ಪ್ರಾರ್ಥನೆಗಳನ್ನು ಯಾರಾದ್ರೂ ಕೇಳ್ತಾರಾ?
ಪ್ರಾರ್ಥನೆಗಳನ್ನು ಯಾರಾದ್ರೂ ಕೇಳ್ತಾರಾ?
“ದೇವರು ಇದ್ದಾನಾ ಅಂತ ನನಗೆ ಸಂದೇಹವಿತ್ತು. ಆದ್ರೂ ಕೆಲವೊಮ್ಮೆ ಪ್ರಾರ್ಥನೆ ಮಾಡ್ತಿದ್ದೆ. ಅವ್ನು ಕೇಳ್ತಾನಾ ಅಂತ ಸಂಶಯವಿದ್ರೂ ಕೇಳಬೇಕು ಅಂತ ಮನಸ್ಸು ಬಯಸುತ್ತಿತ್ತು. ನನಗೆ ಜೀವನದಲ್ಲಿ ಸಂತೋಷ ಅನ್ನೋದೇ ಇರ್ಲಿಲ್ಲ. ಬದುಕಿಗೊಂದು ಗುರಿನೂ ಇರ್ಲಿಲ್ಲ. ದೇವರಲ್ಲಿ ನಂಬಿಕೆ ಇಡೋದಿಕ್ಕೆ ಹೆದರ್ತಿದ್ದೆ. ಯಾಕಂದ್ರೆ ಮನೋಬಲ ಇಲ್ಲದವ್ರು ಮಾತ್ರ ದೇವರನ್ನು ನಂಬುತ್ತಾರೆ ಅನ್ನೋ ಭಾವನೆ ನನಗಿತ್ತು.”—ಪೆಟ್ರಿಶಾ, * ಐರ್ಲೆಂಡ್.
ನಿಮಗೆ ಯಾವತ್ತಾದರೂ ಪೆಟ್ರಿಶಾಳಂತೆ ಅನಿಸಿದೆಯಾ? ದೇವರು ಇದ್ದಾನಾ ಎಂಬ ಸಂಶಯ ಇಟ್ಟುಕೊಂಡೇ ಪ್ರಾರ್ಥನೆ ಮಾಡಿದ್ದೀರಾ? ಅನೇಕರಿಗೆ ಹೀಗನಿಸಿದೆ ಎಂದು ಕೆಳಗಿನ ಸಮೀಕ್ಷೆಗಳು ತೋರಿಸುತ್ತವೆ.
◼ 2,200 ಮಂದಿ ಬ್ರಿಟಿಷರನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಜಗತ್ತನ್ನು ಸೃಷ್ಟಿಸಿದ ದೇವರೊಬ್ಬನಿದ್ದಾನೆ, ಆತನು ಪ್ರಾರ್ಥನೆಗಳನ್ನು ಕೇಳುತ್ತಾನೆ ಎಂದು ನಂಬುವವರು ಅದರಲ್ಲಿ ಶೇ. 22 ಜನರು ಮಾತ್ರ. ಆದರೆ ಶೇ. 55 ಜನರು ದೇವರನ್ನು ನಂಬದಿದ್ದರೂ ಆಗೊಮ್ಮೆ ಈಗೊಮ್ಮೆ ಪ್ರಾರ್ಥಿಸುತ್ತಾರೆ.
◼ ನಾಲ್ಕು ಖಂಡಗಳಿಂದ 10,000 ಜನರ ಸಮೀಕ್ಷೆ ನಡೆಸಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ನಾಸ್ತಿಕರಲ್ಲಿ ಶೇ. 30ರಷ್ಟು ಜನರು ಪ್ರಾರ್ಥನೆ ಮಾಡುತ್ತಾರೆ.
ಯಾಕೆ ಈ ಸಂಶಯ?
ಇಂಗ್ಲೆಂಡಿನ ಆ್ಯಲನ್ ಹೇಳುವುದನ್ನು ಕೇಳಿ: “ನಾನು ದೇವರನ್ನು ನಂಬುತ್ತಿರಲಿಲ್ಲ. ದೇವರು, ಧರ್ಮ ಇದನ್ನೆಲ್ಲ ಹುಟ್ಟುಹಾಕಿದ್ದು ಮನುಷ್ಯ. ಜನರನ್ನು ಹತೋಟಿಯಲ್ಲಿ ಇಡಲಿಕ್ಕೆ, ಹಣ ಮಾಡಲಿಕ್ಕೆ ಹೀಗೆ ಮಾಡಿದ್ದಾರೆ ಎಂದು ಹೇಳ್ತಿದ್ದೆ. ಒಂದುವೇಳೆ ದೇವರು ಇದ್ದಿದ್ದರೆ ಇಷ್ಟೊಂದು ಅನ್ಯಾಯ ಇರ್ತಿತ್ತಾ ಎಂದು ವಾದಿಸುತ್ತಿದ್ದೆ. ಆದರೆ ಕೆಲವೊಮ್ಮೆ ನಾನು ಒಬ್ಬನೇ ಕೂತು ಮನಸ್ಸಿನಲ್ಲಿ ಇದ್ದದ್ದನ್ನೆಲ್ಲ ತೋಡಿಕೊಳ್ಳುತ್ತಾ ಇದ್ದೆ. ಅದು ಯಾರಿಗೆ ಏನು. . . ಗೊತ್ತಿಲ್ಲ. ‘ನನ್ನ ಜೀವನದ ಉದ್ದೇಶ ಏನು?’ ಎನ್ನುವ ಪ್ರಶ್ನೆಯೂ ಮನಸ್ಸಲ್ಲಿ ಏಳುತ್ತಿತ್ತು.”
ದೇವರು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನಾ ಎಂಬ ಸಂಶಯ ಬರಲು ಜನರಿಗೆ ಅವರದ್ದೇ ಆದ ಕಾರಣಗಳಿರುತ್ತವೆ. ಈ ರೀತಿಯ ಸಂಶಯ ಹೆಚ್ಚಿನವರಿಗೆ ಬರಲು ಕಾರಣ ಅವರ ಮನಸ್ಸಲ್ಲೆದ್ದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗದಿದ್ದದ್ದೇ. ಉದಾ:
◼ ದೇವರು ಇದ್ದಾನಾ?
◼ ಲೋಕದಲ್ಲಿ ನಡೆಯುತ್ತಿರುವ ಕೆಟ್ಟದ್ದಕ್ಕೆ ಹೆಚ್ಚಾಗಿ ಧರ್ಮ ಕಾರಣವಾಗುತ್ತಿದೆ ಏಕೆ?
◼ ಕಷ್ಟಗಳನ್ನೆಲ್ಲ ದೇವರು ಯಾಕೆ ಹೀಗೇ ಬಿಟ್ಟಿದ್ದಾನೆ?
ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದರೆ ನೀವು ನಂಬಿಕೆ, ಭರವಸೆಯಿಂದ ಪ್ರಾರ್ಥಿಸಬಲ್ಲಿರಿ ಅಲ್ಲವೇ? (w12-E 07/01)
[ಪಾದಟಿಪ್ಪಣಿ]
^ ಪ್ಯಾರ. 2 ಈ ಲೇಖನಮಾಲೆಯಲ್ಲಿ ಕೆಲವು ಹೆಸರುಗಳನ್ನು ಬದಲಿಸಲಾಗಿದೆ.