ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಲೋಭನೆಯನ್ನು ನಿಗ್ರಹಿಸಲು ಸಾಧ್ಯ!

ಪ್ರಲೋಭನೆಯನ್ನು ನಿಗ್ರಹಿಸಲು ಸಾಧ್ಯ!

“ಅಶ್ಲೀಲ ಚಿತ್ರಗಳನ್ನು ನೋಡೋ ಆಸೆಯೇನು ನಂಗಿರಲಿಲ್ಲ. ಆದರೆ ಒಂದಿನ ಹೀಗೇ ಇಂಟರ್‌ನೆಟ್‌ ನೋಡುವಾಗ ಟಕ್‌ ಅಂತ ಒಂದು ಆ್ಯಡ್‌ ಬಂತು. ನನಗೇ ಗೊತ್ತಿಲ್ಲದೆ ನಾನು ಅದರ ಮೇಲೆ ಕ್ಲಿಕ್‌ ಮಾಡಿಬಿಟ್ಟೆ.”—ಕಾರ್ತಿಕ್‌. *

“ನಮ್‌ ಆಫೀಸ್‍ನಲ್ಲಿ ತುಂಬಾ ಚೆನ್ನಾಗಿರೋ ಒಬ್ಬಳು ಹುಡುಗಿ ನಂಜೊತೆ ಚೆಲ್ಲಾಟವಾಡುತ್ತಿದ್ದಳು. ಒಂದಿನ ‘ನಾವಿಬ್ಬರೂ ಜಾಲಿಯಾಗಿರೋಣ’ ಅಂತ ಹೋಟೆಲ್‌ಗೆ ಕರೆದಳು. ಅವಳು ಯಾಕೆ ಕರೆದಳು ಅಂತ ನಂಗೆ ಚೆನ್ನಾಗಿ ಗೊತ್ತಿತ್ತು.”—ದೀಪಕ್‌.

“ನಾ ನು ಏನ್‌ ಬೇಕಾದ್ರೂ ಎದುರಿಸಬಲ್ಲೆ ಆದರೆ ಪ್ರಲೋಭನೆಯನ್ನು ಮಾತ್ರ ಎದುರಿಸಲು ಆಗಲ್ಲ.” ಸಾಮಾನ್ಯವಾಗಿ ಜನ ಹೇಳುವ ಈ ಮಾತಿನಿಂದ ನಮಗೆ ತಿಳಿಯುವುದೇನೆಂದರೆ ಅನೇಕ ಜನರು ಪ್ರಲೋಭನೆಯ ರುಚಿ ನೋಡಲು ಇಷ್ಟಪಡುತ್ತಾರೆ. ಇನ್ನು ಕೆಲವರು ಬೆಂಬಿಡದ ಶತ್ರುವಾಗಿರುವ ಪ್ರಲೋಭನೆಯನ್ನು ಸದೆಬಡಿಯಲು ಬಯಸುತ್ತಾರೆ. ಈ ವಿಷಯದಲ್ಲಿ ನಿಮ್ಮ ಅನಿಸಿಕೆಯೇನು? ಪ್ರಲೋಭನೆ ಎದುರಾದಾಗ ಮಣಿಯಬೇಕಾ? ಮೆಟ್ಟಿನಿಲ್ಲಬೇಕಾ?

ಎಲ್ಲ ರೀತಿಯ ಪ್ರಲೋಭನೆಗಳು ದೊಡ್ಡ ಸಮಸ್ಯೆಗಳಿಗೆ ನಡೆಸುವುದಿಲ್ಲ ಅನ್ನುವುದೇನೋ ನಿಜ. ಉದಾಹರಣೆಗೆ, ನೀವು ಡಯಟ್‌ ಮಾಡುತ್ತಿರುವಾಗ ಒಂಚೂರು ಕೇಕ್‌ ತಿನ್ನಲು ಮನಸ್ಸಾಗಿ ತಿಂದುಬಿಟ್ಟರೆ ಅದರಿಂದೇನು ದೊಡ್ಡ ಸಮಸ್ಯೆಯಾಗುವುದಿಲ್ಲ. ಆದರೆ ಇನ್ನಿತರ ಪ್ರಲೋಭನೆಗಳಿಂದ, ಅದರಲ್ಲೂ ಲೈಂಗಿಕ ಅನೈತಿಕತೆಗೆ ನಡೆಸುವಂಥ ಪ್ರಲೋಭನೆಗಳಿಂದ ಆಗುವ ಪರಿಣಾಮ ದುರಂತಮಯ. “ವ್ಯಭಿಚಾರಿಯೋ ಕೇವಲ ಬುದ್ಧಿಶೂನ್ಯನು, ಇಂಥಾ ಕಾರ್ಯವನ್ನು ಮಾಡುವವನು ತನ್ನನ್ನೇ ನಾಶಪಡಿಸಿಕೊಳ್ಳುವನು” ಎಂದು ಬೈಬಲ್‌ ಎಚ್ಚರಿಸುತ್ತದೆ.—ಜ್ಞಾನೋಕ್ತಿ 6:32, 33.

ಅನೈತಿಕತೆಯಲ್ಲಿ ಒಳಗೂಡುವ ಪ್ರಲೋಭನೆ ಎದುರಾದರೆ ಏನು ಮಾಡುವಿರಿ? ‘ನೀವು ಪರಿಶುದ್ಧರಾಗಿರಬೇಕು, ಹಾದರದಿಂದ ದೂರವಿರಬೇಕು ಎಂಬುದೇ ದೇವರ ಚಿತ್ತವಾಗಿದೆ; ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರತೆಯಲ್ಲಿಯೂ ಗೌರವದಲ್ಲಿಯೂ ತನ್ನ ಸ್ವಂತ ದೇಹವನ್ನು ಸ್ವಾಧೀನದಲ್ಲಿ ಇಟ್ಟುಕೊಳ್ಳುವುದು ಹೇಗೆಂಬುದನ್ನು ತಿಳಿದವನಾಗಿರಬೇಕು’ ಎನ್ನುತ್ತದೆ ಬೈಬಲ್‌. (1 ಥೆಸಲೊನೀಕ 4:3, 4) ಇಂಥ ದೃಢಸಂಕಲ್ಪವನ್ನು ನೀವು ಹೇಗೆ ಮಾಡಬಹುದು? ಈ ಕೆಳಗಿನ ಮೂರು ಕ್ರಮಗಳನ್ನು ಕೈಗೊಳ್ಳಿರಿ.

ಕ್ರಮ 1: ಕಣ್ಣನ್ನು ಹತೋಟಿಯಲ್ಲಿಡಿ

ಕಾಮಪ್ರಚೋದಕ ಚಿತ್ರಗಳನ್ನು ನೋಡುತ್ತಾ ಇರುವುದು ಅಯೋಗ್ಯ ಬಯಕೆಗಳಿಗೆ ನೀರೆರೆದಂತೆ. ನೋಡುವುದಕ್ಕೂ ಬಯಸುವುದಕ್ಕೂ ಇರುವ ಸಂಬಂಧವನ್ನು ಸೂಚಿಸುತ್ತ ಯೇಸು ಎಚ್ಚರಿಸಿದ್ದು: “ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.” ಈ ವಿಷಯದಲ್ಲಿ ಮರೆಯಲಾಗದ ಚಿತ್ರಣವನ್ನು ಕೊಡಲು ಒಂದು ಉತ್ಪ್ರೇಕ್ಷಾಲಂಕಾರವನ್ನು ಉಪಯೋಗಿಸುತ್ತಾ ಯೇಸು ಸಲಹೆ ಕೊಟ್ಟಿದ್ದು “ನಿನ್ನ ಬಲಗಣ್ಣು ನಿನ್ನನ್ನು ಎಡವಿಸುತ್ತಿರುವುದಾದರೆ ಅದನ್ನು ಕಿತ್ತು ಬಿಸಾಡು.” (ಮತ್ತಾಯ 5:28, 29) ಇದರರ್ಥ, ಪ್ರಲೋಭನೆಗಳನ್ನು ನಿಗ್ರಹಿಸಬೇಕೆಂದರೆ ಕಾಮೋದ್ರೇಕಗೊಳಿಸುವ ಚಿತ್ರಗಳು ಕಣ್ಣೆದುರಿಗೆ ಬಂದಾಗ ಅದನ್ನು ನೋಡುತ್ತಾ ಇರುವ ಬದಲು ಕೂಡಲೇ ನಮ್ಮ ಗಮನವನ್ನು ಬೇರೆಡೆಗೆ ತಿರುಗಿಸಬೇಕು.

ಕಾಮಪ್ರಚೋದಕ ಚಿತ್ರಗಳು ಕಣ್ಣಿಗೆ ಕಂಡ ಕೂಡಲೇ ನಿಮ್ಮ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಿ

ಉದಾಹರಣೆಗೆ, ಯಾವುದಾದರೂ ಲೋಹವನ್ನು ವೆಲ್ಡಿಂಗ್‌ ಮಾಡುವಾಗ ಅದರಿಂದ ಬರುವ ಕಿಡಿಗಳನ್ನು ನೀವು ಹಾಗೇ ದೃಷ್ಟಿಸಿ  ನೋಡುತ್ತೀರಾ? ಖಂಡಿತ ಇಲ್ಲ. ತಕ್ಷಣವೇ ನಿಮ್ಮ ದೃಷ್ಟಿಯನ್ನು ಬೇರೆಡೆಗೆ ತಿರುಗಿಸುತ್ತೀರಿ ಅಥವಾ ಕಣ್ಣಿಗೆ ಹಾನಿಯಾಗದಿರಲು ಸುರಕ್ಷಾ ಕ್ರಮ ತೆಗೆದುಕೊಳ್ಳುತ್ತೀರಿ ಅಲ್ಲವೇ? ಅದೇ ರೀತಿ, ಮುದ್ರಿತ ಪ್ರತಿಯಲ್ಲಾಗಲಿ, ಟಿ.ವಿಯಲ್ಲಾಗಲಿ, ಕಂಪ್ಯೂಟರ್‌ನಲ್ಲಾಗಲಿ ಅಥವಾ ನೇರವಾಗಿಯೇ ಆಗಿರಲಿ ನೀವು ಕಾಮಪ್ರಚೋದಕ ವಿಷಯಗಳನ್ನು ನೋಡಿದರೆ ತಕ್ಷಣವೇ ನಿಮ್ಮ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಿ. ಅಂಥ ಚಿತ್ರಗಳಿಂದ ನಿಮ್ಮ ಮನಸ್ಸು ಕಲುಷಿತಗೊಳ್ಳದಂತೆ ಕಾಪಾಡಿಕೊಳ್ಳಿ. ಅಶ್ಲೀಲ ಚಿತ್ರಗಳನ್ನು ನೋಡುವ ಚಟವಿದ್ದ ಪ್ರಶಾಂತ್‌ ಹೇಳುವುದು, “ಒಬ್ಬ ಸುಂದರ ಸ್ತ್ರೀಯನ್ನು ನೋಡಿದಾಗೆಲ್ಲಾ ಮತ್ತೆ ಮತ್ತೆ ನೋಡಬೇಕನಿಸುತ್ತಿತ್ತು. ಕಷ್ಟಪಟ್ಟು ಬೇರೆ ಕಡೆಗೆ ದೃಷ್ಟಿ ಹರಿಸಿದರೂ ಆ ಬಯಕೆಯನ್ನು ನಿಯಂತ್ರಿಸಲು ತುಂಬ ಕಷ್ಟ ಆಗುತ್ತಿತ್ತು. ಅಂಥ ಸಮಯದಲ್ಲಿ ನನಗೆ ನಾನೇ ‘ಯೆಹೋವ ದೇವರಿಗೆ ಪ್ರಾರ್ಥನೆ ಮಾಡು, ಈಗಲೇ ಮಾಡು’ ಅಂತ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಇದ್ದೆ. ಪ್ರಾರ್ಥನೆ ಮಾಡಿದ ನಂತರ ಆ ಬಯಕೆ ಕ್ರಮೇಣ ಇಲ್ಲದೆ ಹೋಗುತ್ತಿತ್ತು.”—ಮತ್ತಾಯ 6:9, 13; 1 ಕೊರಿಂಥ 10:13.

ನಂಬಿಗಸ್ತ ವ್ಯಕ್ತಿಯಾಗಿದ್ದ ಯೋಬನ ಉದಾಹರಣೆಯನ್ನೂ ಗಮನಿಸಿ. ಅವನು ಹೇಳಿದ್ದು “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ, ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು?” (ಯೋಬ 31:1) ಅಂಥ ನಿಬಂಧನೆಯನ್ನು ನೀವೂ ಏಕೆ ಮಾಡಬಾರದು?

ಪ್ರಯತ್ನಿಸಿ ನೋಡಿ: ಕಾಮಪ್ರಚೋದಕ ಚಿತ್ರಗಳು ಕಣ್ಣಿಗೆ ಕಂಡ ಕೂಡಲೇ ನಿಮ್ಮ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಿ. “ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು” ಎಂದು ಪ್ರಾರ್ಥಿಸಿದ ಬೈಬಲಿನ ಬರಹಗಾರನನ್ನು ಅನುಕರಿಸಿ.— ಕೀರ್ತನೆ 119:37.

ಕ್ರಮ 2: ಮನಸ್ಸನ್ನು ಹತೋಟಿಯಲ್ಲಿಡಿ

ನಾವೆಲ್ಲರೂ ಅಪರಿಪೂರ್ಣರಾಗಿರುವುದರಿಂದ, ಆಗಾಗ ತಪ್ಪಾದ ಬಯಕೆಗಳೊಂದಿಗೆ ಹೆಣಗಾಡುತ್ತಿರಬಹುದು. “ಪ್ರತಿಯೊಬ್ಬನು ತನ್ನ ಸ್ವಂತ ಆಶೆಯಿಂದ ಸೆಳೆಯಲ್ಪಟ್ಟು ಮರುಳುಗೊಳಿಸಲ್ಪಟ್ಟವನಾಗಿ ಪರೀಕ್ಷಿಸಲ್ಪಡುತ್ತಾನೆ. ಬಳಿಕ ಆಶೆಯು ಬಸುರಾದಾಗ ಪಾಪವನ್ನು ಹೆರುತ್ತದೆ” ಎಂದು ಬೈಬಲ್‌ ಹೇಳುತ್ತದೆ. (ಯಾಕೋಬ 1:14, 15) ಇಂಥ ದುಸ್ಥಿತಿಗೆ ಬೀಳದಿರಲು ನೀವೇನು ಮಾಡಬಹುದು?

ನಿಮ್ಮ ಮನಸ್ಸಿಗೆ ಕೆಟ್ಟ ಆಲೋಚನೆಗಳು ಬಂದ ತಕ್ಷಣ ಪ್ರಾರ್ಥನೆ ಮಾಡಿ

ನಿಮ್ಮ ಮನಸ್ಸಿಗೆ ತಪ್ಪಾದ ಬಯಕೆಗಳು ಬರುವಾಗ ನೀವು ಹೇಗೆ ಪ್ರತಿಕ್ರಿಯಿಸುತ್ತೀರಾ ಎನ್ನುವುದು ನಿಮ್ಮ ಕೈಯಲ್ಲೇ ಇದೆ. ಅಂಥ ಬಯಕೆಗಳ ವಿರುದ್ಧ ಹೋರಾಡಿ. ನಿಮ್ಮ ಮನಸ್ಸಿನಿಂದ ಅವುಗಳನ್ನು ಕಿತ್ತೆಸೆಯಿರಿ. ಅನೈತಿಕ ವಿಷಯಗಳ ಕಲ್ಪನೆಗಳಲ್ಲಿ ಮುಳುಗದಿರಿ. ಇಂಟರ್‌ನೆಟ್‍ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವ ಗೀಳಿದ್ದ ತರುಣ್‌ ಹೇಳುವುದು, “ಕೇವಲ ಒಳ್ಳೇ ವಿಷಯಗಳ ಬಗ್ಗೆ ಯೋಚಿಸುವ ಮೂಲಕ ನನ್ನಲ್ಲಿರುವ ಕೆಟ್ಟ ಆಲೋಚನೆಗಳನ್ನು ತೆಗೆದು ಹಾಕಲು ಪ್ರಯತ್ನಿಸಿದೆ. ಅದಷ್ಟು ಸುಲಭವಾಗಿರಲಿಲ್ಲ. ಮತ್ತೆ ಮತ್ತೆ ನನ್ನಲ್ಲಿ ಕೆಟ್ಟ ಆಲೋಚನೆಗಳೇ ಬರುತ್ತಿತ್ತು. ಕೊನೆಗೂ ನನ್ನ ಯೋಚನೆಗಳನ್ನು ಹತೋಟಿಯಲ್ಲಿಡಲು ಕಲಿತೆ.” ತನ್ನ ಹದಿಹರೆಯದ ಪ್ರಾಯದಲ್ಲಿ ಅನೈತಿಕ ಪ್ರಲೋಭನೆಗಳೊಂದಿಗೆ ಹೋರಾಡಿದ ಇಶಾ ನೆನಪಿಸಿಕೊಳ್ಳುವುದು, “ಯಾವಾಗಲೂ ಬ್ಯುಸಿ ಆಗಿರುವ ಮೂಲಕ ಮತ್ತು ಯೆಹೋವ  ದೇವರಿಗೆ ಪ್ರಾರ್ಥನೆ ಮಾಡುವ ಮೂಲಕ ನನ್ನಲ್ಲಿದ್ದ ಕೆಟ್ಟ ಆಲೋಚನೆಗಳನ್ನು ಜಯಿಸಲು ಶಕ್ತಳಾದೆ.”

ಪ್ರಯತ್ನಿಸಿ ನೋಡಿ: ನಿಮ್ಮ ಮನಸ್ಸಿನಲ್ಲಿ ಕೇವಲ ಅನೈತಿಕ ವಿಷಯಗಳೇ ಗಿರಕಿ ಹೊಡೆಯುತ್ತಾ ಇದ್ದರೆ ಕೂಡಲೇ ಅದರ ಬಗ್ಗೆ ಯೋಚನೆ ಮಾಡುವುದನ್ನು ನಿಲ್ಲಿಸಿ, ಪ್ರಾರ್ಥನೆ ಮಾಡಿ. ಕೆಟ್ಟ ಆಲೋಚನೆಗಳ ವಿರುದ್ಧ ಹೋರಾಡಲು ‘ಯಾವ ವಿಷಯಗಳು ಸತ್ಯವಾಗಿವೆಯೊ, ಗಂಭೀರವಾದ ಚಿಂತನೆಗೆ ಅರ್ಹವಾಗಿವೆಯೊ, ನೀತಿಯುತವಾಗಿವೆಯೊ, ನೈತಿಕವಾಗಿ ಶುದ್ಧವಾಗಿವೆಯೊ, ಪ್ರೀತಿಯೋಗ್ಯವಾಗಿವೆಯೊ, ಯಾವ ವಿಷಯಗಳ ಕುರಿತು ಮೆಚ್ಚುಗೆಯ ಮಾತುಗಳು ನುಡಿಯಲ್ಪಟ್ಟಿವೆಯೊ, ಸದ್ಗುಣವಾಗಿರುವ ಯಾವುದಿದ್ದರೂ ಮತ್ತು ಸ್ತುತಿಗೆ ಯೋಗ್ಯವಾಗಿರುವ ಯಾವುದೇ ವಿಷಯವಿದ್ದರೂ’ ಅಂಥವುಗಳ ಬಗ್ಗೆ ಯೋಚನೆ ಮಾಡುತ್ತಾ ಇರಿ.—ಫಿಲಿಪ್ಪಿ 4:8.

ಕ್ರಮ 3: ಹೆಜ್ಜೆಗಳನ್ನು ಹತೋಟಿಯಲ್ಲಿಡಿ

ಎಲ್ಲಿ ಆಸೆ, ಪ್ರಲೋಭನೆ, ಅವಕಾಶ ಒಟ್ಟಿಗೆ ಸೇರುತ್ತದೋ ಅಲ್ಲಿ ಖಂಡಿತವಾಗಿ ಆಪತ್ತು ಸಂಭವಿಸುತ್ತದೆ. (ಜ್ಞಾನೋಕ್ತಿ 7:6-23) ಈ ಆಪತ್ತಿಗೆ ನೀವು ಬಲಿಯಾಗದಿರಲು ಏನು ಮಾಡಬಹುದು?

“ಯಾರಾದರೂ ಇದ್ದಾಗ ಮಾತ್ರ ಇಂಟರ್‌ನೆಟ್‌ ಉಪಯೋಗಿಸುತ್ತೇನೆ”

“ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು” ಎಂದು ಬೈಬಲ್‌ ವಿವೇಕಯುತ ಮಾರ್ಗದರ್ಶನೆ ಕೊಡುತ್ತದೆ. (ಜ್ಞಾನೋಕ್ತಿ 22:3) ಹಾಗಾಗಿ ಅಪಾಯ ಎದುರಾಗಬಹುದಾದ ಪರಿಸ್ಥಿತಿಗಳ ಬಗ್ಗೆ ಮೊದಲೇ ಯೋಚಿಸಿ, ಅಂಥವುಗಳಿಂದ ದೂರವಿರಿ. (ಜ್ಞಾನೋಕ್ತಿ 7:25) ಅಶ್ಲೀಲ ಚಿತ್ರಗಳನ್ನು ನೋಡುವ ಚಾಳಿಯನ್ನು ಮೆಟ್ಟಿನಿಂತ ಮಹೇಶ್‌ ಹೇಳುವುದು “ಮನೆಯಲ್ಲಿ ಕಂಪ್ಯೂಟರನ್ನು ಎಲ್ಲರಿಗೂ ಕಾಣುವ ಸ್ಥಳದಲ್ಲಿ ಇಟ್ಟೆ ಮತ್ತು ಅಶ್ಲೀಲ ವಿಷಯಗಳು ಬರದಂತೆ ತಡೆಯುವ ಸಾಫ್ಟ್‌ವೇರ್‌ ಪ್ರೋಗ್ರಾಮನ್ನು ಅಳವಡಿಸಿದೆ. ಯಾರಾದರೂ ಇದ್ದಾಗ ಮಾತ್ರ ಇಂಟರ್‌ನೆಟ್‌ ಉಪಯೋಗಿಸುತ್ತೇನೆ.” ಈ ಹಿಂದೆ ತಿಳಿಸಿದ ತರುಣ್‌ ಹೇಳುವುದು “ಕಾಮಪ್ರಚೋದಕ ಚಲನಚಿತ್ರಗಳನ್ನು ನೋಡುವುದನ್ನು, ಸೆಕ್ಸ್‌ ಬಗ್ಗೆ ಮಾತನಾಡುವವರ ಸಹವಾಸವನ್ನು ಬಿಟ್ಟುಬಿಟ್ಟೆ. ಪುನಃ ಅಂಥ ಅಪಾಯದಲ್ಲಿ ಸಿಲುಕಲು ಸ್ವಲ್ಪವೂ ಇಷ್ಟವಿಲ್ಲ.”

ಪ್ರಯತ್ನಿಸಿ ನೋಡಿ: ನಿಮ್ಮಲ್ಲಿ ಯಾವ ಬಲಹೀನತೆಗಳಿವೆ ಎಂದು ಪ್ರಾಮಾಣಿಕವಾಗಿ ಪರೀಕ್ಷಿಸಿಕೊಳ್ಳಿ ಮತ್ತು ನಿಮ್ಮನ್ನು ಪ್ರಲೋಭನೆಗಳಿಗೆ ಎಡೆಮಾಡುವಂಥ ಪರಿಸ್ಥಿತಿಗಳಿಂದ ದೂರವಿರಲು ಮೊದಲೇ ಯೋಜಿಸಿ.—ಮತ್ತಾಯ 6:13.

ಪಟ್ಟುಬಿಡದೆ ಪ್ರಯತ್ನಿಸಿ

ನಿಮ್ಮಿಂದಾದ ಎಲ್ಲ ಪ್ರಯತ್ನವನ್ನು ಮಾಡಿಯೂ ಪ್ರಲೋಭನೆಗಳನ್ನು ನಿಗ್ರಹಿಸಲು ಸಾಧ್ಯವಾಗದಿದ್ದರೆ ಏನು ಮಾಡಬೇಕು? ನಿರುತ್ತೇಜನಗೊಳ್ಳಬೇಡಿ ಮತ್ತು ನಿಮ್ಮ ಪ್ರಯತ್ನವನ್ನು ಮುಂದುವರಿಸಿ. “ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 24:16) ನಮ್ಮ ಸ್ವರ್ಗೀಯ ತಂದೆಯು ನಾವು ಮತ್ತೆ ‘ಏಳುವಂತೆ’ ಉತ್ತೇಜಿಸುತ್ತಾನೆ. ನೀವು ಆತನ ಪ್ರೀತಿಯ ನೆರವನ್ನು ಪಡೆಯಲು ಬಯಸುವಿರೋ? ಹಾಗಿದ್ದರೆ ಆತನಿಗೆ ಪಟ್ಟುಬಿಡದೆ ಪ್ರಾರ್ಥನೆ ಮಾಡಿ. ಆತನ ವಾಕ್ಯವಾದ ಬೈಬಲನ್ನು ಅಧ್ಯಯನ ಮಾಡುವ ಮೂಲಕ ನಂಬಿಕೆಯನ್ನು ಬೆಳೆಸಿಕೊಳ್ಳಿ. ಕ್ರೈಸ್ತ ಕೂಟಗಳಿಗೆ ಹಾಜರಾಗುವ ಮೂಲಕ ನಿಮ್ಮ ನಿರ್ಧಾರವನ್ನು ಬಲಪಡಿಸಿಕೊಳ್ಳಿ. “ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ” ಎಂದು ದೇವರು ಕೊಟ್ಟಿರುವ ಮಾತು ನಿಮ್ಮ ಹೃದಯದಲ್ಲಿರಲಿ.—ಯೆಶಾಯ 41:10.

ಆರಂಭದಲ್ಲಿ ತಿಳಿಸಲಾದ ಕಾರ್ತಿಕ್‌ ಹೇಳುವುದು, “ಅಶ್ಲೀಲ ಚಿತ್ರಗಳನ್ನು ನೋಡೋ ಚಟವನ್ನು ಬಿಟ್ಟುಬಿಡಲು ಎಷ್ಟೇ ಪ್ರಯತ್ನಿಸಿದರೂ ಆಗಲಿಲ್ಲ. ಆದರೆ ದೇವರ ಸಹಾಯದಿಂದಾಗಿ ಕೊನೆಗೂ ಅದನ್ನು ಜಯಿಸಿದೆ.” ಆರಂಭದಲ್ಲಿ ತಿಳಿಸಲಾದ ದೀಪಕ್‌ ಹೇಳುವುದು, “ನನ್ನ ಆಫೀಸ್‍ನಲ್ಲಿದ್ದ ಹುಡುಗಿ ಜೊತೆ ದೈಹಿಕ ಸಂಬಂಧ ಇಟ್ಟುಕೊಳ್ಳಬಹುದಿತ್ತು. ಆದರೆ ನಾನು ದೃಢವಾಗಿ, ‘ಬರುವುದಿಲ್ಲ!’ ಅಂತ ಅವಳಿಗೆ ಹೇಳಿಬಿಟ್ಟೆ. ಒಳ್ಳೇ ಮನಸ್ಸಾಕ್ಷಿ ತುಂಬ ಸಂತೋಷ ತರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವ ದೇವರು ನನ್ನ ಬಗ್ಗೆ ಹೆಮ್ಮೆಪಡುತ್ತಾರೆ.”

ನೀವು ದೃಢರಾಗಿದ್ದು ಪ್ರಲೋಭನೆಗಳನ್ನು ನಿಗ್ರಹಿಸುವುದಾದರೆ ನಿಮ್ಮ ಬಗ್ಗೆಯೂ ದೇವರು ಹೆಮ್ಮೆ ಪಡುತ್ತಾರೆ!—ಜ್ಞಾನೋಕ್ತಿ 27:11. (w14-E 04/01)

^ ಪ್ಯಾರ. 2 ಈ ಲೇಖನದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.