ವಿಪತ್ತುಗಳಿಗೆ ವಿದಾಯ!
ವಿಪತ್ತುಗಳಿಗೆ ವಿದಾಯ!
“ವಿಪತ್ತುಗಳೇ ಇಲ್ಲದ ಕಾಲ ಬರುತ್ತೆ” ಎಂದು ಯಾರಾದರೂ ಹೇಳಿದರೆ ನೀವೇನು ಹೇಳುವಿರಿ? “ಏನಯ್ಯಾ, ಹಗಲುಗನಸು ಕಾಣ್ತಾ ಇದ್ದೀಯಾ? ಜೀವನ ಅಂದ್ಮೇಲೆ ಕಷ್ಟತೊಂದರೆ ಇದ್ದೇ ಇರುತ್ತೆ” ಎನ್ನಬಹುದು. ಅಥವಾ ‘ನನ್ನನ್ನೇನು ಪೆದ್ದ ಅಂದ್ಕೊಂಡಿದ್ದಾನಾ? ಏನೇನೋ ಹೇಳ್ತಾನಲ್ಲ’ ಎಂದು ನೀವು ಮನಸ್ಸಲ್ಲೇ ಅಂದುಕೊಳ್ಳಬಹುದು.
ಪ್ರಾಕೃತಿಕ ವಿಕೋಪಗಳೇ ಇಲ್ಲದ ಕಾಲ ಒಂದು ಕನಸೆಂಬಂತೆ ಅನಿಸಬಹುದು ನಿಜ. ಆದರೆ ಅಂಥ ಕಾಲ ಬರುತ್ತದೆ ಎನ್ನುವುದಕ್ಕೆ ಬಲವಾದ ಆಧಾರವಿದೆ. ಇಂಥ ಮಹತ್ತರವಾದ ಬದಲಾವಣೆಯನ್ನು ಮನುಷ್ಯನಿಂದ ತರಲು ಸಾಧ್ಯವೇ ಇಲ್ಲ. ಏಕೆಂದರೆ ನಿಸರ್ಗದ ಅನಾಹುತಗಳಿಗೆ ಕಾರಣಗಳೇನು? ಹೇಗೆ ನಡೆಯುತ್ತವೆ? ಎಂಬದನ್ನು ಮಾನವನು ಇಂದಿಗೂ ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲ. ಹಾಗಿರುವಾಗ ಅವನ್ನು ನಿಯಂತ್ರಿಸುವುದಾಗಲಿ ತಡೆಗಟ್ಟುವುದಾಗಲಿ ದೂರದ ಮಾತು ಬಿಡಿ. ಇದನ್ನು ಗಮನಿಸಿದ ಪ್ರಾಚೀನ ಇಸ್ರೇಲಿನ ಬುದ್ಧಿಶಾಲಿ ರಾಜನಾದ ಸೊಲೊಮೋನನು, “ಲೋಕದಲ್ಲಿ ನಡೆಯುವದನ್ನು ಮನುಷ್ಯನು ಗ್ರಹಿಸಲಾರನು, ಎಷ್ಟು ಪ್ರಯಾಸಪಟ್ಟು ವಿಚಾರಿಸಿದರೂ ಗ್ರಹಿಸಲಾರನು; ಹೌದು ಜ್ಞಾನಿಯು ಗ್ರಹಿಸಬಹುದೆಂದರೂ ಗ್ರಹಿಸಲಾರನು” ಎಂದನು.—ಪ್ರಸಂಗಿ 8:17.
ನೈಸರ್ಗಿಕ ವಿಪತ್ತುಗಳ ನಿಯಂತ್ರಣ ಮಾನವನ ಕೈಯಲ್ಲಿಲ್ಲವೆಂದರೆ ಇನ್ಯಾರ ಕೈಯಲ್ಲಿದೆ? ಪ್ರಕೃತಿಯ ಅಬ್ಬರವನ್ನು ಅಡಗಿಸಲು ನಮ್ಮ ನಿರ್ಮಾಣಿಕನಾದ ದೇವರಿಗೆ ಮಾತ್ರ ಸಾಧ್ಯವೆಂದು ಬೈಬಲ್ ಹೇಳುತ್ತದೆ. ಜಲಚಕ್ರವನ್ನೂ ಇಡೀ ಪರಿಸರ ವ್ಯವಸ್ಥೆಯನ್ನೂ ಭೂಗ್ರಹಕ್ಕೆ ಅಳವಡಿಸಿದಾತನು ಸೃಷ್ಟಿಕರ್ತನೇ. (ಪ್ರಸಂಗಿ 1:7) ಆತನಲ್ಲಿರುವ ಅಪಾರ ಶಕ್ತಿ ಹುಲುಮಾನವರಾದ ನಮ್ಮ ಊಹೆಗೂ ನಿಲುಕದು. ಅದರ ಬಗ್ಗೆ ಪ್ರಾಚೀನಕಾಲದ ಪ್ರವಾದಿ ಯೆರೆಮೀಯ ಹೀಗಂದನು: “ಕರ್ತನಾದ ಯೆಹೋವನೇ! ಆಹಾ, ನೀನು ಭುಜವನ್ನೆತ್ತಿ ನಿನ್ನ ಮಹಾ ಶಕ್ತಿಯಿಂದ ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದೀ; ಯಾವ ಕಾರ್ಯವೂ ನಿನಗೆ ಅಸಾಧ್ಯವಲ್ಲ.” (ಯೆರೆಮೀಯ 32:17) ಭೂಮಿಯನ್ನೂ ನಿಸರ್ಗದ ಶಕ್ತಿಗಳನ್ನೂ ದೇವರೇ ಸೃಷ್ಟಿಸಿದ ಕಾರಣ ಅವುಗಳನ್ನು ಹತೋಟಿಗೆ ತಂದು, ಮಾನವರು ಅದರಲ್ಲಿ ನಿರ್ಭೀತಿಯಿಂದ ಜೀವಿಸುವಂತೆ ಮಾಡುವುದು ಹೇಗೆಂಬುದೂ ಆತನಿಗೆ ಚೆನ್ನಾಗಿ ಗೊತ್ತಿದೆ.—ಕೀರ್ತನೆ 37:11; 115:16.
ಹಾಗಾದರೆ ಈಗ ನಿಮಗೆ ಈ ಪ್ರಶ್ನೆ ಬರಬಹುದು: ದೇವರು ಯಾವ ರೀತಿಯಲ್ಲಿ ನೈಸರ್ಗಿಕ ವಿಪತ್ತುಗಳಿಗೆ ಕಡಿವಾಣ ಹಾಕುವನು? ಈ ಲೇಖನಮಾಲೆಯ 2ನೇ ಲೇಖನದಲ್ಲಿ ಓದಿದ್ದನ್ನು ನೆನಪಿಗೆ ತನ್ನಿ. ಇಂದು ನಡೆಯುತ್ತಿರುವ ಭೀಕರ ವಿಪತ್ತುಗಳು ‘[ಈ ದುಷ್ಟ ವ್ಯವಸ್ಥೆಯ] ಸಮಾಪ್ತಿಗೆ ಸೂಚನೆ’ ಎಂದಿತು ಆ ಲೇಖನ. ಅಲ್ಲದೆ “ಈ ಸಂಗತಿಗಳು ಸಂಭವಿಸುತ್ತಿರುವುದನ್ನು ನೀವು . . . ನೋಡುವಾಗ ದೇವರ ರಾಜ್ಯವು ಹತ್ತಿರದಲ್ಲಿದೆ ಎಂಬುದನ್ನು ತಿಳಿದುಕೊಳ್ಳಿರಿ” ಎಂದನು ಯೇಸು. (ಮತ್ತಾಯ 24:3; ಲೂಕ 21:31) ದೇವರ ರಾಜ್ಯ ಅಂದರೆ ಸ್ವರ್ಗದಿಂದ ಆಳುವ ದೇವರ ಸರ್ಕಾರ. ಅದು ಭೂಮಿಯಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ. ನೈಸರ್ಗಿಕ ಶಕ್ತಿಗಳನ್ನೂ ಅಂಕೆಯಲ್ಲಿಡಲಿದೆ. ಇದನ್ನೆಲ್ಲ ಯೆಹೋವ ದೇವರೇ ಸ್ವತಃ ಮಾಡಲು ಶಕ್ತನಾಗಿರುವುದಾದರೂ ಈ ಕೆಲಸವನ್ನು ತನ್ನ ಮಗನಿಗೆ ಒಪ್ಪಿಸಿದ್ದಾನೆ. ಆ ಮಗನ ಅಂದರೆ ಯೇಸುವಿನ ಬಗ್ಗೆ ಪ್ರವಾದಿ ದಾನಿಯೇಲ ಅಂದದ್ದು: “ಸಕಲಜನಾಂಗಕುಲಭಾಷೆಗಳವರು ಅವನನ್ನು ಸೇವಿಸಲೆಂದು ಅವನಿಗೆ ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು.”—ದಾನಿಯೇಲ 7:14.
ಭೂಮಿಯನ್ನು ಆಹ್ಲಾದಕರವಾದ ಸ್ಥಳವನ್ನಾಗಿ ಮಾಡಲು ಬೇಕಾದ ಎಲ್ಲ ಅಧಿಕಾರವನ್ನು ದೇವರು ಯೇಸು ಕ್ರಿಸ್ತನಿಗೆ ಕೊಟ್ಟಿದ್ದಾನೆ. ಎರಡು ಸಾವಿರ ವರ್ಷಗಳ ಹಿಂದೆ ಯೇಸು ಭೂಮಿಯಲ್ಲಿ ಜೀವಿಸುತ್ತಿದ್ದಾಗ ನೈಸರ್ಗಿಕ ಶಕ್ತಿಗಳನ್ನು ಅಂಕೆಯಲ್ಲಿಡುವ ತನ್ನ ಸಾಮರ್ಥ್ಯದ ಕಿರುನೋಟವನ್ನು ಕೊಟ್ಟನು. ಒಂದು ದಿನ ಯೇಸು ತನ್ನ ಶಿಷ್ಯರ ಜತೆ ಗಲಿಲಾಯ ಸಮುದ್ರದಲ್ಲಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದನು. “ಆಗ ಭಯಂಕರವಾದ ಬಿರುಗಾಳಿಯು ಎದ್ದು ಅಲೆಗಳು ದೋಣಿಗೆ ಬಡಿದು ಒಳಗೆ ನುಗ್ಗಿದ್ದರಿಂದ ಅದು ಮುಳುಗುವುದರಲ್ಲಿತ್ತು.” ಶಿಷ್ಯರು ಹೆದರಿಹೋದರು. ಜೀವಾಪಾಯದಿಂದ ಕಾಪಾಡುವಂತೆ ಯೇಸುವಿನ ಮೊರೆಹೋದರು. ಯೇಸು ಏನು ಮಾಡಿದನು ಗೊತ್ತೆ? “ಗಾಳಿಯನ್ನು ಗದರಿಸಿ ಸಮುದ್ರಕ್ಕೆ, ‘ಷ್! ಸುಮ್ಮನಿರು!’ ಎಂದು ಹೇಳಿದನು. ಆಗ ಬಿರುಗಾಳಿಯು ನಿಂತು ಎಲ್ಲವೂ ಶಾಂತವಾಯಿತು.” ಬೆಕ್ಕಸಬೆರಗಾದ ಶಿಷ್ಯರು “ಇವನು ನಿಜವಾಗಿಯೂ ಯಾರು? ಗಾಳಿಯೂ ಸಮುದ್ರವೂ ಇವನ ಮಾತುಗಳನ್ನು ಪಾಲಿಸುತ್ತವಲ್ಲಾ?” ಎಂದು ಮಾತಾಡಿಕೊಂಡರು.—ಮಾರ್ಕ 4:37-41.
ಯೇಸು ಸ್ವರ್ಗಕ್ಕೆ ಹೋದ ಮೇಲೆ ಅವನಿಗೆ ಇನ್ನೂ ಹೆಚ್ಚು ಶಕ್ತಿ, ಅಧಿಕಾರ ಸಿಕ್ಕಿತು. ದೇವರ ರಾಜ್ಯದ ರಾಜನಾಗಿರುವ ಯೇಸುವಿಗೆ ಭೂಮಿಯಲ್ಲಿರುವ ಜನರಿಗೆ ಶಾಂತಿ, ಭದ್ರತೆ ಕೊಟ್ಟು ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯಿದೆ, ಅದಕ್ಕಾಗಿ ಬೇಕಾದ ಬದಲಾವಣೆಗಳನ್ನು ತರುವ ಸಾಮರ್ಥ್ಯವೂ ಇದೆ.
ನಾವೀಗಾಗಲೇ ನೋಡಿದಂತೆ ಅದೆಷ್ಟೋ ದುರಂತ-ಅನಾಹುತಗಳಿಗೆ ಮಾನವನೇ ಕಾರಣ. ತನ್ನ ಸ್ವಾರ್ಥ, ದುರಾಶೆಯಿಂದ ಭೂಮಿಯನ್ನು ದೋಚಿ ಇನ್ನಷ್ಟು ಇಕ್ಕಟ್ಟಿಗೆ ಕಾರಣವಾಗಿದ್ದಾನೆ. ತಮ್ಮನ್ನು ತಿದ್ದುಕೊಳ್ಳದೇ ಇಂಥ ಅಕ್ರಮಗಳನ್ನು ಮುಂದುವರಿಸುವವರ ಗತಿಯೇನು? ಕರ್ತನಾದ ಯೇಸು “ಬಲಿಷ್ಠ ದೂತರೊಂದಿಗೆ ಉರಿಯುವ ಬೆಂಕಿಯಲ್ಲಿ ಪ್ರಕಟವಾಗುವ ಸಮಯದಲ್ಲಿ . . . ದೇವರನ್ನು ಅರಿಯದವರಿಗೂ ನಮ್ಮ ಕರ್ತನಾದ ಯೇಸುವಿನ ಕುರಿತಾದ ಸುವಾರ್ತೆಗೆ ವಿಧೇಯರಾಗದವರಿಗೂ ಮುಯ್ಯಿತೀರಿಸುವನು” ಎನ್ನುತ್ತದೆ ಬೈಬಲ್. ‘ಭೂಮಿಯನ್ನು ನಾಶಮಾಡುತ್ತಿರುವವರನ್ನು ಆತನು ನಾಶಗೊಳಿಸುವನು.’—2 ಥೆಸಲೊನೀಕ 1:7, 8; ಪ್ರಕಟನೆ 11:18.
ಆಮೇಲೆ “ರಾಜರ ರಾಜ” ಯೇಸು ಕ್ರಿಸ್ತ ನೈಸರ್ಗಿಕ ಶಕ್ತಿಗಳ ಮೇಲೆ ಸಂಪೂರ್ಣ ಹತೋಟಿ ಸಾಧಿಸುವನು. (ಪ್ರಕಟನೆ 19:16) ಯಾವ ವಿಪತ್ತೂ ದೇವರ ರಾಜ್ಯದ ಪ್ರಜೆಗಳಿಗೆ ಕೂದಲೆಳೆಯಷ್ಟೂ ಹಾನಿಮಾಡದಂತೆ ನೋಡಿಕೊಳ್ಳುವನು. ಹವಾಮಾನವನ್ನು ತನ್ನ ಅಂಕೆಯಲ್ಲಿಟ್ಟು ಮಾನವಕುಲಕ್ಕೆ ಸದಾ ಒಳಿತಾಗುವಂಥ ಹವಾಮಾನ ಮತ್ತು ಋತುಚಕ್ರಗಳು ಇರುವಂತೆ ಮಾಡುವನು. “ನಾನು ಮುಂಗಾರು ಹಿಂಗಾರು ಮಳೆಗಳನ್ನು ಆಯಾ ಕಾಲದಲ್ಲಿಯೇ ಬರಮಾಡುವೆನು; ನಿಮ್ಮ ಹೊಲಗಳು ಒಳ್ಳೇ ಬೆಳೆಯನ್ನು ಕೊಡುವವು, ತೋಟದ ಮರಗಳು ಬಹಳ ಫಲಕೊಡುವವು” ಎಂದು ತುಂಬ ಸಮಯದ ಹಿಂದೆ ಯೆಹೋವ ದೇವರು ಮಾಡಿದ ವಾಗ್ದಾನದ ನೆರವೇರಿಕೆಯನ್ನು ಆಗ ನಾವು ಸಾಕ್ಷಾತ್ ನೋಡುವೆವು. (ಯಾಜಕಕಾಂಡ 26:4) ಅಲ್ಲದೆ ಬೈಬಲ್ ಹೇಳುವಂತೆ ಜನರು “ಮನೆಗಳನ್ನು ಕಟ್ಟಿ, ವಾಸ ಮಾಡುವರು, ದ್ರಾಕ್ಷಿ ತೋಟಗಳನ್ನು ನೆಟ್ಟು, ಅವುಗಳ ಫಲವನ್ನು ಉಣ್ಣುವರು.” ಹೌದು, ಯಾವುದೊ ಅನಾಹುತದಿಂದ ನಮ್ಮ ಸೂರು ಸೂರೆಯಾಗುವ ಆತಂಕವಿಲ್ಲದೆ ಮನೆ ಕಟ್ಟಿಕೊಳ್ಳುವೆವು.—ಯೆಶಾಯ 65:21, ಪವಿತ್ರ ಗ್ರಂಥ ಭಾಷಾಂತರ.
ಇಂಥ ಆಹ್ಲಾದಕರ ಬದುಕು ನಿಮಗೂ ಬೇಕೇ?
ಇಂಥ ಉಜ್ವಲ ಭವಿಷ್ಯತ್ತನ್ನು ಯಾರು ತಾನೇ ಬೇಡವೆನ್ನುವರು? ಜೀವನವನ್ನೇ ಮೂರಾಬಟ್ಟೆಮಾಡಬಲ್ಲ ವಿಪತ್ತುಗಳಿಗೇ ವಿದಾಯ ಹೇಳಿ ಶಾಂತಿಯಿಂದ ಬದುಕುವ ಕಾಲವದು! ಅಂಥ ಸುಂದರ ಬದುಕು ಸಿಗಬೇಕಾದರೆ ನೀವೇನು ಮಾಡಬೇಕು? ‘ದೇವರನ್ನು ಅರಿಯದವರು’ ಮತ್ತು ‘ಸುವಾರ್ತೆಗೆ ವಿಧೇಯರಾಗದವರು’ ವಿಪತ್ತುಗಳು ಸುಳಿಯದ ಪರಿಸ್ಥಿತಿಯನ್ನು, ಆ ಶಾಂತಿದಾಯಕ ಬದುಕನ್ನು ಆನಂದಿಸಲು ಅರ್ಹರಲ್ಲ. ಆದ್ದರಿಂದ ನಾವು ದೇವರ ಬಗ್ಗೆ ಕಲಿಯುವುದು ಮತ್ತು ನಮ್ಮನ್ನು ಆಳಲು ಆತನು ಮಾಡಿರುವ ಏರ್ಪಾಡನ್ನು ಬೆಂಬಲಿಸುವುದು ಅತಿ ಪ್ರಾಮುಖ್ಯ. ದೇವರು ಕೂಡ ನಾವಾತನ ಬಗ್ಗೆ ತಿಳಿಯಬೇಕೆಂದು ಬಯಸುತ್ತಾನೆ. ಆತನು ತನ್ನ ಮಗನ ಮೂಲಕ ಸ್ಥಾಪಿಸಿರುವ ರಾಜ್ಯದ ಕುರಿತ ಸುವಾರ್ತೆಯನ್ನು ನಾವು ಕೇಳಿ ಅದಕ್ಕೆ ತಕ್ಕಂತೆ ನಡೆಯಬೇಕೆಂದು ಇಚ್ಛಿಸುತ್ತಾನೆ.
ಇದಕ್ಕೆ ನಮಗೆ ಬೈಬಲಿನ ಅಧ್ಯಯನ ನೆರವಾಗುತ್ತದೆ. ದೇವರ ರಾಜ್ಯದಡಿ ಸುಭದ್ರ ವಾತಾವರಣದಲ್ಲಿ ಜೀವಿಸುವ ಅರ್ಹತೆ ಪಡೆಯಲು ಏನು ಮಾಡಬೇಕೆಂದು ಬೈಬಲ್ ತಿಳಿಸುತ್ತದೆ. ಹಾಗಾಗಿ ಯೆಹೋವನ ಸಾಕ್ಷಿಗಳ ಸಹಾಯವನ್ನೇಕೆ ನೀವು ಕೋರಬಾರದು? ಅವರೂ ಬೈಬಲಿನ ಕುರಿತು ಕಲಿಸಲು ಉತ್ಸುಕರಾಗಿದ್ದಾರೆ. ದೇವರನ್ನು ಅರಿಯಲು ಮತ್ತು ಸುವಾರ್ತೆಗೆ ವಿಧೇಯರಾಗಲು ನೀವು ಶ್ರಮಿಸಿದರೆ ದೇವರು ನಿಮಗೆ ಹೀಗೆ ಮಾತುಕೊಡುತ್ತಾನೆ: “ನನ್ನ ಮಾತಿಗೆ ಕಿವಿಗೊಡುವವನಾದರೋ ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು.”—ಜ್ಞಾನೋಕ್ತಿ 1:33. (w11-E 12/01)