ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕವನ್ನು ನಿಯಂತ್ರಿಸುತ್ತಿರುವ ಅದೃಶ್ಯ ವ್ಯಕ್ತಿ

ಲೋಕವನ್ನು ನಿಯಂತ್ರಿಸುತ್ತಿರುವ ಅದೃಶ್ಯ ವ್ಯಕ್ತಿ

ಲೋಕವನ್ನು ನಿಯಂತ್ರಿಸುತ್ತಿರುವ ಅದೃಶ್ಯ ವ್ಯಕ್ತಿ

ನೀವು ಎಂದಾದರೂ ಭೂಗತಲೋಕದ ಖಳನಾಯಕನನ್ನು ಭೇಟಿಯಾಗಿದ್ದೀರಾ? ಇಲ್ಲ ಎಂದಮಾತ್ರಕ್ಕೆ ಅಂಥವರು ಇಲ್ಲವೇ ಇಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ. ಪಾತಕ ಮುಖಂಡರು ತಮ್ಮ ನಿಜ ಬಣ್ಣವನ್ನು ಮರೆಮಾಚುವುದರಲ್ಲಿ ನಿಸ್ಸೀಮರು. ಜೈಲಿನಲ್ಲಿ ಇದ್ದುಕೊಂಡೇ ಪಾತಕ ನಡೆಸುವಷ್ಟು ಚಾನಾಕ್ಷರು. ಆದರೆ ಅವರಿದ್ದಾರೆ ಎಂಬುದಕ್ಕೆ ಡ್ರಗ್ಸ್‌ ಸಂಬಂಧಿತ ಕಾದಾಟ, ವೇಶ್ಯಾವ್ಯಾಪಾರ, ಮನುಷ್ಯ ಕ್ರಯವಿಕ್ರಯಗಳ ಬಗ್ಗೆ ವಾರ್ತಾ ಪತ್ರಿಕೆಗಳಲ್ಲಿ ಬರುವ ಸುದ್ದಿಗಳು ಸಾಕ್ಷಿನೀಡುತ್ತವೆ. ಮಾನವ ಸಮಾಜದ ಮೇಲೆ ಅವರು ಬೀರುತ್ತಿರುವ ಭ್ರಷ್ಟಪ್ರಭಾವ, ಅವರ ಕೃತ್ಯಗಳ ದುಷ್ಪರಿಣಾಮಗಳು ಸಹ ಅವರಿದ್ದಾರೆ ಎನ್ನುವುದಕ್ಕೆ ರುಜುವಾತು.

ಸೈತಾನನು ಒಬ್ಬ ನೈಜ ವ್ಯಕ್ತಿ ಎಂದು ದೇವರ ವಾಕ್ಯವಾದ ಬೈಬಲ್‌ ತಿಳಿಸುತ್ತದೆ. ಅವನು ಪ್ರಭಾವಶಾಲಿ ಖಳನಾಯಕನಂತೆ “ಸುಳ್ಳಾದ ಸೂಚಕಕಾರ್ಯಗಳಿಂದಲೂ . . . ಅನೀತಿಯ ಪ್ರತಿಯೊಂದು ವಂಚನೆಯಿಂದಲೂ” ತನ್ನ ಕುಕರ್ಮಗಳನ್ನು ಸಾಧಿಸುತ್ತಾನೆ. “ಬೆಳಕಿನ ದೂತನೆಂದು ತೋರಿಸಿಕೊಳ್ಳಲು ವೇಷಹಾಕಿ”ಕೊಳ್ಳುವವನು ಅವನು ಎನ್ನುತ್ತದೆ ಬೈಬಲ್‌. (2 ಥೆಸಲೊನೀಕ 2:9, 10; 2 ಕೊರಿಂಥ 11:14) ಹಾಗಿದ್ದರೂ ಪಿಶಾಚನು ಇದ್ದಾನೆಂದು ಅವನ ಕೈಂಕರ್ಯಗಳಿಂದ ಪತ್ತೆಹಚ್ಚಬಹುದು. ಆದರೂ ಒಬ್ಬ ದುಷ್ಟ ಅದೃಶ್ಯ ಆತ್ಮ ವ್ಯಕ್ತಿ ಇದ್ದಾನೆಂಬದನ್ನು ಹೆಚ್ಚಿನ ಜನರು ಅರಗಿಸಿಕೊಳ್ಳಲಾರರು. ಇದಕ್ಕೆ ಕಾರಣವಾಗಿರುವ ಕೆಲವು ಅಡ್ಡಿತಡೆಗಳು ಮತ್ತು ಸುಳ್ಳುನಂಬಿಕೆಗಳ ಕುರಿತು ನಾವೀಗ ನೋಡೋಣ. ನಂತರ ಬೈಬಲ್‌ ಪಿಶಾಚನ ಕುರಿತು ಏನು ಹೇಳುತ್ತದೆ ಎಂದು ಪರೀಕ್ಷಿಸೋಣ.

“ಪ್ರೀತಿಯುಳ್ಳ ದೇವರು ಅದು ಹೇಗೆ ಪಿಶಾಚನಂಥ ಕ್ರೂರಿಯನ್ನು ಸೃಷ್ಟಿಸುವನು?” ದೇವರು ಒಳ್ಳೆಯವನೂ ಪರಿಪೂರ್ಣನೂ ಆಗಿದ್ದಾನೆಂದು ಬೈಬಲ್‌ ಹೇಳುತ್ತದೆ. ಹಾಗಾಗಿ ದುಷ್ಟ ಕ್ರೂರ ವ್ಯಕ್ತಿಯನ್ನು ಆತನು ಸೃಷ್ಟಿಸಿದ್ದಾನೆಂದು ನೆನಸುವುದು ಅಸಂಗತ. ದೇವರು ಅಂಥ ಕ್ರೂರಿಯನ್ನು ಸೃಷ್ಟಿಸಿದನೆಂದು ಬೈಬಲ್‌ನಲ್ಲಿ ಎಲ್ಲೂ ಹೇಳಲಾಗಿಲ್ಲ. ಬದಲಾಗಿ, “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ” ಎಂದು ಬೈಬಲ್‌ ತಿಳಿಸುತ್ತದೆ.—ಧರ್ಮೋಪದೇಶಕಾಂಡ 32:4; ಕೀರ್ತನೆ 5:4.

ಪರಿಗಣಿಸತಕ್ಕ ಪ್ರಶ್ನೆ ಏನೆಂದರೆ, ದೇವರು ಸೃಷ್ಟಿಸಿದ ಪರಿಪೂರ್ಣ ವ್ಯಕ್ತಿ ಹೇಗೆ ತಪ್ಪು ಮಾಡಸಾಧ್ಯ? ದೇವರು ತನ್ನ ಸೃಷ್ಟಿಜೀವಿಗಳನ್ನು ಯಂತ್ರಮಾನವರಂತೆ ನಿರ್ಮಿಸಲಿಲ್ಲ, ಅವರಿಗೆ ಇಚ್ಛಾಸ್ವಾತಂತ್ರ್ಯ ಕೊಟ್ಟಿದ್ದಾನೆ. ಸ್ವಂತವಾಗಿ ಆಯ್ಕೆಗಳನ್ನು ಮಾಡುವ ಸಾಮರ್ಥ್ಯವನ್ನು ದಯಪಾಲಿಸಿದ್ದಾನೆ. ಒಳ್ಳೇದನ್ನು ಮಾಡಬೇಕೋ ಅಥವಾ ಕೆಟ್ಟದ್ದನ್ನು ಮಾಡಬೇಕೋ ಎಂಬ ನಿರ್ಧಾರ ಮಾಡುವ ಸ್ವಾತಂತ್ರ್ಯವನ್ನು ತನ್ನ ಪರಿಪೂರ್ಣ ಬುದ್ಧಿಜೀವಿಗಳಿಗೆ ದೇವರು ಕೊಟ್ಟಿದ್ದನು.

ಅವರು ಕೆಟ್ಟದ್ದನ್ನು ಮಾಡಲು ಆರಿಸಿಕೊಳ್ಳುವುದಾದರೆ ದೇವರು ಅದನ್ನು ತಡೆಗಟ್ಟುವುದಿಲ್ಲ. ಒಂದುವೇಳೆ ತಡೆಗಟ್ಟಿದ್ದಲ್ಲಿ ಆತನು ಅವರಿಗೆ ಇಚ್ಛಾಸ್ವಾತಂತ್ರ್ಯ ಕೊಟ್ಟಿದ್ದಕ್ಕೆ ಅರ್ಥವಿರುವುದಿಲ್ಲ. ಪಿಶಾಚನು ತನಗಿದ್ದ ಇಚ್ಛಾಸ್ವಾತಂತ್ರ್ಯವನ್ನು ದುರುಪಯೋಗಿಸಿದ ಬಗ್ಗೆ ಯೇಸು ಹೇಳಿದ್ದು: “ಅವನು . . . ಸತ್ಯದಲ್ಲಿ ನೆಲೆನಿಲ್ಲಲಿಲ್ಲ.” (ಯೋಹಾನ 8:44) ಹಾಗಾದರೆ ಸೈತಾನನು ಒಂದೊಮ್ಮೆ ಸತ್ಯದಲ್ಲಿ ‘ನೆಲೆನಿಂತಿದ್ದನು’ ಎಂದರ್ಥ. ಪಿಶಾಚನಾಗುವ ಮುನ್ನ ಅವನು ಪರಿಪೂರ್ಣ ಆತ್ಮಜೀವಿಯಾಗಿದ್ದನು. * ಯೆಹೋವ ದೇವರು ತನ್ನ ಸೃಷ್ಟಿಜೀವಿಗಳಿಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟದ್ದು ಆತನಿಗೆ ಅವರ ಮೇಲೆ ಪ್ರೀತಿ ಮತ್ತು ಭರವಸೆ ಇರುವುದರಿಂದಲೇ.—ಪುಟ 26ರಲ್ಲಿರುವ  “ಪರಿಪೂರ್ಣ ವ್ಯಕ್ತಿ ಅಪರಿಪೂರ್ಣನಾದದ್ದು ಹೇಗೆ?” ಎಂಬ ಚೌಕ ನೋಡಿ.

“ಪಿಶಾಚನು ದೇವರ ಸೇವಕನಾ?” ಹೌದು ಎಂದು ಕೆಲವರು ವಾದಿಸುತ್ತಾ ಬೈಬಲ್‌ನಲ್ಲಿರುವ ಯೋಬ ಎಂಬ ಪುಸ್ತಕದಲ್ಲಿರುವ ವಿಷಯವನ್ನು ಆಧಾರವಾಗಿ ನೀಡುತ್ತಾರೆ. ಪಿಶಾಚನು “ಭೂಲೋಕದಲ್ಲಿ ಸಂಚರಿಸುತ್ತಾ” ಬಂದನು ಎಂಬ ವಾಕ್ಯವನ್ನು ಒಂದು ಬೈಬಲ್‌ ವ್ಯಾಖ್ಯಾನ ವಿವರಿಸಿದೆ. ಅದರ ಪ್ರಕಾರ, ಪುರಾತನ ಪರ್ಷಿಯನ್‌ ಗೂಢಚಾರರು ದೇಶದಲ್ಲಿ ಅಲ್ಲಲ್ಲಿ ಸಂಚರಿಸುತ್ತಾ ಮಾಹಿತಿಯನ್ನು ಸಂಗ್ರಹಿಸಿ ರಾಜನಿಗೆ ವರದಿಮಾಡುವ ಕಾರ್ಯಕ್ಕೆ ಅದು ಸೂಚಿತ. (ಯೋಬ 1:7) ಆದರೆ ಪಿಶಾಚನು ನಿಜವಾಗಿ ದೇವರ ಗೂಢಚಾರನಾಗಿದ್ದರೆ “ಭೂಲೋಕದಲ್ಲಿ ಸಂಚರಿಸುತ್ತಾ . . . ಬಂದೆನು” ಎಂದು ದೇವರಿಗೆ ವಿವರಿಸುವ ಅಗತ್ಯವೇನಿತ್ತು? ಯೋಬನ ವೃತ್ತಾಂತವು ಪಿಶಾಚನನ್ನು ದೇವರ ಸೇವಕನಾಗಿ ಅಲ್ಲ ಬದಲಾಗಿ ದೇವರ ವಿರೋಧಿಯಾಗಿ ಚಿತ್ರಿಸುತ್ತದೆ. ಸೈತಾನ ಎಂದು ಕರೆಯುತ್ತದೆ. ಆ ಹೆಸರಿನ ಅರ್ಥವೇ “ಪ್ರತಿಭಟಕ” ಎಂದಾಗಿದೆ. (ಯೋಬ 1:6) ಹೀಗಿರಲಾಗಿ ಪಿಶಾಚ ದೇವರ ಸೇವಕ ಎಂಬ ವಿಚಾರ ಬಂದದ್ದಾದರೂ ಎಲ್ಲಿಂದ?

ಕ್ರಿ.ಶ. ಒಂದನೇ ಶತಮಾನದಷ್ಟು ಹಿಂದೆಯೇ ಕುಮ್ರಾನ್‌ ಪಂಥದ “ಬುಕ್ಸ್‌ ಆಫ್‌ ಜ್ಯುಬಿಲಿ” ಮತ್ತು “ಕಾಮನ್‌ ರೂಲ್‌” ಎಂಬ ಪುಸ್ತಕಗಳಲ್ಲಿ ಈ ವಿಚಾರದ ಬಗ್ಗೆ ಹೇಳಲಾಗಿದೆ. ಆ ಪುಸ್ತಕಗಳು ಪಿಶಾಚನನ್ನು ದೇವರೊಂದಿಗೆ ವಾಗ್ವಾದ ನಡೆಸುತ್ತಿರುವ ಹಾಗೆ ಚಿತ್ರಿಸುತ್ತವಾದರೂ ದೇವರ ಚಿತ್ತಕ್ಕೆ ಅಧೀನನಾಗಿದ್ದಾನೆಂದೂ ಸೂಚಿಸುತ್ತವೆ. ಪಿಶಾಚನು ದೇವರ ಒಂದು ಸಾಧನ ಎಂಬ ಮಾರ್ಟಿನ್‌ ಲೂಥರನ (ಪ್ರಾಟೆಸ್ಟಂಟ್‌ ಮತ ಸುಧಾರಕ) ಅಭಿಪ್ರಾಯವನ್ನು ಚರಿತ್ರೆಗಾರ ಜೆ. ಬಿ. ರಸ್ಸಲ್‌ ಮೆಫಿಸ್ಟೋಫಿಲಿಸ್‌ ಎಂಬ ತನ್ನ ಪುಸ್ತಕದಲ್ಲಿ ವಿವರಿಸಿದ್ದಾರೆ. “ತನ್ನ ತೋಟವನ್ನು ಅಚ್ಚುಕಟ್ಟಾಗಿಡಲು ಬಳಸುವ ಕುಡುಗೋಲು ಅಥವಾ ಕಳೆಗುದ್ದಲಿಯಂತೆ ದೇವರು ಪಿಶಾಚನನ್ನು ಬಳಸುತ್ತಾನೆ” ಎಂಬ ಲೂಥರನ ನಂಬಿಕೆಯ ಬಗ್ಗೆ ಆ ಪುಸ್ತಕ ತಿಳಿಸುತ್ತದೆ. ಕಳೆಗುದ್ದಲಿ ತನ್ನಿಂದ ತಾನೆ ಕಳೆಗಳನ್ನು ತೆಗೆಯುವುದಿಲ್ಲ. ಹಾಗೆಯೇ ಪಿಶಾಚನ ಕೆಲಸಗಳ ಹಿಂದೆ ದೇವರ ಕೈವಾಡವಿದೆ ಎಂಬ ಆಲೋಚನೆಯನ್ನು ರಸ್ಸಲ್‌ ತನ್ನ ಪುಸ್ತಕದಲ್ಲಿ ವ್ಯಕ್ತಪಡಿಸಿದ್ದಾರೆ. ಲೂಥರನ ಬೋಧನೆಯನ್ನು ಸಮಯಾನಂತರ ಫ್ರೆಂಚ್‌ ತತ್ವಜ್ಞಾನಿ ಜಾನ್‌ ಕಾಲ್ವಿನ್‌ರಂಥವರು ಒಪ್ಪಿದರಾದರೂ ಅದು ಅನೇಕರ ನೀತಿಪ್ರಜ್ಞೆಯನ್ನು ಘಾಸಿಗೊಳಿಸಿತು. ಪ್ರೀತಿ ಸ್ವರೂಪಿಯಾದ ದೇವರು ಕೆಟ್ಟತನವನ್ನು ಅನುಮತಿಸುವನೊ? ಕೆಟ್ಟದ್ದಾಗಬೇಕು ಎಂದು ಬಯಸುವನೊ? ಎಂಬ ಪ್ರಶ್ನೆಗಳು ಎದ್ದವು. (ಯಾಕೋಬ 1:13) ಇಂಥ ಬೋಧನೆಗಳಿಂದ ಬೇಸತ್ತಿರುವ ಹಾಗೂ 20ನೆಯ ಶತಮಾನದ ಭೀಕರ ಘಟನೆಗಳನ್ನು ನೋಡುತ್ತಿರುವ ಜನರು ದೇವರಲ್ಲಿ ಹಾಗೂ ಪಿಶಾಚನು ಇದ್ದಾನೆ ಎಂಬುದರಲ್ಲಿ ನಂಬಿಕೆ ಬಿಟ್ಟಿದ್ದಾರೆ.

“ನಮ್ಮಲ್ಲಿರುವ ಕೆಟ್ಟಗುಣವನ್ನೇ ಪಿಶಾಚನೆಂದು ಕರೆಯುತ್ತಾರಾ?” ಪಿಶಾಚನನ್ನು ಬರೇ ಒಂದು ಕೆಟ್ಟ ಗುಣವೆಂದು ಪರಿಗಣಿಸುವುದಾದರೆ ಬೈಬಲಿನ ಕೆಲವು ಭಾಗಗಳು ಅರ್ಥರಹಿತವಾಗುತ್ತವೆ. ಉದಾಹರಣೆಗೆ, ಯೋಬ 2:3-6ರಲ್ಲಿರುವ ಸಂಭಾಷಣೆಯನ್ನೇ ತೆಗೆದುಕೊಳ್ಳಿ. ಅದರಲ್ಲಿ ದೇವರು ಮಾತಾಡುತ್ತಿದ್ದದಾದರೂ ಯಾರೊಂದಿಗೆ? ಯೋಬನಲ್ಲಿದ್ದ ಕೆಟ್ಟ ಗುಣದೊಂದಿಗೋ? ಇಲ್ಲವೇ ತನ್ನೊಂದಿಗೆ ತಾನೇ ಮಾತಾಡುತ್ತಿದ್ದನೋ? ಅಷ್ಟಲ್ಲದೆ, ಒಂದು ಕ್ಷಣ ಯೋಬನ ಸದ್ಗುಣಗಳನ್ನು ಹರಸುತ್ತಾ ಇನ್ನೊಂದು ಕ್ಷಣ ಅವನಲ್ಲಿರುವ ಕೆಟ್ಟ ಗುಣವನ್ನು ಕೆರಳಿಸುತ್ತಾ ಅವನನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದನೋ? ಹೀಗೆ ಆರೋಪಿಸುವುದಾದರೆ ದೇವರು “ನಿರ್ವಂಚಕನು” ಎಂಬ ಬೈಬಲ್‌ ಮಾತು ಸುಳ್ಳೆಂದೂ ಆತ ವಕ್ರಬುದ್ಧಿಯವನೆಂದೂ ಹೇಳಿದಂತಾಗದೇ? (ಕೀರ್ತನೆ 92:15) ಆದರೆ ವೃತ್ತಾಂತವು, ದೇವರು ಯೋಬನಿಗೆ ಹಾನಿ ತರಲು ನಿರಾಕರಿಸಿದನು ಎಂದು ಹೇಳುತ್ತದೆ. ಹಾಗಾದರೆ, ಪಿಶಾಚನು ನಮ್ಮಲ್ಲಿರುವ ಯಾವುದೋ ಕೆಟ್ಟಗುಣವಲ್ಲ. ದೇವರ ವ್ಯಕ್ತಿತ್ವದಲ್ಲಿ ಅವಿತಿರುವ ಕೆಟ್ಟತನವೂ ಅಲ್ಲ. ಬದಲಾಗಿ ದೇವರ ವಿರುದ್ಧ ಹೋದ ಒಬ್ಬ ಆತ್ಮಜೀವಿ.

ಲೋಕವನ್ನು ನಿಜವಾಗಿ ಆಳುತ್ತಿರುವವನು ಯಾರು?

ಸೈತಾನ ಇದ್ದಾನೆ ಎಂಬ ನಂಬಿಕೆಯೆಲ್ಲಾ ಹಳೇಕಾಲದ್ದು ಎಂದು ಅನೇಕರು ನೆನಸುತ್ತಾರೆ. ಆದರೆ ಈ ಘೋರ ಕೆಟ್ಟತನಕ್ಕೆಲ್ಲ ಸೈತಾನನೇ ಹೊರತು ಬೇರೆ ಯಾವ ಕಾರಣವೂ ತರ್ಕಸಮ್ಮತವಾದದ್ದಲ್ಲ. ಪಿಶಾಚನು ಇಲ್ಲ ಎಂದು ನಂಬಿಸುವ ಪ್ರಯತ್ನದಿಂದಾಗಿ ಜನರು ದೇವರನ್ನೂ ನೈತಿಕ ಸೀಮಿತಗಳನ್ನೂ ತ್ಯಜಿಸಿದ್ದಾರೆ.

“ತಾನು ಅಸ್ತಿತ್ವದಲ್ಲಿಲ್ಲ ಎಂದು ನಂಬಿಸುವುದೇ ಪಿಶಾಚನ ಅತ್ಯಂತ ಕುಟಿಲ ಕುಯುಕ್ತಿ” ಎಂದು ಬರೆದರು 19ನೆಯ ಶತಕದ ಕವಿ ಶಾರ್ಲ್‌ ಪಿಯೆರ್‌ ಬಾಡೆಲೆಯರ್‌. ಪಿಶಾಚನು ತನ್ನ ಅಸ್ತಿತ್ವವನ್ನು ಮರೆಮಾಡುವ ಮೂಲಕ ದೇವರು ಇದ್ದಾನೋ ಇಲ್ಲವೋ ಎಂಬ ಸಂದೇಹವನ್ನೂ ಎಬ್ಬಿಸಿದ್ದಾನೆ. ಪಿಶಾಚನೇ ಇಲ್ಲವೆಂದಾದರೆ ಕೆಟ್ಟತನಕ್ಕೆಲ್ಲ ದೇವರೇ ಜವಾಬ್ದಾರಿ ಎಂದಾಗುವುದಿಲ್ಲವೇ? ಇದನ್ನೇ ಜನರು ನಂಬಬೇಕೆಂದು ಪಿಶಾಚನು ಬಯಸುತ್ತಾನೆ.

ಒಬ್ಬ ಚತುರ ಪಾತಕಿಯಂತೆ ಪಿಶಾಚನು ತನ್ನ ನಿಜ ಇರಾದೆಯನ್ನು ಮರೆಮಾಡಲು ವೇಷಹಾಕಿಕೊಳ್ಳುತ್ತಾನೆ. ಆ ಇರಾದೆ ಯಾವುದು? ಬೈಬಲ್‌ ಉತ್ತರಿಸುವುದು: “ದೇವರ ಸ್ವರೂಪವಾಗಿರುವ ಕ್ರಿಸ್ತನ ಕುರಿತಾದ ಮಹಿಮಾಭರಿತ ಸುವಾರ್ತೆಯ ಬೆಳಕು ಪ್ರಕಾಶಿಸಬಾರದೆಂದು ಈ ವಿಷಯಗಳ ವ್ಯವಸ್ಥೆಯ ದೇವನು ಅವಿಶ್ವಾಸಿಗಳ ಮನಸ್ಸನ್ನು ಕುರುಡುಮಾಡಿದ್ದಾನೆ.”—2 ಕೊರಿಂಥ 4:4.

ಆದರೆ ಒಂದು ಮಹತ್ವದ ಪ್ರಶ್ನೆ ಇನ್ನೂ ಉಳಿದಿದೆ. ಎಲ್ಲಾ ಕೆಡುಕು, ಸಂಕಷ್ಟಗಳಿಗೆ ಕಾರಣನಾಗಿರುವ ಈ ಕುಟಿಲ ಚಾಣಾಕ್ಷನನ್ನು ದೇವರು ಹೀಗೆಯೇ ಬಿಡುವನೋ ಇಲ್ಲವೇ ಏನಾದರೂ ಕ್ರಮಕೈಗೊಳ್ಳುವನೋ? ಇದನ್ನು ಮುಂದಿನ ಲೇಖನದಲ್ಲಿ ನೋಡೋಣ. (w11-E 09/01)

[ಪಾದಟಿಪ್ಪಣಿ]

^ ಪ್ಯಾರ. 6 ಪಿಶಾಚನು ದಂಗೆಯೆದಾಕ್ಷಣವೇ ದೇವರು ಅದನ್ನು ದಮನ ಮಾಡಲಿಲ್ಲ ಏಕೆ ಎಂಬುದನ್ನು ತಿಳಿಯಲು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 11ನೇ ಅಧ್ಯಾಯ ನೋಡಿ.

[ಪುಟ 25ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪಿಶಾಚನು ದೇವರ ಸೇವಕನೋ? ದೇವರ ವಿರೋಧಿಯೋ?

[ಪುಟ 26ರಲ್ಲಿರುವ ಚೌಕ/ಚಿತ್ರ]

 ಪರಿಪೂರ್ಣ ವ್ಯಕ್ತಿ ಅಪರಿಪೂರ್ಣನಾದದ್ದು ಹೇಗೆ?

ಆರಂಭದಲ್ಲಿ ದೇವರು ಸೃಷ್ಟಿಸಿದ ಬುದ್ಧಿಜೀವಿಗಳು ಪರಿಪೂರ್ಣರಾಗಿದ್ದರೂ ಅವರು ಮನಸ್ಸಿಗೆ ಬಂದ ಹಾಗೆ ಮಾಡುವಂತಿರಲಿಲ್ಲ. ಆದಾಮನು ತನ್ನ ನಿರ್ಮಾಣಿಕನು ಇಟ್ಟಿದ್ದ ದೈಹಿಕ ಸೀಮಿತಗಳನ್ನು ಮೀರಸಾಧ್ಯವಿರಲಿಲ್ಲ. ಉದಾಹರಣೆಗೆ ಅವನು ಕಸಕೊಳೆ, ಕಲ್ಲುಮಣ್ಣು, ಮರಮಟ್ಟನ್ನು ತಿಂದಿದ್ದರೆ ಅದರ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತಿತ್ತು. ಗುರುತ್ವಾಕರ್ಷಣ ನಿಯಮವನ್ನು ನಿರ್ಲಕ್ಷಿಸಿ ಬೆಟ್ಟದಿಂದ ದುಮುಕಿದ್ದರೆ ಅವನು ಕೈಕಾಲು ಮುರಿದುಕೊಳ್ಳುತ್ತಿದ್ದನು ಅಥವಾ ಪ್ರಾಣ ಕಳಕೊಳ್ಳುತ್ತಿದ್ದನು.

ತದ್ರೀತಿಯಲ್ಲಿ, ಯಾವ ಪರಿಪೂರ್ಣ ಜೀವಿಯೂ, ಅವನು ಮಾನವನಾಗಿರಲಿ ದೇವದೂತನಾಗಿರಲಿ, ದೇವರಿಟ್ಟ ನೈತಿಕ ಸೀಮಿತಗಳನ್ನು ಮೀರಿ ಸಫಲನಾಗಲು ಸಾಧ್ಯವಿಲ್ಲ. ಮೀರಿದರೆ ಅದರ ಕಹಿ ಫಲವನ್ನು ಉಣ್ಣಲೇಬೇಕಾಗುತ್ತದೆ. ಆದ್ದರಿಂದ ಬುದ್ಧಿಜೀವಿ ತನ್ನ ಇಚ್ಛಾಸ್ವಾತಂತ್ರ್ಯವನ್ನು ದುರುಪಯೋಗಿಸಿದರೆ ತಪ್ಪುದಾರಿಗೆ ಬೀಳುವುದು ಖಂಡಿತ.—ಆದಿಕಾಂಡ 1:29; ಮತ್ತಾಯ 4:4.