡೀ ಮಾನವಕುಲಕ್ಕೆ ಪಾಪಮರಣದಿಂದ ಬಿಡುಗಡೆಯನ್ನು ಒದಗಿಸಲಿತ್ತು. * ಇಸ್ರಾಯೇಲ್ಯರು ಎಲ್ಲಿ ಆರಾಧಿಸುತ್ತಿದ್ದರೋ ಆ ದೇವದರ್ಶನ ಗುಡಾರ ಮತ್ತು ಆಲಯದ ವಿನ್ಯಾಸವು ಪಾಪಮರಣದಿಂದ ಬಿಡುಗಡೆಮಾಡಲು ಮುಂದೆ ಬರಲಿದ್ದ ಮೆಸ್ಸೀಯನು ತೆಗೆದುಕೊಳ್ಳಲಿಕ್ಕಿದ್ದ ಹೆಜ್ಜೆಗಳನ್ನು ಮುನ್‌ಚಿತ್ರಿಸಿತು. ಅಂದರೆ ಅವನ ಯಜ್ಞಾರ್ಪಿತ ಮರಣದಿಂದ ಹಿಡಿದು ಸ್ವರ್ಗಕ್ಕೆ ಏರಿಹೋಗುವ ತನಕದ ವಿಷಯಗಳನ್ನು ಚಿತ್ರಿಸಿತು.—ಪುಟ 7ರ ಚಾರ್ಟ್‌ ನೋಡಿ.

3 ನೀಲಿನಕ್ಷೆಗನುಸಾರ ದುರಸ್ತಿಕೆಲಸವನ್ನು ಮಾಡುವ ಒಬ್ಬ ಕಟ್ಟಡ ನಿರ್ಮಾಣಿಕನನ್ನು ಆರಿಸಲಾಗುತ್ತದೆ.

ಇಸ್ರಾಯೇಲ್ಯರ ಯಜ್ಞಗಳ ನಮೂನೆಗನುಸಾರ ಕ್ರಿಯೆಗೈಯಲಿದ್ದ ವಾಗ್ದತ್ತ ಮೆಸ್ಸೀಯನು ಯೇಸು ಕ್ರಿಸ್ತನಾಗಿದ್ದನು. ಆತನಾದರೋ ಮಾನವಕುಲವನ್ನು ಪಾಪಮರಣದಿಂದ ಬಿಡಿಸಲು ತನ್ನ ಪ್ರಾಣವನ್ನೇ ಕೊಡಲಿದ್ದನು. ಆತನನ್ನು “ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ” ಎಂದು ಸ್ನಾನಿಕನಾದ ಯೋಹಾನನು ಕರೆದನು. (ಯೋಹಾನ 1:29) ದೇವರು ಕೊಟ್ಟ ಈ ನೇಮಕವನ್ನು ಯೇಸು ಸಿದ್ಧಮನಸ್ಸಿನಿಂದ ಅಂಗೀಕರಿಸಿದನು. “ನಾನು ನನ್ನ ಚಿತ್ತವನ್ನು ಮಾಡಲಿಕ್ಕಾಗಿ ಅಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಲಿಕ್ಕಾಗಿಯೇ ಸ್ವರ್ಗದಿಂದ ಇಳಿದುಬಂದಿದ್ದೇನೆ” ಎಂದನಾತನು.—ಯೋಹಾನ 6:38.

ಯೇಸುವಿಗಾಗಿದ್ದ ದೇವರ ಚಿತ್ತ ಅಂದರೆ ದೇವರ ಉದ್ದೇಶದಲ್ಲಿ ಯೇಸು ‘ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡುವುದು’ ಮಾತ್ರವಲ್ಲ ಇತರರನ್ನೂ ತನ್ನ ಶಿಷ್ಯರಾಗುವಂತೆ ಮತ್ತು ಒಂದು ರಾಜ್ಯದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸುವುದೂ ಸೇರಿತ್ತು. (ಮತ್ತಾಯ 20:28; ಲೂಕ 22:29, 30) ಆ ರಾಜ್ಯದ ಮೂಲಕವೇ ದೇವರು ಮಾನವಕುಲಕ್ಕಾಗಿ ತನಗಿರುವ ಉದ್ದೇಶವನ್ನು ಪೂರೈಸಲಿದ್ದಾನೆ. ದೇವರ ಆ ರಾಜ್ಯದ ಸಂದೇಶವನ್ನು “ಸುವಾರ್ತೆ” ಎಂದು ಕರೆಯಲಾಗಿದೆ. ಏಕೆಂದರೆ ಎಲ್ಲ ಭೂವ್ಯವಹಾರಗಳನ್ನು ನಿಯಂತ್ರಿಸಲು ದೇವರು ಈಗಾಗಲೇ ಸ್ವರ್ಗದಲ್ಲಿ ಒಂದು ಸರ್ಕಾರವನ್ನು ಸ್ಥಾಪಿಸಿದ್ದಾನೆ ಎಂದು ಆ ಸಂದೇಶ ತಿಳಿಸುತ್ತದೆ.—ಮತ್ತಾಯ 24:14; ದಾನಿಯೇಲ 2:44. *

ದುರಸ್ತಿಕಾರ್ಯ ಮುಂದುವರಿಯುತ್ತಿದೆ

ಯೇಸು ಸ್ವರ್ಗಕ್ಕೇರಿ ಹೋಗುವ ಮುಂಚೆ ತನ್ನ ಶಿಷ್ಯರಿಗೆ ಈ ಆಜ್ಞೆ ಕೊಟ್ಟನು: ‘ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ. ನೋಡಿರಿ, ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ.’—ಮತ್ತಾಯ 28:19, 20.

ಹಾಗಾದರೆ ಮಾನವಕುಲಕ್ಕಾದ ಹಾನಿಯನ್ನು ಸರಿಪಡಿಸಿ ದುರಸ್ತಿಮಾಡುವ ಕೆಲಸ ಯೇಸುವಿನ ಮರಣದೊಂದಿಗೆ ಕೊನೆಗೊಳ್ಳಲಿಲ್ಲ. ಅದು “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ” ಅಂದರೆ ದೇವರ ರಾಜ್ಯವು ಈ ಭೂವ್ಯವಹಾರಗಳ ಮೇಲೆ ನಿಯಂತ್ರಣ ಸಾಧಿಸುವ ಸಮಯದ ವರೆಗೆ ಮುಂದುವರಿಯಲಿತ್ತು. ಆ ಸಮಯ ತೀರ ಹತ್ತಿರವಿದೆ. ಇದು ನಮಗೆ ಹೇಗೆ ಗೊತ್ತು? “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” ಬಗ್ಗೆ ಯೇಸು ಮುಂತಿಳಿಸಿದ ಸೂಚನೆ ಈಗ ನೆರವೇರುತ್ತಿರುವುದರಿಂದಲೇ. *ಮತ್ತಾಯ 24:3-14; ಲೂಕ 21:7-11; 2 ತಿಮೊಥೆಯ 3:1-5.

ದೇವರ ರಾಜ್ಯದ ಸುವಾರ್ತೆ ಸಾರಬೇಕೆಂದು ಯೇಸು ಕೊಟ್ಟ ಆಜ್ಞೆಯನ್ನು ಇಂದು 236 ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳು ಪಾಲಿಸುತ್ತಿದ್ದಾರೆ. ನಿಮ್ಮ ಕೈಯಲ್ಲಿರುವ ಈ ಪತ್ರಿಕೆಯು ನೀವು ದೇವರ ರಾಜ್ಯದ ಕುರಿತು ಮತ್ತು ಅದು ಏನನ್ನು ಸಾಧಿಸುತ್ತದೆಂಬದರ ಕುರಿತು ಕಲಿಯಲು ನಿಮ್ಮ ಸಹಾಯಕ್ಕೆಂದೇ ವಿನ್ಯಾಸಿಸಲಾಗಿದೆ. ಕಾವಲಿನಬುರುಜು ಪತ್ರಿಕೆಯ ಪ್ರತಿಯೊಂದು ಸಂಚಿಕೆಯ 2ನೇ ಪುಟದಲ್ಲಿ ಈ ವಾಕ್ಯಗಳಿವೆ: “ಪರಲೋಕದಲ್ಲಿ ನೈಜ ಸರಕಾರವಾಗಿರುವ ದೇವರ ರಾಜ್ಯವು, ಸಕಲ ದುಷ್ಟತನವನ್ನು ಶೀಘ್ರದಲ್ಲಿ ನಾಶಗೊಳಿಸಿ ಈ ಭೂಮಿಯನ್ನು ಪರದೈಸಾಗಿ ಮಾರ್ಪಡಿಸುವುದೆಂಬ ಸುವಾರ್ತೆಯೊಂದಿಗೆ ಈ ಪತ್ರಿಕೆಯು ಜನರನ್ನು ಸಂತೈಸುತ್ತದೆ. ನಾವು ಸದಾಕಾಲ ಜೀವಿಸಲು ಸಾಧ್ಯವಾಗುವಂತೆ ತನ್ನ ಜೀವವನ್ನೇ ಕೊಟ್ಟ ಮತ್ತು ದೇವರ ರಾಜ್ಯದ ಅರಸನಾಗಿ ಈಗ ಆಳುತ್ತಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವಂತೆ ಇದು ಉತ್ತೇಜಿಸುತ್ತದೆ.”

ಸದ್ಯಕ್ಕಂತೂ ಭಯೋತ್ಪಾದಕರ ದಾಳಿಗಳ ಅಥವಾ ಪ್ರಕೃತಿ ವಿಕೋಪಗಳ ಸುದ್ದಿ ನಮ್ಮ ಕಿವಿಗೆ ಬೀಳುತ್ತಾ ಇರಬಹುದು. ಇಲ್ಲವೆ ಸ್ವತಃ ನಮಗೇ ಯಾವುದಾದರೂ ದುರಂತ ಸಂಭವಿಸಬಹುದು. ಆದರೆ ದೇವರು ಮಾನವಕುಲವನ್ನು ತೊರೆದುಬಿಟ್ಟಿಲ್ಲವೆಂಬದು ಬೈಬಲಿನ ಅಧ್ಯಯನ ಮಾಡುವುದರಿಂದ ನಮಗೆ ಮನದಟ್ಟಾಗುತ್ತದೆ. “ಆತನು ನಮ್ಮಲ್ಲಿ ಪ್ರತಿಯೊಬ್ಬನಿಗೂ . . . ದೂರವಾಗಿರುವುದಿಲ್ಲ.” (ಅ. ಕಾರ್ಯಗಳು 17:27) ನಮ್ಮ ಮೊದಲ ಹೆತ್ತವರು ಕಳಕೊಂಡದ್ದೆಲ್ಲವನ್ನೂ ದೇವರು ನಮಗೆ ತಿರುಗಿಕೊಡುವನೆಂಬ ಆತನ ವಾಗ್ದಾನ ಖಂಡಿತ ನೆರವೇರುವುದು.—ಯೆಶಾಯ 55:11. (w10-E 05/01)

[ಪಾದಟಿಪ್ಪಣಿಗಳು]

^ ಪ್ಯಾರ. 2 ದೇವರ ಹೆಸರು ಯೆಹೋವ ಎಂದು ಬೈಬಲಿನಲ್ಲಿ ತಿಳಿಸಲಾಗಿದೆ.

^ ಪ್ಯಾರ. 16 ಆದಿಕಾಂಡ 3:15ರ ಹೆಚ್ಚಿನ ವಿವರಣೆಗಾಗಿ ಯೆಹೋವನ ಸಮೀಪಕ್ಕೆ ಬನ್ನಿರಿ ಎಂಬ ಪುಸ್ತಕದ ಅಧ್ಯಾಯ 19ನ್ನು ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಪ್ಯಾರ. 19 ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದ ಅಧ್ಯಾಯ 5ನ್ನು ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಪ್ಯಾರ. 22 ದೇವರ ರಾಜ್ಯದ ಕುರಿತ ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದ ಅಧ್ಯಾಯ 8ನ್ನು ನೋಡಿ.

^ ಪ್ಯಾರ. 25 ಹೆಚ್ಚಿನ ಮಾಹಿತಿಗಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದ ಅಧ್ಯಾಯ 9ನ್ನು ನೋಡಿ.

[ಪುಟ 7ರಲ್ಲಿರುವ ಚಾರ್ಟು/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

‘ನಿಜತ್ವದ ನಕಲು’ ದೇವದರ್ಶನ ಗುಡಾರ ಏನನ್ನು ಸೂಚಿಸುತ್ತದೆ?

ಯಜ್ಞವೇದಿ

ಯೇಸುವಿನ ಯಜ್ಞವನ್ನು ಸ್ವೀಕರಿಸಲು ದೇವರಿಗಿರುವ ಸಿದ್ಧಮನಸ್ಸು.—ಇಬ್ರಿಯ 13:10-12.

ಮಹಾ ಯಾಜಕ

ಯೇಸು.—ಇಬ್ರಿಯ 9:11.

1 ಮಹಾ ಯಾಜಕನು ದೋಷಪರಿಹಾರಕ ದಿನದಂದು ಜನರ ಪಾಪಪರಿಹಾರಕ್ಕಾಗಿ ಒಂದು ಯಜ್ಞ ಅರ್ಪಿಸಿದನು.—ಯಾಜಕಕಾಂಡ 16:15, 29-31.

1 ಕ್ರಿ.ಶ. 33ರ ನೈಸಾನ್‌ 14ರಂದು ಯೇಸು ನಮ್ಮೆಲ್ಲರಿಗಾಗಿ ತನ್ನ ಪ್ರಾಣವನ್ನು ಯಜ್ಞವಾಗಿ ಕೊಟ್ಟನು.—ಇಬ್ರಿಯ 10:5-10; 1 ಯೋಹಾನ 2:1, 2.

ಪವಿತ್ರ ಸ್ಥಳ

ಭೂಮಿಯ ಮೇಲೆ ದೇವರ ಆಧ್ಯಾತ್ಮಿಕ ಪುತ್ರನಾಗಿ ಯೇಸುವಿನ ಜನನ.—ಮತ್ತಾಯ 3:16, 17; ರೋಮನ್ನರಿಗೆ 8:14-17; ಇಬ್ರಿಯ 5:4-6.

ತೆರೆ

ಯೇಸುವಿನ ಮಾನವ ದೇಹ. ಇದು ಯೇಸು ಸ್ವರ್ಗೀಯ ಜೀವನವನ್ನು ಪಡೆಯಲು ಒಂದು ತಡೆಯಾಗಿತ್ತು.—1 ಕೊರಿಂಥ 15:44, 50; ಇಬ್ರಿಯ 6:19, 20; 10:19, 20.

2 ಪವಿತ್ರ ಸ್ಥಳದಿಂದ ಅತಿ ಪವಿತ್ರ ಸ್ಥಳವನ್ನು ಪ್ರತ್ಯೇಕಿಸುತ್ತಿದ್ದ ತೆರೆಯನ್ನು ದಾಟಿ ಮಹಾ ಯಾಜಕನು ಅತಿ ಪವಿತ್ರ ಸ್ಥಳವನ್ನು ಪ್ರವೇಶಿಸುತ್ತಿದ್ದನು.

2 ಪುನರುತ್ಥಾನವಾದ ಮೇಲೆ ಯೇಸು ‘ತೆರೆಯನ್ನು ದಾಟಿಹೋದನು’ ಅಂದರೆ ಸ್ವರ್ಗಕ್ಕೆ ಏರಿಹೋದನು. ಅಲ್ಲಿ ಆತನು “ನಮಗೋಸ್ಕರ ದೇವರ ಸಮ್ಮುಖದಲ್ಲಿ . . . ಕಾಣಿಸಿಕೊಂಡನು.”—ಇಬ್ರಿಯ 9:24-28.

ಅತಿ ಪವಿತ್ರ ಸ್ಥಳ

ಸ್ವರ್ಗ.—ಇಬ್ರಿಯ 9:24.

3 ಯಜ್ಞಾರ್ಪಿಸಿದ ಪ್ರಾಣಿಯ ರಕ್ತವನ್ನು ಮಹಾ ಯಾಜಕನು ಅತಿ ಪವಿತ್ರ ಸ್ಥಳವನ್ನು ಪ್ರವೇಶಿಸಿದಾಗ ಒಡಂಬಡಿಕೆಯ ಮಂಜೂಷದ ಮುಂದೆ ಚಿಮುಕಿಸಿದನು.—ಯಾಜಕಕಾಂಡ 16:12-14.

3 ಸುರಿಸಲ್ಪಟ್ಟ ತನ್ನ ರಕ್ತದ ಮೌಲ್ಯವನ್ನು ದೇವರಿಗೆ ಒಪ್ಪಿಸುವ ಮೂಲಕ ಯೇಸು ನಮ್ಮ ಪಾಪಗಳಿಗಾಗಿ ನಿಜವಾದ ದೋಷಪರಿಹಾರ ಒದಗಿಸಿದನು.—ಇಬ್ರಿಯ 9:12, 24; 1 ಪೇತ್ರ 3:21, 22.