ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೇರೆಯವರಿಗೆ ಹೇಳಬಹುದಾದ ಗುಟ್ಟು

ಬೇರೆಯವರಿಗೆ ಹೇಳಬಹುದಾದ ಗುಟ್ಟು

ನಿಮ್ಮ ಮಕ್ಕಳಿಗೆ ಕಲಿಸಿರಿ

ಬೇರೆಯವರಿಗೆ ಹೇಳಬಹುದಾದ ಗುಟ್ಟು

ನಿನಗೆ ಯಾರಾದರೂ ಗುಟ್ಟು ಹೇಳಿದ್ದಾರಾ?— * ನಾನು ನಿನಗೊಂದು ಗುಟ್ಟು ಹೇಳುತ್ತೇನೆ ಕೇಳು. ಆ ಗುಟ್ಟನ್ನು ಬೈಬಲಿನಲ್ಲಿ “ದೀರ್ಘಕಾಲದಿಂದ ಗುಪ್ತವಾಗಿದ್ದ ಪವಿತ್ರ ರಹಸ್ಯ” ಎಂದು ಕರೆಯಲಾಗಿದೆ. (ರೋಮನ್ನರಿಗೆ 16:25) ಮೊದಮೊದಲು ಆ “ಪವಿತ್ರ ರಹಸ್ಯ” ದೇವರಿಗೆ ಮಾತ್ರ ಗೊತ್ತಿತ್ತು. ಅದನ್ನು ತುಂಬ ಜನರು ತಿಳಿಯುವ ಹಾಗೆ ದೇವರು ಮಾಡಿದನು. ಹೇಗೆಂದು ನೋಡೋಣ.

ಅದಕ್ಕಿಂತ ಮುಂಚೆ “ಪವಿತ್ರ” ಅಂದರೇನು ಹೇಳು ನೋಡುವ?— ಪವಿತ್ರ ಅಂದರೆ ಪರಿಶುದ್ಧ, ಶುದ್ಧ ಅಥವಾ ತುಂಬ ವಿಶೇಷವಾದದ್ದು. ಆ ರಹಸ್ಯವನ್ನು ಪವಿತ್ರ ಎಂದು ಕರೆಯಲು ಕಾರಣ ಅದರ ಮೂಲನು ಪರಿಶುದ್ಧನಾದ ದೇವರು. ಈ ವಿಶೇಷವಾದ ರಹಸ್ಯವನ್ನು ತಿಳಿಯಲು ಯಾರಿಗೆ ತುಂಬ ಮನಸ್ಸಿತ್ತೆಂದು ನೀನು ಹೇಳಬಹುದಾ?— ದೇವದೂತರಿಗೆ. ಬೈಬಲ್‌ ಹೇಳುವುದು: “ದೇವದೂತರು . . . ಇವೇ ಸಂಗತಿಗಳನ್ನು ಕುತೂಹಲಪೂರ್ವಕವಾಗಿ ನೋಡಲು ಬಯಸುತ್ತಿದ್ದಾರೆ.” ಹೌದು, ಪವಿತ್ರ ಗುಟ್ಟನ್ನು ಅರ್ಥಮಾಡಿಕೊಳ್ಳಲು ಅವರಿಗೆ ತುಂಬ ಮನಸ್ಸಿತ್ತು.—1 ಪೇತ್ರ 1:12.

ಯೇಸು ಭೂಮಿಯಲ್ಲಿ ಜೀವಿಸಿದ್ದಾಗ ಆ ಪವಿತ್ರ ರಹಸ್ಯವನ್ನು ತಿಳಿಸಿದನು ಮತ್ತು ವಿವರಿಸಲು ಆರಂಭಿಸಿದನು. “ದೇವರ ರಾಜ್ಯದ ಪವಿತ್ರ ರಹಸ್ಯವು ನಿಮಗೆ ಕೊಡಲ್ಪಟ್ಟಿದೆ” ಎಂದಾತ ತನ್ನ ಶಿಷ್ಯರಿಗೆ ಹೇಳಿದ. (ಮಾರ್ಕ 4:11) ಆ ಗುಟ್ಟು ಯಾವುದರ ಬಗ್ಗೆ ಇತ್ತು ಎಂದು ತಿಳಿಯಿತಾ?— ಅದು ದೇವರ ರಾಜ್ಯದ ಕುರಿತಾಗಿತ್ತು. ಆ ರಾಜ್ಯಕ್ಕಾಗಿಯೇ ಪ್ರಾರ್ಥಿಸುವಂತೆ ಯೇಸು ನಮಗೆ ಕಲಿಸಿದನು.—ಮತ್ತಾಯ 6:9, 10.

ದೇವರ ರಾಜ್ಯವು “ದೀರ್ಘಕಾಲದಿಂದ” ಹೇಗೆ ರಹಸ್ಯವಾಗಿತ್ತು ಎಂಬುದನ್ನು ನೋಡೋಣ. ಏದೆನ್‌ ತೋಟದಲ್ಲಿ ಆದಾಮಹವ್ವರು ದೇವರ ಆಜ್ಞೆಯನ್ನು ಮೀರಿದ್ದರು. ಅದಕ್ಕಾಗಿ ದೇವರು ಅವರನ್ನು ಅಲ್ಲಿಂದ ಹೊರಹಾಕಿದ್ದನು. ಹಾಗಿದ್ದರೂ ದೇವರು ಮುಂದೆ ಇಡೀ ಭೂಮಿಯನ್ನು ಒಂದು ಉದ್ಯಾನವನ್ನಾಗಿ ಮಾಡಲಿದ್ದಾನೆಂದು ದೇವರ ಸೇವಕರಿಗೆ ತಿಳಿದುಬಂತು. (ಆದಿಕಾಂಡ 1:26-28; 2:8, 9; ಯೆಶಾಯ 45:18) ದೇವರ ರಾಜ್ಯದ ಆಳಿಕೆಯ ಕೆಳಗೆ ಜನರು ಆ ಉದ್ಯಾನದಂಥ ಭೂಮಿಯಲ್ಲಿ ಹೇಗೆ ಸಂತೋಷದಿಂದ ಇರುವರು ಎಂಬುದನ್ನು ಆ ದೇವರ ಸೇವಕರು ಬೈಬಲಿನಲ್ಲಿ ಬರೆದರು. ಆದರೆ ದೇವರ ರಾಜ್ಯದ ಕುರಿತ ಹೆಚ್ಚಿನ ವಿವರಗಳೆಲ್ಲ ರಹಸ್ಯವಾಗಿಯೇ ಉಳಿದಿದ್ದವು. ಯೇಸು ಭೂಮಿಗೆ ಬಂದಾಗಲೇ ಅದನ್ನು ವಿವರಿಸಿದನು.—ಕೀರ್ತನೆ 37:11, 29; ಯೆಶಾಯ 11:6-9; 25:8; 33:24; 65:21-24.

ಈಗ ದೇವರ ರಾಜ್ಯದ ರಾಜನ ಬಗ್ಗೆ ನೋಡೋಣ. ದೇವರು ಯಾರನ್ನು ರಾಜನನ್ನಾಗಿ ಆರಿಸಿದನು ಗೊತ್ತಾ?— “ಸಮಾಧಾನದ ಪ್ರಭು”ವನ್ನು ಅಂದರೆ ತನ್ನ ಮಗನಾದ ಯೇಸು ಕ್ರಿಸ್ತನನ್ನು. “ಆಡಳಿತವು ಅವನ ಬಾಹುವಿನ ಮೇಲಿರುವದು” ಎನ್ನುತ್ತದೆ ಬೈಬಲ್‌. (ಯೆಶಾಯ 9:6, 7) ನಾನೂ ನೀನೂ ‘ದೇವರ ಪವಿತ್ರ ರಹಸ್ಯವಾಗಿರುವ ಕ್ರಿಸ್ತನ ಕುರಿತಾದ ಜ್ಞಾನವನ್ನು’ ಪಡೆದುಕೊಳ್ಳಲೇಬೇಕು. (ಕೊಲೊಸ್ಸೆ 2:2) ದೇವರು ತಾನು ಸೃಷ್ಟಿಸಿದ ಪ್ರಪ್ರಥಮ ದೇವದೂತನ (ಆತ್ಮಜೀವಿಯಾಗಿದ್ದ ತನ್ನ ಪುತ್ರನ) ಜೀವವನ್ನು ಮರಿಯಳ ಗರ್ಭಕ್ಕೆ ಹಾಕಿದನು. ಸ್ವರ್ಗದಲ್ಲಿ ಶಕ್ತಿಶಾಲಿ ದೇವದೂತನಾಗಿದ್ದ ಈ ಮಗನನ್ನು ದೇವರು ಹೀಗೆ ಭೂಮಿಗೆ ಕಳುಹಿಸಿ, ಅವನು ತನ್ನ ಜೀವವನ್ನು ಅರ್ಪಿಸಿ ಮಾನವರಾದ ನಮಗೆ ಶಾಶ್ವತ ಜೀವನ ಸಿಗುವಂತಾಗಲು ಏರ್ಪಾಡು ಮಾಡಿದನು. ಇದೆಲ್ಲ ನಮಗೆ ತಿಳಿದಿರಬೇಕು.—ಮತ್ತಾಯ 20:28; ಯೋಹಾನ 3:16; 17:3.

ದೇವರು ಯೇಸುವನ್ನು ತನ್ನ ರಾಜ್ಯದ ರಾಜನಾಗಿ ಆರಿಸಿದ್ದರ ಬಗ್ಗೆ ನಾವೀಗ ಕಲಿತೆವು. ಆದರೆ ಆ ಪವಿತ್ರ ರಹಸ್ಯದ ಬಗ್ಗೆ ಇನ್ನಷ್ಟನ್ನು ತಿಳಿಯಲಿಕ್ಕಿದೆ. ಅದೇನೆಂದರೆ, ಪುನರುತ್ಥಾನವಾದ ಯೇಸುವಿನೊಂದಿಗೆ ಸ್ವರ್ಗದಲ್ಲಿ ಇನ್ನಿತರ ಸ್ತ್ರೀಪುರುಷರೂ ಇರುವರು. ಅವರು ಯೇಸುವಿನೊಂದಿಗೆ ಆಳುವರು!—ಎಫೆಸ 1:8-12.

ಯೇಸು ತಾನು ಸ್ವರ್ಗಕ್ಕೆ ಹೋಗಿ ತನ್ನ ನಂಬಿಗಸ್ತ ಅಪೊಸ್ತಲರಿಗಾಗಿ ಒಂದು ಸ್ಥಳವನ್ನು ಸಿದ್ಧಪಡಿಸುವೆನೆಂದು ಹೇಳಿದನು. (ಯೋಹಾನ 14:2, 3) ಅವನೊಂದಿಗೆ ದೇವರ ರಾಜ್ಯದಲ್ಲಿ ಆಳಲಿರುವ ಸ್ತ್ರೀಪುರುಷರಲ್ಲಿ ಕೆಲವರ ಹೆಸರುಗಳನ್ನು ತಿಳಿಯಲು ಇಲ್ಲಿ ಕೊಡಲಾದ ವಚನಗಳನ್ನು ತೆರೆದು ಓದುತ್ತಿಯಾ?—ಮತ್ತಾಯ 10:2-4; ಮಾರ್ಕ 15:39-41; ಯೋಹಾನ 19:25.

ಯೇಸುವಿನೊಂದಿಗೆ ಸ್ವರ್ಗದಲ್ಲಿ ಆಳಲಿರುವ ಈ ಸ್ತ್ರೀಪುರುಷರ ಸಂಖ್ಯೆ ಎಷ್ಟೆಂದು ತುಂಬ ಸಮಯದ ವರೆಗೆ ಗೊತ್ತಿರಲಿಲ್ಲ. ಆದರೆ ಈಗ ಅದು ನಮಗೆ ಗೊತ್ತು. ಎಷ್ಟೆಂದು ನಿನಗೆ ಗೊತ್ತಾ?— 1,44,000 ಎಂದು ಬೈಬಲ್‌ ಹೇಳುತ್ತದೆ. ಇದು ಕೂಡ ಪವಿತ್ರ ರಹಸ್ಯದ ಒಂದು ಅಂಶ.—ಪ್ರಕಟನೆ 14:1, 4.

ನೀನೀಗ ತಿಳಿದುಕೊಂಡಿರುವ “ದೇವರ ರಾಜ್ಯದ ಪವಿತ್ರ ರಹಸ್ಯ” ಒಂದು ಅತ್ಯದ್ಭುತ ಗುಟ್ಟು ಎಂದು ಒಪ್ಪುತ್ತಿಯಾ?— ಹಾಗಾದರೆ ಆ ರಹಸ್ಯದ ಬಗ್ಗೆ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. ಹಾಗೆ ಮಾಡಿದರೆ, ಅದನ್ನು ನಾವು ಸಾಧ್ಯವಾದಷ್ಟು ಹೆಚ್ಚು ಜನರಿಗೆ ವಿವರಿಸಲು ಸಾಧ್ಯ. (w10-E 12/01)

[ಪಾದಟಿಪ್ಪಣಿ]

^ ಪ್ಯಾರ. 3 ಈ ಲೇಖನವನ್ನು ನೀವು ಚಿಕ್ಕ ಮಗುವಿಗೆ ಓದಿಹೇಳುತ್ತಿರುವುದಾದರೆ ಅಡ್ಡಗೆರೆ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಮಗು ಉತ್ತರ ಹೇಳುವಂತೆ ಪ್ರೋತ್ಸಾಹಿಸಿರಿ.

ಪ್ರಶ್ನೆಗಳು:

▪ ನಾವೀಗ ತಿಳಿದುಕೊಂಡ ಗುಟ್ಟನ್ನು ಏನೆಂದು ಕರೆಯಲಾಗಿದೆ? ಏಕೆ ಹಾಗೆ ಕರೆಯಲಾಗಿದೆ?

▪ ಈ ರಹಸ್ಯ ಏನು? ಅದನ್ನು ಜನರಿಗೆ ಕಲಿಸಲು ಆರಂಭಿಸಿದ್ದು ಯಾರು?

▪ ಈ ರಹಸ್ಯಕ್ಕೆ ಸಂಬಂಧಪಟ್ಟ ಯಾವ ಕೆಲವು ವಿಷಯಗಳನ್ನು ನೀನು ಕಲಿತುಕೊಂಡೆ?

▪ ನಿನ್ನ ಫ್ರೆಂಡ್‌ಗೆ ಈ ಪವಿತ್ರ ರಹಸ್ಯವನ್ನು ಹೇಗೆ ವಿವರಿಸುತ್ತಿಯಾ?

[ಪುಟ 29ರಲ್ಲಿರುವ ಚಿತ್ರ]

ಯಾವ ವಿಷಯವನ್ನು ತಿಳಿಯಲು ದೇವದೂತರು ಪ್ರಯತ್ನಿಸುತ್ತಿದ್ದಾರೆಂದು ನೆನಸುತ್ತೀ?