ಮುಖಪುಟ ಲೇಖನ: ಯಾಕಿಷ್ಟು ಕಷ್ಟ? ಇದಕ್ಕೆಲ್ಲ ಯಾವಾಗ ಕೊನೆ?
ಎಷ್ಟೊಂದು ಅಮಾಯಕರ ಪ್ರಾಣ ನಷ್ಟ!
ಬೆಂಗಳೂರಿನ ವಾಜಿದ್ ಪಾಶಾಗೆ ಎಂಟು ವರ್ಷ. ಅವನೆಂದರೆ ಮನೆಯಲ್ಲಿ ಎಲ್ಲರಿಗೂ ಮುದ್ದು. ಮಂಗಳವಾರ ಶಾಲೆಯಿಂದ ಬಂದವನೇ ಆಡಲು ಹೋದ. ಎಷ್ಟು ಹೊತ್ತಾದರೂ ಮನೆಗೆ ಬರಲಿಲ್ಲ. ವಾಜಿದ್‌ನನ್ನು ಹುಡುಕಿಕೊಂಡು ಅವನ ಅಪ್ಪ-ಅಮ್ಮ ಹೊರಟರು. ಎಷ್ಟು ಹುಡುಕಿದರೂ ಸಿಕ್ಕಲೇ ಇಲ್ಲ. ಬುಧವಾರ ಬೆಳಗ್ಗೆ ಮನೆಯ ಹತ್ತಿರ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಜಾಗದಲ್ಲಿ ಇದ್ದ ನೀರಿನ ತೊಟ್ಟಿಯಲ್ಲಿ ವಾಜಿದ್‌ನ ದೇಹ ಹೆಣವಾಗಿ ತೇಲುತ್ತಿತ್ತು.
ಶಾರ್ಲೆಟ್, ಡ್ಯಾನಿಯಲ್, ಒಲಿವಿಯ, ಜೊಸ್‌ಫಿನ್. ಡಿಸೆಂಬರ್ 14, 2012ರಂದು ಅಮೆರಿಕದ ಕನೆಕ್ಟಿಕಟ್‌ನ ಶಾಲೆಯೊಂದರಲ್ಲಿ ಗುಂಡೇಟಿಗೆ ಬಲಿಯಾದ 6ರಿಂದ 7 ವರ್ಷದ 20 ಕಂದಮ್ಮಗಳಲ್ಲಿ ಕೆಲವರ ಹೆಸರುಗಳಿವು. ಅಂದು ರಕ್ತದಲ್ಲಿ ಮಿಂದು ಬಲಿಯಾದವರ ಸಂಖ್ಯೆ 26. ಅಧ್ಯಕ್ಷ ಒಬಾಮ ಈ ಮಕ್ಕಳ ಹೆಸರನ್ನು ಹೇಳುತ್ತಾ ದುಃಖದ ಮಡಿಲಲ್ಲಿದ್ದ ಜನರಿಗೆ ಹೇಳಿದ್ದು: “ಇಂಥ ದುರಂತಗಳು ಕೊನೆಯಾಗಬೇಕು.”
ಹದಿನೆಂಟು ವರ್ಷದ ಬಾನೊ 1996ರಲ್ಲಿ ತನ್ನ ಕುಟುಂಬದೊಂದಿಗೆ ನಾರ್ವೆಗೆ ಸ್ಥಳಾಂತರಿಸಿದಳು. ಜುಲೈ 22, 2011ರ ತನಕ ಎಲ್ಲವೂ ಚೆನ್ನಾಗಿತ್ತು. ಆದರೆ ಅಂದು ಉಗ್ರವಾದಿಯೊಬ್ಬ 77 ಅಮಾಯಕರ ಜೀವವನ್ನು ಚಿವುಟಿಹಾಕಿದ. ಅವರಲ್ಲಿ ಬಾನೊ ಕೂಡ ಒಬ್ಬಳು. ಈ ನರಹಂತಕ ತನ್ನ ಬಗ್ಗೆ ಕೊಚ್ಚಿಕೊಳ್ಳುತ್ತಾ ಹೇಳಿದ್ದು: ‘ಇದಕ್ಕಿಂತ ಜಾಸ್ತಿ ಜನರನ್ನು ಕೊಲ್ಲಲಾಗಲಿಲ್ಲ. ದಯವಿಟ್ಟು ಕ್ಷಮಿಸಿ.’
ಇಂಥ ಮನಕಲಕುವ ಘಟನೆಗಳು ಜಗತ್ತಲ್ಲಿ ನಡೆಯುತ್ತಲೇ ಇವೆ. ಅಪಘಾತ, ಅಪರಾಧ, ಯುದ್ಧ, ಭಯೋತ್ಪಾದನೆ, ನೈಸರ್ಗಿಕ ವಿಪತ್ತು ಮತ್ತು ಇನ್ನಿತರ ದುರಂತಗಳಿಂದ ಆಗುವ ನೋವು-ನಷ್ಟಗಳ ಬಗ್ಗೆ ಸ್ವಲ್ಪ ಯೋಚಿಸಿ. ಯಾವುದೇ ಕಾರಣವಿಲ್ಲದೆ ತಾವು ಮಾಡಿರದ ತಪ್ಪಿಗಾಗಿ ಅಮಾಯಕರು ಏನನ್ನೆಲ್ಲಾ ಅನುಭವಿಸಬೇಕಾಗುತ್ತಿದೆ. . . ಎಷ್ಟೊಂದು ಪ್ರಾಣ ನಷ್ಟವಾಗುತ್ತಿದೆ!
ಮನುಷ್ಯರ ಬಗ್ಗೆ ದೇವರಿಗೆ ಕಾಳಜಿ ಇಲ್ಲ, ನಮ್ಮ ಕಷ್ಟಗಳನ್ನು ನೋಡುವುದೇ ಇಲ್ಲ ಅಂತ ಕೆಲವರು ದೇವರನ್ನು ದೂರುತ್ತಾರೆ. ಇನ್ನು ಕೆಲವರು ಕಷ್ಟ ಪಡುವುದನ್ನು ದೇವರು ನೋಡುತ್ತಾನೆ ಆದರೆ ಯಾವುದನ್ನೂ ಸರಿ ಮಾಡುವುದಿಲ್ಲ ಅಂತ ಹೇಳುತ್ತಾರೆ. ಕೆಲವರು ‘ಎಲ್ಲಾ ನಮ್ಮ ಹಣೆ ಬರಹ’ ಎನ್ನುತ್ತಾರೆ. ಜನರ ಇಂಥ ಹೇಳಿಕೆ-ಅಭಿಪ್ರಾಯಕ್ಕೆ ಕೊನೆಯಿಲ್ಲ. ಕಷ್ಟಗಳಿಗೆಲ್ಲ ಏನು ಕಾರಣ, ಅದಕ್ಕೆ ಕೊನೆ ಹೇಗೆ ಎಂದೂ ಜನರಿಗೆ ಗೊತ್ತಿಲ್ಲ. ಆದರೆ ಇದಕ್ಕೆಲ್ಲಾ ಉತ್ತರ ಖಂಡಿತ ಇದೆ. ಮುಂದೆ ಬರಲಿರುವ ಲೇಖನಗಳಲ್ಲಿ ದೇವರ ವಾಕ್ಯವಾದ ಬೈಬಲ್‌ನಿಂದ ಉತ್ತರ ತಿಳಿದುಕೊಳ್ಳೋಣ. (w13-E 09/01)