ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜವಾಬ್ದಾರಿ ಹೊರುವಂತೆ ಮಕ್ಕಳಿಗೆ ಕಲಿಸಿರಿ

ಜವಾಬ್ದಾರಿ ಹೊರುವಂತೆ ಮಕ್ಕಳಿಗೆ ಕಲಿಸಿರಿ

ಕುಟುಂಬ ಸಂತೋಷಕ್ಕೆ ಕೀಲಿಕೈಗಳು

ಜವಾಬ್ದಾರಿ ಹೊರುವಂತೆ ಮಕ್ಕಳಿಗೆ ಕಲಿಸಿರಿ

ಜಯಂತ್‌: * “ನನ್ನ ನಾಲ್ಕು ವರ್ಷದ ಮಗ ಮಯೂರ್‌ ಮನೆಯಲ್ಲೆಲ್ಲ ಆಟದ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದನು. ಅದೆಲ್ಲವನ್ನು ಜೋಡಿಸಿಟ್ಟು ಮಲಗಬೇಕೆಂದು ಅವನಿಗೆ ಹೇಳುತ್ತಿದ್ದೆ. ಅದಕ್ಕೆ ಅವನು ಕಿರುಚಿ, ಅತ್ತು, ದೊಡ್ಡ ರಂಪ ಮಾಡುತ್ತಿದ್ದ. ಪ್ರತಿ ಸಾಯಂಕಾಲ ಇದೇ ಆಗುತ್ತಿತ್ತು. ಕೆಲವೊಮ್ಮೆ ನನಗೆಷ್ಟು ತಲೆಚಿಟ್ಟು ಹಿಡಿಯುತ್ತಿತ್ತೆಂದರೆ ಅವನ ಮೇಲೆ ಕೂಗಾಡುತ್ತಿದ್ದೆ. ಆದರೆ ಅದರಿಂದ ನನಗೂ ಅವನಿಗೂ ತುಂಬ ಬೇಸರ ಆಗುತ್ತಿತ್ತು. ಮಲಗುವ ಸಮಯದಲ್ಲಿ ಖುಷಿಖುಷಿಯಾಗಿರಬೇಕು ಅಂತ ನನ್ನಾಸೆ. ಆದುದರಿಂದ ಆಟದ ಸಾಮಾನುಗಳನ್ನು ಜೋಡಿಸಿಡಲು ಅವನಿಗೆ ಹೇಳುವುದನ್ನೇ ನಿಲ್ಲಿಸಿಬಿಟ್ಟೆ. ನಾನೇ ಅದನ್ನು ಮಾಡಲಾರಂಭಿಸಿದೆ.”

ಎಮಿಲಿ: “13 ವರ್ಷದ ನನ್ನ ಮಗಳು ಜೆನ್ನಿಗೆ, ಸ್ಕೂಲ್‌ನಲ್ಲಿ ಟೀಚರ್‌ ಕೊಟ್ಟ ಹೋಂವರ್ಕ್‌

ಸರಿಯಾಗಿ ಅರ್ಥವಾಗಲಿಲ್ಲ. ಮನೆಗೆ ಬಂದವಳೇ ಒಂದು ಗಂಟೆ ಅಳುತ್ತಾ ಕೂತಿದ್ದಳು. ಅದರ ಬಗ್ಗೆ ಪುನಃ ಟೀಚರನ್ನೇ ಕೇಳುವಂತೆ ಹೇಳಿದೆ. ಆದರೆ ಆ ಟೀಚರ್‌ ತುಂಬ ಒರಟೆಂದೂ ಆಕೆಯ ಮುಂದೆ ಬಾಯಿ ತೆರೆಯಲು ತನಗೆ ಧೈರ್ಯವಿಲ್ಲವೆಂದೂ ಹೇಳುತ್ತಾ ಇದ್ದಳು. ಸ್ಕೂಲಿಗೆ ಹೋಗಿ ಆ ಟೀಚರಿಗೆ ಸ್ವಲ್ಪ ಚುರುಕು ಮುಟ್ಟಿಸಿಬರಬೇಕು ಎಂದುಕೊಂಡೆ. ಯಾರೂ ನನ್ನ ಪುಟ್ಟಿ ಕಣ್ಣಲ್ಲಿ ನೀರುಬರಿಸಬಾರದು!”

ನಿಮಗೂ ಎಂದಾದರೂ ಜಯಂತ್‌ ಹಾಗೂ ಎಮಿಲಿಯಂತೆ ಅನಿಸಿದೆಯೋ? ಅವರಂತೆ ಅನೇಕ ಹೆತ್ತವರಿಗೆ, ತಮ್ಮ ಮಕ್ಕಳು ಕಷ್ಟದಲ್ಲಿರುವುದನ್ನು ಇಲ್ಲವೆ ದುಃಖಪಡುವುದನ್ನು ನೋಡಿದರೆ ಕರುಳು ಚುರ್ರೆನ್ನುತ್ತದೆ. ಹೆತ್ತವರು ತಮ್ಮ ಮಕ್ಕಳನ್ನು ಸಂರಕ್ಷಿಸುವುದು ಸಹಜ. ಆದರೂ ಮೇಲೆ ತಿಳಿಸಲಾದ ಸನ್ನಿವೇಶಗಳು, ಆ ಹೆತ್ತವರು ತಮ್ಮ ಮಕ್ಕಳಿಗೆ ಜವಾಬ್ದಾರಿ ಹೊರುವುದರ ಬಗ್ಗೆ ಒಂದು ಪಾಠ ಕಲಿಸಿಕೊಡಲು ಒಳ್ಳೇ ಅವಕಾಶಗಳಾಗಿದ್ದವು. ಹಾಗಿದ್ದರೂ 4 ವರ್ಷದ ಹುಡುಗನಿಗೂ 13 ವರ್ಷದ ಹುಡುಗಿಗೂ ಕಲಿಸಿಕೊಡಬೇಕಾದ ಪಾಠಗಳು ಬೇರೆಬೇರೆ ಎಂಬುದರಲ್ಲಿ ಸಂಶಯವಿಲ್ಲ.

ಸತ್ಯವೇನೆಂದರೆ ನಿಮ್ಮ ಮಕ್ಕಳನ್ನು ಸಮಸ್ಯೆಸವಾಲುಗಳಿಂದ ಸಂರಕ್ಷಿಸಲು ನೀವು ಜೀವನಪೂರ್ತಿ ಅವರೊಂದಿಗಿರಲಿಕ್ಕಿಲ್ಲ. ಒಂದಲ್ಲ ಒಂದು ದಿನ ಮಕ್ಕಳು ತಂದೆತಾಯಿಯನ್ನು ಅವಲಂಬಿಸುವುದನ್ನು ಬಿಟ್ಟು ಜವಾಬ್ದಾರಿಯ “ಸ್ವಂತ ಹೊರೆಯನ್ನು” ಹೊತ್ತುಕೊಳ್ಳಬೇಕಾಗುತ್ತದೆ. (ಗಲಾತ್ಯ 6:5; ಆದಿಕಾಂಡ 2:24) ಮಕ್ಕಳು ತಮ್ಮ ಸ್ವಂತ ಕಾಲುಗಳ ಮೇಲೆ ನಿಲ್ಲಬೇಕಾದರೆ ಅವರು ನಿಸ್ವಾರ್ಥ, ಕಾಳಜಿಭರಿತ, ಜವಾಬ್ದಾರಿಯುತ ವಯಸ್ಕರಾಗುವಂತೆ ಕಲಿಸುವ ಗುರಿಯ ಮೇಲೆ ಹೆತ್ತವರು ಗಮನ ಕೇಂದ್ರೀಕರಿಸಬೇಕು. ಆದರೆ ಇದು ಹೇಳಿದಷ್ಟು ಸುಲಭದ ಕೆಲಸವಲ್ಲ!

ಸಂತೋಷದ ಸಂಗತಿಯೇನೆಂದರೆ ಯೇಸು ಹೆತ್ತವರಿಗೆ ಒಳ್ಳೇ ಮಾದರಿಯಿಟ್ಟಿದ್ದಾನೆ. ಆತನಿಗೆ ಮದುವೆ-ಮಕ್ಕಳು ಆಗಿರಲಿಲ್ಲ ನಿಜ. ಆದರೆ ತನ್ನ ಶಿಷ್ಯರೊಂದಿಗೆ ಆತನು ನಡೆದುಕೊಂಡ ರೀತಿ, ತರಬೇತಿಕೊಟ್ಟ ರೀತಿ ಇವುಗಳಿಂದ ಹೆತ್ತವರು ಬಹಳಷ್ಟನ್ನು ಕಲಿಯಬಹುದು. ಆ ಶಿಷ್ಯರನ್ನು ಆತನು ಆಯ್ಕೆ ಮಾಡಿ ತರಬೇತಿಕೊಟ್ಟದ್ದರ ಗುರಿ, ತಾನು ಸ್ವರ್ಗಕ್ಕೆ ಹೋದ ಬಳಿಕವೂ ತನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗುವಂತೆ ಅವರನ್ನು ಸಮರ್ಥರನ್ನಾಗಿ ಮಾಡುವುದೇ ಆಗಿತ್ತು. (ಮತ್ತಾಯ 28:19, 20) ಈ ತರಬೇತಿಯಿಂದ ಯೇಸು ಏನನ್ನು ಸಾಧಿಸಿದನೋ ಅದು ಜವಾಬ್ದಾರಿಯುತ ಮಕ್ಕಳನ್ನು ಬೆಳೆಸಲು ಯತ್ನಿಸುವ ಪ್ರತಿಯೊಬ್ಬ ತಂದೆ/ತಾಯಿಗಿರುವ ಗುರಿಯನ್ನು ಹೋಲುತ್ತದೆ. ಯೇಸು ಹೆತ್ತವರಿಗಾಗಿ ಇಟ್ಟ ಮಾದರಿಯ ಮೂರು ಅಂಶಗಳನ್ನು ಪರಿಗಣಿಸಿರಿ.

ನಿಮ್ಮ ಮಕ್ಕಳಿಗೆ ‘ಮಾದರಿ ಇಡಿ.’ ಯೇಸು ಸಾಯುವ ಸ್ವಲ್ಪ ಮುಂಚೆ ತನ್ನ ಶಿಷ್ಯರಿಗೆ ಹೀಗಂದನು: “ನಾನು ಮಾಡಿದಂತೆಯೇ ನೀವೂ ಮಾಡಬೇಕೆಂದು ನಾನು ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ.” (ಯೋಹಾನ 13:15) ಅದೇ ರೀತಿಯಲ್ಲಿ ಜವಾಬ್ದಾರಿಯನ್ನು ಹೊರುವುದರ ಅರ್ಥವೇನೆಂದು ಮಕ್ಕಳಿಗೆ ಹೆತ್ತವರು ವಿವರಿಸಿ ಹೇಳಬೇಕು ಮತ್ತು ಅದನ್ನು ಸ್ವಂತ ಮಾದರಿ ಮೂಲಕ ತೋರಿಸಬೇಕು.

ನಿಮ್ಮನ್ನೇ ಕೇಳಿಕೊಳ್ಳಿ: ‘ನನಗಿರುವ ಜವಾಬ್ದಾರಿಗಳ ನಿರ್ವಹಣೆಯ ಬಗ್ಗೆ ಹೆಚ್ಚಾಗಿ ಒಳ್ಳೇದನ್ನೇ ಮಾತಾಡುತ್ತೇನೋ? ಇತರರಿಗಾಗಿ ಕಷ್ಟಪಟ್ಟು ಶ್ರಮಿಸುವುದರಿಂದ ಸಿಗುವ ತೃಪ್ತಿಯ ಬಗ್ಗೆ ಮಾತಾಡುತ್ತೇನೋ? ಅಥವಾ ಯಾವಾಗಲೂ ಗೊಣಗುತ್ತಾ ಇದ್ದು, ಆರಾಮದ ಜೀವನ ಸಾಗಿಸುತ್ತಿರುವಂತೆ ತೋರುವವರೊಂದಿಗೆ ನನ್ನನ್ನು ಹೋಲಿಸುತ್ತಿರುತ್ತೇನೋ?’

ಯಾರೂ ಪರಿಪೂರ್ಣರಲ್ಲ ಎಂಬುದು ಒಪ್ಪತಕ್ಕದ್ದೇ. ನಮ್ಮೆಲ್ಲರಿಗೂ ಒಂದಲ್ಲ ಒಂದು ಸಮಯ ನಮ್ಮ ಜವಾಬ್ದಾರಿಗಳು ಹೊರಲಾರದ ಭಾರದಂತೆ ತೋಚಬಹುದು. ಆದರೆ ನೀವಿಡುವ ಮಾದರಿಯೇ, ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದರ ಮಹತ್ವ ಹಾಗೂ ಮೌಲ್ಯವನ್ನು ನಿಮ್ಮ ಮಕ್ಕಳು ಗ್ರಹಿಸುವಂತೆ ಮಾಡುವ ಅತ್ಯಂತ ಪ್ರಭಾವಶಾಲಿ ವಿಧಾನವಾಗಿದೆ.

ಪ್ರಯತ್ನಿಸಿ ನೋಡಿ: ಸಾಧ್ಯವಿರುವಲ್ಲಿ ಆಗಾಗ್ಗೆ ನಿಮ್ಮ ಮಗನನ್ನು/ಳನ್ನು ನಿಮ್ಮ ಕೆಲಸದ ಸ್ಥಳಕ್ಕೆ ಕೊಂಡೊಯ್ದು ಕುಟುಂಬಕ್ಕಾಗಿ ಹಣಸಂಪಾದಿಸಲು ಏನು ಮಾಡುತ್ತೀರೆಂದು ಅವರಿಗೆ ತೋರಿಸಿರಿ. ನಿಮ್ಮ ಮಗನ/ಳ ಜೊತೆಸೇರಿ ಸಹಾಯದ ಅಗತ್ಯವಿರುವವರೊಬ್ಬರಿಗೆ ಸಹಾಯಮಾಡಿ. ಬಳಿಕ, ಹೀಗೆ ಮಾಡಿದ್ದರಿಂದ ನಿಮಗಾದ ಆನಂದದ ಬಗ್ಗೆ ಮಕ್ಕಳೊಂದಿಗೆ ಮಾತಾಡಿ.—ಅ. ಕಾರ್ಯಗಳು 20:35.

ಹೆಚ್ಚನ್ನು ನಿರೀಕ್ಷಿಸದಿರ್ರಿ. ಯೇಸು ತನ್ನ ಶಿಷ್ಯರು ಕೆಲವು ಪಾತ್ರಗಳನ್ನೂ ಜವಾಬ್ದಾರಿಗಳನ್ನೂ ಪೂರೈಸಬೇಕೆಂದು ನಿರೀಕ್ಷಿಸಿದನು. ಆದರೆ ಅವರು ಅವುಗಳನ್ನು ವಹಿಸಿಕೊಳ್ಳಲು ಸಮಯ ಹಿಡಿಯಲಿದೆಯೆಂದು ಆತನಿಗೆ ಗೊತ್ತಿತ್ತು. ಆದುದರಿಂದಲೇ ಆತನೊಮ್ಮೆ ಅವರಿಗೆ, “ನಾನು ನಿಮಗೆ ಇನ್ನೂ ಅನೇಕ ವಿಷಯಗಳನ್ನು ಹೇಳಲಿಕ್ಕಿದೆ, ಆದರೆ ಸದ್ಯಕ್ಕೆ ನೀವು ಅವುಗಳನ್ನು ಸಹಿಸಿಕೊಳ್ಳಲಾರಿರಿ” ಎಂದು ಹೇಳಿದನು. (ಯೋಹಾನ 16:12) ಶಿಷ್ಯರು ತಮ್ಮಷ್ಟಕ್ಕೇ ಎಲ್ಲವನ್ನೂ ಮಾಡುವಂತೆ ಯೇಸು ಹೇಳಲಿಲ್ಲ. ಬದಲಿಗೆ ಹಲವಾರು ವಿಷಯಗಳನ್ನು ಬೋಧಿಸಲು ಅವರೊಂದಿಗೆ ತುಂಬ ಸಮಯ ಕಳೆದನು. ಅವರು ಸಮರ್ಥರಾಗಿದ್ದಾರೆ ಎಂದು ಯೇಸುವಿಗೆ ಅನಿಸಿದಾಗಲೇ ಅವರು ಸ್ವಂತವಾಗಿ ಆ ಕೆಲಸ ಪೂರೈಸುವಂತೆ ಕಳುಹಿಸಿಕೊಟ್ಟನು.

ಅದೇ ರೀತಿಯಲ್ಲಿ, ಮಕ್ಕಳು ಸಮರ್ಥರಾಗುವ ಮುಂಚೆಯೇ ವಯಸ್ಕರ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕೆಂದು ಹೆತ್ತವರು ನಿರೀಕ್ಷಿಸುವುದು ನ್ಯಾಯವಲ್ಲ. ಆದರೆ ಮಕ್ಕಳು ಬೆಳೆಯುತ್ತಾ ಇದ್ದಂತೆ ಅವರಿಗೆ ಯಾವ ಕೆಲಸಕಾರ್ಯಗಳು ಸೂಕ್ತವೆಂದು ಹೆತ್ತವರು ನಿರ್ಧರಿಸಿ ಅದನ್ನು ಮಾಡುವಂತೆ ಹೇಳಬೇಕು. ಉದಾಹರಣೆಗೆ ತಮ್ಮ ದೈಹಿಕ ಸ್ವಚ್ಛತೆಗೆ, ತಮ್ಮ ಕೋಣೆಯ ಶುಚಿತ್ವಕ್ಕೆ, ಸಮಯಪಾಲನೆಗೆ, ಹಣವನ್ನು ವಿವೇಕಯುತವಾಗಿ ಬಳಸುವುದಕ್ಕೆ ಅವರೇ ಜವಾಬ್ದಾರರಾಗಿರುವಂತೆ ಮಕ್ಕಳಿಗೆ ಕಲಿಸಬೇಕು. ಶಾಲೆಯ ಮೆಟ್ಟಿಲೇರಿದಾಗ ಮಕ್ಕಳು ತಮ್ಮ ಹೋಂವರ್ಕ್‌ ಅನ್ನು ಸ್ವತಃ ತಾವೇ ನಿರ್ವಹಿಸಬೇಕಾದ ಪ್ರಮುಖ ಜವಾಬ್ದಾರಿಯಾಗಿ ಪರಿಗಣಿಸುವಂತೆ ಮಾಡಬೇಕು.

ಹೆತ್ತವರು ತಮ್ಮ ಮಕ್ಕಳ ಮೇಲೆ ಬರೇ ಜವಾಬ್ದಾರಿಗಳನ್ನು ಹೊರಿಸಿದರೆ ಸಾಲದು. ಅವನ್ನು ಪೂರೈಸಲು ಮಕ್ಕಳು ಮಾಡುವ ಪ್ರಯತ್ನಗಳನ್ನು ಹೆತ್ತವರು ಬೆಂಬಲಿಸಲೂ ಬೇಕು. ಈ ಮುಂಚೆ ತಿಳಿಸಲಾದ ಜಯಂತ್‌, ಆಟದ ಸಾಮಾನುಗಳನ್ನು ತೆಗೆದಿಡುವಂತೆ ಹೇಳಿದ ತಕ್ಷಣ ಯಾಕೆ ತನ್ನ ಮಗ ಮಯೂರ್‌ ಮುನಿಸಿಕೊಳ್ಳುತ್ತಾನೆ ಎಂಬುದನ್ನು ಗ್ರಹಿಸಿದನು. ಮಯೂರ್‌ಗೆ ಆ ಕೆಲಸ ಬೆಟ್ಟದಷ್ಟು ದೊಡ್ಡದೆಂಬಂತೆ ತೋರುತ್ತಿತ್ತು. ಆದುದರಿಂದ, “ಮಯೂರ್‌ಗೆ ‘ನಿನ್ನ ಆಟದ ಸಾಮಾನುಗಳನ್ನೆಲ್ಲ ಎತ್ತಿಡು’ ಎಂದು ಸುಮ್ಮನೆ ಅಬ್ಬರಿಸುವ ಬದಲು, ಆ ಕೆಲಸ ಮಾಡುವ ವಿಧಾನವನ್ನು ಕಲಿಸಿಕೊಟ್ಟೆ” ಎನ್ನುತ್ತಾನೆ ಜಯಂತ್‌.

ಅವನು ನಿರ್ದಿಷ್ಟವಾಗಿ ಮಾಡಿದ್ದೇನು? ಅವನನ್ನುವುದು: “ಮೊದಲಾಗಿ, ಪ್ರತಿ ರಾತ್ರಿ ಆಟದ ಸಾಮಾನುಗಳನ್ನು ಎತ್ತಿಡಲು ಒಂದು ನಿರ್ದಿಷ್ಟ ಸಮಯ ಗೊತ್ತುಪಡಿಸಿದೆ. ಅನಂತರ ನಾನು ಸಹ ಮಯೂರ್‌ನೊಟ್ಟಿಗೆ ಸೇರಿ, ಕೋಣೆಯ ಒಂದು ಕಡೆಯಿಂದ ಆಟದ ಸಾಮಾನುಗಳನ್ನು ಎತ್ತಿಡುತ್ತಾ ಬಂದೆ. ಯಾರು ಕೆಲಸ ಮೊದಲು ಮುಗಿಸುತ್ತಾರೆ ಎಂಬ ಸ್ಪರ್ಧೆಯನ್ನಿಟ್ಟು ಆ ಕೆಲಸವನ್ನೇ ಒಂದು ಆಟವನ್ನಾಗಿ ಮಾಡಿದೆ. ಇದು, ರಾತ್ರಿ ಮಲಗುವ ಮುಂಚೆ ಮಾಡಬೇಕಾದ ಕೆಲಸಗಳ ಪಟ್ಟಿಯಲ್ಲಿ ಸೇರಲು ಹೆಚ್ಚು ಸಮಯ ಹಿಡಿಯಲಿಲ್ಲ. ಅವನು ಕೆಲಸವನ್ನು ಬೇಗ ಮುಗಿಸಿದರೆ ಮಲಗುವ ಮುಂಚೆ ಒಂದು ಎಕ್‌ಸ್ಟ್ರಾ ಕಥೆ ಓದಿಹೇಳುತ್ತೇನೆ, ಆದರೆ ತಡಮಾಡಿದರೆ ಕಥೆ ಹೇಳುವ ಸಮಯ ಕಡಿಮೆಯಾಗುತ್ತದೆಂದು ಹೇಳಿದೆ.”

ಪ್ರಯತ್ನಿಸಿ ನೋಡಿ: ನಿಮ್ಮ ಮನೆಯಲ್ಲಿ ಎಲ್ಲವೂ ಸುಗಮವಾಗಿ ನಡೆಯಲು ನಿಮ್ಮ ಮಕ್ಕಳಲ್ಲಿ ಪ್ರತಿಯೊಬ್ಬರು ಏನೇನು ಮಾಡಬಲ್ಲರು ಎಂಬುದನ್ನು ವಿಶ್ಲೇಷಿಸಿ. ‘ನನ್ನ ಮಕ್ಕಳು ಸ್ವತಃ ಮಾಡಬಹುದಾದ ಸ್ವಂತ ಕೆಲಸಗಳನ್ನು ಈಗಲೂ ನಾನೇ ಮಾಡುತ್ತಿದ್ದೇನೋ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. ಹಾಗಿರುವಲ್ಲಿ ನಿಮ್ಮ ಮಕ್ಕಳು ಆ ಕೆಲಸಗಳನ್ನು ತಮ್ಮಷ್ಟಕ್ಕೆ ಮಾಡಲು ಶಕ್ತರೆಂದು ನಿಮಗೆ ಖಚಿತವಾಗುವ ತನಕ ಅವರ ಜೊತೆ ಆ ಕೆಲಸಗಳನ್ನು ಮಾಡಿ. ಕೊಡಲಾದ ಕೆಲಸವನ್ನು ಅವರೆಷ್ಟು ಚೆನ್ನಾಗಿ ಮಾಡುತ್ತಾರೆ ಎಂಬುದರ ಮೇಲೆ ಅವಲಂಬಿಸುತ್ತಾ ಪರಿಣಾಮಗಳು ಒಂದೇ ಒಳ್ಳೇದು ಇಲ್ಲವೆ ಕೆಟ್ಟದ್ದಾಗಿರುವವು ಎಂದು ಸ್ಪಷ್ಟವಾಗಿ ತಿಳಿಸಿ. ಬಳಿಕ ನೀವು ಹೇಳಿದಂತೆಯೇ ಮಾಡಿ. ಅಂದರೆ ತಪ್ಪಿದರೆ ಶಿಕ್ಷೆ ಇಲ್ಲವೇ ಚೆನ್ನಾಗಿ ಮಾಡಿದರೆ ಪ್ರತಿಫಲ ಕೊಡಿ.

ಸ್ಪಷ್ಟ ಸೂಚನೆ ಕೊಡಿರಿ. ಒಳ್ಳೇ ಶಿಕ್ಷಕರಿಗೆ ತಿಳಿದಿರುವಂತೆ ‘ಮಾಡಿ ಕಲಿ’ ಎಂಬ ಮಾತಿನ ಮಹತ್ವ ಯೇಸುವಿಗೂ ತಿಳಿದಿತ್ತು. ಉದಾಹರಣೆಗೆ, ಇದೇ ಸೂಕ್ತ ಸಮಯ ಎಂದು ಯೇಸುವಿಗೆ ಅನಿಸಿದಾಗ ಅವನು ತನ್ನ ಶಿಷ್ಯರನ್ನು “ತಾನೇ ಸ್ವತಃ ಹೋಗಲಿಕ್ಕಿದ್ದ ಪ್ರತಿಯೊಂದು ಊರಿಗೂ ಪ್ರತಿಯೊಂದು ಸ್ಥಳಕ್ಕೂ ತನಗಿಂತ ಮುಂದಾಗಿ ಇಬ್ಬಿಬ್ಬರನ್ನಾಗಿ ಕಳುಹಿಸಿದನು.” (ಲೂಕ 10:1) ಆದರೆ ಆತನು ಅವರನ್ನು ಸುಮ್ಮನೆ ಕಳುಹಿಸಿಬಿಡಲಿಲ್ಲ. ಕಳುಹಿಸುವ ಮುಂಚೆ ಸ್ಪಷ್ಟ ಸೂಚನೆಗಳನ್ನು ಕೊಟ್ಟನು. (ಲೂಕ 10:2-12) ಬಳಿಕ ಶಿಷ್ಯರು ಯೇಸುವಿನ ಬಳಿ ಬಂದು ತಮಗೆ ದೊರಕಿದ ಯಶಸ್ಸಿನ ಬಗ್ಗೆ ವರದಿಸಿದಾಗ ಆತನು ಅವರನ್ನು ಶ್ಲಾಘಿಸಿ, ಪ್ರೋತ್ಸಾಹಿಸಿದನು. (ಲೂಕ 10:17-24) ಅವರ ಸಾಮರ್ಥ್ಯದ ಬಗ್ಗೆ ಭರವಸೆಯನ್ನೂ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದನು.

ನಿಮ್ಮ ಮಕ್ಕಳು ಕಷ್ಟಕರ ಜವಾಬ್ದಾರಿಗಳನ್ನು ಹೊರಬೇಕಾಗಿ ಬಂದಾಗ ನೀವೇನು ಮಾಡುತ್ತೀರಿ? ಅವರು ನಿರಾಶೆ ಅಥವಾ ಸೋಲನ್ನು ಅನುಭವಿಸಬಾರದೆಂಬ ಕಾರಣಕ್ಕಾಗಿ ಅವರು ಭಯಪಡುವಂಥ ವಿಷಯಗಳಿಂದ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತೀರೋ? ನಿಮ್ಮ ಮಕ್ಕಳನ್ನು ‘ರಕ್ಷಿಸುವ’ ಇಲ್ಲವೆ ಅವರ ಹೊರೆಯನ್ನು ನೀವೇ ಹೊತ್ತುಕೊಳ್ಳಲು ನಿಮಗೆ ತುಂಬ ಮನಸ್ಸಾಗಬಹುದು.

ಆದರೆ ಇದರ ಬಗ್ಗೆ ಯೋಚಿಸಿ: ಪ್ರತಿ ಸಲ ನೀವು ಧಾವಿಸಿ ನಿಮ್ಮ ಮಕ್ಕಳನ್ನು ಯಾವುದೋ ರೀತಿಯಿಂದ ‘ಬಚಾವು’ ಮಾಡುವಾಗಲೆಲ್ಲ ನಿಮ್ಮ ಆ ಕ್ರಿಯೆ ಅವರಿಗೇನು ತೋರಿಸಿಕೊಡುತ್ತದೆ? ನಿಮಗೆ ಅವರಲ್ಲೂ ಅವರ ಸಾಮರ್ಥ್ಯಗಳಲ್ಲೂ ಭರವಸೆಯಿದೆ ಎಂದು ತೋರಿಸಿಕೊಡುತ್ತದೋ? ಅಥವಾ ಎಲ್ಲದಕ್ಕೂ ನಿಮ್ಮನ್ನೇ ಅವಲಂಬಿಸಬೇಕಾದ ಹಸುಳೆಗಳಾಗಿ ಅವರನ್ನು ಎಣಿಸುತ್ತೀರೆಂದು ತೋರಿಸಿಕೊಡುತ್ತದೊ?

ಈ ಮುಂಚೆ ತಿಳಿಸಲಾಗಿರುವ ಎಮಿಲಿ ಇಕ್ಕಟ್ಟಿನಲ್ಲಿದ್ದ ತನ್ನ ಮಗಳಿಗೆ ಹೇಗೆ ನೆರವಾದಳು? ತಾನು ಮಧ್ಯಪ್ರವೇಶಿಸುವ ಬದಲು ಜೆನ್ನಿಯೇ ಸ್ವತಃ ಆ ಟೀಚರ್‌ರೊಂದಿಗೆ ಮಾತಾಡಲಿ ಎಂದು ಎಮಿಲಿ ನಿರ್ಧರಿಸಿದಳು. ಟೀಚರ್‌ಗೆ ಕೇಳಬಹುದಾದ ಪ್ರಶ್ನೆಗಳ ಒಂದು ಪಟ್ಟಿಯನ್ನು ತಾಯಿಮಗಳು ಇಬ್ಬರೂ ಸೇರಿ ತಯಾರಿಸಿದರು. ಬಳಿಕ, ಟೀಚರ್‌ ಜೊತೆ ಯಾವಾಗ ಮಾತಾಡಬೇಕೆಂಬುದನ್ನು ಚರ್ಚಿಸಿದರು. ಸಂಭಾಷಣೆಯ ರಿಹರ್ಸಲ್‌ ಅನ್ನೂ ಮಾಡಿದರು. ಎಮಿಲಿ ಅನ್ನುವುದು: “ಜೆನ್ನಿ ಧೈರ್ಯಮಾಡಿ ಟೀಚರೊಟ್ಟಿಗೆ ಮಾತಾಡಿದಳು. ಅವಳಾಗಿಯೇ ಬಂದು ಮಾತಾಡಿದಕ್ಕಾಗಿ ಟೀಚರ್‌ ಅವಳ ಬೆನ್ನುತಟ್ಟಿದರು. ಜೆನ್ನಿಗೆ ತನ್ನ ಬಗ್ಗೆ ತುಂಬ ಹೆಮ್ಮೆ ಅನಿಸಿತು, ನನಗೂ ಹೆಮ್ಮೆಯನಿಸಿತು.”

ಪ್ರಯತ್ನಿಸಿ ನೋಡಿ: ನಿಮ್ಮ ಮಗನಿಗೆ/ಳಿಗೆ ಸದ್ಯಕ್ಕಿರುವ ಒಂದು ಸವಾಲನ್ನು ಬರೆದಿಡಿ. ನೀವು ಅವರನ್ನು ‘ರಕ್ಷಿಸಲು’ ಮುನ್ನುಗ್ಗದೆ ಸ್ವತಃ ಅವರೇ ಆ ಸವಾಲನ್ನು ಎದುರಿಸಲು ಹೇಗೆ ನೆರವಾಗುವಿರೆಂದೂ ಬರೆಯಿರಿ. ಆ ಸವಾಲನ್ನು ಜಯಿಸಲು ಅಗತ್ಯವಾದ ಕ್ರಮಗಳನ್ನು ನಿಮ್ಮ ಮಗನ/ಳ ಜೊತೆ ರಿಹರ್ಸಲ್‌ ಮಾಡಿ. ಆ ಸವಾಲನ್ನು ಎದುರಿಸಲು ಅವರಿಗಿರುವ ಸಾಮರ್ಥ್ಯದಲ್ಲಿ ನಿಮಗೆ ಭರವಸೆಯಿದೆಯೆಂದು ಹೇಳಿ.

ನಿಮ್ಮ ಮಕ್ಕಳಿಗೆ ತೊಂದರೆಯಾಗದಂತೆ ನೀವು ಯಾವಾಗಲೂ ರಕ್ಷಿಸುತ್ತಾ ಇರುವಲ್ಲಿ, ಬದುಕಿನಲ್ಲಿ ಬರಲಿರುವ ಸಮಸ್ಯೆಗಳನ್ನು ಎದುರಿಸುವ ಅವರ ಸಾಮರ್ಥ್ಯವನ್ನು ಕುಂಠಿತಗೊಳಿಸುವಿರಿ. ಅದಕ್ಕೆ ಬದಲು ಜವಾಬ್ದಾರಿಯನ್ನು ಹೊರಲು ಕಲಿಸುವ ಮೂಲಕ ಅವರನ್ನು ಬಲಪಡಿಸಿರಿ. ಇದು, ನೀವು ಅವರಿಗೆ ಕೊಡಬಹುದಾದ ಅತ್ಯಮೂಲ್ಯ ಉಡುಗೊರೆಗಳಲ್ಲಿ ಒಂದು. (w10-E 05/01)

[ಪಾದಟಿಪ್ಪಣಿ]

^ ಪ್ಯಾರ. 3 ಹೆಸರುಗಳನ್ನು ಬದಲಾಯಿಸಲಾಗಿದೆ.

ಕೇಳಿಕೊಳ್ಳಿ . . .

▪ ನನ್ನ ಮಕ್ಕಳ ಬಗ್ಗೆ ನನಗೆ ವಾಸ್ತವಿಕ ನಿರೀಕ್ಷೆಗಳಿವೆಯೋ?

▪ ಒಂದು ಕೆಲಸವನ್ನು ಯಶಸ್ವಿಯಾಗಿ ಪೂರೈಸಲು ಅವರೇನು ಮಾಡಬೇಕೆಂದು ಹೇಳಿ, ಆಮೇಲೆ ಮಾಡಿಯೂ ತೋರಿಸುತ್ತೇನೋ?

▪ ನಾನು ಹೋದ ಸಲ ನನ್ನ ಮಗನನ್ನೋ/ಳನ್ನೋ ಪ್ರೋತ್ಸಾಹಿಸಿದ್ದು ಇಲ್ಲವೆ ಶ್ಲಾಘಿಸಿದ್ದು ಯಾವಾಗ?