ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಮೆಚ್ಚುವ ಧರ್ಮವನ್ನು ಹೇಗೆ ಗುರುತಿಸುವಿರಿ?

ದೇವರು ಮೆಚ್ಚುವ ಧರ್ಮವನ್ನು ಹೇಗೆ ಗುರುತಿಸುವಿರಿ?

ದೇವರ ವಾಕ್ಯದಿಂದ ಕಲಿಯಿರಿ

ದೇವರು ಮೆಚ್ಚುವ ಧರ್ಮವನ್ನು ಹೇಗೆ ಗುರುತಿಸುವಿರಿ?

ನಿಮ್ಮ ಮನಸ್ಸಿಗೆ ಬಂದಿರಬಹುದಾದ ಕೆಲವು ಪ್ರಶ್ನೆಗಳು ಈ ಲೇಖನದಲ್ಲಿವೆ. ಅವುಗಳ ಉತ್ತರಗಳು ದೇವರ ವಾಕ್ಯವಾದ ಬೈಬಲಿನಲ್ಲಿ ಎಲ್ಲಿವೆಯೆಂದೂ ತೋರಿಸಲಾಗಿದೆ. ಈ ಉತ್ತರಗಳನ್ನು ನಿಮ್ಮ ಜೊತೆ ಚರ್ಚಿಸಲು ಯೆಹೋವನ ಸಾಕ್ಷಿಗಳು ಉತ್ಸುಕರಾಗಿದ್ದಾರೆ.

1. ದೇವರು ಎಲ್ಲ ಧರ್ಮಗಳನ್ನು ಮೆಚ್ಚುತ್ತಾನೊ?

ಒಂದೇ ಒಂದು ಧರ್ಮವನ್ನು ದೇವರು ಮೆಚ್ಚುತ್ತಾನೆಂದು ಯೇಸು ತನ್ನ ಅನುಯಾಯಿಗಳಿಗೆ ಕಲಿಸಿದನು. ಅದು ಜೀವಕ್ಕೆ ನಡೆಸುವ ದಾರಿಯಂತಿದೆ. “ಅದನ್ನು ಕಂಡುಕೊಳ್ಳುವವರು ಕೊಂಚವೇ ಜನ” ಎಂದನಾತ. (ಮತ್ತಾಯ 7:14) ಬೈಬಲಿಗೆ ಹೊಂದಿಕೆಯಲ್ಲಿರುವ ಆರಾಧನೆಯನ್ನು ಮಾತ್ರ ದೇವರು ಸ್ವೀಕರಿಸುತ್ತಾನೆ. ಇಂಥ ಆರಾಧನೆ ಮಾಡುವವರು ಒಂದೇ ನಂಬಿಕೆಯಲ್ಲಿ ಐಕ್ಯರಾಗಿರುತ್ತಾರೆ.—ಯೋಹಾನ 4:23, 24; 14:6; ಎಫೆಸ 4:4, 5 ಓದಿ.

2. ಬೈಬಲನ್ನು ನಂಬುವ ಕ್ರೈಸ್ತರಲ್ಲೇ ಇಷ್ಟೊಂದು ಪಂಗಡಗಳೇಕೆ?

ಸುಳ್ಳು ಬೋಧಕರು ನಿಜ ಕ್ರೈಸ್ತ ಧರ್ಮವನ್ನು ಭ್ರಷ್ಟಗೊಳಿಸಿ ಅದನ್ನು ಸ್ವಂತ ಹಿತಸಾಧನೆಗೆ ಬಳಸಿಕೊಂಡಿದ್ದಾರೆ. ಯೇಸು ಮುಂತಿಳಿಸಿದಂತೆ ಇವರು ಕುರಿವೇಷದಲ್ಲಿರುವ ಹಸಿದ ತೋಳಗಳು. (ಮತ್ತಾಯ 7:13-15, 21, 23) ಯೇಸುವಿನ ಹತ್ತಿರದ ಒಡನಾಡಿಗಳಾಗಿದ್ದ ಅಪೊಸ್ತಲರು ಮೃತಪಟ್ಟ ಬಳಿಕ ಸುಳ್ಳು ಕ್ರೈಸ್ತತ್ವ ತಲೆ ಎತ್ತಿತು.—ಅಪೊಸ್ತಲರ ಕಾರ್ಯಗಳು 20:29, 30 ಓದಿ.

3. ನಿಜ ಕ್ರೈಸ್ತ ಧರ್ಮವನ್ನು ಗುರುತಿಸುವುದಾದರೂ ಹೇಗೆ?

ನಿಜ ಕ್ರೈಸ್ತರು ಬೈಬಲನ್ನು ದೇವರ ವಾಕ್ಯವೆಂದು ಗೌರವಿಸುತ್ತಾರೆ. ಅದರಲ್ಲಿರುವ ಸೂತ್ರಗಳಿಗನುಸಾರ ಜೀವಿಸಲು ಶ್ರಮಿಸುತ್ತಾರೆ. ಅವರ ಧರ್ಮ ಮಾನವ ವಿಚಾರಗಳ ಮೇಲೆ ಆಧರಿತವಾಗಿಲ್ಲ. (ಮತ್ತಾಯ 15:7-9) ಅವರು ಹೇಳುವುದೊಂದು ಮಾಡುವುದೊಂದು ಆಗಿರುವುದಿಲ್ಲ.—ಯೋಹಾನ 17:17; 2 ತಿಮೊಥೆಯ 3:16, 17 ಓದಿ.

ಅವರು ‘ಯೆಹೋವ’ ಎಂಬ ದೇವನಾಮವನ್ನು ಗೌರವಿಸುತ್ತಾರೆ. ದೇವರ ಈ ನಾಮವನ್ನು ಯೇಸು ಪ್ರಕಟಗೊಳಿಸಿದನು. ಜನರು ದೇವರನ್ನು ತಿಳಿಯುವಂತೆ ಸಹಾಯ ಮಾಡಿದ್ದಲ್ಲದೆ ದೇವರ ನಾಮದ ಪವಿತ್ರೀಕರಣಕ್ಕಾಗಿ ಪ್ರಾರ್ಥಿಸಲು ಕಲಿಸಿದನು. (ಮತ್ತಾಯ 6:9) ನೀವಿರುವ ಸ್ಥಳದಲ್ಲಿ, ಯಾವ ಧರ್ಮ ‘ಯೆಹೋವ’ ದೇವರ ಹೆಸರನ್ನು ಬಳಸುವುದಕ್ಕೆ ಮಹತ್ವಕೊಡುತ್ತದೆ?—ಯೋಹಾನ 17:26; ರೋಮನ್ನರಿಗೆ 10:13, 14 ಓದಿ.

4. ನಿಜ ಕ್ರೈಸ್ತರನ್ನು ಗುರುತಿಸಲು ಬೇರಾವ ವಿಷಯಗಳಿವೆ?

ಅವರು ದೇವರ ರಾಜ್ಯದ ಕುರಿತು ಸಾರುತ್ತಾರೆ. ಆ ರಾಜ್ಯದ ಕುರಿತಾಗಿ ಸಾರಲು ದೇವರು ಯೇಸುವನ್ನು ಕಳುಹಿಸಿದನು. ದೇವರ ರಾಜ್ಯ ಮಾತ್ರ ಮಾನವಕುಲದ ಏಕೈಕ ನಿರೀಕ್ಷೆ. ಸಾಯುವ ಕ್ಷಣದಲ್ಲೂ ಯೇಸು ಅದರ ಕುರಿತು ಸಾರಿದನು. (ಲೂಕ 4:43; 8:1; 23:42, 43) ತನ್ನ ಹಿಂಬಾಲಕರು ದೇವರ ರಾಜ್ಯದ ಕುರಿತು ಸಾರುವಂತೆ ಹೇಳಿದ್ದನು. ಅದರಂತೆ ಇಂದು ಜನರೊಟ್ಟಿಗೆ ದೇವರ ರಾಜ್ಯದ ಕುರಿತು ಮಾತಾಡುವವರೇ ನಿಜ ಕ್ರೈಸ್ತರು.—ಮತ್ತಾಯ 10:7; 24:14 ಓದಿ.

ಯೇಸುವಿನ ಹಿಂಬಾಲಕರು ಈ ದುಷ್ಟ ಲೋಕದ ಭಾಗವಾಗಿರುವುದಿಲ್ಲ. ಅವರು ಲೋಕದ ರಾಜಕೀಯ ವಿಷಯಗಳಲ್ಲಿ, ಸಾಮಾಜಿಕ ಕಲಹಗಳಲ್ಲಿ ತಲೆಹಾಕುವುದಿಲ್ಲ. (ಯೋಹಾನ 17:16) ಈ ಲೋಕದ ಹಾನಿಕರ ಆಚಾರವಿಚಾರಗಳನ್ನು ದೂರವಿಡುತ್ತಾರೆ.ಯಾಕೋಬ 1:27; 4:4 ಓದಿ.

5. ನಿಜ ಕ್ರೈಸ್ತ ಧರ್ಮದ ವಿಶಿಷ್ಟ ಲಕ್ಷಣ ಯಾವುದು?

ನಿಜ ಕ್ರೈಸ್ತರು ಒಬ್ಬರನ್ನೊಬ್ಬರು ತುಂಬ ಪ್ರೀತಿಸುತ್ತಾರೆ. ಎಲ್ಲ ಜಾತಿ, ಭಾಷೆಯ ಜನರನ್ನು ಗೌರವಿಸಬೇಕೆಂದು ಅವರು ದೇವರ ವಾಕ್ಯದಿಂದ ಕಲಿಯುತ್ತಾರೆ. ಸುಳ್ಳು ಧರ್ಮವು ಅನೇಕವೇಳೆ ಯುದ್ಧಗಳಿಗೆ ಕುಮ್ಮಕ್ಕು ಕೊಟ್ಟಿದೆ. ನಿಜ ಧರ್ಮ ಹಾಗೆ ಮಾಡುವುದಿಲ್ಲ. (ಮೀಕ 4:1-4) ನಿಜ ಕ್ರೈಸ್ತರು ಜೊತೆಮಾನವರಿಗೆ ಸಹಾಯ, ಸಾಂತ್ವನ ನೀಡಲು ತಮ್ಮ ಸಮಯ, ಸಂಪನ್ಮೂಲಗಳನ್ನು ನಿಸ್ವಾರ್ಥದಿಂದ ಬಳಸುತ್ತಾರೆ.—ಯೋಹಾನ 13:34, 35; 1 ಯೋಹಾನ 4:20, 21 ಓದಿ.

ಯಾವ ಧರ್ಮ ತನ್ನೆಲ್ಲ ಬೋಧನೆಗಳನ್ನು ಬೈಬಲಿನ ಮೇಲೆ ಆಧರಿಸಿದೆ? ದೇವರ ನಾಮವನ್ನು ಗೌರವಿಸುತ್ತದೆ? ದೇವರ ರಾಜ್ಯವೇ ಮಾನವಕುಲದ ಏಕೈಕ ನಿರೀಕ್ಷೆಯೆಂದು ಘೋಷಿಸುತ್ತದೆ? ಯುದ್ಧಕ್ಕೆ ಕುಮ್ಮಕ್ಕು ಕೊಡದೆ ನಿಜ ಪ್ರೀತಿ ತೋರಿಸುತ್ತದೆ? ಅನೇಕರು ಒಪ್ಪಿಕೊಳ್ಳುವಂತೆ ಅವರು ಯೆಹೋವನ ಸಾಕ್ಷಿಗಳೇ.—1 ಯೋಹಾನ 3:10-12. (w11-E 08/01)

ಹೆಚ್ಚಿನ ಮಾಹಿತಿಗಾಗಿ , ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 15ನೇ ಅಧ್ಯಾಯ ನೋಡಿ.

[ಪುಟ 16ರಲ್ಲಿರುವ ಚಿತ್ರ]

“ದೇವರನ್ನು ತಿಳಿದಿದ್ದೇವೆಂದು . . . ಬಹಿರಂಗವಾಗಿ ಪ್ರಕಟಿಸುತ್ತಾರೆ, ಆದರೆ ತಮ್ಮ ಕೃತ್ಯಗಳಿಂದ ಆತನನ್ನು ಅಲ್ಲಗಳೆಯುತ್ತಾರೆ.”—ತೀತ 1:16