ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶ್ರದ್ಧಾಳು ಕ್ರೈಸ್ತ, ಹೊಣೆಯರಿತ ಪ್ರಜೆ ಇವೆರಡೂ ಆಗುವುದು ಹೇಗೆ?

ಶ್ರದ್ಧಾಳು ಕ್ರೈಸ್ತ, ಹೊಣೆಯರಿತ ಪ್ರಜೆ ಇವೆರಡೂ ಆಗುವುದು ಹೇಗೆ?

ಶ್ರದ್ಧಾಳು ಕ್ರೈಸ್ತ, ಹೊಣೆಯರಿತ ಪ್ರಜೆ ಇವೆರಡೂ ಆಗುವುದು ಹೇಗೆ?

ಯೇಸು ಭೂಮಿ ಮೇಲಿದ್ದಾಗ ಮಾಡಿದ ಕೆಲಸದಲ್ಲಿ ಎರಡು ಅಂಶಗಳು ಎದ್ದುಕಾಣುತ್ತವೆ. ಒಂದನೇದಾಗಿ, ಆತನು ಜನರ ಮನಸ್ಸನ್ನು ಪರಿವರ್ತಿಸಲು ಶ್ರಮಿಸಿದನು, ರಾಜಕೀಯ ವ್ಯವಸ್ಥೆಗಳನ್ನಲ್ಲ. ದೃಷ್ಟಾಂತಕ್ಕೆ, ‘ಪರ್ವತ ಪ್ರಸಂಗ’ ಎಂದು ಕರೆಯಲಾಗುವ ಆತನ ಒಂದು ಭಾಷಣದಲ್ಲಿ ಯಾವುದಕ್ಕೆ ಒತ್ತುನೀಡಿದನೆಂದು ಗಮನಿಸಿ. ತನ್ನ ಶಿಷ್ಯರಿಗೆ ಅವರು ಉಪ್ಪು ಹಾಗೂ ಬೆಳಕಿನಂತೆ ಇರಬೇಕೆಂದು ಹೇಳುವ ಸ್ವಲ್ಪ ಮುಂಚೆ ಆತನು ಜನರಿಗೆ ಹೇಳಿದ್ದು: “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು . . . ಸೌಮ್ಯಭಾವದವರು . . . ಹೃದಯದಲ್ಲಿ ಶುದ್ಧರಾಗಿರುವವರು . . . ಶಾಂತಿಶೀಲರು ಸಂತೋಷಿತರು.” (ಮತ್ತಾಯ 5:1-11) ಹೀಗೆ, ತಮ್ಮ ಯೋಚನಾಧಾಟಿ, ಭಾವನೆಗಳನ್ನು ದೇವರ ಮಟ್ಟಗಳಿಗೆ ತಕ್ಕಂತೆ ಹೊಂದಿಸಿಕೊಳ್ಳಬೇಕು, ಮನಃಪೂರ್ವಕವಾಗಿ ದೇವರ ಸೇವೆಮಾಡಬೇಕು ಎಂದು ಯೇಸು ತನ್ನ ಹಿಂಬಾಲಕರಿಗೆ ಮನಗಾಣಿಸಿದನು.

ಎರಡನೇದಾಗಿ, ಯಾರಾದರೂ ನರಳುವುದು ಯೇಸುವಿನ ಕಣ್ಣಿಗೆಬಿದ್ದಾಗ ಕರುಣೆಯಿಂದ ಅವರ ದುರವಸ್ಥೆಯನ್ನು ಸರಿಪಡಿಸಲು ಮುಂದಾದನು. ಹಾಗಿದ್ದರೂ ಭೂಮಿ ಮೇಲಿರುವ ಎಲ್ಲ ಕಷ್ಟಸಂಕಟವನ್ನು ಆಗಲೇ ತೆಗೆದುಹಾಕುವುದು ಆತನ ಗುರಿ ಆಗಿರಲಿಲ್ಲ. (ಮತ್ತಾಯ 20:30-34) ಆದ್ದರಿಂದಲೇ ಆತನು ರೋಗಿಗಳನ್ನು ಗುಣಪಡಿಸಿದರೂ ಆಮೇಲೆಯೂ ಮಾನವರು ರೋಗರುಜಿನಗಳ ಹಾವಳಿಗೆ ತುತ್ತಾದರು. (ಲೂಕ 6:17-19) ದಬ್ಬಾಳಿಕೆ ದೌರ್ಜನ್ಯಕ್ಕೆ ಒಳಗಾದವರಿಗೆ ಆಗ ಉಪಶಮನ ತಂದನಾದರೂ ಅನ್ಯಾಯಗಳೇನೂ ನಿಂತುಹೋಗಲಿಲ್ಲ. ಹಸಿದವರಿಗೆ ಆಹಾರ ಕೊಟ್ಟನಾದರೂ ಕ್ಷಾಮಗಳಿಂದಾಗಿ ಮಾನವರು ಮುಂದೆಯೂ ಕಂಗೆಟ್ಟರು.—ಮಾರ್ಕ 6:41-44.

ಮನಸ್ಸನ್ನು ಪರಿವರ್ತಿಸುವ ಹಾಗೂ ದುಃಖ ನೋವನ್ನು ನೀಗಿಸುವ ಕೆಲಸ

ಯೇಸು ಜನರ ಮನಸ್ಸುಗಳನ್ನು ಪರಿವರ್ತಿಸುವ ಬದಲು ವ್ಯವಸ್ಥೆಗಳನ್ನೇ ಬದಲಾಯಿಸಬಹುದಿತ್ತಲ್ಲಾ? ಕೆಲವರ ಕೆಲವೊಂದು ಕಷ್ಟಗಳನ್ನು ಮಾತ್ರ ನೀಗಿಸುವ ಬದಲು ಜನರೆಲ್ಲರ ಎಲ್ಲ ಕಷ್ಟಗಳನ್ನು ಪೂರ್ತಿಯಾಗಿ ನಿರ್ಮೂಲ ಮಾಡಬಹುದಿತ್ತಲ್ಲ? ಏಕೆ ಮಾಡಲಿಲ್ಲ? ಏಕೆಂದರೆ ಭವಿಷ್ಯದಲ್ಲಿ ದೇವರು ತನ್ನ ರಾಜ್ಯದ ಮೂಲಕ ಎಲ್ಲ ಮಾನವ ಸರ್ಕಾರಗಳನ್ನು ಕೊನೆಗೊಳಿಸುವನು ಮತ್ತು ಕಷ್ಟಸಂಕಟಕ್ಕೆ ಕಾರಣವಾದ ಎಲ್ಲ ಸಂಗತಿಗಳನ್ನು ಅಳಿಸಿಹಾಕುವನೆಂದು ಯೇಸುವಿಗೆ ತಿಳಿದಿತ್ತು. (ಲೂಕ 4:43; 8:1) ಹಾಗಾಗಿಯೇ, ರೋಗಗ್ರಸ್ತರನ್ನು ವಾಸಿಮಾಡಲು ಹೆಚ್ಚು ಸಮಯ ಕೊಡುವಂತೆ ಶಿಷ್ಯರೊಮ್ಮೆ ಆತನನ್ನು ಒತ್ತಾಯಿಸುತ್ತಿದ್ದಾಗ ಆತನಂದದ್ದು: “ನಾವು ಹತ್ತಿರದಲ್ಲಿರುವ ಬೇರೆ ಯಾವುದಾದರೂ ಊರುಗಳಿಗೆ ಹೋಗೋಣ. ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಈ ಉದ್ದೇಶಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ.” (ಮಾರ್ಕ 1:32-38) ಯೇಸು ಹಲವರ ಶಾರೀರಿಕ ಕಷ್ಟನೋವುಗಳನ್ನು ನೀಗಿಸಿದನು. ಆದರೆ ಆತನು ಆದ್ಯತೆ ಕೊಟ್ಟದ್ದು ದೇವರ ವಾಕ್ಯವನ್ನು ಸಾರುವುದಕ್ಕೆ ಹಾಗೂ ಬೋಧಿಸುವುದಕ್ಕೆ.

ಇಂದು ಯೆಹೋವನ ಸಾಕ್ಷಿಗಳೂ ಸಾರುವ ಕೆಲಸದಲ್ಲಿ ಯೇಸುವನ್ನು ಅನುಕರಿಸಲು ಶ್ರಮಿಸುತ್ತಾರೆ. ಕಷ್ಟದಲ್ಲಿರುವವರಿಗೆ ಪ್ರಾಯೋಗಿಕ ನೆರವು ಕೊಡುವ ಮೂಲಕ ಅವರ ಕಷ್ಟನೋವು ನೀಗಿಸಲು ಮುಂದಾಗುತ್ತಾರೆ. ಆದರೆ ಅವರು ಇಡೀ ಜಗತ್ತಿನ ಅನ್ಯಾಯಗಳನ್ನು ನಿರ್ಮೂಲ ಮಾಡುವ ಕೆಲಸಕ್ಕೆ ಕೈಹಾಕುವುದಿಲ್ಲ. ಕಷ್ಟಸಂಕಟಕ್ಕೆ ಕಾರಣವಾದ ಎಲ್ಲ ವಿಷಯಗಳನ್ನು ದೇವರ ರಾಜ್ಯವೇ ನಿರ್ಮೂಲ ಮಾಡುವುದೆಂದು ಅವರು ನಂಬುತ್ತಾರೆ. (ಮತ್ತಾಯ 6:10) ಯೇಸುವಿನಂತೆ ಅವರು ಮನಸ್ಸುಗಳನ್ನು ಪರಿವರ್ತಿಸಲು ಶ್ರಮಿಸುತ್ತಾರೆ, ರಾಜಕೀಯ ವ್ಯವಸ್ಥೆಗಳನ್ನಲ್ಲ. ಏಕೆಂದರೆ ಮಾನವನಿಗಿರುವ ಸಮಸ್ಯೆಗಳಲ್ಲಿ ಪ್ರಧಾನವಾದವುಗಳು ನೈತಿಕ ಸಮಸ್ಯೆಗಳೇ ಹೊರತು ರಾಜಕೀಯ ಸಮಸ್ಯೆಗಳಲ್ಲ.

ಹೊಣೆಯರಿತ ಪ್ರಜೆಗಳು

ಕ್ರೈಸ್ತರಾಗಿರುವುದರ ಜೊತೆಗೆ ಒಳ್ಳೇ ಪ್ರಜೆಗಳಾಗಿರುವ ಜವಾಬ್ದಾರಿಯೂ ತಮಗಿದೆಯೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಆದ್ದರಿಂದಲೇ ಅವರು ಸರ್ಕಾರಿ ಅಧಿಕಾರಿಗಳಿಗೆ ಗೌರವ ಮನ್ನಣೆ ಕೊಡುತ್ತಾರೆ. ತಮ್ಮ ಪ್ರಕಾಶನಗಳು ಹಾಗೂ ಸಾರುವ ಕೆಲಸದ ಮೂಲಕ ಜನರಿಗೆ ಕಾನೂನನ್ನು ಪಾಲಿಸುವಂತೆ ಪ್ರೋತ್ಸಾಹಿಸುತ್ತಾರೆ. ಆದರೆ ದೇವರ ಆಜ್ಞೆ ಉಲ್ಲಂಘಿಸುವಂತೆ ಸರ್ಕಾರ ಒತ್ತಾಯಿಸಿದರೆ ಅವರು ಮಣಿಯುವುದಿಲ್ಲ. ಆಗ ಅವರು “ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯ”ರಾಗುತ್ತಾರೆ.—ಅಪೊಸ್ತಲರ ಕಾರ್ಯಗಳು 5:29; ರೋಮನ್ನರಿಗೆ 13:1-7.

ಯೆಹೋವನ ಸಾಕ್ಷಿಗಳು ತಮ್ಮ ಸಮಾಜದಲ್ಲಿರುವ ಎಲ್ಲರನ್ನೂ ಭೇಟಿಮಾಡಿ, ಇಷ್ಟವಿದ್ದವರಿಗೆ ಬೈಬಲ್‌ ಶಿಕ್ಷಣವನ್ನು ಹಣ ತೆಗೆದುಕೊಳ್ಳದೆ ನೀಡುತ್ತಾರೆ. ಈ ಶಿಕ್ಷಣವು ಲಕ್ಷಾಂತರ ಮನಸ್ಸುಗಳನ್ನು ಪರಿವರ್ತಿಸಿದೆ. ಧೂಮಪಾನ, ಕುಡಿಕತನ, ಮಾದಕವಸ್ತು ಸೇವನೆ, ಜೂಜು, ಲೈಂಗಿಕ ಸ್ವಚ್ಛಂದತೆಯಂಥ ಹಾನಿಕಾರಕ ರೂಢಿಗಳನ್ನು ಮೆಟ್ಟಿನಿಲ್ಲಲು ನೆರವು ನೀಡಿದೆ. ಹೀಗೆ ಪ್ರತಿ ವರ್ಷ ಸಾವಿರಾರು ಜನರು ಬೈಬಲ್‌ ಸೂತ್ರಗಳನ್ನು ತಮ್ಮ ಬದುಕಿನಲ್ಲಿ ಅನ್ವಯಿಸಲು ಕಲಿಯುತ್ತಿರುವುದರಿಂದ ನೈತಿಕ ಹೊಣೆಯರಿತ ಪ್ರಜೆಗಳಾಗುತ್ತಿದ್ದಾರೆ.

ಅಷ್ಟುಮಾತ್ರವಲ್ಲ, ಬೈಬಲ್‌ ಶಿಕ್ಷಣವು ಕುಟುಂಬ ಸದಸ್ಯರಿಗೆ ಪರಸ್ಪರರ ಮೇಲಿರುವ ಗೌರವವನ್ನು ಗಾಢಗೊಳಿಸುತ್ತದೆ. ಹೆತ್ತವರು-ಮಕ್ಕಳ ಮಧ್ಯೆ, ಗಂಡ-ಹೆಂಡತಿ ಮಧ್ಯೆ, ಮಕ್ಕಳ ನಡುವೆಯೂ ಸಂವಹನವನ್ನು ಉತ್ತಮಗೊಳಿಸುತ್ತದೆ. ಈ ಅಂಶಗಳು ಕುಟುಂಬ ಬಂಧಗಳನ್ನು ಬಲಪಡಿಸುತ್ತವೆ. ಕುಟುಂಬಗಳು ಬಲಗೊಳ್ಳುವಾಗ, ಸಮಾಜವು ಬಲಗೊಳ್ಳುತ್ತದೆ ಅಲ್ಲವೇ?

ಈ ಲೇಖನಗಳನ್ನು ಓದಿದ ಬಳಿಕ ನಿಮಗೀಗ ಏನನಿಸುತ್ತದೆ? ನಿಜ ಕ್ರೈಸ್ತರು ಹೊಣೆಯರಿತ ಪ್ರಜೆಗಳಾಗಿರಬೇಕೆ? ಹೌದು ಆಗಿರಲೇಬೇಕು. ಹೇಗೆ? ಲೋಕಕ್ಕೆ ಬೆಳಕು ಮತ್ತು ಉಪ್ಪು ಆಗಿರಿ ಎಂದು ಯೇಸು ಕೊಟ್ಟ ಆಜ್ಞೆ ಪಾಲಿಸುವ ಮೂಲಕವೇ.

ಕ್ರಿಸ್ತನ ಈ ಪ್ರಾಯೋಗಿಕ ನಿರ್ದೇಶನಗಳನ್ನು ಅನ್ವಯಿಸಲು ಯತ್ನಿಸುವವರು ಸ್ವತಃ ತಮಗೆ, ತಮ್ಮ ಕುಟುಂಬಗಳಿಗೆ ಮಾತ್ರವಲ್ಲ ಸಮಾಜಕ್ಕೂ ಪ್ರಯೋಜನಗಳನ್ನು ತರುವರು. ನಿಮಗೆ ನಿಮ್ಮ ಊರಲ್ಲಿರುವ ಯೆಹೋವನ ಸಾಕ್ಷಿಗಳು ಈ ಬೈಬಲ್‌ ಶಿಕ್ಷಣ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಕೊಡಲು ಸಂತೋಷಪಡುವರು. * (w12-E 05/01)

[ಪಾದಟಿಪ್ಪಣಿ]

^ ಪ್ಯಾರ. 12 ನಿಮಗೆ ಇಷ್ಟವಿದ್ದರೆ, ಯೆಹೋವನ ಸಾಕ್ಷಿಗಳನ್ನು www.pr418.com ನಲ್ಲೂ ಸಂಪರ್ಕಿಸಬಹುದು

[ಪುಟ 18ರಲ್ಲಿರುವ ಚಿತ್ರ]

ಯೇಸು ಮನಸ್ಸನ್ನು ಪರಿವರ್ತಿಸಲು ಶ್ರಮಿಸಿದನು, ರಾಜಕೀಯ ವ್ಯವಸ್ಥೆಗಳನ್ನಲ್ಲ

[ಪುಟ 19ರಲ್ಲಿರುವ ಚಿತ್ರ]

ಒಳ್ಳೇ ಪ್ರಜೆಗಳಾಗಿರುವುದು ತಮ್ಮ ಕರ್ತವ್ಯವೆಂದು ಯೆಹೋವನ ಸಾಕ್ಷಿಗಳು ಎಣಿಸುತ್ತಾರೆ