ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೂಜು—ಬೈಬಲ್‌ ಇದನ್ನು ಖಂಡಿಸುತ್ತದೋ?

ಜೂಜು—ಬೈಬಲ್‌ ಇದನ್ನು ಖಂಡಿಸುತ್ತದೋ?

ಜೂಜು—ಬೈಬಲ್‌ ಇದನ್ನು ಖಂಡಿಸುತ್ತದೋ?

ಜನಪ್ರಿಯ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಜೂಜನ್ನು (ಅದರಲ್ಲೂ ಕ್ಯಾಸಿನೋಗಳಲ್ಲಿ ನಡೆಯುವ ಜೂಜಾಟವನ್ನು) ಸೊಗಸುಗಾರರಾದ, ಶ್ರೀಮಂತ, ಸುಸಂಸ್ಕೃತ ಜನರ ಮನರಂಜನೆಯಾಗಿ ಚಿತ್ರಿಸುವುದೇ ಹೆಚ್ಚು. ಆದರೆ ಇದು ನೈಜವಲ್ಲ, ಬರೀ ಕಲ್ಪನೆ ಎಂದು ಪ್ರೇಕ್ಷಕರಲ್ಲಿ ಹೆಚ್ಚಿನವರಿಗೆ ತಿಳಿದಿದೆ.

ವಾಸ್ತವ ಪ್ರಪಂಚದಲ್ಲಾದರೊ ಜೂಜುಗಾರನ ಗಮನ ಸೆಳೆಯಲಿಕ್ಕಾಗಿ ಲಾಟರಿಗಳು, ಕ್ರೀಡೆಯ ಬೆಟ್‌ಗಳು, ಆನ್‌ಲೈನ್‌ ಜೂಜಾಟಗಳು ಕ್ಯಾಸಿನೋಗಳೊಂದಿಗೆ ಸ್ಪರ್ಧೆಗಿಳಿದಿವೆ. ಇಂಟರ್‌ನೆಟ್‌ ಗ್ಯಾಂಬ್ಲಿಂಗ್‌ ಎಂಬ ಪುಸ್ತಕಕ್ಕನುಸಾರ ಜೂಜಾಟ “ಬಹುಮಟ್ಟಿಗೆ ಒಂದು ಸಾರ್ವತ್ರಿಕ ದುಶ್ಚಟವಾಗಿದ್ದು ಅದರ ಆಕರ್ಷಣೆ ಪೊದೆಕಿಚ್ಚಿನಂತೆ ಹರಡಿಕೊಂಡಿದೆ.” ಉದಾಹರಣೆಗೆ ಬಾಜಿ ಕಟ್ಟಿದ ಇಸ್ಪೀಟಾಟವನ್ನು ಟಿವಿ ಮತ್ತು ಇಂಟರ್‌ನೆಟ್‌ ಸಾಮಾನ್ಯ ಕ್ರೀಡೆಯಾಗಿ ಈಗ ಚಿತ್ರಿಸುತ್ತವೆ. ಒಂದು ವಾರ್ತಾಪತ್ರಿಕೆಗನುಸಾರ, ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಇಸ್ಪೀಟ್‌ ಆಟಗಾರರ ಸಂಖ್ಯೆ ಇತ್ತೀಚಿನ 18 ತಿಂಗಳುಗಳಲ್ಲಿ ದುಪ್ಪಟ್ಟಾಗಿದೆ ಎಂಬುದು ಪರಿಣತರ ಅಂದಾಜು.

ಅನಿಶ್ಚಿತ ಫಲಿತಾಂಶದ ಮೇಲೆ ಹಣದ ಬಾಜಿ ಕಟ್ಟುವುದೇ ಜೂಜು. ಬಾಜಿ ಕಟ್ಟುವ ಹಣ ಜೂಜಾಡುವ ವ್ಯಕ್ತಿಯದ್ದೇ ಆಗಿದ್ದು ಅವನು ಜೂಜಿನ ಚಟಕ್ಕೆ ಬೀಳದಿದ್ದಲ್ಲಿ ಜೂಜಾಡುವುದರಲ್ಲಿ ಏನೂ ತಪ್ಪಿಲ್ಲ ಎನ್ನುವುದು ಅನೇಕರ ವಾದ. “ಒಬ್ಬ ವ್ಯಕ್ತಿ ಜೂಜಾಟದಿಂದಾಗಿ ತನ್ನ ಕರ್ತವ್ಯಗಳನ್ನು ನಿರ್ಲಕ್ಷಿಸಿದರೆ ಮಾತ್ರ ಜೂಜನ್ನು ಪಾಪವೆಂದು ಪರಿಗಣಿಸಲಾಗುತ್ತದೆ” ಎನ್ನುತ್ತದೆ ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡಿಯ. ಆದರೆ ಈ ಮಾತನ್ನು ಬೆಂಬಲಿಸುವ ಬೈಬಲಿನ ಯಾವುದೇ ವಚನಗಳನ್ನು ಆ ಎನ್‌ಸೈಕ್ಲಪೀಡಿಯ ಕೊಡುವುದಿಲ್ಲ. ಹಾಗಿರುವಾಗ ಜೂಜಿನ ಬಗ್ಗೆ ಒಬ್ಬ ಕ್ರೈಸ್ತನ ನೋಟವೇನಾಗಿರಬೇಕು? ಬೈಬಲ್‌ ಜೂಜನ್ನು ಮನ್ನಿಸುತ್ತದೋ ಖಂಡಿಸುತ್ತದೋ?

ಗಮನಿಸತಕ್ಕ ವಿಷಯವೇನೆಂದರೆ ಬೈಬಲಿನಲ್ಲಿ ಜೂಜಿನ ಬಗ್ಗೆ ನೇರ ಪ್ರಸ್ತಾಪವಿಲ್ಲ. ಇದರರ್ಥ ಅದರ ಬಗ್ಗೆ ನಮಗೆ ಬೈಬಲಿನಿಂದ ಯಾವ ಮಾರ್ಗದರ್ಶನವೂ ಸಿಗುವುದಿಲ್ಲವೆಂದಲ್ಲ. ಪ್ರತಿಯೊಂದು ಕೆಲಸಕ್ಕೂ ಸನ್ನಿವೇಶಕ್ಕೂ ನಿಯಮಗಳನ್ನಿಡುವ ಬದಲು “ಯೆಹೋವನ ಚಿತ್ತವೇನೆಂಬುದನ್ನು ಗ್ರಹಿಸುತ್ತಾ” ಇರಲು ಬೈಬಲ್‌ ಪ್ರೋತ್ಸಾಹಿಸುತ್ತದೆ. (ಎಫೆಸ 5:17) ಬೈಬಲ್‌ ವಿದ್ವಾಂಸ ಇ. ಡಬ್ಲ್ಯು. ಬುಲಿಂಗರ್‌ರ ಪ್ರಕಾರ, ‘ಗ್ರಹಿಸುವುದು’ ಎಂಬ ಗ್ರೀಕ್‌ ಪದದ ಅರ್ಥ ಒಂದು ವಿಷಯದ ಮಾಹಿತಿಯನ್ನು “ಮಾನಸಿಕ ಕ್ರಿಯೆಯ” ಮೂಲಕ ಮತ್ತು “ಆಳವಾಗಿ ಯೋಚಿಸುವ” ಮೂಲಕ ಕಲೆಹಾಕುವುದಾಗಿದೆ. ಹೀಗೆ ಕ್ರೈಸ್ತನೊಬ್ಬನು ಜೂಜಿಗೆ ಸಂಬಂಧಪಟ್ಟ ಬೈಬಲ್‌ ಮೂಲತತ್ವಗಳನ್ನು ಕಲೆಹಾಕಿ, ಮನನ ಮಾಡುವ ಮೂಲಕ ಆ ವಿಷಯದ ಬಗ್ಗೆ ದೇವರ ಚಿತ್ತವೇನೆಂದು ಗ್ರಹಿಸಬಲ್ಲನು. ಮುಂದಿನ ಚರ್ಚೆಯಲ್ಲಿ ಬರುವ ವಚನಗಳನ್ನೆಲ್ಲ ಓದುವಾಗ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಈ ವಚನ ಜೂಜನ್ನು ಬೆಂಬಲಿಸುತ್ತದೋ? ಜೂಜಿನ ಬಗ್ಗೆ ದೇವರ ನೋಟವೇನೆಂದು ಆತನ ವಾಕ್ಯ ತಿಳಿಸುತ್ತದೆ?’

ಅದೃಷ್ಟದ ಆಕರ್ಷಣೆ

ಜೂಜಿನಲ್ಲಿ ಅನಿಶ್ಚಿತ ಫಲಿತಾಂಶಗಳ ಮೇಲೆ, ವಿಶೇಷವಾಗಿ ಹಣದ ಪಣಕಟ್ಟಲಾಗುವ ಕಾರಣ, ಅದೃಷ್ಟದಲ್ಲಿ (ಘಟನಾವಳಿಯನ್ನು ನಿಯಂತ್ರಿಸುವ ಒಂದು ನಿಗೂಢ ಶಕ್ತಿ ಎನ್ನಲಾಗುವ) ನಂಬಿಕೆಯ ಪಾತ್ರ ದೊಡ್ಡದು. ಉದಾಹರಣೆಗೆ, ಕೆಲವರು ಶುಭ ಸಂಖ್ಯೆಗಳನ್ನು ನೋಡಿ ಲಾಟರಿ ಟಿಕೇಟ್‌ಗಳನ್ನು ಖರೀದಿಸುತ್ತಾರೆ, ಮಾಜಾಂಗ್‌ ಎಂಬ ಚೀನೀ ಪಗಡೆಯಾಟಗಾರರು ಮೂಢನಂಬಿಕೆಯಿಂದ ಕೆಲವೊಂದು ಪದಗಳನ್ನು ಉಚ್ಚರಿಸುವುದಿಲ್ಲ, ಇನ್ನಿತರರು ದಾಳಗಳನ್ನು ಉರುಳಿಸುವ ಮುಂಚೆ ಅವುಗಳ ಮೇಲೆ ಊದುತ್ತಾರೆ. ಇದನ್ನೆಲ್ಲ ಮಾಡುವುದೇಕೆ? ಏಕೆಂದರೆ ಆಟದ ಫಲಿತಾಂಶದ ಮೇಲೆ ಅದೃಷ್ಟ ಪರಿಣಾಮ ಬೀರುತ್ತದೆ ಅಥವಾ ಬೀರಬಹುದು ಎನ್ನುವುದು ಹೆಚ್ಚಿನ ಜೂಜುಗಾರರ ನಂಬಿಕೆ.

ಅದೃಷ್ಟದ ಮೇಲೆ ಭರವಸೆಯಿಡುವುದು ಹಾನಿರಹಿತವೋ? ಪ್ರಾಚೀನ ಇಸ್ರಾಯೇಲಿನ ಜನರಲ್ಲಿ ಕೆಲವರು ಹಾಗೆಂದು ನಂಬಿದ್ದರು. ಅದೃಷ್ಟ ಸುಖಸಮೃದ್ಧಿ ತರುತ್ತದೆಂಬ ವಿಶ್ವಾಸವಿತ್ತು ಅವರಿಗೆ. ಆದರೆ ಯೆಹೋವ ದೇವರಿಗೆ ಇದರ ಬಗ್ಗೆ ಏನನಿಸಿತು? ತನ್ನ ಅನಿಸಿಕೆಯನ್ನು ತಿಳಿಸುತ್ತಾ ಆತನು ತನ್ನ ಪ್ರವಾದಿ ಯೆಶಾಯನ ಮೂಲಕ ಅಂದದ್ದು: ‘ಯೆಹೋವನಾದ ನನ್ನನ್ನು ತೊರೆದು ನನ್ನ ಪವಿತ್ರಪರ್ವತವನ್ನು ಮರೆತು ಶುಭದಾಯಕದೇವತೆಗೆ ಔತಣವನ್ನು ಅಣಿಮಾಡಿ ಗತಿದಾಯಕದೇವತೆಗೆ ಮದ್ಯವನ್ನು ತುಂಬಾ ಬೆರಸುತ್ತೀರಿ.’ (ಯೆಶಾಯ 65:11) ಅದೃಷ್ಟವನ್ನು ನಂಬುವುದು ದೇವರ ದೃಷ್ಟಿಯಲ್ಲಿ ಒಂದು ವಿಧದ ವಿಗ್ರಹಾರಾಧನೆ. ಸತ್ಯಾರಾಧನೆಗೂ ಅದಕ್ಕೂ ಎಳ್ಳಷ್ಟೂ ಹೊಂದಿಕೆ ಇಲ್ಲ. ಅದು ಸತ್ಯ ದೇವರ ಮೇಲಲ್ಲ ಒಂದು ಕಾಲ್ಪನಿಕ ಶಕ್ತಿಯ ಮೇಲೆ ಭರವಸೆಯನ್ನು ಸೂಚಿಸುತ್ತದೆ. ದೇವರ ಈ ದೃಷ್ಟಿಕೋನ ಇಂದಿಗೂ ಬದಲಾಗಿಲ್ಲ.

ಬಹುಮಾನ ಹಣ ಎಲ್ಲಿಂದ?

ಆನ್‌ಲೈನ್‌ನಲ್ಲಿ ಬಾಜಿ ಕಟ್ಟಲಿ, ಲಾಟರಿ ಖರೀದಿಸಲಿ, ಕ್ರೀಡೆಯಲ್ಲಿ ಬೆಟ್‌ ಕಟ್ಟಲಿ, ಕ್ಯಾಸಿನೋಗಳಲ್ಲಿ ಜೂಜಾಡಲಿ ಜೂಜುಗಾರರೆಲ್ಲ ಯಾವುದಕ್ಕಾಗಿ ಸೆಣಸಾಡುತ್ತಾರೋ ಆ ಬಹುಮಾನದ ಹಣ ಎಲ್ಲಿಂದ ಬರುತ್ತದೆ ಎಂಬ ಯೋಚನೆಯೇ ಅವರಿಗಿಲ್ಲ. ಜೂಜಿಗೂ ಕಾನೂನುರೀತ್ಯಾ ವ್ಯಾಪಾರ-ವ್ಯವಹಾರ ಅಥವಾ ಖರೀದಿಗೂ ಇರುವ ವ್ಯತ್ಯಾಸವೇನೆಂದರೆ ಜೂಜಿನಲ್ಲಿ ಜೂಜುಗಾರನು ಬೇರೆ ಆಟಗಾರರಿಗಾಗುವ ನಷ್ಟವನ್ನು ತನ್ನ ಬಹುಮಾನವಾಗಿ ಪಡೆಯಲು ಆಶಿಸುತ್ತಾನೆ. ‘ಕೆನಡಾಸ್‌ ಸೆಂಟರ್‌ ಫಾರ್‌ ಅಡಿಕ್ಷನ್‌ ಆ್ಯಂಡ್‌ ಮೆಂಟಲ್‌ ಹೆಲ್ತ್‌’ ಸಂಸ್ಥೆಗನುಸಾರ “ಒಬ್ಬ ವ್ಯಕ್ತಿ ಲಾಟರಿ ಬಹುಮಾನ ಗೆದ್ದು ಲಕ್ಷಾಧಿಪತಿಯಾಗುವಾಗ ಇನ್ನೆಷ್ಟೋ ಲಕ್ಷಾಂತರ ಮಂದಿಗೆ ನಷ್ಟವಾಗುತ್ತದೆ!” ಇದರ ಬಗ್ಗೆ ದೇವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಕ್ರೈಸ್ತನೊಬ್ಬನಿಗೆ ಯಾವ ಬೈಬಲ್‌ ಮೂಲತತ್ವಗಳು ನೆರವಾಗುತ್ತವೆ?

ದೇವರು ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಕೊಟ್ಟ ದಶಾಜ್ಞೆಯಲ್ಲಿ ಕೊನೆಯದು ಹೀಗಿತ್ತು: “ಮತ್ತೊಬ್ಬನ ಹೆಂಡತಿ ಗಂಡಾಳು ಹೆಣ್ಣಾಳು ಎತ್ತು ಕತ್ತೆ ಮುಂತಾದ ಯಾವದನ್ನೂ ಆಶಿಸಬಾರದು.” (ವಿಮೋಚನಕಾಂಡ 20:17) ಇತರರ ಸ್ವತ್ತು, ಸಂಪತ್ತು, ಹಣವನ್ನು ಆಶಿಸುವುದು ಗಂಭೀರ ಪಾಪವಾಗಿತ್ತು. ಎಷ್ಟೆಂದರೆ, ಬೇರೊಬ್ಬನ ಪತ್ನಿಯನ್ನು ಆಶಿಸುವಂಥ ಗಂಭೀರ ತಪ್ಪಿನೊಂದಿಗೆ ಅದನ್ನು ಸೇರಿಸಲಾಗಿತ್ತು. ಅನೇಕ ಶತಮಾನಗಳ ನಂತರ ಯೇಸುವಿನ ಶಿಷ್ಯ ಪೌಲನು ಇದೇ ಆಜ್ಞೆಯನ್ನು ಕ್ರೈಸ್ತರಿಗೆ ಅನ್ವಯಿಸುತ್ತಾ ‘ನೀವು ದುರಾಶೆಪಡಬಾರದು’ ಅಂದನು. (ರೋಮನ್ನರಿಗೆ 7:7) ಇನ್ನೊಬ್ಬನಿಗಾದ ನಷ್ಟವನ್ನು ತನ್ನ ಪ್ರಯೋಜನಕ್ಕಾಗಿ ಗಳಿಸಲು ಪ್ರಯತ್ನಿಸುವ ಕ್ರೈಸ್ತನೊಬ್ಬನು ದುರಾಶೆಗೆ ದೋಷಿಯಾಗಲಾರನೇ?

ಅಂಕಣಕಾರರಾದ ಜೆ. ಫಿಲಿಪ್‌ ವೋಗೆಲ್‌ ಬರೆಯುವುದು: “ಜೂಜುಗಾರರಲ್ಲಿ [ಹೆಚ್ಚಿನವರು] ಒಪ್ಪಲಿ ಒಪ್ಪದಿರಲಿ ಆಟದ ಕೊನೆ ತನಕ, ಅದು ಕೆಲವೇ ಡಾಲರುಗಳ ಆಟವಾಗಿದ್ದರೂ ತಮಗೆ ಅನಿರೀಕ್ಷಿತ ಧನಲಾಭ ಸಿಗುವುದೆಂದು ಅವರು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿರುತ್ತಾರೆ.” ಯಾವ ಪ್ರಯತ್ನವೂ ಇಲ್ಲದೆ ಕೂತಲ್ಲೇ ಐಶ್ವರ್ಯಗಳಿಸುವ ಕನಸು ಅವರದು. ಕ್ರೈಸ್ತನೊಬ್ಬನು “ಕೈಯಿಂದ ಒಳ್ಳೇ ಕೆಲಸವನ್ನು ಮಾಡುವ ಮೂಲಕ ಕಷ್ಟಪಟ್ಟು ದುಡಿಯಲಿ; ಆಗ ಅಗತ್ಯದಲ್ಲಿರುವ ಒಬ್ಬನಿಗೆ ಕೊಡಲು ಅವನ ಬಳಿ ಏನಾದರೂ ಇರುವುದು” ಎಂದು ಬೈಬಲ್‌ ಕೊಡುವ ಬುದ್ಧಿವಾದಕ್ಕೆ ಇದು ವಿರುದ್ಧ. (ಎಫೆಸ 4:28) ಅಲ್ಲದೆ ಅಪೊಸ್ತಲ ಪೌಲನು ಸ್ಪಷ್ಟವಾಗಿ ಅಂದದ್ದು: “ಕೆಲಸಮಾಡಲು ಇಷ್ಟವಿಲ್ಲದವನು ಊಟವನ್ನೂ ಮಾಡದಿರಲಿ.” ಪೌಲನು ಮತ್ತೂ ಹೇಳಿದ್ದು: ‘ಅವನು ಕೆಲಸವನ್ನು ಮಾಡುತ್ತಾ ತಾನು ಸಂಪಾದಿಸುವ ಆಹಾರವನ್ನು ಊಟಮಾಡಬೇಕು.’ (2 ಥೆಸಲೊನೀಕ 3:10, 12) ಆದರೆ ಜೂಜಿನ ಕುರಿತೇನು? ಅದನ್ನು ಒಂದು ಕಾನೂನುಬದ್ಧ ಕೆಲಸವೆಂದು ಪರಿಗಣಿಸಬಹುದೋ?

ಜೂಜು ಗಾಢ ಏಕಾಗ್ರತೆಯ ಒಂದು ಆಟವಾಗಿದೆ. ಆದರೂ ಬಹುಮಾನವಾಗಿ ಕೈಸೇರುವ ಯಾವುದೇ ಮೊತ್ತವು ಕೈಯಾರೆ ದುಡಿದು ಸಂಪಾದಿಸಿದ ಹಣವಲ್ಲ ಅಥವಾ ಕೆಲಸಕ್ಕೋ ಸೇವೆಗೋ ಸಿಕ್ಕಿದ ಪ್ರತಿಫಲವೂ ಅಲ್ಲ, ಅದನ್ನು ಗೆಲ್ಲಲಾಗಿದೆ. ಜೂಜಾಟದಲ್ಲಿ ಅಂತಿಮ ಫಲಿತಾಂಶ ಅನಿರೀಕ್ಷಿತ, ಇಂದೊ ಮುಂದೊ ಅದೃಷ್ಟದ ಬಾಗಲು ತೆರೆಯುತ್ತದೆಂಬ ನಿರೀಕ್ಷೆಯಲ್ಲೇ ಜನರು ಆಡುತ್ತಿರುತ್ತಾರೆ. ಚುಟುಕಾಗಿ ಹೇಳುವುದಾದರೆ ಜೂಜುಗಾರನಿಗೆ ಕೆಲಸ ಮಾಡದೆ ಹಣ ಗಳಿಸುವ ಭ್ರಾಂತಿ. ಆದರೆ ನಿಯತ್ತಿನಿಂದ ಕೆಲಸಮಾಡಿ ಹಣಗಳಿಸುವಂತೆ ಬೈಬಲ್‌ ನಿಜ ಕ್ರೈಸ್ತರನ್ನು ಪ್ರೋತ್ಸಾಹಿಸುತ್ತದೆ. “ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ [ಕೆಲಸದಲ್ಲಿ, NW] ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ” ಎಂದು ವಿವೇಕಿ ರಾಜ ಸೊಲೊಮೋನ ಬರೆದನು. ಅವನು ಮತ್ತೂ ಹೇಳಿದ್ದು: “ಇದು ದೇವರಿಂದಾಯಿತೆಂಬದನ್ನೂ ಕಂಡುಕೊಂಡೆನು.” (ಪ್ರಸಂಗಿ 2:24) ಹೌದು ದೇವರ ಸೇವಕರು ತಮ್ಮ ನಿರೀಕ್ಷೆಯನ್ನು ಹಣಗಳಿಸುವ ಸುಲಭ ವಿಧಾನಗಳ ಮೇಲೆ ಇಲ್ಲವೆ ಭ್ರಮೆಗಳ ಮೇಲಿಡುವುದಿಲ್ಲ ಬದಲಾಗಿ ಸಂತೋಷ, ಆಶೀರ್ವಾದಗಳಿಗಾಗಿ ದೇವರ ಮೇಲೆ ಭರವಸೆ ಇಡುತ್ತಾರೆ.

‘ಉರ್ಲಿಗೆ’ ಬೀಳದಿರಿ

ಒಂದುವೇಳೆ ಆಟಗಾರನು ಎದುರಾಳಿಗಳನ್ನು ಸೋಲಿಸಿ ಗೆದ್ದರೂ ಅವನು ಕೇವಲ ಕ್ಷಣಿಕ ಸಂಭ್ರಮವನ್ನು ಮಾತ್ರವೇ ಅಲ್ಲ, ಜೂಜಿನ ದೀರ್ಘಕಾಲಿಕ ದುಷ್ಪರಿಣಾಮಗಳನ್ನೂ ಪರಿಗಣಿಸುವುದು ಸೂಕ್ತ. ಏಕೆಂದರೆ “ಬೇಗನೆ ಬಾಚಿಕೊಂಡ ಸ್ವಾಸ್ತ್ಯವು ಕೊನೆಯಲ್ಲಿ ಶುಭವನ್ನು ಹೊಂದದು” ಎನ್ನುತ್ತದೆ ಜ್ಞಾನೋಕ್ತಿ 20:21. ಲಾಟರಿ ಗೆದ್ದ ಅನೇಕರು ಹಾಗೂ ಇತರ ಜೂಜುಕೋರರು ತಾವು ಗಳಿಸಿದ ಹಣದಿಂದ ತಮಗೇನೂ ಸಂತೋಷ ಲಭಿಸಲಿಲ್ಲವೆಂದು ವಿಷಾದಿಸುತ್ತಾರೆ. ಆದ್ದರಿಂದ ನಮ್ಮ ನಿರೀಕ್ಷೆಯನ್ನು “ಅನಿಶ್ಚಿತವಾದ ಐಶ್ವರ್ಯದ ಮೇಲಲ್ಲ, ನಮ್ಮ ಆನಂದಕ್ಕಾಗಿ ನಮಗೆ ಎಲ್ಲವನ್ನೂ ಹೇರಳವಾಗಿ ಒದಗಿಸುವ ದೇವರ ಮೇಲೆ ಇಡುವಂತೆ” ಬೈಬಲ್‌ ಕೊಡುವ ಬುದ್ಧಿವಾದಕ್ಕೆ ಕಿವಿಗೊಡುವುದು ಎಷ್ಟು ಒಳ್ಳೇದು.—1 ತಿಮೊಥೆಯ 6:17.

ಜೂಜಿನಲ್ಲಿ ಬರೇ ಸೋಲು-ಗೆಲುವು ಮಾತ್ರವೇ ಇಲ್ಲ, ಅದಕ್ಕೆ ಹೆಚ್ಚಿನ ಕರಾಳ ಮುಖವೊಂದೂ ಇದೆ. “ಐಶ್ವರ್ಯವಂತರಾಗಬೇಕೆಂದು ದೃಢನಿರ್ಧಾರಮಾಡಿಕೊಂಡಿರುವವರು ಪ್ರಲೋಭನೆಯಲ್ಲಿಯೂ ಉರ್ಲಿನಲ್ಲಿಯೂ ಬುದ್ಧಿಹೀನವಾದ ಮತ್ತು ಹಾನಿಕರವಾದ ಆಶೆಗಳಲ್ಲಿಯೂ ಬೀಳುತ್ತಾರೆ; ಇವು ಅವರನ್ನು ನಾಶನ ಮತ್ತು ಧ್ವಂಸದಲ್ಲಿ ಮುಳುಗಿಸುತ್ತವೆ” ಎನ್ನುತ್ತದೆ ದೇವರ ವಾಕ್ಯವಾದ ಬೈಬಲ್‌. (1 ತಿಮೊಥೆಯ 6:9) ಬೇಟೆಯನ್ನು ಹಿಡಿಯಲಿಕ್ಕಾಗಿ ಉರ್ಲನ್ನು ರಚಿಸಲಾಗುತ್ತದೆ. ಒಂದು ಸಣ್ಣ ಮೊತ್ತದ ಪಣಕಟ್ಟಿಯೋ ಒಂದೆರಡು ಸಲ ಆಡಿ ನೋಡೋಣವೆಂದೋ ಯೋಚಿಸಿ ಜೂಜಿಗಿಳಿದ ಅಸಂಖ್ಯಾತ ಜನರು ಆ ಉರ್ಲಿನಲ್ಲಿ ಸಿಕ್ಕಿಬಿದ್ದು ಜೂಜಿನ ಚಟದಿಂದ ಹೊರಬರಲು ಅಶಕ್ತರಾಗಿದ್ದಾರೆ. ಜೂಜು ಅವರ ಉದ್ಯೋಗಕ್ಕೆ ಕೊಳ್ಳಿಯಿಟ್ಟು, ಪ್ರಿಯರನ್ನು ನೋಯಿಸಿ, ಕುಟುಂಬಗಳನ್ನೇ ನುಚ್ಚುನೂರು ಮಾಡಿದೆ.

ಇಲ್ಲಿಯ ವರೆಗೆ ಜೂಜಿನ ಸಂಬಂಧದಲ್ಲಿ ಅನೇಕ ಬೈಬಲ್‌ ವಚನಗಳನ್ನು ಚರ್ಚಿಸಿದ ಬಳಿಕ ಆ ಕುರಿತು ದೇವರ ದೃಷ್ಟಿಕೋನ ಏನೆಂದು ನೀವೀಗ ಗ್ರಹಿಸಿಕೊಂಡಿರೋ? “ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡುವುದನ್ನು ಬಿಟ್ಟು, ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತವು ಯಾವುದೆಂದು ಪರಿಶೋಧಿಸಿ ತಿಳಿದುಕೊಳ್ಳುವಂತೆ ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿರಿ” ಎಂದು ಅಪೊಸ್ತಲ ಪೌಲನು ತನ್ನ ಜೊತೆ ಕ್ರೈಸ್ತರನ್ನು ಉತ್ತೇಜಿಸಿದನು. (ರೋಮನ್ನರಿಗೆ 12:2) ಕ್ರೈಸ್ತನ ಜೀವನವನ್ನು ದೇವರ ಚಿತ್ತ ಮಾರ್ಗದರ್ಶಿಸಬೇಕೇ ಹೊರತು ಜನಪ್ರಿಯ ಅಭಿಪ್ರಾಯವಲ್ಲ. ಜೂಜು ಎಂಬ ಉರ್ಲಿನ ದುಷ್ಪರಿಣಾಮಗಳನ್ನು ನಾವು ಅನುಭವಿಸದೇ ಜೀವನವನ್ನು ಆನಂದಿಸಬೇಕೆಂದು ‘ಸಂತೋಷದ ದೇವರಾಗಿರುವ’ ಯೆಹೋವನು ಬಯಸುತ್ತಾನೆ.—1 ತಿಮೊಥೆಯ 1:11. (w11-E 03/01)

[ಪುಟ 32ರಲ್ಲಿರುವ ಸಂಕ್ಷಿಪ್ತ ವಿವರ]

ದೇವರ ಸೇವಕರು ನಿಯತ್ತಿನಿಂದ ಕೆಲಸಮಾಡಿ ಹಣಗಳಿಸುತ್ತಾರೆ

[ಪುಟ 31ರಲ್ಲಿರುವ ಚೌಕ]

ಗೆಲ್ಲುವ ಸಂಭ್ರಮ

ಜೂಜು ಮೆಲ್ಲಮೆಲ್ಲನೆ ಅಭ್ಯಾಸವಾಗಿ ಕೊನೆಗೆ ಸುಲಭವಾಗಿ ಚಟವಾಗಿ ಬಿಡುತ್ತದೋ? ಸೋಲು-ಗೆಲುವಿಗೆ ಜೂಜುಗಾರರು ತೋರಿಸುವ ಪ್ರತಿಕ್ರಿಯೆಯ ಬಗ್ಗೆ ಅಧ್ಯಯನ ನಡೆಸುತ್ತಾ ಡಾಕ್ಟರ್‌ ಹಾನ್ಸ್‌ ಬ್ರಿಟೆರ್‌ ಗಮನಿಸಿದ್ದೇನೆಂದರೆ, “ಜೂಜಿನಲ್ಲಿ ಬಹುಮಾನ ಧನ ಗೆದ್ದಾಗ ಮೆದುಳಲ್ಲಾಗುವ ಉದ್ದೀಪನವೂ ಕೋಕೇನ್‌ ಸೇವಿಸಿದಾಗ ಕೋಕೇನ್‌ ವ್ಯಸನಿಯಲ್ಲಾಗುವ ಉದ್ದೀಪನವೂ ಒಂದೇ ಆಗಿದೆ.”

[ಪುಟ 31ರಲ್ಲಿರುವ ಚಿತ್ರ]

ಜೂಜುಗಾರರು ಗೆಲ್ಲಲು ಆಶಿಸುತ್ತಿರುವ ಹಣ ಯಾರದ್ದು?