ಒಬ್ಬ ಹಠಮಾರಿ ಕೊನೆಗೂ ಹೇಳಿದ ಮಾತನ್ನು ಕೇಳಿದ
ನಿಮ್ಮ ಮಕ್ಕಳಿಗೆ ಕಲಿಸಿರಿ
ಒಬ್ಬ ಹಠಮಾರಿ ಕೊನೆಗೂ ಹೇಳಿದ ಮಾತನ್ನು ಕೇಳಿದ
ಅಪ್ಪಅಮ್ಮನ ಮಾತನ್ನು ಕೇಳದೆ ನೀನು ಯಾವತ್ತಾದರೂ ಹಠಹಿಡಿದಿದ್ದಿಯಾ?— * ನಿನ್ನ ಅಪ್ಪನೊ ಅಮ್ಮನೊ ಯಾವುದೋ ಒಂದು ಟಿ.ವಿ. ಪ್ರೋಗ್ರ್ಯಾಮ್ ನೋಡಬೇಡ ಅಂತ ಹೇಳಿದ್ದರೂ ನೀನು ನೋಡಿದ್ದಿ ಅಂತ ಇಟ್ಟುಕೊ. ಆಮೇಲೆ ನಿನಗೆ ‘ನಾನದನ್ನು ನೋಡಬಾರದಿತ್ತು. ಅವರು ಹೇಳಿದ ಹಾಗೆ ಕೇಳಬೇಕಿತ್ತು’ ಅಂತ ದುಃಖ ಆಗಿರಬಹುದು. ಹಿಂದಿನ ಕಾಲದಲ್ಲಿ ನಾಮಾನ ಎಂಬ ಹೆಸರಿನ ಒಬ್ಬ ವ್ಯಕ್ತಿ ಇದ್ದ. ಒಂದು ಸಲ ತುಂಬ ಹಠಹಿಡಿದ. ಆದರೆ ಆಮೇಲೆ ಹಠಬಿಡಲು ಅವನಿಗೆ ಯಾವುದು ಸಹಾಯಮಾಡಿತು ಎಂದು ನೋಡೋಣ.
ನಾವೀಗ ಮೂರು ಸಾವಿರ ವರ್ಷಗಳ ಹಿಂದಕ್ಕೆ ಹೋಗೋಣ. ನಾಮಾನ ಜೀವಿಸಿದ್ದ ಕಾಲ ಅದು. ಅವನು ಸಿರಿಯಾ ದೇಶದ ಒಬ್ಬ ಮುಖ್ಯ ವ್ಯಕ್ತಿ, ಸೈನ್ಯಾಧಿಕಾರಿ. ಅವನು ಹೇಳಿದ ಒಂದು ಮಾತನ್ನೂ ಸೈನಿಕರು ಮೀರ್ತಾ ಇರಲಿಲ್ಲ. ಒಂದಿನ ನಾಮಾನನಿಗೆ ಕುಷ್ಠರೋಗ ಬರುತ್ತೆ. ಈ ರೋಗದಿಂದ ಅವನು ತುಂಬ ಅಸಹ್ಯವಾಗಿ ಕಾಣುತ್ತಾನೆ. ಅವನಿಗೆ ವಿಪರೀತ ನೋವು ಸಹ ಇರುತ್ತೆ.
ನಾಮಾನನ ಪತ್ನಿಯ ಬಳಿ ಇಸ್ರೇಲ್ ದೇಶದ ಒಬ್ಬ ಚಿಕ್ಕ ಹುಡುಗಿ ಕೆಲಸಕ್ಕೆ ಇದ್ದಳು. ಒಂದಿನ ಆ ಹುಡುಗಿ ತನ್ನ ಯಜಮಾನಿಗೆ ಇಸ್ರೇಲಿನಲ್ಲಿ ಎಲೀಷ ಅಂತ ಒಬ್ಬ ದೇವಪ್ರವಾದಿ ಇದ್ದಾನೆ. ಅವನು ಯಜಮಾನರನ್ನು ವಾಸಿಮಾಡಬಲ್ಲ ಎಂದು ಹೇಳುತ್ತಾಳೆ. ಈ ವಿಷಯ ನಾಮಾನನಿಗೆ ಗೊತ್ತಾದ ಕೂಡಲೆ ಅವನು ಎಲೀಷನನ್ನು ನೋಡಲು ಇಸ್ರೇಲಿಗೆ ಸೈನಿಕರೊಟ್ಟಿಗೆ ಹೊರಡುತ್ತಾನೆ. ಜೊತೆಗೆ ತುಂಬ ಉಡುಗೊರೆಗಳನ್ನು ತಕ್ಕೊಂಡು ಹೋಗುತ್ತಾನೆ. ಇಸ್ರೇಲನ್ನು ತಲುಪಿದಾಗ ಮೊದಲು ಅಲ್ಲಿಯ ರಾಜನನ್ನು ಭೇಟಿಯಾಗಿ, ತಾನು ಯಾಕೆ ಬಂದೆ ಅಂತ ತಿಳಿಸುತ್ತಾನೆ.
ಈ ವಿಷಯ ಎಲೀಷನಿಗೆ ಗೊತ್ತಾದಾಗ ನಾಮಾನನನ್ನು ತನ್ನ ಹತ್ತಿರ ಕಳುಹಿಸುವಂತೆ ರಾಜನಿಗೆ ಹೇಳಿಕಳುಹಿಸುತ್ತಾನೆ. ನಾಮಾನ ಎಲೀಷನ ಮನೆಗೆ ಬಂದಾಗ ಎಲೀಷನೇ ಖುದ್ದಾಗಿ ಭೇಟಿಯಾಗದೆ ಒಬ್ಬ ಆಳನ್ನು ಕಳುಹಿಸಿ ನಾಮಾನನಿಗೆ ಯೊರ್ದನ್ ಹೊಳೆಯಲ್ಲಿ
ಏಳು ಸಲ ಸ್ನಾನ ಮಾಡಲು ಹೇಳುತ್ತಾನೆ. ಹೀಗೆ ಮಾಡಿದರೆ ರೋಗ ವಾಸಿಯಾಗುತ್ತೆ ಎಂದೂ ಹೇಳುತ್ತಾನೆ. ಇದನ್ನು ಕೇಳಿದಾಗ ನಾಮಾನನಿಗೆ ಹೇಗಾಯಿತು ಅಂತ ನಿನಗನ್ಸುತ್ತೆ?—ಅವನಿಗೆ ಕೋಪ ಬರುತ್ತೆ. ಅವನು ಹಠದಿಂದ ಎಲೀಷ ಹೇಳಿದಂತೆ ಮಾಡಲು ನಿರಾಕರಿಸುತ್ತಾನೆ. ‘ಸ್ನಾನ ಮಾಡಲು ನಮ್ಮ ದೇಶದಲ್ಲಿ ಇದಕ್ಕಿಂತ ಒಳ್ಳೆ ನದಿಗಳಿಲ್ವಾ’ ಎನ್ನುತ್ತಾ ಸಿಟ್ಟಿನಿಂದ ತನ್ನ ದೇಶಕ್ಕೆ ಹೊರಡಲು ಸಿದ್ಧನಾಗುತ್ತಾನೆ. ಆಗ ಅವನ ಸೈನಿಕರು ಏನು ಹೇಳುತ್ತಾರೆ ಗೊತ್ತಾ?— ‘ಆ ಪ್ರವಾದಿ ನಿಮಗೆ ಯಾವುದಾದರೂ ಕಷ್ಟದ ಕೆಲಸ ಹೇಳಿದರೆ ಮಾಡುತ್ತಿದ್ದಿರಿ ಅಲ್ವಾ? ಈ ಒಂದು ಚಿಕ್ಕ ಕೆಲಸವನ್ನು ನೀವ್ಯಾಕೆ ಮಾಡಬಾರದು?’
ಸೈನಿಕರ ಈ ಮಾತನ್ನು ನಾಮಾನ ಕೇಳುತ್ತಾನೆ. ಆರು ಸಲ ನದಿಗೆ ಹಾರಿ ಮೇಲೆ ಬರುತ್ತಾನೆ. ಆದರೆ ಏಳನೇ ಸಾರಿ ಹೀಗೆ ಮಾಡಿದಾಗ ಅವನ ಕುಷ್ಠ ಮಂಗಮಾಯ! ನಾಮಾನನ ಸಂತೋಷಕ್ಕೆ ಎಲ್ಲೆಯೇ ಇಲ್ಲ. ಕೃತಜ್ಞತೆ ಹೇಳಲೆಂದು ಅವನು ಕೂಡಲೇ ಎಲೀಷನ ಮನೆಗೆ ಹೋಗುತ್ತಾನೆ. ಅಲ್ಲಿಂದ ಅದು ಸುಮಾರು 48 ಕಿ.ಮೀ. ದೂರದಲ್ಲಿತ್ತು. ಬೆಲೆಬಾಳುವ ಉಡುಗೊರೆಗಳನ್ನು ಎಲೀಷನಿಗೆ ಕೊಡಲು ಮುಂದಾಗುತ್ತಾನೆ. ಆದರೆ ಪ್ರವಾದಿ ಅದನ್ನು ನಿರಾಕರಿಸುತ್ತಾನೆ.
ಆಗ ನಾಮಾನನೇ ಎಲೀಷನಿಂದ ಏನೋ ಒಂದನ್ನು ಕೇಳುತ್ತಾನೆ. ಅದೇನಂತ ಗೊತ್ತಾ?— ಮಣ್ಣು. ‘ಎರಡು ಕತ್ತೆಗಳ ಮೇಲೆ ಹೊತ್ತುಕೊಂಡು ಹೋಗುವಷ್ಟು ಮಣ್ಣು ಕೊಡು’ ಎಂದು ಕೇಳುತ್ತಾನೆ. ಯಾಕಂತ ಗೊತ್ತಾ?— ದೇವ ಜನರಿರುವ ಇಸ್ರೇಲಿನ ಮಣ್ಣನ್ನು ತನ್ನ ದೇಶಕ್ಕೆ ತಕ್ಕೊಂಡು ಹೋಗಿ ಅದರ ಮೇಲೆ ದೇವರಿಗೆ ಯಜ್ಞ ಅರ್ಪಿಸುತ್ತೇನೆ ಎನ್ನುತ್ತಾನೆ ನಾಮಾನ. ಯೆಹೋವ ದೇವರನ್ನು ಬಿಟ್ಟು ಬೇರೆ ಯಾವ ದೇವರನ್ನೂ ಪೂಜಿಸುವುದಿಲ್ಲ ಎಂದೂ ನಾಮಾನ ಮಾತುಕೊಡುತ್ತಾನೆ. ಹೀಗೆ ನಾಮಾನ ಹಠಬಿಟ್ಟು ಸತ್ಯ ದೇವರು ಹೇಳಿದಂತೆ ನಡೆಯುವ ಸ್ವಭಾವದವನಾದ.
ನಾಮಾನನಿಂದ ನೀನು ಯಾವ ಪಾಠ ಕಲಿತೆ?— ಹಠಹಿಡಿಯುವ ಸ್ವಭಾವ ನಿನಗಿದ್ದರೆ ಅದನ್ನು ಬಿಟ್ಟುಬಿಡಲು ನಿನ್ನಿಂದಾನೂ ಖಂಡಿತ ಆಗುತ್ತೆ. ನೀನು ದೊಡ್ಡವರ ಮಾತು ಕೇಳಿ, ಅವರು ಹೇಳಿದಂತೆ ನಡೆದರೆ ಆ ಸ್ವಭಾವವನ್ನು ಬಿಟ್ಟುಬಿಡಬಹುದು. (w12-E 06/01)
[ಪಾದಟಿಪ್ಪಣಿ]
^ ಪ್ಯಾರ. 3 ಈ ಲೇಖನವನ್ನು ನೀವು ಚಿಕ್ಕ ಮಗುವಿಗೆ ಓದಿಹೇಳುತ್ತಿರುವುದಾದರೆ ಅಡ್ಡಗೆರೆ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಮಗು ಉತ್ತರ ಹೇಳಲು ಪ್ರೋತ್ಸಾಹಿಸಿ.
[ಪುಟ 15ರಲ್ಲಿರುವ ಚಿತ್ರ]
ನಿಮ್ಮ ಬೈಬಲಿನಲ್ಲೇ ಓದಿ
[ಪುಟ 15ರಲ್ಲಿರುವ ಚಿತ್ರ]