ಹೀಗೊಂದು ಸಂಭಾಷಣೆ
ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು? (ಭಾಗ 2)
ಈ ಸಂಭಾಷಣೆ ಯೆಹೋವನ ಸಾಕ್ಷಿಗಳಲ್ಲೊಬ್ಬರ ಮತ್ತು ಬೈಬಲಿನ ಬಗ್ಗೆ ಆಸಕ್ತಿಯಿರುವ ಒಬ್ಬ ವ್ಯಕ್ತಿಯ ನಡುವಿನ ಮಾದರಿ ಸಂಭಾಷಣೆಯಾಗಿದೆ. ಯೆಹೋವನ ಸಾಕ್ಷಿಯಾದ ಕುಮಾರ್, ಜಾನ್ ಎಂಬವರ ಮನೆಗೆ ಬೈಬಲ್ ಅಧ್ಯಯನ ಮಾಡಲು ಪುನಃ ಬಂದಿದ್ದಾರೆ ಎಂದು ಊಹಿಸೋಣ.
ನೆಬೂಕದ್ನೆಚ್ಚರನು ಕಂಡ ಕನಸು—ಹಿಂದಿನ ಭೇಟಿಯಲ್ಲಾದ ಸಂಭಾಷಣೆಯ ಪುನರವಲೋಕನ
ಕುಮಾರ್: ನಮಸ್ಕಾರ ಜಾನ್, ಹೇಗಿದ್ದೀರಾ?
ಜಾನ್: ನಾನು ಚೆನ್ನಾಗಿದ್ದೇನೆ, ನೀವು ಹೇಗಿದ್ದೀರಾ?
ಕುಮಾರ್: ನಾನೂ ಚೆನ್ನಾಗಿದ್ದೇನೆ. ನಿಮ್ಮ ಜೊತೆ ಬೈಬಲ್ ಅಧ್ಯಯನ * ಮಾಡೋಕೆ ನಂಗೆ ತುಂಬ ಇಷ್ಟ ಆಗುತ್ತೆ. ಹೋದ ಸಲ, ದೇವರ ರಾಜ್ಯದ ಆಳ್ವಿಕೆ 1914ರಲ್ಲೇ ಆರಂಭವಾಯಿತು ಅಂತ ಯೆಹೋವನ ಸಾಕ್ಷಿಗಳು ಯಾಕೆ ನಂಬುತ್ತಾರೆ ಅನ್ನೋದರ ಬಗ್ಗೆ ಚರ್ಚೆ ಮಾಡಿದ್ವಿ. * ಹಾಗೆ ಚರ್ಚೆ ಮಾಡುವಾಗ, ದೇವರ ರಾಜ್ಯಕ್ಕೆ ಸಂಬಂಧಪಟ್ಟಂತೆ ದಾನಿಯೇಲ ಪುಸ್ತಕದ 4ನೇ ಅಧ್ಯಾಯದಲ್ಲಿರುವ ಪ್ರವಾದನೆಯಿಂದ ಒಂದು ಪ್ರಾಮುಖ್ಯ ಆಧಾರವನ್ನು ನಾವು ನೋಡಿದ್ವಿ. ನಿಮಗೆ ಅದು ನೆನಪಿದೆಯಾ?
ಜಾನ್: ಹೌದು ನೆನಪಿದೆ. ಆ ಅಧ್ಯಾಯದಲ್ಲಿ ನೆಬೂಕದ್ನೆಚ್ಚರ ಎಂಬ ರಾಜ ಒಂದು ದೊಡ್ಡ ಮರದ ಕನಸು ಕಾಣುವುದರ ಬಗ್ಗೆ ನೋಡಿದ್ವಿ.
ಕುಮಾರ್: ಸರಿಯಾಗಿ ಹೇಳಿದ್ರಿ. ನೆಬೂಕದ್ನೆಚ್ಚರ ಒಂದು ದೊಡ್ಡ ಮರವನ್ನು ಕನಸಿನಲ್ಲಿ ನೋಡಿದನು. ಆ ಮರದ ತುದಿ ಆಕಾಶವನ್ನು ಮುಟ್ಟುತ್ತಿತ್ತು. ನಂತರ ದೇವದೂತನೊಬ್ಬನು ಬಂದು ‘ಆ ಮರವನ್ನು ಕಡಿಯಿರಿ, ಆದರೆ ಆ ಮರದ ಬುಡದ ಮೋಟನ್ನು ಹಾಗೆಯೇ ಬಿಡಿ. ಏಳು ಕಾಲಗಳಾದ ಮೇಲೆ ಮತ್ತೆ ಆ ಮರ ಬೆಳೆಯುತ್ತದೆ’ ಎಂದು ಹೇಳುವುದನ್ನು ನೆಬೂಕದ್ನೆಚ್ಚರನು ಕನಸಿನಲ್ಲಿ ಕೇಳಿಸಿಕೊಂಡನು. * ಇದೊಂದು ಪ್ರವಾದನೆಯಾಗಿತ್ತು. ಈ ಪ್ರವಾದನೆಗೆ ಯಾಕೆ ಎರಡು ನೆರವೇರಿಕೆಗಳಿವೆ ಅನ್ನೋದನ್ನು ಸಹ ಕಲಿತಿದ್ದೆವು. ಪ್ರವಾದನೆಯ ಮೊದಲ ನೆರವೇರಿಕೆ ಏನಾಗಿತ್ತು ಅನ್ನೋದು ನಿಮಗೆ ನೆನಪಿದೆಯಾ?
ಜಾನ್: ನೆಬೂಕದ್ನೆಚ್ಚರನ ವಿಷಯದಲ್ಲೇ ಅದು ನೆರವೇರಿತು. ಏಳು ವರ್ಷ ಅವನಿಗೆ ಬುದ್ಧಿ ಭ್ರಮಣೆ ಆಗಿತ್ತು.
ಕುಮಾರ್: ಕರೆಕ್ಟ್. ಏಳು ವರ್ಷ ನೆಬೂಕದ್ನೆಚ್ಚರನಿಗೆ ಬುದ್ಧಿ ಭ್ರಮಣೆ ಆಯ್ತು. ಹಾಗಾಗಿ ಅವನ ಆಳ್ವಿಕೆ ಸ್ಥಗಿತಗೊಂಡಿತು. ಆದರೆ ಆ ಪ್ರವಾದನೆಯ ಎರಡನೆಯ ನೆರವೇರಿಕೆಯಲ್ಲಿ ದೇವರ ಆಳ್ವಿಕೆ ಏಳು ಕಾಲಗಳು ಸ್ಥಗಿತಗೊಂಡಿತು. ನಾವೀಗಾಗಲೇ ನೋಡಿದಂತೆ ಕ್ರಿ.ಪೂ. 607ರಲ್ಲಿ ಯೆರೂಸಲೇಮ್ ಪಟ್ಟಣ ನಾಶವಾದಾಗ ಆ ಏಳು ಕಾಲಗಳು ಪ್ರಾರಂಭವಾಯಿತು. ಆ ಸಮಯದಿಂದ ಭೂಮಿಯ ಮೇಲೆ ಯೆಹೋವನ ಆಳ್ವಿಕೆಯನ್ನು ಪ್ರತಿನಿಧಿಸುತ್ತಿದ್ದ ರಾಜರೇ ಇರಲಿಲ್ಲ. ಆದರೆ ಆ ಏಳು ಕಾಲಗಳ ಅಂತ್ಯದಲ್ಲಿ ತನ್ನ ಜನರಿಗಾಗಿ ಯೆಹೋವನು ಒಬ್ಬ ಹೊಸ ರಾಜನನ್ನು ನೇಮಿಸಲಿದ್ದನು. ಆ ರಾಜನು ಸ್ವರ್ಗದವನು. ಇನ್ನೊಂದು ರೀತಿ ಹೇಳಬೇಕೆಂದರೆ, ಏಳು ಕಾಲಗಳ ಅಂತ್ಯದಲ್ಲಿ ದೇವರ ಸ್ವರ್ಗೀಯ ಸರ್ಕಾರದ ಆಳ್ವಿಕೆ ಪ್ರಾರಂಭವಾಗಲಿತ್ತು. ಈಗಾಗಲೇ ಏಳು ಕಾಲಗಳು ಯಾವಾಗ ಪ್ರಾರಂಭವಾಯಿತು ಅನ್ನೋದನ್ನು ನಾವು ನೋಡಿದ್ದೇವೆ. ಏಳು ಕಾಲಗಳ ಸಮಯಾವಧಿ ಎಷ್ಟು ದೀರ್ಘವಾಗಿತ್ತು ಅನ್ನೋದು ಗೊತ್ತಾದರೆ ದೇವರ ರಾಜ್ಯದ ಆಳ್ವಿಕೆ ಯಾವ ವರ್ಷದಲ್ಲಿ ಪ್ರಾರಂಭವಾಯಿತು ಅನ್ನೋದನ್ನೂ ನಾವು ಕಲಿಯಬಹುದು. ಇಷ್ಟರವರೆಗೂ ಹೇಳಿದ್ದು ನಿಮಗೆ ಅರ್ಥ ಆಗಿದೆ ಅಂತ ಅಂದುಕೊಳ್ಳುತ್ತೇನೆ.
ಜಾನ್: ಹ್ಞಾಂ! ಚೆನ್ನಾಗಿ ಅರ್ಥ ಆಯ್ತು.
ಕುಮಾರ್: ಗುಡ್. ಹಾಗಾದರೆ ಇವತ್ತು ಆ ಏಳು ಕಾಲಗಳು ಎಷ್ಟು ದೀರ್ಘವಾಗಿತ್ತು ಅನ್ನೋದನ್ನು ನೋಡೋಣ. ನಾನು ಇದರ ಬಗ್ಗೆ
ಏನು ಕಲಿತಿದ್ದೇನೋ ಆ ಅಂಶಗಳನ್ನು ನನಗೆ ಗೊತ್ತಿರುವಷ್ಟು ವಿವರಿಸ್ತೇನೆ.ಜಾನ್: ಆಯ್ತು.
ಏಳು ಕಾಲಗಳ ಅಂತ್ಯ—ಕಡೇ ದಿವಸಗಳ ಆರಂಭ
ಕುಮಾರ್: ನೆಬೂಕದ್ನೆಚ್ಚರನಿಗೆ ಸಂಬಂಧಪಟ್ಟ ಮೊದಲ ನೆರವೇರಿಕೆಯಲ್ಲಿ ಆ ಏಳು ಕಾಲಗಳು ಅಕ್ಷರಶಃ ಏಳು ವರ್ಷಗಳಾಗಿದ್ದವು. ಆದರೆ ದೇವರ ರಾಜ್ಯಕ್ಕೆ ಸಂಬಂಧಪಟ್ಟ ಎರಡನೇ ನೆರವೇರಿಕೆಯಲ್ಲಿ ಆ ಏಳು ಕಾಲಗಳು ಅಕ್ಷರಶಃ ಏಳು ವರ್ಷಗಳಾಗಿರಲಿಲ್ಲ, ಬದಲಿಗೆ ಅದು ಇನ್ನೂ ಹೆಚ್ಚು ದೀರ್ಘವಾಗಿತ್ತು.
ಜಾನ್: ಇನ್ನೂ ಹೆಚ್ಚು ದೀರ್ಘವಾಗಿತ್ತು ಅಂತ ಹೇಗೆ ಹೇಳುತ್ತೀರಾ?
ಕುಮಾರ್: ನಿಮಗೆ ನೆನಪಿದ್ಯಾ, ಯೆರೂಸಲೇಮ್ ಪಟ್ಟಣ ಕ್ರಿ.ಪೂ. 607ರಲ್ಲಿ ನಾಶವಾದಾಗ ಏಳು ಕಾಲಗಳು ಪ್ರಾರಂಭವಾದವು. ಏಳು ಕಾಲಗಳನ್ನು ಏಳು ವರ್ಷಗಳಂತ ಅಂದುಕೊಂಡರೆ ಅದು ಕ್ರಿ.ಪೂ. 607ರಿಂದ ಕ್ರಿ.ಪೂ. 600ಕ್ಕೆ ಬಂದು ನಿಲ್ಲುತ್ತೆ. ಆದರೆ ಆ ವರ್ಷದಲ್ಲಿ ದೇವರ ಆಳ್ವಿಕೆಗೆ ಸಂಬಂಧಪಟ್ಟ ಯಾವುದೇ ಪ್ರಾಮುಖ್ಯ ಘಟನೆಗಳು ಸಂಭವಿಸಲಿಲ್ಲ. ಅಷ್ಟೇ ಅಲ್ಲದೇ, ಯೇಸು ಭೂಮಿಯ ಮೇಲಿದ್ದಾಗಲೂ ಆ ಏಳು ಕಾಲಗಳು ಇನ್ನೂ ಮುಗಿದಿರಲಿಲ್ಲ ಅನ್ನೋದನ್ನು ನಾವು ಹೋದ ಸಲ ಕಲಿತಿದ್ದೆವು.
ಜಾನ್: ಹ್ಞಾಂ ಹೌದು, ನನಗೆ ಈಗ ನೆನಪಾಯಿತು.
ಕುಮಾರ್: ಹಾಗಾಗಿ, ಆ ಏಳು ಕಾಲಗಳು ಏಳು ವರ್ಷಗಳಾಗಿರಲಿಲ್ಲ ಬದಲಿಗೆ ಅವು ಸ್ವಲ್ಪ ದೀರ್ಘವಾಗಿದ್ದವು ಅಂತ ಹೇಳಬಹುದು.
ಜಾನ್: ಹಾಗಾದರೆ, ಅವು ಎಷ್ಟು ದೀರ್ಘವಾಗಿದ್ದವು?
ಕುಮಾರ್: ಇದನ್ನು ತಿಳಿದುಕೊಳ್ಳೋಕೆ, ನಾವು ಬೈಬಲಿನ ಕೊನೇ ಪುಸ್ತಕವಾದ ಪ್ರಕಟನೆಯನ್ನು ನೋಡಬೇಕು. ಆ ಪುಸ್ತಕದಲ್ಲಿರುವ ವಿಷಯಗಳಿಗೂ ದಾನಿಯೇಲ ಪುಸ್ತಕದಲ್ಲಿರುವ ವಿಷಯಗಳಿಗೂ ಸಾಕಷ್ಟು ಹೋಲಿಕೆಗಳಿವೆ. ಪ್ರಕಟನೆ ಪುಸ್ತಕ ಮೂರುವರೆ ಕಾಲಗಳು 1,260 ದಿನಗಳಿಗೆ ಸಮ ಎಂದು ಹೇಳುತ್ತದೆ. * ಹಾಗಾದರೆ, ಏಳು ಕಾಲಗಳು 2,520 ದಿನಗಳಾಗುತ್ತವೆ. ಇದು ನಿಮಗೆ ಅರ್ಥ ಆಯ್ತಾ?
ಜಾನ್: ಹ್ಞಾಂ ಅರ್ಥ ಆಯ್ತು. ಆದರೆ ಈ ವಿಷಯದಿಂದ ದೇವರ ರಾಜ್ಯದ ಆಳ್ವಿಕೆ 1914ರಲ್ಲೇ ಶುರುವಾಯಿತು ಅಂತ ಹೇಗೆ ಹೇಳಬಹುದು ಅನ್ನೋದು ಅರ್ಥ ಆಗಲಿಲ್ಲ.
ಕುಮಾರ್: ಅದರ ಬಗ್ಗೆ ನಾವೀಗ ನೋಡೋಣ. ಬೈಬಲಿನ ಕೆಲವೊಂದು ಪ್ರವಾದನೆಗಳಲ್ಲಿರುವ ಒಂದು ದಿನ ಒಂದು ವರ್ಷಕ್ಕೆ ಸಮವಾಗಿದೆ. * ಅದೇ ವಿಷಯವನ್ನು ಈ ಪ್ರವಾದನೆಗೂ ಅನ್ವಯಿಸುವುದಾದರೆ ಏಳು ಕಾಲಗಳು 2,520 ವರ್ಷಗಳಿಗೆ ಸಮವಾಗುತ್ತವೆ. ಕ್ರಿ.ಪೂ. 607ರಿಂದ 2,520 ವರ್ಷಗಳನ್ನು ಎಣಿಸುತ್ತಾ ಬಂದರೆ ಅದು ಇಸವಿ 1914ಕ್ಕೆ ಬಂದು ನಿಲ್ಲುತ್ತೆ. * ಹೀಗೆ 1914ಕ್ಕೆ ಏಳು ಕಾಲಗಳು ಅಂತ್ಯವಾದವು ಮತ್ತು ಯೇಸು ದೇವರ ರಾಜ್ಯದ ರಾಜನಾಗಿ ಆಳಲು ಪ್ರಾರಂಭಿಸಿದನು ಅಂತ ಹೇಳಬಹುದು. ಇನ್ನೊಂದು ಆಸಕ್ತಿಕರ ವಿಷಯವೇನೆಂದರೆ ಬೈಬಲ್‍ನಲ್ಲಿ ಮುಂಚೆನೇ ದಾಖಲಿಸಲಾದ ಕೆಲವೊಂದು ಸಂಗತಿಗಳು 1914ರಲ್ಲಿ ಪ್ರಪಂಚದಲ್ಲೆಲ್ಲ ನಡೆದವು.
ಜಾನ್: 1914ರಲ್ಲಿ ಏನಾಯ್ತು?
ಕುಮಾರ್: ಮತ್ತಾಯ 24:7ರಲ್ಲಿ ಯೇಸು ಹೇಳಿರುವ ಮಾತನ್ನು ಗಮನಿಸಿದರೆ ಏನಾಯ್ತು ಅಂತ ನಮಗೆ ಗೊತ್ತಾಗುತ್ತೆ. ಯಾವಾಗ ತಾನು ಆಳ್ವಿಕೆಯನ್ನು ಪ್ರಾರಂಭಿಸುತ್ತೇನೆ ಅನ್ನೋದನ್ನು ವಿವರಿಸುತ್ತಾ ಯೇಸು ಹೀಗೆ ಹೇಳುತ್ತಾನೆ: “ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆಯೂ ಭೂಕಂಪಗಳೂ ಆಗುವವು.” ಗಮನಿಸಿದ್ರಾ, ಯೇಸು ಆಳ್ವಿಕೆ ಪ್ರಾರಂಭಿಸುವಾಗ ಆಹಾರದ ಅಭಾವ ಇರುತ್ತೆ, ಅಲ್ಲಲ್ಲಿ ಭೂಕಂಪಗಳಾಗುತ್ತವೆ ಅನ್ನೋದನ್ನು ಅವನು ಮುಂತಿಳಿಸಿದನು. ಕಳೆದ ನೂರು ವರ್ಷಗಳಿಂದ ಇಂಥ ಕಷ್ಟಗಳು ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ನಿಜ ತಾನೇ?
ಜಾನ್: ನಿಜ.
ಕುಮಾರ್: ಈ ವಚನದಲ್ಲಿ, ತಾನು ರಾಜನಾಗಿ ಬರುವಾಗ ಯುದ್ಧಗಳು ಸಹ ಸಂಭವಿಸುತ್ತವೆ ಅಂತ ಯೇಸು ತಿಳಿಸಿದ್ದಾನೆ. ಪ್ರಕಟನೆ ಪುಸ್ತಕವು ಕೂಡ ಕೇವಲ ಕೆಲವು ಕಡೆಗಳಲ್ಲಿ ಮಾತ್ರ ಯುದ್ಧಗಳಾಗುತ್ತವೆ ಅಂತಲ್ಲ ಬದಲಿಗೆ ಲೋಕದಲ್ಲೆಲ್ಲ ಯುದ್ಧಗಳು ಆಗುತ್ತವೆ ಅಂತ ತಿಳಿಸಿತು. * ಮೊದಲ ಮಹಾಯುದ್ಧ ಯಾವ ವರ್ಷದಲ್ಲಿ ಶುರುವಾಯಿತು ಅಂತ ನಿಮಗೆ ಗೊತ್ತಾ?
ಜಾನ್: 1914ರಲ್ಲೇ ತಾನೇ? ಯೇಸು ಆಳ್ವಿಕೆ ಆರಂಭಿಸಿದ ಅಂತ ನೀವು ಏನು ಹೇಳುತ್ತಿದ್ದೀರೋ ಅದೇ 1914ರಲ್ಲಿ ಮೊದಲ ಮಹಾಯುದ್ಧ ನಡೀತಲ್ವ! ನಾನು ಯಾವತ್ತೂ ಇದರ ಬಗ್ಗೆ ಯೋಚನೆಯೇ ಮಾಡಿರಲಿಲ್ಲ.
ಕುಮಾರ್: ಏಳು ಕಾಲಗಳ ಬಗ್ಗೆ ಇರುವ ಪ್ರವಾದನೆ ಮತ್ತು ಕಡೇ ದಿವಸಗಳ ಬಗ್ಗೆ ಇರುವ ಪ್ರವಾದನೆಗಳನ್ನು ಒಂದಕ್ಕೊಂದು ಜೋಡಿಸಿದಾಗ ನಮಗೆ ಸ್ಪಷ್ಟವಾದ ಚಿತ್ರಣ ಸಿಗುತ್ತೆ. ಹೀಗೆ 1914ರಲ್ಲಿ ದೇವರ ರಾಜ್ಯಕ್ಕೆ ಯೇಸು ರಾಜನಾದನು ಮತ್ತು ಅದೇ ವರ್ಷದಲ್ಲಿ ಕಡೇ ದಿವಸಗಳು ಪ್ರಾರಂಭವಾದವು ಅನ್ನೋ ಇತ್ಯರ್ಥಕ್ಕೆ ಯೆಹೋವನ ಸಾಕ್ಷಿಗಳು ಬಂದಿದ್ದಾರೆ. *
ಜಾನ್: ನಂಗೆ ಇದೆಲ್ಲ ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕು.
ಕುಮಾರ್: ನೀವು ಹೇಳಿದ್ದು ಸತ್ಯ. ನಂಗೂ ಸಹ ಇದನ್ನೆಲ್ಲ ಅರ್ಥ ಮಾಡಿಕೊಳ್ಳಲು ತುಂಬ ಸಮಯ ಹಿಡೀತು. 1914 ಅನ್ನೋ ಇಸವಿ ಬೈಬಲಿನಲ್ಲಿ ಕೊಟ್ಟಿಲ್ಲ ನಿಜ. ಆದರೂ ಅದೇ ವರ್ಷದಲ್ಲಿ ದೇವರ ರಾಜ್ಯದ ಆಳ್ವಿಕೆ ಪ್ರಾರಂಭವಾಯಿತು ಎಂಬ ಯೆಹೋವನ ಸಾಕ್ಷಿಗಳ ನಂಬಿಕೆ ಬೈಬಲ್ ಆಧರಿತವಾಗಿದೆ ಎಂದು ನಮ್ಮ ಈ ಚರ್ಚೆಯಿಂದ ನಿಮಗೆ ಅರ್ಥ ಆಗಿರಬಹುದು.
ಜಾನ್: ಹ್ಞಾಂ ಅರ್ಥ ಆಯ್ತು. ಏನೇ ಕೇಳಿದರೂ, ನಿಮ್ಮ ಮನಸ್ಸಿಗೆ ಬಂದಿದ್ದನ್ನು ಹೇಳದೆ ಅದನ್ನು ಬೈಬಲಿನಿಂದ ತೋರಿಸುತ್ತೀರ. ಅದು ನಂಗೆ ತುಂಬ ಇಷ್ಟ ಆಗುತ್ತೆ. ಆದರೆ ನಂಗೊಂದು ಪ್ರಶ್ನೆ. 1914ರಲ್ಲೇ ಯೇಸು ರಾಜನಾಗಿ ಸ್ವರ್ಗದಿಂದ ಆಳ್ವಿಕೆ ಮಾಡುತ್ತಾನೆ ಅಂತ ದೇವರು ಬೈಬಲಿನಲ್ಲಿ ನೇರವಾಗಿ ಹೇಳಬಹುದಿತ್ತಲ್ವಾ? ಯಾಕೆ ಹೇಳಲಿಲ್ಲ?
ಕುಮಾರ್: ಒಳ್ಳೇ ಪ್ರಶ್ನೆ ಕೇಳಿದ್ರಿ ಜಾನ್. ಹಾಗೆ ಇನ್ನೂ ಕೆಲವು ವಿಷಯಗಳನ್ನು ಬೈಬಲಿನಲ್ಲಿ ಸುಲಭವಾಗಿ ಅರ್ಥ ಆಗುವಂಥ ರೀತಿಯಲ್ಲಿ ಬರೆದಿಲ್ಲ. ಯಾಕೆ ಆ ರೀತಿಯಲ್ಲಿ ಬರೆಸಲಿಲ್ಲ ಅಂತ ಮುಂದಿನ ಭೇಟಿಯಲ್ಲಿ ನಾವು ಮಾತಾಡಬಹುದು.
ಜಾನ್: ಸರಿ. ಮಾತಾಡೋಣ. ▪ (w14-E 11/01)
ಬೈಬಲಿನಲ್ಲಿರುವ ಯಾವುದಾದರೂ ವಿಷಯವನ್ನು ಕಲಿಯಲು ನಿಮಗೆ ಆಸಕ್ತಿಯಿದೆಯಾ? ಯೆಹೋವನ ಸಾಕ್ಷಿಗಳ ನಂಬಿಕೆಗಳೇನು ಅಥವಾ ಅವರ ಆಚಾರ-ವಿಚಾರಗಳೇನು ಎನ್ನುವುದರ ಬಗ್ಗೆ ಕುತೂಹಲವಿದೆಯಾ? ಈ ವಿಷಯಗಳನ್ನು ತಿಳಿದುಕೊಳ್ಳಲು ನಿಮಗೆ ಇಷ್ಟವಿದ್ದರೆ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ. ಅವರು ನಿಮಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತಾರೆ.
^ ಪ್ಯಾರ. 7 ಬೈಬಲ್ ಅಧ್ಯಯನ ಎಂದರೆ ಬೈಬಲ್ ಬಗ್ಗೆ ಕಲಿಯಲು ಆಸಕ್ತಿ ಇರುವವರ ಜೊತೆ ಯೆಹೋವನ ಸಾಕ್ಷಿಗಳು ಮಾಡುವ ಬೈಬಲ್ ಆಧರಿತ ಚರ್ಚೆಯಾಗಿದೆ. ಈ ಅಧ್ಯಯನದಲ್ಲಿ ಬೈಬಲ್‍ನಲ್ಲಿರುವ ವಿಷಯಗಳನ್ನು ಹಂತ ಹಂತವಾಗಿ ಚರ್ಚಿಸಲಾಗುತ್ತದೆ.
^ ಪ್ಯಾರ. 7 ಈ ಪತ್ರಿಕೆಯ ಜನವರಿ-ಮಾರ್ಚ್ 2015ರ ಸಂಚಿಕೆಯಲ್ಲಿರುವ “ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು?—ಭಾಗ 1” ಎಂಬ ಲೇಖನ ನೋಡಿ.
^ ಪ್ಯಾರ. 22 ಪ್ರಕಟನೆ 12:6, 14 ನೋಡಿ.
^ ಪ್ಯಾರ. 24 “ನೆಬೂಕದ್ನೆಚ್ಚರನು ನೋಡಿದ ಮರದ ಕನಸು” ಎಂಬ ಚಾರ್ಟ್ ನೋಡಿ.
^ ಪ್ಯಾರ. 30 ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 9 ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. www.pr418.com ವೆಬ್‌ಸೈಟ್‍ನಲ್ಲೂ ಲಭ್ಯ.