ಬದುಕನ್ನೇ ಬದಲಾಯಿಸಿತು ಬೈಬಲ್
ನನ್ನೆಲ್ಲಾ ಪ್ರಶ್ನೆಗಳಿಗೆ ಬೈಬಲ್ ಉತ್ತರ ನೀಡಿತು
-
ಜನನ 1987
-
ದೇಶ ಅಜರ್‌ಬೈಜಾನ್
-
ಹಿಂದೆ ದೇವರೇ ಇಲ್ಲ ಎಂದು ನಿರ್ಣಯ ಮಾಡಿದವರು
ಹಿನ್ನೆಲೆ:
ನಾನು ಹುಟ್ಟಿದ್ದು ಅಜರ್‌ಬೈಜಾನ್‍ನ ಬಾಕು ಎಂಬ ಪಟ್ಟಣದಲ್ಲಿ. ನನ್ನ ಅಪ್ಪ, ಅಮ್ಮನಿಗೆ ಇಬ್ಬರು ಮಕ್ಕಳು, ನಾನು ಮತ್ತು ನನ್ನ ಅಕ್ಕ. ನನ್ನ ತಂದೆ ಮುಸ್ಲಿಮ್, ತಾಯಿ ಯೆಹೂದಿ ಧರ್ಮದವರಾಗಿದ್ದರು. ಅವರ ಮಧ್ಯೆ ತುಂಬ ಪ್ರೀತಿಯಿತ್ತು. ಆದ್ದರಿಂದ ಅವರು ಬೇರೆ ಬೇರೆ ಧರ್ಮದವರಾಗಿದ್ದರೂ ಅನ್ಯೋನ್ಯವಾಗಿದ್ದರು. ಅಪ್ಪ ರಂಜಾನ್ ಹಬ್ಬದ ಸಮಯದಲ್ಲಿ ಉಪವಾಸವಿದ್ದಾಗ ಅಮ್ಮ ಅವರಿಗೆ ಸಹಾಯ ಮಾಡುತ್ತಿದ್ದರು. ಅದೇ ತರಹ, ಅಮ್ಮ ಯೆಹೂದ್ಯರ ಪಸ್ಕ ಹಬ್ಬವನ್ನು ಮಾಡುವಾಗ ಅಪ್ಪ ಸಹಾಯ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಕುರಾನ್, ಟೋರಾ (ಯೆಹೂದ್ಯರ ಪವಿತ್ರ ಗ್ರಂಥ) ಮತ್ತು ಬೈಬಲ್ ಮೂರೂ ಪುಸ್ತಕಗಳಿದ್ದವು.
ನನಗೆ ಮುಸ್ಲಿಮ್ ಧರ್ಮ ಇಷ್ಟ ಆಯಿತು. ದೇವರು ಇದ್ದಾನಾ ಇಲ್ಲವಾ ಅಂತ ಯಾವತ್ತೂ ಅನುಮಾನ ಪಟ್ಟಿರಲಿಲ್ಲ. ಆದರೂ ಆಗಾಗ ಕೆಲವೊಂದು ಪ್ರಶ್ನೆಗಳು ನನ್ನನ್ನು ಕಾಡುತ್ತಾ ಇದ್ದವು. ‘ದೇವರು ಮನುಷ್ಯರನ್ನು ಯಾಕೆ ಸೃಷ್ಟಿ ಮಾಡಿದನು? ನರಕದಲ್ಲಿ ಚಿತ್ರಹಿಂಸೆ ಕೊಡುವುದರಿಂದ ಯಾರಿಗಾದರೂ ಏನಾದರೂ ಉಪಯೋಗ ಇದೆಯಾ?’ ‘ಎಲ್ಲಾ ದೇವರ ಇಚ್ಛೆಯಂತೆ ನಡೆಯುತ್ತೆ’ ಅಂತ ತುಂಬ ಜನ ಹೇಳುತ್ತಾರೆ. ‘ಹಾಗಾದರೆ, ದೇವರು ನಮ್ಮನ್ನು ತನ್ನ ಕೈಗೊಂಬೆಗಳ ಥರ ಆಡಿಸಿ, ನಮ್ಮ ಕಷ್ಟಗಳನ್ನು ನೋಡಿ ನಗುತ್ತಾ ಇದ್ದಾನಾ?’ ಎಂಬ ಪ್ರಶ್ನೆಯೂ ಬರುತ್ತಿತ್ತು.
ನನಗೆ 12 ವರ್ಷವಾದಾಗ ನಮಾಜ್ ಮಾಡಲು ಆರಂಭಿಸಿದೆ. ಆ ಸಮಯದಲ್ಲಿ ನನ್ನ ಅಪ್ಪ ನನ್ನನ್ನು ಮತ್ತು ನನ್ನ ಅಕ್ಕನನ್ನು ಒಂದು ಯೆಹೂದಿ ಶಾಲೆಗೆ ಸೇರಿಸಿದರು. ಆ ಶಾಲೆಯಲ್ಲಿ ಬೇರೆ ಪಾಠಗಳ ಜೊತೆಗೆ ಹೀಬ್ರು ಭಾಷೆಯನ್ನು ಮತ್ತು ಟೋರಾ ಗ್ರಂಥದಲ್ಲಿದ್ದ ಪದ್ಧತಿಗಳನ್ನು ಕಲಿಸಲಾಗುತ್ತಿತ್ತು. ಪ್ರತಿದಿನ ಪಾಠ ಆರಂಭಿಸುವ ಮುಂಚೆ ಯೆಹೂದಿ ಪದ್ಧತಿಗನುಸಾರ ಪ್ರಾರ್ಥನೆ ಮಾಡಬೇಕಿತ್ತು. ಹೀಗೆ ಬೆಳಿಗ್ಗೆ ಹೊತ್ತು ಮನೆಯಲ್ಲಿ ನಮಾಜ್ ಮಾಡುತ್ತಿದ್ದೆ, ಆಮೇಲೆ ಶಾಲೆಯಲ್ಲಿ ಯೆಹೂದಿ ಪ್ರಾರ್ಥನೆ ಮಾಡುತ್ತಿದ್ದೆ.
ನನಗಿದ್ದ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳಲು ನಾನು ತವಕದಿಂದಿದ್ದೆ. “ದೇವರು ಮನುಷ್ಯರನ್ನು ಯಾಕೆ ಸೃಷ್ಟಿ ಮಾಡಿದರು? ನನ್ನ ತಂದೆ ಮುಸ್ಲಿಮ್ ಆಗಿರುವುದರಿಂದ ದೇವರಿಗೆ ಅವರ ಬಗ್ಗೆ ಹೇಗನಿಸುತ್ತೆ? ನನ್ನ ತಂದೆ ತುಂಬ ಒಳ್ಳೆಯವರು, ಆದರೂ ಯಾಕೆ ದೇವರು ಅವರನ್ನು ಇಷ್ಟ ಪಡುವುದಿಲ್ಲ? ಇಷ್ಟ ಇಲ್ಲ ಅಂದ ಮೇಲೆ ಅವರನ್ನು ಯಾಕೆ ಸೃಷ್ಟಿ ಮಾಡಬೇಕಿತ್ತು?” ಎಂಬ ಪ್ರಶ್ನೆಗಳ ಉದ್ದ ಪಟ್ಟಿಯನ್ನೇ ನನ್ನ ಶಾಲೆಯ ರಬ್ಬೀ ಅಥವಾ ಗುರುಗಳ ಹತ್ತಿರ ಕೇಳುತ್ತಿದ್ದೆ. ಕೆಲವೊಂದಕ್ಕೆ ಅವರು ಉತ್ತರ ಕೊಟ್ಟರಾದರೂ ಅವುಗಳನ್ನು ನಂಬಲು ಆಧಾರ ಇರಲಿಲ್ಲ, ನನಗೆ ಅವು ಸರಿಯಾಗಿವೆ ಅಂತ ಅನಿಸಲೂ ಇಲ್ಲ.
ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್:
2002ರಲ್ಲಿ ದೇವರ ಮೇಲೆ ನನಗಿದ್ದ ನಂಬಿಕೆ ನುಚ್ಚುನೂರಾಯಿತು. ಆ ವರ್ಷದಲ್ಲಿ ನಾವು ಜರ್ಮನಿ ದೇಶಕ್ಕೆ ಬಂದಿದ್ದೆವು. ಅಲ್ಲಿ ಬಂದ ಒಂದು ವಾರಕ್ಕೆ ನನ್ನ ಅಪ್ಪ ಅಸ್ವಸ್ಥರಾಗಿ ಕೋಮ ಸ್ಥಿತಿಗೆ ಹೋದರು. ನನ್ನ ಕುಟುಂಬದವರಿಗೆ ಒಳ್ಳೆಯ ಆರೋಗ್ಯ ಕೊಡಿ, ಸಂತೋಷ ಕೊಡಿ ಅಂತ ವರ್ಷಗಳಿಂದ ಪ್ರಾರ್ಥನೆ ಮಾಡುತ್ತಿದ್ದೆ. ಸಾವು, ಬದುಕು ಎರಡೂ ದೇವರ
ಕೈಯಲ್ಲೇ ಇದೆ ಎಂಬ ದೃಢವಾದ ನಂಬಿಕೆ ನನಗಿತ್ತು. ಆದ್ದರಿಂದ ‘ನನ್ನ ತಂದೆಯನ್ನು ಉಳಿಸಪ್ಪಾ’ ಎಂದು ಪ್ರತಿದಿನ ಬೇಡುತ್ತಿದ್ದೆ. ‘ಒಂದು ಚಿಕ್ಕ ಹುಡುಗಿ ಕೇಳಿದ್ದನ್ನು ಕೊಡಲು ದೇವರಿಗೆ ಏನೇನೂ ಕಷ್ಟ ಅಲ್ಲ, ಖಂಡಿತ ಆತನು ನನಗೆ ಸಹಾಯ ಮಾಡುತ್ತಾನೆ’ ಅಂತ ನಂಬಿದ್ದೆ. ಆದರೂ ನನ್ನ ಅಪ್ಪ ತೀರಿಕೊಂಡರು.ಇಷ್ಟೆಲ್ಲಾ ಪ್ರಾರ್ಥಿಸಿದರೂ ದೇವರು ನನಗೆ ಸಹಾಯ ಮಾಡಲಿಲ್ಲವಲ್ಲಾ ಅಂತ ತುಂಬ ದುಃಖ ಆಯಿತು. ನಾನು ಪ್ರಾರ್ಥನೆ ಮಾಡುತ್ತಿರುವ ವಿಧಾನ ಸರಿ ಇಲ್ಲವೇನೋ ಅಥವಾ ನಿಜವಾಗಲೂ ದೇವರೇ ಇಲ್ಲವೇನೋ ಅಂಥ ಅನಿಸಿತು. ಅಂದಿನಿಂದ ನಾನು ನಮಾಜ್ ಮಾಡುವುದನ್ನೂ ಬಿಟ್ಟುಬಿಟ್ಟೆ. ನನ್ನ ಪ್ರಶ್ನೆಗಳಿಗೆ ಬೇರೆ ಧರ್ಮಗಳಲ್ಲೂ ಉತ್ತರ ಸಿಗಲಿಲ್ಲ. ಆದ್ದರಿಂದ ದೇವರೇ ಇಲ್ಲ ಅನ್ನುವ ನಿರ್ಣಯಕ್ಕೆ ಬಂದುಬಿಟ್ಟೆ.
ಆರು ತಿಂಗಳ ನಂತರ, ಯೆಹೋವನ ಸಾಕ್ಷಿಗಳು ಸುವಾರ್ತೆ ಸಾರುತ್ತಾ ನಮ್ಮ ಮನೆಗೆ ಬಂದರು. ನನಗೂ, ನನ್ನ ಅಕ್ಕನಿಗೂ ಕ್ರೈಸ್ತ ಧರ್ಮದ ಬಗ್ಗೆ ಅಷ್ಟೇನು ಒಳ್ಳೆಯ ಅಭಿಪ್ರಾಯವಿರಲಿಲ್ಲ. ಆದ್ದರಿಂದ, ಅವರ ನಂಬಿಕೆ ತಪ್ಪು ಅಂತ ಗೌರವದಿಂದ ಹೇಳೋಣ ಅಂತ ಅಂದುಕೊಂಡೆವು. ಅವರಿಗೆ, “ಬೈಬಲಿನ ದಶಾಜ್ಞೆಗಳಲ್ಲಿ ದೇವರನ್ನು ಬಿಟ್ಟು ಬೇರೆ ಯಾರಿಗೂ ಆರಾಧನೆ ಮಾಡಬಾರದು ಅಂತ ಇದೆ. ಆದರೆ ನೀವು ಯೇಸುವಿಗೆ, ಮೇರಿಗೆ, ಶಿಲುಬೆಗೆ, ಇತರ ವಿಗ್ರಹಗಳಿಗೆ ಆರಾಧನೆ ಮಾಡುವುದು ತಪ್ಪಲ್ವಾ?” ಅಂತ ಕೇಳಿದೆ. ಅದಕ್ಕವರು ಸ್ವಂತವಾಗಿ ಉತ್ತರ ಕೊಡಲಿಲ್ಲ. ಬದಲಿಗೆ, ಬೈಬಲನ್ನು ಉಪಯೋಗಿಸಿ, ನಿಜ ಕ್ರೈಸ್ತರು ವಿಗ್ರಹಾರಾಧನೆ ಮಾಡಬಾರದು, ದೇವರಿಗೆ ಬಿಟ್ಟು ಬೇರೆ ಯಾರಿಗೂ ಪ್ರಾರ್ಥಿಸಬಾರದು ಎನ್ನುವುದಕ್ಕಿರುವ ಆಧಾರವನ್ನು ತೋರಿಸಿದರು. ಅವರು ಸಹ ಈ ಬೈಬಲ್ ಬೋಧನೆಯನ್ನು ಅನ್ವಯಿಸುತ್ತಾ ವಿಗ್ರಹಾರಾಧನೆ ಮಾಡುವುದಿಲ್ಲ ಎಂದು ಹೇಳಿದರು. ನನಗೆ ಅದನ್ನು ಕೇಳಿ ಆಶ್ಚರ್ಯ ಆಯಿತು.
ನಂತರ ಅವರಿಗೆ, “ತಂದೆ, ಮಗ, ಪವಿತ್ರಾತ್ಮ ಮೂವರೂ ಸೇರಿ ಒಂದೇ ದೇವರು ಅನ್ನುವುದು ನಿಜಾನಾ? ಯೇಸು ನಿಜವಾಗಲೂ ಸರ್ವಶಕ್ತ ದೇವರಾಗಿದ್ದರೆ ಭೂಮಿಗೆ ಬರುವ ಅವಶ್ಯಕತೆ ಏನಿತ್ತು? ಮನುಷ್ಯರು ಅವನನ್ನು ಕೊಲ್ಲಲು ಹೇಗೆ ಸಾಧ್ಯ?” ಅಂತ ಕೇಳಿದೆವು. ಇದಕ್ಕೂ ಅವರು ಬೈಬಲಿನಿಂದ ಉತ್ತರ ಕೊಟ್ಟರು. ‘ಯೇಸು ದೇವರಲ್ಲ, ದೇವರಿಗೆ ಸಮಾನನಲ್ಲ’ ಅಂತ ಹೇಳಿದರು. ಈ ಎಲ್ಲಾ ಕಾರಣಗಳಿಂದ ‘ಮೂವರೂ ಒಂದೇ’ ಎಂಬ ಬೋಧನೆಯನ್ನು ಅವರು ನಂಬಲ್ಲ ಎಂದು ಹೇಳಿದರು. ಆಗ, ‘ಇವರು ಎಂಥ ಕ್ರೈಸ್ತರಪ್ಪಾ?’ ಅಂತ ನನಗೆ ಆಶ್ಚರ್ಯ ಆಯಿತು.
ಆದರೂ, ಜನ ಸಾಯಲು ಕಾರಣ ಏನು? ದೇವರು ಯಾಕೆ ಕಷ್ಟವನ್ನು ಅನುಮತಿಸಿದ್ದಾನೆ? ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಬೇಕಿತ್ತು. ನಾನಿದನ್ನು ಸಾಕ್ಷಿಗಳಿಗೆ ಕೇಳಿದಾಗ ಅವರು ನಿತ್ಯಜೀವಕ್ಕೆ ನಡೆಸುವ ಜ್ಞಾನ * ಎಂಬ ಪುಸ್ತಕ ಕೊಟ್ಟರು. ಆ ಪುಸ್ತಕದಲ್ಲಿ ನನಗಿದ್ದ ಪ್ರತಿಯೊಂದು ಪ್ರಶ್ನೆಯ ಬಗ್ಗೆ ಸಾಕಷ್ಟು ಮಾಹಿತಿ ಇತ್ತು. ಅವರು ತಡ ಮಾಡದೆ ನನ್ನ ಜೊತೆಯಲ್ಲಿ ಬೈಬಲ್ ಅಧ್ಯಯನ ಆರಂಭಿಸಿದರು.
ಅಧ್ಯಯನ ಮಾಡಿದ ಪ್ರತಿ ಬಾರಿ ನನ್ನ ಪ್ರಶ್ನೆಗಳಿಗೆ ಬೈಬಲಿನಿಂದ ತೃಪ್ತಿದಾಯಕ ಉತ್ತರ ಸಿಗುತ್ತಿತ್ತು. ದೇವರ ಹೆಸರು ಯೆಹೋವ ಅಂತ ತಿಳಿದುಕೊಂಡೆ. (ಕೀರ್ತನೆ 83:18) ಆತನ ಮುಖ್ಯ ಗುಣ ನಿಸ್ವಾರ್ಥ ಪ್ರೀತಿ. (1 ಯೋಹಾನ 4:8) ಮನುಷ್ಯರು ಸಂತೋಷದಿಂದ ಜೀವಿಸಬೇಕು ಅಂತ ಬಯಸಿದ್ದರಿಂದ ಆತನು ನಮ್ಮನ್ನು ಸೃಷ್ಟಿಸಿದ್ದಾನೆ. ದೇವರು ಕಷ್ಟಗಳನ್ನು ಈಗ ಅನುಮತಿಸಿರುವುದಾದರೂ, ಅದನ್ನು ಬೇಗನೇ ತೆಗೆದುಹಾಕುತ್ತಾನೆ ಅಂತ ತಿಳಿದುಕೊಂಡೆ. ಮನುಷ್ಯರ ಕಷ್ಟಗಳಿಗೆ ಕಾರಣ ಮೊದಲ ಮಾನವರಾದ ಆದಾಮ, ಹವ್ವರು ಮಾಡಿದ ಪಾಪ ಅಂತ ತಿಳಿದುಕೊಂಡೆ. (ರೋಮನ್ನರಿಗೆ 5:12) ಅಂಥ ಕಷ್ಟಗಳಲ್ಲೊಂದು ನಮ್ಮ ಪ್ರಿಯರ ಮರಣ. ನನ್ನ ತಂದೆಯ ಹಾಗೆಯೇ ಅನೇಕ ಜನರು ಸಾಯುತ್ತಿದ್ದಾರೆ. ಆದರೆ ಯೆಹೋವ ದೇವರು ಬೇಗನೇ ತರಲಿರುವ ಹೊಸ ಲೋಕದಲ್ಲಿ ಯಾವುದೇ ಸಾವು-ನೋವುಗಳಿರುವುದಿಲ್ಲ. ಆತನು ಈಗಾಗಲೇ ತೀರಿಕೊಂಡಿರುವ ಜನರಿಗೆ ಮತ್ತೆ ಜೀವ ಕೊಡುತ್ತಾನೆ.—ಅಪೊಸ್ತಲರ ಕಾರ್ಯಗಳು 24:15.
ನನ್ನ ಎಲ್ಲಾ ಪ್ರಶ್ನೆಗಳಿಗೆ ಬೈಬಲ್ ಉತ್ತರ ನೀಡಿತು. ನನಗೆ ಮತ್ತೆ ದೇವರಲ್ಲಿ ನಂಬಿಕೆ ಬಂತು. ಯೆಹೋವನ ಸಾಕ್ಷಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಬಂದಂತೆ ಅವರು ಪ್ರಪಂಚದ ಎಲ್ಲಾ ಕಡೆ ಇದ್ದಾರೆ ಅಂತ ಗೊತ್ತಾಯಿತು. ಅವರಲ್ಲಿದ್ದ ಐಕ್ಯತೆ, ಪ್ರೀತಿ ನನಗೆ ತುಂಬ ಇಷ್ಟ ಆಯಿತು. (ಯೋಹಾನ 13:34, 35) ಯೆಹೋವ ದೇವರ ಬಗ್ಗೆ ನಾನು ಕಲಿತುಕೊಂಡ ಸತ್ಯ ಆತನ ಸೇವೆ ಮಾಡಬೇಕೆಂದು ನನ್ನನ್ನು ಪ್ರೇರೇಪಿಸಿತು. ಆದ್ದರಿಂದ ಜನವರಿ 8, 2005ರಲ್ಲಿ ದೀಕ್ಷಾಸ್ನಾನ ಪಡೆದು ನಾನೂ ಯೆಹೋವನ ಸಾಕ್ಷಿಯಾದೆ.
ಸಿಕ್ಕಿದ ಪ್ರಯೋಜನಗಳು:
ಬೈಬಲಿನಲ್ಲಿರುವಂಥ ಸತ್ಯ, ಜೀವನದ ಬಗ್ಗೆ ನನಗಿದ್ದ ನೋಟವನ್ನೇ ಬದಲಾಯಿಸಿತು. ಅದು ನನಗೆ ಮನಶ್ಶಾಂತಿಯನ್ನು ಕೊಟ್ಟಿದೆ. ಸತ್ತವರು ಮತ್ತೆ ಎದ್ದು ಬರುತ್ತಾರೆ ಎಂಬ ಬೈಬಲಿನ ವಾಗ್ದಾನ ನಾನು ನನ್ನ ತಂದೆಯನ್ನು ಮತ್ತೆ ನೋಡುವ ನಿರೀಕ್ಷೆಯನ್ನು ಕೊಟ್ಟಿದೆ. ಇದರಿಂದ ನನಗೆ ಸಾಂತ್ವನ ಮತ್ತು ಅಪಾರ ಆನಂದ ಸಿಕ್ಕಿದೆ.—ಯೋಹಾನ 5:28, 29.
ನನಗೆ ಮದುವೆ ಆಗಿ ಆರು ವರ್ಷ ಆಗಿದೆ. ನನ್ನ ಗಂಡ ಜಾನತನ್‌ರಿಗೂ ದೇವರಲ್ಲಿ ತುಂಬ ನಂಬಿಕೆ. ದೇವರ ಬಗ್ಗೆ ಬೈಬಲಿನಲ್ಲಿರುವ ಸತ್ಯ ತುಂಬ ಸರಳವಾಗಿದೆ, ಸ್ಪಷ್ಟವಾಗಿದೆ. ನಿಜ ಹೇಳಬೇಕೆಂದರೆ ಅದು ಬೆಲೆಕಟ್ಟಲಾಗದಂಥ ನಿಧಿ. ಆದ್ದರಿಂದ ನಮ್ಮ ನಂಬಿಕೆಯನ್ನು ಮತ್ತು ಭವಿಷ್ಯದ ಬಗ್ಗೆ ಅದು ಕೊಟ್ಟಿರುವ ಆಶ್ವಾಸನೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ತುಂಬ ಸಂತೋಷಿಸುತ್ತೇವೆ. ಆರಂಭದಲ್ಲಿ ನಾನು ಯೆಹೋವನ ಸಾಕ್ಷಿಗಳನ್ನು ನೋಡಿ “ಇವರು ಎಂಥ ಕ್ರೈಸ್ತರಪ್ಪಾ” ಅಂತ ಅಂದುಕೊಂಡಿದ್ದೆ. ಆದರೆ ಈಗ, ಇವರೇ ನಿಜ ಕ್ರೈಸ್ತರು ಅಂತ ಅರ್ಥ ಆಗಿದೆ. ▪ (w15-E 01/01)
^ ಪ್ಯಾರ. 15 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಆದರೆ ಈಗ ಲಭ್ಯವಿಲ್ಲ.