ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನೋಡಿದರೂ ಅರ್ಥ ಆಗಲಿಲ್ಲ”

“ನೋಡಿದರೂ ಅರ್ಥ ಆಗಲಿಲ್ಲ”

ಜೀವನ ಕಥೆ

“ನೋಡಿದರೂ ಅರ್ಥ ಆಗಲಿಲ್ಲ”

ಆಲಿವ್ಯ ಅಮೆಲ್‌ ಹೇಳಿದಂತೆ

ಇಸವಿ 1975. ಆಗ ನಾನು ಎರಡು ವರ್ಷದ ಮಗು. ಒಂದಿನ ದೊಡ್ಡ ವಸ್ತುವೊಂದು ಕೆಳಗೆ ಬಿದ್ದು ಜೋರಾಗಿ ಶಬ್ದವಾಯ್ತಂತೆ. ಅಷ್ಟು ಶಬ್ದವಾದರೂ ನಾನು ಸ್ವಲ್ಪನೂ ಅಲುಗಾಡದೆ ಇರೋದನ್ನು ಗಮನಿಸಿದ ಅಮ್ಮನಿಗೆ ನನ್ನಲ್ಲಿ ಏನೋ ಸಮಸ್ಯೆಯಿದೆ ಅಂತ ಅನಿಸ್ತು. ನನಗೆ ಮೂರು ವರ್ಷವಾದರೂ ಮಾತೇ ಬರಲಿಲ್ಲ. ಆಗಲೇ ನಾನು ಕಿವುಡ ಅನ್ನೋ ಆಘಾತ ಸುದ್ದಿ ನನ್ನ ಕುಟುಂಬವನ್ನು ಅಪ್ಪಳಿಸಿದ್ದು.

ನಾನಿನ್ನು ಚಿಕ್ಕ ಮಗುವಾಗಿರುವಾಗಲೇ ನನ್ನ ಅಪ್ಪ ಅಮ್ಮನ ವಿವಾಹ ವಿಚ್ಛೇದನವಾಯ್ತು. ನನ್ನನ್ನು, ನನ್ನ ಇಬ್ಬರು ಅಣ್ಣಂದಿರನ್ನು ಮತ್ತು ಅಕ್ಕಳನ್ನು ಸಾಕುವ ಜವಾಬ್ದಾರಿ ನನ್ನ ಅಮ್ಮನ ಮೇಲೆ ಬಿತ್ತು. ಆ ಕಾಲದಲ್ಲಿ ಈಗಿನ ತರ ಕಿವುಡರಿಗೆ ಶಿಕ್ಷಣ ವ್ಯವಸ್ಥೆಯಿರಲಿಲ್ಲ. ಒಂದುವೇಳೆ ಇದ್ದರೂ ಕಲಿಸಿಕೊಡುವ ರೀತಿ ತುಂಬ ಕಠೋರವಾಗಿತ್ತು. ಆದರೂ ಶ್ರವಣವೈಕಲ್ಯವಿದ್ದ ಬೇರೆ ಮಕ್ಕಳಿಗೆ ಹೋಲಿಸಿದರೆ ನಾನೆಷ್ಟೋ ಮೇಲು. ಹೇಗೆ ಅಂತ ಕೇಳ್ತಿರಾ? ಬನ್ನಿ ಹೇಳ್ತೀನಿ.

ಕಿವುಡು ಮಕ್ಕಳಿಗೆ ಮಾತಾಡಲು ಕಲಿಸಿಕೊಡಬೇಕು ಮತ್ತು ಬೇರೆಯವರು ಮಾತಾಡುವಾಗ ಅವರ ತುಟಿಗಳ ಚಲನೆಯನ್ನು ನೋಡಿ ಅರ್ಥಮಾಡಿಕೊಳ್ಳಲು ಕಲಿಸಬೇಕು ಅನ್ನೋದು ಹಲವಾರು ಶಿಕ್ಷಕರ ಅಭಿಪ್ರಾಯವಾಗಿತ್ತು. ಅಷ್ಟೇಕೆ ಫ್ರಾನ್ಸ್‌ನ ಶಾಲೆಗಳಲ್ಲಿ ಸನ್ನೆಭಾಷೆಯಲ್ಲಿ ಮಾತಾಡಲೇಬಾರದೆಂಬ ನಿಯಮವಿತ್ತು. ತರಗತಿಯಲ್ಲಿ ಸನ್ನೆ ಮಾಡದಂತೆ ಕೆಲವು ಕಿವುಡು ಮಕ್ಕಳ ಕೈಗಳನ್ನು ಹಿಂದೆ ಕಟ್ಟುತ್ತಿದ್ದರು.

ನನ್ನ ಬಾಲ್ಯದ ಆರಂಭದ ಕೆಲವು ವರ್ಷಗಳು ವಾಕ್‌ ತಜ್ಞರ ಬಳಿನೇ ಕಳೆದುಹೋಯಿತು. ಅವರು ನನ್ನ ದವಡೆ ಅಥವಾ ತಲೆಯನ್ನು ಹಿಡಿದುಕೊಂಡು ಒಂದೊಂದೇ ಶಬ್ದಗಳನ್ನು ಮತ್ತೆ ಮತ್ತೆ ಉಚ್ಚರಿಸುವಂತೆ ಹೇಳುತ್ತಿದ್ದರು. ನನಗೆ ಕೇಳಿಸದ ಶಬ್ದಗಳನ್ನು ನಾನು ಉಚ್ಚರಿಸೋದು ಹೇಗೆ? ಬೇರೆ ಮಕ್ಕಳ ಜೊತೆ ಸಂವಹನ ಮಾಡಕ್ಕಾಗದೆ ಹಿಂಸೆಯಾಗುತ್ತಿತ್ತು. ಆ ವರುಷಗಳಲ್ಲಿ ನಾನು ಪಡಬಾರದ ಕಷ್ಟಪಟ್ಟುಬಿಟ್ಟೆ.

ಆರು ವರ್ಷದವನಾಗಿದ್ದಾಗ ನನ್ನನ್ನು ಶ್ರವಣವೈಕಲ್ಯ ಮಕ್ಕಳ ಶಾಲೆಗೆ ಸೇರಿಸಿದರು. ಆಗಲೇ ಮೊದಲ ಸಲ ನಾನು ಕಿವುಡು ಮಕ್ಕಳ ಜೊತೆ ಸಹವಾಸ ಮಾಡಿದ್ದು. ಆದರೆ ಇಲ್ಲೂ ಸನ್ನೆಭಾಷೆ ನಿಷಿದ್ಧ. ಒಂದುವೇಳೆ ತರಗತಿಯಲ್ಲಿ ಸನ್ನೆ ಮಾಡಿದ್ರೆ ಬೆರಳುಗಳಿಗೇ ಹೊಡೆಯುತ್ತಿದ್ದರು ಅಥವಾ ಕೂದಲನ್ನು ಜೋರಾಗಿ ಎಳೆಯುತ್ತಿದ್ದರು. ಆದರೆ ನಾವು ಮಾತ್ರ ಯಾರಿಗೂ ಗೊತ್ತಾಗದೆ ನಮ್ಮದ್ದೇ ಆದ ಸನ್ನೆಭಾಷೆಯಲ್ಲಿ ಮಾತಾಡುತ್ತಿದ್ವಿ. ಕೊನೆಗೆ ಬೇರೆ ಮಕ್ಕಳ ಜೊತೆ ಸಂಭಾಷಣೆ ಮಾಡಲು ಕಲಿತೆ. ಅಲ್ಲಿಂದ ನಾಲ್ಕು ವರ್ಷ ರಸಮಯ ವರ್ಷಗಳು.

ಹತ್ತನೇ ವಯಸ್ಸಿನಲ್ಲಿ ನನ್ನನ್ನು ಬೇರೆ ಶಾಲೆಗೆ ಸೇರಿಸಿದರು. ಅದು ಸಾಮಾನ್ಯ ಶಾಲೆ, ಅಂಗವೈಕಲ್ಯ ಮಕ್ಕಳ ಶಾಲೆ ಆಗಿರಲಿಲ್ಲ. ಶ್ರವಣವೈಕಲ್ಯವಿದ್ದ ಮಕ್ಕಳೆಲ್ಲ ಸತ್ತುಹೋಗಿ ನಾನೊಬ್ಬನೇ ಉಳಿದುಕೊಂಡಂತೆ ಅನಿಸುತ್ತಿತ್ತು. ನನಗೆ ನಿಂತ ನೆಲವೇ ಕುಸಿದಂತಾಯಿತು. ನನ್ನ ಕುಟುಂಬದವರು ಸನ್ನೆಭಾಷೆ ಕಲಿಯಲಿಲ್ಲ. ಕಿವುಡು ಮಕ್ಕಳ ಜೊತೆ ಸಹವಾಸ ಮಾಡಲೂ ಬಿಡುತ್ತಿರಲಿಲ್ಲ. ಕಾರಣ ಸ್ಪೀಚ್‌ ಥೆರಪಿಯಿಂದ ಕಲಿತದ್ದನ್ನೆಲ್ಲ ನಿಮ್ಮ ಮಗ ಮರೆತುಬಿಡ್ತಾನೆ ಅಂತ ವೈದ್ಯರುಗಳು ಅವರಿಗೆ ಹೇಳಿದ್ದರು. ಒಂದಿನ ನನಗಿನ್ನೂ ಚೆನ್ನಾಗಿ ನೆನಪಿದೆ, ನಾನು ಕಿವಿ ತಜ್ಞರ ಬಳಿ ಹೋಗಿದ್ದೆ. ಅವರ ಮೇಜಿನ ಮೇಲೆ ಸನ್ನೆಭಾಷೆಯ ಪುಸ್ತಕವೊಂದಿತ್ತು. ಆ ಪುಸ್ತಕದ ಮುಖಪುಟದಲ್ಲಿರೋ ಚಿತ್ರಗಳನ್ನು ನೋಡಿ “ನನಗೆ ಈ ಪುಸ್ತಕ ಬೇಕು” ಅಂದೆ. ತಕ್ಷಣ ವೈದ್ಯರು ಅದನ್ನು ಬಚ್ಚಿಟ್ಟರು. *

ಬೈಬಲ್‌ ಕಲಿಕೆ ಆರಂಭ

ಚಿಕ್ಕ ಪ್ರಾಯದಲ್ಲೇ ನಮ್ಮ ಮನಸ್ಸಿನಲ್ಲಿ ಬೈಬಲ್‌ ಮೌಲ್ಯಗಳನ್ನು ಅಚ್ಚೊತ್ತಬೇಕನ್ನುವುದು ಅಮ್ಮನ ಗುರಿಯಾಗಿತ್ತು. ಬೋರ್ಡಿಯಕ್ಸ್‌ ಅನ್ನೋ ನಗರದಲ್ಲಿರುವ ಯೆಹೋವನ ಸಾಕ್ಷಿಗಳ ಸಭೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ ನನಗೆ ಅಷ್ಟೇನು ಅರ್ಥವಾಗ್ತಿರಲಿಲ್ಲ. ಹಾಗಾಗಿ ಸಭೆಗೆ ಬರುತ್ತಿದ್ದವರು ಒಂದೊಂದು ಸಲ ಒಬ್ಬೊಬ್ಬರು ನನ್ನ ಬಳಿ ಕೂತು ವೇದಿಕೆಯಲ್ಲಿ ಹೇಳುತ್ತಿದ್ದ ವಿಷಯಗಳನ್ನು ಬರೆದು ತೋರಿಸುತ್ತಿದ್ದರು. ಈ ಪ್ರೀತಿ, ಜತನ ನನ್ನ ಹೃದಯ ಗೆದ್ದುಬಿಟ್ಟಿತು. ಮನೆಯಲ್ಲಿ ಅಮ್ಮ ಬೈಬಲ್‌ ಬಗ್ಗೆ ಹೇಳಿಕೊಡುತ್ತಿದ್ದರು ಆದ್ರೆ ಅದ್ಯಾವುದೂ ಅರ್ಥವಾಗುತ್ತಿರಲಿಲ್ಲ. ಆಗ ನನಗೆ ದೇವಪ್ರವಾದಿ ದಾನಿಯೇಲರಂತೆ ಅನಿಸುತ್ತಿತ್ತು. ಅವರಿಗೆ ಒಬ್ಬ ದೇವದೂತ ಭವಿಷ್ಯವಾಣಿಯೊಂದನ್ನು ತಿಳಿಸಿದಾಗ “ಕೇಳಿಸಿದರೂ ಅರ್ಥವಾಗಲಿಲ್ಲ” ಅಂತ ಹೇಳಿದರು. (ದಾನಿಯೇಲ 12:8) ಆದರೆ ನನ್ನ ವಿಷಯದಲ್ಲಿ ನಾನು “ನೋಡಿದರೂ ಅರ್ಥ ಆಗಲಿಲ್ಲ.”

ಸ್ವಲ್ಪ ಸ್ವಲ್ಪವಾಗಿ ಬೈಬಲಿನಲ್ಲಿರುವ ಮೂಲಭೂತ ಸತ್ಯಗಳನ್ನು ಅರ್ಥಮಾಡಿಕೊಳ್ಳ ತೊಡಗಿದೆ. ಚೆನ್ನಾಗಿ ಅರ್ಥವಾದ ವಿಷಯಗಳನ್ನು ಮನಸ್ಸಿನಾಳದಲ್ಲಿ ಭದ್ರವಾಗಿಟ್ಟೆ. ಬದುಕಲ್ಲಿ ಅಳವಡಿಸಿಕೊಳ್ಳಲು ಶುರುಮಾಡಿದೆ. ಹಾಗೇ ಬೇರೆಯವರು ತೋರಿಸುತ್ತಿದ್ದ ಒಳ್ಳೇ ಗುಣಗಳನ್ನು ನೋಡಿ ಕಲಿತುಕೊಂಡೆ. ಉದಾಹರಣೆಗೆ ನಮಗೆ ತಾಳ್ಮೆ ಇರಬೇಕು ಎನ್ನುತ್ತೆ ಬೈಬಲ್‌. (ಯಾಕೋಬ 5:7, 8) ಆದರೆ ನನಗಂತೂ ಅದು ಬರ್ತಾನೇ ಇರಲಿಲ್ಲ. ಯೆಹೋವನ ಸಾಕ್ಷಿಗಳು ತಾಳ್ಮೆ ತೋರಿಸುತ್ತಿರುವುದನ್ನು ನೋಡಿ ಕಲಿತುಕೊಂಡೆ. ಯೆಹೋವನ ಸಾಕ್ಷಿಗಳು ನನ್ನ ಪಾಲಿಗೆ ದೇವರ ಕೊಡುಗೆ ಅಂತಾನೇ ಹೇಳಬಹುದು.

ನೋವಿನ ಹಿಂದೆ ಬಂದಿತು ನಲಿವು

ನಾನು ಹದಿವಯಸ್ಸಿನಲ್ಲಿರುವಾಗ ಒಂದಿನ ರಸ್ತೆಯಲ್ಲಿ ಶ್ರವಣವೈಕಲ್ಯ ಯುವಕ ಯುವತಿಯರು ಸನ್ನೆಭಾಷೆಯಲ್ಲಿ ಮಾತಾಡುತ್ತಿರುವುದನ್ನು ಕಂಡೆ. ಅವರ ಜತೆ ಕದ್ದುಮುಚ್ಚಿ ಸಹವಾಸ ಮಾಡಿ ಅವರಿಂದ ಫ್ರೆಂಚ್‌ ಸನ್ನೆಭಾಷೆ ಕಲಿಯಲು ಶುರುಮಾಡಿದೆ. ನಾನು ಹೋಗುತ್ತಿದ್ದ ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಸ್ಟೇಫಾನ್‌ ಅನ್ನೋ ಯುವಕನ ಸ್ನೇಹ ಸಿಕ್ಕಿತು. ಪಾಪ ನನ್ನ ಹತ್ರ ಮಾತಾಡಲು ತುಂಬ ಕಷ್ಟ ಪಡುತ್ತಿದ್ದ. ಆದರೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ. ನನ್ನ ಆಪ್ತಮಿತ್ರನಾದ. ಆದರೆ ಈ ಸಂತೋಷ ಹೆಚ್ಚು ದಿನ ಇರಲಿಲ್ಲ. ಮಿಲಿಟರಿ ಸೇರಲು ಸ್ಟೇಫಾನ್‌ ನಿರಾಕರಿಸಿದಕ್ಕೆ ಅವನನ್ನು ಜೈಲಿಗೆ ಹಾಕಿಬಿಟ್ಟರು. ಸ್ಟೇಫಾನ್‌ ದೂರವಾದ ನೋವು ನನ್ನ ಸಂತೋಷವನ್ನೆಲ್ಲ ಕಿತ್ತುಕೊಂಡುಬಿಟ್ಟಿತು. ನಿರಾಶೆ ತುಂಬಿಕೊಳ್ತು. ಸಭೆಗೂ ಸರಿಯಾಗಿ ಹೋಗುತ್ತಿರಲಿಲ್ಲ.

ಹನ್ನೊಂದು ತಿಂಗಳ ಬಳಿಕ ಸ್ಟೇಫಾನ್‌ ಬಿಡುಗಡೆಯಾಗಿ ಮನೆಗೆ ಬಂದನು. ಅವನು ಸನ್ನೆಭಾಷೆಯಲ್ಲಿ ಮಾತಾಡಿದಾಗ ನನ್ನ ಕಣ್ಣನ್ನೇ ನನಗೆ ನಂಬಕ್ಕಾಗಲಿಲ್ಲ! ಸ್ಟೇಫಾನ್‌ ಜೈಲಿನಲ್ಲಿ ಸನ್ನೆಭಾಷೆ ಕಲಿತ್ತಿದ್ದ. ಅವನ ಕೈಯ ಚಲನೆ, ಮುಖಭಾವಗಳನ್ನೆಲ್ಲ ನೋಡುತ್ತಿದ್ದಾಗ ರೋಮಾಂಚನಗೊಳ್ಳುತ್ತಿದ್ದೆ.

ಕೊನೆಗೂ ಅರ್ಥವಾಯಿತು

ಸ್ಟೇಫಾನ್‌ ನನಗೆ ಬೈಬಲ್‌ ಕಲಿಸಲು ಆರಂಭಿಸಿದ. ಇಲ್ಲಿಯ ವರೆಗೆ ಬೈಬಲ್‌ ವಿಷಯಗಳು ನನ್ನ ಮನಸ್ಸಿನಲ್ಲಿ ತುಂಡು ತುಂಡುಗಳಾಗಿದ್ದವು. ಈಗ ಆ ತುಂಡುಗಳನ್ನೆಲ್ಲ ಜೋಡಿಸಿ ಸಂಪೂರ್ಣ ಚಿತ್ರಣ ಪಡೆದುಕೊಂಡೆ. ಚಿಕ್ಕಂದಿನಿಂದಲೂ ಯೆಹೋವನ ಸಾಕ್ಷಿಗಳ ಸಾಹಿತ್ಯದಲ್ಲಿ ಬರುವ ಸುಂದರ ಚಿತ್ರಗಳನ್ನು ನೋಡುವುದೆಂದರೆ ನನಗೆ ತುಂಬ ಇಷ್ಟ. ಕಥೆಗಳನ್ನು ಮರೆಯಬಾರದು ಅಂತ ಚಿತ್ರಗಳಲ್ಲಿರುವ ಒಬ್ಬೊಬ್ಬರನ್ನೂ ಕೂಲಂಕಷವಾಗಿ ಗಮನಿಸಿ ಹೋಲಿಸಿ ನೋಡಿ ಮನಸ್ಸಲ್ಲಿ ಅಚ್ಚೊತ್ತುತ್ತಿದ್ದೆ. ಬೈಬಲ್‌ ಹೇಳೋ ದೇವಭಕ್ತ ಅಬ್ರಹಾಮ, ಅವರ “ಸಂತತಿ”, “ಮಹಾ ಸಮೂಹ” ಯಾರು ಅಂತ ಗೊತ್ತಿತ್ತು. ಆದರೆ ಇದೆಲ್ಲ ಚೆನ್ನಾಗಿ ಅರ್ಥವಾಗಿದ್ದು ಸನ್ನೆಭಾಷೆಯಲ್ಲಿ ವಿವರಿಸಿದಾಗಲೇ. (ಆದಿಕಾಂಡ 22:15-18; ಪ್ರಕಟನೆ 7:9) ಯಾಕಂದರೆ ಸನ್ನೆಭಾಷೆಯೇ ನನ್ನ ನಿಜವಾದ ಭಾಷೆ, ನನಗೆ ಅರ್ಥವಾಗುವ ಭಾಷೆ.

ಸಭೆಯಲ್ಲಿ ಕಲಿಸುವ ವಿಷಯಗಳು ಅರ್ಥವಾಗ ತೊಡಗಿತು. ಹಾಗಾಗಿ ಬೈಬಲ್‌ ಬಗ್ಗೆ ಹೆಚ್ಚೆಚ್ಚು ಜ್ಞಾನ ಸಂಪಾದಿಸಬೇಕೆಂಬ ಹಂಬಲ ಹೆಚ್ಚಾಯಿತು. ಸ್ಟೇಫಾನನ ಸಹಾಯದಿಂದ ಆ ಜ್ಞಾನ ಗಳಿಸುತ್ತಾ ಹೋದೆ. 1992ರಲ್ಲಿ ನನ್ನ ಬದುಕನ್ನು ಯೆಹೋವ ದೇವರಿಗೆ ಮುಡಿಪಾಗಿಡುವ ತೀರ್ಮಾನ ತಗೊಂಡೆ. ದೀಕ್ಷಾಸ್ನಾನ ಪಡಕೊಂಡೆ. ಇಷ್ಟೆಲ್ಲ ಪ್ರಗತಿ ಮಾಡಿದ್ರೂ ನಾಚಿಕೆ ಸ್ವಭಾವ ಮಾತ್ರ ಸ್ವಲ್ಪವೂ ಕಡಿಮೆ ಆಗಲಿಲ್ಲ. ಜನರ ಜತೆ ಬೆರೆಯುವುದೇ ತುಂಬ ಕಷ್ಟವಾಗುತ್ತಿತ್ತು. ಇದೆಲ್ಲ ನನ್ನ ಬಾಲ್ಯದ ಎಷ್ಟೋ ವರ್ಷಗಳ ತನಕ ಯಾರೊಂದಿಗೂ ಮಾತಾಡಲಾಗದೆ ಇದ್ದದ್ದರ ಪರಿಣಾಮವಾಗಿತ್ತು.

ನಾಚಿಕೆಯನ್ನು ಮೆಟ್ಟಿನಿಂತೆ

ಸಭೆಯಲ್ಲಿ ಶ್ರವಣವೈಕಲ್ಯವಿದ್ದ ನಾವು ಒಂದು ಸ್ವಲ್ಪ ಜನ ಇದ್ವಿ. ನಮ್ಮ ಈ ಚಿಕ್ಕ ಗುಂಪನ್ನು ಬೋರ್ಡಿಯಕ್ಸ್‌ ನಗರದ ಪೆಸಾಕ್‌ ಅನ್ನೋ ಸ್ಥಳದಲ್ಲಿರೋ ಸಭೆಗೆ ಸೇರಿಸಿಬಿಟ್ಟರು. ಅದರಿಂದ ಕೂಡ ನನಗೆ ತುಂಬ ಸಹಾಯ ಆಯಿತು. ಆಧ್ಯಾತ್ಮಿಕವಾಗಿ ತುಂಬ ಬೆಳೆದೆ. ಈಗಾಗಲೇ ಹೇಳಿದ ಹಾಗೆ ನನಗೆ ಸಂವಹನ ಮಾಡೋದು ಅಷ್ಟು ಸುಲಭವಾಗಿರಲಿಲ್ಲ. ಆದರೂ ನನ್ನ ಸ್ನೇಹಿತರು ಎಲ್ಲ ವಿಷಯ ಅರ್ಥವಾಗುವ ಹಾಗೆ ನನಗೆ ಹೇಳುತ್ತಿದ್ದರು. ಒಬ್ಬ ದಂಪತಿಯನ್ನಂತೂ ಮರೆಯಕ್ಕೇ ಆಗಲ್ಲ. ಗಿಲ್ಸ್‌ ಮತ್ತೆ ಏಲೋಡಿ ಅಂತ. ನನ್ನ ಹತ್ತಿರ ತುಂಬ ಹೊತ್ತು ಮಾತಾಡುತ್ತಿದ್ದರು. ಸಭಾಕೂಟಗಳು ಮುಗಿದ ಮೇಲೆ ಊಟಕ್ಕೆ ಇಲ್ಲಾ ಕಾಫಿ ಕುಡಿಯಕ್ಕೆ ಮನೆಗೆ ಕರೆಯುತ್ತಿದ್ದರು. ಅವರು ನನಗೆ ಆಪ್ತರಾದರು. ದೇವಭಯದಿಂದ ನಡೆದುಕೊಳ್ಳುವ ಜನರ ಜೊತೆ ಸ್ನೇಹ ಬೆಳೆಸೋದು ನಿಜವಾಗ್ಲೂ ಅದ್ಭುತ ವಿಷಯ!

ಈ ಸಭೆಯಲ್ಲೇ ಚೆಂದುಳ್ಳಿ ಚೆಲುವೆ ವೆನೆಸ್ಸಾ ಸಿಕ್ಕಿದ್ದು. ಆಕೆ ಸ್ಪಂದಿಸುವ ರೀತಿ, ಆಕೆಗಿದ್ದ ಯುಕ್ತಾಯುಕ್ತತೆಯ ಪರಿಜ್ಞಾನ ನನಗೆ ತುಂಬ ಇಷ್ಟವಾಯಿತು. ನನಗಿರುವ ವೈಕಲ್ಯವನ್ನು ಅವಳು ಯಾವತ್ತೂ ಅಡ್ಡಿಯಾಗಿ ಪರಿಗಣಿಸಲಿಲ್ಲ. ಬದಲಿಗೆ ನನ್ನ ಜೊತೆ ಸಂವಾದ ಮಾಡುವ ಕಲೆಯನ್ನು ಬೆಳೆಸಿಕೊಳ್ಳುವ ಅವಕಾಶವಾಗಿ ತೆಗೆದುಕೊಂಡಳು. ಈ ಹೃದಯವಂತಿಕೆ ಹುಡುಗಿಗೆ ಮನಸೋತು 2005ರಲ್ಲಿ ಅವಳನ್ನು ಮದುವೆಯಾದೆ. ಸಂವಾದ ಮಾಡುವುದು ನನಗೆ ಕಷ್ಟವಾಗಿದ್ದರೂ ನಾಚಿಕೆ ಸ್ವಭಾವವನ್ನು ತೆಗೆದುಹಾಕಲು ಸಹಾಯ ಮಾಡಿದಳು. ಮನಸ್ಸು ಬಿಚ್ಚಿ ಮಾತಾಡಲು ಹೇಳಿಕೊಟ್ಟಳು. ಎಲ್ಲ ವಿಷಯದಲ್ಲೂ ತುಂಬ ಸಹಕರಿಸುತ್ತಾಳೆ. ನಾನವಳಿಗೆ ಚಿರಋಣಿ.

ದೇವರು ಕೊಟ್ಟ ಮತ್ತೊಂದು ಉಡುಗೊರೆ

ನಮ್ಮ ಮದುವೆಯಾದ ವರ್ಷದಲ್ಲೇ ಫ್ರಾನ್ಸ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌ನಿಂದ ಆಮಂತ್ರಣ ಪತ್ರ ಸಿಕ್ಕಿತು. ತರ್ಜುಮೆ ಕೆಲಸಕ್ಕೆ ಸಂಬಂಧಪಟ್ಟಂತೆ ಒಂದು ತಿಂಗಳ ತರಬೇತಿಗಾಗಿ ನನ್ನನ್ನು ಕರೆದರು. ಫ್ರೆಂಚ್‌ ಸನ್ನೆಭಾಷೆಯಲ್ಲಿ ಅನೇಕ ಸಾಹಿತ್ಯವನ್ನು ಹೊರತರಲು ಬ್ರಾಂಚ್‌ ಆಫೀಸ್‌ ಭರದಿಂದ ಕೆಲಸಮಾಡುತ್ತಿತ್ತು. ಅದಕ್ಕಾಗಿ ಭಾಷಾಂತರ ತಂಡಕ್ಕೆ ಸಹಾಯದ ಅಗತ್ಯವಿತ್ತು.

ಈ ಸದವಕಾಶ ನನಗೆ ಸಿಕ್ಕಿದ್ದು ದೇವರ ಉಡುಗೊರೆ ದಯೆ ಅಂತಾನೇ ಯೋಚಿಸುತ್ತಿದ್ವಿ. ಆದರೂ ಕೆಲವು ಚಿಂತೆಗಳು ಕಾಡುತ್ತಿದ್ದವು. ಊರಿನಲ್ಲಿರೋ ನಮ್ಮ ಸನ್ನೆಭಾಷಾ ಗುಂಪನ್ನು ಯಾರು ನೋಡಿಕೊಳ್ಳುತ್ತಾರೆ? ಮನೆ ಏನು ಮಾಡೋದು? ವೆನೆಸ್ಸಾಗೆ ಕೆಲಸ ಸಿಗುತ್ತಾ? ಇದನ್ನೆಲ್ಲ ದೇವರೇ ಬಗೆಹರಿಸಿದರು. ಇದನ್ನು ನೋಡಿದಾಗ, ದೇವರು ನಮ್ಮನ್ನು ಎಷ್ಟು ಪ್ರೀತಿಸುತ್ತಾರೆ, ಶ್ರವಣವೈಕಲ್ಯವಿರೋ ಜನರನ್ನು ಎಷ್ಟು ಪ್ರೀತಿಸುತ್ತಾರೆ ಅನ್ನೋದು ಮತ್ತೊಮ್ಮೆ ಮನವರಿಕೆಯಾಯಿತು.

ವಿಶೇಷ ಜನರ ಸಹಕಾರ

ಭಾಷಾಂತರ ಕೆಲಸ ಮಾಡುವಾಗ ಗೊತ್ತಾಯಿತು ಶ್ರವಣವೈಕಲ್ಯವಿರುವ ಜನರಿಗೆ ಆಧ್ಯಾತ್ಮಿಕ ವಿಷಯಗಳನ್ನು ತಿಳಿಸಿಕೊಡಲು ದೇವರಿಗೆ ಎಷ್ಟು ಹಂಬಲವಿದೆ ಅಂತ. ಬ್ರಾಂಚ್‌ ಆಫೀಸ್‌ನಲ್ಲಿರೋ ಬೇರೆಯವರು ಕೂಡ ನನ್ನ ಜೊತೆ ಸಂವಾದ ಮಾಡಲು ಪ್ರಯತ್ನಿಸೋದನ್ನು ನೋಡುವಾಗ ಮನಸ್ಸೆಷ್ಟು ಪುಳಕಗೊಳ್ಳುತ್ತೆ ಗೊತ್ತಾ? ನನ್ನ ಹತ್ರ ಮಾತಾಡಬೇಕು ಅಂತಾನೇ ಅವರು ಕೆಲವೊಂದು ಸನ್ನೆಗಳನ್ನು ಕಲಿತು ಉಪಯೋಗಿಸುತ್ತಾರೆ. ಹಾಗಾಗಿ ನಾನು ಏಕಾಂಗಿ ಅನ್ನೋ ಭಾವನೆ ಯಾವತ್ತೂ ಬಂದದ್ದೇ ಇಲ್ಲ. ಇದೆಲ್ಲ ಯೆಹೋವನ ಭಕ್ತಜನರಲ್ಲಿರುವ ಒಗ್ಗಟ್ಟಿಗೆ ಸಾಕ್ಷಿ.—ಕೀರ್ತನೆ 133:1.

ಇಂದಿನ ವರೆಗೂ ನನ್ನ ಸಹಾಯಕ್ಕೆ ಕ್ರೈಸ್ತ ಸಭೆಯ ಮೂಲಕ ದೇವರು ಯಾರನ್ನಾದರೂ ಒಬ್ಬರನ್ನು ಕಳುಹಿಸಿಕೊಡುತ್ತಾ ಬಂದಿದ್ದಾರೆ. ಅದಕ್ಕಾಗಿ ದೇವರಿಗೆ ಅನಂತ ಅನಂತ ಕೃತಜ್ಞತೆಗಳು! ಇಂಥ ನಮ್ಮ ಸೃಷ್ಟಿಕರ್ತನ ಬಗ್ಗೆ ಶ್ರವಣವೈಕಲ್ಯವಿರೋ ಜನರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ದೇವರು ನನಗೊಂದು ಪುಟ್ಟ ಅವಕಾಶ ಕೊಟ್ಟಿದ್ದಾರೆ. ಅದಕ್ಕೂ ನಾನು ದೇವರಿಗೆ ಆಭಾರಿ. ಇವತ್ತು ನಮ್ಮ ಮಾತಿಗೆ ಇರೋ ಅಡೆತಡೆಗಳು ಅಂತ್ಯ ಕಾಣುವ ದಿನಕ್ಕಾಗಿ ಕಾಯುತ್ತಿದ್ದೀನಿ. ಆಗ ನಾವೆಲ್ಲ ಒಂದೇ ಕುಟುಂಬದ ಹಾಗೆ ಅನ್ಯೋನ್ಯವಾಗಿ ಇರ್ತೀವಿ. ‘ಶುದ್ಧಭಾಷೆ’ ಮಾತಾಡುತ್ತೀವಿ. ಅಂದರೆ ಯೆಹೋವ ದೇವರ ಬಗ್ಗೆ, ಆತನ ಸಂಕಲ್ಪಗಳ ಬಗ್ಗೆ ಎಲ್ಲರೂ ಸಂತಸದಿಂದ ಮಾತಾಡುತ್ತಿರುತ್ತೀವಿ.—ಚೆಫನ್ಯ 3:9. ▪ (w13-E 03/01)

[ಪಾದಟಿಪ್ಪಣಿ]

^ ಪ್ಯಾರ. 9 ಶ್ರವಣವೈಕಲ್ಯವಿದ್ದ ಮಕ್ಕಳಿಗೆ ಸನ್ನೆಭಾಷೆ ಕಲಿಸಲು ಫ್ರೆಂಚ್‌ ಸರಕಾರ 1991ರ ತನಕ ಅಧಿಕೃತವಾಗಿ ಒಪ್ಪಿಗೆ ಕೊಟ್ಟಿರಲಿಲ್ಲ.

[ಪುಟ 13ರಲ್ಲಿರುವ ಚಿತ್ರ]

ಐದು ವರ್ಷದವನಾಗಿದ್ದಾಗ

[ಪುಟ 14ರಲ್ಲಿರುವ ಚಿತ್ರ]

ಬೈಬಲ್‌ ಕಲಿಯಲು ಸಹಾಯ ಮಾಡಿದ ಸ್ಟೇಫಾನ್‌

[ಪುಟ 15ರಲ್ಲಿರುವ ಚಿತ್ರ]

ನನ್ನ ಬಲಗೈಯಾಗಿರುವ ಪತ್ನಿ ವೆನೆಸ್ಸಾ

[ಪುಟ 15ರಲ್ಲಿರುವ ಚಿತ್ರ]

ನಾನು ಫ್ರೆಂಚ್‌ ಸನ್ನೆಭಾಷೆಯಲ್ಲಿ ಭಾಷಣ ನೀಡುತ್ತಿರುವಾಗ

[ಪುಟ 15ರಲ್ಲಿರುವ ಚಿತ್ರ]

ಬ್ರಾಂಚ್‌ ಆಫೀಸ್‌ನಲ್ಲಿ ಭಾಷಾಂತರ ಕೆಲಸ