ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ಬಿಟ್ಟುಬಿಡಿ

ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ಬಿಟ್ಟುಬಿಡಿ

ಸೂತ್ರ 2

ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ಬಿಟ್ಟುಬಿಡಿ

ಬೈಬಲ್‌ ಏನನ್ನುತ್ತದೆ? “ನಿಮ್ಮ ಕೆಲಸವನ್ನು ಚೆನ್ನಾಗಿ ಮಾಡಿ. ಆಗ ಹೆಮ್ಮೆಪಡಲು ಏನಾದರೂ ವಿಷಯವಿರುವುದು. ಆದರೆ ನಿಮ್ಮನ್ನು ಇತರರೊಂದಿಗೆ ಹೋಲಿಸಿ ನೋಡಬೇಡಿ.”—ಗಲಾತ್ಯ 6:4, ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌.

ಸುಲಭವಲ್ಲ ಏಕೆ? ಇತರರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವ ಸ್ವಭಾವ ಸಹಜ. ಕೆಲವೊಮ್ಮೆ, ನಮಗಿಂತ ಕಡಿಮೆ ಇರುವವರೊಂದಿಗೆ ಹೋಲಿಸಿಕೊಳ್ಳುತ್ತೇವೆ. ಹೆಚ್ಚಾಗಿ, ನಮಗಿಂತ ಬಲಿಷ್ಠರೂ ಹಣವಂತರೂ ಪ್ರತಿಭಾವಂತರೂ ಆದ ಜನರೊಂದಿಗೆ ಹೋಲಿಸಿಕೊಳ್ಳುತ್ತೇವೆ. ಯಾವುದೇ ರೀತಿಯಲ್ಲಿ ಹೋಲಿಸಿಕೊಂಡರೂ ಅದು ಒಳ್ಳೇದಲ್ಲ. ಏಕೆಂದರೆ ಒಬ್ಬ ವ್ಯಕ್ತಿಯನ್ನು ಅವನ ಸಂಪತ್ತಿನಿಂದಲೋ ಶಕ್ತಿಸಾಮರ್ಥ್ಯದಿಂದಲೋ ಅಳೆಯಲಾಗುತ್ತದೆಂಬ ತಪ್ಪುಕಲ್ಪನೆ ನಮ್ಮಲ್ಲಿ ಮನೆಮಾಡಿಕೊಳ್ಳುತ್ತದೆ. ಅಷ್ಟೇ ಅಲ್ಲ ಅದು ನಮ್ಮಲ್ಲಿ ಅಸೂಯೆ, ಸ್ಪರ್ಧಾಮನೋಭಾವವನ್ನೂ ಕೆರಳಿಸಬಹುದು.—ಪ್ರಸಂಗಿ 4:4.

ನೀವೇನು ಮಾಡಬಹುದು? ದೇವರಿಗೆ ನಿಮ್ಮ ಬಗ್ಗೆ ಯಾವ ನೋಟವಿದೆಯೋ ಅದೇ ನೋಟ ನಿಮಗೂ ಇರಲಿ. ಆತನ ದೃಷ್ಟಿಕೋನ ನಿಮಗೆ ನಿಮ್ಮ ಬಗ್ಗೆ ಇರುವ ಅಭಿಪ್ರಾಯವನ್ನು ಪ್ರಭಾವಿಸಲಿ. “ಯೆಹೋವನು * ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” (1 ಸಮುವೇಲ 16:7) ಯೆಹೋವನು ನಿಮ್ಮನ್ನು ಇತರರೊಂದಿಗೆ ಹೋಲಿಸಿ ಅಳೆಯುವುದಿಲ್ಲ. ಬದಲಿಗೆ ನಿಮ್ಮ ಹೃದಯವನ್ನು ಓದಿ, ನಿಮ್ಮ ಆಲೋಚನೆಗಳನ್ನೂ ಭಾವನೆಗಳನ್ನೂ ಸಂಕಲ್ಪಗಳನ್ನೂ ಪರಿಶೀಲಿಸಿ ನಿಮ್ಮನ್ನು ಅಳೆಯುತ್ತಾನೆ. (ಇಬ್ರಿಯ 4:12, 13) ನಿಮಗೆ ಇತಿಮಿತಿಗಳಿವೆಯೆಂದು ಆತನಿಗೆ ಗೊತ್ತು. ನೀವೂ ಆ ಇತಿಮಿತಿಗಳನ್ನು ಮನಸ್ಸಿನಲ್ಲಿಟ್ಟು ಅದಕ್ಕೆ ತಕ್ಕಂತೆ ಬದುಕಬೇಕೆಂಬುದು ಆತನ ಆಶಯ. ಆದರೆ ಇತರರೊಂದಿಗೆ ಹೋಲಿಸಿಕೊಂಡು ನಿಮ್ಮನ್ನು ಅಳೆದುಕೊಂಡರೆ ಅದರ ಫಲಿತಾಂಶ ಒಂದೋ ನೀವು ಅಹಂಕಾರಿಗಳಾಗುವಿರಿ ಇಲ್ಲವೆ ಸದಾ ಅತೃಪ್ತರಾಗಿಯೇ ಉಳಿಯುವಿರಿ. ಆದ್ದರಿಂದ ಪ್ರತಿಯೊಂದರಲ್ಲೂ ನೀವು ಇತರರಿಗಿಂತ ಮುಂದಿರಲಾರಿರಿ ಎಂಬುದನ್ನು ದೀನತೆಯಿಂದ ಒಪ್ಪಿಕೊಳ್ಳಿ.—ಜ್ಞಾನೋಕ್ತಿ 11:2.

ದೇವರು ನಿಮ್ಮನ್ನು ಅಮೂಲ್ಯ ಎಂದೆಣಿಸಬೇಕಾದರೆ ನೀವೇನು ಮಾಡಬೇಕು? “ಮನುಷ್ಯನೇ, ಒಳ್ಳೆಯದು ಇಂಥದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಷ್ಟೆ; ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?” ಎಂದು ಬರೆಯುವಂತೆ ಪ್ರವಾದಿ ಮೀಕನನ್ನು ದೇವರು ಪ್ರೇರಿಸಿದನು. (ಮೀಕ 6:8) ಈ ಸಲಹೆಯನ್ನು ನೀವು ಪಾಲಿಸಿದರೆ ದೇವರು ಖಂಡಿತ ನಿಮ್ಮ ಕಾಳಜಿ ವಹಿಸುವನು. (1 ಪೇತ್ರ 5:6, 7) ಸಂತೃಪ್ತರಾಗಿರಲು ಇದಕ್ಕಿಂತ ದೊಡ್ಡ ಕಾರಣ ಬೇಕೇ? (w10-E 11/01)

[ಪಾದಟಿಪ್ಪಣಿ]

^ ಪ್ಯಾರ. 5 ಬೈಬಲಿಗನುಸಾರ ದೇವರ ಹೆಸರು.

[ಪುಟ 5ರಲ್ಲಿರುವ ಚಿತ್ರ]

ಯೆಹೋವನು ನಮ್ಮ ಹೃದಯ ನೋಡಿ ಅಳೆಯುತ್ತಾನೆ