ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಅವನು ಯೆಹೋವನ ಪ್ರಸನ್ನತೆಯನ್ನು ಬೇಡಿಕೊಂಡನು’

‘ಅವನು ಯೆಹೋವನ ಪ್ರಸನ್ನತೆಯನ್ನು ಬೇಡಿಕೊಂಡನು’

ದೇವರ ಸಮೀಪಕ್ಕೆ ಬನ್ನಿರಿ

‘ಅವನು ಯೆಹೋವನ ಪ್ರಸನ್ನತೆಯನ್ನು ಬೇಡಿಕೊಂಡನು’

“ನಾನು ಸ್ವಲ್ಪವೂ ಯೋಗ್ಯನಲ್ಲವೆಂದು ನನಗನಿಸಿತು” ಎಂದನು ಒಬ್ಬ ವ್ಯಕ್ತಿ. ಅವನು ದೇವಭಕ್ತ ಕುಟುಂಬದಲ್ಲಿ ಬೆಳೆದಿದ್ದರೂ ತಪ್ಪುದಾರಿಗಿಳಿದಿದ್ದನು. ಅವನು ತನ್ನ ತಪ್ಪನ್ನು ತಿದ್ದಲು ಹೆಜ್ಜೆಗಳನ್ನು ತೆಗೆದುಕೊಂಡಾಗ ಅವನಿಗಿದ್ದ ಭಯವೇನೆಂದರೆ ದೇವರು ತನ್ನನ್ನು ಎಂದೂ ಕ್ಷಮಿಸನು ಎಂದೇ. ಆದರೆ ಪಶ್ಚಾತ್ತಾಪಪಟ್ಟ ಈ ಪಾಪಿಗೆ ಬೈಬಲ್‌ನಲ್ಲಿರುವ ಮನಸ್ಸೆ ಎಂಬವನ ವೃತ್ತಾಂತದಿಂದ ನಿರೀಕ್ಷೆ ಸಿಕ್ಕಿತು. ಅದು 2 ಪೂರ್ವಕಾಲವೃತ್ತಾಂತ 33:1-17ರಲ್ಲಿದೆ. ಹಿಂದೆ ಮಾಡಿದ ಪಾಪಗಳಿಂದಾಗಿ ನೀವೂ ಅಯೋಗ್ಯರೆಂದು ನಿಮಗನಿಸುತ್ತಿರುವಲ್ಲಿ ಮನಸ್ಸೆಯ ಮಾದರಿಯಿಂದ ಸಾಂತ್ವನ ಪಡೆಯಬಲ್ಲಿರಿ.

ಮನಸ್ಸೆ ದೇವಭಕ್ತ ಕುಟುಂಬದಲ್ಲಿ ಬೆಳೆದವನು. ಅವನ ತಂದೆ ಹಿಜ್ಕೀಯ ಯೆಹೂದದ ಪ್ರಖ್ಯಾತ ರಾಜರಲ್ಲಿ ಒಬ್ಬನು. ಈತನ ಆಯುಸ್ಸನ್ನು ದೇವರು ಅದ್ಭುತಕರ ರೀತಿಯಲ್ಲಿ ಹೆಚ್ಚಿಸಿದ ಸುಮಾರು ಮೂರು ವರ್ಷಗಳ ಬಳಿಕ ಮನಸ್ಸೆ ಹುಟ್ಟಿದ್ದನು. (2 ಅರಸುಗಳು 20:1-11) ಹಿಜ್ಕೀಯನು ತನ್ನ ಈ ಮಗನನ್ನು ದೇವರ ಕರುಣೆಯ ವರದಾನವಾಗಿ ದೃಷ್ಟಿಸಿದ್ದನೆಂಬುದರಲ್ಲಿ ಸಂಶಯವಿಲ್ಲ. ಅವನಲ್ಲಿ ಶುದ್ಧಾರಾಧನೆಗಾಗಿ ಪ್ರೀತಿಯನ್ನು ಬೇರೂರಿಸಲೂ ಪ್ರಯತ್ನಿಸಿದ್ದನು. ಆದರೆ ದೇವಭಕ್ತ ಹೆತ್ತವರ ಮಕ್ಕಳು ತಮ್ಮ ತಂದೆತಾಯಿಯ ಹೆಜ್ಜೆಜಾಡನ್ನು ಕೆಲವೊಮ್ಮೆ ಅನುಸರಿಸುವುದಿಲ್ಲ. ಮನಸ್ಸೆಯ ವಿಷಯದಲ್ಲೂ ಹೀಗೆಯೇ ಆಯಿತು.

ತಂದೆ ಸತ್ತಾಗ ಮನಸ್ಸೆಯ ವಯಸ್ಸು ಸುಮಾರು 12. ಆದರೆ ಆಮೇಲೆ ಅವನು ‘ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದದ್ದು’ ನಿಜವಾಗಿ ದುಃಖಕರ. (ವಚನ 1, 2) ಈ ಯುವ ಅರಸನು ಹಾಗೆ ಮಾಡಿದ್ದು, ಸತ್ಯಾರಾಧನೆಯ ಕಡೆಗೆ ಕಿಂಚಿತ್ತೂ ಗೌರವವಿಲ್ಲದ ಸಲಹೆಗಾರರ ಪ್ರಭಾವದಿಂದಾಗಿಯೊ? ಬೈಬಲ್‌ ಹೇಳುವುದಿಲ್ಲ. ಆದರೆ ಅವನು ಅಸಹ್ಯ ವಿಗ್ರಹಾರಾಧನೆ, ಕ್ರೌರ್ಯ ಕೃತ್ಯಗಳನ್ನು ನಡೆಸುವಷ್ಟು ಕೀಳ್ಮಟ್ಟಕ್ಕಿಳಿದಿದ್ದನೆಂದು ಅದು ಹೇಳುತ್ತದೆ. ಅವನು ಮಿಥ್ಯ ದೇವತೆಗಳಿಗೋಸ್ಕರ ಯಜ್ಞವೇದಿಗಳನ್ನು ಕಟ್ಟಿಸಿದನು, ತನ್ನ ಸ್ವಂತ ಪುತ್ರರನ್ನು ಆಹುತಿಕೊಟ್ಟನು, ಭೂತಪ್ರೇತವ್ಯವಹಾರ ನಡೆಸಿದನು ಮತ್ತು ಯೆರೂಸಲೇಮಿನಲ್ಲಿದ್ದ ಯೆಹೋವನ ಆಲಯದೊಳಗೇ ಒಂದು ವಿಗ್ರಹಸ್ತಂಭ ನಿಲ್ಲಿಸಿದನು. ಹಠಮಾರಿಯಾದ ಮನಸ್ಸೆ, ಯಾರ ಅದ್ಭುತವು ತನ್ನ ಜನನವನ್ನು ಸಾಧ್ಯಗೊಳಿಸಿತ್ತೊ ಆ ದೇವರಾದ ಯೆಹೋವನೇ ಪದೇ ಪದೇ ಕೊಟ್ಟ ಎಚ್ಚರಿಕೆಗಳನ್ನು ದುರ್ಲಕ್ಷಿಸಿದನು.—ವಚನ 3-10.

ಕೊನೆಗೆ, ಶತ್ರುಗಳು ಮನಸ್ಸೆಗೆ ಬೇಡಿಹಾಕಿ ಬಾಬೆಲಿಗೆ ಒಯ್ಯುವಂತೆ ಯೆಹೋವನು ಬಿಟ್ಟುಕೊಟ್ಟನು. ಅಲ್ಲಿ ಸೆರೆವಾಸದಲ್ಲಿದ್ದಾಗ ಮನಸ್ಸೆಗೆ ತನ್ನ ನಡವಳಿಕೆಯ ಬಗ್ಗೆ ಯೋಚಿಸಲು ಅವಕಾಶ ಸಿಕ್ಕಿತು. ತಾನು ಪೂಜಿಸುತ್ತಿದ್ದ ವಿಗ್ರಹಗಳು ಶಕ್ತಿಹೀನ, ನಿರ್ಜೀವವೆಂದೂ, ಕಷ್ಟಕಾಲದಲ್ಲಿ ಕೈಕೊಟ್ಟವೆಂದೂ ಅವನಿಗೆ ಆಗ ಮನವರಿಕೆ ಆಗಿದ್ದಿರಬಹುದೊ? ದೇವಭಕ್ತ ತಂದೆ ತನಗೆ ಬಾಲ್ಯದಲ್ಲಿ ಕಲಿಸಿದ್ದ ಸಂಗತಿಗಳನ್ನು ಅವನು ನೆನಪಿಗೆ ತಂದುಕೊಂಡಿದ್ದಿರಬಹುದೊ? ಏನೇ ಆಗಲಿ, ಮನಸ್ಸೆಯ ಮನಸ್ಸು ಬದಲಾಯಿತು. ಬೈಬಲ್‌ ವೃತ್ತಾಂತ ಹೀಗನ್ನುತ್ತದೆ: ‘ಮನಸ್ಸೆಯು ತನ್ನ ದೇವರಾದ ಯೆಹೋವನ ಪ್ರಸನ್ನತೆಯನ್ನು ಬೇಡಿಕೊಂಡನು. ಅವನು ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನನ್ನು ಪ್ರಾರ್ಥಿಸಿದನು.’ (ವಚನ 12, 13) ಆದರೆ ಇಂಥ ಘೋರ ಪಾಪಗಳನ್ನು ನಡೆಸಿದ ವ್ಯಕ್ತಿಗೆ ದೇವರ ಕ್ಷಮೆ ಸಿಗಲು ಸಾಧ್ಯವಿತ್ತೇ?

ಮನಸ್ಸೆಯ ಯಥಾರ್ಥ ಪಶ್ಚಾತ್ತಾಪವು ಯೆಹೋವನ ಮನಸ್ಪರ್ಶಿಸಿತು. ಕರುಣೆತೋರಿಸುವಂತೆ ಮನಸ್ಸೆ ಮಾಡಿದ ಬೇಡಿಕೆಗಳನ್ನು ದೇವರು ಆಲಿಸಿ, “ಅವನನ್ನು ತಿರಿಗಿ ಯೆರೂಸಲೇಮಿಗೆ ಬರಮಾಡಿ ಅರಸುತನವನ್ನು ಕೊಟ್ಟನು.” (ವಚನ 13) ತನ್ನ ಪಶ್ಚಾತ್ತಾಪವನ್ನು ರುಜುಪಡಿಸುತ್ತಾ ಆಮೇಲೆ ಮನಸ್ಸೆ ತನ್ನ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ತನ್ನಿಂದ ಸಾಧ್ಯವಿದ್ದದ್ದೆಲ್ಲವನ್ನು ಮಾಡಿದನು. ತನ್ನ ರಾಜ್ಯದಿಂದ ವಿಗ್ರಹಾರಾಧನೆಯನ್ನು ಅಳಿಸಿಹಾಕಿದನು ಮತ್ತು “ಯೆಹೋವನನ್ನೇ ಸೇವಿಸಬೇಕೆಂದು” ತನ್ನ ಪ್ರಜೆಗಳನ್ನು ಉತ್ತೇಜಿಸಿದನು.—ವಚನ 15-17.

ಹಿಂದೆ ಮಾಡಿದಂಥ ಪಾಪಗಳ ಕಾರಣ ದೇವರ ಕ್ಷಮೆಗೆ ಯೋಗ್ಯರಲ್ಲವೆಂದು ನಿಮಗನಿಸುವಲ್ಲಿ ಮನಸ್ಸೆಯ ಮಾದರಿಯಿಂದ ನಿಮಗೆ ಪ್ರೋತ್ಸಾಹ ಸಿಗುವುದು. ಈ ವೃತ್ತಾಂತವು ದೇವರ ಪ್ರೇರಿತ ವಾಕ್ಯದ ಭಾಗ. (ರೋಮನ್ನರಿಗೆ 15:4) ಈ ಮೂಲಕ, ತಾನು ‘ಕ್ಷಮಿಸುವುದಕ್ಕೆ ಸಿದ್ಧನು’ ಆಗಿದ್ದೇನೆಂದು ಯೆಹೋವನು ನಮಗೆ ತಿಳಿಸಲು ಅಪೇಕ್ಷಿಸುತ್ತಾನೆ. (ಕೀರ್ತನೆ 86:5, NIBV) ಒಬ್ಬ ವ್ಯಕ್ತಿ ಮಾಡಿದ ಪಾಪಕ್ಕೆ ಅಲ್ಲ ಬದಲಾಗಿ ಅವನ ಹೃದಯ ಸ್ಥಿತಿಗೆ ಆತನು ಹೆಚ್ಚು ಗಮನಕೊಡುತ್ತಾನೆ. ಪಾಪಿಯೊಬ್ಬನು ಪಶ್ಚಾತ್ತಾಪಪಟ್ಟು ಪ್ರಾರ್ಥಿಸಿ, ತನ್ನ ತಪ್ಪು ಹಾದಿಯನ್ನು ಬಿಟ್ಟು, ಸರಿಯಾದದ್ದನ್ನೇ ಮಾಡಲು ಪಟ್ಟುಹಿಡಿದು ಪ್ರಯತ್ನಿಸಿದರೆ ಅವನು ಮನಸ್ಸೆಯಂತೆ “ಯೆಹೋವನ ಪ್ರಸನ್ನತೆಯನ್ನು” ಪಡೆದುಕೊಳ್ಳಬಹುದು.—ಯೆಶಾಯ 1:18; 55:6, 7. (w11-E 01/01)