ದೇವರ ಹೆಸರನ್ನು ತಿಳಿದುಕೊಳ್ಳಲು ಸಾಧ್ಯವೋ?
ದೇವರ ಹೆಸರನ್ನು ತಿಳಿದುಕೊಳ್ಳಲು ಸಾಧ್ಯವೋ?
ಒಬ್ಬ ಗಣ್ಯ ವ್ಯಕ್ತಿಯ ಹೆಸರು ಕರೆದು ವಂದಿಸಿ ಮಾತಾಡಿಸುವ ಆಹ್ವಾನ ಸಿಕ್ಕಿದರೆ ಅದೆಂಥ ದೊಡ್ಡ ಗೌರವ! ಆದರೆ ಪ್ರತಿಷ್ಠಿತ ವ್ಯಕ್ತಿಗಳನ್ನು ಹೆಚ್ಚಾಗಿ ಅವರ ಬಿರುದುಗಳಿಂದ ಸಂಬೋಧಿಸಲಾಗುತ್ತದೆ. ಉದಾಹರಣೆಗೆ “ರಾಷ್ಟ್ರಪತಿಗಳೇ,” “ಮಹಾ ಪ್ರಭುಗಳೇ,” “ಮಾನ್ಯ ನ್ಯಾಯಮೂರ್ತಿಗಳೇ” ಇತ್ಯಾದಿ. ಹೀಗಿರಲಾಗಿ ಉನ್ನತ ಹುದ್ದೆಯಲ್ಲಿರುವ ಒಬ್ಬರು, “ದಯವಿಟ್ಟು ನನ್ನ ಹೆಸರು ಕರೆದು ಮಾತಾಡಿಸಿ” ಎಂದು ನಿಮಗೆ ಹೇಳಿದರೆ, ಅದನ್ನು ದೊಡ್ಡ ಸುಯೋಗವೆಂದು ಎಣಿಸುವಿರಲ್ಲವೇ?
ಸತ್ಯ ದೇವರು ತನ್ನ ಲಿಖಿತ ವಾಕ್ಯವಾದ ಬೈಬಲಿನಲ್ಲಿ ಹೀಗನ್ನುತ್ತಾನೆ: “ನಾನೇ ಯೆಹೋವನು; ಇದೇ ನನ್ನ ನಾಮವು.” (ಯೆಶಾಯ 42:8) ಆತನಿಗೆ “ಸೃಷ್ಟಿಕರ್ತ,” “ಸರ್ವಶಕ್ತ,” “ಪವಿತ್ರನಾದ ತಂದೆ” ಎಂಬಂಥ ಅನೇಕ ಬಿರುದುಗಳೂ ಇವೆ. ಹಾಗಿದ್ದರೂ, ತನ್ನ ನಿಷ್ಠಾವಂತ ಸೇವಕರು ತನ್ನ ವೈಯಕ್ತಿಕ ಹೆಸರಿನಿಂದ ಕರೆಯುವ ಸುಯೋಗವನ್ನು ಅವರಿಗೆ ದಯಪಾಲಿಸಿದ್ದಾನೆ.
ಉದಾಹರಣೆಗೆ, ಯೆರೂಸಲೇಮಿನಲ್ಲಿ ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ರಾಜ ಸೊಲೊಮೋನನು “ಯೆಹೋವನೇ” ಎಂಬ ಮಾತಿನಿಂದ ತನ್ನ ಪ್ರಾರ್ಥನೆಯನ್ನು ಆರಂಭಿಸಿದನು. (1 ಅರಸುಗಳು 8:22, 23) ಪ್ರವಾದಿ ಎಲೀಯನು ಸಹ “ಯೆಹೋವನೇ, ಕಿವಿಗೊಡು” ಎಂದು ಬೇಡಿದನು. (1 ಅರಸುಗಳು 18:37) ಪ್ರವಾದಿ ಯೆಶಾಯನು ಇಸ್ರಾಯೇಲ್ ಜನಾಂಗದ ಪರವಾಗಿ ದೇವರನ್ನು “ಯೆಹೋವಾ, ನೀನೇ ನಮ್ಮ ಪಿತೃ” ಎಂದು ಸಂಬೋಧಿಸಿದನು. (ಯೆಶಾಯ 63:16) ನಮ್ಮ ಸ್ವರ್ಗೀಯ ಪಿತನು ನಾವಾತನನ್ನು ಹೆಸರಿನಿಂದ ಕರೆಯುವಂತೆ ಆಹ್ವಾನಿಸುತ್ತಾನೆಂಬುದು ತೀರ ಸ್ಪಷ್ಟ.
ಯೆಹೋವ ದೇವರನ್ನು ಹೆಸರು ಹಿಡಿದು ಕರೆಯುವುದು ಪ್ರಾಮುಖ್ಯವಾದರೂ ಆತನ ಹೆಸರನ್ನು ತಿಳಿದುಕೊಳ್ಳುವುದರಲ್ಲಿ ಇನ್ನೂ ಹೆಚ್ಚಿನದ್ದು ಸೇರಿದೆ. ತನ್ನನ್ನು ಪ್ರೀತಿಸುವ ಮತ್ತು ತನ್ನಲ್ಲಿ ಭರವಸೆಯಿಡುವ ವ್ಯಕ್ತಿಯ ಬಗ್ಗೆ ಯೆಹೋವನು ಹೀಗೆ ಭಾಷೆಕೊಡುತ್ತಾನೆ: “ನನ್ನ ನಾಮವನ್ನು ಅರಿತವನಾಗಿರುವದರಿಂದ ಅವನನ್ನು ಉದ್ಧರಿಸುವೆನು.” (ಕೀರ್ತನೆ 91:14) ದೇವರ ಸಂರಕ್ಷಣೆ ಪಡೆಯಲಿಕ್ಕಾಗಿ ಆತನ ನಾಮವನ್ನು ಅರಿತುಕೊಳ್ಳುವುದು ಇಲ್ಲವೆ ತಿಳಿದುಕೊಳ್ಳುವುದು ಮುಖ್ಯ ಎಂಬುದು ಇದರಿಂದ ಸ್ಪಷ್ಟ. ಆದುದರಿಂದ ದೇವರ ಹೆಸರನ್ನು ತಿಳಿದುಕೊಳ್ಳುವುದರಲ್ಲಿ ಬಹಳಷ್ಟು ವಿಷಯಗಳು ಒಳಗೂಡಿರಲೇಬೇಕು. ಅವುಗಳೇನು? (w10-E 07/01)