ನಿಮ್ಮ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಿ
ಸೂತ್ರ 5
ನಿಮ್ಮ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಿ
ಬೈಬಲ್ ಏನನ್ನುತ್ತದೆ? “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.”—ಮತ್ತಾಯ 5:3.
ಸುಲಭವಲ್ಲ ಏಕೆ? ನಿಮ್ಮ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಲು ಇಂದಿನ ಸಾವಿರಾರು ಧರ್ಮಗಳಲ್ಲಿ ಹೆಚ್ಚಿನವು ತೋರಿಸುವ ಮಾರ್ಗಗಳು ಒಂದಕ್ಕೊಂದು ವಿರುದ್ಧವಾಗಿವೆ. ಹೀಗಿರುವಾಗ ಅವುಗಳಲ್ಲಿ ಯಾವುದು ಸತ್ಯವನ್ನು ಕಲಿಸುತ್ತದೆ, ಯಾವುದು ದೇವರಿಗೆ ಮೆಚ್ಚಿಕೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದಾದರೂ ಹೇಗೆ? ದೇವರಿದ್ದಾನೆಂಬ ನಂಬಿಕೆ, ಭಕ್ತಿ ಇವೆಲ್ಲ ತಿರುಳಿಲ್ಲದ್ದೂ ಹಾನಿಕರವೂ ಆಗಿದೆಯೆಂಬುದು ಅನೇಕ ಪ್ರತಿಷ್ಠಿತ ಲೇಖಕರ ವಾದ. ಒಬ್ಬ ಪ್ರತಿಷ್ಠಿತ ನಾಸ್ತಿಕನ ಅಭಿಪ್ರಾಯಗಳನ್ನು ಮ್ಯಾಕ್ಲೀನ್ಸ್ ಪತ್ರಿಕೆ ಈ ರೀತಿ ಸಾರಾಂಶಿಸುತ್ತದೆ: “ವಿಜ್ಞಾನವನ್ನೂ ನಮ್ಮ ಗ್ರಹಿಕೆಯನ್ನೂ ಮೀರಿಸುವಂಥದ್ದೇನೊ ಇದೆ ಎಂಬ ಕ್ರೈಸ್ತ ಸಿದ್ಧಾಂತವು . . . ನಮಗಿರುವ ಈ ಬದುಕು ಅಷ್ಟೇನೂ ಮಹತ್ವದ್ದಲ್ಲ ಎಂದು ತೋರುವಂತೆ ಮಾಡುತ್ತದೆ ಹಾಗೂ ಮನುಷ್ಯರು ಹಿಂಸಾತ್ಮಕ ಕೃತ್ಯಗಳನ್ನು ನಡೆಸುವಂತೆ ಪ್ರೇರಿಸುತ್ತದೆ.”
ನೀವೇನು ಮಾಡಬಹುದು? ದೇವರ ಅಸ್ತಿತ್ವವನ್ನು ರುಜುಪಡಿಸುವ ಪುರಾವೆಯನ್ನು ಪರೀಕ್ಷಿಸಿನೋಡಿ. (ರೋಮನ್ನರಿಗೆ 1:20; ಇಬ್ರಿಯ 3:4) ಅಲ್ಲದೆ, ‘ಜೀವನದ ಉದ್ದೇಶವೇನು? ಮರಣಾನಂತರವೂ ಒಂದು ಬದುಕು ಇದೆಯೋ? ಇಷ್ಟೊಂದು ಕಷ್ಟಸಂಕಟ ಏಕಿದೆ? ದೇವರು ನನ್ನಿಂದ ಏನನ್ನು ಕೇಳಿಕೊಳ್ಳುತ್ತಾನೆ?’ ಎಂಬಂಥ ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಿರಿ. ಯಾರಾದರೂ ನಿಮ್ಮನ್ನು ನಿರುತ್ತೇಜಿಸಿದರೂ ಆ ಅನ್ವೇಷಣೆಯನ್ನು ಬಿಟ್ಟುಬಿಡಬೇಡಿ. ಇಂಥ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳನ್ನು ಕಂಡುಹಿಡಿದರೆ ಬಾಳುವ ಸಂತೃಪ್ತಿಯನ್ನು ಪಡೆಯುವಿರಿ.
ಹಾಗೆಂದು ನೀವು ಇತರರ ಮಾತನ್ನು ಕಣ್ಣುಮುಚ್ಚಿ ನಂಬಬೇಕಾಗಿಲ್ಲ. ದೇವರಿಗೆ ಏನು ಸ್ವೀಕೃತ ಎಂಬುದನ್ನು ಪರಿಶೋಧಿಸಿ ತಿಳಿದುಕೊಳ್ಳಲು ನಿಮ್ಮ “ವಿವೇಚನಾಶಕ್ತಿ” ಬಳಸುವಂತೆ ದೇವರ ವಾಕ್ಯ ಉತ್ತೇಜಿಸುತ್ತದೆ. (ರೋಮನ್ನರಿಗೆ 12:1, 2) ಈ ದಿಶೆಯಲ್ಲಿ ನೀವು ಮಾಡುವ ಪ್ರಯತ್ನಗಳಿಗೆ ಖಂಡಿತ ಪ್ರತಿಫಲ ದೊರಕುವುದು. ಬೈಬಲ್ ಅಧ್ಯಯನಕ್ಕಾಗಿ ಸಮಯಮಾಡಿ ಅದರ ಪ್ರಾಯೋಗಿಕ ಸಲಹೆಯನ್ನು ಅನ್ವಯಿಸಿದರೆ ಸಮಸ್ಯೆಗಳನ್ನು ದೂರವಿಡಬಲ್ಲಿರಿ, ಚಿಂತೆಯನ್ನು ಕಡಿಮೆಗೊಳಿಸಬಲ್ಲಿರಿ, ಜೀವನದ ಆನಂದವನ್ನು ಹೆಚ್ಚಿಸಬಲ್ಲಿರಿ. ಇದು ಟೊಳ್ಳುಮಾತಲ್ಲ. ವಿಭಿನ್ನ ಹಿನ್ನೆಲೆಗಳಿಂದ ಬಂದಿರುವ ಲಕ್ಷಾಂತರ ಜನರು ದೇವರ ಹಾಗೂ ಆತನ ಉದ್ದೇಶಗಳ ಕುರಿತ ಸತ್ಯವನ್ನು ಕಲಿತು ಪ್ರಯೋಜನ ಪಡೆದಿದ್ದಾರೆ.
ಬೈಬಲಿನಲ್ಲಿರುವ ವಿವೇಕಯುತ ಸಲಹೆಯನ್ನು ಅನ್ವಯಿಸಿಕೊಳ್ಳುವಾಗ ನಿಮಗೂ ಪ್ರಯೋಜನವಾಗುವುದು. ದೇವರ ಮೇಲಣ ನಿಮ್ಮ ಭಕ್ತಿ ಹೆಚ್ಚುತ್ತಾ ಹೋಗುವುದು. ಆದ್ದರಿಂದ ನೀವು ಯೆಹೋವನ ಸಾಕ್ಷಿಗಳ ಬೈಬಲ್ ಅಧ್ಯಯನ ಏರ್ಪಾಡಿನ ಪ್ರಯೋಜನ ಪಡೆಯಬಾರದೇಕೆ? ಆ ಅಧ್ಯಯನ ಮಾಡಿದಾಗ, “ಸಂತೃಪ್ತಿಸಹಿತವಾದ ದೇವಭಕ್ತಿಯು ದೊಡ್ಡ ಲಾಭವಾಗಿದೆ” ಎಂಬ ಅಪೊಸ್ತಲ ಪೌಲನ ಮಾತುಗಳು ನಿಜವೆಂದು ಕಂಡುಕೊಳ್ಳುವಿರಿ.—1 ತಿಮೊಥೆಯ 6:6. (w10-E 11/01)
[ಪುಟ 8ರಲ್ಲಿರುವ ಚಿತ್ರ]
ದೇವರಿಗೆ ಏನು ಸ್ವೀಕೃತ ಎಂಬುದನ್ನು ಸ್ವತಃ ಪರಿಶೋಧಿಸಿ ತಿಳಿದುಕೊಳ್ಳಿ