ಬಡವರಿಗೆ ಶುಭವಾರ್ತೆ
ಬಡವರಿಗೆ ಶುಭವಾರ್ತೆ
“ಬಡವನು ಎಂದೆಂದಿಗೂ ಮರೆಯಲ್ಪಡುವುದಿಲ್ಲ” ಎಂದು ದೇವರ ವಾಕ್ಯವಾದ ಬೈಬಲ್ ನಮಗೆ ಆಶ್ವಾಸನೆ ಕೊಡುತ್ತದೆ. (ಕೀರ್ತನೆ 9:18, NIBV) ಸೃಷ್ಟಿಕರ್ತನ ಕುರಿತು ಅದು ಹೀಗೂ ಹೇಳುತ್ತದೆ: “ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ.” (ಕೀರ್ತನೆ 145:16) ದೇವರ ವಾಕ್ಯದಲ್ಲಿ ಕೊಡಲಾಗಿರುವ ಈ ನಿರೀಕ್ಷೆ ಬರೀ ಕನಸಲ್ಲ. ಬಡತನವನ್ನು ಕೊನೆಗೊಳಿಸಲು ಬೇಕಾದದ್ದನ್ನು ಸರ್ವಶಕ್ತ ದೇವರು ಖಂಡಿತ ಒದಗಿಸಬಲ್ಲನು. ಬಡವರಿಗೆ ಯಾವುದರ ಅಗತ್ಯವಿದೆ?
ಬಡ ದೇಶಗಳಿಗೆ “ಉಪಕಾರಬುದ್ಧಿಯುಳ್ಳ ಸರ್ವಾಧಿಕಾರಿಯ” ಅಗತ್ಯವಿದೆಯೆಂದು ಆಫ್ರಿಕದ ಅರ್ಥಶಾಸ್ತ್ರಜ್ಞೆಯೊಬ್ಬರು ಹೇಳಿದರು. ಅವರ ಮಾತಿನ ಅರ್ಥ, ಬಡತನವನ್ನು ಕೊನೆಗಾಣಿಸಲು ಬೇಕಾದ ಬದಲಾವಣೆಗಳನ್ನು ಮಾಡಲು ಅಧಿಕಾರ, ದಯೆ ಇರುವ ವ್ಯಕ್ತಿ ಬೇಕೆಂದೇ. ಬಡತನವನ್ನು ಕೊನೆಗಾಣಿಸುವ ಅಧಿಪತಿ ಲೋಕಾಧಿಪತಿಯೂ ಆಗಿರಬೇಕು, ಹಾಗಿದ್ದರೆ ಮಾತ್ರ ಅಂತಾರಾಷ್ಟ್ರೀಯ ಮಟ್ಟದಲಿರುವ ಆರ್ಥಿಕ ಅಸಮಾನತೆಯನ್ನು ತೆಗೆಯಬಲ್ಲನೆಂಬ ಮಾತನ್ನೂ ನಾವು ಅವರ ಮಾತಿಗೆ ಸೇರಿಸಬಹುದು. ಅಲ್ಲದೆ ಅವನು ಬಡತನದ ಬೇರು ಅಂದರೆ ಮಾನವನ ಸ್ವಾರ್ಥಪರ ಸ್ವಭಾವವನ್ನು ಕಿತ್ತುಹಾಕಲೂ ಶಕ್ತನಾಗಿರಬೇಕು. ಇಂಥ ಆದರ್ಶ ಅಧಿಪತಿ ಎಲ್ಲಿ ಸಿಗುವನು?
ಯೇಸುವಿನ ಮೂಲಕ ದೇವರು ಬಡವರಿಗಾಗಿ ಶುಭವಾರ್ತೆಯನ್ನು ಕಳುಹಿಸಿದನು. ದೇವರಿಂದ ಸಿಕ್ಕಿದ ಈ ನೇಮಕವನ್ನು ಯೇಸು ಶಾಸ್ತ್ರಗ್ರಂಥದಿಂದ ಓದಿ ಹೇಳುತ್ತಾ ಅಂದದ್ದು: “ಯೆಹೋವನ ಆತ್ಮವು ನನ್ನ ಮೇಲೆ ಇದೆ. ಆತನು ನನ್ನನ್ನು ಬಡವರಿಗೆ ಸುವಾರ್ತೆಯನ್ನು ಪ್ರಕಟಿಸುವುದಕ್ಕಾಗಿ ಅಭಿಷೇಕಿಸಿದನು.”—ಲೂಕ 4:16-18.
ಆ ಶುಭವಾರ್ತೆ ಏನು?
ದೇವರು ಯೇಸುವನ್ನು ರಾಜನಾಗಿ ನೇಮಿಸಿದ್ದಾನೆ. ಇದು ಖಂಡಿತ ಶುಭವಾರ್ತೆ. ಬಡತನ ಕೊನೆಗಾಣಿಸಲು ಆತನೇ ಸೂಕ್ತ ಅಧಿಪತಿ. ಯಾಕೆಂದರೆ (1) ಆತನು ಇಡೀ ಮಾನವಕುಲವನ್ನು ಆಳಲಿದ್ದಾನೆ ಹಾಗೂ ಕ್ರಮಕೈಗೊಳ್ಳುವ ಅಧಿಕಾರ ಆತನಿಗಿದೆ; (2) ಬಡವರಿಗೆ ಕರುಣೆ ತೋರಿಸುತ್ತಾನೆ ಮತ್ತು ಅವರ ಕಾಳಜಿ ವಹಿಸುವಂತೆ ತನ್ನ ಹಿಂಬಾಲಕರಿಗೆ ಬೋಧಿಸುತ್ತಾನೆ; (3) ಬಡತನದ ಬೇರು ಅಂದರೆ ಸ್ವಾರ್ಥತೆಯಿಂದ ವರ್ತಿಸುವ ನಮ್ಮ ಹುಟ್ಟುಸ್ವಭಾವವನ್ನು ಆತನು ತೆಗೆದುಹಾಕಬಲ್ಲನು. ಈ ಶುಭವಾರ್ತೆಯ ಮೂರು ಅಂಶಗಳನ್ನು ಈಗ ಪರಿಶೀಲಿಸೋಣ.
1. ಎಲ್ಲ ಜನಾಂಗಗಳ ಮೇಲೆ ಯೇಸುವಿಗಿರುವ ಅಧಿಕಾರ. ಯೇಸುವಿನ ಬಗ್ಗೆ ದೇವರ ವಾಕ್ಯ ಹೀಗನ್ನುತ್ತದೆ: “ಸಕಲಜನಾಂಗಕುಲಭಾಷೆಗಳವರು ಅವನನ್ನು ಸೇವಿಸಲೆಂದು ಅವನಿಗೆ ದೊರೆತನ . . . ಕೊಡೋಣವಾದವು.” (ದಾನಿಯೇಲ 7:14) ಒಂದೇ ಒಂದು ಸರ್ಕಾರ ಇಡೀ ಮಾನವಕುಲದ ಮೇಲೆ ಆಳುವುದರ ಪ್ರಯೋಜನಗಳನ್ನು ಊಹಿಸಬಲ್ಲಿರೊ? ಭೂಮಿಯ ಸಂಪನ್ಮೂಲಗಳ ಬಗ್ಗೆ ಆಗ ಯಾವುದೇ ಕಚ್ಚಾಟ, ಜಗಳವಿರಲಾರದು. ಅದನ್ನು ಎಲ್ಲರಿಗೂ ಸರಿಸಮಾನವಾಗಿ ಹಂಚಲಾಗುವುದು. ಈ ರೀತಿಯ ಕ್ರಮ ಕೈಗೊಳ್ಳಲು ಅಧಿಕಾರವಿರುವ ಲೋಕಾಧಿಪತಿ ತಾನಾಗಿರುವೆನೆಂದು ಸ್ವತಃ ಯೇಸುವೇ ಆಶ್ವಾಸನೆ ಕೊಟ್ಟನು. “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಎಲ್ಲ ಅಧಿಕಾರವು ನನಗೆ ಕೊಡಲ್ಪಟ್ಟಿದೆ” ಎಂದಾತ ಘೋಷಿಸಿದನು.—ಮತ್ತಾಯ 28:18.
2. ಬಡವರ ಬಗ್ಗೆ ಯೇಸುವಿಗಿದ್ದ ಕರುಣೆ. ಯೇಸು ಭೂಮಿಯ ಮೇಲೆ ತನ್ನ ಶುಶ್ರೂಷೆಯ ಸಮಯದಲ್ಲಿ ಬಡವರಿಗೆ ಕರುಣೆ ತೋರಿಸಿದನು. ಉದಾಹರಣೆಗೆ, 12 ವರ್ಷಗಳಿಂದ ರಕ್ತಸ್ರಾವದ ರೋಗದಿಂದ ನರಳುತ್ತಿದ್ದ ಮಹಿಳೆಯೊಬ್ಬಳು ತನ್ನ ವ್ಯಾಧಿಯ ಚಿಕಿತ್ಸೆಗಾಗಿ ತನ್ನೆಲ್ಲ ಹಣ ಸುರಿಸಿದ್ದಳು. ಖಂಡಿತವಾಗಿ ಆಕೆಗೆ ತೀವ್ರ ರಕ್ತಹೀನತೆಯಿತ್ತು. ಗುಣಹೊಂದಬೇಕೆಂಬ ಆಸೆಯಿಂದ ಅವಳು ಯೇಸುವಿನ ಉಡುಪನ್ನು ಮುಟ್ಟಿದಳು. ಆದರೆ ದೇವರ ನಿಯಮಕ್ಕನುಸಾರ, ಆ ರೋಗವಿದ್ದವರು ಯಾರನ್ನಾದರೂ ಮುಟ್ಟಿದರೆ ಅವನು ಅಶುದ್ಧನಾಗುತ್ತಿದ್ದನು. ಯೇಸುವಿಗೆ ಇದು ತಿಳಿದಿದ್ದರೂ ಆತನು ಆಕೆಯೊಂದಿಗೆ ದಯೆಯಿಂದ ವರ್ತಿಸಿದನು. “ಮಗಳೇ, ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ. ಸಮಾಧಾನದಿಂದ ಹೋಗು; ನಿನ್ನನ್ನು ಕಾಡುತ್ತಿದ್ದ ವಿಷಮ ರೋಗದಿಂದ ವಿಮುಕ್ತಳಾಗಿ ಆರೋಗ್ಯದಿಂದಿರು” ಎಂದನಾತ.—ಮಾರ್ಕ 5:25-34.
ಜನರ ಮನೋಭಾವವನ್ನು ಬದಲಾಯಿಸುವ ಶಕ್ತಿ ಯೇಸುವಿನ ಬೋಧನೆಗಳಿಗಿದೆ. ಹೀಗೆ ಅವರೂ ಕರುಣೆಯಿಂದ ವರ್ತಿಸಶಕ್ತರು. ಉದಾಹರಣೆಗೆ, ದೇವರನ್ನು ಮೆಚ್ಚಿಸುವುದು ಹೇಗೆಂದು ತಿಳಿಯಲಿಚ್ಛಿಸಿದ ಒಬ್ಬ ವ್ಯಕ್ತಿಗೆ ಯೇಸು ಕೊಟ್ಟ ಉತ್ತರದ ಕುರಿತು ಯೋಚಿಸಿ. ನಾವು ನಮ್ಮ ನೆರೆಯವರನ್ನು ಪ್ರೀತಿಸುವಂತೆ ದೇವರು ಅಪೇಕ್ಷಿಸುತ್ತಾನೆಂದು ಆ ವ್ಯಕ್ತಿಗೆ ಗೊತ್ತಿದ್ದರೂ ಅವನು ಯೇಸುವಿಗೆ, “ನಿಜವಾಗಿಯೂ ನನ್ನ ನೆರೆಯವನು ಯಾರು?” ಎಂದು ಕೇಳಿದನು.
ಇದಕ್ಕೆ ಉತ್ತರಿಸುತ್ತಾ ಯೇಸು ಅವನಿಗೊಂದು ದೃಷ್ಟಾಂತ ಕಥೆ ಹೇಳಿದನು. ಅದು ಯೆರೂಸಲೇಮಿನಿಂದ ಯೆರಿಕೋವಿಗೆ ಲೂಕ 10:25-37.
ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನ ಕುರಿತಾಗಿತ್ತು. ದಾರಿಯಲ್ಲಿ ಕಳ್ಳರು ಅವನನ್ನು ದೋಚಿ, ಅರೆಜೀವ ಮಾಡಿ ಬಿಟ್ಟುಹೋಗಿದ್ದರು. ಆ ಮಾರ್ಗದಲ್ಲಿ ಹೋಗುತ್ತಿದ್ದ ಅರ್ಚಕನೊಬ್ಬ ಈತನನ್ನು ನೋಡಿಯೂ ನೋಡದಂತೆ ಹಾದುಹೋದ. ಇನ್ನೊಬ್ಬನೂ ಹಾಗೆಯೇ ಮಾಡಿದ. ‘ಸಮಾರ್ಯ ಜನಾಂಗದವನೊಬ್ಬನು ಆ ದಾರಿಯಲ್ಲಿ ಪ್ರಯಾಣಿಸುತ್ತಾ ಆ ಮನುಷ್ಯನಿದ್ದಲ್ಲಿಗೆ ಬಂದಾಗ ಅವನನ್ನು ಕಂಡು ಕನಿಕರಪಟ್ಟನು.’ ಅವನು ಆ ವ್ಯಕ್ತಿಯ ಗಾಯಗಳನ್ನು ಶುಚಿಗೊಳಿಸಿ, ಬಟ್ಟೆಕಟ್ಟಿದ. ಒಂದು ವಸತಿಗೃಹಕ್ಕೆ ಕರೆದುಕೊಂಡು ಹೋಗಿ ಅವನ ಆರೈಕೆಮಾಡಲು ವಸತಿಗೃಹದವನಿಗೆ ಹಣವನ್ನೂ ಕೊಟ್ಟ. ಈ ಕಥೆ ಹೇಳಿದ ಬಳಿಕ ಯೇಸು ಅವನಿಗೆ, ‘ಕಳ್ಳರ ಕೈಗೆ ಸಿಕ್ಕಿಬಿದ್ದ ಮನುಷ್ಯನಿಗೆ ಯಾರು ನೆರೆಯವನಾದನು?’ ಎಂದು ಕೇಳಿದನು. “ಅವನೊಂದಿಗೆ ಕರುಣೆಯಿಂದ ವರ್ತಿಸಿದವನೇ” ಎಂಬ ಉತ್ತರ ಬಂತು. ಆಗ “ನೀನೂ ಹೋಗಿ ಅದರಂತೆಯೇ ಮಾಡುತ್ತಾ ಇರು” ಎಂದನು ಯೇಸು.—ಯೆಹೋವನ ಸಾಕ್ಷಿಗಳಾಗುವ ಜನರು ಯೇಸುವಿನ ಇಂಥ ಬೋಧನೆಗಳ ಅಧ್ಯಯನ ಮಾಡುವುದರಿಂದ ತಮ್ಮ ಮನೋಭಾವ ಬದಲಾಯಿಸಿಕೊಂಡು ಅಗತ್ಯವಿರುವವರಿಗೆ ನೆರವು ಕೊಡಲು ಮುಂದಾಗುತ್ತಾರೆ. ಉದಾಹರಣೆಗೆ, ಲ್ಯಾಟ್ವಿಯದ ಲೇಖಕಿಯೊಬ್ಬಳು 1960ರ ದಶಕದ ಮಧ್ಯಭಾಗದಲ್ಲಿ ಪೊಟ್ಮಾ ಎಂಬ ಶಿಕ್ಷೆ ಶಿಬಿರದಲ್ಲಿದ್ದಳು. ಆಗ ತನಗಿದ್ದ ಕಾಯಿಲೆಯ ಕುರಿತು ಆಕೆ ಸಮಯಾನಂತರ ಸೋವಿಯೆಟ್ ಸೆರೆಮನೆಗಳಲ್ಲಿ ಸ್ತ್ರೀಯರು (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಬರೆದದ್ದು: “ನಾನು ಅಸ್ವಸ್ಥಳಾಗಿದ್ದ ಸಮಯಾದ್ಯಂತ [ಯೆಹೋವನ ಸಾಕ್ಷಿಗಳು] ತುಂಬ ಶ್ರದ್ಧೆಯಿಂದ ನನ್ನ ಶುಶ್ರೂಷೆಮಾಡಿದರು. ಇದಕ್ಕಿಂತ ಉತ್ತಮ ಆರೈಕೆ ನನಗೆ ಖಂಡಿತ ಸಿಗುತ್ತಿರಲಿಲ್ಲ. . . . ಯಾವುದೇ ಧರ್ಮ ಇಲ್ಲವೇ ದೇಶದ ವ್ಯಕ್ತಿಗೆ ಸಹಾಯ ಮಾಡುವುದನ್ನು ಯೆಹೋವನ ಸಾಕ್ಷಿಗಳು ತಮ್ಮ ಕರ್ತವ್ಯವೆಂದೆಣಿಸುತ್ತಾರೆ.”
ಎಕ್ವಡಾರ್ ದೇಶದ ಆ್ಯಂಕಾನ್ ಪಟ್ಟಣದಲ್ಲಿದ್ದ ಕೆಲವು ಮಂದಿ ಯೆಹೋವನ ಸಾಕ್ಷಿಗಳು ಒಂದು ಆರ್ಥಿಕ ಬಿಕ್ಕಟ್ಟಿನಿಂದಾಗಿ ಒಂದೇ ತಮ್ಮ ಕೆಲಸ ಇಲ್ಲವೆ ತಮ್ಮ ಆದಾಯ ಕಳೆದುಕೊಂಡರು. ಆಗ ಅವರ ಜೊತೆ ಸಾಕ್ಷಿಗಳು ಅವರಿಗಾಗಿ ಹಣ ಸಂಗ್ರಹಿಸಲು ಮಾಡಿದ ಉಪಾಯವೇನೆಂದರೆ, ರಾತ್ರಿ ಮೀನುಹಿಡಿದು ಬರುವ ಬೆಸ್ತರಿಗಾಗಿ ಊಟ ತಯಾರಿಸಿ ಮಾರುವುದೇ (ಬಲಭಾಗದ ಚಿತ್ರ). ಸಭೆಯಲ್ಲಿರುವ ಎಲ್ಲರೂ, ಮಕ್ಕಳು ಸಹ ಈ ಕೆಲಸದಲ್ಲಿ ಕೈಜೋಡಿಸಿದರು. ರಾತ್ರಿ 1 ಘಂಟೆಗೆ ತಮ್ಮ ಕೆಲಸ ಆರಂಭಿಸಿ, ಮೀನಿನ ದೋಣಿಗಳು ಮುಂಜಾನೆ 4 ಘಂಟೆಗೆ ವಾಪಸ್ಸು ಬರುವಷ್ಟರಲ್ಲಿ ಊಟ ಸಿದ್ಧವಾಗಿಡುತ್ತಿದ್ದರು. ಹೀಗೆ ಗಳಿಸಿದ ಹಣವನ್ನು ಕೆಲಸ ಕಳಕೊಂಡ ಸಾಕ್ಷಿಗಳಿಗೆ ಅವರವರ ಅಗತ್ಯಕ್ಕೆ ತಕ್ಕಂತೆ ಹಂಚಿದರು.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತೆ ಜನರ ಮನೋಭಾವವನ್ನು ಬದಲಾಯಿಸುವ ಶಕ್ತಿ ಯೇಸುವಿನ ಮಾದರಿ ಹಾಗೂ ಬೋಧನೆಗಳಿಗೆ ನಿಜಕ್ಕೂ ಇದೆಯೆಂದು ಇಂಥ ಅನುಭವಗಳು ತೋರಿಸುತ್ತವೆ.
3. ಮಾನವ ಸ್ವಭಾವವನ್ನು ಬದಲಾಯಿಸಲು ಯೇಸುವಿಗಿರುವ ಶಕ್ತಿ. ಮಾನವರು ಸ್ವಭಾವತಃ ಸ್ವಾರ್ಥಿಗಳೆಂದು ನಮಗೆಲ್ಲರಿಗೂ ಗೊತ್ತು. ಬೈಬಲ್ ಆ ಸ್ವಭಾವವನ್ನು ಪಾಪ ಎಂದು ಕರೆಯುತ್ತದೆ. ಈ ಸ್ವಾರ್ಥ ಸ್ವಭಾವ ಬಡತನದ ಬೇರೂ ಆಗಿದೆ. ಯೇಸುವಿನ ಶಿಷ್ಯ ಪೌಲನು ಹೀಗೆ ಬರೆದನು: “ನಾನು ಒಳ್ಳೇದನ್ನು ಮಾಡಲು ಬಯಸುವುದಾದರೂ ಕೆಟ್ಟದ್ದೇ ನನ್ನಲ್ಲಿ ಇದೆ ಎಂಬ ನಿಯಮವು ನನಗೆ ಕಂಡುಬರುತ್ತದೆ. . . . ಈ ಮರಣಕ್ಕೆ ಒಳಗಾಗುತ್ತಿರುವ ದೇಹದಿಂದ ನನ್ನನ್ನು ರಕ್ಷಿಸುವವರು ಯಾರು? ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೇ!” (ರೋಮನ್ನರಿಗೆ 7:21-25) ಪೌಲನು ಇಲ್ಲಿ ತಿಳಿಸಿದ್ದೇನೆಂದರೆ, ದೇವರು ಯೇಸುವಿನ ಮುಖಾಂತರ ಆನುವಂಶಿಕ ಪಾಪಪೂರ್ಣ ಪ್ರವೃತ್ತಿಗಳಿಂದ, ಸ್ವಾರ್ಥದಿಂದಲೂ ಸತ್ಯಾರಾಧಕರನ್ನು ರಕ್ಷಿಸಲಿದ್ದಾನೆ. ಇದು ಹೇಗೆ ಸಾಧ್ಯ?
ಯೇಸುವಿನ ದೀಕ್ಷಾಸ್ನಾನವಾದ ಸ್ವಲ್ಪ ಸಮಯಾನಂತರ, ಸ್ನಾನಿಕನಾದ ಯೋಹಾನನು ಯೇಸುವನ್ನು ತನ್ನ ಶಿಷ್ಯರಿಗೆ ಪರಿಚಯಿಸುತ್ತಾ “ನೋಡಿ, ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ!” ಎಂದನು. (ಯೋಹಾನ 1:29) ಬಲುಬೇಗನೆ ಈ ಭೂಮಿ, ಸ್ವಾರ್ಥತೆಯೂ ಸೇರಿರುವ ಆನುವಂಶಿಕ ಪಾಪದಿಂದ ಮುಕ್ತರಾದ ಜನರಿಂದ ತುಂಬಿರುವುದು. (ಯೆಶಾಯ 11:9) ಹೀಗೆ ಯೇಸು, ಬಡತನದ ಬೇರನ್ನೇ ಕಿತ್ತುಹಾಕಿರುವನು.
ಎಲ್ಲರಿಗೂ ಅಗತ್ಯವಿರುವುದೆಲ್ಲವೂ ದೊರೆಯಲಿರುವ ಆ ಸಮಯದ ಕುರಿತು ಯೋಚಿಸಿದರೇ ಎಷ್ಟು ಖುಷಿಯಾಗುತ್ತದಲ್ಲವೇ! “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು” ಎನ್ನುತ್ತದೆ ದೇವರ ವಾಕ್ಯ. (ಮೀಕ 4:4) ಎಲ್ಲರಿಗೂ ತೃಪ್ತಿದಾಯಕ ಕೆಲಸ, ಭದ್ರತೆಯಿರುವ ಮಾತ್ರವಲ್ಲ ಬಡತನವಿಲ್ಲದ ಲೋಕವನ್ನು ಆನಂದಿಸುವ ಅವಕಾಶವಿರುವ ಸಮಯವನ್ನು ಆ ಮಾತುಗಳು ಕಾವ್ಯಾತ್ಮಕವಾಗಿ ವರ್ಣಿಸುತ್ತವೆ. ಆ ಸಮಯವು ಖಂಡಿತ ಯೆಹೋವನಿಗೆ ಸ್ತುತಿ ತರಲಿದೆ! (w11-E 06/01)