ವಿಧವೆ-ವಿಧುರರ ಅಗತ್ಯಗಳೇನು? ಸಹಾಯ ನೀಡುವುದು ಹೇಗೆ?
ವಿಧವೆ-ವಿಧುರರ ಅಗತ್ಯಗಳೇನು? ಸಹಾಯ ನೀಡುವುದು ಹೇಗೆ?
ಪುಟ್ಟ ಅಪಾರ್ಟ್‌ಮೆಂಟ್‌ನಲ್ಲಿರುವ ಶಾನ್ ಮಂದ ಬೆಳಕಿನ ಅಡುಗೆಕೋಣೆಯಲ್ಲಿ ಎಂದಿನಂತೆ ಊಟಕ್ಕಾಗಿ ಮೇಜನ್ನು ಸಿದ್ಧಮಾಡಿದಳು. ಹೊಟ್ಟೆಗೇನಾದರೂ ಹಾಕಬೇಕಲ್ಲ! ಒಮ್ಮೆಲೇ ಆಕೆಯ ದೃಷ್ಟಿ ತನ್ನ ಮುಂದೆ ಮೇಜಿನ ಮೇಲಿರುವ ಎರಡು ಪ್ಲೇಟುಗಳ ಮೇಲೆ ಹೋಯಿತು. ಆಕೆಗೆ ಅಳು ಉಕ್ಕಿಬಂತು. ಅಭ್ಯಾಸಬಲದಿಂದ ತನ್ನ ಪ್ರೀತಿಯ ಗಂಡನಿಗಾಗಿಯೂ ಪ್ಲೇಟನ್ನು ಇಟ್ಟಿದ್ದಳು! ಆದರೆ ಅವರು ಸಾವನ್ನಪ್ಪಿ ಆಗಲೇ ಎರಡು ವರ್ಷಗಳು ಸಂದಿದ್ದವು.
ಬಾಳಸಂಗಾತಿಯ ಸಾವಿನಿಂದ ಎಷ್ಟು ನೋವಾಗುತ್ತದೆ ಎಂಬುದು ಅದನ್ನು ಅನುಭವಿಸಿದವರಿಗೇ ಗೊತ್ತು. ಎಂಥವರಿಗೂ ಆ ಘೋರ ಸತ್ಯವನ್ನು ಅರಗಿಸಿಕೊಳ್ಳಲು ತುಂಬ ಸಮಯ ಹಿಡಿಯುತ್ತದೆ. 72 ವರ್ಷದ ಬೆರಲ್ ಎಂಬವರಿಗೆ ತಮ್ಮ ಗಂಡನ ಆಕಸ್ಮಿಕ ಸಾವನ್ನು ನಂಬಲಿಕ್ಕಾಗಲಿಲ್ಲ. ಅವರನ್ನುವುದು: “ಅವರು ಇನ್ನಿಲ್ಲ ಎಂಬದನ್ನು ನನ್ನ ಮನಸ್ಸು ಒಪ್ಪಿಕೊಳ್ಳುತ್ತಿರಲಿಲ್ಲ. ಅವರು ಪುನಃ ಒಮ್ಮೆ ಆ ಬಾಗಿಲನ್ನು ದಾಟಿ ಒಳಗೆ ಬರುವುದಿಲ್ಲವೆಂದು ನನಗೆ ನಂಬಲಿಕ್ಕೇ ಆಗಲಿಲ್ಲ.”
ಕಾರಣಾಂತರದಿಂದ ಕೈಯನ್ನೋ ಕಾಲನ್ನೋ ಕಳೆದುಕೊಂಡವರಿಗೆ ಕೆಲವೊಮ್ಮೆ ಆ ಅಂಗ ಇನ್ನೂ ಇದೆಯೆಂಬಂತೆ ಭಾಸವಾಗುತ್ತದೆ. ಅದೇ ರೀತಿಯಲ್ಲಿ ಬಾಳಸಂಗಾತಿಯನ್ನು ಕಳೆದುಕೊಂಡಿರುವ ದುಃಖತಪ್ತ ವ್ಯಕ್ತಿಗಳಿಗೆ ಕೆಲವೊಮ್ಮೆ ತಮ್ಮ ಪ್ರಿಯ ಸಂಗಾತಿಯನ್ನು ಜನರ ಗುಂಪಲ್ಲಿ ನೋಡಿದ ಹಾಗೆ ಅನಿಸುತ್ತದೆ ಇಲ್ಲವೆ ಆ ಸಂಗಾತಿ ತಮ್ಮ ಜೊತೆಯಲ್ಲೇ ಇದ್ದಾರೆ ಎಂಬಂತೆ ಅವರೊಂದಿಗೆ ಮಾತಾಡಿಬಿಡುತ್ತಾರೆ!
ಈ ರೀತಿಯ ಶೋಕದಲ್ಲಿರುವ ವ್ಯಕ್ತಿಯೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ಬಂಧುಮಿತ್ರರಿಗೆ ಹೆಚ್ಚಾಗಿ ಗೊತ್ತಿರುವುದಿಲ್ಲ. ಸಂಗಾತಿಯನ್ನು ಕಳೆದುಕೊಂಡ ದುಃಖದಲ್ಲಿರುವ ವ್ಯಕ್ತಿಯೊಬ್ಬರ ಪರಿಚಯ ನಿಮಗಿದೆಯೋ? ನೀವು ಅವರಿಗೆ ಹೇಗೆ ನೆರವು ನೀಡಬಹುದು? ಶೋಕಿಸುತ್ತಿರುವ ವಿಧವೆಯರಿಗೆ, ವಿಧುರರಿಗೆ ಸಹಾಯಮಾಡಲು ನಿಮಗೆ ಏನೆಲ್ಲ ತಿಳಿದಿರಬೇಕು? ವಿಯೋಗಿಗಳು ಬದುಕಿನಲ್ಲಿ ಆಸಕ್ತಿಯನ್ನು ಮರಳಿ ಪಡೆಯುವಂತೆ ಹೇಗೆ ಸಹಾಯಮಾಡಬಲ್ಲಿರಿ?
ಏನೆಲ್ಲ ಮಾಡಬಾರದು?
ತಮ್ಮ ಪ್ರಿಯ ವ್ಯಕ್ತಿಯ ದುಃಖ ನೋಡಿ ಬಂಧುಮಿತ್ರರಿಗೆ ಸಂಕಟವಾಗಬಹುದು. ಆ ವ್ಯಕ್ತಿ ಹೆಚ್ಚು ದಿನಗಳ ವರೆಗೆ ಶೋಕಿಸದಂತೆ ತಡೆಯಲು ಅವರು ಪ್ರಯತ್ನಿಸುತ್ತಾರೆ. ಅವರಿದನ್ನು ಮಾಡುವ ಉದ್ದೇಶ ಒಳ್ಳೇದಾಗಿರಬಹುದು. ಆದರೆ, 700 ಮಂದಿ ವಿಧವೆಯರ ಹಾಗೂ ವಿಧುರರ ಸಮೀಕ್ಷೆ ನಡೆಸಿದ ಸಂಶೋಧಕನೊಬ್ಬನು ಬರೆದದ್ದು: “ಇಂತಿಷ್ಟೇ ಅವಧಿಯ ವರೆಗೆ ಶೋಕಿಸಬೇಕೆಂಬ ಯಾವುದೇ ಮಿತಿಯಿಲ್ಲ.” ಹೀಗಿರುವುದರಿಂದ ಅವರ ಕಣ್ಣೀರನ್ನು ಆದಿಕಾಂಡ 37:34, 35; ಯೋಬ 10:1.
ತಡೆಯಲು ಪ್ರಯತ್ನಿಸುವ ಬದಲು ಆ ವ್ಯಕ್ತಿ ತನ್ನ ಶೋಕವನ್ನು ವ್ಯಕ್ತಪಡಿಸಲು ಬಿಡಿ.—ಅಂತ್ಯಕ್ರಿಯೆಗೆ ಸಂಬಂಧಪಟ್ಟ ಕೆಲಸಗಳ ವಿಷಯದಲ್ಲಿ ನೀವು ಸಹಾಯಹಸ್ತ ಚಾಚಬಹುದು. ಆದರೆ ಎಲ್ಲವನ್ನೂ ನೀವೇ ನಿಯಂತ್ರಿಸಬೇಕೆಂದು ನೆನಸಬೇಡಿ. 49 ವರ್ಷದ ಪಾಲ್ ಎಂಬ ವಿಧುರನು ಹೇಳಿದ್ದು: “ಕೆಲವರು ನಿಜವಾದ ಹಾಗೂ ಪ್ರಾಯೋಗಿಕವಾದ ವಿಧದಲ್ಲಿ ಸಹಾಯಮಾಡಿದರೂ ಏರ್ಪಾಡುಗಳ ನಿಯಂತ್ರಣವನ್ನು ನನಗೆ ಬಿಟ್ಟದ್ದು ಇಷ್ಟವಾಯಿತು. ಹೀಗೆ ನನ್ನ ಹೆಂಡತಿಯ ಅಂತ್ಯಕ್ರಿಯೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದದ್ದರಿಂದ ನನಗೆ ತೃಪ್ತಿಯಾಯಿತು. ನಾನು ಅವಳಿಗೋಸ್ಕರ ಮಾಡಬಹುದಾದ ಕೊನೆ ಸಂಗತಿ ಅದಾಗಿತ್ತೆಂದು ನನಗನಿಸಿತು.”
ನೀವು ಮಾಡುವ ಸ್ವಲ್ಪ ಸಹಾಯಕ್ಕೂ ಅವರು ಆಭಾರಿಗಳಾಗಿರುತ್ತಾರೆ ನಿಜ. 68 ವರ್ಷದ ಐಲೀನ್ ಎಂಬ ವಿಧವೆ ಹೇಳಿದ್ದು: “ಆ ಸಮಯದಲ್ಲಿ ನನ್ನ ಕೈಕಾಲೇ ಆಡದಿದ್ದ ಹಾಗೆ ಆಗಿಬಿಟ್ಟದ್ದರಿಂದ ಅಂತ್ಯಕ್ರಿಯೆಯ ಏರ್ಪಾಡುಗಳನ್ನು ಮಾಡಲು, ಕಾಗದಪತ್ರಗಳ ಕೆಲಸ ಮಾಡಲು ನನಗೆ ತುಂಬ ಕಷ್ಟವಾಯಿತು. ನನ್ನ ಮಗ ಮತ್ತು ಸೊಸೆ ತುಂಬ ಸಹಾಯಮಾಡಿದರು.”
ಅಲ್ಲದೆ, ಮೃತಪಟ್ಟ ಪ್ರಿಯ ವ್ಯಕ್ತಿಯ ಬಗ್ಗೆ ಮಾತಾಡಲು ಹೆದರಬೇಡಿ. ಈ ಮುಂಚೆ ತಿಳಿಸಲಾಗಿರುವ ಬೆರಲ್ ಹೇಳುವುದು: “ನನ್ನ ಮಿತ್ರರು ತುಂಬಾನೇ ನೆರವು ನೀಡಿದರು. ಆದರೆ ಅವರಲ್ಲಿ ಹೆಚ್ಚಿನವರು ನನ್ನ ಗಂಡ ಜಾನ್ ಬಗ್ಗೆ ಏನೂ ಮಾತಾಡುತ್ತಿರಲಿಲ್ಲ. ಜಾನ್ ಅಸ್ತಿತ್ವದಲ್ಲೇ ಇರಲಿಲ್ಲ ಎಂಬಂತೆ ವರ್ತಿಸುತ್ತಿದ್ದರು; ಇದರಿಂದ ನನಗೆ ಸ್ವಲ್ಪ ನೋವಾಯಿತು.” ದಿನಗಳು ಕಳೆದಂತೆ, ವಿಧವೆಯರು ಮತ್ತು ವಿಧುರರು ತಮ್ಮ ಸಂಗಾತಿಯ ಬಗ್ಗೆ ಮನಬಿಚ್ಚಿ ಮಾತಾಡಲು ಇಷ್ಟಪಡಬಹುದು. ಅವರ ಸಂಗಾತಿ ನಿಮಗೆ ಮಾಡಿದ್ದ ಸಹಾಯ ಇಲ್ಲವೆ ಅವರೊಟ್ಟಿಗೆ ನಡೆದ ತಮಾಷೆಯ ಪ್ರಸಂಗ ನಿಮಗೆ ನೆನಪಿದೆಯಾ? ಹಾಗಿದ್ದರೆ ಅಂಜಿಕೆಯಿಂದ ಸುಮ್ಮನಿರದೆ, ಅದನ್ನು ಹೇಳಬಹುದೋ ಎಂದು ಅವರನ್ನು ಕೇಳಿ. ನಿಮ್ಮ ಮಾತು ಅವರಿಗೆ ಇಷ್ಟವಾಗುತ್ತಿದೆಯೆಂದು ನಿಮಗನಿಸಿದರೆ ತೀರಿಹೋದ ವ್ಯಕ್ತಿಯಲ್ಲಿ ನಿಮಗೇನು ಇಷ್ಟವಾಗುತ್ತಿತ್ತು, ಈಗ ಅವರು ಯಾಕೆ ನಿಮಗೆ ನೆನಪಾಗುತ್ತಿದ್ದಾರೆಂದು ಹೇಳಿ. ಹೀಗೆ ಮಾಡುವಾಗ ಇತರರೂ ತಮ್ಮ ದುಃಖದಲ್ಲಿ ಭಾಗಿಗಳಾಗಿದ್ದಾರೆಂದು ಶೋಕತಪ್ತ ಸಂಗಾತಿಗೆ ತಿಳಿದುಬರುತ್ತದೆ.—ರೋಮನ್ನರಿಗೆ 12:15.
ಶೋಕಿಸುತ್ತಿರುವ ವ್ಯಕ್ತಿಗೆ ನೆರವು ನೀಡುತ್ತಿರುವಾಗ ಅವರ ಮೇಲೆ ಸಲಹೆಸೂಚನೆಗಳ ಸುರಿಮಳೆಗರೆಯಬೇಡಿ. ಅವಸರದಿಂದ ನಿರ್ಣಯಗಳನ್ನು ಮಾಡುವಂತೆ ಒತ್ತಡಹಾಕಬೇಡಿ. * ವಿವೇಚನೆಯನ್ನು ಬಳಸಿರಿ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನನ್ನ ಮಿತ್ರನೊ ಸಂಬಂಧಿಕನೊ ತನ್ನ ಬದುಕಿನ ಅತ್ಯಂತ ಕಷ್ಟಕರವಾದ ಈ ಬದಲಾವಣೆಗೆ ಹೊಂದಿಕೊಳ್ಳುವಂತೆ ಸಹಾಯಮಾಡಲು ಯಾವ ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳಬಲ್ಲೆ?’
ಏನೆಲ್ಲ ಮಾಡಬೇಕು?
ಪ್ರಿಯ ವ್ಯಕ್ತಿಯ ಮರಣದ ನಂತರದ ದಿನಗಳಲ್ಲಿ ಅವರ ಸಂಗಾತಿಗೆ ಪ್ರಾಯೋಗಿಕ ನೆರವು ನೀಡುವುದು ಒಳ್ಳೇದು. ಉದಾಹರಣೆಗೆ ನೀವು ಅವರಿಗೆ ಅಡುಗೆ ಮಾಡಿಕೊಡಬಹುದು, ಅವರ ಜೊತೆ ಸಮಯ ಕಳೆಯಬಹುದು, ಅವರನ್ನು ಭೇಟಿಮಾಡುತ್ತಿರುವ ಸಂಬಂಧಿಕರಿಗೆ ತಂಗಲು ಏರ್ಪಾಡು ಮಾಡಬಹುದು.
ಸ್ತ್ರೀಯರು ಮತ್ತು ಪುರುಷರು ಶೋಕ, ಒಂಟಿತನವನ್ನು ಒಂದೇ ರೀತಿಯಲ್ಲಿ ನಿಭಾಯಿಸುವುದಿಲ್ಲ ಎಂಬದನ್ನು ನೀವು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ, ಜಗತ್ತಿನ ಕೆಲವೊಂದು ಕಡೆಗಳಲ್ಲಿ ಅರ್ಧದಷ್ಟು ವಿಧುರರು, ತಮ್ಮ ಸಂಗಾತಿ ಮರಣಪಟ್ಟ 18 ತಿಂಗಳೊಳಗೆ ಮರುವಿವಾಹ ಮಾಡಿಕೊಳ್ಳುತ್ತಾರೆ. ವಿಧವೆಯರ ವಿಷಯದಲ್ಲಿ ಇದು ವಿರಳ. ಈ ವ್ಯತ್ಯಾಸಕ್ಕೆ ಕಾರಣವೇನು?
ಪುರುಷರು ತಮ್ಮ ದೈಹಿಕ ಇಲ್ಲವೆ ಲೈಂಗಿಕ ಅಗತ್ಯಗಳನ್ನು ಪೂರೈಸಿಕೊಳ್ಳಲಿಕ್ಕಾಗಿ ಮಾತ್ರ ಮರುವಿವಾಹ ಆಗುತ್ತಾರೆಂದು ಅನೇಕರು ನೆನಸುತ್ತಾರೆ. ಆದರೆ ಹೆಚ್ಚಿನವರು ಆ ಕಾರಣಕ್ಕಾಗಿ ಮರುವಿವಾಹವಾಗುವುದಿಲ್ಲ. ವಾಸ್ತವವೇನೆಂದರೆ ಗಂಡಸರಿಗೆ ತಮ್ಮ ಸಂಗಾತಿಯಲ್ಲಿ ಮಾತ್ರ ಅಂತರಂಗವನ್ನು ತೋಡಿಕೊಳ್ಳುವ ಸ್ವಭಾವವಿರುತ್ತದೆ. ಇದರಿಂದಾಗಿಯೇ ಅವಳ ಮರಣದ ನಂತರ ಅವನನ್ನು ಒಂಟಿತನ ಕಾಡುತ್ತದೆ. ಈ ಸ್ವಭಾವದ ಕಾರಣದಿಂದಲೇ, ಒಂಟಿತನವನ್ನು ಹೊಡೆದೋಡಿಸಲು ಮರುವಿವಾಹ ಮಾಡಿಕೊಳ್ಳುವುದೇ ತಮಗಿರುವ ಏಕೈಕ ಮಾರ್ಗವೆಂದು ವಿಧುರರು ನೆನಸುತ್ತಾರೆ. ತರಾತುರಿಯಲ್ಲಿ ಮರುವಿವಾಹ ಮಾಡಿಕೊಳ್ಳುವುದರಿಂದ ಅಪಾಯಗಳಿದ್ದರೂ ಅವರು ಆ ಹೆಜ್ಜೆ ತೆಗೆದುಕೊಳ್ಳುತ್ತಾರೆ. ಆದರೆ ವಿಧವೆಯರು ಹಾಗಲ್ಲ. ಅವರ ಗಂಡನ ಬಂಧುಮಿತ್ರರು ಅವರನ್ನು ಕೆಲವೊಮ್ಮೆ ಮರೆತುಬಿಟ್ಟರೂ ಅವರು ಭಾವನಾತ್ಮಕ ಆಸರೆಯನ್ನು ಪಡೆದುಕೊಳ್ಳಲು ಸಮರ್ಥರಾಗಿರುತ್ತಾರೆ. ಹೀಗೆ ವಿಧವೆಯರು ಒಂಟಿತನವನ್ನು ನಿಭಾಯಿಸಲು ಹೆಚ್ಚು ಉತ್ತಮವಾಗಿ ಸನ್ನದ್ಧರಾಗಿರುತ್ತಾರೆ.
ನೀವು ಯಾರಿಗೆ ಸಹಾಯಮಾಡಲು ಇಚ್ಛಿಸುತ್ತೀರೋ ಅವರು ವಿಧವೆಯರಾಗಿರಲಿ ವಿಧುರರಾಗಿರಲಿ ಅವರನ್ನು ಕಾಡುತ್ತಿರುವ ಒಂಟಿತನದ ಸಮಸ್ಯೆ ನಿಭಾಯಿಸಲು ನೀವೇನು ಮಾಡಬಲ್ಲಿರಿ? 49 ವರ್ಷದ ಹೆಲೆನ್ ಎಂಬ ವಿಧವೆ ಹೇಳುವುದು: “ಅನೇಕರಿಗೆ ಸಹಾಯಮಾಡುವ ಮನಸ್ಸಿದ್ದರೂ ಅವರಾಗಿಯೇ ಮುಂದೆಬರುವುದಿಲ್ಲ. ‘ಏನಾದರೂ ಸಹಾಯಬೇಕಿದ್ದರೆ ಕೇಳಿ’ ಎಂದು ಹೇಳಿಬಿಡುತ್ತಾರೆ. ಆದರೆ ಕೆಲವರು, ‘ನಾನು ಶಾಪ್ಪಿಂಗ್‌ಗೆ ಹೋಗುತ್ತಿದ್ದೇನೆ, ಬರುತ್ತೀರಾ?’ ಎಂದು ಕೇಳಿದಾಗ ಸಂತೋಷವಾಗುತ್ತಿತ್ತು.” ಹಿಂದೆ ತಿಳಿಸಲಾದ ಪಾಲ್‌ನ ಹೆಂಡತಿ ಕ್ಯಾನ್ಸರ್‌ನಿಂದ ತೀರಿಕೊಂಡಳು. ಪಾಲ್‌ನನ್ನು ಇತರರು ತಮ್ಮೊಂದಿಗೆ ಜೊತೆಗೂಡುವಂತೆ ಕರೆಯುತ್ತಿದ್ದಾಗ ಆತನಿಗೆ ಸಂತೋಷವಾಗುತ್ತಿತ್ತು. ಏಕೆಂದು ವಿವರಿಸುತ್ತಾ ಆತನಂದದ್ದು: “ಕೆಲವೊಮ್ಮೆ ಯಾರೊಂದಿಗೂ ಬೆರೆಯಲಿಕ್ಕಾಗಲಿ ನನ್ನ ಸನ್ನಿವೇಶದ ಬಗ್ಗೆ ಮಾತಾಡಲಿಕ್ಕಾಗಲಿ ಮನಸ್ಸಾಗುವುದಿಲ್ಲ. ಆದರೆ ಸಂಜೆಹೊತ್ತಿನಲ್ಲಿ ಬೇರೆಯವರೊಂದಿಗಿನ ಒಡನಾಟದ ನಂತರ ತುಂಬ ಹಿತವೆನಿಸುತ್ತದೆ. ಒಂಟಿತನ ಅಷ್ಟೊಂದು ಕಾಡುವುದಿಲ್ಲ. ಜನರಿಗೆ ನಮ್ಮ ಬಗ್ಗೆ ಕಾಳಜಿಯಿದೆ ಎಂದು ಗೊತ್ತಾಗುತ್ತದೆ. ದುಃಖವನ್ನು ಮರೆಯಲು ಹೆಚ್ಚು ಸುಲಭವಾಗುತ್ತದೆ.” *
ಸಹಾನುಭೂತಿ ವಿಶೇಷವಾಗಿ ಯಾವಾಗ ಅಗತ್ಯ?
ಸಂಬಂಧಿಕರಲ್ಲಿ ಹೆಚ್ಚಿನವರು ನಿತ್ಯದ ಕೆಲಸಕಾರ್ಯಗಳಿಗೆ ಮರಳಿಹೋದಾಗಲೇ ತನಗೆ ಭಾವನಾತ್ಮಕ ನೆರವಿನ ಹೆಚ್ಚಿನ ಅಗತ್ಯವಿತ್ತೆಂದು ಹೆಲೆನ್ ಗ್ರಹಿಸಿದಳು. ಅವಳನ್ನುವುದು: “ಮೊದಮೊದಲು
ಬಂಧುಮಿತ್ರರೆಲ್ಲರು ನಮ್ಮ ಜೊತೆ ಇರುತ್ತಾರೆ. ಆಮೇಲೆ ಅವರು ತಮ್ಮ ನಿತ್ಯದ ದಿನಚರಿಗೆ ಮರಳುತ್ತಾರೆ. ಆದರೆ ನಮಗೆ ಮಾತ್ರ ಹಾಗೆ ಮಾಡಲು ತುಂಬ ಕಷ್ಟವಾಗುತ್ತದೆ.” ನಿಜ ಮಿತ್ರರು ಈ ವಾಸ್ತವಿಕತೆಯನ್ನು ನೆನಪಿನಲ್ಲಿಟ್ಟುಕೊಂಡು ವಿಯೋಗಿಗಳಿಗೆ ಸಹಾಯಕೊಡಲು ಸದಾ ಸಿದ್ಧರಾಗಿರುತ್ತಾರೆ ಮತ್ತು ನೆರವು ನೀಡುವುದನ್ನು ಮುಂದುವರಿಸುತ್ತಾರೆ.ವಿಶೇಷವಾಗಿ ವಿವಾಹ ವಾರ್ಷಿಕೋತ್ಸವ ಇಲ್ಲವೆ ಸಂಗಾತಿಯ ಮರಣದ ತಾರೀಖಿನಂಥ ದಿನಗಳಂದು ವಿಧವೆ ಅಥವಾ ವಿಧುರರ ಜೊತೆಯಲ್ಲಿ ಯಾರಾದರೂ ಇರುವುದು ಅಗತ್ಯ. ತನ್ನ ವಿವಾಹದ ವಾರ್ಷಿಕೋತ್ಸವದಂದು ತನ್ನಲ್ಲುಂಟಾಗುವ ಶೂನ್ಯಭಾವದಿಂದ ಹೊರಬರಲು ತನ್ನ ಮಗನು ಸಹಾಯ ಮಾಡುತ್ತಾನೆಂದು ಈ ಮುಂಚೆ ತಿಳಿಸಲಾಗಿರುವ ಐಲೀನ್ ಹೇಳುತ್ತಾರೆ. “ಪ್ರತಿ ವರ್ಷ ಆ ದಿನ ನನ್ನ ಮಗ ಕೆವಿನ್ ನನ್ನನ್ನು ಎಲ್ಲಾದರೂ ಹೊರಗೆ ಕರಕೊಂಡು ಹೋಗುತ್ತಾನೆ. ನಾವು ಒಟ್ಟಿಗೆ ಊಟಮಾಡುತ್ತೇವೆ. ತಾಯಿ-ಮಗನಿಗೆ ಮಾತ್ರ ಆ ದಿನ ಮೀಸಲು” ಎನ್ನುತ್ತಾರೆ ಐಲೀನ್. ವಿಧವೆ ಅಥವಾ ವಿಧುರರಾಗಿರುವ ನಿಮ್ಮ ಪ್ರಿಯರಿಗೆ ನಿಭಾಯಿಸಲು ಬಲು ಕಠಿನವಾಗಿರುವ ಇಂಥ ದಿನಗಳನ್ನು ನೀವು ನೆನಪಿನಲ್ಲಿಡಬಹುದಲ್ಲವೇ? ಹೀಗೆ ನೆನಪಿನಲ್ಲಿಟ್ಟರೆ ಕಠಿನವಾದ ಆ ದಿನದಂದು ನೀವಾಗಲಿ ಬೇರೆಯವರಾಗಲಿ ಅವರೊಂದಿಗಿರಲು ಏರ್ಪಾಡು ಮಾಡಬಲ್ಲಿರಿ.—ಜ್ಞಾನೋಕ್ತಿ 17:17.
ಕೆಲವು ವಿಧವೆ ಮತ್ತು ವಿಧುರರು, ತಮ್ಮಂತೆಯೇ ಬಾಳಸಂಗಾತಿಯನ್ನು ಕಳೆದುಕೊಂಡಿರುವ ಇತರರಿಂದ ಸಾಂತ್ವನ ಪಡೆದಿದ್ದಾರೆ. ಎಂಟು ವರ್ಷಗಳ ಹಿಂದೆ ವಿಧವೆಯಾದ ಆ್ಯನಿ ಎಂಬಾಕೆ ಇನ್ನೊಬ್ಬ ವಿಧವೆಯೊಂದಿಗಿನ ತನ್ನ ಸಹವಾಸದ ಕುರಿತಾಗಿ ಹೇಳಿದ್ದು: “ಆಕೆಗಿದ್ದ ಗಟ್ಟಿಮನಸ್ಸು ನನ್ನ ಮೇಲೆ ತುಂಬ ಪ್ರಭಾವ ಬೀರಿತು. ಮಾತ್ರವಲ್ಲ ಜೀವನದಲ್ಲಿ ಮುಂದೆ ಸಾಗುವಂತೆ ಪ್ರೋತ್ಸಾಹವನ್ನೂ ಕೊಟ್ಟಿತು.”
ಸಂಗಾತಿಯನ್ನು ಕಳಕೊಂಡಾಗ ಆವರಿಸುವ ದುಃಖದಿಂದ ಸಾವರಿಸಿಕೊಂಡ ಬಳಿಕ ವಿಧವೆಯರೂ ವಿಧುರರೂ ಇತರರಲ್ಲಿ ಸ್ಫೂರ್ತಿ ಹಾಗೂ ಆಶಾಭಾವವನ್ನು ಮೂಡಿಸಬಲ್ಲರು. ಅಂಥ ಇಬ್ಬರು ವಿಧವೆಯರ ಬಗ್ಗೆ ಬೈಬಲಿನಲ್ಲಿ ತಿಳಿಸಲಾಗಿದೆ. ಅವರು ಯಾರೆಂದರೆ ಯುವ ಸ್ತ್ರೀ ರೂತಳು ಮತ್ತು ಆಕೆಯ ಅತ್ತೆ ನೊವೊಮಿ. ಅವರು ಒಬ್ಬರಿಗೊಬ್ಬರು ಆಸರೆಯಾಗಿದ್ದರು. ಅವರು ಪರಸ್ಪರರ ಕಡೆಗೆ ತೋರಿಸಿದ ಕಾಳಜಿಯು ತಮ್ಮ ದುಃಖವನ್ನು ಮರೆಯಲು ಮತ್ತು ತಾವು ಎದುರಿಸುತ್ತಿದ್ದ ಕಷ್ಟಕರ ಸನ್ನಿವೇಶವನ್ನು ನಿಭಾಯಿಸಲು ಹೇಗೆ ಸಹಾಯಮಾಡಿತೆಂದು ಅವರ ಮನಮುಟ್ಟುವ ವೃತ್ತಾಂತವು ತೋರಿಸುತ್ತದೆ.—ರೂತಳು 1:15-17; 3:1; 4:14, 15.
ಸ್ವಸ್ಥರಾಗುವ ಸಮಯ
ಮೊದಲಿನಂಥ ಅರ್ಥಭರಿತ ಬದುಕನ್ನು ಪುನಃ ಆರಂಭಿಸಬೇಕಾದರೆ, ವಿಧವೆಯರೂ ವಿಧುರರೂ ತಮ್ಮ ಪ್ರಿಯ ವ್ಯಕ್ತಿಯ ನೆನಪನ್ನು ಉಳಿಸಿಕೊಳ್ಳುವುದರ ಮತ್ತು ಸದ್ಯದ ತಮ್ಮ ಸ್ವಂತ ಅಗತ್ಯಗಳನ್ನು ಪೂರೈಸಿಕೊಳ್ಳುವುದರ ಮಧ್ಯೆ ಸಮತೋಲನ ಕಾಪಾಡಿಕೊಳ್ಳಬೇಕು. ವಿವೇಕಿ ರಾಜನಾದ ಸೊಲೊಮೋನನು “ಅಳುವ ಸಮಯ” ಇದೆಯೆಂದು ಒಪ್ಪಿಕೊಂಡನು. ಆದರೆ ‘ಸ್ವಸ್ಥರಾಗುವ ಸಮಯ’ ಇದೆಯೆಂದೂ ಆತನು ಹೇಳಿದನು.—ಪ್ರಸಂಗಿ 3:3, 4.
ಈ ಹಿಂದೆ ತಿಳಿಸಲಾದ ಪಾಲ್, ಹಿಂದಿನ ನೆನಪುಗಳನ್ನು ಮರೆಯುವುದು ಎಷ್ಟು ಕಷ್ಟಕರವೆಂದು ಈ ಮಾತುಗಳಲ್ಲಿ ಹೇಳುತ್ತಾರೆ: “ನಾನೂ ನನ್ನ ಹೆಂಡತಿ, ಒಂದಕ್ಕೊಂದು ಹೆಣೆದುಕೊಂಡೇ ಬೆಳೆದ ಎರಡು ಮರಗಳಂತಿದ್ದೆವು. ಅದರಲ್ಲಿ ಒಂದು ಮರ ಸತ್ತುಹೋಗಿ ಅದನ್ನು ಅಲ್ಲಿಂದ ತೆಗೆದುಹಾಕಿದಾಗ ಉಳಿದಿದ್ದ ಮರವು ವಿಚಿತ್ರವಾಗಿ ತೋರುತ್ತಿತ್ತು. ಹಾಗೆಯೇ, ಒಂಟಿ ಬಾಳು ನನಗೆ ತುಂಬ ವಿಚಿತ್ರವೆನಿಸಿತು.” ಕೆಲವರು ತಮ್ಮ ಮೃತ ಸಂಗಾತಿಗೆ ನಿಷ್ಠೆತೋರಿಸಬೇಕೆಂದು ನೆನಸಿ ಹಿಂದಿನದ್ದನ್ನು ಮರೆತುಬಿಡಲು ಇಷ್ಟಪಡುವುದಿಲ್ಲ. ಇನ್ನಿತರರು, ತಾವು ಸ್ವಲ್ಪ ಸಂತೋಷದಿಂದಿದ್ದರೆ ತಮ್ಮ ಸಂಗಾತಿಗೆ ದ್ರೋಹಬಗೆದಂತಾಗುತ್ತದೆಂಬ ಚಿಂತೆಯಿಂದ ಹೊರಗೆಲ್ಲೂ ಹೋಗುವುದಿಲ್ಲ ಇಲ್ಲವೆ ಯಾರನ್ನೂ ಭೇಟಿಮಾಡುವುದಿಲ್ಲ. ವಿಧವೆಯರು ಮತ್ತು ವಿಧುರರು ‘ಸ್ವಸ್ಥರಾಗುವಂತೆ’ ಅಂದರೆ ಬದುಕಲ್ಲಿ ಮುಂದೆ ಸಾಗುವಂತೆ ನಾವು ಸೌಮ್ಯ ರೀತಿಯಲ್ಲಿ ಹೇಗೆ ನೆರವಾಗಬಹುದು?
ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಆ ವ್ಯಕ್ತಿಗೆ ಸಹಾಯಮಾಡುವುದೇ ಮೊದಲ ಹೆಜ್ಜೆ. ಆರು ವರ್ಷಗಳ ಹಿಂದೆ ವಿಧುರನಾದ ಹರ್ಬಟ್ ಎಂಬಾತನು ಹೇಳುವುದು: “ನಾನು ಯಾವುದಾದರೊಂದು ವಿಷಯವನ್ನು ನೆನಪಿಸಿಕೊಂಡು ಹೇಳುವಾಗ, ನನ್ನನ್ನು ಭೇಟಿಯಾಗಲು ಬಂದವರು ತಾಳ್ಮೆಯಿಂದ ನನ್ನ ಮಾತನ್ನು ಆಲಿಸುತ್ತಿದ್ದದ್ದೇ ಒಂದು ದೊಡ್ಡ ಉಪಕಾರ ಎಂದೆಣಿಸುತ್ತೇನೆ. ಆ ಸಮಯದಲ್ಲಿ ನನ್ನೊಂದಿಗಿನ ಸಹವಾಸ ಬೇಸರ ಹಿಡಿಸುವಂಥದ್ದಾಗಿದ್ದರೂ ಅವರು ನನ್ನೊಂದಿಗಿದ್ದು ತೋರಿಸುತ್ತಿದ್ದ ಸಹಾನುಭೂತಿಗಾಗಿ ತುಂಬ ಕೃತಜ್ಞನು.” ಪಾಲ್ ತನ್ನ ಭಾವನಾತ್ಮಕ ತೊಳಲಾಟವನ್ನು ಹೇಗೆ ನಿಭಾಯಿಸುತ್ತಿದ್ದಾನೆಂದು ಪ್ರೌಢ ಸ್ನೇಹಿತನೊಬ್ಬನು ಯಾವಾಗಲೂ ಬಂದು ಕೇಳುತ್ತಿದ್ದನು. ಇದು ಪಾಲ್‌ನ ಮನಸ್ಪರ್ಶಿಸಿತು. “ಅವನು ಯಥಾರ್ಥವಾಗಿಯೂ ಸೌಮ್ಯವಾಗಿಯೂ ಅದನ್ನು ಕೇಳುತ್ತಿದ್ದ ರೀತಿ ನನಗೆ ತುಂಬ ಹಿಡಿಸುತ್ತಿತ್ತು. ಆದ್ದರಿಂದ ಆ ಸಮಯದಲ್ಲಿ ನನಗೆ ಹೇಗನಿಸುತ್ತಿತ್ತೆಂದು ಹೇಳುತ್ತಿದ್ದೆ” ಎನ್ನುತ್ತಾನೆ ಪಾಲ್.—ಜ್ಞಾನೋಕ್ತಿ 18:24.
ವಿಯೋಗಿಯು ವಿಷಾದ, ಅಪರಾಧಿಭಾವ, ಕೋಪ ಮುಂತಾದ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ವಾಸ್ತವಿಕತೆಯನ್ನು ಒಪ್ಪಿಕೊಳ್ಳುವ ನಿಟ್ಟಿನಲ್ಲಿ ಮುಖ್ಯವಾದ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾನೆ/ಳೆ. ರಾಜ ದಾವೀದನ ವಿಷಯದಲ್ಲಿ ಇದು ಸತ್ಯವಾಗಿತ್ತು. ಆತನು ತನ್ನ ಅಂತರಂಗಮಿತ್ರನಾಗಿದ್ದ ಯೆಹೋವ ದೇವರಲ್ಲಿ ತನ್ನ ಮನದ ದುಗುಡವನ್ನು ಹೇಳಿಕೊಂಡನು. ಇದು ಆತನಿಗೆ ದುಃಖದಿಂದ 2 ಸಮುವೇಲ 12:19-23.
ಹೊರಬರಲು ಬಲವನ್ನು ಕೊಟ್ಟು, ತನ್ನ ಪುಟ್ಟ ಕಂದ ಸತ್ತುಹೋಗಿದ್ದಾನೆಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಸಹಾಯಮಾಡಿತು.—ಸಂಗಾತಿಯನ್ನು ಕಳೆದುಕೊಂಡಿರುವ ವ್ಯಕ್ತಿ ನಿತ್ಯದ ಚಟುವಟಿಕೆಗಳಲ್ಲಿ ತನ್ನನ್ನು ಪುನಃ ತೊಡಗಿಸಿಕೊಳ್ಳುವುದು ಮೊದಮೊದಲಿಗೆ ಕಷ್ಟಕರವಾಗಿದ್ದರೂ ಅದನ್ನು ಮಾಡಲೇಬೇಕು. ಈ ನಿಟ್ಟಿನಲ್ಲಿ ಅವರಿಗೆ ಸಹಾಯಮಾಡಲು ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅವರನ್ನು ಸೇರಿಸಿಕೊಳ್ಳಬಹುದೋ? ಉದಾಹರಣೆಗೆ ಮಾರ್ಕೆಟ್‌ಗೊ ಸಾಯಂಕಾಲ ಸುಮ್ಮನೆ ಸುತ್ತಾಡಲೋ ಅವರನ್ನು ಜೊತೆಯಲ್ಲಿ ಕರಕೊಂಡು ಹೋಗಬಹುದು. ಅವರನ್ನು ಏಕಾಂಗಿತನದಿಂದ ಹೊರಸೆಳೆಯುವ ಇನ್ನೊಂದು ವಿಧ, ನಿಮ್ಮ ಕೆಲಸದಲ್ಲಿ ಸಹಾಯಮಾಡುವಂತೆ ಕೇಳುವುದೇ. ಉದಾಹರಣೆಗೆ, ವಿಯೋಗಿಯು ವಿಧವೆಯಾಗಿರುವಲ್ಲಿ ಆಕೆ ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಹಾಯಮಾಡುವಂತೆ ಇಲ್ಲವೆ ಆಕೆ ಚೆನ್ನಾಗಿ ಮಾಡುವಂಥ ಒಂದು ಅಡುಗೆಯನ್ನು ಕಲಿಸಿಕೊಡುವಂತೆ ಕೇಳಬಹುದು. ವಿಧುರನಾಗಿರುವಲ್ಲಿ, ನಿಮ್ಮ ಮನೆಯಲ್ಲಿ ಯಾವುದಾದರೂ ರಿಪೇರಿ ಕೆಲಸವಿರುವುದಾದರೆ ಅದರಲ್ಲಿ ನೆರವಾಗುವಂತೆ ಕೇಳಬಹುದು. ಈ ರೀತಿಯ ಚಟುವಟಿಕೆ ಅವರಲ್ಲಿ ಉತ್ಸಾಹವನ್ನು ಮಾತ್ರವಲ್ಲ ಅವರ ಬದುಕಿಗೆ ಈಗಲೂ ಒಂದು ಉದ್ದೇಶವಿದೆ ಎಂಬ ಭರವಸೆಯನ್ನೂ ಮೂಡಿಸುವುದು.
ವಿಯೋಗಿಗಳು ಇತರರೊಂದಿಗೆ ಪುನಃ ಮನಬಿಚ್ಚಿ ಮಾತಾಡಲು ಆರಂಭಿಸುವ ಮೂಲಕ ಕ್ರಮೇಣ ಜೀವನದಲ್ಲಿ ಆಸಕ್ತಿಯನ್ನು ಮರಳಿ ಪಡೆಯಲು ಮತ್ತು ಹೊಸ ಗುರಿಗಳನ್ನಿಡಲು ಶಕ್ತರಾಗಬಹುದು. 44 ವರ್ಷದ ವಿಧವೆ ಹಾಗೂ ತಾಯಿ ಆಗಿರುವ ಯಾನೆಟ್ ಎಂಬವರ ವಿಷಯದಲ್ಲಿ ಹೀಗಾಯಿತು. ಆಕೆ ಜ್ಞಾಪಿಸಿಕೊಳ್ಳುವುದು: “ನಿತ್ಯದ ಚಟುವಟಿಕೆಗಳಿಗೆ ಮರಳುವುದು ತುಂಬಾ ಕಷ್ಟಕರವಾಗಿತ್ತು! ದಿನನಿತ್ಯದ ಕೆಲಸಗಳನ್ನು ಮಾಡಲು, ಹಣಕಾಸನ್ನು ನಿರ್ವಹಿಸಲು, ಮೂವರು ಮಕ್ಕಳನ್ನು ನೋಡಿಕೊಳ್ಳಲು ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ.” ಆದರೆ ಸಮಯ ದಾಟಿದಂತೆ ಯಾನೆಟ್ ಎಲ್ಲವನ್ನೂ ಸರಿಯಾಗಿ ಸಂಘಟಿಸಲು ಮತ್ತು ತನ್ನ ಮಕ್ಕಳೊಂದಿಗೆ ಹೆಚ್ಚು ಉತ್ತಮವಾಗಿ ಸಂವಾದಿಸಲು ಕಲಿತಳು. ತನ್ನ ಆಪ್ತಮಿತ್ರರ ಸಹಾಯವನ್ನು ಸ್ವೀಕರಿಸಲೂ ಕಲಿತಳು.
“ಬದುಕು ಒಂದು ಅಮೂಲ್ಯ ವರದಾನ”
ಬಂಧುಮಿತ್ರರ ಸಹಾಯ ಸಾರ್ಥಕವಾಗಬೇಕಾದರೆ ವಿಯೋಗಿಗಳ ಸಂಬಂಧದಲ್ಲಿ ಅವರು ಅತಿಯಾದ ನಿರೀಕ್ಷೆಗಳನ್ನಿಡಬಾರದು. ಏಕೆಂದರೆ ಸಂಗಾತಿಯನ್ನು ಕಳೆದುಕೊಂಡಿರುವ ವ್ಯಕ್ತಿಯ ಮನಃಸ್ಥಿತಿ ಪ್ರಶಾಂತವಾಗಿರುವಾಗ ಅವರಲ್ಲಿ ಸುಧಾರಣೆ, ಆಶಾಭಾವ ಹೆಚ್ಚಾಗಬಹುದು; ಖಿನ್ನರಾಗಿರುವಾಗ ಕಡಿಮೆಯಾಗಬಹುದು. ಈ ಏರುಪೇರು ಅನೇಕ ತಿಂಗಳು ಅಥವಾ ವರ್ಷಗಳ ವರೆಗೆ ಸಾಗಬಹುದು. ಖಂಡಿತವಾಗಿಯೂ ಅವರ “ಹೃದಯದ ಬಾಧೆ” ತೀಕ್ಷ್ಣವಾಗಿರಬಲ್ಲದು.—1 ಅರಸುಗಳು 8:38, 39, NIBV.
ವಿಯೋಗಿಗಳು ಈ ರೀತಿಯಲ್ಲಿ ಮನಕುಗ್ಗಿರುವಾಗ ಸರಿಯಾದ ದಿಕ್ಕಿನಲ್ಲಿ ಸಾಗಲು ಅವರನ್ನು ಮೆತ್ತಗೆ ಮುಂದಕ್ಕೆ ತಳ್ಳಬೇಕಾದೀತು. ಹೀಗೆ ಅವರು ವಾಸ್ತವ-ಪ್ರಪಂಚದಿಂದ ದೂರ ತೇಲಿಹೋಗಿ ಒಂಟಿದ್ವೀಪವಾಗದಂತೆ ತಡೆಯಬಹುದು. ಈ ರೀತಿಯ ನೆರವು ಅನೇಕ ವಿಧುರ ಮತ್ತು ವಿಧವೆಯರ ಬದುಕಿಗೆ ಒಂದು ಹೊಸ ದಿಶೆ ತೋರಿಸಿದೆ. ಈಗ ಆಫ್ರಿಕ ದೇಶದಲ್ಲಿ ಪೂರ್ಣ ಸಮಯ ಬೈಬಲ್ ಬಗ್ಗೆ ಇತರರಿಗೆ ತಿಳಿಸುತ್ತಿರುವ 60 ವರ್ಷದ ವಿಧುರ ಕ್ಲಾಡ್ ಎಂಬಾತ ಹೇಳುವುದು: “ಸಾವು ನನ್ನ ಬಾಳಸಂಗಾತಿಯನ್ನು ನನ್ನಿಂದ ಬೇರ್ಪಡಿಸಿದೆಯೆಂಬ ನೋವಿದ್ದರೂ ಬದುಕು ಒಂದು ಅಮೂಲ್ಯ ವರದಾನವೆಂದು ನನಗೀಗಲೂ ಅನಿಸುತ್ತದೆ.”
ಬಾಳಸಂಗಾತಿಯ ಸಾವಿನ ನಂತರ ಬದುಕಿರುವ ಸಂಗಾತಿಯ ಜೀವನವು ಹಿಂದಿನಂತೆಯೇ ಇರಲಾರದು ನಿಜ. ಹಾಗಿದ್ದರೂ ನಾವು ಅವರಿಂದ ಪ್ರಯೋಜನಕರವಾದ ಅನೇಕ ವಿಷಯಗಳನ್ನು ಕಲಿಯಸಾಧ್ಯವಿದೆ.—ಪ್ರಸಂಗಿ 11:7, 8. (w10-E 05/01)
[ಪಾದಟಿಪ್ಪಣಿಗಳು]
^ ಪ್ಯಾರ. 11 ಪುಟ 12ರಲ್ಲಿ ‘ಒಲವಿನ ಕುರುಹುಗಳೋ ಚೇತರಿಕೆಗೆ ಅಡಚಣೆಗಳೋ?’ ಚೌಕ ನೋಡಿ.
^ ಪ್ಯಾರ. 16 ವಿಯೋಗಿಗಳಿಗೆ ಪ್ರಾಯೋಗಿಕ ಸಹಾಯ ಕೊಡುವುದರ ಬಗ್ಗೆ ಹೆಚ್ಚಿನ ಸಲಹೆಗಳಿಗಾಗಿ, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಬ್ರೋಷರಿನ 20-25ನೇ ಪುಟಗಳನ್ನು ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಿಜ ಮಿತ್ರರು ಸಹಾಯಕೊಡಲು ಸದಾ ಸಿದ್ಧರಾಗಿರುತ್ತಾರೆ ಮತ್ತು ನೆರವು ನೀಡುವುದನ್ನು ಮುಂದುವರಿಸುತ್ತಾರೆ
[ಪುಟ 12ರಲ್ಲಿರುವ ಚೌಕ/ ಚಿತ್ರ]
ಒಲವಿನ ಕುರುಹುಗಳೋ ಚೇತರಿಕೆಗೆ ಅಡಚಣೆಗಳೋ?
ಹೆಲೆನ್‌ರ ಪತಿ ಕೆಲವು ವರ್ಷಗಳ ಹಿಂದೆಯಷ್ಟೇ ತೀರಿಕೊಂಡರು. ಆಕೆಯನ್ನುವುದು: “ನನ್ನ ಗಂಡನ ಹಲವಾರು ವಸ್ತುಗಳನ್ನು ಹಾಗೆಯೇ ಇಟ್ಟುಕೊಂಡೆ. ಸಮಯ ದಾಟಿದಂತೆ ಆ ವಸ್ತುಗಳು ನೆನಪಿನಂಗಳದಿಂದ ಮಧುರವಾದ ಕ್ಷಣಗಳನ್ನು ಮನಸ್ಸಿಗೆ ತರುತ್ತಿರುತ್ತವೆ. ಅವರು ಸಾವನ್ನಪ್ಪಿದ ಕೂಡಲೇ ಆ ವಸ್ತುಗಳನ್ನೆಲ್ಲ ಕೊಟ್ಟುಬಿಡಲು ಅಥವಾ ಬಿಸಾಡಲು ನನಗೆ ಮನಸ್ಸಿರಲಿಲ್ಲ ಏಕೆಂದರೆ ಸಮಯ ಉರುಳಿದಂತೆ ಭಾವನೆಗಳು ಬಹಳಷ್ಟು ಬದಲಾಗಬಲ್ಲವು.”
ಐದು ವರ್ಷಗಳ ಹಿಂದೆ ತಮ್ಮ ಪತ್ನಿಯನ್ನು ಕಳೆದುಕೊಂಡ ಕ್ಲಾಡ್‌ರವರ ಅಭಿಪ್ರಾಯ ತದ್ವಿರುದ್ಧವಾಗಿದೆ. ಆತನನ್ನುವುದು: “ನನ್ನ ಹೆಂಡತಿಯನ್ನು ನೆನಪಿಸಿಕೊಳ್ಳಲು ಅವಳು ಬಳಸುತ್ತಿದ್ದ ವಸ್ತುಗಳೇ ಬೇಕೆಂದು ನನಗನಿಸುವುದಿಲ್ಲ. ಆ ವಸ್ತುಗಳನ್ನು ಕೊಟ್ಟುಬಿಟ್ಟದ್ದರಿಂದ ಅವಳಿನ್ನಿಲ್ಲ ಎಂಬ ವಾಸ್ತವಿಕತೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಿದೆ. ಶೋಕವನ್ನು ಕಡಿಮೆಗೊಳಿಸಲೂ ಸಹಾಯಮಾಡಿದೆ.”
ಈ ಮೇಲಿನ ಹೇಳಿಕೆಗಳಿಂದ, ಒಬ್ಬ ಮೃತ ವ್ಯಕ್ತಿಯ ವಸ್ತುಗಳನ್ನು ಏನು ಮಾಡಬೇಕೆಂಬುದರ ಬಗ್ಗೆ ಪ್ರತಿಯೊಬ್ಬರಿಗೆ ತಮ್ಮದೇ ಆದ ಅಭಿಪ್ರಾಯವಿರುತ್ತದೆಂದು ತಿಳಿದುಬರುತ್ತದೆ. ಹೀಗಿರುವುದರಿಂದ ವಿವೇಕಿಗಳಾದ ಬಂಧುಮಿತ್ರರು ಈ ವಿಷಯದ ಬಗ್ಗೆ ವಿಯೋಗಿಗಳ ಮೇಲೆ ತಮ್ಮ ಅಭಿಪ್ರಾಯವನ್ನು ಹೇರುವುದಿಲ್ಲ.—ಗಲಾತ್ಯ 6:2, 5.
[ಪುಟ 9ರಲ್ಲಿರುವ ಚಿತ್ರಗಳು]
ವಿಶೇಷ ಸಹಾಯ ಕೊಡಬಹುದಾದ ನಿರ್ದಿಷ್ಟ ತಾರೀಖುಗಳು ನಿಮಗೆ ನೆನಪಿದೆಯೋ?
[ಪುಟ 9ರಲ್ಲಿರುವ ಚಿತ್ರ]
ನಿಮ್ಮ ಜೊತೆ ಬರುವಂತೆ ಕರೆಯಿರಿ
[ಪುಟ 10ರಲ್ಲಿರುವ ಚಿತ್ರಗಳು]
ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹಾಗೂ ವಿನೋದವಿಹಾರಗಳಲ್ಲಿ ವಿಧವೆ-ವಿಧುರರನ್ನೂ ಸೇರಿಸಿ