ನೀವು ಹೇಗೆ ದೇವರ ಸ್ನೇಹಿತರಾಗಬಲ್ಲಿರಿ?
ದೇವರ ವಾಕ್ಯದಿಂದ ಕಲಿಯಿರಿ
ನೀವು ಹೇಗೆ ದೇವರ ಸ್ನೇಹಿತರಾಗಬಲ್ಲಿರಿ?
ನಿಮ್ಮ ಮನಸ್ಸಿಗೆ ಬಂದಿರಬಹುದಾದ ಕೆಲವು ಪ್ರಶ್ನೆಗಳು ಈ ಲೇಖನದಲ್ಲಿವೆ. ಅವುಗಳ ಉತ್ತರಗಳು ದೇವರ ವಾಕ್ಯವಾದ ಬೈಬಲಿನಲ್ಲಿ ಎಲ್ಲಿವೆಯೆಂದೂ ತೋರಿಸಲಾಗಿದೆ. ಈ ಉತ್ತರಗಳನ್ನು ನಿಮ್ಮ ಜೊತೆ ಚರ್ಚಿಸಲು ಯೆಹೋವನ ಸಾಕ್ಷಿಗಳು ಉತ್ಸುಕರಾಗಿದ್ದಾರೆ.
1. ದೇವರು ಎಲ್ಲರ ಪ್ರಾರ್ಥನೆಗಳನ್ನು ಕೇಳುತ್ತಾನೊ?
ಪ್ರಾರ್ಥನೆ ಮಾಡುವಂತೆ, ಈ ಮೂಲಕ ತನಗೆ ಹತ್ತಿರವಾಗುವಂತೆ ಯೆಹೋವ ದೇವರು ಎಲ್ಲ ಜನಾಂಗಗಳ ಜನರಿಗೆ ಕರೆಕೊಡುತ್ತಾನೆ. (ಕೀರ್ತನೆ 65:2) ಆದರೆ ಆತನು ಎಲ್ಲರ ಪ್ರಾರ್ಥನೆಗಳನ್ನು ಕೇಳುವುದಿಲ್ಲ. ಇಸ್ರಾಯೇಲ್ಯರು ತಮ್ಮ ಕೆಟ್ಟತನ ಮುಂದುವರಿಸಿದಾಗ ದೇವರು ಅವರ ಪ್ರಾರ್ಥನೆಗಳನ್ನು ಕೇಳಲಿಲ್ಲ. (ಯೆಶಾಯ 1:15) ಹಾಗೆಯೇ ಹೆಂಡತಿಯನ್ನು ದುರುಪಚರಿಸುವ ಗಂಡನ ಪ್ರಾರ್ಥನೆಗಳನ್ನೂ ದೇವರು ಕೇಳುವುದಿಲ್ಲ. (1 ಪೇತ್ರ 3:7) ಆದರೆ ಗಂಭೀರ ತಪ್ಪುಗಳನ್ನು ಮಾಡಿದರೂ ಪಶ್ಚಾತ್ತಾಪಪಡುವವರ ಪ್ರಾರ್ಥನೆಗಳಿಗೆ ದೇವರು ಕಿವಿಗೊಡುತ್ತಾನೆ.—2 ಪೂರ್ವಕಾಲವೃತ್ತಾಂತ 33:9-13 ಓದಿ.
2. ನಾವು ಹೇಗೆ ಪ್ರಾರ್ಥನೆ ಮಾಡಬೇಕು?
ಪ್ರಾರ್ಥನೆ ಮಾನವರಿಗೆ ಸಂದ ವಿಶೇಷ ಗೌರವ. ಅದು ಆರಾಧನೆಯ ಭಾಗ ಆಗಿರುವುದರಿಂದ ನಾವು ಯೆಹೋವನಿಗೆ ಮಾತ್ರ ಪ್ರಾರ್ಥಿಸಬೇಕು. (ಮತ್ತಾಯ 4:10; 6:9) ಹುಟ್ಟಿನಿಂದಲೇ ಪಾಪಿಗಳಾಗಿರುವ ನಾವು ಪ್ರಾರ್ಥನೆಯಲ್ಲಿ ನೇರವಾಗಿ ‘ತಂದೆಯ ಬಳಿ ಹೋಗಲಾರೆವು.’ ಆದ್ದರಿಂದ ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸಬೇಕು. ದೇವರು ಸ್ಥಾಪಿಸಿರುವ “ಮಾರ್ಗ” ಆತನೇ. (ಯೋಹಾನ 14:6) ಬಾಯಿಪಾಠವಾಗಿ ಹೇಳುವ, ಪುಸ್ತಕದಿಂದ ಓದಿ ಪಠಿಸುವ ಪ್ರಾರ್ಥನೆಗಳನ್ನು ಯೆಹೋವನು ಇಷ್ಟಪಡುವುದಿಲ್ಲ. ನಾವು ಹೃದಯದಿಂದ ಪ್ರಾರ್ಥಿಸಬೇಕೆಂದು ಅಪೇಕ್ಷಿಸುತ್ತಾನೆ.—ಮತ್ತಾಯ 6:7; ಫಿಲಿಪ್ಪಿ 4:6, 7 ಓದಿ.
ನಮ್ಮ ಸೃಷ್ಟಿಕರ್ತನು ಮೌನ ಪ್ರಾರ್ಥನೆಗಳನ್ನು ಸಹ ಕೇಳಬಲ್ಲನು. (1 ಸಮುವೇಲ 1:12, 13) ಬೆಳಗ್ಗೆ ಎದ್ದಾಗ, ರಾತ್ರಿ ಮಲಗುವ ಮುಂಚೆ, ಊಟದ ವೇಳೆ, ಸಮಸ್ಯೆಗಳು ಎದುರಾದಾಗ ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ಪ್ರಾರ್ಥಿಸುವಂತೆ ಆತನು ಉತ್ತೇಜಿಸುತ್ತಾನೆ.—ಕೀರ್ತನೆ 55:22; ಮತ್ತಾಯ 15:36 ಓದಿ.
3. ಕ್ರೈಸ್ತರು ಒಟ್ಟಾಗಿ ಕೂಡಿಬರುವುದು ಏಕೆ?
ದೇವರ ಸ್ನೇಹಿತರಾಗುವುದು ಸುಲಭವಲ್ಲ. ಏಕೆಂದರೆ ದೇವರ ಮಾತಿಗೆ ಬೆಲೆಕೊಡದ, ದೇವರನ್ನೇ ನಂಬದ ಜನರ ಮಧ್ಯೆ ನಾವು ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1, 4; 2 ಪೇತ್ರ 3:3, 13) ಹಾಗಾಗಿ ಸಮಾನ ಧಾರ್ಮಿಕ ಶ್ರದ್ಧೆಯುಳ್ಳವರೊಂದಿಗೆ ಕೂಡಿಬಂದು ಪ್ರೋತ್ಸಾಹ ಪಡೆಯುವುದು ಅಗತ್ಯ.—ಇಬ್ರಿಯ 10:24, 25 ಓದಿ.
ದೇವರನ್ನು ಪ್ರೀತಿಸುವಂಥ ಜನರ ಸ್ನೇಹ ಬೆಳೆಸಿಕೊಂಡರೆ ದೇವರ ಸ್ನೇಹ ಬೆಳೆಸಿಕೊಳ್ಳಲು ಸಹಾಯವಾಗುವುದು. ಅವರ ಭಕ್ತಿ, ಶ್ರದ್ಧೆ ನೋಡಿ ಪ್ರೋತ್ಸಾಹ ಪಡೆಯಲು ಯೆಹೋವನ ಸಾಕ್ಷಿಗಳ ಕೂಟಗಳು ಸಂದರ್ಭ ಒದಗಿಸಿಕೊಡುತ್ತವೆ.—ರೋಮನ್ನರಿಗೆ 1:11, 12 ಓದಿ.
4. ದೇವರ ಸ್ನೇಹಿತರಾಗಲು ಧ್ಯಾನ ಹೇಗೆ ನೆರವಾಗಬಲ್ಲದು?
ಯೆಹೋವನ ವಾಕ್ಯವಾದ ಬೈಬಲಿನಿಂದ ನೀವು ಕಲಿಯುವ ಸಂಗತಿಗಳ ಕುರಿತು ಧ್ಯಾನಿಸುವುದರ ಮೂಲಕ ಆತನ ಸ್ನೇಹಿತರಾಗಬಲ್ಲಿರಿ. ಆತನ ಚಟುವಟಿಕೆ, ನಿರ್ದೇಶನ, ವಾಗ್ದಾನಗಳ ಕುರಿತು ಗಂಭೀರವಾಗಿ ಯೋಚಿಸಿರಿ. ಪ್ರಾರ್ಥನಾಪೂರ್ವಕವಾಗಿ ಧ್ಯಾನಿಸಿದರೆ ದೇವರ ಪ್ರೀತಿ ಹಾಗೂ ವಿವೇಕಕ್ಕಾಗಿ ನಿಮ್ಮಲ್ಲಿ ಹೃದಯದಾಳದ ಮಾನ್ಯತೆ ಹುಟ್ಟುವುದು.—ಯೆಹೋಶುವ 1:8; ಕೀರ್ತನೆ 1:1-3 ಓದಿ.
ದೇವರ ಸ್ನೇಹ ಉಳಿಸಿಕೊಳ್ಳಬೇಕಾದರೆ ಆತನಲ್ಲಿ ಭರವಸೆ, ನಂಬಿಕೆ ಇಡಬೇಕು. ನಂಬಿಕೆ ಎಂಬುದು ಮಾನವ ದೇಹ ಇದ್ದಂತೆ. ಜೀವಿಸಲಿಕ್ಕಾಗಿ ಅದನ್ನು ಪೋಷಿಸಬೇಕು. ಹಾಗೆಯೇ ದೇವರಲ್ಲಿನ ನಂಬಿಕೆಯನ್ನು ಜೀವಂತವಾಗಿಡಲು, ಕಲಿತಂಥ ಸಂಗತಿಗಳನ್ನು ಮೆಲುಕು ಹಾಕುತ್ತಾ ಇರಬೇಕು.—1 ಥೆಸಲೊನೀಕ 5:21; ಇಬ್ರಿಯ 11:1, 6 ಓದಿ.
5. ದೇವರ ಸ್ನೇಹಿತರಾಗುವುದರಿಂದ ಯಾವ ಒಳಿತಾಗುವುದು?
ತನ್ನನ್ನು ಪ್ರೀತಿಸುವವರನ್ನು ಯೆಹೋವನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾನೆ. ತನ್ನೊಂದಿಗೆ ಅವರಿಗಿರುವ ಸ್ನೇಹಸಂಬಂಧವನ್ನು ಹಾಳುಮಾಡಬಲ್ಲ ಮತ್ತು ಹೊಸ ಲೋಕದಲ್ಲಿನ ಜೀವನಕ್ಕೆ ಅನರ್ಹಗೊಳಿಸುವ ಸಂಗತಿಗಳಿಂದ ಅವರನ್ನು ಕಾಪಾಡುತ್ತಾನೆ. (ಕೀರ್ತನೆ 91:1, 2, 7-10) ಅವರ ಆರೋಗ್ಯ ಹಾಗೂ ಸಂತೋಷಕ್ಕೆ ಕುತ್ತುತರುವ ಜೀವನರೀತಿಯ ಬಗ್ಗೆ ಎಚ್ಚರಿಸುತ್ತಾನೆ. ಅತ್ಯುತ್ತಮವಾದ ಜೀವನ ರೀತಿ ಯಾವುದೆಂದು ಕಲಿಸುತ್ತಾನೆ.—ಕೀರ್ತನೆ 73:27, 28; ಯಾಕೋಬ 4:4, 8 ಓದಿ. (w11-E 09/01)
ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 17ನೇ ಅಧ್ಯಾಯ ನೋಡಿ.