ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವೃದ್ಧರು ಪುನಃ ತರುಣರಾಗುವರೋ?

ವೃದ್ಧರು ಪುನಃ ತರುಣರಾಗುವರೋ?

ದೇವರ ಸಮೀಪಕ್ಕೆ ಬನ್ನಿರಿ

ವೃದ್ಧರು ಪುನಃ ತರುಣರಾಗುವರೋ?

ವೃದ್ಧಾಪ್ಯವನ್ನು ಯಾರು ತಾನೇ ಇಷ್ಟಪಡುವರು? ಸುಕ್ಕುಬಿದ್ದ ಚರ್ಮ, ಮಬ್ಬಾದ ದೃಷ್ಟಿ, ಕೆಪ್ಪಾದ ಕಿವಿ, ನಡುಗುವ ಕೈಕಾಲು ಇವೇ ಮುದಿತನದ ಪಾಡು. ‘ಯೌವನದಲ್ಲಿ ಆನಂದಿಸುವ ಸಾಮರ್ಥ್ಯದೊಂದಿಗೆ ದೇವರು ನಮ್ಮನ್ನು ನಿರ್ಮಿಸಿದರೂ ಕೊನೆಗೆ ನಮಗೆ ವೃದ್ಧಾಪ್ಯದ ಕಷ್ಟಗಳು ಬರುವುದೇಕೆ?’ ಎಂದು ನೀವು ಯೋಚಿಸಬಹುದು. ಆದರೆ ಸಂತಸದ ಸಂಗತಿಯೇನೆಂದರೆ ನಾವು ಹೀಗೆ ಕಷ್ಟಪಡಬೇಕೆಂಬುದು ದೇವರ ಉದ್ದೇಶವಲ್ಲ. ಮುದಿತನದ ಅವಸ್ಥೆಯಿಂದ ನಮ್ಮನ್ನು ಬಿಡಿಸಲಿಕ್ಕಾಗಿ ದೇವರು ಪ್ರೀತಿಯಿಂದ ಉದ್ದೇಶಿಸಿದ್ದಾನೆ! ಬೈಬಲಿನಲ್ಲಿ ತಿಳಿಸಿದ ಯೋಬನೆಂಬ ದೇವಭಕ್ತನಿಗೆ ಹೇಳಲಾದ ಮಾತುಗಳನ್ನು ಗಮನಿಸಿ. ಅವು ಯೋಬ 33:24, 25ರಲ್ಲಿವೆ.

ಯೆಹೋವನು ಪ್ರೀತಿಸುತ್ತಿದ್ದ ನಿಷ್ಠಾವಂತ ಯೋಬನ ಪರಿಸ್ಥಿತಿಯನ್ನು ಪರಿಗಣಿಸಿ. ಈತನ ನಿಷ್ಠೆಯ ಬಗ್ಗೆ ಸೈತಾನನು ಸಂದೇಹ ವ್ಯಕ್ತಪಡಿಸಿದ್ದು ಅವನಿಗೆ ತಿಳಿದಿರಲಿಲ್ಲ. ಅವನು ಸ್ವಾರ್ಥ ಕಾರಣಗಳಿಗಾಗಿ ಮಾತ್ರವೇ ದೇವರ ಸೇವೆಮಾಡುತ್ತಿದ್ದಾನೆಂದು ಸೈತಾನನು ಆರೋಪಿಸಿದನು. ಆದರೆ ಯೆಹೋವನಿಗೆ ಯೋಬನ ಮೇಲೆ ವಿಶ್ವಾಸವಿದ್ದದರಿಂದ ಮತ್ತು ಯಾವುದೇ ಹಾನಿಯಾದರೂ ಅದನ್ನು ಸರಿಪಡಿಸುವ ಶಕ್ತಿಯಿದ್ದದರಿಂದ ಯೋಬನನ್ನು ಪರೀಕ್ಷಿಸಲು ಸೈತಾನನಿಗೆ ಅನುಮತಿ ನೀಡಿದನು. ಆಗ ಸೈತಾನನು “ಯೋಬನ ಅಂಗಾಲು ಮೊದಲುಗೊಂಡು ನಡುನೆತ್ತಿಯ ವರೆಗೂ ಕೆಟ್ಟ ಕುರುಗಳನ್ನು ಹುಟ್ಟಿಸಿ ಅವನನ್ನು ಬಾಧಿಸಿದನು.” (ಯೋಬ 2:7) ಯೋಬನ ಕುರುಗಳಲ್ಲಿ ಹುಳಗಳಾದವು, ಚರ್ಮ ಬಿರಿದು ಕರಿದಾಗಿ ಉದುರುತ್ತಿತ್ತು. (ಯೋಬ 7:5; 30:17, 30) ಅವನ ನೋವು ಯಾತನೆಯನ್ನು ಊಹಿಸಬಲ್ಲಿರಾ? ಆದರೂ ಯೋಬನು ನಂಬಿಗಸ್ತನಾಗಿ ಉಳಿದು ಹೀಗಂದನು: “ಸಾಯುವ ತನಕ ನನ್ನ ಯಥಾರ್ಥತ್ವದ ಹೆಸರನ್ನು ಕಳಕೊಳ್ಳೆನು.”—ಯೋಬ 27:5.

ಆದರೆ ಯೋಬನು ಗಂಭೀರ ತಪ್ಪನ್ನು ಮಾಡಿದನು. ತನ್ನ ಸಾವು ಹತ್ತಿರವಾಗುತ್ತಿದೆಯೆಂದು ಅವನಿಗನಿಸಿದಾಗ ತನ್ನನ್ನೇ ವಿಪರೀತವಾಗಿ ಸಮರ್ಥಿಸಿಕೊಳ್ಳುತ್ತಾ ‘ದೇವರಿಗಿಂತಲೂ ತಾನೇ ನ್ಯಾಯವಂತನೆಂದು ಎಣಿಸಿಕೊಂಡನು.’ (ಯೋಬ 32:2) ಆಗ ದೇವರ ವಕ್ತಾರ ಎಲೀಹು ಅವನನ್ನು ತಿದ್ದಿದನು. ಅದರೊಂದಿಗೆ ದೇವರ ಒಂದು ಸಕಾರಾತ್ಮಕ ಸಂದೇಶವನ್ನೂ ಕೊಟ್ಟನು: “ಈಡು ಸಿಕ್ಕಿತು, ಅಧೋಲೋಕಕ್ಕೆ [ಸಮಾಧಿಗೆ] ಇಳಿಯದಂತೆ ಇವನನ್ನು [ಯೋಬನನ್ನು] ರಕ್ಷಿಸು ಎಂದು ಅಪ್ಪಣೆಕೊಟ್ಟರೆ ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವದು, ಅವನು ಪುನಃ ಎಳೆಯತನದ ದಿನಗಳನ್ನು ಅನುಭವಿಸುವನು.” (ಯೋಬ 33:24, 25) ಈ ಮಾತುಗಳು ಯೋಬನ ಮನಸ್ಸಿನಲ್ಲಿ ನಿರೀಕ್ಷೆಯನ್ನು ತುಂಬಿಸಿರಬೇಕು. ಅವನು ಸಾಯುವ ತನಕವೂ ಹೀಗೆ ಯಾತನೆ ಪಡಬೇಕಾಗಿರಲಿಲ್ಲ. ಅವನು ಪಶ್ಚಾತ್ತಾಪ ಪಟ್ಟಲ್ಲಿ ಅವನಿಗಾಗಿ ಕೊಡಲಾಗುವ ಈಡನ್ನು ಇಲ್ಲವೆ ವಿಮೋಚನಾ ಮೌಲ್ಯವನ್ನು ದೇವರು ಸ್ವೀಕರಿಸಿ ಅವನನ್ನು ಅವನ ಕಷ್ಟಗಳಿಂದ ಪಾರುಮಾಡಲು ಸಿದ್ಧನಿದ್ದನು. *

ಕೊಡಲಾದ ತಿದ್ದುಪಾಟನ್ನು ಯೋಬನು ದೀನತೆಯಿಂದ ಸ್ವೀಕರಿಸಿ ಪಶ್ಚಾತ್ತಾಪಪಟ್ಟನು. (ಯೋಬ 42:6) ಯೋಬನಿಗಾಗಿ ಕೊಡಲಾದ ಈಡನ್ನು ಯೆಹೋವನು ಸ್ವೀಕರಿಸಿದನೆಂಬುದು ವ್ಯಕ್ತ. ಆ ಈಡು ಯೋಬನ ತಪ್ಪನ್ನು ಮುಚ್ಚುವಂತೆ ಮತ್ತು ಅವನನ್ನು ಪೂರ್ವಸ್ಥಿತಿಗೆ ತಂದು ಪ್ರತಿಫಲ ಕೊಡುವಂತೆ ದೇವರಿಗೆ ದಾರಿಮಾಡಿತು. ಯೆಹೋವನು “ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಹೆಚ್ಚಾಗಿ ಆಶೀರ್ವದಿಸಿದನು.” (ಯೋಬ 42:12-17) ಯೋಬನಿಗೆ ಸಿಕ್ಕಿದ ಬೇರೆ ಬೇರೆ ಆಶೀರ್ವಾದಗಳ ಜೊತೆಗೆ ಅವನ ಅಸಹ್ಯ ರೋಗವೂ ಗುಣವಾಗಿ ಅವನ ದೇಹವು ‘ಬಾಲ್ಯಕ್ಕಿಂತಲೂ ಕೋಮಲವಾದಾಗ’ ಅವನಿಗಾದ ಉಪಶಮನವನ್ನು ಸ್ವಲ್ಪ ಊಹಿಸಿನೋಡಿ!

ಯೋಬನಿಗಾಗಿ ದೇವರು ಸ್ವೀಕರಿಸಿದ ಈಡಿನ ಮೌಲ್ಯ ಸೀಮಿತವಾಗಿತ್ತು. ಹಾಗಾಗಿ ಆದಾಮನಿಂದ ಬಾಧ್ಯತೆಯಾಗಿ ಬಂದ ಪಾಪ ಅವನಲ್ಲಿ ಹಾಗೇ ಉಳಿಯಿತು ಮತ್ತು ಕಾಲಾನಂತರ ಅವನು ಸತ್ತುಹೋದನು. ನಮಗಾದರೋ ಅತ್ಯುತ್ತಮವಾದ ಈಡು ಅಥವಾ ವಿಮೋಚನಾ ಮೌಲ್ಯ ಲಭ್ಯವಿದೆ. ಯೆಹೋವನು ತನ್ನ ಮಗನಾದ ಯೇಸುವನ್ನು ನಮ್ಮೆಲ್ಲರಿಗೋಸ್ಕರ ಪ್ರೀತಿಯಿಂದ ವಿಮೋಚನಾ ಮೌಲ್ಯವಾಗಿ ಕೊಟ್ಟನು. (ಮತ್ತಾಯ 20:28; ಯೋಹಾನ 3:16) ಅದರಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನಿಗೂ ಭೂಮಿಯ ಮೇಲೆ ಪರದೈಸಿನಲ್ಲಿ ಶಾಶ್ವತವಾಗಿ ಜೀವಿಸುವ ಪ್ರತೀಕ್ಷೆ ಇದೆ. ಆ ಹೊಸ ಲೋಕದಲ್ಲಿ ದೇವರು ನಂಬಿಗಸ್ತ ಮಾನವರನ್ನು ಮುದಿತನದ ಅವಸ್ಥೆಯಿಂದ ಮುಕ್ತಗೊಳಿಸಿ ತರುಣರನ್ನಾಗಿ ಮಾಡುವನು. ಹೀಗೆ ವೃದ್ಧರ ‘ದೇಹ ಬಾಲ್ಯಕ್ಕಿಂತಲೂ ಕೋಮಲವಾಗುವ’ ದಿನವನ್ನು ನೀವು ಕಣ್ಣಾರೆ ಕಾಣುವಂತಾಗಲು ಏನು ಮಾಡಬೇಕೆಂಬದನ್ನು ಏಕೆ ಕಲಿಯಬಾರದು? (w11-E 04/01)

[ಪಾದಟಿಪ್ಪಣಿ]

^ ಪ್ಯಾರ. 5 ಇಲ್ಲಿ ಈಡು ಎಂಬ ಪದಕ್ಕೆ ಬಳಸಲಾದ ಹೀಬ್ರು ಪದದ ಅರ್ಥ “ಮುಚ್ಚಳ.” ಯೋಬನಿಗಾಗಿ ಕೊಡಲಾದ ಈಡು ಒಂದು ಪ್ರಾಣಿ ಯಜ್ಞವಾಗಿದ್ದಿರಬಹುದು. ಅದು ಅವನ ತಪ್ಪನ್ನು ಮುಚ್ಚಲಿಕ್ಕಾಗಿ ಅಂದರೆ ಅವನ ತಪ್ಪಿನ ಪ್ರಾಯಶ್ಚಿತ್ತವಾಗಿ ದೇವರು ಸ್ವೀಕರಿಸಲಿದ್ದನು.—ಯೋಬ 1:5.