ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಮನುಷ್ಯರ ಹೃದಯಗಳನ್ನು ಬಲ್ಲಾತನು’

‘ಮನುಷ್ಯರ ಹೃದಯಗಳನ್ನು ಬಲ್ಲಾತನು’

ದೇವರ ಸಮೀಪಕ್ಕೆ ಬನ್ನಿರಿ

‘ಮನುಷ್ಯರ ಹೃದಯಗಳನ್ನು ಬಲ್ಲಾತನು’

2 ಪೂರ್ವಕಾಲವೃತ್ತಾಂತ 6:29, 30

ಜೀವನದ ಕಷ್ಟ, ಜಂಜಾಟಗಳಿಂದ ಬೇಸತ್ತು ಹೋಗದವರು ನಮ್ಮಲ್ಲಿ ಯಾರಿದ್ದಾರೆ? ನಮ್ಮ ತಾಪತ್ರಯ ಇಲ್ಲವೆ ನೋವನ್ನು ಅರ್ಥಮಾಡಿಕೊಳ್ಳುವವರು ಯಾರೂ ಇಲ್ಲ ಎಂದು ಕೆಲವೊಮ್ಮೆ ಅನಿಸಬಹುದು. ಆದರೆ ನಿಜವೇನೆಂದರೆ ನಮ್ಮ ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಒಬ್ಬನಿದ್ದಾನೆ. ಆತನೇ ಯೆಹೋವ ದೇವರು. 2 ಪೂರ್ವಕಾಲವೃತ್ತಾಂತ 6:29, 30ರಲ್ಲಿನ ಸೊಲೊಮೋನನ ಮಾತುಗಳು ಈ ಸಾಂತ್ವನದಾಯಕ ವಿಷಯವನ್ನು ನಮಗೆ ತಿಳಿಸುತ್ತವೆ.

ಸೊಲೊಮೋನನು ಆ ಮಾತುಗಳನ್ನು ನುಡಿದದ್ದು, ಕ್ರಿ.ಪೂ. 1026ರಲ್ಲಿ ಯೆರೂಸಲೇಮಿನ ಆಲಯದ ಉದ್ಘಾಟನೆಯ ಸಮಯದಲ್ಲಿ ಪ್ರಾರ್ಥನೆ ಮಾಡಿದಾಗ. ಆ ಪ್ರಾರ್ಥನೆ ಬಹುಶಃ ಹತ್ತು ನಿಮಿಷಗಳುದ್ದವಾಗಿತ್ತು. ಅದರಲ್ಲಿ ಅವನು ಯೆಹೋವನನ್ನು ನಿಷ್ಠಾವಂತ ದೇವರು, ವಾಗ್ದಾನಗಳನ್ನು ಪೂರೈಸುವಾತನು ಹಾಗೂ ಪ್ರಾರ್ಥನೆಗಳನ್ನು ಕೇಳುವಾತನು ಎಂದು ಕೊಂಡಾಡಿದನು.—1 ಅರಸುಗಳು 8:23-53; 2 ಪೂರ್ವಕಾಲವೃತ್ತಾಂತ 6:14-42.

ದೇವರು ತನ್ನ ಆರಾಧಕರ ವಿಜ್ಞಾಪನೆಗಳಿಗೆ ಕಿವಿಗೊಡುವಂತೆ ಆ ಪ್ರಾರ್ಥನೆಯಲ್ಲಿ ಸೊಲೊಮೋನನು ಯಾಚಿಸಿದನು. (ವಚನ 29) ಸೊಲೊಮೋನನು ಭಿನ್ನಭಿನ್ನ ಬಾಧೆಗಳ (ವಚನ 28) ಕುರಿತಾಗಿ ತಿಳಿಸಿದನಾದರೂ ಪ್ರತಿಯೊಬ್ಬರಿಗೂ ಅವರದ್ದೇ ಆದ “ಉಪದ್ರವ” ಹಾಗೂ “ದುಃಖ” ಇರುತ್ತದೆಂದು ಹೇಳಿದನು. ಒಬ್ಬನಿಗೆ ಒಂದು ರೀತಿಯ ಸಮಸ್ಯೆಯಿದ್ದರೆ, ಇನ್ನೊಬ್ಬನಿಗೆ ಇನ್ನೊಂದು ರೀತಿಯ ಸಮಸ್ಯೆ ಇರಬಹುದು.

ಏನೇ ಇರಲಿ ದೇವಭೀರು ವ್ಯಕ್ತಿಗಳಂತೂ ತಮ್ಮ ಹೊರೆಗಳನ್ನು ಒಂಟಿಯಾಗಿ ಹೊರಬೇಕಾಗಿಲ್ಲ. ಸೊಲೊಮೋನನು ಪ್ರಾರ್ಥನೆ ಮಾಡಿದಾಗ, ಹೊರೆಗಳನ್ನು ತಾಳಲಾರದೆ ಯೆಹೋವನ ಮುಂದೆ “ಕೈಯೆತ್ತಿ” ವೈಯಕ್ತಿಕವಾಗಿ ಹೃತ್ಪೂರ್ವಕ ಪ್ರಾರ್ಥನೆ ಮಾಡುವ ಆರಾಧಕರೆಲ್ಲರೂ ಅವನ ಮನಸ್ಸಿನಲ್ಲಿದ್ದರು. * ತುಂಬ ಸಂಕಟದಲ್ಲಿದ್ದ ತನ್ನ ತಂದೆ ದಾವೀದನು ‘ಚಿಂತಾಭಾರವನ್ನು ಯೆಹೋವನ ಮೇಲೆ ಹಾಕುವುದರ’ ಬಗ್ಗೆ ಹೇಳಿದ್ದನ್ನು ಸೊಲೊಮೋನನು ಜ್ಞಾಪಿಸಿಕೊಂಡಿರಬಹುದು.—ಕೀರ್ತನೆ 55:4, 22.

ಸಹಾಯ ಕೋರುತ್ತಾ ಮಾಡಲಾಗುವ ಮನಃಪೂರ್ವಕ ವಿನಂತಿಗಳಿಗೆ ಯೆಹೋವನು ಹೇಗೆ ಪ್ರತಿಕ್ರಿಯಿಸುತ್ತಾನೆ? “ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಲಾಲಿಸಿ ಅವರಿಗೆ ಪಾಪಪರಿಹಾರವನ್ನು ಅನುಗ್ರಹಿಸು. . . . ಪ್ರತಿಯೊಬ್ಬನಿಗೂ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕ ಹಾಗೆ ಫಲವನ್ನು ಕೊಡು” ಎಂದು ಸೊಲೊಮೋನನು ಯೆಹೋವನನ್ನು ಬೇಡಿಕೊಂಡನು. (ವಚನ 30) ‘ಪ್ರಾರ್ಥನೆಯನ್ನು ಕೇಳುವವನಾದ’ ದೇವರು ತನ್ನ ಆರಾಧಕರನ್ನು ಗುಂಪಾಗಿ ಪರಾಮರಿಸುತ್ತಾನೆ ಮಾತ್ರವಲ್ಲ ಅವರಲ್ಲಿ ಒಬ್ಬೊಬ್ಬರ ವಿಷಯದಲ್ಲೂ ಕಾಳಜಿವಹಿಸುತ್ತಾನೆಂದು ಸೊಲೊಮೋನನಿಗೆ ತಿಳಿದಿತ್ತು. (ಕೀರ್ತನೆ 65:2) ಯೆಹೋವನು ತನ್ನೆಡೆಗೆ ಹೃತ್ಪೂರ್ವಕವಾಗಿ ಹಿಂದಿರುಗುವ ಪಾಪಿಗೆ ಕ್ಷಮೆಯನ್ನೂ ಕೊಡುತ್ತಾನೆ. ಹೀಗೆ ಅಗತ್ಯಕ್ಕೆ ತಕ್ಕ ಸಹಾಯ ಕೊಡುತ್ತಾನೆ.—2 ಪೂರ್ವಕಾಲವೃತ್ತಾಂತ 6:36-39.

ಪಶ್ಚಾತ್ತಾಪವುಳ್ಳ ಆರಾಧಕನೊಬ್ಬನ ಬಿನ್ನಹಗಳಿಗೆ ಯೆಹೋವನು ಸ್ಪಂದಿಸುವನೆಂದು ಸೊಲೊಮೋನನಿಗೆ ಏಕೆ ಅಷ್ಟು ಖಾತ್ರಿಯಿತ್ತು? ತನ್ನ ಪಾರ್ಥನೆಯನ್ನು ಮುಂದುವರಿಸುತ್ತಾ ಸೊಲೊಮೋನನು ಯೆಹೋವನ ಬಗ್ಗೆ ಹೇಳುವುದು: ‘ನೀನೊಬ್ಬನೇ ಮನುಷ್ಯರ ಹೃದಯಗಳನ್ನು ಬಲ್ಲಾತನು.’ ಆತನಿಗೆ ತನ್ನ ನಂಬಿಗಸ್ತ ಆರಾಧಕರಲ್ಲಿ ಪ್ರತಿಯೊಬ್ಬನಿಗೂ ಇರುವ ಉಪದ್ರವ ಇಲ್ಲವೆ ಬಾಧೆ ತಿಳಿದಿದೆ, ಆಗುತ್ತಿರುವ ಸಂಕಟದ ಬಗ್ಗೆ ಆತನಿಗೆ ಚಿಂತೆಯಿದೆ.—1 ಪೂರ್ವಕಾಲವೃತ್ತಾಂತ 28:9.

ಸೊಲೊಮೋನನ ಪ್ರಾರ್ಥನೆಯಿಂದ ನಾವು ಸಾಂತ್ವನ ಪಡೆಯಬಹುದು. ನಮ್ಮ ಅಂತರಂಗದ ಭಾವನೆಗಳನ್ನು ಅಂದರೆ ನಮ್ಮ ‘ಉಪದ್ರವ ಮತ್ತು ದುಃಖ’ ಜೊತೆಮಾನವರಿಗೆ ಅರ್ಥವಾಗದಿರಬಹುದು. (ಜ್ಞಾನೋಕ್ತಿ 14:10) ಆದರೆ ಯೆಹೋವನು ನಮ್ಮ ಹೃದಯವನ್ನು ಬಲ್ಲಾತನು. ಆತನಿಗೆ ನಮ್ಮ ಬಗ್ಗೆ ಅಪಾರ ಕಾಳಜಿಯಿದೆ. ಪ್ರಾರ್ಥನೆಯ ಮುಖಾಂತರ ನಾವು ಆತನಲ್ಲಿ ನಮ್ಮ ಹೃದಯ ತೋಡಿಕೊಳ್ಳುವಲ್ಲಿ, ನಮ್ಮ ಹೊರೆಗಳನ್ನು ಹೊರಲು ಹೆಚ್ಚು ಸುಲಭವಾಗುವುದು. “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎನ್ನುತ್ತದೆ ಬೈಬಲ್‌.—1 ಪೇತ್ರ 5:7. (w10-E 12/01)

[ಪಾದಟಿಪ್ಪಣಿ]

^ ಪ್ಯಾರ. 7 ಬೈಬಲ್‌ ಕಾಲಗಳಲ್ಲಿ, ‘ಕೈಯೆತ್ತುವುದು’ ಅಂದರೆ ಕೈಗಳನ್ನು ಮುಂದೆ ಒಡ್ಡಿ ಅಂಗೈಯನ್ನು ಮೇಲ್ಮುಖವಾಗಿ ಹಿಡಿಯುವುದು ದೇವರಿಗೆ ಪ್ರಾರ್ಥನೆ ಮಾಡುವುದನ್ನು ಸೂಚಿಸುತ್ತಿತ್ತು.—2 ಪೂರ್ವಕಾಲವೃತ್ತಾಂತ 6:13.