ನಕ್ಷತ್ರಗಳಿಗೂ ನಿಮ್ಮ ಜೀವನಕ್ಕೂ ನಂಟಿದೆಯೋ?
ನಕ್ಷತ್ರಗಳಿಗೂ ನಿಮ್ಮ ಜೀವನಕ್ಕೂ ನಂಟಿದೆಯೋ?
ಶುಭ್ರವಾದ ರಾತ್ರಿಯಂದು ಪಟ್ಟಣದ ಬೆಳಕಿನಿಂದ ದೂರನಿಂತು ನೋಡುವಾಗ ಆಕಾಶವು, ಮಿನಮಿನ ಮಿನುಗುವ ಸಾವಿರಾರು ಪುಟ್ಟ ಪುಟ್ಟ ವಜ್ರಗಳಿಂದ ಅಲಂಕೃತಗೊಂಡ ಒಂದು ದೊಡ್ಡ ಕಪ್ಪು ಕಂಬಳಿಯಂತೆ ಕಾಣಿಸುತ್ತದೆ. ಕೇವಲ ಮೂರೂವರೆ ಶತಮಾನಗಳಿಂದೀಚೆಗಷ್ಟೇ ಮನುಷ್ಯನು, ನಕ್ಷತ್ರಗಳ ಬೃಹತ್ ಗಾತ್ರವನ್ನು ಹಾಗೂ ಅವು ನಮ್ಮಿಂದ ಎಷ್ಟು ದೂರದಲ್ಲಿವೆ ಎಂಬುದನ್ನು ಕಂಡುಹಿಡಿಯಲು ಆರಂಭಿಸಿದ್ದಾನೆ. ಅಮೋಘವಾದ ನಮ್ಮ ವಿಶ್ವದಾದ್ಯಂತ ಕಾರ್ಯನಡೆಸುತ್ತಿರುವ ಪ್ರಚಂಡವಾದ ಈ ಶಕ್ತಿಗಳನ್ನು ಅರ್ಥಮಾಡಿಕೊಳ್ಳಲು ನಾವು ಈಗಷ್ಟೇ ಆರಂಭಿಸಿದ್ದೇವೆ.
ರಾತ್ರಿಯಲ್ಲಿ ಕಾಣುವ ಆಕಾಶಕಾಯಗಳ ನಿಖರವಾದ ಚಲನೆಯನ್ನೂ ಬಾಂದಳದಲ್ಲಿ ಅವುಗಳ ಸ್ಥಾನಗಳು ಕಾಲಕಾಲಕ್ಕೆ ಬದಲಾಗುವುದನ್ನೂ ಮಾನವರು ಎಷ್ಟೋ ಹಿಂದೆಯೇ ಗಮನಿಸಿದ್ದರು. (ಆದಿಕಾಂಡ 1:14) ಅನೇಕರು ಇಸ್ರಾಯೇಲ್ಯರ ರಾಜ ದಾವೀದನ ಭಾವನೆಗಳನ್ನೇ ವ್ಯಕ್ತಪಡಿಸಿದ್ದಾರೆ. “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ—ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು?” ಎಂದು ಆತನು ಸುಮಾರು 3,000 ವರ್ಷಗಳ ಹಿಂದೆ ಬರೆದನು.—ಕೀರ್ತನೆ 8:3, 4.
ಆದರೂ ನಮಗೆ ಗೊತ್ತಿರಲಿ ಗೊತ್ತಿಲ್ಲದಿರಲಿ, ಆಕಾಶಕಾಯಗಳು ಹಾಗೂ ಅವುಗಳ ಚಲನೆ ನಮ್ಮ ಜೀವನವನ್ನು ನೇರವಾಗಿ ಪ್ರಭಾವಿಸುತ್ತವೆ. ಉದಾಹರಣೆಗೆ ನಾವು ದಿನ ಮತ್ತು ವರ್ಷವೆಂಬ ಮಾನದಿಂದ ಕಾಲವನ್ನು ಅಳೆಯುವುದು, ಸೂರ್ಯನೆಂಬ ನಕ್ಷತ್ರದ ಸುತ್ತ ನಮ್ಮ ಭೂಮಿ ಸುತ್ತುವುದರ ಮೇಲೆ ಆಧಾರಿಸಿದೆ. ಚಂದ್ರನಿಂದ ‘ವಿಶೇಷಕಾಲಗಳನ್ನು’ ಅಂದರೆ ಋತುಗಳನ್ನು ತಿಳಿದುಕೊಳ್ಳುತ್ತೇವೆ. (ಕೀರ್ತನೆ 104:19) ಅಷ್ಟೇ ಅಲ್ಲದೆ, ಸರಿಯಾದ ದಿಕ್ಕಿಗೆ ಪ್ರಯಾಣಮಾಡಲು ಸಮುದ್ರಯಾನಿಗಳಿಗೆ ಹಾಗೂ ಗಗನನೌಕೆಯನ್ನು ಸರಿಯಾದ ದಿಕ್ಕಿನೆಡೆಗೆ ನಡೆಸಲು ಗಗನಯಾತ್ರಿಗಳಿಗೆ ನಕ್ಷತ್ರಗಳು ಭರವಸಾರ್ಹವಾದ ಮಾರ್ಗದರ್ಶಿಗಳಾಗಿವೆ. ಕೆಲವರು ಈ ಎಲ್ಲ ಕಾರಣಗಳಿಂದಾಗಿ ನಕ್ಷತ್ರಗಳು ನಮಗೆ ಕೇವಲ ಕಾಲಋತುಗಳನ್ನು ತಿಳಿಸುವುದು ಹಾಗೂ ದೇವರ ಸೃಷ್ಟಿ ಕಾರ್ಯಕ್ಕಾಗಿ ನಮ್ಮ ಗಣ್ಯತೆಯನ್ನು ಹೆಚ್ಚಿಸುವುದಕ್ಕಿಂತಲೂ ಅಧಿಕವಾದದ್ದನ್ನು ಮಾಡಬಲ್ಲವೊ ಎಂದು ಕೌತುಕಪಡುತ್ತಾರೆ. ಅಂದರೆ ಅವು ನಮ್ಮ ಭವಿಷ್ಯವನ್ನೂ ಮುನ್ನುಡಿಯಬಲ್ಲವೊ? ಮುಂಬರುವ ಕೇಡುಗಳ ಬಗ್ಗೆ ನಮ್ಮನ್ನು ಎಚ್ಚರಿಸಬಲ್ಲವೊ?
ಜ್ಯೋತಿಶ್ಶಾಸ್ತ್ರದ ಆರಂಭ ಹಾಗೂ ಉದ್ದೇಶ
ಜೀವನವನ್ನು ಮಾರ್ಗದರ್ಶಿಸುವ ಶಕುನಗಳಿಗಾಗಿ ಆಕಾಶವನ್ನು ನೋಡುವ ಪದ್ಧತಿ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಪ್ರಾಚೀನ ಮೆಸಪಟೇಮ್ಯದಲ್ಲಿ ಪ್ರಾರಂಭವಾಯಿತು. ಆಗಿನ ಜ್ಯೋತಿಶ್ಶಾಸ್ತ್ರಜ್ಞರು ಆಕಾಶವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಆಕಾಶಕಾಯಗಳ ಚಲನೆಯ ನಕ್ಷೆ ರಚಿಸಲು, ನಕ್ಷತ್ರಗಳ ಸ್ಥಾನಗಳನ್ನು ಪಟ್ಟಿಮಾಡಲು, ಕ್ಯಾಲೆಂಡರುಗಳನ್ನು ರಚಿಸಲು, ಗ್ರಹಣಗಳನ್ನು ಮುನ್ನುಡಿಯಲು ಅವರು ಮಾಡಿದ ಪ್ರಯತ್ನಗಳ ಫಲವಾಗಿ ಖಗೋಲ ವಿಜ್ಞಾನ ಹುಟ್ಟಿಕೊಂಡಿತು. ಆದರೆ ಜ್ಯೋತಿಶ್ಶಾಸ್ತ್ರದಲ್ಲಿ, ನಮ್ಮ ಪರಿಸರದ ಮೇಲೆ ಸೂರ್ಯಚಂದ್ರರು ಬೀರುವ ನೈಸರ್ಗಿಕ ಪ್ರಭಾವದ ಅಧ್ಯಯನಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಸೂರ್ಯ, ಚಂದ್ರ, ಗ್ರಹ, ನಕ್ಷತ್ರ, ನಕ್ಷತ್ರಪುಂಜ ಮುಂತಾದುವುಗಳ ಸ್ಥಾನ ಮತ್ತು ಅವುಗಳ ಜೋಡಣೆಯು ಭೂಮಿಯ ಮೇಲಾಗುವ ಪ್ರಮುಖ ನೈಸರ್ಗಿಕ ಘಟನೆಗಳನ್ನು ಪ್ರಭಾವಿಸುತ್ತದೆ ಮಾತ್ರವಲ್ಲ ನಮ್ಮಲ್ಲಿ ಪ್ರತಿಯೊಬ್ಬರ ಬಾಳನ್ನೂ ನಿಯಂತ್ರಿಸುತ್ತದೆ ಎಂದು ಜ್ಯೋತಿಶ್ಶಾಸ್ತ್ರವು ಒತ್ತಿಹೇಳುತ್ತದೆ. ಹೇಗೆ?
ಕೆಲವು ಜ್ಯೋತಿಷಿಗಳು ಆಕಾಶಕಾಯಗಳನ್ನು ನೋಡಿ ಭವಿಷ್ಯದ ಬಗ್ಗೆ ಸೂಚನೆಗಳನ್ನು ಇಲ್ಲವೆ ಎಚ್ಚರಿಕೆಗಳನ್ನು ಪಡೆಯಲು ಜ್ಯೋತಿಶ್ಶಾಸ್ತ್ರವನ್ನು ಮಾಧ್ಯಮವನ್ನಾಗಿ ಬಳಸುತ್ತಾರೆ. ಈ ಸೂಚನೆ ಹಾಗೂ ಎಚ್ಚರಿಕೆಗಳಿಂದ ಅನೇಕ ಪ್ರಯೋಜನಗಳಿವೆ ಎಂದವರು ಭಾವಿಸುತ್ತಾರೆ. ನಾವೇನನ್ನು ಮಾಡಬೇಕೆಂದು ವಿಧಿ ನಿರ್ಣಯಿಸಿದೆಯೋ ಅದನ್ನು ಜ್ಯೋತಿಶ್ಶಾಸ್ತ್ರವು ತಿಳಿಸುತ್ತದೆಂದೂ ಕೆಲವೊಂದು ಕಾರ್ಯಗಳಲ್ಲಿ ತೊಡಗಲು ಅಥವಾ ಕೆಲಸವನ್ನು ಪ್ರಾರಂಭಿಸಲಿಕ್ಕಾಗಿ ಶುಭಮುಹೂರ್ತ ನಿರ್ಧರಿಸಲು ನೆರವಾಗುತ್ತದೆಂದೂ ಇತರರು ನೆನಸುತ್ತಾರೆ. ಇಂಥ ಮಾಹಿತಿಗಳನ್ನು, ಪ್ರಮುಖ ಆಕಾಶಕಾಯಗಳ ಸ್ಥಾನಗಳನ್ನು ಗಮನಿಸುವ ಮೂಲಕ ಹಾಗೂ ಅವು ಒಂದು ಇನ್ನೊಂದರ ಮೇಲೆ ಮತ್ತು ಭೂಮಿಯ ಮೇಲೆ ಬೀರುವ ಪ್ರಭಾವದ “ಲೆಕ್ಕಾಚಾರ” ಮಾಡುವ ಮೂಲಕ ಪಡೆಯುತ್ತಾರೆ ಎನ್ನಲಾಗಿದೆ. ಈ ಆಕಾಶಕಾಯಗಳು ಒಬ್ಬನ ಜೀವನದ ಮೇಲೆ ಬೀರುವ ಪ್ರಭಾವವು, ಅವನು ಹುಟ್ಟಿದ ಸಮಯದಲ್ಲಿ ಅವು ಯಾವ ಸ್ಥಾನಗಳಲ್ಲಿದ್ದವು ಎಂಬುದರ ಮೇಲೆ ಅವಲಂಬಿತವೆಂದು ಹೇಳಲಾಗುತ್ತದೆ.
ಭೂಮಿಯೇ ವಿಶ್ವದ ಕೇಂದ್ರವಾಗಿದ್ದು ಅದರ ಸುತ್ತಲೂ ಸುತ್ತುತ್ತಿರುವ ಗೋಳಗಳಿಗೆ ಗ್ರಹನಕ್ಷತ್ರಗಳು ಅಂಟಿಕೊಂಡಿವೆ ಎಂದು ಆರಂಭದ ಜ್ಯೋತಿಷಿಗಳು ಭಾವಿಸಿದ್ದರು. ಸೂರ್ಯನು ವಾರ್ಷಿಕವಾಗಿ ಒಂದು ನಿರ್ದಿಷ್ಟ ಪಥದಲ್ಲಿ ಚಲಿಸುತ್ತಾ ನಕ್ಷತ್ರ ಹಾಗೂ ನಕ್ಷತ್ರಪುಂಜಗಳನ್ನು ಹಾದುಹೋಗುತ್ತಾನೆ ಎಂದೂ ಭಾವಿಸಿದ್ದರು. ಭೂಮಿಯಿಂದ ನೋಡುವಾಗ ಸೂರ್ಯನು ಚಲಿಸುವಂತೆ ಕಾಣುವ ಈ ಪಥವನ್ನು ‘ಕ್ರಾಂತಿವೃತ್ತ’ ಅಥವಾ ‘ಭಚಕ್ರ’ ಎಂದು ಕರೆದರು. ಈ ಕ್ರಾಂತಿವೃತ್ತವನ್ನು ಅವರು 12 ಸಮಭಾಗಗಳು ಅಥವಾ ರಾಶಿಗಳಾಗಿ ವಿಭಾಗಿಸಿದರು. ಪ್ರತಿಯೊಂದು ರಾಶಿಗೂ ಸೂರ್ಯನು ಯಾವುದರ ಮುಖಾಂತರ ಚಲಿಸಿದನೊ ಆಯಾ ನಕ್ಷತ್ರಪುಂಜಗಳ ಹೆಸರುಗಳನ್ನು ಕೊಟ್ಟರು. ಹೀಗೆ ರಾಶಿ ಚಕ್ರದ 12 ಸಂಕೇತಗಳು ಹುಟ್ಟಿಕೊಂಡವು. ಪ್ರತಿಯೊಂದು ರಾಶಿಗೂ ಅಧಿದೇವತೆಗಳಿವೆಯೆಂದು ಪರಿಗಣಿಸಲಾಗುತ್ತದೆ. ಆದರೆ ಸೂರ್ಯನು ಭೂಮಿಯ ಸುತ್ತ ಸುತ್ತುವುದಿಲ್ಲ ಬದಲಾಗಿ ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತದೆ ಎಂಬುದನ್ನು ವಿಜ್ಞಾನಿಗಳು ಸಮಯಾನಂತರ ಕಂಡುಹಿಡಿದರು. ಈ ಆವಿಷ್ಕಾರವು ಜ್ಯೋತಿಶ್ಶಾಸ್ತ್ರಕ್ಕೆ ಮಾರಕ ಹೊಡೆತವಾಗಿತ್ತು.
ಮೆಸಪಟೇಮ್ಯದಲ್ಲಿ ಆರಂಭಗೊಂಡ ಜ್ಯೋತಿಶ್ಶಾಸ್ತ್ರವು ಹೆಚ್ಚುಕಡಿಮೆ ಜಗತ್ತಿನ ಎಲ್ಲ ಭಾಗಗಳಿಗೂ ಹರಡಿತು ಮತ್ತು ಮಾನವಕುಲದ ಪ್ರಮುಖ ನಾಗರೀಕತೆಗಳಲ್ಲಿ ಇದು ಬೇರೆ ಬೇರೆ ರೂಪಗಳಲ್ಲಿ ತಳವೂರಿತು. ಪರ್ಷಿಯನ್ನರು ಬ್ಯಾಬಿಲೋನನ್ನು ವಶಪಡಿಸಿಕೊಂಡ ನಂತರ ಜ್ಯೋತಿಶ್ಶಾಸ್ತ್ರ ಈಜಿಪ್ಟ್, ಗ್ರೀಸ್ ಮತ್ತು ಭಾರತಕ್ಕೆ ಹರಡಿಕೊಂಡಿತು. ಭಾರತದಿಂದ ಬೌದ್ಧ ಭಿಕ್ಷುಗಳು ಇದನ್ನು ಮಧ್ಯ ಏಷ್ಯಾ, ಚೀನಾ, ಟಿಬೆಟ್, ಜಪಾನ್, ಆಗ್ನೇಯ ಏಷ್ಯಾ ಮುಂತಾದ ಕಡೆಗಳಿಗೆ ಕೊಂಡೊಯ್ದರು. ಇದು ಮಾಯಾ ನಾಗರೀಕತೆಗೆ ಹೇಗೆ ತಲಪಿತೆಂಬುದು ಯಾರಿಗೂ ತಿಳಿದಿಲ್ಲವಾದರೂ ಈ ಜನಾಂಗದವರು ಇದನ್ನು ಬ್ಯಾಬಿಲೋನ್ಯರು ಬಳಸುತ್ತಿದ್ದಂಥ ವಿಧಗಳಲ್ಲಿ ಅಧಿಕವಾಗಿ ಬಳಸಿದರೆಂಬುದು ಗೊತ್ತಾಗುತ್ತದೆ. ‘ಆಧುನಿಕ’ ಜ್ಯೋತಿಶ್ಶಾಸ್ತ್ರವು ಗ್ರೀಕ್ ಸಂಸ್ಕೃತಿಯಿಂದ ಪ್ರಭಾವಿತವಾದ ಈಜಿಪ್ಟ್‌ನಲ್ಲಿ ಹುಟ್ಟಿತೆಂದು ತೋರುತ್ತದೆ. ಈ ಆಧುನಿಕ ಜ್ಯೋತಿಶ್ಶಾಸ್ತ್ರವು ಯೆಹೂದಿ, ಇಸ್ಲಾಂ ಹಾಗೂ ಕ್ರೈಸ್ತ ಮತಗಳ ವಿಚಾರದ ಮೇಲೆ ಗಮನಾರ್ಹ ಪ್ರಭಾವವನ್ನು ಬೀರಿದೆ.
ಕ್ರಿ.ಪೂ. 7ನೇ ಶತಮಾನದಲ್ಲಿ ಇಸ್ರಾಯೇಲ್ ಜನಾಂಗದವರು ಬ್ಯಾಬಿಲೋನಿಗೆ ಬಂಧಿವಾಸಿಗಳಾಗಿ ಕೊಂಡೊಯ್ಯಲ್ಪಡುವ ಮುಂಚೆಯೇ ಅವರ ಮೇಲೆ ಜ್ಯೋತಿಶ್ಶಾಸ್ತ್ರದ ಪ್ರಭಾವವಿತ್ತು. ಉದಾಹರಣೆಗೆ, ‘ಸೂರ್ಯಚಂದ್ರನಕ್ಷತ್ರಗಳೆನಿಸಿಕೊಳ್ಳುವ 2 ಅರಸುಗಳು 23:5.
ಆಕಾಶಸೈನ್ಯಕ್ಕೆ’ ಯಜ್ಞಗಳನ್ನು ಅರ್ಪಿಸುವ ಪದ್ಧತಿಯನ್ನು ಆ ಜನರೊಳಗಿಂದ ನಿರ್ಮೂಲ ಮಾಡಲು ನಂಬಿಗಸ್ತ ರಾಜನಾಗಿದ್ದ ಯೋಷೀಯನು ಮಾಡಿದ ಪ್ರಯತ್ನಗಳ ಬಗ್ಗೆ ಬೈಬಲ್ ತಿಳಿಸುತ್ತದೆ.—ಜ್ಯೋತಿಶ್ಶಾಸ್ತ್ರದ ಮೂಲ
ಜ್ಯೋತಿಶ್ಶಾಸ್ತ್ರವು ವಿಶ್ವದ ರಚನಾಕ್ರಮ ಹಾಗೂ ಕಾರ್ಯಾಚರಣೆಯ ಕುರಿತ ಹಲವು ತಪ್ಪಾದ ನಂಬಿಕೆಗಳ ಮೇಲೆ ಆಧರಿಸಿದೆ. ಹಾಗಾಗಿ ಇದು ಖಂಡಿತ ದೇವರಿಂದ ಬಂದಿರಸಾಧ್ಯವಿಲ್ಲ. ಅಡಿಪಾಯವೇ ತಪ್ಪಾಗಿರುವುದರಿಂದ ನಮಗೆ ಅದರಿಂದ ಭವಿಷ್ಯದ ಕುರಿತು ನಿಷ್ಕೃಷ್ಟವಾದ ಮಾಹಿತಿ ಸಿಗುವುದಾದರೂ ಹೇಗೆ? ಜ್ಯೋತಿಶ್ಶಾಸ್ತ್ರದ ಸೋಲನ್ನು ನಾವು ಆಸಕ್ತಿಕರವಾದ ಎರಡು ಐತಿಹಾಸಿಕ ಘಟನೆಗಳಲ್ಲಿ ನೋಡಬಹುದು.
ಬ್ಯಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಸಮಯದಲ್ಲಿ ಜೋಯಿಸರು ಹಾಗೂ ಶಕುನದವರು ಆತನಿಗೆ ಬಿದ್ದ ಕನಸಿನ ಅರ್ಥವನ್ನು ತಿಳಿಸಲು ಅಸಮರ್ಥರಾದರು. ಇದಕ್ಕೆ ಕಾರಣವನ್ನು ಸತ್ಯದೇವರಾದ ಯೆಹೋವನ ಪ್ರವಾದಿಯಾಗಿದ್ದ ದಾನಿಯೇಲನು ತಿಳಿಸಿದನು: “ರಾಜನು ಕೇಳುವ ರಹಸ್ಯವನ್ನು ವಿದ್ವಾಂಸರಾಗಲಿ ಮಾಟಗಾರರಾಗಲಿ ಜೋಯಿಸರಾಗಲಿ ಶಕುನದವರಾಗಲಿ ಯಾರೂ ರಾಜನಿಗೆ ತಿಳಿಸಲಾರರು; ಆದರೆ ರಹಸ್ಯಗಳನ್ನು ವ್ಯಕ್ತಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಪರಲೋಕದಲ್ಲಿದ್ದಾನೆ; ಉತ್ತರಕಾಲದಲ್ಲಿ ನಡೆಯತಕ್ಕದನ್ನು ಆತನೇ ರಾಜನಾದ ನೆಬೂಕದ್ನೆಚ್ಚರನಿಗೆ ತಿಳಿಯಪಡಿಸಿದ್ದಾನೆ.” (ದಾನಿಯೇಲ 2:27, 28) ದಾನಿಯೇಲನು “ರಹಸ್ಯಗಳನ್ನು ವ್ಯಕ್ತಗೊಳಿಸುವ” ದೇವರಾದ ಯೆಹೋವನ ಸಹಾಯದಿಂದ ರಾಜನಿಗೆ ಸರಿಯಾದ ಅರ್ಥವನ್ನು ತಿಳಿಸಿದನೇ ಹೊರತು ಸೂರ್ಯ, ಚಂದ್ರ, ನಕ್ಷತ್ರಗಳ ಸಹಾಯದಿಂದಲ್ಲ.—ದಾನಿಯೇಲ 2:36-45.
ಮಾಯಾ ನಾಗರೀಕತೆಯವರು ಜ್ಯೋತಿಷ್ಯದ ಮೂಲಕ ಅತಿಸೂಕ್ಷ್ಮ ಲೆಕ್ಕಾಚಾರಗಳನ್ನು ಮಾಡುತ್ತಿದ್ದರು. ಆದರೂ ಕ್ರಿ.ಶ. 9ನೇ ಶತಮಾನದಲ್ಲಿ ಆ ನಾಗರೀಕತೆ ಅಳಿದುಹೋಗಲಿದೆ ಎಂದು ತಿಳಿಯಲು ಅವರಿಗೆ ಸಾಧ್ಯವಾಗಲಿಲ್ಲ. ಈ ಸೋಲುಗಳು, ಜ್ಯೋತಿಶ್ಶಾಸ್ತ್ರವು ಮೋಸವಾಗಿದೆ ಹಾಗೂ ನಿಷ್ಕೃಷ್ಟವಾಗಿ ಯಾವುದನ್ನೂ ಮುನ್ನುಡಿಯಲು ಅಸಮರ್ಥವಾಗಿದೆ ಎಂಬುದನ್ನು ತಿಳಿಸುವುದಷ್ಟೇ ಅಲ್ಲ, ಭವಿಷ್ಯತ್ತಿನ ಕುರಿತ ನಿಷ್ಕೃಷ್ಟವಾದ ಮಾಹಿತಿಗಾಗಿ ಜನರು ದೇವರ ಸಹಾಯಪಡೆಯಬಾರದೆಂಬ ಅದರ ನಿಜ ಉದ್ದೇಶವನ್ನೂ ಬಯಲಿಗೆಳೆಯುತ್ತವೆ.
ಜ್ಯೋತಿಶ್ಶಾಸ್ತ್ರವು ಸುಳ್ಳುಗಳ ಮೇಲೆ ಆಧರಿಸಿದೆ ಎಂಬ ಸತ್ಯವು ಅದರ ಮೂಲನು ಯಾರು ಎಂಬುದನ್ನು ಗುರುತಿಸಲೂ ಸಹಾಯಮಾಡುತ್ತದೆ. ಪಿಶಾಚನಾದ ಸೈತಾನನ ಕುರಿತು ಯೇಸು ಹೀಗಂದನು: ಅವನು “ಸತ್ಯದಲ್ಲಿ ನೆಲೆನಿಲ್ಲಲಿಲ್ಲ; ಯಾಕೆಂದರೆ ಸತ್ಯವು ಅವನಲ್ಲಿ ಇಲ್ಲ. ಅವನು ಸುಳ್ಳಾಡುವಾಗ ತನ್ನ ಸ್ವಭಾವಕ್ಕೆ ಅನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ತಂದೆಯೂ ಆಗಿದ್ದಾನೆ.” (ಯೋಹಾನ 8:44) ಸೈತಾನನು ತಾನು “ಬೆಳಕಿನ ದೂತನೆಂದು” ತೋರಿಸಿಕೊಳ್ಳುತ್ತಾನೆ; ದೆವ್ವಗಳು ‘ನೀತಿಯ ಸೇವಕರಂತೆ’ ವೇಷಹಾಕಿಕೊಳ್ಳುತ್ತವೆ. ವಾಸ್ತವದಲ್ಲಿ ಅವರು ನಯವಂಚಕರಾಗಿದ್ದು ಜನರನ್ನು ಮೋಸದ ಬಲೆಯಲ್ಲಿ ಸಿಕ್ಕಿಹಾಕಿಸಲು ಬಯಸುತ್ತಾರೆ. (2 ಕೊರಿಂಥ 11:14, 15) ‘ಸೈತಾನನ ಕಾರ್ಯಾಚರಣೆಯು’ “ಮಹತ್ಕಾರ್ಯದಿಂದಲೂ ಸುಳ್ಳಾದ ಸೂಚಕಕಾರ್ಯಗಳಿಂದಲೂ ಆಶ್ಚರ್ಯಕಾರ್ಯಗಳಿಂದಲೂ” ಕೂಡಿರುತ್ತದೆಂದು ಬೈಬಲ್ ಬಹಿರಂಗಪಡಿಸುತ್ತದೆ.—2 ಥೆಸಲೊನೀಕ 2:9.
ನೀವು ಅದರಿಂದ ದೂರವಿರಬೇಕು—ಏಕೆ?
ಜ್ಯೋತಿಶ್ಶಾಸ್ತ್ರವು ಸುಳ್ಳುಗಳ ಮೇಲೆ ಆಧರಿಸಿರುವುದರಿಂದ “ಸತ್ಯದ ದೇವರಾದ” ಯೆಹೋವನಿಗೆ ಅದು ಅಸಹ್ಯವಾಗಿದೆ. (ಕೀರ್ತನೆ 31:5, NIBV) ಆದುದರಿಂದಲೇ ಬೈಬಲ್ ಅದನ್ನು ಸ್ಪಷ್ಟವಾಗಿ ಖಂಡಿಸುತ್ತದೆ ಮತ್ತು ಜನರು ಅದರ ಗೊಡವೆಗೆ ಹೋಗಬಾರದೆಂದು ಒತ್ತಿ ಹೇಳುತ್ತದೆ. ಧರ್ಮೋಪದೇಶಕಾಂಡ 18:10-12ರಲ್ಲಿ ದೇವರು ಹೀಗನ್ನುತ್ತಾನೆ: ‘ಶಕುನನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ.’
ಜ್ಯೋತಿಶ್ಶಾಸ್ತ್ರದ ಹಿಂದೆ ಸೈತಾನನ ಹಾಗೂ ದೆವ್ವಗಳ ಕೈವಾಡವಿರುವ ಆಮೋಸ 5:15.
ಕಾರಣದಿಂದ ಯಾರಾದರೂ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಅವರು ಸೈತಾನನ ಹಾಗೂ ದೆವ್ವಗಳ ಪ್ರಭಾವಕ್ಕೆ ಒಳಗಾಗುತ್ತಾರೆ. ಡ್ರಗ್ಸ್ ಸೇವಿಸುವವನು ಅದರ ಮಾರಾಟಗಾರನ ದಾಸನಾಗುವಂತೆಯೇ ಒಬ್ಬನು ಜ್ಯೋತಿಶ್ಶಾಸ್ತ್ರದಲ್ಲಿ ತನ್ನನ್ನು ತೊಡಗಿಸಿಕೊಂಡರೆ ಕುತಂತ್ರಿಯಾದ ಸೈತಾನನ ಕೈಗೊಂಬೆಯಾಗುವ ಸಾಧ್ಯತೆಯಿದೆ. ಆದುದರಿಂದ ದೇವರನ್ನು ಹಾಗೂ ಸತ್ಯವನ್ನು ಪ್ರೀತಿಸುವವರು ಜ್ಯೋತಿಶ್ಶಾಸ್ತ್ರವನ್ನು ಸಂಪೂರ್ಣವಾಗಿ ತೊರೆಯಬೇಕು. ಅವರು ಬೈಬಲಿನ ಈ ಸಲಹೆಗೆ ಕಿವಿಗೊಡಬೇಕು: “ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೇದನ್ನು ಪ್ರೀತಿಸಿರಿ.”—ಭವಿಷ್ಯದಲ್ಲಿ ಏನಾಗಲಿದೆ ಎಂದು ತಿಳಿಯುವ ಕುತೂಹಲ ಜನರಿಗಿದೆ; ಇದನ್ನೇ ಜ್ಯೋತಿಶ್ಶಾಸ್ತ್ರವು ಬಂಡವಾಳವನ್ನಾಗಿ ಮಾಡಿಕೊಂಡಿದೆ. ಆದರೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವೊ? ಹೌದಾದರೆ ಹೇಗೆ? ನಮಗೆ ವೈಯಕ್ತಿಕವಾಗಿ ಮುಂದಿನ ದಿನ, ಮುಂದಿನ ತಿಂಗಳು ಅಥವಾ ಮುಂದಿನ ವರ್ಷ ಏನಾಗಲಿದೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲವೆಂದು ಬೈಬಲ್ ತಿಳಿಸುತ್ತದೆ. (ಯಾಕೋಬ 4:14) ಆದರೆ ಭವಿಷ್ಯತ್ತಿನಲ್ಲಿ ಬೇಗನೆ ಇಡೀ ಮಾನವಕುಲಕ್ಕೆ ಏನಾಗಲಿದೆ ಎಂಬುದರ ಚಿತ್ರಣವನ್ನು ಬೈಬಲ್ ಕೊಡುತ್ತದೆ. ನಾವು ‘ಕರ್ತನ ಪ್ರಾರ್ಥನೆಯಲ್ಲಿ’ ಯಾವ ರಾಜ್ಯಕ್ಕಾಗಿ ಬೇಡುತ್ತೇವೊ ಆ ರಾಜ್ಯವು ಬೇಗನೇ ಬರಲಿದೆಯೆಂದು ಅದು ತಿಳಿಸುತ್ತದೆ. (ದಾನಿಯೇಲ 2:44; ಮತ್ತಾಯ 6:9, 10) ಅಷ್ಟೇ ಅಲ್ಲದೆ, ಮಾನವ ಕಷ್ಟಸಂಕಟಗಳು ಬೇಗನೇ ಕೊನೆಗೊಳ್ಳಲಿವೆ ಮತ್ತು ಅವು ಮುಂದೆಂದೂ ನಮ್ಮನ್ನು ಪೀಡಿಸಲಾರವು ಎಂದು ತಿಳಿಸುತ್ತದೆ. (ಯೆಶಾಯ 65:17; ಪ್ರಕಟನೆ 21:4) ದೇವರು ಮಾನವರ ಜೀವನಗಳನ್ನು ಪೂರ್ವನಿರ್ಧರಿಸುವುದಿಲ್ಲ. ಬದಲಾಗಿ ತನ್ನ ಬಗ್ಗೆ ಹಾಗೂ ತಾನು ಜನರ ಪ್ರಯೋಜನಾರ್ಥವಾಗಿ ಏನೇನು ಮಾಡಲಿದ್ದೇನೆ ಎಂಬುದರ ಬಗ್ಗೆ ಕಲಿತುಕೊಳ್ಳುವಂತೆ ಎಲ್ಲ ಕಡೆಗಳಲ್ಲಿರುವವರನ್ನು ಆಹ್ವಾನಿಸುತ್ತಾನೆ. ಇದು ನಮಗೆ ಹೇಗೆ ಗೊತ್ತು? “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು” ಎಂಬುದು ದೇವರ ಚಿತ್ತವಾಗಿದೆಯೆಂದು ಬೈಬಲ್ ಸ್ಪಷ್ಟಪಡಿಸುತ್ತದೆ.—1 ತಿಮೊಥೆಯ 2:4.
ಶೋಭಾಯಮಾನವಾದ ಆಕಾಶವೂ ಅದರಲ್ಲಿರುವುದೆಲ್ಲವೂ ಸೃಷ್ಟಿಸಲ್ಪಟ್ಟಿರುವುದು ನಮ್ಮ ಜೀವನವನ್ನು ನಿಯಂತ್ರಿಸಲಿಕ್ಕಾಗಿ ಅಲ್ಲ. ಅವು ಯೆಹೋವನ ಶಕ್ತಿ ಮತ್ತು ದೇವತ್ವವನ್ನು ಪ್ರಚುರಪಡಿಸುತ್ತವೆ. (ರೋಮನ್ನರಿಗೆ 1:20) ನಾವು ಸುಳ್ಳು ವಿಚಾರಗಳನ್ನು ತ್ಯಜಿಸುವಂತೆ ಹಾಗೂ ಸಫಲ ಜೀವನಕ್ಕೆ ಬೇಕಾದ ಭರವಸಾರ್ಹ ಮಾರ್ಗದರ್ಶನ, ನಿರ್ದೇಶನಕ್ಕಾಗಿ ದೇವರನ್ನು ಮತ್ತು ಆತನ ವಾಕ್ಯವನ್ನು ಅವಲಂಬಿಸುವಂತೆ ಅವು ನಮ್ಮನ್ನು ಪ್ರೋತ್ಸಾಹಿಸುತ್ತವೆ. “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು” ಎನ್ನುತ್ತದೆ ಬೈಬಲ್.—ಜ್ಞಾನೋಕ್ತಿ 3:5, 6. (w10-E 06/01)
[ಪುಟ 23ರಲ್ಲಿರುವ ಸಂಕ್ಷಿಪ್ತ ವಿವರಣೆ]
ಮಾಯಾ ನಾಗರೀಕತೆಯವರು ಜ್ಯೋತಿಶ್ಶಾಸ್ತ್ರವನ್ನು ಅಧಿಕವಾಗಿ ಬಳಸಿದರು
[ಪುಟ 24ರಲ್ಲಿರುವ ಸಂಕ್ಷಿಪ್ತ ವಿವರಣೆ]
“ರಹಸ್ಯಗಳನ್ನು ವ್ಯಕ್ತಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಪರಲೋಕದಲ್ಲಿದ್ದಾನೆ; ಉತ್ತರಕಾಲದಲ್ಲಿ ನಡೆಯತಕ್ಕದನ್ನು ಆತನೇ . . . ತಿಳಿಯಪಡಿಸಿದ್ದಾನೆ”
[ಪುಟ 24ರಲ್ಲಿರುವ ಸಂಕ್ಷಿಪ್ತ ವಿವರಣೆ]
ಮಾಯಾ ನಾಗರೀಕತೆಯವರು ಮಾಡಿದ ಜ್ಯೋತಿಷ್ಯದ ಅತಿಸೂಕ್ಷ್ಮ ಲೆಕ್ಕಾಚಾರಗಳು ಅವರ ನಾಗರೀಕತೆಯ ಅವನತಿಯನ್ನು ತಡೆಯಲು ವಿಫಲವಾದವು
[ಪುಟ 23ರಲ್ಲಿರುವ ಚಿತ್ರ]
ಎಲ್ ಕರಾಕೋಲ್ ವೀಕ್ಷಣಾಲಯ, ಚಿಚೆನ್ ಇಟ್ಸಾ, ಯೂಕಟನ್, ಮೆಕ್ಸಿಕೊ, ಕ್ರಿ.ಶ. 750-900
[ಪುಟ 23ರಲ್ಲಿರುವ ಚಿತ್ರ ಕೃಪೆ]
ಪುಟ 22 ಮತ್ತು 23, ಎಡದಿಂದ ಬಲಕ್ಕೆ: ನಕ್ಷತ್ರಗಳು: NASA, ESA, and A. Nota (STScl); ಮಾಯನ್ ಕ್ಯಾಲೆಂಡರ್: © Lynx/Iconotec com/age fotostock; ಮಾಯನ್ ಖಗೋಳಜ್ಞ: © Albert J. Copley/age fotostock; ಮಾಯನ್ ವೀಕ್ಷಣಾಲಯ: El Caracol (The Great Conch) (photo), Mayan/Chichen Itza, Yucatan, Mexico/Giraudon/The Bridgeman Art Library