ದೇವರ ನಿಯಮಗಳನ್ನು ಪಾಲಿಸಿದರೆ ಪ್ರಯೋಜನಗಳೇನು?
ದೇವರ ವಾಕ್ಯದಿಂದ ಕಲಿಯಿರಿ
ದೇವರ ನಿಯಮಗಳನ್ನು ಪಾಲಿಸಿದರೆ ಪ್ರಯೋಜನಗಳೇನು?
ನಿಮ್ಮ ಮನಸ್ಸಿಗೆ ಬಂದಿರಬಹುದಾದ ಕೆಲವು ಪ್ರಶ್ನೆಗಳು ಈ ಲೇಖನದಲ್ಲಿವೆ. ಅವುಗಳ ಉತ್ತರಗಳು ದೇವರ ವಾಕ್ಯವಾದ ಬೈಬಲಿನಲ್ಲಿ ಎಲ್ಲಿವೆಯೆಂದೂ ತೋರಿಸಲಾಗಿದೆ. ಈ ಉತ್ತರಗಳನ್ನು ನಿಮ್ಮ ಜೊತೆ ಚರ್ಚಿಸಲು ಯೆಹೋವನ ಸಾಕ್ಷಿಗಳು ಉತ್ಸುಕರಾಗಿದ್ದಾರೆ.
1. ನಾವು ದೇವರಿಗೆ ಏಕೆ ವಿಧೇಯರಾಗಬೇಕು?
ನಾವು ದೇವರಿಗೆ ವಿಧೇಯರಾಗುವುದು ನ್ಯಾಯ. ಏಕೆಂದರೆ ಆತನೇ ನಮ್ಮನ್ನು ಸೃಷ್ಟಿಸಿದ್ದಾನೆ. ಯೇಸು ಸಹ ಯಾವಾಗಲೂ ದೇವರಿಗೆ ವಿಧೇಯತೆ ತೋರಿಸಿದನು. (ಯೋಹಾನ 6:38; ಪ್ರಕಟನೆ 4:11) ದೇವರ ನಿಯಮಗಳಿಗೆ ವಿಧೇಯರಾಗುವ ಮೂಲಕ ನಾವಾತನನ್ನು ಪ್ರೀತಿಸುತ್ತೇವೆಂದು ತೋರಿಸಬಹುದು.—1 ಯೋಹಾನ 5:3 ಓದಿ.
ಯೆಹೋವ ದೇವರ ಎಲ್ಲ ನಿಯಮಗಳು ನಮ್ಮ ಒಳಿತಿಗಾಗಿವೆ. ಹೇಗೆ ಜೀವಿಸಿದರೆ ನಮ್ಮ ಬದುಕು ಅತಿ ಉತ್ತಮವಾಗಿರುವುದು ಎಂದು ಅವು ಕಲಿಸಿಕೊಡುತ್ತವೆ. ಮಾತ್ರವಲ್ಲ ಭವಿಷ್ಯದಲ್ಲೂ ಅನಂತ ಪ್ರತಿಫಲಗಳನ್ನು ಹೇಗೆ ಪಡೆಯಬಲ್ಲೆವೆಂದು ಅವು ತೋರಿಸಿಕೊಡುತ್ತವೆ.—ಕೀರ್ತನೆ 19:7, 11; ಯೆಶಾಯ 48:17, 18 ಓದಿ.
2. ದೇವರ ನಿಯಮಗಳಿಂದ ನಮ್ಮ ಆರೋಗ್ಯಕ್ಕೆ ಏನು ಪ್ರಯೋಜನ?
ಕುಡಿಕತನವನ್ನು ದೇವರ ನಿಯಮ ನಿಷೇಧಿಸುತ್ತದೆ. ಇದನ್ನು ಪಾಲಿಸಿದರೆ ಮಾರಕ ರೋಗಗಳಿಂದ, ಅಪಘಾತಗಳಿಂದ ತಪ್ಪಿಸಿಕೊಳ್ಳಬಲ್ಲೆವು. ಹೆಚ್ಚು ಕುಡಿಯುತ್ತಾ ಹೋದಂತೆ ಮದ್ಯದ ಚಟ ಹತ್ತಿಕೊಳ್ಳುತ್ತದೆ. ಮೂರ್ಖ ಕೆಲಸಗಳಿಗೂ ನಡೆಸಬಲ್ಲದು. (ಜ್ಞಾನೋಕ್ತಿ 23:20, 29, 30) ಮದ್ಯ ಸೇವಿಸಲೇ ಬಾರದೆಂದು ಯೆಹೋವನು ಹೇಳಲಿಲ್ಲವಾದರೂ ಮಿತ ಪ್ರಮಾಣದಲ್ಲಿ ಸೇವಿಸಬೇಕೆಂದು ಸ್ಪಷ್ಟಪಡಿಸಿದ್ದಾನೆ.—ಕೀರ್ತನೆ 104:15; 1 ಕೊರಿಂಥ 6:10 ಓದಿ.
ನಮ್ಮಲ್ಲಿ ಅನಿಯಂತ್ರಿತ ಕೋಪ ಕ್ರೋಧದಂಥ ಹಾನಿಕಾರಕ ಗುಣಗಳು ಇರಬಾರದೆಂದು ಯೆಹೋವನು ಎಚ್ಚರಿಸುತ್ತಾನೆ. ಆತನ ಈ ಬುದ್ಧಿಮಾತನ್ನು ಪಾಲಿಸಿದರೆ ನಮ್ಮ ಆರೋಗ್ಯಕ್ಕೇ ಒಳಿತು.—ಜ್ಞಾನೋಕ್ತಿ 14:30; 22:24, 25 ಓದಿ.
3. ದೇವರ ನಿಯಮ ನಮಗೆ ಹೇಗೆ ಸಂರಕ್ಷಣೆ ಕೊಡುತ್ತದೆ?
ವಿವಾಹದ ಚೌಕಟ್ಟಿನ ಹೊರಗಿನ ಲೈಂಗಿಕ ಸಂಬಂಧವನ್ನು ದೇವರ ನಿಯಮ ಖಂಡಿಸುತ್ತದೆ. (ಇಬ್ರಿಯ 13:4) ಈ ನಿಯಮ ಪಾಲಿಸುವಂಥ ಗಂಡಹೆಂಡಿರ ವಿವಾಹಬಂಧ ಸುಭದ್ರವಾಗಿರುತ್ತದೆ. ಅವರ ಮಕ್ಕಳೂ ಸಂತೋಷದ, ಉತ್ತಮ ವಾತಾವರಣದಲ್ಲಿ ಬೆಳೆಯುತ್ತಾರೆ. ಆದರೆ ಈ ನಿಯಮ ಪಾಲಿಸದಿರುವಾಗ ರೋಗ, ವಿವಾಹವಿಚ್ಛೇದ, ಒಂಟಿ-ಹೆತ್ತವರು, ಹಿಂಸಾಚಾರ, ಭಾವನಾತ್ಮಕ ನೋವು ಇಂಥ ಸಮಸ್ಯೆಗಳು ತಲೆದೋರಬಹುದು.—ಜ್ಞಾನೋಕ್ತಿ 5:1-9 ಓದಿ.
ವಿವಾಹದ ಏರ್ಪಾಡಿನ ಹೊರಗಿನ ಲೈಂಗಿಕತೆಯು ದೇವರೊಂದಿಗಿನ ನಮ್ಮ ಸ್ನೇಹವನ್ನು ಕಡಿದುಹಾಕಬಲ್ಲದು. ಇತರರಿಗೂ ಹಾನಿ ಮಾಡಬಲ್ಲದು. ಆದ್ದರಿಂದ ಆ ಪಾಶಕ್ಕೆ ಬೀಳಿಸುವಂಥ ಸನ್ನಿವೇಶಗಳಿಂದ ನಾವು ದೂರವಿರಬೇಕು.—1 ಥೆಸಲೊನೀಕ 4:3-6 ಓದಿ.
4. ಜೀವಕ್ಕೆ ಗೌರವ ತೋರಿಸುವುದರ ಪ್ರಯೋಜನಗಳೇನು?
ಜೀವ ದೇವರು ಕೊಟ್ಟಿರುವ ವರ ಎಂದು ಗೌರವಿಸುವವರ ಆರೋಗ್ಯಕ್ಕೆ ಪ್ರಯೋಜನ ಆಗುತ್ತದೆ. ಅವರು ಧೂಮಪಾನ ಹಾಗೂ ಜೀವಕ್ಕೆ ಹಾನಿಕರವಾದ ಇತರ ಚಟಗಳನ್ನು ನಿಲ್ಲಿಸಿಬಿಡುತ್ತಾರೆ. (2 ಕೊರಿಂಥ 7:1) ಗರ್ಭದಲ್ಲಿರುವ ಶಿಶುವಿನ ಜೀವವನ್ನೂ ದೇವರು ಅಮೂಲ್ಯ ಎಂದೆಣಿಸುತ್ತಾನೆ. (ವಿಮೋಚನಕಾಂಡ 21:22, 23) ಹಾಗಾಗಿ ಅವರು ಗರ್ಭದಲ್ಲಿರುವ ಜೀವವನ್ನೂ ಹೊಸಕಿಹಾಕುವುದಿಲ್ಲ. ಅಲ್ಲದೆ, ಜೀವದ ಬಗ್ಗೆ ದೇವರಿಗಿರುವ ನೋಟವುಳ್ಳವರು ಕೆಲಸದ ಸ್ಥಳದಲ್ಲಿ, ಮನೆಯಲ್ಲಿ, ತಮ್ಮ ವಾಹನದ ಸ್ಥಿತಿ ಹಾಗೂ ಬಳಕೆಯ ವಿಷಯದಲ್ಲಿ ಸುರಕ್ಷತೆಗೆ ಗಮನಕೊಡುವರು. (ಧರ್ಮೋಪದೇಶಕಾಂಡ 22:8) ಜೀವಕ್ಕೆ ಅಪಾಯ ತರುವಂಥ ಕ್ರೀಡೆಗಳಿಂದಲೂ ದೂರವಿರುವರು.—ಕೀರ್ತನೆ 36:9 ಓದಿ.
5. ರಕ್ತ ಪವಿತ್ರ ಎಂಬ ದೇವರ ನೋಟದಿಂದ ನಮಗೆ ಹೇಗೆ ಪ್ರಯೋಜನ?
ದೇವರಿಗನುಸಾರ ರಕ್ತವು ಜೀವ ಅಥವಾ ಪ್ರಾಣವನ್ನು ಸೂಚಿಸುತ್ತದೆ. ಹಾಗಾಗಿ ದೇವರ ನೋಟದಲ್ಲಿ ರಕ್ತವು ಪವಿತ್ರ. (ಆದಿಕಾಂಡ 9:3, 4) ಈ ನೋಟದಿಂದ ನಮಗೆ ಯಾವ ಪ್ರಯೋಜನ? ನಮ್ಮ ಪಾಪಗಳಿಗೆ ಕ್ಷಮೆ ಸಿಗಲು ಸಾಧ್ಯವಾಗುತ್ತದೆ. ಹೇಗೆ?—ಯಾಜಕಕಾಂಡ 17:11-13; ಇಬ್ರಿಯ 9:22 ಓದಿ.
ದೇವರು ತನ್ನ ಮಗನಾದ ಯೇಸುವನ್ನು ಭೂಮಿಗೆ ಕಳುಹಿಸಿದನು. ಆತನ ರಕ್ತದ ಮೂಲಕ ನಮ್ಮ ಪಾಪಗಳಿಗೆ ಕ್ಷಮೆ ಸಿಗಲು ಏರ್ಪಾಡು ಮಾಡಿದನು. ಯೇಸುವಿನ ರಕ್ತ ಅತಿ ಅಮೂಲ್ಯ. ಏಕೆಂದರೆ ಆತನು ಪರಿಪೂರ್ಣ ಮನುಷ್ಯನಾಗಿದ್ದ. ಯೇಸು ತನ್ನ ಜೀವವನ್ನು ಸೂಚಿಸುವ ರಕ್ತವನ್ನು ದೇವರಿಗೆ ಅರ್ಪಿಸಿದ. (ಇಬ್ರಿಯ 9:12) ಇದರಿಂದಾಗಿ ನಮಗೆ ಶಾಶ್ವತ ಜೀವನ ಸಿಗಸಾಧ್ಯ.—ಮತ್ತಾಯ 26:28; ಯೋಹಾನ 3:16 ಓದಿ. (w11-E 11/01)
ಹೆಚ್ಚಿನ ಮಾಹಿತಿಗಾಗಿ , ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 12 ಮತ್ತು 13ನ್ನು ಅಧ್ಯಾಯ ನೋಡಿ.