ಶಿಶುವಿನ ಆಗಮನ ದಂಪತಿಯ ಮೇಲೆ ಬೀರುವ ಪರಿಣಾಮ
ಕುಟುಂಬ ಸಂತೋಷಕ್ಕೆ ಕೀಲಿಕೈ
ಶಿಶುವಿನ ಆಗಮನ ದಂಪತಿಯ ಮೇಲೆ ಬೀರುವ ಪರಿಣಾಮ
ಚಾರ್ಲ್ಸ್: * “ನಮ್ಮ ಮಗಳು ಹುಟ್ಟಿದಾಗ ನಾನು ಮತ್ತು ಮೇರಿ ಬಹಳ ಸಂಭ್ರಮಿಸಿದ್ದೆವು. ಆದರೆ ಅವಳು ಹುಟ್ಟಿದ ಮೇಲೆ ಕೆಲವು ತಿಂಗಳು ನಾನು ನಿದ್ದೆಗೆಟ್ಟ ರಾತ್ರಿಗಳಿಗೆ ಲೆಕ್ಕವೇ ಇಲ್ಲ. ನಮ್ಮ ಪುಟ್ಟಿಯನ್ನು ಹೀಗೆ ನೋಡಿಕೊಳ್ಳಬೇಕು, ಹೀಗೆ ಬೆಳೆಸಬೇಕೆಂದು ಮುಂಚೆಯೇ ಎಲ್ಲಾ ಯೋಚಿಸಿಟ್ಟಿದ್ದೆವು, ಆದರೆ ಅದೆಲ್ಲ ತಟ್ಟನೆ ತಲೆಕೆಳಗಾಯಿತು.”
ಮೇರಿ: “ನಮ್ಮ ಮಗು ಹುಟ್ಟಿದಾಕ್ಷಣ ನನ್ನ ಬದುಕಿನ ಹಿಡಿತವೂ ತಪ್ಪಿತು. ಬಾಟಲಿಗೆ ಹಾಲು ತುಂಬಿಸುವುದು, ಡಯಪರ್ ಬದಲಾಯಿಸುವುದು, ಮಗುವನ್ನು ಸಮಾಧಾನಪಡಿಸುವುದು ಇದೇ ನನ್ನ ಚಿಂತೆಯಾಗಿತ್ತು. ಬಹಳಷ್ಟು ಹೊಂದಾಣಿಕೆ ಮಾಡಬೇಕಾಯಿತು. ನನ್ನ ಗಂಡನೊಂದಿಗಿನ ಸಂಬಂಧ ಮುಂಚಿನಂತಾಗಲು ತಿಂಗಳುಗಳೇ ಹಿಡಿದವು.”
ಜೀವನದ ಅತ್ಯಾನಂದಗಳಲ್ಲಿ ಮಕ್ಕಳನ್ನು ಹಡೆಯುವುದು ಒಂದು ಎಂಬದನ್ನು ಹೆಚ್ಚಿನವರು ಒಪ್ಪುತ್ತಾರೆ. ಮಕ್ಕಳು ದೇವರಿಂದ ಬಂದ ಬಹುಮಾನ ಎಂದು ಬೈಬಲ್ ಬಣ್ಣಿಸುತ್ತದೆ. (ಕೀರ್ತನೆ 127:3) ಚಾರ್ಲ್ಸ್ ಮತ್ತು ಮೇರಿಯಂಥ ಹೊಸ ಹೆತ್ತವರಿಗೆ ಮಕ್ಕಳು ತಮ್ಮ ದಾಂಪತ್ಯದ ಮೇಲೆ ಅನಿರೀಕ್ಷಿತ ಪರಿಣಾಮಗಳನ್ನು ಬೀರಬಲ್ಲರೆಂದು ತಿಳಿದಿದೆ. ಉದಾಹರಣೆಗೆ, ಮೊದಲ ಬಾರಿ ತಾಯಿಯಾದವಳು ಯಾವಾಗಲೂ ತನ್ನ ಕಂದನಿಗೇ ಗಮನಕೊಡುತ್ತಿರಬಹುದು ಮತ್ತು ತನ್ನ ಮೈಮನಸ್ಸು ನವಜಾತ ಶಿಶುವಿನ ಚಿಕ್ಕಪುಟ್ಟ ಕೂಗಿಗೂ ಸ್ಪಂದಿಸುವುದನ್ನು ನೋಡಿ ಬೆರಗಾಗಬಹುದು. ತಂದೆಯೂ ತನ್ನ ಹೆಂಡತಿ ಹಾಗೂ ಕೂಸಿನ ನಡುವಿನ ಬಂಧವನ್ನು ನೋಡಿ ಅಚ್ಚರಿಪಡಬಹುದು. ಆದರೆ ಪತ್ನಿ ತನ್ನನ್ನು ದೂರಮಾಡಿರುವಳೆಂಬ ಅನಿಸಿಕೆಯಿಂದ ಕೊರಗಲೂಬಹುದು.
ವಾಸ್ತವದಲ್ಲಿ, ಚೊಚ್ಚಲ ಮಗುವಿನ ಜನನ ಸತಿಪತಿಗಳ ನಡುವೆ ಬಿರುಕುಂಟಾಗಲು ಕಾರಣವಾಗಬಹುದು. ಮಗುವಿನ ಲಾಲನೆ-ಪಾಲನೆಯ ಒತ್ತಡದ ಭಾರದಿಂದಾಗಿ ದಂಪತಿಯ ವೈಯಕ್ತಿಕ ಅಭದ್ರತೆಯ ಭಾವನೆಗಳು ಮತ್ತು ಅವರ ಮಧ್ಯೆ ಬಗೆಹರಿದಿರದ ಸಮಸ್ಯೆಗಳು ತಲೆದೋರಿ ಉಲ್ಬಣಿಸಬಹುದು.
ಮಗುವಿಗೆ ಸಂಪೂರ್ಣ ಗಮನ ಕೊಡಬೇಕಾಗಿರುವ ಮೊದಲ ಕೆಲವು ತಿಂಗಳಲ್ಲಿ ಏಳುವ ಉದ್ವೇಗಭರಿತ ಪರಿಸ್ಥಿತಿಗೆ ದಂಪತಿ ಹೇಗೆ ಹೊಂದಿಕೊಳ್ಳಬಲ್ಲರು? ದಂಪತಿ ತಮ್ಮ ಆಪ್ತತೆಯನ್ನು ಕಾಪಾಡಿಕೊಳ್ಳಲು ಏನು ಮಾಡಬಲ್ಲರು? ಮಗುವಿನ ಲಾಲನೆ-ಪಾಲನೆಯ ವಿಷಯದಲ್ಲಿ ಏಳುವ ಭಿನ್ನಾಭಿಪ್ರಾಯಗಳನ್ನು ಅವರು ಹೇಗೆ ನಿರ್ವಹಿಸಬಲ್ಲರು? ಈ ಸವಾಲುಗಳನ್ನು ಒಂದೊಂದಾಗಿ ಪರಿಶೀಲಿಸಿ, ಅವನ್ನು ನಿಭಾಯಿಸಲು ದಂಪತಿಗೆ ಬೈಬಲ್ ಸೂತ್ರಗಳು ಹೇಗೆ ನೆರವಾಗುವವೆಂದು ನಾವೀಗ ನೋಡೋಣ.
ಸವಾಲು 1: ಇದ್ದಕ್ಕಿದ್ದ ಹಾಗೆ ಮಗುವೇ ಸರ್ವಸ್ವ ಆಗಿಬಿಡುತ್ತದೆ.
ನವಜಾತ ಶಿಶು ತನ್ನ ತಾಯಿಯ ಸಮಯವನ್ನೆಲ್ಲ ಕಬಳಿಸಿಬಿಡುತ್ತದೆ, ತಾಯಿಗೆ ಸದಾ ಮಗುವಿನದ್ದೇ ಧ್ಯಾನ. ಆಕೆಗೆ ಮಗುವಿನ
ಆರೈಕೆ ಮಾಡುವುದರಿಂದ ಭಾವನಾತ್ಮಕ ತೃಪ್ತಿ ಸಿಗುತ್ತಿರಬಹುದು. ಈ ಮಧ್ಯೆ ಆಕೆಯ ಪತಿಗೆ ತನ್ನನ್ನು ಅಲಕ್ಷಿಸಲಾಗುತ್ತಿದೆಯೆಂದು ಅನಿಸಬಹುದು. ಬ್ರಸಿಲ್‌ನ ನಿವಾಸಿ ಮ್ಯಾನ್ವೆಲ್ ಹೇಳುವುದು: “ನನ್ನ ಪತ್ನಿ ನನಗೆ ಕೊಡುತ್ತಿದ್ದ ಗಮನವನ್ನೆಲ್ಲ ನಮ್ಮ ಮಗುವಿಗೆ ಕೊಡತೊಡಗಿದಾಗ ಅದನ್ನು ಅರಗಿಸಿಕೊಳ್ಳಲು ತುಂಬ ಕಷ್ಟವಾಯಿತು. ಈ ಮುಂಚೆ ನನ್ನಾಕೆಗೆ ನಾನೇ ಸರ್ವಸ್ವವಾಗಿದ್ದೆ, ಒಮ್ಮೆಲೆ ಅವಳಿಗೆ ಮಗುವೇ ಸರ್ವಸ್ವವಾಯಿತು.” ಇಂಥ ದೊಡ್ಡ ಬದಲಾವಣೆಯನ್ನು ನೀವು ಹೇಗೆ ನಿಭಾಯಿಸಬಲ್ಲಿರಿ?▪ ಜಯಿಸುವ ವಿಧಾನ: ತಾಳ್ಮೆ ತೋರಿಸಿ. “ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ. . . . ಸ್ವಹಿತವನ್ನು ಹುಡುಕುವುದಿಲ್ಲ, ಸಿಟ್ಟುಗೊಳ್ಳುವುದಿಲ್ಲ” ಎನ್ನುತ್ತದೆ ಬೈಬಲ್. (1 ಕೊರಿಂಥ 13:4, 5) ಶಿಶುವಿನ ಆಗಮನವಾದಾಗ ಈ ಸಲಹೆಯನ್ನು ಗಂಡಹೆಂಡಿರಿಬ್ಬರೂ ಹೇಗೆ ಅನ್ವಯಿಸಿಕೊಳ್ಳಬಲ್ಲರು?
ಹೆರಿಗೆಯಿಂದಾಗಿ ಸ್ತ್ರೀಯ ಮೇಲಾಗುವ ಶಾರೀರಿಕ ಹಾಗೂ ಮಾನಸಿಕ ಪರಿಣಾಮಗಳ ಬಗ್ಗೆ ತಿಳುಕೊಳ್ಳುವ ಮೂಲಕ ವಿವೇಕಿಯಾದ ಪತಿಯು ತನ್ನ ಪತ್ನಿಯ ಮೇಲಿರುವ ಪ್ರೀತಿಯನ್ನು ತೋರಿಸುತ್ತಾನೆ. ಹೀಗೆ ಮಾಡಿದ್ದಲ್ಲಿ, ತನ್ನ ಪತ್ನಿಯ ಮೂಡ್ ಆಗಾಗ ಬದಲಾಗುತ್ತಿರುವುದೇಕೆ ಎಂದು ಅರಿತುಕೊಳ್ಳುವನು. * ಹನ್ನೊಂದು ತಿಂಗಳ ಮಗಳಿರುವ, ಫ್ರಾನ್ಸ್‌ನ ನಿವಾಸಿ ಆ್ಯಡಮ್ ಹೇಳುವುದು: “ನನ್ನ ಹೆಂಡತಿಯ ಮೂಡ್ ಬದಲಾಗುವಾಗೆಲ್ಲ ತಾಳ್ಮೆ ತೋರಿಸಲು ಕೆಲವೊಮ್ಮೆ ಕಷ್ಟವಾಗುತ್ತದೆ. ಆದರೆ ಅವಳಿಗೆ ವೈಯಕ್ತಿಕವಾಗಿ ನನ್ನ ವಿರುದ್ಧ ಸಿಟ್ಟಿಲ್ಲ ಬದಲಾಗಿ ನಮ್ಮ ಹೊಸ ಸನ್ನಿವೇಶದಲ್ಲಿ ಈ ತನಕ ಅನುಭವಿಸಿರದ ಒತ್ತಡಗಳಿಂದಾಗಿ ಅವಳು ಹಾಗೆ ವರ್ತಿಸುತ್ತಿದ್ದಾಳೆ ಎಂದು ನೆನಪಿಡಲು ಯತ್ನಿಸುತ್ತೇನೆ.”
ನಿಮ್ಮ ಪತ್ನಿಯ ಸಹಾಯಕ್ಕೆಂದು ನೀವು ಮಾಡುವ ಪ್ರಯತ್ನಗಳನ್ನು ಆಕೆ ಕೆಲವೊಮ್ಮೆ ಅಪಾರ್ಥ ಮಾಡಿಕೊಳ್ಳುತ್ತಾಳೋ? ಹಾಗೇನಾದರೂ ಆದರೆ ಬೇಗನೆ ಕೋಪಿಸಿಕೊಳ್ಳಬೇಡಿ. (ಪ್ರಸಂಗಿ 7:9) ತಾಳ್ಮೆಯಿಂದ ನಡೆದುಕೊಳ್ಳುತ್ತಾ ನಿಮ್ಮ ಹಿತಕ್ಷೇಮದ ಬದಲಿಗೆ ಆಕೆಯ ಹಿತಕ್ಷೇಮಕ್ಕೆ ಆದ್ಯತೆ ನೀಡಿ. ಹೀಗೆ ಮಾಡಿದರೆ ಆಕೆಯ ಬಗ್ಗೆ ನಿಮಗೆ ಬೇಜಾರು ಆಗಲಿಕ್ಕಿಲ್ಲ.—ಜ್ಞಾನೋಕ್ತಿ 14:29.
ಇನ್ನೊಂದು ಕಡೆ, ಜಾಣೆಯಾದ ಪತ್ನಿ ತನ್ನ ಪತಿಯು ತನ್ನ ಹೊಸ ಪಾತ್ರವನ್ನು ನಿರ್ವಹಿಸಲು ಪ್ರೋತ್ಸಾಹ ನೀಡುವಳು. ಮಗುವಿನ ಆರೈಕೆಯಲ್ಲಿ ಅವನನ್ನು ಸೇರಿಸಿಕೊಳ್ಳುವಳು. ಮಗುವನ್ನು ಶುಚಿಗೊಳಿಸುವುದು, ಬಾಟಲಿ ಹಾಲು ತಯಾರಿಸುವುದು ಹೇಗೆಂದು ತೋರಿಸಿಕೊಡುವಳು. ಮೊದಮೊದಲು ಅವನು ಇದನ್ನು ಸ್ವಲ್ಪ ಅಡ್ಡಾದಿಡ್ಡಿಯಾಗಿ ಮಾಡುತ್ತಿರುವಂತೆ ತೋರಿದರೂ ತಾಳ್ಮೆ ತೋರಿಸುವಳು.
ತನ್ನ ಗಂಡನೊಂದಿಗೆ ನಡಕೊಳ್ಳುವ ರೀತಿಯಲ್ಲಿ ಕೆಲವು ಬದಲಾವಣೆ ಮಾಡುವ ಅಗತ್ಯವನ್ನು 26ರ ಪ್ರಾಯದ ಅನಿತಾ ಮನಗಂಡಳು. ಅವಳನ್ನುವುದು: “ಮಗು ನನಗೆ ಮಾತ್ರ ಸೇರಿದ್ದು ಎಂಬಂತೆ ವರ್ತಿಸುವುದನ್ನು ಕಡಿಮೆಗೊಳಿಸಬೇಕಾಗಿತ್ತು. ಮಗುವಿನ ಆರೈಕೆಯ ವಿಷಯದಲ್ಲಿ ಗಂಡನು ಸಲಹೆಗಳನ್ನು ಪಾಲಿಸಲು ಪ್ರಯತ್ನಿಸುತ್ತಿರುವಾಗ ‘ಇದು ಸರಿಯಿಲ್ಲ ಅದು ಸರಿಯಿಲ್ಲ’ ಎಂದು ಹೇಳುತ್ತಾ ಅವರ ತಲೆತಿನ್ನಬಾರದೆಂಬದನ್ನು ಮನಸ್ಸಿನಲ್ಲಿಡಲು ಯತ್ನಿಸುತ್ತಿದ್ದೆ.”
ಪ್ರಯತ್ನಿಸಿ ನೋಡಿ: ಪತ್ನಿಯರೇ, ನಿಮ್ಮ ಪತಿ ಮಗುವಿನ ಆರೈಕೆ ಮಾಡುವ ವಿಧಾನ ನೀವು ಮಾಡುವುದಕ್ಕಿಂತ ಭಿನ್ನವಾಗಿದ್ದರೆ ಅವರನ್ನು ಟೀಕಿಸಬೇಡಿ. ಅವರು ಮಾಡಿದ ಕೆಲಸ ಸರಿಯಾಗಲಿಲ್ಲವೆಂದು ಹೇಳುತ್ತಾ ಪುನಃ ಮಾಡಬೇಡಿ. ಅವರು ಮಾಡಿದ್ದು ಪೂರಾ ಒಳ್ಳೇದಿರದಿದ್ದರೂ ಶ್ಲಾಘಿಸಿ. ಆಗ ನಿಮ್ಮ ಪತಿಯ ಆತ್ಮವಿಶ್ವಾಸ ಹೆಚ್ಚಿಸುವಿರಿ ಮತ್ತು ಅವರು ನಿಮಗೆ ಬೇಕಾಗಿರುವ ಬೆಂಬಲವನ್ನು ನೀಡಲು ಉತ್ತೇಜಿಸಲ್ಪಡುವರು. ಗಂಡಂದಿರೇ, ಅನಾವಶ್ಯಕ ವಿಷಯಗಳಲ್ಲಿ ಸಮಯ ಕಳೆಯುವುದನ್ನು ಕಡಿಮೆಮಾಡಿ. ಆಗ ನಿಮ್ಮ ಪತ್ನಿಗೆ ಸಹಾಯಮಾಡಲು ನಿಮಗೆ ತುಂಬ ಸಮಯ ಸಿಗುವುದು. ಮಗು ಜನಿಸಿದ ಮೊದಲ ಕೆಲವು ತಿಂಗಳುಗಳಲ್ಲಂತೂ ನಿಮ್ಮ ನೆರವಿನ ಅಗತ್ಯ ಹೆಚ್ಚಿರುವುದು.
ಸವಾಲು 2: ನಿಮ್ಮ ದಾಂಪತ್ಯ-ಬಂಧ ದುರ್ಬಲವಾಗುತ್ತಿದೆ.
ಸಾಕಷ್ಟು ನಿದ್ದೆಯಿಲ್ಲದೆ ಮತ್ತು ಅನಿರೀಕ್ಷಿತ ತೊಡಕುಗಳ ಕಾರಣ ಸುಸ್ತಾದ ಅನೇಕ ಹೊಸ ಹೆತ್ತವರಿಗೆ ಆಪ್ತತೆ ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. ಪುಟಾಣಿಗಳಿಬ್ಬರ ತಾಯಿ ವಿವ್ಯಾನ್ ಒಪ್ಪಿಕೊಳ್ಳುವುದು: “ತಾಯಿಯಾಗಿದ್ದ ನನ್ನ ಕರ್ತವ್ಯದಲ್ಲೇ ನಾನೆಷ್ಟು ಮೈಮರೆತುಹೋಗಿದ್ದೆನೆಂದರೆ ಹೆಂಡತಿಯ ಪಾತ್ರವನ್ನು ಮರೆತೇ ಹೋದಂತಿತ್ತು.”
ಇನ್ನೊಂದೆಡೆ, ಗರ್ಭಾವಸ್ಥೆಯು ತನ್ನ ಪತ್ನಿಯನ್ನು ಶಾರೀರಿಕವಾಗಿ, ಭಾವನಾತ್ಮಕವಾಗಿ ಬಾಧಿಸಿದೆ ಎಂಬದನ್ನು ಪತಿ ಗ್ರಹಿಸಲು ತಪ್ಪಿಹೋಗಬಹುದು. ಪತಿಪತ್ನಿ ಭಾವನಾತ್ಮಕವಾಗಿ, ಲೈಂಗಿಕವಾಗಿ ಆಪ್ತರಾಗಿರಲು ಕಳೆಯುತ್ತಿದ್ದ ಸಮಯ, ಶಕ್ತಿಯನ್ನೆಲ್ಲ ಈಗ ಹುಟ್ಟಿದ ಮಗುವಿಗಾಗಿ ವ್ಯಯಿಸಬೇಕಾಗಬಹುದು. ತಮ್ಮ ನಿಸ್ಸಹಾಯಕ, ಮುದ್ದಾದ ಕಂದ ಈಗ ತಮ್ಮ ಮಧ್ಯೆ ನಿಂತಿರುವ ಅಡ್ಡಗೋಡೆಯಾಗದಂತೆ ದಂಪತಿಗಳು ಹೇಗೆ ನೋಡಿಕೊಳ್ಳಬಹುದು?
▪ ಜಯಿಸುವ ವಿಧಾನ: ಪರಸ್ಪರ ಪ್ರೀತಿಯನ್ನು ಪುನಃ ಪುನಃ ವ್ಯಕ್ತಪಡಿಸಿ. ಬೈಬಲ್ ದಾಂಪತ್ಯವನ್ನು ವರ್ಣಿಸುತ್ತಾ ಹೇಳುವುದು: * (ಆದಿಕಾಂಡ 2:24) ಮಕ್ಕಳು ಕೊನೆಗೆ ದೊಡ್ಡವರಾದಾಗ ಹೆತ್ತವರಿಂದ ಪ್ರತ್ಯೇಕವಾಗುವರೆಂದು ಯೆಹೋವ ದೇವರು ಉದ್ದೇಶಿಸಿದ್ದನು. ಆದರೆ ಪತಿಪತ್ನಿಯ ನಡುವೆ ಇರುವ ‘ಒಂದೇ ಶರೀರದ ಬಂಧವು’ ಸಾಯುವ ವರೆಗೂ ಉಳಿಯಬೇಕೆಂದು ಅಪೇಕ್ಷಿಸುತ್ತಾನೆ. (ಮತ್ತಾಯ 19:3-9) ಬೈಬಲಿನ ಈ ನೋಟವನ್ನು ಮಾನ್ಯಮಾಡುವುದು ನವಜಾತ ಶಿಶುವಿರುವ ದಂಪತಿಗೆ ಯೋಗ್ಯ ಆದ್ಯತೆಗಳನ್ನು ಕಾಪಾಡಲು ಹೇಗೆ ಸಹಾಯವಾಗುವುದು?
“ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.”ಹಿಂದೆ ತಿಳಿಸಲಾದ ವಿವ್ಯಾನ್ ಹೇಳುವುದು: “ಆದಿಕಾಂಡ 2:24ರ ಮಾತುಗಳ ಬಗ್ಗೆ ಆಲೋಚಿಸಿದೆ. ನಾನು ‘ಒಂದೇ ಶರೀರ’ವಾಗಿರುವುದು ನನ್ನ ಗಂಡನೊಂದಿಗೆ, ಮಗುವಿನೊಂದಿಗಲ್ಲ ಎಂಬದನ್ನು ಆ ವಚನದಿಂದ ಗ್ರಹಿಸಿಕೊಂಡೆ. ನಮ್ಮ ವಿವಾಹ ಬಂಧವನ್ನು ಬಲಪಡಿಸುವ ಅಗತ್ಯವನ್ನು ಮನಗಂಡೆ.” 2 ವರ್ಷದ ಮಗಳಿರುವ ತೆರೆಸಾ ಹೇಳುವುದು: “ಗಂಡನಿಂದ ದೂರವಾಗುತ್ತಿದ್ದೇನೆಂದು ನನಗನಿಸಿದಾಗೆಲ್ಲ ಪ್ರತಿ ದಿನ ಸ್ವಲ್ಪ ಸ್ವಲ್ಪ ಸಮಯವಾದರೂ ಸರಿಯೇ ಅವರಿಗೆ ನನ್ನ ಸಂಪೂರ್ಣ ಗಮನ ಕೊಡಲು ತಕ್ಷಣ ಪ್ರಯತ್ನಿಸುತ್ತೇನೆ.”
ಗಂಡಂದಿರೇ, ವಿವಾಹ ಬಂಧವನ್ನು ಬಲಪಡಿಸಲು ನೀವೇನು ಮಾಡಬಲ್ಲಿರಿ? ನಿಮ್ಮ ಹೆಂಡತಿಯನ್ನು ನೀವು ತುಂಬ ಪ್ರೀತಿಸುತ್ತೀರೆಂದು ಆಕೆಗೆ ಹೇಳಿ. ನಿಮ್ಮ ಪ್ರೀತಿಯನ್ನು ಕೋಮಲ ಕ್ರಿಯೆಗಳ ಮೂಲಕ ತೋರಿಸಿ. ನಿಮ್ಮ ಹೆಂಡತಿಯಲ್ಲಿ ಮನೆಮಾಡಿರಬಹುದಾದ ಅಭದ್ರತೆಯ ಅನಿಸಿಕೆಗಳನ್ನು ಕಿತ್ತೊಗೆಯಲು ಶ್ರದ್ಧಾಪೂರ್ವಕ ಪ್ರಯತ್ನ ಮಾಡಿ. ಸಾರಾ ಎಂಬ 30 ವರ್ಷದ ತಾಯಿ ಹೀಗನ್ನುತ್ತಾಳೆ: “ಗರ್ಭಿಣಿಯಾಗುವ ಮುಂಚೆ ತನಗಿದ್ದ ಮೈಕಟ್ಟು ಈಗಿಲ್ಲದಿದ್ದರೂ ಗಂಡ ತನ್ನನ್ನು ಈಗಲೂ ಪ್ರೀತಿಸುತ್ತಾನೆ, ತನ್ನನ್ನು ಗೌರವಿಸುತ್ತಾನೆ ಎಂಬ ಆಶ್ವಾಸನೆ ಪತ್ನಿಗೆ ಬೇಕು.” ಇಬ್ಬರು ಹುಡುಗರ ತಂದೆಯಾದ ಜರ್ಮನಿಯ ನಿವಾಸಿ ಆ್ಯಲನ್ ತನ್ನ ಪತ್ನಿಗೆ ಭಾವನಾತ್ಮಕ ಬೆಂಬಲ ಕೊಡುವ ಅಗತ್ಯವಿರುವುದನ್ನು ಕಾಣುತ್ತಾನೆ. ಅವನನ್ನುವುದು: “ನನ್ನ ಪತ್ನಿಗೆ ದುಃಖವಾದಾಗೆಲ್ಲ ಆಕೆಯನ್ನು ಸಂತೈಸಲು ಪ್ರಯತ್ನಿಸಿದ್ದೇನೆ.”
ಕೂಸಿನ ಆಗಮನದಿಂದಾಗಿ ದಂಪತಿಯ ಲೈಂಗಿಕ ಸಂಬಂಧಗಳಿಗೆ ಅಡ್ಡಿಯಾಗುವುದೆಂಬುದು ಗ್ರಾಹ್ಯ. ಆದ್ದರಿಂದ ಪತಿಪತ್ನಿ ತಮ್ಮ ಬೇಕು-ಬೇಡಗಳನ್ನು ಚರ್ಚಿಸಬೇಕು. “ಪರಸ್ಪರ ಸಮ್ಮತಿಯಿಂದ” ಮಾತ್ರವೇ ದಂಪತಿ ಲೈಂಗಿಕ ಸಂಬಂಧದಿಂದ ದೂರವಿರಬಹುದೆಂದು ಬೈಬಲ್ ಹೇಳುತ್ತದೆ. (1 ಕೊರಿಂಥ 7:1-5) ಇದಕ್ಕೆ ಒಳ್ಳೇ ಸಂವಾದ ಅಗತ್ಯ. ನೀವು ಬೆಳೆದು ಬಂದಿರುವ ರೀತಿ ಅಥವಾ ಸಾಂಸ್ಕೃತಿಕ ಹಿನ್ನೆಲೆಯಿಂದಾಗಿ ನಿಮ್ಮ ಸಂಗಾತಿಯೊಂದಿಗೆ ಲೈಂಗಿಕ ವಿಷಯಗಳ ಕುರಿತು ಮಾತಾಡಲು ಬಹುಶಃ ಮುಜುಗರವಾಗಬಹುದು. ಆದರೆ ದಂಪತಿ ಮಗುವಿನ ಲಾಲನೆ-ಪಾಲನೆಯ ಸಮಯದಲ್ಲಿ ಹೊಂದಾಣಿಕೆಗಳನ್ನು ಮಾಡಲು ಇಂಥ ಸಂವಾದಗಳು ಪ್ರಾಮುಖ್ಯ. ಅನುಭೂತಿ, ತಾಳ್ಮೆ, ಪ್ರಾಮಾಣಿಕತೆ ತೋರಿಸಿ. (1 ಕೊರಿಂಥ 10:24) ಹೀಗೆ ನೀವು ಮತ್ತು ನಿಮ್ಮ ಸಂಗಾತಿ ತಪ್ಪಾರ್ಥಮಾಡಿಕೊಳ್ಳುವುದು ತಪ್ಪುತ್ತದೆ ಮತ್ತು ಪರಸ್ಪರ ಪ್ರೀತಿಯು ಗಾಢವಾಗುತ್ತದೆ.—1 ಪೇತ್ರ 3:7, 8.
ಗಂಡಹೆಂಡತಿ ಪರಸ್ಪರರಿಗೆ ಕೃತಜ್ಞತೆಯನ್ನು ತಮ್ಮ ನಡೆನುಡಿಯಲ್ಲಿ ತೋರಿಸುವ ಮೂಲಕವೂ ತಮ್ಮ ಪ್ರೀತಿಯನ್ನು ಗಾಢಗೊಳಿಸಬಲ್ಲರು. ನವಜಾತ ಶಿಶುವಿನ ಪಾಲನೆಯಲ್ಲಿ ತಾಯಿಗೆ ಮಾಡಲು ತುಂಬ ಕೆಲಸಗಳಿವೆ ಎಂಬದನ್ನು ವಿವೇಕಿಯಾದ ಪತಿ ಅರ್ಥಮಾಡಿಕೊಳ್ಳುವನು. ವಿವ್ಯಾನ್ ಹೇಳುವುದು: “ಸತತವಾಗಿ ಮಗುವಿನ ಆರೈಕೆ ಮಾಡಿದ್ದರೂ ದಿನದ ಕೊನೆಯಲ್ಲಿ ‘ಇವತ್ತು ನಾನೇನನ್ನೂ ಪೂರೈಸಲಿಲ್ಲ’ ಎಂಬ ಅನಿಸಿಕೆ ಕೆಲವೊಮ್ಮೆ ಬರುತ್ತದೆ!” ಜಾಣೆಯಾದ ಒಬ್ಬ ಪತ್ನಿ ಎಷ್ಟೇ ಬ್ಯುಸಿಯಾಗಿದ್ದರೂ ತನ್ನ ಪತಿ ಕುಟುಂಬಕ್ಕಾಗಿ ಮಾಡಿರುವ ಒಂದು ಚಿಕ್ಕ ಕೆಲಸವನ್ನೂ ಕಡೆಗಣಿಸದಂತೆ ಜಾಗ್ರತೆ ವಹಿಸುತ್ತಾಳೆ.—ಜ್ಞಾನೋಕ್ತಿ 17:17.
ಪ್ರಯತ್ನಿಸಿ ನೋಡಿ: ತಾಯಂದಿರೇ, ಮಗು ಮಲಗಿರುವಾಗ ಸಾಧ್ಯವಾದಲ್ಲಿ ಲಘುನಿದ್ದೆ ಮಾಡಿ. ಇದು “ನಿಮ್ಮ ಬ್ಯಾಟರಿಗಳನ್ನು ರೀಚಾರ್ಜ್” ಮಾಡಿದಂತೆ. ಹೀಗೆ ನಿಮ್ಮ ವೈವಾಹಿಕ ಜೀವನದ ಜವಾಬ್ದಾರಿಗಳನ್ನು ಪೂರೈಸಲು ನಿಮಗೆ ಬೇಕಾದ ಹೆಚ್ಚಿನ ಬಲ ಸಿಗುವುದು. ತಂದೆಗಳೇ, ಸಾಧ್ಯವಾದಾಗೆಲ್ಲ ರಾತ್ರಿ ಮಧ್ಯೆ ಮಧ್ಯೆ ಎದ್ದು ಮಗುವಿಗೆ ಉಣಿಸಬೇಕಾದರೆ ಅಥವಾ ಬಟ್ಟೆ (ಡಯಪರ್) ಬದಲಾಯಿಸಬೇಕಾದರೆ ಅದನ್ನು ಮಾಡಿ. ಇದರಿಂದ ನಿಮ್ಮ ಪತ್ನಿಗೆ ಹೆಚ್ಚು ವಿಶ್ರಾಂತಿ ಮಾಡಲು ಸಾಧ್ಯವಾಗುವುದು. ಆಕೆಯ ಮೇಲಿರುವ ನಿಮ್ಮ ಪ್ರೀತಿಯನ್ನು ಆಗಾಗ್ಗೆ ವ್ಯಕ್ತಪಡಿಸಿ. ಉದಾಹರಣೆಗೆ, ಪ್ರೀತಿಯ ಮಾತುಗಳಿರುವ ಚಿಕ್ಕ ಚೀಟಿಗಳನ್ನು ಬರೆದಿಟ್ಟು ಹೋಗಬಹುದು, ಎಸ್‌ಎಮ್‌ಎಸ್ ಕಳುಹಿಸಬಹುದು ಅಥವಾ
ಫೋನ್ ಮಾಡಬಹುದು. ಇಬ್ಬರೇ ಕೂತು ಮಾತಾಡಲಿಕ್ಕಾಗಿ ಸಮಯಮಾಡಿ. ನಿಮ್ಮ ಮಗುವಿನ ಕುರಿತೇ ಮಾತ್ರವಲ್ಲ ನಿಮ್ಮ ನಿಮ್ಮ ಬಗ್ಗೆಯೂ ಮಾತಾಡಿ. ನಿಮ್ಮ ಸಂಗಾತಿಯ ಜೊತೆಗಿನ ಸ್ನೇಹವನ್ನು ಬಲವಾಗಿರಿಸಿ. ಹೀಗೆ ನೀವು ಮಗುವಿನ ಪಾಲನೆ-ಪೋಷಣೆಯಲ್ಲಿ ಎದುರಾಗುವ ಸವಾಲನ್ನು ಉತ್ತಮವಾಗಿ ನಿಭಾಯಿಸುವಿರಿ.ಸವಾಲು 3: ಮಗುವಿನ ಪಾಲನೆಯ ಬಗ್ಗೆ ನಿಮ್ಮ ಮಧ್ಯೆ ಭಿನ್ನಾಭಿಪ್ರಾಯ.
ದಂಪತಿಯಲ್ಲಿ ವಾಗ್ವಾದ ಏಳಲು ಅವರ ಹಿನ್ನೆಲೆ ಕಾರಣವಾಗಬಹುದು. ಇದೇ ರೀತಿಯ ಸವಾಲನ್ನು ಜಪಾನಿನ ದಂಪತಿ ಎಸಾಮಿ ಹಾಗೂ ಕಾಟ್ಸುರೊ ಎದುರಿಸಿದರು. ಪತ್ನಿ ಎಸಾಮಿ ಹೇಳುವುದು: “ನನ್ನ ಪತಿ ಮಗಳನ್ನು ವಿಪರೀತ ಮುದ್ದುಮಾಡುತ್ತಾರೆಂದು ನನಗನಿಸುತ್ತಿತ್ತು, ಆದರೆ ನಾನು ಮಗಳನ್ನು ತುಂಬ ಕಟ್ಟುನಿಟ್ಟಿನಲ್ಲಿಟ್ಟಿದ್ದೇನೆಂದು ನನ್ನ ಪತಿಗೆ ಅನಿಸುತ್ತಿತ್ತು.” ನಿಮ್ಮ ಮಧ್ಯೆ ಈ ರೀತಿಯ ಭಿನ್ನಾಭಿಪ್ರಾಯಗಳು ಎದ್ದಲ್ಲಿ ಹೇಗೆ ನಿಭಾಯಿಸುವಿರಿ?
▪ ಜಯಿಸುವ ವಿಧಾನ: ನಿಮ್ಮ ಸಂಗಾತಿಯೊಂದಿಗೆ ಸಂವಾದಿಸಿ, ಒಬ್ಬರಿಗೊಬ್ಬರು ಬೆಂಬಲ ನೀಡಿ. ವಿವೇಕಿಯಾದ ರಾಜ ಸೊಲೊಮೋನ ಬರೆದದ್ದು: “ಹೆಮ್ಮೆಯ ಫಲವು ಕಲಹವೇ; ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ [ಸಮಾಲೋಚಿಸುವುದರಿಂದ, NW] ಜ್ಞಾನ.” (ಜ್ಞಾನೋಕ್ತಿ 13:10) ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ನಿಮ್ಮ ಸಂಗಾತಿಯ ಅಭಿಪ್ರಾಯದ ಬಗ್ಗೆ ನಿಮಗೆಷ್ಟು ತಿಳಿದಿದೆ? ಮಗುವನ್ನು ತರಬೇತಿಗೊಳಿಸುವಾಗ ಬರಬಹುದಾದ ನಿರ್ದಿಷ್ಟ ಸಮಸ್ಯೆಗಳ ಬಗ್ಗೆ ಮಗು ಹುಟ್ಟುವ ಮುಂಚೆಯೇ ನೀವಿಬ್ಬರೂ ಚರ್ಚಿಸದಿದ್ದಲ್ಲಿ, ಮುಂದೆ ಆ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸುವ ಬದಲು ನೀವಿಬ್ಬರೂ ಜಗಳವಾಡುತ್ತಲೇ ಇರುವಿರಿ.
ಉದಾಹರಣೆಗೆ, ಈ ಕೆಳಗಿನ ಪ್ರಶ್ನೆಗಳ ಬಗ್ಗೆ ನೀವಿಬ್ಬರೂ ಯಾವ ತೀರ್ಮಾನಕ್ಕೆ ಬಂದಿರುವಿರಿ? “ತಿನ್ನುವ ಮತ್ತು ನಿದ್ದೆಯ ಒಳ್ಳೇ ರೂಢಿಗಳನ್ನು ಮಗುವಿಗೆ ಹೇಗೆ ಕಲಿಸಬಲ್ಲೆವು? ರಾತ್ರಿ ನಿದ್ದೆ ಮಾಡುವಾಗ ಮಗು ಅಳುತ್ತಿದ್ದರೆ ಯಾವಾಗಲೂ ಎತ್ತಿಕೊಳ್ಳಲೇ ಬೇಕೋ? ಟಾಯ್ಲೆಟ್ ಬಳಸುವ ರೀತಿಯನ್ನು ಮಗುವಿಗೆ ಕಲಿಸುವಾಗ ಬರುವ ತೊಂದರೆಗಳನ್ನು ನಿಭಾಯಿಸುವುದು ಹೇಗೆ?” ಈ ವಿಷಯದಲ್ಲಿ ಇತರ ದಂಪತಿಗಳು ಮಾಡುವ ನಿರ್ಣಯಕ್ಕೂ ನಿಮ್ಮ ನಿರ್ಣಯಕ್ಕೂ ವ್ಯತ್ಯಾಸವಿರಬಹುದು. ಇಬ್ಬರು ಮಕ್ಕಳ ತಂದೆಯಾದ ಈತನ್ ಹೇಳುವುದು: “ತಂದೆತಾಯಿ ಇಬ್ಬರೂ ಒಂದೇ ರೀತಿಯ ತರಬೇತು ಕೊಡಬೇಕಾದರೆ ಅದರ ಬಗ್ಗೆ ಚರ್ಚಿಸುವುದು ಪ್ರಾಮುಖ್ಯ. ಆಗ ಮಗುವಿನ ಅಗತ್ಯಗಳಿಗೆ ಇಬ್ಬರೂ ಸೇರಿ ಸ್ಪಂದಿಸಲು ಸುಲಭ.”
ಪ್ರಯತ್ನಿಸಿ ನೋಡಿ: ನಿಮ್ಮನ್ನು ಬೆಳೆಸಲು ಹೆತ್ತವರು ಬಳಸುತ್ತಿದ್ದ ಪಾಲನೆಯ ವಿಧಾನಗಳ ಬಗ್ಗೆ ಯೋಚಿಸಿ. ಅವುಗಳಲ್ಲಿ ಯಾವ ವಿಧಾನಗಳನ್ನು ಮತ್ತು ಅವರ ಯಾವ ಮನೋಭಾವಗಳನ್ನು ನೀವು ಅನುಕರಿಸಲು ಇಚ್ಛಿಸುತ್ತೀರೆಂದು ಮತ್ತು ಯಾವುದನ್ನು ಅನುಕರಿಸಲು ಬಯಸುವುದಿಲ್ಲವೆಂದೂ ನಿರ್ಣಯಿಸಿ. ನಿಮ್ಮ ತೀರ್ಮಾನಗಳನ್ನು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ.
ದಂಪತಿಯ ಮೇಲೆ ಶಿಶು ಬೀರಬಲ್ಲ ಒಳ್ಳೇ ಪರಿಣಾಮ
ಸರ್ಕಸ್‌ನಲ್ಲಿ ದೊಂಬರಾಟ ಆಡುವ ಅನನುಭವಿ ಜೋಡಿಗೆ ಸಂತುಲನೆ ಪಡೆಯಲು ಸಮಯ ಹಾಗೂ ತಾಳ್ಮೆ ಬೇಕಾಗಿರುವಂತೆಯೇ ಹೆತ್ತವರಾಗಿ ಈ ನಿಮ್ಮ ಹೊಸ ಪಾತ್ರ ನಿರ್ವಹಿಸಲು ನಿಮಗೆ ಸಮಯ, ತಾಳ್ಮೆ ಖಂಡಿತ ಅಗತ್ಯ. ಸಮಯ ಕಳೆದಂತೆ ಆತ್ಮವಿಶ್ವಾಸವನ್ನೂ ಗಳಿಸಬಲ್ಲಿರಿ.
ಮಕ್ಕಳನ್ನು ಬೆಳೆಸುವುದು ನಿಮ್ಮ ವೈವಾಹಿಕ ಬದ್ಧತೆಯನ್ನು ಪರೀಕ್ಷೆಗೊಡ್ಡುತ್ತದೆ ಮತ್ತು ನಿಮ್ಮ ಸಂಬಂಧದ ಮೇಲೆ ಶಾಶ್ವತ ಪರಿಣಾಮವನ್ನೂ ಬೀರುವುದು. ಆದರೆ ಬೆಲೆಬಾಳುವ ಗುಣಗಳನ್ನು ಬೆಳೆಸಿಕೊಳ್ಳಲು ನಿಮಗೆ ಅವಕಾಶವನ್ನೂ ಕೊಡುವುದು. ಬೈಬಲಿನ ವಿವೇಕಯುತ ಸಲಹೆಗಳನ್ನು ನೀವು ಪಾಲಿಸಿದಲ್ಲಿ ನಿಮ್ಮ ಅನುಭವವೂ ತಂದೆಯಾಗಿರುವ ಕಿರಣ್ ಎಂಬವನಂತಿರುವುದು. ಅವನನ್ನುವುದು: “ಮಕ್ಕಳನ್ನು ಬೆಳೆಸುವುದು ನನ್ನ ಮೇಲೂ ನನ್ನ ಪತ್ನಿಯ ಮೇಲೂ ಒಳ್ಳೇ ಪರಿಣಾಮ ಬೀರಿದೆ. ನಾವೀಗ ಬರೇ ನಮ್ಮ ಬಗ್ಗೆಯೇ ಯೋಚಿಸುವುದಿಲ್ಲ, ನಮ್ಮ ಮಧ್ಯೆ ಪ್ರೀತಿ ಹೆಚ್ಚಾಗಿದೆ, ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ ಸಹ.” ವಿವಾಹದ ಮೇಲೆ ಈ ರೀತಿಯ ಪರಿಣಾಮಗಳಾದರೆ ಒಳ್ಳೇದೇ ಅಲ್ಲವೇ? (w11-E 05/01)
[ಪಾದಟಿಪ್ಪಣಿಗಳು]
^ ಪ್ಯಾರ. 3 ಈ ಲೇಖನದಲ್ಲಿ ಹೆಸರುಗಳನ್ನು ಬದಲಿಸಲಾಗಿದೆ.
^ ಪ್ಯಾರ. 11 ಪ್ರಸವಾನಂತರದ ವಾರಗಳಲ್ಲಿ ಅನೇಕ ತಾಯಂದಿರಲ್ಲಿ ಸ್ವಲ್ಪ ಖಿನ್ನತೆ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಬಾಣಂತಿ ಸನ್ನಿ ಎನ್ನುವ ತೀವ್ರ ಸ್ವರೂಪದ ಖಿನ್ನತೆಯನ್ನೂ ಇನ್ನು ಕೆಲವರು ಅನುಭವಿಸುತ್ತಾರೆ. ಈ ಖಿನ್ನತೆಯನ್ನು ಗುರುತಿಸುವುದು ಮತ್ತು ನಿಭಾಯಿಸುವುದು ಹೇಗೆಂಬದರ ಕುರಿತ ಹೆಚ್ಚಿನ ಮಾಹಿತಿಗಾಗಿ ಜುಲೈ 22, 2002ರ ಎಚ್ಚರ! ಪತ್ರಿಕೆಯ (ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ) “ಬಾಣಂತಿ ಸನ್ನಿಯನ್ನು ನಾನು ಜಯಿಸಿದೆ” ಎಂಬ ಇಂಗ್ಲಿಷ್ ಲೇಖನವನ್ನೂ ಅದೇ ಪತ್ರಿಕೆಯ ಜೂನ್ 8, 2003ರ ಸಂಚಿಕೆಯಲ್ಲಿ ಮೂಡಿಬಂದ “ಬಾಣಂತಿ ಸನ್ನಿಯನ್ನು ಅರ್ಥಮಾಡಿಕೊಳ್ಳುವುದು” ಎಂಬ ಇಂಗ್ಲಿಷ್ ಲೇಖನವನ್ನೂ ಓದಿ. ಇವು www.watchtower.orgನಲ್ಲಿವೆ.
^ ಪ್ಯಾರ. 19 ಆದಿಕಾಂಡ 2:24ರಲ್ಲಿರುವ ‘ಸೇರಿಕೊಳ್ಳು’ ಎಂದು ಭಾಷಾಂತರಿಸಲಾದ ಹೀಬ್ರು ಕ್ರಿಯಾಪದಕ್ಕೆ, ‘ಒಬ್ಬರಿಗೆ ಪ್ರೀತಿ ಮತ್ತು ನಿಷ್ಠೆಯಿಂದ ಅಂಟಿಕೊಳ್ಳುವ’ ಅರ್ಥವಿರಬಲ್ಲದೆಂದು ಹೇಳುತ್ತದೆ ಒಂದು ಪಾಂಡಿತ್ಯಪೂರ್ಣ ಕೃತಿ.
ಕೇಳಿಕೊಳ್ಳಿ . . .
▪ ಕುಟುಂಬಕ್ಕಾಗಿ ನನ್ನ ಸಂಗಾತಿ ಮಾಡುವಂಥ ಸಂಗತಿಗಳನ್ನು ಮಾನ್ಯಮಾಡುತ್ತೇನೆಂದು ತೋರಿಸಲು ಕಳೆದ ವಾರ ನಾನೇನು ಮಾಡಿದ್ದೇನೆ?
▪ ಮಗುವಿನ ವಿಷಯ ಬಿಟ್ಟು ನಮ್ಮಿಬ್ಬರ ಕುರಿತೇ ಮನಬಿಚ್ಚಿ ನನ್ನ ಸಂಗಾತಿಯೊಂದಿಗೆ ಕೊನೆಯ ಬಾರಿ ಮಾತಾಡಿದ್ದು ಯಾವಾಗ?