ಮುಖಪುಟ ಲೇಖನ | ನಮಗೆ ದೇವರ ಅಗತ್ಯ ಇದೆಯೇ?
ಯಾಕೆ ಇಂಥ ಪ್ರಶ್ನೆ?
“ದೇವರಿಲ್ಲದ ಬದುಕು ಹೇಗಿರುತ್ತದೆ? ಚೆನ್ನಾಗಿರುತ್ತದೆ ಎನ್ನುತ್ತಾರೆ ಲಕ್ಷಗಟ್ಟಲೆ ಜನರು.” ನಾಸ್ತಿಕ ಗುಂಪೊಂದು ಈ ಸಂದೇಶವನ್ನು ಒಂದು ದೊಡ್ಡ ಜಾಹೀರಾತು ಫಲಕದ ಮೇಲೆ ಹಾಕಿಸಲು ತುಂಬ ಹಣಕೊಟ್ಟಿತು. ಅವರ ಪ್ರಕಾರ ಮನುಷ್ಯರಿಗೆ ದೇವರ ಅವಶ್ಯಕತೆಯೇ ಇಲ್ಲ.
ಇನ್ನು ಅನೇಕರು ದೇವರನ್ನು ನಂಬುತ್ತೇವೆಂದು ಹೇಳುತ್ತಾರಾದರೂ ನಿರ್ಣಯಗಳನ್ನು ಮಾಡುವಾಗ ಆತನ ಅಸ್ತಿತ್ವವನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಕ್ಯಾತೊಲಿಕ್ ಪ್ರಧಾನ ಬಿಷಪ್ ಸಾಲ್ವಟೋರ್ ಫಿಸಿಶೆಲಾ ತಮ್ಮ ಸ್ವಂತ ಚರ್ಚ್ ಸದಸ್ಯರ ಬಗ್ಗೆ ಅಂದದ್ದು: “ನಮ್ಮನ್ನು ನೋಡಿದರೆ ಯಾರೂ ‘ಇವರು ಕ್ರೈಸ್ತರು’ ಎಂದು ಹೇಳಲಿಕ್ಕಿಲ್ಲ ಏಕೆಂದರೆ ನಮ್ಮ ಜೀವನಶೈಲಿ ಕ್ರೈಸ್ತರಲ್ಲದ ಜನರಂತೆಯೇ ಇದೆ.”
ಕೆಲವರಿಗಂತೂ ದೇವರ ಬಗ್ಗೆ ಯೋಚಿಸುವಷ್ಟೂ ಪುರುಸೊತ್ತಿಲ್ಲ. ಅಷ್ಟು ಕೆಲಸ! ದೇವರು ತುಂಬ ದೂರದಲ್ಲಿದ್ದಾನೆ, ಆತನನ್ನು ಸಮೀಪಿಸಲು ಸಾಧ್ಯವಿಲ್ಲ. ಹಾಗಾಗಿ ಆತನಿಂದ ಏನೂ ಪ್ರಯೋಜನವಿಲ್ಲ ಎಂದು ನೆನಸುತ್ತಾರೆ. ಇಂಥವರು ದೇವರ ಮೊರೆ ಹೋಗುವುದು ಬರೀ ಕಷ್ಟಕಾಲದಲ್ಲಿ ಅಥವಾ ಏನಾದರೂ ಬೇಕಿದ್ದರೆ ಮಾತ್ರ. ಅಂಥವರಿಗೆ ದೇವರು ತಮಗೆ ಬೇಕಾದಾಗೆಲ್ಲ ಓಡೋಡಿ ಬರುವ ಮನೆ ಆಳಿನಂತಿದ್ದಾನೆ.
ಇತರರು ತಮ್ಮ ಧರ್ಮದ ಬೋಧನೆಗಳ ಪ್ರಕಾರ ನಡೆಯುವುದಿಲ್ಲ ಏಕೆಂದರೆ ಅದರ ಅಗತ್ಯವಿಲ್ಲವೆಂದು ನೆನಸುತ್ತಾರೆ. ಇದಕ್ಕೊಂದು ಉದಾಹರಣೆ ನೋಡೋಣ. ಮದುವೆಗೆ ಮುಂಚೆಯೇ ಗಂಡುಹೆಣ್ಣು ಕೂಡುಬಾಳ್ವೆ ನಡೆಸುವುದರಲ್ಲಿ ತಪ್ಪೇನಿಲ್ಲವೆಂದು ಜರ್ಮನಿಯ ಕ್ಯಾತೊಲಿಕರಲ್ಲಿ ಶೇ. 76ರಷ್ಟು ಮಂದಿ ನಂಬುತ್ತಾರೆ. ಆದರೆ ಈ ಅಭಿಪ್ರಾಯ ಅವರ ಚರ್ಚ್ ಹಾಗೂ ಬೈಬಲಿನ ಬೋಧನೆ ಎರಡಕ್ಕೂ ವಿರುದ್ಧವಾಗಿದೆ. (1 ಕೊರಿಂಥ 6:18; ಇಬ್ರಿಯ 13:4) ತಮ್ಮ ಧರ್ಮಕ್ಕೂ ತಮ್ಮ ಜೀವನಶೈಲಿಗೂ ಇರುವ ಅಜಗಜಾಂತರವನ್ನು ಬರೇ ಕ್ಯಾತೊಲಿಕರು ಮಾತ್ರ ಗಮನಿಸಿಲ್ಲ. ವಿವಿಧ ಧರ್ಮಗಳವರೂ ಅದನ್ನು ಗಮನಿಸಿದ್ದಾರೆ. ಅನೇಕ ಕ್ರೈಸ್ತ ಪಂಗಡಗಳ ಪಾದ್ರಿಗಳು ತಮ್ಮ ಸಭೆಗಳವರೂ “ಬಹುಮಟ್ಟಿಗೆ ನಾಸ್ತಿಕರಂತೆಯೇ” ಜೀವನ ನಡೆಸುತ್ತಾರೆಂಬುದು ಅವರ ವ್ಯಥೆ.
ಈ ಉದಾಹರಣೆಗಳು ಸಹಜವಾಗಿಯೇ ಈ ಪ್ರಶ್ನೆಗೆ ನಡೆಸುತ್ತವೆ: ನಮಗೆ ನಿಜವಾಗಿ ದೇವರ ಅಗತ್ಯವಿದೆಯೇ? ಆದರೆ ಇದೇನೂ ಹೊಸ ಪ್ರಶ್ನೆಯಲ್ಲ. ಬೈಬಲಿನ ಆರಂಭದ ಪುಟಗಳಲ್ಲೇ ಈ ಪ್ರಶ್ನೆ ಎದ್ದಿದೆ. ಇದಕ್ಕೆ ಉತ್ತರ ತಿಳಿದುಕೊಳ್ಳಲು, ಬೈಬಲಿನ ಆದಿಕಾಂಡ ಪುಸ್ತಕದಲ್ಲಿ ಎಬ್ಬಿಸಲಾದ ಕೆಲವೊಂದು ಸವಾಲುಗಳಿಗೆ ಗಮನಕೊಡೋಣ. (w13-E 12/01)